Skip to content
Opens in a new window
Listen to this chapter • 10:53

[1] ಯೇಸು ಒಂದು ಸ್ಥಳದಲ್ಲಿ ಪ್ರಾರ್ಥನೆಮಾಡಿ ಮುಗಿಸಿದ ಮೇಲೆ, ಅವರ ಶಿಷ್ಯರಲ್ಲಿ ಒಬ್ಬನು ಅವರಿಗೆ, “ಕರ್ತದೇವರೇ, ಯೋಹಾನನು ತನ್ನ ಶಿಷ್ಯರಿಗೆ ಕಲಿಸಿದ ಹಾಗೆಯೇ ನಮಗೂ ಪ್ರಾರ್ಥನೆಮಾಡುವುದಕ್ಕೆ ಕಲಿಸಿರಿ,” ಎಂದು ಕೇಳಿದನು.

[2] ಯೇಸು ಅವರಿಗೆ, “ನೀವು ಪ್ರಾರ್ಥನೆ ಮಾಡುವಾಗ ಈ ರೀತಿಯಾಗಿ ಪ್ರಾರ್ಥಿಸಿರಿ, “ಪರಲೋಕದಲ್ಲಿರುವ ನಮ್ಮ ತಂದೆಯೇ, ನಿಮ್ಮ ನಾಮವು ಪರಿಶುದ್ಧವೆಂದು ಎಣಿಕೆಯಾಗಿರಲಿ, ನಿಮ್ಮ ರಾಜ್ಯವು ಬರಲಿ. ನಿಮ್ಮ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.

[3] ನಮ್ಮ ಅನುದಿನದ ಆಹಾರವನ್ನು ನಮಗೆ ಪ್ರತಿದಿನವೂ ದಯಪಾಲಿಸಿರಿ.

[4] ನಮಗೆ ಪಾಪಮಾಡಿದವರನ್ನು, ನಾವು ಕ್ಷಮಿಸಿದಂತೆಯೇ ನಮ್ಮ ಪಾಪಗಳನ್ನು ಕ್ಷಮಿಸಿರಿ. ನಮ್ಮನ್ನು ಶೋಧನೆಯೊಳಗೆ ಸೇರಿಸದೆ, ಕೇಡಿನಿಂದ ನಮ್ಮನ್ನು ತಪ್ಪಿಸಿ.”

[5] ಯೇಸು ಅವರಿಗೆ, “ನಿಮ್ಮಲ್ಲಿ ಯಾವನಿಗಾದರೂ ಒಬ್ಬ ಸ್ನೇಹಿತನಿರಲಾಗಿ, ಮಧ್ಯರಾತ್ರಿಯಲ್ಲಿ ಅವನ ಬಳಿಗೆ ಹೋಗಿ ಅವನಿಗೆ, ‘ಸ್ನೇಹಿತನೇ, ಮೂರು ರೊಟ್ಟಿಗಳನ್ನು ನನಗೆ ಸಾಲವಾಗಿ ಕೊಡು;

[6] ಏಕೆಂದರೆ ನನ್ನ ಒಬ್ಬ ಸ್ನೇಹಿತನು ಪ್ರಯಾಣಮಾಡಿ ನನ್ನ ಬಳಿಗೆ ಬಂದಿದ್ದಾನೆ, ಅವನಿಗೆ ಬಡಿಸುವುದಕ್ಕೆ ನನ್ನಲ್ಲಿ ಏನೂ ಇಲ್ಲ,’ ಎಂದು ಕೇಳಲು

[7] ಅವನು ಒಳಗಿನಿಂದಲೇ ಇವನಿಗೆ ಉತ್ತರವಾಗಿ, ‘ನನ್ನನ್ನು ತೊಂದರೆಪಡಿಸಬೇಡ. ಬಾಗಿಲು ಈಗ ಮುಚ್ಚಿದೆ, ಹಾಸಿಗೆಯಲ್ಲಿ ನನ್ನ ಮಕ್ಕಳು ನನ್ನ ಜೊತೆ ಮಲಗಿದ್ದಾರೆ. ನಾನೆದ್ದು ಕೊಡಲಾರೆನು,’ ಎಂದು ಹೇಳುವನು.

