Skip to content
Opens in a new window
Listen to this chapter • 7:01

[1] ಪಿಲಾತನು, ಬಲಿ ಅರ್ಪಿಸುತ್ತಿದ್ದ ಗಲಿಲಾಯದವರ ರಕ್ತವನ್ನೇ ಅವರ ಬಲಿಗಳೊಂದಿಗೆ ಬೆರೆಸಿದ ವಿಷಯವನ್ನು ಯೇಸುವಿಗೆ ತಿಳಿಸಿದ ಕೆಲವರು ಆ ಸಮಯದಲ್ಲಿ ಅಲ್ಲಿದ್ದರು.

[2] ಯೇಸು ಅವರಿಗೆ, “ಆ ಗಲಿಲಾಯದವರು ಇಂಥಾ ಕೊಲೆಗೆ ಈಡಾದ ಕಾರಣ ಅವರು ಎಲ್ಲಾ ಗಲಿಲಾಯದವರಿಗಿಂತ ದೋಷಿಗಳೆಂದು ನೀವು ಭಾವಿಸುತ್ತೀರೋ?

[3] ಹಾಗಲ್ಲವೆಂದು ನಾನು ನಿಮಗೆ ಹೇಳುತ್ತೇನೆ! ನೀವು ದೇವರ ಕಡೆಗೆ ತಿರುಗಿಕೊಳ್ಳದೆ ಹೋದರೆ, ನೀವೆಲ್ಲರೂ ಅವರಂತೆಯೇ ನಾಶವಾಗುವಿರಿ.

[4] ಇಲ್ಲವೆ ಸಿಲೋವ ಎಂಬಲ್ಲಿ ಗೋಪುರವು ಬಿದ್ದು ಸತ್ತು ಹೋದ ಆ ಹದಿನೆಂಟು ಜನರು ಯೆರೂಸಲೇಮಿನಲ್ಲಿ ವಾಸವಾಗಿರುವ ಎಲ್ಲಾ ಮನುಷ್ಯರಿಗಿಂತಲೂ ದೋಷಿಗಳೆಂದು ಭಾವಿಸುತ್ತೀರೋ?

[5] ಹಾಗಲ್ಲವೆಂದು ನಾನು ನಿಮಗೆ ಹೇಳುತ್ತೇನೆ! ನೀವು ದೇವರ ಕಡೆಗೆ ತಿರುಗಿಕೊಳ್ಳದೆ ಹೋದರೆ ನೀವೆಲ್ಲರೂ ಅವರಂತೆಯೇ ನಾಶವಾಗುವಿರಿ,” ಎಂದರು.

[6] ಅನಂತರ ಯೇಸು ಈ ಸಾಮ್ಯವನ್ನು ಹೇಳಿದರು: “ಒಬ್ಬ ಮನುಷ್ಯನಿಗೆ ತನ್ನ ದ್ರಾಕ್ಷಿಯ ತೋಟದಲ್ಲಿ ನೆಡಲಾಗಿದ್ದ, ಒಂದು ಅಂಜೂರದ ಮರವಿತ್ತು. ಅವನು ಬಂದು ಅದರಲ್ಲಿ ಫಲವನ್ನು ಹುಡುಕಲು ಒಂದೂ ಸಿಕ್ಕಲಿಲ್ಲ.

[7] ಆಗ ಅವನು ತನ್ನ ದ್ರಾಕ್ಷಿಯ ತೋಟ ಮಾಡುವವನಿಗೆ, ‘ನೋಡು, ಮೂರು ವರ್ಷಗಳಿಂದ ನಾನು ಈ ಅಂಜೂರದ ಮರದಲ್ಲಿ ಫಲ ಹುಡುಕುತ್ತಾ ಬಂದಿದ್ದೇನೆ, ಆದರೆ ಏನೂ ಸಿಕ್ಕಲಿಲ್ಲ. ಇದನ್ನು ಕಡಿದುಹಾಕು! ಇದು ಏಕೆ ನೆಲವನ್ನು ಕೆಡಿಸಬೇಕು?’ ಎಂದು ಹೇಳಿದನು.

[8] “ಆದರೆ ಅವನು ಉತ್ತರವಾಗಿ ಅವನಿಗೆ, ‘ಒಡೆಯನೇ, ಇನ್ನೊಂದು ವರ್ಷವೂ ಇದನ್ನು ಬಿಡು, ನಾನು ಅದರ ಸುತ್ತಲೂ ಅಗಿದು ಗೊಬ್ಬರ ಹಾಕುವೆನು.

