Skip to content
Opens in a new window
Listen to this chapter • 7:18

[1] ಒಂದು ದಿನ ಯೇಸು ಗೆನೆಜರೇತ್ ಕೆರೆಯ ಬಳಿಯಲ್ಲಿ ನಿಂತುಕೊಂಡಿದ್ದಾಗ, ಜನರು ದೇವರ ವಾಕ್ಯವನ್ನು ಕೇಳುವುದಕ್ಕಾಗಿ ಅವರ ಸುತ್ತಲೂ ಗುಂಪಾಗಿ ಕೂಡಿದ್ದರು.

[2] ಯೇಸು ಕೆರೆಯ ಬಳಿಯಲ್ಲಿ ಎರಡು ದೋಣಿಗಳನ್ನು ಕಂಡರು. ಅಲ್ಲಿ ಬೆಸ್ತರು ಅವುಗಳಿಂದ ಹೊರಗೆ ಹೋಗಿ ತಮ್ಮ ಬಲೆಗಳನ್ನು ತೊಳೆಯುತ್ತಿದ್ದರು.

[3] ಅವುಗಳಲ್ಲಿ ಸೀಮೋನನ ದೋಣಿಯನ್ನು, ಯೇಸು ಹತ್ತಿ ಅದನ್ನು ದಡದಿಂದ ಸ್ವಲ್ಪ ದೂರ ನೂಕಬೇಕೆಂದು ಅವನನ್ನು ಕೇಳಿಕೊಂಡರು. ಆಮೇಲೆ ಯೇಸು ಕುಳಿತುಕೊಂಡು ದೋಣಿಯೊಳಗಿಂದಲೇ ಜನರಿಗೆ ಬೋಧಿಸಿದರು.

[4] ಅವರು ಮಾತನಾಡುವುದನ್ನು ಮುಗಿಸಿದ ಮೇಲೆ ಸೀಮೋನನಿಗೆ, “ಆಳವಾದ ಸ್ಥಳಕ್ಕೆ ದೋಣಿಯನ್ನು ನಡೆಸಿ, ಮೀನು ಹಿಡಿಯುವುದಕ್ಕೆ ನಿಮ್ಮ ಬಲೆಗಳನ್ನು ಬೀಸಿರಿ,” ಎಂದರು.

[5] ಅದಕ್ಕೆ ಉತ್ತರವಾಗಿ ಸೀಮೋನನು ಯೇಸುವಿಗೆ, “ಗುರುವೇ, ನಾವು ರಾತ್ರಿಯೆಲ್ಲಾ ಪ್ರಯಾಸಪಟ್ಟರೂ ಏನೂ ಸಿಕ್ಕಲಿಲ್ಲ. ಆದರೂ ನಿಮ್ಮ ಮಾತಿನಂತೆ ನಾನು ಬಲೆಯನ್ನು ಬೀಸುತ್ತೇನೆ,” ಎಂದು ಹೇಳಿದನು.

[6] ಅವರು ಅದರಂತೆ ಬಲೆ ಹಾಕಿದಾಗ, ಮೀನಿನ ದೊಡ್ಡ ರಾಶಿಯನ್ನು ಹಿಡಿದರು ಅವರ ಬಲೆಯು ಹರಿಯುವಂತಾಯಿತು.

[7] ಆಗ ಬೇರೆ ದೋಣಿಯಲ್ಲಿದ್ದ ತಮ್ಮ ಪಾಲುಗಾರರು ಬಂದು ತಮಗೆ ಸಹಾಯ ಮಾಡಬೇಕೆಂದು ಅವರು ಸನ್ನೆಮಾಡಿದರು. ಪಾಲುಗಾರರು ಬಂದು ಎರಡು ದೋಣಿಗಳನ್ನು ತುಂಬಿಸಲಾಗಿ ಅವು ಮುಳುಗಲಾರಂಭಿಸಿದವು.

[8] ಸೀಮೋನ್ ಪೇತ್ರನು ಇದನ್ನು ಕಂಡಾಗ, ಯೇಸುವಿನ ಮುಂದೆ ಮೊಣಕಾಲೂರಿ, “ಸ್ವಾಮಿ, ನನ್ನನ್ನು ಬಿಟ್ಟು ಹೋಗಿರಿ, ನಾನು ಪಾಪಿ,” ಎಂದನು.