[8] ಆದರೆ ನಾನು ನಿಮಗೆ ಹೇಳುವುದೇನೆಂದರೆ, ಅವನು ಸ್ನೇಹಿತನಾಗಿರುವುದರಿಂದ ಎದ್ದು ಇವನಿಗೆ ಕೊಡದೆಹೋದರೂ ಮೇಲಿಂದ ಮೇಲೆ ನಾಚಿಕೆಪಡದೆ ಬೇಡುವುದರಿಂದ ಎದ್ದು ಇವನಿಗೆ ಬೇಕಾದಷ್ಟು ಕೊಡುವನು.

[9] “ಕೇಳಿಕೊಳ್ಳಿರಿ ನಿಮಗೆ ಕೊಡಲಾಗುವುದು; ಹುಡುಕಿರಿ ನಿಮಗೆ ಸಿಗುವುದು; ತಟ್ಟಿರಿ ನಿಮಗೆ ಬಾಗಿಲು ತೆರೆಯಲಾಗುವುದು.

[10] ಬೇಡಿಕೊಳ್ಳುವ ಪ್ರತಿಯೊಬ್ಬರು ಪಡೆದುಕೊಳ್ಳುವರು; ಹುಡುಕುವವರಿಗೆ ಸಿಗುವುದು; ತಟ್ಟುವವರಿಗೆ ಬಾಗಿಲು ತೆರೆಯಲಾಗುವುದು.

[11] “ನಿಮ್ಮಲ್ಲಿ ತಂದೆಯಾಗಿರುವಾತನು, ತನ್ನ ಮಗನು ರೊಟ್ಟಿಯನ್ನು ಕೇಳಿದರೆ ಮಗನಿಗೆ ಕಲ್ಲನ್ನು ಕೊಡುವನೇ, ಮೀನನ್ನು ಕೇಳಿದರೆ, ಮೀನಿಗೆ ಬದಲಾಗಿ ಹಾವನ್ನು ಕೊಡುವನೇ?

[12] ಇಲ್ಲವೆ ಮೊಟ್ಟೆಯನ್ನು ಕೇಳಿದರೆ, ಅವನಿಗೆ ಚೇಳನ್ನು ಕೊಡುವನೇ?

[13] ಹಾಗಾದರೆ ಕೆಟ್ಟವರಾದ ನೀವೇ ನಿಮ್ಮ ಮಕ್ಕಳಿಗೆ ಒಳ್ಳೆಯವುಗಳನ್ನು ಕೊಡಬಲ್ಲವರಾದರೆ, ಪರಲೋಕದಲ್ಲಿರುವ ನಿಮ್ಮ ತಂದೆಯು ಎಷ್ಟೋ ಹೆಚ್ಚಾಗಿ ತಮ್ಮನ್ನು ಬೇಡಿಕೊಳ್ಳುವವರಿಗೆ ಪವಿತ್ರಾತ್ಮರನ್ನು ದಯಪಾಲಿಸುವರಲ್ಲವೇ!” ಎಂದು ನಾನು ನಿಮಗೆ ಹೇಳುತ್ತೇನೆ ಎಂದರು.

[14] ಯೇಸು ಒಂದು ಮೂಕದೆವ್ವವನ್ನು ಹೊರಗೆ ಓಡಿಸುತ್ತಿದ್ದರು. ಆ ದೆವ್ವವು ಹೊರಟುಹೋದ ಮೇಲೆ, ಆ ಮೂಕನು ಮಾತನಾಡಿದನು. ಅದಕ್ಕೆ ಜನರು ಆಶ್ಚರ್ಯಪಟ್ಟರು.

[15] ಆದರೆ ಅವರಲ್ಲಿ ಕೆಲವರು, “ದೆವ್ವಗಳ ಅಧಿಪತಿಯಾದ ಬೆಲ್ಜೆಬೂಲನಿಂದ ಈತನು ದೆವ್ವಗಳನ್ನು ಓಡಿಸುತ್ತಾನೆ,” ಎಂದರು.

[16] ಇನ್ನು ಕೆಲವರು ಯೇಸುವನ್ನು ಪರೀಕ್ಷಿಸುವವರಾಗಿ ಪರಲೋಕದಿಂದ ಒಂದು ಸೂಚಕಕಾರ್ಯವನ್ನು ತೋರಿಸಬೇಕೆಂದು ಕೇಳಿದರು.

