Skip to content
Opens in a new window
Listen to this chapter • 6:06

[1] ಯೇಸು ಗಮನಿಸುತ್ತಿರುವಾಗ, ಐಶ್ವರ್ಯವಂತರು ತಮ್ಮ ಕಾಣಿಕೆಗಳನ್ನು ದೇವಾಲಯದ ಕಾಣಿಕೆ ಪೆಟ್ಟಿಗೆಯಲ್ಲಿ ಹಾಕುವುದನ್ನು ಕಂಡರು.

[2] ಒಬ್ಬ ಬಡ ವಿಧವೆಯು ಸಹ ಎರಡು ಕಾಸುಗಳನ್ನು ಪೆಟ್ಟಿಗೆಯಲ್ಲಿ ಹಾಕುವುದನ್ನು ಯೇಸು ಕಂಡರು.

[3] ಆಗ ಯೇಸು, “ನಾನು ನಿಮಗೆ ನಿಜವಾಗಿ ಹೇಳುತ್ತೇನೆ: ಈ ಬಡ ವಿಧವೆಯು ಅವರೆಲ್ಲರಿಗಿಂತಲೂ ಹೆಚ್ಚು ಹಾಕಿದ್ದಾಳೆ.

[4] ಏಕೆಂದರೆ ಇವರೆಲ್ಲರೂ ತಮಗಿರುವ ಸಮೃದ್ಧಿಯಲ್ಲಿ, ದೇವರಿಗೆ ಕಾಣಿಕೆಗಳನ್ನು ಹಾಕಿದ್ದಾರೆ. ಆದರೆ ಈಕೆಯು ತನ್ನ ಬಡತನದಲ್ಲಿಯೂ ತನ್ನ ಜೀವನಕ್ಕೆ ಇದ್ದದ್ದನ್ನೆಲ್ಲಾ ಹಾಕಿದ್ದಾಳೆ,” ಎಂದರು.

[5] ತರುವಾಯ ಶಿಷ್ಯರಲ್ಲಿ ಕೆಲವರು ದೇವಾಲಯದ ಕುರಿತು ಅದು ಸುಂದರವಾದ ಕಲ್ಲುಗಳಿಂದಲೂ ದೇವರಿಗೆ ಪ್ರತಿಷ್ಠೆಯ ಕೊಡುಗೆಗಳಿಂದಲೂ ಅಲಂಕೃತವಾಗಿದೆ ಎಂದು ಮಾತನಾಡುತ್ತಿದ್ದರು.

[6] ಆದರೆ ಯೇಸು, “ನೀವು ಕಾಣುತ್ತಿರುವ ಇವೆಲ್ಲವೂ ಕೆಡವಿಹಾಕಿ ಒಂದು ಕಲ್ಲಿನ ಮೇಲೆ ಮತ್ತೊಂದು ಕಲ್ಲು ಉಳಿಯದ ಕಾಲ ಬರುವುದು,” ಎಂದರು.

[7] ಆಗ ಅವರು ಯೇಸುವಿಗೆ, “ಬೋಧಕರೇ, ಇವುಗಳು ಯಾವಾಗ ಆಗುವುವು? ಇವುಗಳು ಸಂಭವಿಸುವುದಕ್ಕಿರುವಾಗ ಯಾವ ಸೂಚನೆ ಇರುವುದು?” ಎಂದು ಕೇಳಿದರು.

[8] ಅದಕ್ಕೆ ಯೇಸು, “ನೀವು ಮೋಸಹೋಗದಂತೆ ಎಚ್ಚರಿಕೆಯಾಗಿರಿ. ಅನೇಕರು ನನ್ನ ಹೆಸರಿನಲ್ಲಿ ಬಂದು, ‘ನಾನೇ ಅವರು,’ ಎಂದೂ ‘ಸಮಯ ಸಮೀಪಿಸಿದೆ,’ ಎಂದೂ ಹಕ್ಕು ಸಾಧಿಸುವರು. ನೀವು ಅವರನ್ನು ಹಿಂಬಾಲಿಸಬೇಡಿರಿ.

