[1] ಇವುಗಳಾದ ಮೇಲೆ ಕರ್ತದೇವರು ಬೇರೆ ಎಪ್ಪತ್ತೆರಡು ಮಂದಿಯನ್ನು ಸಹ ನೇಮಿಸಿ ತಾವೇ ಸ್ವತಃ ಹೋಗಬೇಕೆಂದಿದ್ದ ಪ್ರತಿಯೊಂದು ಪಟ್ಟಣಕ್ಕೂ ಸ್ಥಳಕ್ಕೂ ಇಬ್ಬಿಬ್ಬರನ್ನಾಗಿ ತಮಗೆ ಮುಂದಾಗಿ ಕಳುಹಿಸಿದರು.
[2] ಯೇಸು ಅವರಿಗೆ, “ಬೆಳೆಯೋ ಬಹಳವಾಗಿದೆ, ಕೆಲಸದವರೋ ಕೆಲವರು. ಆದ್ದರಿಂದ, ಬೆಳೆಯ ಯಜಮಾನನನ್ನು ತನ್ನ ಬೆಳೆಗೆ ತಕ್ಕಷ್ಟು ಕೆಲಸದವರನ್ನು ಕಳುಹಿಸುವಂತೆ, ನೀವು ಬೇಡಿಕೊಳ್ಳಿರಿ.
[3] ಹೋಗಿರಿ! ತೋಳಗಳ ಮಧ್ಯದಲ್ಲಿ ಕುರಿಮರಿಗಳನ್ನು ಕಳುಹಿಸುವಂತೆ ನಾನು ನಿಮ್ಮನ್ನು ಕಳುಹಿಸುತ್ತೇನೆ.
[4] ಹಣದ ಚೀಲವನ್ನಾಗಲಿ, ಪ್ರಯಾಣದ ಚೀಲವನ್ನಾಗಲಿ, ಪಾದರಕ್ಷೆಗಳನ್ನಾಗಲಿ ತೆಗೆದುಕೊಂಡು ಹೋಗಬೇಡಿರಿ; ದಾರಿಯಲ್ಲಿ ಯಾರನ್ನೂ ಕುಶಲ ವಿಚಾರ ಮಾಡಿಕೊಂಡಿರಬೇಡಿರಿ.
[5] “ನೀವು ಯಾವ ಮನೆಯನ್ನಾದರೂ ಪ್ರವೇಶಿಸುವಾಗ ಮೊದಲು, ‘ಈ ಮನೆಗೆ ಸಮಾಧಾನವಾಗಲಿ,’ ಎಂದು ಹೇಳಿರಿ.
[6] ಅಲ್ಲಿ ಸಮಾಧಾನದ ಮನುಷ್ಯನು ಇದ್ದರೆ, ನಿಮ್ಮ ಸಮಾಧಾನವು ಅವನ ಮೇಲೆ ಇರುವುದು; ಇಲ್ಲದಿದ್ದರೆ, ಅದು ನಿಮಗೇ ಹಿಂದಿರುಗುವುದು.
[7] ಮನೆಯಿಂದ ಮನೆಗೆ ಹೋಗದೆ, ಅದೇ ಮನೆಯಲ್ಲಿದ್ದು, ಅವರು ಕೊಟ್ಟದ್ದನ್ನು ತಿಂದು ಕುಡಿಯಿರಿ. ಕೆಲಸದವನು ತನ್ನ ಕೂಲಿಗೆ ಯೋಗ್ಯನು.
[8] “ಯಾವುದಾದರೂ ಒಂದು ಪಟ್ಟಣದೊಳಗೆ ನೀವು ಪ್ರವೇಶಿಸುವಾಗ, ಅವರು ನಿಮ್ಮನ್ನು ಸೇರಿಸಿಕೊಂಡರೆ ಅವರು ನೀಡಿದ್ದನ್ನು ತಿನ್ನಿರಿ.
[9] ಅಲ್ಲಿರುವ ರೋಗಿಗಳನ್ನು ಸ್ವಸ್ಥಮಾಡಿ, ಅವರಿಗೆ, ‘ದೇವರ ರಾಜ್ಯವು ನಿಮ್ಮ ಸಮೀಪಕ್ಕೆ ಬಂದಿದೆ,’ ಎಂದು ಹೇಳಿರಿ.
