Skip to content
Opens in a new window
Listen to this chapter • 6:24

[1] ಯೇಸು ಒಂದು ಸಬ್ಬತ್ ದಿನದಲ್ಲಿ, ಫರಿಸಾಯರ ಮುಖ್ಯಸ್ಥರಲ್ಲಿ ಒಬ್ಬನ ಮನೆಯೊಳಗೆ ಊಟಕ್ಕೆ ಹೋದಾಗ, ಎಲ್ಲರು ಅವರನ್ನು ಗಮನಿಸುತ್ತಿದ್ದರು.

[2] ಅಲ್ಲಿ ದೇಹದಲ್ಲಿ ಅಸಾಧಾರಣವಾಗಿ ನೀರು ತುಂಬಿದ್ದ ರೋಗಿಯೊಬ್ಬನು ಯೇಸುವಿನ ಮುಂದೆ ಇದ್ದನು.

[3] ಆಗ ಯೇಸು ನಿಯಮ ಪಂಡಿತರಿಗೂ ಫರಿಸಾಯರಿಗೂ, “ಸಬ್ಬತ್ ದಿನದಲ್ಲಿ ಸ್ವಸ್ಥಮಾಡುವುದು ಮೋಶೆಯ ನಿಯಮದ ಪ್ರಕಾರವೋ?” ಎಂದು ಕೇಳಿದರು.

[4] ಆದರೆ ಅವರು ಮೌನವಾಗಿಯೇ ಇದ್ದರು. ಆಗ ಯೇಸು, ಆ ರೋಗಿಯನ್ನು ಸ್ವಸ್ಥಮಾಡಿ ಕಳುಹಿಸಿಬಿಟ್ಟರು.

[5] ಆಗ ಯೇಸು ಅವರಿಗೆ, “ನಿಮ್ಮಲ್ಲಿ ಒಬ್ಬರ ಮಗುವಾಗಲಿ, ಎತ್ತಾಗಲಿ ಒಂದು ಬಾವಿಯಲ್ಲಿ ಬಿದ್ದರೆ, ಅದನ್ನು ತಕ್ಷಣವೇ ಸಬ್ಬತ್ ದಿನದಲ್ಲಿ ಮೇಲಕ್ಕೆ ಎಳೆಯುವುದಿಲ್ಲವೇ?” ಎಂದು ಕೇಳಿದರು.

[6] ಅದಕ್ಕೆ ಅವರು ಉತ್ತರ ಕೊಡಲಾರದೆ ಇದ್ದರು.

[7] ಊಟಕ್ಕೆ ಆಹ್ವಾನಿತರು ತಮಗಾಗಿ ಮುಖ್ಯ ಸ್ಥಳಗಳನ್ನು ಹೇಗೆ ಆರಿಸಿಕೊಂಡರೆಂದು ಯೇಸು ಗುರುತಿಸಿ, ಅವರಿಗೆ ಒಂದು ಸಾಮ್ಯವನ್ನು ಹೇಳಿದರು:

[8] “ಯಾರಾದರೂ ನಿನ್ನನ್ನು ಮದುವೆಯ ಊಟಕ್ಕೆ ಕರೆದರೆ ಮೊದಲನೆಯ ಸ್ಥಾನದಲ್ಲಿ ಕುಳಿತುಕೊಳ್ಳಬೇಡ, ಏಕೆಂದರೆ ಅವನು ನಿನಗಿಂತಲೂ ಗೌರವವುಳ್ಳ ಮನುಷ್ಯನನ್ನು ಆಹ್ವಾನಿಸಿರಬಹುದು.

[9] ಆಗ, ನಿನ್ನನ್ನು ಮತ್ತು ಅವನನ್ನು ಆಹ್ವಾನಿಸಿದವನು ಬಂದು ನಿನಗೆ, ‘ಈ ಮನುಷ್ಯನಿಗೆ ಸ್ಥಳಕೊಡು,’ ಎಂದು ಹೇಳುವಾಗ ನೀನು ನಾಚಿಕೆಯಿಂದ ಕಡೇ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾಗುವುದು.