[9] ನೀವು ಯುದ್ಧಗಳ ಮತ್ತು ಕಲಹಗಳ ವಿಷಯವಾಗಿ ಕೇಳುವಾಗ ದಿಗಿಲುಪಡಬೇಡಿರಿ. ಇವುಗಳೆಲ್ಲಾ ಮೊದಲು ಸಂಭವಿಸಬೇಕು. ಆದರೂ ಕೂಡಲೇ ಅಂತ್ಯ ಬರುವುದಿಲ್ಲ,” ಎಂದರು.

[10] ಯೇಸು ಅವರಿಗೆ, “ಜನಾಂಗಕ್ಕೆ ವಿರೋಧವಾಗಿ ಜನಾಂಗವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು.

[11] ವಿವಿಧ ಕಡೆಗಳಲ್ಲಿ ಮಹಾಭೂಕಂಪಗಳೂ ಬರಗಳೂ ವ್ಯಾಧಿಗಳೂ ಇರುವುವು. ಭಯ ಹುಟ್ಟಿಸುವ ಘಟನೆಗಳೂ ಆಕಾಶದಿಂದ ಮಹಾಸೂಚನೆಗಳೂ ಆಗುವುವು.

[12] “ಆದರೆ ಇವೆಲ್ಲವುಗಳಿಗಿಂತ ಮೊದಲು ಅವರು ನಿಮ್ಮನ್ನು ಹಿಡಿದು, ಹಿಂಸಿಸಿ ಸಭಾಮಂದಿರಗಳಿಗೂ ಸೆರೆಮನೆಗಳಿಗೂ ಒಪ್ಪಿಸಿ, ನನ್ನ ಹೆಸರಿನ ನಿಮಿತ್ತ ಅರಸುಗಳ ಮತ್ತು ಅಧಿಕಾರಿಗಳ ಮುಂದೆ ನಿಮ್ಮನ್ನು ತರುವರು.

[13] ಇದು ಸಾಕ್ಷಿ ನೀಡಲು ನಿಮಗೆ ಸದಾವಕಾಶವಾಗಿರುತ್ತದೆ.

[14] ಆಗ ನೀವು ಏನು ಉತ್ತರಕೊಡಬೇಕೆಂದು ಮುಂದಾಗಿ ಚಿಂತಿಸಬೇಕಾಗಿಲ್ಲವೆಂದು ನಿಮ್ಮ ಹೃದಯಗಳಲ್ಲಿ ನಿಶ್ಚಯಮಾಡಿಕೊಳ್ಳಿರಿ.

[15] ಏಕೆಂದರೆ ನಿಮ್ಮ ವಿರೋಧಿಗಳು ಸಹ ಪ್ರತಿವಾದಿಸಲಾಗದ ಇಲ್ಲವೆ ವಿರೋಧಿಸಲಾಗದ ಮಾತನ್ನೂ ಜ್ಞಾನವನ್ನೂ ನಾನು ನಿಮಗೆ ಕೊಡುವೆನು.

[16] ತಂದೆತಾಯಿಗಳೂ ಸಹೋದರರೂ ಬಂಧುಗಳೂ ಸ್ನೇಹಿತರೂ ನಿಮ್ಮನ್ನು ಹಿಡಿದುಕೊಡುವರು ಮತ್ತು ನಿಮ್ಮಲ್ಲಿ ಕೆಲವರನ್ನು ಕೊಲ್ಲಿಸುವರು.

[17] ಇದಲ್ಲದೆ ನನ್ನ ನಿಮಿತ್ತ ನಿಮ್ಮನ್ನು ಎಲ್ಲರೂ ದ್ವೇಷಿಸುವರು.

[18] ಆದರೆ ನಿಮ್ಮ ತಲೆ ಕೂದಲೊಂದಾದರೂ ನಾಶವಾಗುವುದಿಲ್ಲ.

[19] ನೀವು ನಿಮ್ಮ ಸಹನೆಯಿಂದ, ನಿಮ್ಮ ಪ್ರಾಣಗಳನ್ನು ಕಾಪಾಡಿಕೊಳ್ಳುವಿರಿ.