[10] ಆದರೆ ನೀವು ಪ್ರವೇಶಿಸುವ ಯಾವ ಪಟ್ಟಣದಲ್ಲಿಯಾದರೂ ಅವರು ನಿಮ್ಮನ್ನು ಸೇರಿಸಿಕೊಳ್ಳದಿದ್ದರೆ, ನೀವು ಅದರ ಬೀದಿಗಳಲ್ಲಿ ಹೋಗಿ,
[11] ‘ನಮ್ಮ ಪಾದಗಳಿಗೆ ಅಂಟಿಕೊಂಡಿರುವ ನಿಮ್ಮ ಪಟ್ಟಣದ ಧೂಳನ್ನೇ ನಿಮಗೆ ವಿರೋಧವಾಗಿ ನಾವು ಝಾಡಿಸಿಬಿಡುತ್ತೇವೆ. ಆದರೂ ದೇವರ ರಾಜ್ಯವು ನಿಮ್ಮ ಸಮೀಪಕ್ಕೆ ಬಂದಿದೆ ಎಂಬುದು ನಿಮಗೆ ನಿಶ್ಚಯವಾಗಿ ತಿಳಿದಿರಲಿ,’ ಎಂದು ಹೇಳಿರಿ.
[12] ಆದರೆ ನ್ಯಾಯತೀರ್ಪಿನ ದಿನ, ಆ ಪಟ್ಟಣಕ್ಕಿಂತಲೂ ಸೊದೋಮಿನ ಗತಿ ಹೆಚ್ಚು ತಾಳಬಹುದಾಗಿರುವುದು ಎಂದು ನಾನು ನಿಮಗೆ ಹೇಳುತ್ತೇನೆ.
[13] “ಖೊರಾಜಿನೇ, ನಿನಗೆ ಕಷ್ಟ! ಬೇತ್ಸಾಯಿದವೇ, ನಿನಗೆ ಕಷ್ಟ! ಏಕೆಂದರೆ ನಿಮ್ಮಲ್ಲಿ ನಡೆದ ಅದ್ಭುತಗಳು ಟೈರ್ ಮತ್ತು ಸೀದೋನ್ ಪಟ್ಟಣಗಳಲ್ಲಿ ನಡೆದಿದ್ದರೆ, ಅಲ್ಲಿಯವರು ಬಹಳ ಕಾಲದ ಹಿಂದೆಯೇ, ಗೋಣಿತಟ್ಟನ್ನು ಸುತ್ತಿಕೊಂಡು ಬೂದಿಯಲ್ಲಿ ಕುಳಿತುಕೊಂಡು ದೇವರ ಕಡೆ ತಿರುಗಿಕೊಳ್ಳುತ್ತಿದ್ದರು.
[14] ಆದರೆ ನ್ಯಾಯತೀರ್ಪಿನಲ್ಲಿ ನಿಮ್ಮ ಗತಿಗಿಂತಲೂ ಟೈರ್ ಮತ್ತು ಸೀದೋನ್ ಪಟ್ಟಣಗಳ ಗತಿಯು ಹೆಚ್ಚು ತಾಳಬಹುದಾಗಿರುವುದು.
[15] ಕಪೆರ್ನೌಮೇ, ನೀನು ಪರಲೋಕಕ್ಕೆ ಹೋಗುವೆ ಎಂದು ನೆನೆಸುತ್ತೀಯೋ? ಇಲ್ಲ, ನೀನು ಪಾತಾಳಕ್ಕೆ ಇಳಿಯುವೆ.
[16] “ನಿಮ್ಮ ಮಾತನ್ನು ಕೇಳುವವರು ನನ್ನ ಮಾತನ್ನು ಕೇಳುತ್ತಾರೆ; ನಿಮ್ಮನ್ನು ತಿರಸ್ಕರಿಸುವವರು ನನ್ನನ್ನು ತಿರಸ್ಕರಿಸುತ್ತಾರೆ; ಆದರೆ ನನ್ನನ್ನು ತಿರಸ್ಕರಿಸುವವರು ನನ್ನನ್ನು ಕಳುಹಿಸಿದಾತನನ್ನೇ ತಿರಸ್ಕರಿಸುತ್ತಾರೆ,” ಎಂದರು.
[17] ಆ ಎಪ್ಪತ್ತೆರಡು ಮಂದಿ ಸಂತೋಷದಿಂದ ಹಿಂತಿರುಗಿ, “ಕರ್ತದೇವರೇ, ನಿಮ್ಮ ಹೆಸರಿನಲ್ಲಿ ದೆವ್ವಗಳು ಸಹ ನಮಗೆ ಅಧೀನವಾದವು,” ಎಂದರು.