[17] ಆದರೆ ಯೇಸು ಅವರ ಆಲೋಚನೆಗಳನ್ನು ತಿಳಿದು: “ತನಗೆ ತಾನೇ ವಿರೋಧವಾಗಿ ವಿಭಾಗಗೊಂಡರೆ ಪ್ರತಿಯೊಂದು ರಾಜ್ಯವು ನಾಶವಾಗುವುದು, ಒಂದು ಮನೆಯು ತನಗೆ ತಾನೇ ವಿರೋಧವಾಗಿ ವಿಭಾಗವಾದರೆ, ಅದು ಬಿದ್ದುಹೋಗುವುದು.

[18] ಸೈತಾನನು ಸಹ ತನಗೆ ತಾನೇ ವಿರೋಧವಾಗಿ ತನ್ನಲ್ಲಿ ವಿಭಾಗವಾದರೆ, ಅವನ ರಾಜ್ಯವು ನಿಲ್ಲುವುದು ಹೇಗೆ? ಏಕೆಂದರೆ ನಾನು ಬೆಲ್ಜೆಬೂಲನಿಂದ ದೆವ್ವಗಳನ್ನು ಓಡಿಸುತ್ತೇನೆಂದು ನೀವು ಹೇಳುತ್ತೀರಲ್ಲಾ.

[19] ನಾನು ಬೆಲ್ಜೆಬೂಲನಿಂದ ದೆವ್ವಗಳನ್ನು ಓಡಿಸುವುದಾದರೆ, ನಿಮ್ಮ ಪುತ್ರರು ಯಾರಿಂದ ಅವುಗಳನ್ನು ಓಡಿಸುತ್ತಾರೆ? ಆದ್ದರಿಂದ, ನಿಮ್ಮವರೇ ನಿಮಗೆ ನ್ಯಾಯಾಧಿಪತಿಗಳಾಗಿರುವರು.

[20] ನಾನು ದೇವರ ಬಲದಿಂದಲೇ ದೆವ್ವಗಳನ್ನು ಓಡಿಸುವುದಾದರೆ, ದೇವರ ರಾಜ್ಯವು ನಿಸ್ಸಂದೇಹವಾಗಿ ನಿಮ್ಮ ಬಳಿಗೆ ಬಂದಿದೆಯಲ್ಲಾ.

[21] “ಆಯುಧಗಳನ್ನು ಧರಿಸಿಕೊಂಡು, ಬಲಿಷ್ಠನಾದವನೊಬ್ಬನು ತನ್ನ ಮನೆಯನ್ನು ಕಾಯುವುದಾದರೆ ಅವನ ಸೊತ್ತು ಸುರಕ್ಷಿತವಾಗಿರುವುದು.

[22] ಆದರೆ ಅವನಿಗಿಂತ ಬಲಿಷ್ಠನು ಅವನ ಮೇಲೆ ಬಂದು ಅವನನ್ನು ಜಯಿಸಿ, ಅವನು ಭರವಸೆಯಿಟ್ಟಿದ್ದ ಆಯುಧಗಳನ್ನು ಅವನಿಂದ ತೆಗೆದುಕೊಂಡು ತನ್ನ ಸುಲಿಗೆಯನ್ನೆಲ್ಲಾ ಹಂಚುವನು.

[23] “ನನ್ನ ಪರವಾಗಿ ಇರದವನು ನನಗೆ ವಿರೋಧಿಯಾಗಿದ್ದಾನೆ, ನನ್ನೊಡನೆ ಶೇಖರಿಸದವನು ಚದರಿಸುತ್ತಾನೆ.

[24] “ಅಶುದ್ಧಾತ್ಮವು ಒಬ್ಬ ಮನುಷ್ಯನಿಂದ ಹೊರಗೆ ಹೋದ ಮೇಲೆ, ನೀರಿಲ್ಲದ ಸ್ಥಳಗಳಲ್ಲಿ ವಿಶ್ರಾಂತಿಗಾಗಿ ಹುಡುಕಾಡಿದರೂ ಅದನ್ನು ಕಂಡುಕೊಳ್ಳದೆ ಅದು, ‘ನಾನು ಹೊರಟು ಬಂದ ನನ್ನ ಮನೆಗೆ ಹಿಂದಿರುಗುವೆನು,’ ಎಂದು ಹೇಳಿಕೊಂಡು ಬಂದು,

[25] ಅದು ಬಂದು ಆ ಮನೆಯು ಗುಡಿಸಿ ಅಲಂಕರಿಸಿರುವುದನ್ನು ಕಾಣುತ್ತದೆ.