[10] ಆದರೆ ನಿನ್ನನ್ನು ಆಹ್ವಾನಿಸಿದಾಗ, ಹೋಗಿ ಕಡೇ ಸ್ಥಳದಲ್ಲಿ ಕುಳಿತುಕೋ, ಆಗ ನಿನ್ನನ್ನು ಆಹ್ವಾನಿಸಿದವನು ಬಂದು ನಿನಗೆ, ‘ಸ್ನೇಹಿತನೇ, ಉತ್ತಮ ಸ್ಥಳಕ್ಕೆ ಬಾ,’ ಎಂದು ಹೇಳುವಾಗ ನಿನ್ನ ಜೊತೆಯಲ್ಲಿ ಊಟಕ್ಕೆ ಕುಳಿತವರೆಲ್ಲರ ಮುಂದೆ ನಿನಗೆ ಗೌರವವಿರುವುದು.

[11] ಏಕೆಂದರೆ, ಯಾರಾದರೂ ತಮ್ಮನ್ನು ತಾವೇ ಹೆಚ್ಚಿಸಿಕೊಳ್ಳುವರೋ ಅವರು ತಗ್ಗಿಸಲಾಗುವರು ಮತ್ತು ತಮ್ಮನ್ನು ತಾವೇ ತಗ್ಗಿಸಿಕೊಳ್ಳುವವರು ಹೆಚ್ಚಿಸಲಾಗುವರು,” ಎಂದರು.

[12] ಯೇಸು ತಮ್ಮನ್ನು ಆಹ್ವಾನಿಸಿದವನಿಗೆ, “ನೀನು ಮಧ್ಯಾಹ್ನದ ಊಟಕ್ಕೆ ಇಲ್ಲವೆ ರಾತ್ರಿಯ ಊಟಕ್ಕೆ ಸಿದ್ಧಪಡಿಸಿದಾಗ, ನಿನ್ನ ಸ್ನೇಹಿತರನ್ನಾಗಲಿ ನಿನ್ನ ಸಹೋದರ ಸಹೋದರಿಯನ್ನಾಗಲಿ, ನಿನ್ನ ಬಂಧುಗಳನ್ನಾಗಲಿ, ಇಲ್ಲವೆ ಐಶ್ವರ್ಯವಂತರಾದ ನೆರೆಯವರನ್ನಾಗಲಿ ಕರೆಯಬೇಡ, ಏಕೆಂದರೆ ಅವರೂ ಪ್ರತಿಯಾಗಿ ನಿನ್ನನ್ನೂ ಆಹ್ವಾನಿಸಬಹುದು ಮತ್ತು ನಿನಗೆ ಪ್ರತ್ಯುಪಕಾರವಾದೀತು.

[13] ಆದರೆ ನೀನು ಔತಣಮಾಡಿಸಿದಾಗ, ಬಡವರನ್ನೂ ಊನವಾದವರನ್ನೂ ಕುಂಟರನ್ನೂ ಕುರುಡರನ್ನೂ ಆಹ್ವಾನಿಸು.

[14] ಆಗ ಅವರು ನಿನಗೆ ಪ್ರತ್ಯುಪಕಾರ ಮಾಡುವುದಕ್ಕೆ ಆಗದಿರುವುದರಿಂದ, ನೀನು ಧನ್ಯನಾಗುವೆ. ಏಕೆಂದರೆ ನೀತಿವಂತರ ಪುನರುತ್ಥಾನದಲ್ಲಿ ನಿನಗೆ ಪ್ರತ್ಯುಪಕಾರವಾಗುವುದು.”

[15] ಯೇಸುವಿನ ಸಂಗಡ ಔತಣಕ್ಕೆ ಕುಳಿತವರಲ್ಲಿ ಒಬ್ಬನು ಈ ಸಂಗತಿಗಳನ್ನು ಕೇಳಿ ಅವರಿಗೆ, “ದೇವರ ರಾಜ್ಯದಲ್ಲಿ ಊಟಮಾಡುವವನು ಧನ್ಯನು,” ಎಂದು ಹೇಳಿದನು.

[16] ಯೇಸು ಅವನಿಗೆ ಹೀಗೆ ಹೇಳಿದರು: “ಒಬ್ಬ ಮನುಷ್ಯನು ಒಂದು ದೊಡ್ಡ ಔತಣ ಮಾಡಿಸಿ ಅನೇಕರನ್ನು ಆಹ್ವಾನಿಸಿದನು.

[17] ಊಟಕ್ಕೆ ಸಮಯವಾದಾಗ ಆಹ್ವಾನಿತರಿಗೆ ಅವನು, ‘ಎಲ್ಲವೂ ಸಿದ್ಧವಾಗಿದೆ ಬನ್ನಿರಿ,’ ಎಂದು ಹೇಳಲು ತನ್ನ ಸೇವಕನನ್ನು ಕಳುಹಿಸಿದನು.