[18] ಯೇಸು ಅವರಿಗೆ, “ಸೈತಾನನು ಮಿಂಚಿನ ಹಾಗೆ ಆಕಾಶದಿಂದ ಬೀಳುವುದನ್ನು ನಾನು ಕಂಡೆನು.
[19] ಸರ್ಪಗಳನ್ನೂ ಚೇಳುಗಳನ್ನೂ ತುಳಿಯುವುದಕ್ಕೆ ಮತ್ತು ವಿರೋಧಿಯ ಎಲ್ಲಾ ಶಕ್ತಿಯ ಮೇಲೆ ನಾನು ನಿಮಗೆ ಅಧಿಕಾರ ಕೊಡುತ್ತೇನೆ; ಯಾವುದೂ ಯಾವ ರೀತಿಯಲ್ಲಿಯೂ ನಿಮಗೆ ಕೇಡು ಮಾಡಲಾರದು.
[20] ಹೀಗಿದ್ದರೂ, ದೆವ್ವಗಳು ನಿಮಗೆ ಅಧೀನವಾಗಿವೆ ಎಂದು ಸಂತೋಷ ಪಡಬೇಡಿರಿ, ಆದರೆ ನಿಮ್ಮ ಹೆಸರುಗಳು ಪರಲೋಕದಲ್ಲಿ ಲಿಖಿತವಾಗಿವೆ ಎಂದು ಸಂತೋಷಿಸಿರಿ,” ಎಂದರು.
[21] ಆ ಸಮಯದಲ್ಲಿ ಯೇಸು, ಪವಿತ್ರಾತ್ಮರ ಮುಖಾಂತರ ಆನಂದಗೊಂಡು, “ತಂದೆಯೇ, ಪರಲೋಕ, ಭೂಲೋಕಗಳ ಒಡೆಯರೇ, ನೀವು ಈ ವಿಷಯಗಳನ್ನು ಜ್ಞಾನಿಗಳಿಂದಲೂ ಬುದ್ಧಿವಂತರಿಂದಲೂ ಮರೆಮಾಡಿ, ಶಿಶುಗಳಿಗೆ ಪ್ರಕಟ ಮಾಡಿರುವುದರಿಂದ ನಾನು ನಿಮ್ಮನ್ನು ಕೊಂಡಾಡುತ್ತೇನೆ. ಹೌದು ತಂದೆಯೇ, ಹೀಗೆ ಮಾಡುವುದು ನಿಮ್ಮ ದೃಷ್ಟಿಗೆ ಒಳ್ಳೆಯದಾಗಿ ತೋಚಿತು.
[22] “ನನ್ನ ತಂದೆ ಎಲ್ಲವನ್ನೂ ನನಗೆ ಒಪ್ಪಿಸಿದ್ದಾರೆ. ತಂದೆಯ ಹೊರತು ಯಾರೂ ಪುತ್ರನನ್ನು ಅರಿಯರು ಮತ್ತು ಪುತ್ರನು ಯಾರಿಗೆ ತಂದೆಯನ್ನು ಪ್ರಕಟಪಡಿಸಲು ಇಷ್ಟಪಡುತ್ತಾರೋ ಅವರೇ ಹೊರತು ಯಾರೂ ತಂದೆಯನ್ನು ಅರಿಯರು,” ಎಂದರು.
[23] ಯೇಸು ತಮ್ಮ ಶಿಷ್ಯರ ಕಡೆಗೆ ತಿರುಗಿಕೊಂಡು, “ನೀವು ಕಾಣುತ್ತಿರುವುದನ್ನೆಲ್ಲಾ ಕಾಣುವ ಕಣ್ಣುಗಳು ಭಾಗ್ಯವುಳ್ಳವು.
[24] ಏಕೆಂದರೆ ಅನೇಕ ಪ್ರವಾದಿಗಳು ಮತ್ತು ಅರಸರು ನೀವು ಕಾಣುವಂಥವುಗಳನ್ನು ಕಾಣಬೇಕೆಂದು ಅಪೇಕ್ಷಿಸಿದರೂ ಕಾಣಲಿಲ್ಲ ಮತ್ತು ನೀವು ಕೇಳುವಂಥವುಗಳನ್ನು ಕೇಳಬೇಕೆಂದು ಅಪೇಕ್ಷಿಸಿದರೂ ಅವರು ಕೇಳಲಿಲ್ಲ, ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು.