[26] ಆ ಅಶುದ್ಧಾತ್ಮವು ಹೋಗಿ ತನಗಿಂತಲೂ ಕೆಟ್ಟವುಗಳಾದ ಬೇರೆ ಏಳು ಅಶುದ್ಧಾತ್ಮಗಳನ್ನು ತನ್ನೊಂದಿಗೆ ಕರೆದುಕೊಂಡು ಅವನ ಒಳಗೆ ಸೇರಿ ಅಲ್ಲಿ ವಾಸಮಾಡುತ್ತವೆ. ಹೀಗೆ ಆ ಮನುಷ್ಯನ ಕಡೆಯ ಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗಿರುವುದು,” ಎಂದರು.

[27] ಯೇಸು ಈ ಸಂಗತಿಗಳನ್ನು ಹೇಳುತ್ತಿದ್ದಾಗ, ಆ ಗುಂಪಿನಲ್ಲಿದ್ದ ಒಬ್ಬ ಸ್ತ್ರೀಯು ತನ್ನ ಸ್ವರವನ್ನೆತ್ತಿ ಅವರಿಗೆ, “ನಿಮ್ಮನ್ನು ಗರ್ಭದಲ್ಲಿ ಹೊತ್ತು, ನಿಮಗೆ ಹಾಲುಣಿಸಿದ ತಾಯಿ ಧನ್ಯಳು,” ಎಂದು ಹೇಳಿದಳು.

[28] ಅದಕ್ಕೆ ಯೇಸು, “ಅದಕ್ಕಿಂತಲೂ ದೇವರ ವಾಕ್ಯವನ್ನು ಕೇಳಿ, ಅದನ್ನು ಅನುಸರಿಸುವವರು ಹೆಚ್ಚು ಭಾಗ್ಯವಂತರು,” ಎಂದರು.

[29] ಜನರು ಗುಂಪುಗುಂಪಾಗಿ ಕೂಡಿಬಂದಿದ್ದಾಗ, ಯೇಸು, “ಇದು ದುಷ್ಟ ಸಂತತಿಯು. ಇದು ಸೂಚಕಕಾರ್ಯವನ್ನು ಹುಡುಕುತ್ತದೆ, ಪ್ರವಾದಿ ಯೋನನಲ್ಲಿ ಆದ ಸೂಚಕಕಾರ್ಯವೇ ಹೊರತು ಬೇರೆ ಯಾವ ಸೂಚಕಕಾರ್ಯವೂ ಇದಕ್ಕೆ ದೊರಕದು.

[30] ಏಕೆಂದರೆ ಯೋನನು ನಿನೆವೆ ಪಟ್ಟಣದವರಿಗೆ ಸೂಚನೆಯಾಗಿದ್ದಂತೆಯೇ, ಮನುಷ್ಯಪುತ್ರನಾದ ನಾನೇ ಈ ಸಂತತಿಗೆ ಸೂಚನೆಯಾಗಿರುವೆನು.

[31] ನ್ಯಾಯತೀರ್ಪಿನಲ್ಲಿ ದಕ್ಷಿಣದ ರಾಣಿಯು ಈ ಸಂತತಿಗೆ ಎದುರಾಗಿ ಎದ್ದು ಇವರನ್ನು ಅಪರಾಧಿಗಳೆಂದು ತೀರ್ಪುಮಾಡುವಳು. ಏಕೆಂದರೆ ಆಕೆಯು ಸೊಲೊಮೋನನ ಜ್ಞಾನವನ್ನು ಕೇಳುವುದಕ್ಕಾಗಿ ಭೂಮಿಯ ಕಟ್ಟಕಡೆಯಿಂದ ಬಂದಳು. ಇಗೋ, ಇಲ್ಲಿ ಸೊಲೊಮೋನನಿಗಿಂತಲೂ ತುಂಬಾ ದೊಡ್ಡವನು ಇಲ್ಲಿದ್ದಾನೆ.