[18] “ಆದರೆ ಅವರೆಲ್ಲರೂ ಒಂದೇ ರೀತಿಯಾಗಿ ನೆಪ ಹೇಳಲಾರಂಭಿಸಿದರು. ಮೊದಲನೆಯವನು, ‘ನಾನು ಒಂದು ಹೊಲ ಕೊಂಡುಕೊಂಡಿದ್ದೇನೆ, ನಾನು ಅದನ್ನು ನೋಡಬೇಕಾಗಿದೆ, ದಯವಿಟ್ಟು ಕ್ಷಮಿಸಬೇಕು,’ ಎಂದು ಹೇಳಿದನು.

[19] “ಇನ್ನೊಬ್ಬನು, ‘ನಾನು ಐದು ಜೊತೆ ಎತ್ತುಗಳನ್ನು ಕೊಂಡುಕೊಂಡಿದ್ದೇನೆ, ಅವುಗಳನ್ನು ಪರೀಕ್ಷಿಸಲು ಹೋಗುತ್ತಿದ್ದೇನೆ, ದಯವಿಟ್ಟು ನನ್ನನ್ನು ಕ್ಷಮಿಸಬೇಕು,’ ಎಂದನು.

[20] “ಮತ್ತೊಬ್ಬನು, ‘ನಾನು ಮದುವೆ ಮಾಡಿಕೊಂಡಿದ್ದೇನೆ, ಆದ್ದರಿಂದ ಬರಲಾರೆ,’ ಎಂದನು.

[21] “ಆ ಸೇವಕನು ಬಂದು ತನ್ನ ಯಜಮಾನನಿಗೆ ಈ ವಿಷಯಗಳನ್ನು ತಿಳಿಸಲು, ಆ ಮನೆಯಜಮಾನನು ಕೋಪಗೊಂಡು ತನ್ನ ಸೇವಕನಿಗೆ, ‘ನೀನು ಬೇಗನೆ ಪಟ್ಟಣದ ಬೀದಿಗಳಿಗೂ ಸಂದುಗಳಿಗೂ ಹೋಗಿ, ಬಡವರನ್ನೂ ಊನವಾದವರನ್ನೂ ಕುರುಡರನ್ನೂ ಕುಂಟರನ್ನೂ ಇಲ್ಲಿ ಕರೆದುಕೊಂಡು ಬಾ,’ ಎಂದನು.

[22] “ಆ ಸೇವಕನು, ‘ಸ್ವಾಮಿ, ನೀನು ಅಪ್ಪಣೆ ಕೊಟ್ಟಂತೆ ಮಾಡಿದ್ದಾಯಿತು, ಆದರೂ ಸ್ಥಳವಿದೆ,’ ಎಂದನು.

[23] “ಆಗ ಯಜಮಾನನು ಸೇವಕನಿಗೆ, ‘ನೀನು ಬೀದಿಗಳಿಗೂ ಓಣಿಗಳಿಗೂ ಹೊರಟುಹೋಗಿ ನನ್ನ ಮನೆ ತುಂಬುವಂತೆ, ಇಲ್ಲಿ ಬರುವುದಕ್ಕೆ ಕಂಡವರನ್ನು ಬಲವಂತಮಾಡು.

[24] ಆದರೆ, ಮೊದಲು ಆಹ್ವಾನಿತರಲ್ಲಿ ಒಬ್ಬನಾದರೂ ನನ್ನ ಔತಣವನ್ನು ರುಚಿ ನೋಡಬಾರದು ಎಂದು ನಾನು ನಿನಗೆ ಹೇಳುತ್ತೇನೆ.’ ”

[25] ದೊಡ್ಡ ಜನಸಮೂಹವು ಯೇಸುವಿನ ಸಂಗಡ ಹೋಗುತ್ತಿರಲು, ಯೇಸು ತಿರುಗಿಕೊಂಡು ಅವರನ್ನು ನೋಡಿ ಹೇಳಿದ್ದೇನೆಂದರೆ:

[26] “ಯಾರಾದರೂ ನನ್ನ ಬಳಿಗೆ ಬಂದು ತಮ್ಮ ತಂದೆ, ತಾಯಿ, ಹೆಂಡತಿ, ಮಕ್ಕಳು, ಸಹೋದರರು, ಸಹೋದರಿಯರು ಹಾಗೂ ತಮ್ಮ ಸ್ವಂತ ಪ್ರಾಣವನ್ನು ಸಹ ದ್ವೇಷಿಸದಿದ್ದರೆ ಅವರು ನನ್ನ ಶಿಷ್ಯರಾಗಲಾರರು.