[25] ಒಂದು ಸಂದರ್ಭದಲ್ಲಿ ಒಬ್ಬ ನಿಯಮ ಬೋಧಕನು ಎದ್ದು ನಿಂತು ಯೇಸುವನ್ನು ಪರೀಕ್ಷಿಸುವುದಕ್ಕಾಗಿ, “ಬೋಧಕರೇ, ನಾನು ನಿತ್ಯಜೀವವನ್ನು ಪ್ರಾಪ್ತಿಮಾಡಿಕೊಳ್ಳುವುದಕ್ಕೆ ಏನು ಮಾಡಬೇಕು?” ಎಂದು ಕೇಳಿದನು.
[26] ಯೇಸು ಅವನಿಗೆ, “ಮೋಶೆಯ ನಿಯಮದಲ್ಲಿ ಏನು ಬರೆದಿದೆ? ನೀನು ಅದನ್ನು ಹೇಗೆ ಓದುತ್ತೀ?” ಎಂದು ಕೇಳಿದರು.
[27] ಅದಕ್ಕೆ ಅವನು ಉತ್ತರವಾಗಿ, “ ‘ನೀನು ನಿನ್ನ ದೇವರಾದ ಕರ್ತದೇವರನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಶಕ್ತಿಯಿಂದಲೂ ನಿನ್ನ ಪೂರ್ಣಮನಸ್ಸಿನಿಂದಲೂ ಪ್ರೀತಿಸಬೇಕು,’ ಮತ್ತು ‘ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವರನ್ನು ಪ್ರೀತಿಸಬೇಕು,’” ಎಂದನು.
[28] ಆಗ ಯೇಸು ಅವನಿಗೆ, “ನೀನು ಸರಿಯಾಗಿ ಉತ್ತರಕೊಟ್ಟೆ, ಅದರಂತೆಯೇ ಮಾಡು, ಆಗ ನೀನು ಬದುಕುವೆ,” ಎಂದರು.
[29] ಆದರೆ ಅವನು ತಾನೇ ನೀತಿವಂತನೆಂದು ತೋರಿಸುವುದಕ್ಕೆ, ಅಪೇಕ್ಷೆಯುಳ್ಳವನಾಗಿ ಯೇಸುವಿಗೆ, “ನನ್ನ ನೆರೆಯವನು ಯಾರು?” ಎಂದು ಕೇಳಿದನು.
[30] ಆಗ ಯೇಸು: “ಒಬ್ಬ ಮನುಷ್ಯನು ಯೆರೂಸಲೇಮಿನಿಂದ ಯೆರಿಕೋವಿಗೆ ಪ್ರಯಾಣ ಮಾಡುತ್ತಿದ್ದಾಗ, ಕಳ್ಳರ ಕೈಗೆ ಸಿಕ್ಕಿಬಿದ್ದನು. ಅವರು ಅವನ ವಸ್ತ್ರಗಳನ್ನು ಕಿತ್ತುಕೊಂಡು, ಅವನನ್ನು ಗಾಯಮಾಡಿ, ಅರೆಜೀವ ಮಾಡಿಬಿಟ್ಟು ಹೊರಟು ಹೋದರು.
[31] ಆಗ ಒಬ್ಬ ಯಾಜಕನು ಅದೇ ಮಾರ್ಗವಾಗಿ ಬಂದು ಅವನನ್ನು ಕಂಡು, ದಾರಿಯ ಬೇರೆ ಕಡೆಹೋದನು.
[32] ಅದೇ ಪ್ರಕಾರ ಒಬ್ಬ ಲೇವಿಯೂ ಆ ಸ್ಥಳಕ್ಕೆ ಬಂದು ಅವನನ್ನು ಕಂಡು, ದಾರಿಯ ಬೇರೆ ಕಡೆಹೋದನು.
[33] ಆದರೆ ಒಬ್ಬ ಸಮಾರ್ಯದವನು, ಪ್ರಯಾಣ ಮಾಡುತ್ತಾ ಅವನಿದ್ದಲ್ಲಿಗೆ ಬಂದನು; ಅವನನ್ನು ಕಂಡು, ಕನಿಕರಪಟ್ಟು,
[34] ಅವನ ಬಳಿಗೆ ಹೋಗಿ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಹೊಯ್ದು, ಅವನ ಗಾಯಗಳನ್ನು ಕಟ್ಟಿ ತನ್ನ ಸ್ವಂತ ವಾಹಕಪಶುವಿನ ಮೇಲೆ ಕುಳ್ಳಿರಿಸಿ, ವಸತಿಗೃಹಕ್ಕೆ ತಂದು ಅವನನ್ನು ಆರೈಕೆ ಮಾಡಿದನು.