[9] ಮುಂದಿನ ವರ್ಷ ಇದು ಫಲ ಫಲಿಸಿದರೆ, ಸರಿ! ಇಲ್ಲವಾದರೆ, ನೀನು ಇದನ್ನು ಕಡಿದುಹಾಕು, ಎಂದನು.’ ”

[10] ಯೇಸು ಸಬ್ಬತ್ ದಿನದಲ್ಲಿ ಒಂದು ಸಭಾಮಂದಿರದೊಳಗೆ ಬೋಧಿಸುತ್ತಾ ಇದ್ದರು,

[11] ಆಗ, ಹದಿನೆಂಟು ವರ್ಷಗಳಿಂದ ದುರಾತ್ಮನಿಂದ ರೋಗ ಪೀಡಿತಳಾಗಿ ನಡುಬಗ್ಗಿ ಹೋಗಿದ್ದ ಒಬ್ಬ ಸ್ತ್ರೀಯು ಅಲ್ಲಿ ಇದ್ದಳು. ಆಕೆ ತನ್ನಷ್ಟಕ್ಕೆ ತಾನೇ ನೆಟ್ಟಗೆ ನಿಲ್ಲಲಾರದೆ ಇದ್ದಳು.

[12] ಯೇಸು ಆಕೆಯನ್ನು ಕಂಡು, ಹತ್ತಿರಕ್ಕೆ ಕರೆದು ಆಕೆಗೆ, “ಅಮ್ಮಾ, ನೀನು ಈ ನಿನ್ನ ಬಲಹೀನತೆಯಿಂದ ಬಿಡುಗಡೆಯಾಗಿದ್ದಿ,” ಎಂದು ಹೇಳಿ,

[13] ಯೇಸು ಆಕೆಯ ಮೇಲೆ ತಮ್ಮ ಕೈಗಳನ್ನು ಇಟ್ಟರು, ಕೂಡಲೇ ಆಕೆಯು ನೆಟ್ಟಗಾದಳು ಮತ್ತು ದೇವರನ್ನು ಸ್ತುತಿಸಿದಳು.

[14] ಯೇಸು ಸಬ್ಬತ್ ದಿನದಲ್ಲಿ ಸ್ವಸ್ಥಮಾಡಿದ ಕಾರಣ ಸಭಾಮಂದಿರದ ಅಧಿಕಾರಿಯು ಕೋಪದಿಂದ ಜನರಿಗೆ, “ಆರು ದಿವಸಗಳಲ್ಲಿ ಮನುಷ್ಯರು ಕೆಲಸ ಮಾಡತಕ್ಕದ್ದು. ಆದ್ದರಿಂದ ಆ ದಿನಗಳಲ್ಲಿ ನೀವು ಬಂದು ಸ್ವಸ್ಥರಾಗಿರಿ, ಸಬ್ಬತ್ ದಿನದಲ್ಲಿ ಬೇಡ,” ಎಂದನು.

[15] ಅದಕ್ಕೆ ಕರ್ತದೇವರು ಅವನಿಗೆ, “ಕಪಟಿಗಳೇ! ನಿಮ್ಮಲ್ಲಿ ಪ್ರತಿಯೊಬ್ಬನು ಸಬ್ಬತ್ ದಿನದಲ್ಲಿ ತನ್ನ ಎತ್ತನ್ನಾಗಲಿ, ಕತ್ತೆಯನ್ನಾಗಲಿ ಕೊಟ್ಟಿಗೆಯಿಂದ ಬಿಡಿಸಿ ನೀರು ಕುಡಿಸುವುದಕ್ಕಾಗಿ ಹೋಗುವುದಿಲ್ಲವೇ?

[16] ಅಬ್ರಹಾಮನ ಮಗಳಾದ ಈ ಸ್ತ್ರೀಯನ್ನು ಹದಿನೆಂಟು ವರ್ಷಗಳಿಂದ ಸೈತಾನನು ಕಟ್ಟಿಹಾಕಿದ ಈ ಬಂಧನದಿಂದ ಸಬ್ಬತ್ ದಿನದಲ್ಲಿ ಬಿಡಿಸಬಾರದೇ?” ಎಂದರು.

[17] ಯೇಸು ಇದನ್ನು ಹೇಳುತ್ತಿರುವಾಗ, ಅವರ ವಿರೋಧಿಗಳೆಲ್ಲರೂ ನಾಚಿಕೆಪಟ್ಟರು, ಆದರೆ ಇತರರು, ಅವರಿಂದ ನಡೆದ ಎಲ್ಲಾ ಮಹಿಮೆಯುಳ್ಳ ಕಾರ್ಯಗಳಿಗಾಗಿ ಸಂತೋಷಪಟ್ಟರು.

[18] ಅನಂತರ ಯೇಸು, “ದೇವರ ರಾಜ್ಯವು ಯಾವುದಕ್ಕೆ ಹೋಲಿಕೆಯಾಗಿದೆ? ನಾನು ಯಾವುದಕ್ಕೆ ಅದನ್ನು ಹೋಲಿಸಲಿ?