[9] ಯಾಕಂದರೆ, ಅವರು ಹಿಡಿದ ಮೀನುಗಳ ರಾಶಿಯನ್ನು ಕಂಡು ಅವನೂ ಅವನ ಸಂಗಡ ಇದ್ದವರೂ ವಿಸ್ಮಯಗೊಂಡಿದ್ದರು.

[10] ಸೀಮೋನನ ಕೂಡ ಪಾಲುಗಾರರಾಗಿದ್ದ ಜೆಬೆದಾಯನ ಮಕ್ಕಳಾದ ಯಾಕೋಬ, ಯೋಹಾನರೂ ಹಾಗೆಯೇ ವಿಸ್ಮಯಗೊಂಡಿದ್ದರು. ಆಗ ಯೇಸು ಸೀಮೋನನಿಗೆ, “ಹೆದರಬೇಡ; ಇಂದಿನಿಂದ ನೀನು ದೇವರಿಗಾಗಿ ಮನುಷ್ಯರನ್ನೇ ಹಿಡಿಯುವವನಾಗಿರುವೆ,” ಎಂದರು.

[11] ಅವರು ತಮ್ಮ ದೋಣಿಗಳನ್ನು ದಡಕ್ಕೆ ತಂದು ಎಲ್ಲವನ್ನು ಬಿಟ್ಟು, ಯೇಸುವನ್ನೇ ಹಿಂಬಾಲಿಸಿದರು.

[12] ಯೇಸು ಒಂದು ಪಟ್ಟಣದಲ್ಲಿದ್ದಾಗ, ಮೈಯೆಲ್ಲಾ ಕುಷ್ಠರೋಗವಿದ್ದ ಒಬ್ಬ ಮನುಷ್ಯನು ಯೇಸುವನ್ನು ಕಂಡು ಅಡ್ಡಬಿದ್ದು ಅವರಿಗೆ, “ಸ್ವಾಮಿ, ನಿಮಗೆ ಮನಸ್ಸಿದ್ದರೆ, ನೀವು ನನ್ನನ್ನು ಶುದ್ಧಮಾಡಬಲ್ಲಿರಿ,” ಎಂದು ಅವರನ್ನು ಬೇಡಿಕೊಂಡನು.

[13] ಯೇಸು ತಮ್ಮ ಕೈಚಾಚಿ ಅವನನ್ನು ಮುಟ್ಟಿ ಅವನಿಗೆ, “ನನಗೆ ಮನಸ್ಸಿದೆ, ನೀನು ಶುದ್ಧನಾಗು!” ಎಂದು ಹೇಳಿದರು. ಕೂಡಲೇ ಆ ಕುಷ್ಠವು ಅವನನ್ನು ಬಿಟ್ಟುಹೋಯಿತು.

[14] ಆಗ ಯೇಸು ಅವನಿಗೆ, “ಇದನ್ನು ನೀನು ಯಾರಿಗೂ ಹೇಳಬೇಡ, ಆದರೆ ನೀನು ಗುಣಹೊಂದಿದ್ದಕ್ಕೆ ಜನರಿಗೆ ಸಾಕ್ಷಿಯಾಗಿರುವಂತೆ ಹೋಗಿ ಯಾಜಕನಿಗೆ ನಿನ್ನನ್ನು ತೋರಿಸಿಕೊಂಡು ನಿನ್ನ ಶುದ್ಧಾಚಾರಕ್ಕಾಗಿ ಮೋಶೆ ಅಪ್ಪಣೆ ಕೊಟ್ಟಂತೆ ಅರ್ಪಿಸು,” ಎಂದು ಆಜ್ಞಾಪಿಸಿದರು.