[35] ಮರುದಿವಸ ಅವನು ಹೊರಟು ಹೋಗುತ್ತಿದ್ದಾಗ ಎರಡು ಬೆಳ್ಳಿ ನಾಣ್ಯವನ್ನು ತೆಗೆದು ಛತ್ರದ ಯಜಮಾನನಿಗೆ ಕೊಟ್ಟು ಅವನಿಗೆ, ‘ಇವನನ್ನು ಆರೈಕೆ ಮಾಡು, ನೀನು ಏನಾದರೂ ಹೆಚ್ಚು ವೆಚ್ಚಮಾಡಿದರೆ, ನಾನು ತಿರುಗಿ ಬರುವಾಗ ಕೊಟ್ಟು ತೀರಿಸುತ್ತೇನೆ,’ ಎಂದನು.
[36] “ಈಗ ಆ ಕಳ್ಳರ ಕೈಗೆ ಸಿಕ್ಕಿಬಿದ್ದವನಿಗೆ ಈ ಮೂವರಲ್ಲಿ ಯಾರು ನೆರೆಯವನೆಂದು ನಿನಗೆ ತೋರುತ್ತದೆ?” ಎಂದು ಯೇಸು ಕೇಳಿದರು.
[37] ಅದಕ್ಕೆ ನಿಯಮ ಪಂಡಿತನು, “ಯಾವನು ಅವನ ಮೇಲೆ ಕನಿಕರ ತೋರಿಸಿದನೋ ಅವನೇ ನಿನ್ನ ನೆರೆಯವನು,” ಎಂದನು. ಆಗ ಯೇಸು ಅವನಿಗೆ, “ಹೋಗು, ನೀನೂ ಅದರಂತೆಯೇ ಮಾಡು,” ಎಂದು ಹೇಳಿದರು.
[38] ಯೇಸು ಮತ್ತು ಅವರ ಶಿಷ್ಯರು ಸಂಚಾರಮಾಡುತ್ತಾ, ಒಂದು ಹಳ್ಳಿಗೆ ಬಂದರು, ಅಲ್ಲಿ ಮಾರ್ಥಳೆಂಬ ಒಬ್ಬ ಸ್ತ್ರೀಯು ಅವರನ್ನು ತನ್ನ ಮನೆಯೊಳಗೆ ಸ್ವೀಕರಿಸಿಕೊಂಡಳು.
[39] ಆಕೆಗೆ ಮರಿಯಳೆಂಬ ಒಬ್ಬ ಸಹೋದರಿ ಇದ್ದಳು, ಆಕೆಯು ಕರ್ತದೇವರ ಪಾದಗಳ ಬಳಿಯಲ್ಲಿ ಕುಳಿತು ಅವರ ವಾಕ್ಯವನ್ನು ಕೇಳುತ್ತಿದ್ದಳು.
[40] ಆದರೆ ಮಾರ್ಥಳು ಬಹಳ ಕೆಲಸದ ನಿಮಿತ್ತವಾಗಿ ಬೇಸರಗೊಂಡು ಅವರ ಬಳಿಗೆ ಬಂದು, “ಕರ್ತದೇವರೇ, ಕೆಲಸ ಮಾಡುವುದಕ್ಕೆ ನನ್ನ ಸಹೋದರಿಯು ನನ್ನೊಬ್ಬಳನ್ನೇ ಬಿಟ್ಟಿರುವುದು ನಿಮಗೆ ಚಿಂತೆಯಿಲ್ಲವೋ? ನನಗೆ ಸಹಾಯಮಾಡುವುದಕ್ಕಾಗಿ ಅವಳಿಗೆ ಹೇಳಿರಿ!” ಎಂದಳು.
[41] ಅದಕ್ಕೆ ಕರ್ತದೇವರು ಪ್ರತ್ಯುತ್ತರವಾಗಿ, “ಮಾರ್ಥಳೇ, ಮಾರ್ಥಳೇ, ನೀನು ಅನೇಕ ವಿಷಯಗಳಿಗಾಗಿ ಚಿಂತಿಸಿ ತೊಂದರೆಗೆ ಒಳಗಾಗಿದ್ದೀ,
[42] ಆದರೆ ಬೇಕಾದದ್ದು ಕೆಲವೇ, ಅವಶ್ಯವಾಗಿರುವುದು. ಮರಿಯಳು ಆ ಉತ್ತಮ ಭಾಗವನ್ನೇ ಆರಿಸಿಕೊಂಡಿದ್ದಾಳೆ ಅದು ಆಕೆಯಿಂದ ಯಾರೂ ತೆಗೆಯಲಾಗುವುದಿಲ್ಲ,” ಎಂದು ಹೇಳಿದರು.