[32] ನಿನೆವೆ ಪಟ್ಟಣದವರು ನ್ಯಾಯತೀರ್ಪಿನಲ್ಲಿ ಈ ಸಂತತಿಗೆ ಎದುರಾಗಿ ಎದ್ದು ಇದನ್ನು ಅಪರಾಧ ಎಂದು ತೀರ್ಪುಮಾಡುವರು, ಏಕೆಂದರೆ ಯೋನನು ಸಾರಿದ್ದನ್ನು ಕೇಳಿ ಅವರು ದೇವರ ಕಡೆಗೆ ತಿರುಗಿಕೊಂಡರು; ಇಗೋ, ಇಲ್ಲಿ ಯೋನನಿಗಿಂತಲೂ ತುಂಬಾ ದೊಡ್ಡವನು ಇದ್ದಾನೆ,” ಎಂದು ಹೇಳಿದರು.

[33] “ಯಾರೂ ದೀಪವನ್ನು ಹಚ್ಚಿ ಮರೆಯಾದ ಸ್ಥಳದಲ್ಲಾಗಲಿ ಬಟ್ಟಲ ಕೆಳಗಾಗಲಿ ಇಡುವುದಿಲ್ಲ. ಮನೆಯೊಳಕ್ಕೆ ಬರುವವರಿಗೆ, ಬೆಳಕು ಕಾಣಿಸುವಂತೆ ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರಷ್ಟೆ.

[34] ನಿನ್ನ ಕಣ್ಣು ದೇಹಕ್ಕೆ ದೀಪವಾಗಿದೆ. ಆದ್ದರಿಂದ ನಿನ್ನ ಕಣ್ಣು ಒಳ್ಳೆಯದಾಗಿದ್ದರೆ, ನಿನ್ನ ದೇಹವೆಲ್ಲಾ ಬೆಳಕಾಗಿರುವುದು. ಕಣ್ಣು ಕೆಟ್ಟದ್ದಾಗಿದ್ದರೆ, ನಿನ್ನ ದೇಹವು ಸಹ ಕತ್ತಲೆಯಾಗಿರುವುದು.

[35] ಆದ್ದರಿಂದ, ನಿನ್ನಲ್ಲಿರುವ ಬೆಳಕು ಕತ್ತಲೆಯಾಗದಂತೆ ನೋಡಿಕೋ.

[36] ದೇಹದ ಯಾವುದೊಂದು ಭಾಗದಲ್ಲಿಯೂ ಕತ್ತಲೆಯಾಗಿರದೆ, ನಿನ್ನ ದೇಹವೆಲ್ಲವೂ ಪೂರ್ಣವಾಗಿ ಬೆಳಕಾಗಿರುವುದಾದರೆ, ಪ್ರಕಾಶಮಾನವಾದ ದೀಪವು ನಿನಗೆ ಬೆಳಕುಕೊಡುವಂತೆ ಸಮಸ್ತವೂ ಬೆಳಕಾಗಿರುವುದು,” ಎಂದು ಹೇಳಿದರು.

[37] ಯೇಸು ಮಾತನಾಡುವುದನ್ನು ಮುಗಿಸಿದಾಗ, ಒಬ್ಬ ಫರಿಸಾಯನು ತನ್ನೊಂದಿಗೆ ಊಟ ಮಾಡಬೇಕೆಂದು ಯೇಸುವನ್ನು ಬೇಡಿಕೊಂಡನು, ಆಗ ಅವರು ಒಳಗೆ ಹೋಗಿ ಊಟಕ್ಕೆ ಕೂತುಕೊಂಡರು.

[38] ಆದರೆ ಊಟಕ್ಕೆ ಮೊದಲು ಯೇಸು ಕೈತೊಳೆಯದೆ ಇರುವುದನ್ನು ಫರಿಸಾಯನು ಕಂಡು ಆಶ್ಚರ್ಯಪಟ್ಟನು.

[39] ಆಗ ಕರ್ತದೇವರು ಅವನಿಗೆ, “ಫರಿಸಾಯರಾದ ನೀವು, ಪಾತ್ರೆಯ ಮತ್ತು ತಟ್ಟೆಯ ಹೊರಭಾಗವನ್ನು ಶುಚಿಮಾಡುತ್ತೀರಿ, ಆದರೆ ನಿಮ್ಮ ಒಳಭಾಗವು ಸುಲಿಗೆಯಿಂದಲೂ ಕೆಟ್ಟತನದಿಂದಲೂ ತುಂಬಿರುತ್ತದೆ.