[15] ಆದರೂ ಯೇಸುವಿನ ವಿಷಯವು, ಇನ್ನೂ ಹೆಚ್ಚಾಗಿ ದೂರದವರೆಗೂ ಹರಡಿತು. ಅವರ ಉಪದೇಶವನ್ನು ಕೇಳುವುದಕ್ಕೂ ತಮ್ಮ ರೋಗಗಳನ್ನು ಅವರಿಂದ ವಾಸಿಮಾಡಿಸಿಕೊಳ್ಳುವುದಕ್ಕೂ ದೊಡ್ಡ ಸಮೂಹಗಳು ಕೂಡಿ ಬಂದವು.

[16] ಆದರೆ ಯೇಸು ತಮ್ಮನ್ನು ಪ್ರತ್ಯೇಕಿಸಿಕೊಂಡು ಎಂದಿನಂತೆ ಏಕಾಂತ ಸ್ಥಳಕ್ಕೆ ಹೋಗಿ ಪ್ರಾರ್ಥಿಸುತ್ತಿದ್ದರು.

[17] ಒಂದು ದಿನ ಯೇಸು ಬೋಧಿಸುತ್ತಿದ್ದಾಗ, ಗಲಿಲಾಯ ಯೂದಾಯ ಮತ್ತು ಯೆರೂಸಲೇಮಿನ ಪ್ರತಿಯೊಂದು ಊರಿನಿಂದ ಬಂದಿದ್ದ ಫರಿಸಾಯರೂ ನಿಯಮ ಬೋಧಕರೂ ಅಲ್ಲಿ ಕುಳಿತುಕೊಂಡಿದ್ದರು. ಯೇಸುವಿನಲ್ಲಿ ಸ್ವಸ್ಥಮಾಡುವುದಕ್ಕಾಗಿ ದೇವರ ಶಕ್ತಿಯು ಇತ್ತು.

[18] ಆಗ ಕೆಲವರು ಒಬ್ಬ ಪಾರ್ಶ್ವವಾಯು ರೋಗಿಯನ್ನು ಹಾಸಿಗೆಯಲ್ಲಿ ಹೊತ್ತುಕೊಂಡು ಬಂದು, ಒಳಗೆ ಯೇಸುವಿನ ಎದುರಿಗೆ ತರುವುದಕ್ಕೆ ಪ್ರಯತ್ನಿಸುತ್ತಿದ್ದರು.

[19] ಆದರೆ ಅಲ್ಲಿದ್ದ ಜನಸಮೂಹದವರ ನಿಮಿತ್ತ ಅವರು ಅವನನ್ನು ಒಳಗೆ ತರುವ ಯಾವ ವಿಧಾನವನ್ನೂ ಕಾಣದೆ, ಮನೆಯ ಮೇಲೆ ಹೋಗಿ ಹೆಂಚುಗಳನ್ನು ತೆಗೆದು ಅವನನ್ನು ಹಾಸಿಗೆಯೊಂದಿಗೆ ಯೇಸುವಿನ ಮುಂದೆ ಇಳಿಸಿದರು.

[20] ಯೇಸು ಅವರ ವಿಶ್ವಾಸವನ್ನು ಕಂಡು ಅವನಿಗೆ, “ಮಗನೇ, ನಿನ್ನ ಪಾಪಗಳು ಕ್ಷಮಿಸಲಾಗಿವೆ,” ಎಂದು ಹೇಳಿದರು.

[21] ಆಗ ಫರಿಸಾಯರೂ ನಿಯಮ ಬೋಧಕರೂ, “ದೇವದೂಷಣೆಯನ್ನು ಮಾಡುವುದಕ್ಕೆ ಈತನು ಯಾರು? ದೇವರೊಬ್ಬನೇ ಹೊರತು ಪಾಪಗಳನ್ನು ಕ್ಷಮಿಸುವವರು ಯಾರು?” ಎಂದು ತಮ್ಮಲ್ಲಿ ಮಾತನಾಡಲಾರಂಭಿಸಿದರು.

[22] ಯೇಸು ಅವರ ಆಲೋಚನೆಗಳನ್ನು ತಿಳಿದು, “ನೀವು ನಿಮ್ಮ ಮನಸ್ಸಿನಲ್ಲಿ ಅಂದುಕೊಳ್ಳುತ್ತಿರುವುದೇನು?