[19] ಅದು ಸಾಸಿವೆಕಾಳಿಗೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಮನುಷ್ಯನು ತೆಗೆದುಕೊಂಡುಹೋಗಿ ತನ್ನ ತೋಟದಲ್ಲಿ ಬಿತ್ತಲು, ಅದು ಬೆಳೆದು ಒಂದು ದೊಡ್ಡ ಮರವಾಯಿತು. ಆಕಾಶದ ಪಕ್ಷಿಗಳು ಅದರ ಕೊಂಬೆಗಳಲ್ಲಿ ಗೂಡು ಕಟ್ಟಿ ವಾಸಮಾಡಿದವು,” ಎಂದರು.

[20] ಪುನಃ ಯೇಸು, “ದೇವರ ರಾಜ್ಯವನ್ನು ಯಾವುದಕ್ಕೆ ಹೋಲಿಸಲಿ?

[21] ಅದು ಹುಳಿಹಿಟ್ಟಿಗೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಸ್ತ್ರೀಯು ತೆಗೆದುಕೊಂಡು ಹುಳಿಯಿಲ್ಲದ ಸುಮಾರು ಇಪ್ಪತ್ತೇಳು ಕಿಲೋಗ್ರಾಂ ಹಿಟ್ಟಿನಲ್ಲಿ ಕಲಸಿದಾಗ ಆ ಹಿಟ್ಟೆಲ್ಲಾ ಹುಳಿಯಾಯಿತು,” ಎಂದರು.

[22] ಯೇಸು ಪಟ್ಟಣಗಳನ್ನೂ ಹಳ್ಳಿಗಳನ್ನೂ ಸಂಚರಿಸಿ, ಅಲ್ಲೆಲ್ಲಾ ಬೋಧಿಸುತ್ತಾ ಯೆರೂಸಲೇಮಿನ ಕಡೆಗೆ ಪ್ರಯಾಣಮಾಡಿದರು.

[23] ಒಬ್ಬನು ಯೇಸುವಿಗೆ, “ಸ್ವಾಮಿ, ರಕ್ಷಣೆ ಹೊಂದುವವರು ಕೆಲವರೋ?” ಎಂದು ಕೇಳಲು, ಯೇಸು ಅವರಿಗೆ,

[24] “ಇಕ್ಕಟ್ಟಾದ ಬಾಗಿಲಿನಿಂದ ಒಳಗೆ ಪ್ರವೇಶಿಸುವುದಕ್ಕೆ ಪ್ರಯಾಸಪಡಿರಿ, ಅನೇಕರು ಒಳಗೆ ಪ್ರವೇಶಿಸುವುದಕ್ಕೆ ಪ್ರಯತ್ನಿಸಿದರೂ ಆಗುವುದಿಲ್ಲ ಎಂದು ನಾನು ನಿಮಗೆ ಹೇಳುತ್ತೇನೆ.

[25] ಮನೆಯಜಮಾನರು ಒಂದು ಸಾರಿ ಎದ್ದು ಬಾಗಿಲನ್ನು ಮುಚ್ಚಿಕೊಂಡರೆ, ನೀವು ಹೊರಗೆ ನಿಂತುಕೊಂಡು ಬಾಗಿಲನ್ನು ತಟ್ಟುತ್ತಾ, ‘ಸ್ವಾಮಿ, ನಮಗೆ ಬಾಗಿಲನ್ನು ತೆರೆಯಿರಿ,’ ಎಂದು ಹೇಳುವುದಕ್ಕೆ ಆರಂಭಿಸಿದಾಗ, “ಆತನು ನಿಮಗೆ ಉತ್ತರವಾಗಿ, ‘ನೀವು ಯಾರು? ಎಲ್ಲಿಯವರೋ ನಾನು ನಿಮ್ಮನ್ನು ಅರಿಯೆನು,’ ಎಂದು ಹೇಳುವನು.

[26] “ಆಗ ನೀವು, ‘ನಿಮ್ಮೊಂದಿಗೆ ನಾವು ಊಟಮಾಡಿದೆವು, ಪಾನಮಾಡಿದೆವು, ನೀವು ನಮ್ಮ ಬೀದಿಗಳಲ್ಲಿ ಬೋಧಿಸಿದಿರಿ,’ ಎಂದು ಹೇಳಲಾರಂಭಿಸುವಿರಿ.

[27] “ಅದಕ್ಕೆ ಆತನು, ‘ನೀವು ಎಲ್ಲಿಯವರೋ ನಾನರಿಯೆ, ಅನೀತಿಯನ್ನು ಮಾಡುವವರಾದ ನೀವೆಲ್ಲರೂ ನನ್ನಿಂದ ತೊಲಗಿಹೋಗಿರಿ,’ ಎಂದು ಹೇಳುವರು.