[27] ಯಾರಾದರೂ ತಮ್ಮ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸದವರು ನನ್ನ ಶಿಷ್ಯರಾಗಲಾರರು.

[28] “ನಿಮ್ಮಲ್ಲಿ ಒಬ್ಬರು ಗೋಪುರವನ್ನು ಕಟ್ಟಲು ಇಚ್ಛಿಸಿದರೆ. ನೀವು ಮೊದಲು ಕುಳಿತು ಅದನ್ನು ಪೂರೈಸುವುದಕ್ಕೆ ಬೇಕಾದ ಖರ್ಚು ಇದೆಯೋ ಎಂದು ಲೆಕ್ಕ ಮಾಡುವುದಿಲ್ಲವೋ?

[29] ಒಂದು ವೇಳೆ ಹಾಗೆ ಲೆಕ್ಕಮಾಡದೆ ನೀವು ಅದಕ್ಕೆ ಅಸ್ತಿವಾರ ಹಾಕಿದ ಮೇಲೆ, ಅದನ್ನು ಪೂರೈಸದಿದ್ದರೆ, ನಿಮ್ಮನ್ನು ನೋಡುವವರೆಲ್ಲರೂ, ‘ಈ ವ್ಯಕ್ತಿ ಕಟ್ಟಲಾರಂಭಿಸಿದ, ಮುಗಿಸಲು ಇವನಿಗೆ ಆಗಲಿಲ್ಲ,’ ಎಂದು ಹೇಳಿ ಹಾಸ್ಯಮಾಡುವರು.

[31] “ಅಥವಾ ಯಾವ ಅರಸನಾದರೂ ಬೇರೆ ಅರಸನಿಗೆ ವಿರೋಧವಾಗಿ ಯುದ್ಧಮಾಡುವುದಕ್ಕೆ ಹೋಗುವಾಗ, ಮೊದಲು ಕುಳಿತು ತನಗೆ ವಿರೋಧವಾಗಿ ಇಪ್ಪತ್ತು ಸಾವಿರ ಸೈನ್ಯದೊಂದಿಗೆ ಬರುವ ಆ ಅರಸನನ್ನು ತನ್ನ ಹತ್ತು ಸಾವಿರ ಸೈನ್ಯದೊಂದಿಗೆ ಎದುರಿಸುವುದಕ್ಕೆ ಸಮರ್ಥವೋ ಎಂದು ಆಲೋಚನೆ ಮಾಡುವುದಿಲ್ಲವೇ?

[32] ಸಾಮರ್ಥ್ಯ ಇಲ್ಲದಿದ್ದರೆ, ಇನ್ನೂ ದೂರದಲ್ಲಿರುವಾಗಲೇ ಪ್ರತಿನಿಧಿಗಳನ್ನು ಕಳುಹಿಸಿ ಸಮಾಧಾನವನ್ನು ಕೋರುವನಲ್ಲವೇ?

[33] ಆದ್ದರಿಂದ ನಿಮ್ಮಲ್ಲಿ ಯಾರಾದರೂ ತಮಗಿರುವುದನ್ನೆಲ್ಲಾ ಬಿಟ್ಟುಬಿಡದಿದ್ದರೆ, ಅವರು ನನ್ನ ಶಿಷ್ಯರಾಗಲಾರರು.

[34] “ಉಪ್ಪು ಒಳ್ಳೆಯದು, ಆದರೆ ಉಪ್ಪೇ ಸಪ್ಪಗಾದರೆ, ಅದಕ್ಕೆ ಇನ್ನಾವುದರಿಂದ ರುಚಿ ಬಂದೀತು?

[35] ಅದು ಭೂಮಿಗಾದರೂ ಗೊಬ್ಬರಕ್ಕಾದರೂ ಪ್ರಯೋಜನವಿಲ್ಲ; ಅದನ್ನು ಜನರು ಹೊರಗೆ ಹಾಕುತ್ತಾರೆ. “ಕೇಳುವುದಕ್ಕೆ ಕಿವಿಯುಳ್ಳವರು, ಕೇಳಲಿ.”

ಲೂಕ — Chapters