[23] ಯಾವುದು ಸುಲಭ? ‘ನಿನ್ನ ಪಾಪಗಳು ಕ್ಷಮಿಸಲಾಗಿವೆ,’ ಎನ್ನುವುದೋ ಅಥವಾ ‘ಎದ್ದು ನಡೆ,’ ಎನ್ನುವುದೋ?

[24] ಆದರೆ ಮನುಷ್ಯಪುತ್ರನಾದ ನನಗೆ ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸುವುದಕ್ಕೆ ಅಧಿಕಾರವುಂಟೆಂದು ನೀವು ತಿಳಿಯಬೇಕು,” ಎಂದು ಹೇಳಿ, ಆ ಪಾರ್ಶ್ವವಾಯು ರೋಗಿಗೆ, “ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು ಎಂದು ನಾನು ನಿನಗೆ ಹೇಳುತ್ತೇನೆ,” ಎಂದರು.

[25] ಕೂಡಲೇ ಅವನು ಅವರ ಮುಂದೆ ಎದ್ದು ತಾನು ಮಲಗಿದ್ದ ಹಾಸಿಗೆಯನ್ನು ಎತ್ತಿಕೊಂಡು, ದೇವರನ್ನು ಸ್ತುತಿಸುತ್ತಾ ತನ್ನ ಮನೆಗೆ ಹೊರಟುಹೋದನು.

[26] ಅಲ್ಲಿದ್ದವರೆಲ್ಲರೂ ವಿಸ್ಮಯಗೊಂಡು ದೇವರನ್ನು ಸ್ತುತಿಸಿದರು. ಅವರು ಭಯಭಕ್ತಿಯಿಂದ ಕೂಡಿದವರಾಗಿ, “ನಾವು ಈ ದಿನ ಅಪೂರ್ವವಾದ ಕಾರ್ಯಗಳನ್ನು ಕಂಡೆವು,” ಎಂದರು.

[27] ಇವುಗಳಾದ ಮೇಲೆ, ಯೇಸು ಹೊರಟುಹೋಗಿ ತೆರಿಗೆಯ ಕಛೇರಿಯಲ್ಲಿ ಕುಳಿತುಕೊಂಡಿದ್ದ ಲೇವಿ ಎಂಬ ಹೆಸರುಳ್ಳ ಒಬ್ಬ ಸುಂಕದವನನ್ನು ಕಂಡು ಅವನಿಗೆ, “ನನ್ನನ್ನು ಹಿಂಬಾಲಿಸು,” ಎಂದರು.

[28] ಲೇವಿ ಎಲ್ಲವನ್ನು ಬಿಟ್ಟು ಎದ್ದು ಯೇಸುವನ್ನು ಹಿಂಬಾಲಿಸಿದನು.

[29] ತರುವಾಯ ಲೇವಿಯು ತನ್ನ ಸ್ವಂತ ಮನೆಯಲ್ಲಿ ಯೇಸುವಿಗೆ ದೊಡ್ಡ ಔತಣವನ್ನು ಮಾಡಿಸಲು, ಬಹಳ ಜನ ಸುಂಕದವರು ಮತ್ತು ಇತರರು ಯೇಸುವಿನೊಂದಿಗೆ ಊಟಮಾಡುತ್ತಿದ್ದರು.

[30] ಆದರೆ ಫರಿಸಾಯರೂ ಅವರ ಗುಂಪಿಗೆ ಸೇರಿದ ನಿಯಮ ಬೋಧಕರೂ ಯೇಸುವಿನ ವಿರೋಧವಾಗಿ ಗೊಣಗಾಡುತ್ತಾ ಶಿಷ್ಯರಿಗೆ, “ನೀವು ಏಕೆ ಸುಂಕದವರ ಮತ್ತು ಪಾಪಿಗಳ ಸಂಗಡ ತಿಂದು ಕುಡಿಯುತ್ತೀರಿ?” ಎಂದು ಕೇಳಿದರು.

[31] ಅದಕ್ಕೆ ಯೇಸು, “ಆರೋಗ್ಯವಂತರಿಗೆ ವೈದ್ಯನು ಅವಶ್ಯವಿಲ್ಲ, ರೋಗಿಗಳಿಗೆ ವೈದ್ಯನು ಅವಶ್ಯ.