[28] “ಅಬ್ರಹಾಮ, ಇಸಾಕ, ಯಾಕೋಬ ಮತ್ತು ಎಲ್ಲಾ ಪ್ರವಾದಿಗಳು ದೇವರ ರಾಜ್ಯದಲ್ಲಿ ಇರುವುದನ್ನೂ ನಿಮ್ಮನ್ನು ಮಾತ್ರ ಹೊರಗೆ ಹಾಕಿರುವುದನ್ನೂ ಕಾಣುವಾಗ, ಅಲ್ಲಿ ನಿಮಗೆ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು.

[29] ಪೂರ್ವ ಪಶ್ಚಿಮ ಉತ್ತರ ದಕ್ಷಿಣಗಳಿಂದ ಜನರು ಬಂದು, ದೇವರ ರಾಜ್ಯದಲ್ಲಿ ಹಬ್ಬದ ಔತಣಕ್ಕೆ ಕುಳಿತುಕೊಳ್ಳುವರು.

[30] ಆಗ ಕಡೆಯವರು ಮೊದಲನೆಯವರಾಗುವರು, ಮೊದಲನೆಯವರು ಕಡೆಯವರಾಗುವರು,” ಎಂದು ಹೇಳಿದರು.

[31] ಅದೇ ಸಮಯದಲ್ಲಿ ಫರಿಸಾಯರಲ್ಲಿ ಕೆಲವರು ಯೇಸುವಿನ ಬಳಿಗೆ ಬಂದು, “ನೀವು ಇಲ್ಲಿಂದ ಹೊರಟು ಹೋಗಿರಿ. ಹೆರೋದನು ನಿಮ್ಮನ್ನು ಕೊಲ್ಲಬೇಕೆಂದಿರುವನು,” ಎಂದು ಅವರಿಗೆ ಹೇಳಿದರು.

[32] ಅದಕ್ಕೆ ಯೇಸು ಅವರಿಗೆ, “ಇಗೋ, ‘ನಾನು ಈ ದಿವಸ ಮತ್ತು ನಾಳೆ ದೆವ್ವಗಳನ್ನು ಓಡಿಸುತ್ತೇನೆ ಸ್ವಸ್ಥಮಾಡುತ್ತೇನೆ, ಮೂರನೆಯ ದಿನದಲ್ಲಿ ನಾನು ಸಿದ್ಧಿಗೆ ಬರುತ್ತೇನೆ,’ ಎಂದು ನೀವು ಹೋಗಿ ಆ ನರಿಗೆ ಹೇಳಿರಿ.

[33] ಆದರೂ ಈ ದಿವಸ ಮತ್ತು ನಾಳೆ ಮತ್ತು ನಾಡಿದ್ದು ನಾನು ಪ್ರಯಾಣ ಮಾಡಲೇಬೇಕು. ಏಕೆಂದರೆ ಒಬ್ಬ ಪ್ರವಾದಿಯು ಯೆರೂಸಲೇಮಿನ ಹೊರಗೆ ಕೊಲೆಗೀಡಾಗಬಾರದು!

[34] “ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳನ್ನು ಕೊಲ್ಲುವವಳೇ, ನಿನ್ನ ಬಳಿಗೆ ಕಳುಹಿಸಿದವರನ್ನು ಕಲ್ಲೆಸೆಯುವವಳೇ, ಕೋಳಿಯು ತನ್ನ ಮರಿಗಳನ್ನು ತನ್ನ ರೆಕ್ಕೆಗಳ ಕೆಳಗೆ ಕೂಡಿಸುವಂತೆ ನಾನು ನಿನ್ನ ಮಕ್ಕಳನ್ನು ಕೂಡಿಸುವುದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು. ಆದರೆ ನಿನಗೆ ಮನಸ್ಸಿಲ್ಲದೆ ಹೋಯಿತು.

[35] ನೋಡಿರಿ, ನಿಮ್ಮ ದೇವಾಲಯವು ನಿಮಗೆ ಬರಿದಾಗಿ ಹಾಳುಬೀಳುವುದು. ಏಕೆಂದರೆ, ‘ಕರ್ತದೇವರ ಹೆಸರಿನಲ್ಲಿ ಬರುವವರು ಧನ್ಯರು,’ ಎಂದು ನೀವು ಹೇಳುವ ಸಮಯವು ಬರುವ ತನಕ ನೀವು ನನ್ನನ್ನು ಕಾಣುವುದೇ ಇಲ್ಲ, ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು.

ಲೂಕ — Chapters