[40] ಮೂರ್ಖರೇ! ಹೊರಭಾಗವನ್ನು ಮಾಡಿದಾತನು ಒಳಭಾಗವನ್ನು ಸಹ ಮಾಡಿದನಲ್ಲವೇ?

[41] ನೀವು ನಿಮ್ಮೊಳಗೆ ಅಂಟಿಕೊಂಡಿರುವವುಗಳನ್ನು ಬಡವರಿಗೆ ದಾನ ಮಾಡಿಬಿಡಿರಿ, ಆಗ ನಿಮಗೆ ಎಲ್ಲವೂ ಶುದ್ಧವಾಗಿರುವುವು.

[42] “ಫರಿಸಾಯರೇ, ನಿಮಗೆ ಕಷ್ಟ, ಏಕೆಂದರೆ ನೀವು ಪುದೀನ, ಸದಾಪು ಮತ್ತು ಸಕಲ ವಿಧವಾದ ಸೊಪ್ಪುಗಳಲ್ಲಿ ದಶಮಭಾಗವನ್ನು ಕೊಟ್ಟು, ನ್ಯಾಯವನ್ನೂ ದೇವರ ಪ್ರೀತಿಯನ್ನೂ ಲಕ್ಷಿಸದೆ ಹೋಗುತ್ತೀರಿ. ಅವುಗಳನ್ನು ಮಾಡಿದ ನೀವು ಇವುಗಳನ್ನೂ ಅವಶ್ಯವಾಗಿ ಮಾಡಬೇಕಾಗಿತ್ತು.

[43] “ಫರಿಸಾಯರೇ, ನಿಮಗೆ ಕಷ್ಟ, ಏಕೆಂದರೆ ನೀವು ಸಭಾಮಂದಿರಗಳಲ್ಲಿ ಅತ್ಯುನ್ನತ ಆಸನಗಳನ್ನೂ ಮಾರುಕಟ್ಟೆ ಬೀದಿಗಳಲ್ಲಿ ವಂದನೆಗಳನ್ನೂ ಇಷ್ಟಪಡುತ್ತೀರಿ.

[44] “ನಿಮಗೆ ಕಷ್ಟ, ಏಕೆಂದರೆ ನೀವು ನೆಲಸಮವಾದ ಸಮಾಧಿಗಳಂತೆ ಇದ್ದೀರಿ, ಅವುಗಳ ಮೇಲೆ ನಡೆದಾಡುವ ಮನುಷ್ಯರು ಅವುಗಳನ್ನು ಅರಿಯರು,” ಎಂದು ಹೇಳಿದರು.

[45] ನಿಯಮ ಬೋಧಕ ಒಬ್ಬನು ಯೇಸುವಿಗೆ, “ಬೋಧಕರೇ, ನೀವು ಇವುಗಳನ್ನು ಹೇಳುವುದರಿಂದ ನಮ್ಮನ್ನು ಸಹ ಅವಮಾನಪಡಿಸುತ್ತೀರಿ,” ಎಂದನು.

[46] ಅದಕ್ಕೆ ಯೇಸು, “ನಿಯಮ ಪಂಡಿತರೇ, ನಿಮಗೂ ಕಷ್ಟ, ಏಕೆಂದರೆ ಹೊರಲಾಗದ ಹೊರೆಗಳನ್ನು ಮನುಷ್ಯರ ಮೇಲೆ ಹೊರಿಸುತ್ತೀರಿ, ನೀವಾದರೋ ಈ ಹೊರೆಗಳನ್ನು ನಿಮ್ಮ ಬೆರಳುಗಳಲ್ಲಿ ಒಂದರಿಂದಾದರೂ ಮುಟ್ಟುವುದಿಲ್ಲ.

[47] “ನಿಮಗೆ ಕಷ್ಟ, ಏಕೆಂದರೆ ನಿಮ್ಮ ಪಿತೃಗಳು ಪ್ರವಾದಿಗಳನ್ನು ಕೊಂದರು, ನೀವು ಅವರ ಸಮಾಧಿಗಳನ್ನು ಕಟ್ಟುತ್ತೀರಿ.