[20] “ಸೈನ್ಯಗಳು ಯೆರೂಸಲೇಮಿಗೆ ಮುತ್ತಿಗೆ ಹಾಕುವುದನ್ನು ನೀವು ಕಾಣುವಾಗ ಅದು ಹಾಳಾಗುವ ಕಾಲವು ಸಮೀಪಿಸಿದೆ ಎಂದು ತಿಳಿದುಕೊಳ್ಳಿರಿ.

[21] ಆಗ ಯೂದಾಯದಲ್ಲಿ ಇರುವವರು ಬೆಟ್ಟಗಳಿಗೆ ಓಡಿಹೋಗಲಿ; ಪಟ್ಟಣದ ಮಧ್ಯದಲ್ಲಿರುವವರು ಹೊರಟು ಹೋಗಲಿ; ಇದಲ್ಲದೆ ಹಳ್ಳಿಗಳಲ್ಲಿ ಇರುವವರು ಪಟ್ಟಣಕ್ಕೆ ಪ್ರವೇಶಿಸದೆ ಇರಲಿ.

[22] ಏಕೆಂದರೆ ಪವಿತ್ರ ವೇದದಲ್ಲಿ ಬರೆದಿರುವವುಗಳೆಲ್ಲವೂ ನೆರವೇರಲು, ಇವು ದಂಡನೆಯ ದಿವಸಗಳಾಗಿವೆ.

[23] ಆದರೆ ಆ ದಿವಸಗಳಲ್ಲಿ ಗರ್ಭಿಣಿಯರಿಗೂ ಹಾಲುಣಿಸುವ ತಾಯಂದಿರಿಗೂ ಕಷ್ಟ! ದೇಶದಲ್ಲಿ ಈ ಜನರು ಮಹಾ ವಿಪತ್ತಿಗೂ ಕೋಪಕ್ಕೂ ಗುರಿಯಾಗುವರು.

[24] ಇದಲ್ಲದೆ ಅವರು ಖಡ್ಗಕ್ಕೆ ತುತ್ತಾಗಿ ಬೀಳುವರು ಮತ್ತು ಸೆರೆಯಾಗಿ ಎಲ್ಲಾ ರಾಷ್ಟ್ರಗಳಲ್ಲಿ ಒಯ್ಯುವರು. ಯೆಹೂದ್ಯರಲ್ಲದವರ ಕಾಲ ಪರಿಪೂರ್ಣವಾಗುವವರೆಗೆ ಅವರು ಯೆರೂಸಲೇಮನ್ನು ತುಳಿದುಹಾಕುವರು.

[25] “ಸೂರ್ಯ, ಚಂದ್ರ, ನಕ್ಷತ್ರಗಳಲ್ಲಿ ಸೂಚನೆಗಳು ಕಾಣಿಸಿಕೊಳ್ಳುವುವು. ಭೂಮಿಯಲ್ಲಾದರೋ, ಮೊರೆಯುವ ತೆರೆಗಳ ಮತ್ತು ಭೋರ್ಗರೆಯುವ ಸಮುದ್ರದ ನಿಮಿತ್ತ ಜನಾಂಗಗಳು ದಿಕ್ಕುತೋಚದೆ ಸಂಕಟಕ್ಕೆ ಒಳಗಾಗುವರು.

[26] ಆಕಾಶದ ಶಕ್ತಿಗಳು ಕದಲುವುದರಿಂದ ಲೋಕಕ್ಕೆ ಏನು ಸಂಭವಿಸುವುದೋ ಎಂಬ ಭಯಭೀತಿಯಿಂದ, ಮಾನವರು ಮನಗುಂದಿಹೋಗುವರು.

[27] ಆಗ ಮನುಷ್ಯಪುತ್ರನಾದ ನಾನು ಶಕ್ತಿಯಿಂದಲೂ ಮಹಾ ಮಹಿಮೆಯಿಂದಲೂ ಮೇಘದಲ್ಲಿ ಬರುವುದನ್ನು ಜನರು ಕಾಣುವರು.

[28] ಈ ಸಂಗತಿಗಳು ಸಂಭವಿಸಲು ತೊಡಗುವಾಗ, ತಲೆಯೆತ್ತಿ ನಿಲ್ಲಿರಿ. ಏಕೆಂದರೆ ನಿಮ್ಮ ವಿಮೋಚನೆಯು ಸಮೀಪಿಸಿತು,” ಎಂದರು.