[32] ನಾನು ನೀತಿವಂತರನ್ನು ಕರೆಯಲು ಬರಲಿಲ್ಲ, ಪಾಪಿಗಳನ್ನೇ ದೇವರ ಕಡೆಗೆ ತಿರುಗಿಕೊಳ್ಳುವಂತೆ ಕರೆಯಲು ಬಂದೆನು,” ಎಂದರು.

[33] ಕೆಲವರು ಯೇಸುವಿಗೆ, “ಯೋಹಾನನ ಶಿಷ್ಯರು ಪದೇಪದೇ ಉಪವಾಸವಿದ್ದು ಪ್ರಾರ್ಥನೆಗಳನ್ನು ಮಾಡುತ್ತಾರೆ, ಅದರಂತೆಯೇ ಫರಿಸಾಯರ ಶಿಷ್ಯರೂ ಮಾಡುತ್ತಾರೆ, ಆದರೆ ನಿಮ್ಮ ಶಿಷ್ಯರು ಏಕೆ ತಿಂದು ಕುಡಿಯುತ್ತಾರೆ?” ಎಂದು ಕೇಳಿದರು.

[34] ಅದಕ್ಕೆ ಯೇಸು, “ಮದುಮಗನು ಮದುವೆ ಅತಿಥಿಗಳ ಸಂಗಡವಿರುವಾಗ ಅವರನ್ನು ಉಪವಾಸವಿರಿಸಲಾದೀತೆ?

[35] ಆದರೆ ಮದುಮಗನನ್ನು ಅವರಿಂದ ತೆಗೆದುಕೊಂಡು ಹೋಗುವ ದಿವಸಗಳು ಬರುವುವು; ಆಗ ಆ ದಿವಸಗಳಲ್ಲಿ ಅವರು ಉಪವಾಸ ಮಾಡುವರು,” ಎಂದು ಹೇಳಿದರು.

[36] ಯೇಸು ಅವರಿಗೆ ಒಂದು ಸಾಮ್ಯವನ್ನು ಹೇಳಿದರು: “ಹಳೆಯ ವಸ್ತ್ರಕ್ಕೆ ಹೊಸ ಬಟ್ಟೆಯ ತುಂಡನ್ನು ಹರಿದು ತೇಪೆ ಹಚ್ಚುವುದಿಲ್ಲ. ಹಚ್ಚಿದರೆ ಆ ಹೊಸದು ಹರಿದು ಹೋಗುವುದು. ಹೊಸದರಿಂದ ಕತ್ತರಿಸಿದ ತುಂಡು ಹಳೆಯದರೊಂದಿಗೆ ಹೊಂದಿಕೆಯಾಗುವುದಿಲ್ಲ.

[37] ಯಾರೂ ಹೊಸ ದ್ರಾಕ್ಷಾರಸವನ್ನು ಹಳೆಯ ಚರ್ಮದ ಚೀಲಗಳಲ್ಲಿ ತುಂಬಿಡುವುದಿಲ್ಲ. ತುಂಬಿ ಇಟ್ಟರೆ, ಚರ್ಮದ ಚೀಲಗಳು ಒಡೆದು, ದ್ರಾಕ್ಷಾರಸವು ಚೆಲ್ಲಿಹೋಗಿ ಚರ್ಮದ ಚೀಲಗಳು ಹಾಳಾಗುತ್ತವೆ.

[38] ಆದರೆ, ಹೊಸ ದ್ರಾಕ್ಷಾರಸವನ್ನು ಹೊಸ ಚರ್ಮದ ಚೀಲಗಳಲ್ಲಿ ಹಾಕಿಡಬೇಕು.

[39] ಯಾರೂ ಹಳೆಯ ದ್ರಾಕ್ಷಾರಸವನ್ನು ಕುಡಿದ ಮೇಲೆ ಹೊಸದನ್ನು ಅಪೇಕ್ಷಿಸುವುದಿಲ್ಲ, ಏಕೆಂದರೆ ಅವರು, ‘ಹಳೆಯದೇ ಉತ್ತಮವಾದದ್ದು,’ ಎನ್ನುವರು,” ಎಂದರು.

ಲೂಕ — Chapters