[48] ಇದರಿಂದ ನಿಜವಾಗಿಯೂ ನಿಮ್ಮ ಪಿತೃಗಳ ಕೃತ್ಯಗಳನ್ನು ನೀವು ಒಪ್ಪಿಕೊಳ್ಳುವಂತೆ ಸಾಕ್ಷಿಕರಿಸುತ್ತೀರಿ; ಏಕೆಂದರೆ ಅವರು ನಿಜವಾಗಿಯೂ ಪ್ರವಾದಿಗಳನ್ನು ಕೊಂದರು, ನೀವೋ ಅವರ ಸಮಾಧಿಗಳನ್ನು ಕಟ್ಟುತ್ತೀರಿ.

[49] ಈ ಕಾರಣದಿಂದ, ದೇವರ ಜ್ಞಾನವು ಸಹ ಹೇಳಿರುವುದೇನೆಂದರೆ, ‘ನಾನು ಅವರ ಬಳಿಗೆ ಪ್ರವಾದಿಗಳನ್ನೂ ಅಪೊಸ್ತಲರನ್ನೂ ಕಳುಹಿಸುವೆನು, ಅವರಲ್ಲಿ ಕೆಲವರನ್ನು ಅವರು ಕೊಲ್ಲುವರು ಮತ್ತು ಹಿಂಸೆಪಡಿಸುವರು.’

[50] ಹೀಗೆ ಲೋಕಾದಿಯಿಂದ ಸುರಿಸಲಾದ ಎಲ್ಲಾ ಪ್ರವಾದಿಗಳ ರಕ್ತಕ್ಕೆ ಈ ಸಂತತಿಯು ಲೆಕ್ಕ ಕೊಡಬೇಕಾಗಿರುವುದು,

[51] ಹೇಬೆಲನ ರಕ್ತ ಮೊದಲುಗೊಂಡು ಬಲಿಪೀಠಕ್ಕೂ ದೇವಾಲಯಕ್ಕೂ ಮಧ್ಯದಲ್ಲಿ ಹತವಾದ ಜಕರೀಯನ ರಕ್ತದವರೆಗೂ ಈ ಸಂತತಿಯು ಉತ್ತರಕೊಡಬೇಕು. ಹೌದು, ಈ ಸಂತತಿಯವರೇ ಇದಕ್ಕೆಲ್ಲಾ ಉತ್ತರಕೊಡಬೇಕೆಂದು, ನಾನು ನಿಮಗೆ ನಿಜವಾಗಿ ಹೇಳುತ್ತೇನೆ.

[52] “ನಿಯಮ ಪಂಡಿತರೇ, ನಿಮಗೆ ಕಷ್ಟ, ಏಕೆಂದರೆ ನೀವು ಜ್ಞಾನದ ಬೀಗದ ಕೈಯನ್ನು ತೆಗೆದುಕೊಂಡಿದ್ದೀರಿ. ನೀವಂತೂ ಒಳಗೆ ಪ್ರವೇಶಿಸಲಿಲ್ಲ; ಒಳಗೆ ಪ್ರವೇಶಿಸುತ್ತಿರುವವರಿಗೂ ನೀವು ತಡೆಗಟ್ಟುತ್ತೀರಿ,” ಎಂದು ಹೇಳಿದರು.

[53] ಬಳಿಕ ಯೇಸು ಅಲ್ಲಿಂದ ಹೊರಗೆ ಬಂದಾಗ, ನಿಯಮ ಬೋಧಕರೂ ಫರಿಸಾಯರೂ ಕೋಪಾವೇಶವುಳ್ಳವರಾಗಿ, ಯೇಸು ಇನ್ನೂ ಹೆಚ್ಚು ವಿಷಯಗಳನ್ನು ಮಾತನಾಡುವಂತೆ ಅವರನ್ನು ಕೆಣಕಿದರು,

[54] ಏಕೆಂದರೆ ಯೇಸುವಿನ ಮಾತಿನಲ್ಲಿ ಏನನ್ನಾದರೂ ಕಂಡುಹಿಡಿದು ಅವರ ಮೇಲೆ ತಪ್ಪು ಹೊರಿಸಬೇಕೆಂದು ಹೊಂಚಿನೋಡುತ್ತಿದ್ದರು.

ಲೂಕ — Chapters