[29] ಯೇಸು ಶಿಷ್ಯರಿಗೆ ಈ ಸಾಮ್ಯವನ್ನು ಹೇಳಿದರು: “ಅಂಜೂರದ ಮರವನ್ನು ಮತ್ತು ಇತರ ಮರಗಳನ್ನು ಗಮನಿಸಿರಿ.

[30] ಅವುಗಳ ಎಲೆಗಳು ಚಿಗುರುವುದನ್ನು ಕಾಣುವಾಗ ಬೇಸಿಗೆಯು ಹತ್ತಿರವಾಯಿತೆಂದು ನೀವಾಗಿಯೇ ತಿಳಿದುಕೊಳ್ಳುತ್ತೀರಿ.

[31] ಅದೇ ಪ್ರಕಾರ, ಇವೆಲ್ಲ ಸಂಭವಿಸುವುದನ್ನು ನೀವು ಕಾಣುವಾಗ, ದೇವರ ರಾಜ್ಯ ಸಮೀಪಿಸಿತೆಂದು ತಿಳಿದುಕೊಳ್ಳಿರಿ.

[32] “ಇವೆಲ್ಲವೂ ನೆರವೇರುವವರೆಗೆ ಈ ಸಂತತಿಯು ಅಳಿದುಹೋಗುವುದೇ ಇಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.

[33] ಭೂಮ್ಯಾಕಾಶಗಳು ಅಳಿದುಹೋಗುವುವು, ಆದರೆ ನನ್ನ ಮಾತುಗಳು ಅಳಿದುಹೋಗುವುದೇ ಇಲ್ಲ.

[34] “ನಿಮ್ಮ ಮೇಲೆ ಆ ದಿನವು ಉರುಲಿನಂತೆ ಫಕ್ಕನೆ ಬಾರದಂತೆ ನೀವು ಅತಿಭೋಜನದಿಂದಲೂ ಅಮಲಿನಿಂದಲೂ ಈ ಜೀವನದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗದಂತೆ, ನಿಮ್ಮ ವಿಷಯದಲ್ಲಿ ಜಾಗರೂಕರಾಗಿರಿ.

[35] ಅದು ಭೂಮಿಯ ಮೇಲೆ ವಾಸವಾಗಿರುವವರೆಲ್ಲರ ಮೇಲೆ ಬರುವುದು.

[36] ಆದಕಾರಣ ಸಂಭವಿಸುವುದಕ್ಕಿರುವ ಇವೆಲ್ಲವುಗಳಿಂದ, ನೀವು ತಪ್ಪಿಸಿಕೊಳ್ಳುವುದಕ್ಕೆ ಯೋಗ್ಯರೆಂದು ಎಣಿಸಿಕೊಳ್ಳುವಂತೆಯೂ ಮನುಷ್ಯಪುತ್ರನಾದ ನನ್ನ ಮುಂದೆ ನಿಂತುಕೊಳ್ಳುವಂತೆಯೂ ಯಾವಾಗಲೂ ಎಚ್ಚರವಾಗಿದ್ದು ಪ್ರಾರ್ಥಿಸುತ್ತಾ ಇರಿ,” ಎಂದರು.

[37] ಯೇಸು ಹಗಲಿನಲ್ಲಿ ದೇವಾಲಯದೊಳಗೆ ಬೋಧಿಸುತ್ತಾ ಇದ್ದು, ರಾತ್ರಿಯಲ್ಲಿ ಹೊರಟುಹೋಗಿ ಓಲಿವ್ ಗುಡ್ಡದಲ್ಲಿ ವಾಸಿಸುತ್ತಿದ್ದರು.

[38] ಜನರೆಲ್ಲರೂ ಬೆಳಗಿನ ಜಾವದಲ್ಲಿ ಎದ್ದು ಯೇಸುವಿನ ಉಪದೇಶವನ್ನು ಕೇಳುವುದಕ್ಕಾಗಿ ದೇವಾಲಯಕ್ಕೆ ಬರುತ್ತಿದ್ದರು.

ಲೂಕ — Chapters