Skip to content
Opens in a new window
Listen to this chapter • 5:50

[1] ಅನೇಕ ಸುಂಕದವರೂ ಪಾಪಿಗಳೆನ್ನಿಸಿಕೊಂಡವರೂ ಯೇಸುವಿನ ಉಪದೇಶವನ್ನು ಕೇಳಲು ಅವರ ಸಮೀಪಕ್ಕೆ ಬಂದರು.

[2] ಫರಿಸಾಯರು ಮತ್ತು ನಿಯಮ ಬೋಧಕರು, “ಈತನು ಪಾಪಿಗಳನ್ನು ಸ್ವೀಕರಿಸಿ ಅವರೊಂದಿಗೆ ಊಟಮಾಡುತ್ತಾನೆ,” ಎಂದು ಗೊಣಗುಟ್ಟಿದರು.

[3] ಯೇಸು ಅವರಿಗೆ ಈ ಸಾಮ್ಯವನ್ನು ಹೇಳಿದರು:

[4] “ನಿಮ್ಮಲ್ಲಿ ಯಾವ ಮನುಷ್ಯನು ತನಗೆ ನೂರು ಕುರಿಗಳಿರಲಾಗಿ ಅವುಗಳಲ್ಲಿ ಒಂದನ್ನು ಕಳೆದುಕೊಂಡರೆ, ಅವನು ತೊಂಬತ್ತೊಂಬತ್ತು ಕುರಿಗಳನ್ನು ಹುಲ್ಲುಗಾವಲಿನಲ್ಲಿ ಬಿಟ್ಟು ಕಳೆದುಹೋದ ಆ ಒಂದು ಕುರಿ ಸಿಕ್ಕುವ ತನಕ ಅದನ್ನು ಹುಡುಕಿಕೊಂಡು ಹೋಗದಿರುವನೇ?

[5] ಅದು ಸಿಕ್ಕಿದ ಮೇಲೆ ಸಂತೋಷಪಡುತ್ತಾ ಅದನ್ನು ತನ್ನ ಹೆಗಲ ಮೇಲೆ ಎತ್ತಿಕೊಂಡು,

[6] ಅವನು ಮನೆಗೆ ಬಂದು, ತನ್ನ ಸ್ನೇಹಿತರನ್ನೂ ನೆರೆಯವರನ್ನೂ ಒಟ್ಟಿಗೆ ಕರೆದು ಅವರಿಗೆ, ‘ನನ್ನ ಸಂಗಡ ಸಂತೋಷಪಡಿರಿ; ಕಳೆದುಹೋದ ಕುರಿ ನನಗೆ ಸಿಕ್ಕಿತು ಎನ್ನುವನು.’

[7] ಅದರಂತೆಯೇ, ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಲು ಅವಶ್ಯವಿಲ್ಲದ ತೊಂಬತ್ತೊಂಬತ್ತು ನೀತಿವಂತರಿಗಿಂತ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗುವ ಒಬ್ಬ ಪಾಪಿಯ ವಿಷಯವಾಗಿ ಪರಲೋಕದಲ್ಲಿ ಬಹಳ ಸಂತೋಷ ಉಂಟಾಗುವುದು ಎಂದು ನಾನು ನಿಮಗೆ ಹೇಳುತ್ತೇನೆ.

[8] “ಒಬ್ಬ ಸ್ತ್ರೀಯು ತನ್ನ ಬಳಿ ಹತ್ತು ಬೆಳ್ಳಿಯ ನಾಣ್ಯವಿರಲಾಗಿ, ಒಂದು ನಾಣ್ಯವನ್ನು ಕಳೆದುಕೊಂಡರೆ, ಅವಳು ದೀಪಹಚ್ಚಿ ಮನೆಯನ್ನು ಗುಡಿಸಿ, ಅದು ಸಿಕ್ಕುವವರೆಗೆ ಜಾಗ್ರತೆಯಿಂದ ಹುಡುಕುವುದಿಲ್ಲವೇ?

[9] ಅವಳು ಅದನ್ನು ಕಂಡುಕೊಂಡ ಮೇಲೆ, ತನ್ನ ಗೆಳತಿಯರನ್ನೂ ನೆರೆಯವರನ್ನೂ ಒಟ್ಟಿಗೆ ಕರೆದು, ಅವರಿಗೆ, ‘ಕಳೆದುಹೋದ ನಾಣ್ಯವು ಸಿಕ್ಕಿತು; ನನ್ನ ಸಂಗಡ ಸಂತೋಷಪಡಿರಿ,’ ಎನ್ನುವಳು.

[10] ಅದೇ ಪ್ರಕಾರ, ಪಶ್ಚಾತ್ತಾಪಪಟ್ಟು ದೇವರ ಕಡೆ ತಿರುಗುವ ಒಬ್ಬ ಪಾಪಿಯ ವಿಷಯವಾಗಿ ದೇವದೂತರ ಮುಂದೆ ಸಂತೋಷವಾಗುವುದು, ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು.

[11] ಇನ್ನೂ ಯೇಸು ಹೇಳಿದ್ದು: “ಒಬ್ಬ ಮನುಷ್ಯನಿಗೆ ಇಬ್ಬರು ಪುತ್ರರಿದ್ದರು.

[12] ಅವರಲ್ಲಿ ಕಿರಿಯವನು ತನ್ನ ತಂದೆಗೆ, ‘ಅಪ್ಪಾ, ಆಸ್ತಿಯಲ್ಲಿ ನನಗೆ ಬರತಕ್ಕ ಪಾಲನ್ನು ಕೊಡು,’ ಎಂದನು. ಆಗ ತಂದೆ ತನ್ನ ಆಸ್ತಿಯನ್ನು ಅವರಿಬ್ಬರಿಗೂ ಪಾಲು ಮಾಡಿಕೊಟ್ಟನು.

[13] “ಕೆಲವೇ ದಿನಗಳಲ್ಲಿ, ಕಿರಿಯ ಮಗನು ಎಲ್ಲವನ್ನೂ ಕೂಡಿಸಿಕೊಂಡು, ದೂರದೇಶಕ್ಕೆ ಪ್ರಯಾಣಮಾಡಿ, ಅಲ್ಲಿ ದುಂದು ವೆಚ್ಚದ ಜೀವನ ಮಾಡಿ ತನ್ನ ಆಸ್ತಿಯನ್ನು ಹಾಳು ಮಾಡಿಕೊಂಡನು.

[14] ಅವನು ಎಲ್ಲವನ್ನೂ ಹಾಳುಮಾಡಿದ ಮೇಲೆ, ಆ ದೇಶದಾದ್ಯಂತ ಘೋರವಾದ ಕ್ಷಾಮವು ಬಂದು, ಕೊರತೆಪಡಲಾರಂಭಿಸಿದನು.

[15] ಆಗ ಅವನು ಹೋಗಿ ಆ ದೇಶದ ನಿವಾಸಿಯೊಬ್ಬನನ್ನು ಆಶ್ರಯಿಸಿಕೊಂಡನು, ಆ ಮನುಷ್ಯನು ಹಂದಿಗಳನ್ನು ಮೇಯಿಸುವುದಕ್ಕೆ ಅವನನ್ನು ತನ್ನ ಹೊಲಗಳಿಗೆ ಕಳುಹಿಸಿದನು.

[16] ಅವನು ಹಂದಿಗಳು ತಿನ್ನುತ್ತಿದ್ದ ಸಿಪ್ಪೆಗಳಿಂದಾದರೂ ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುವುದಕ್ಕೆ ಆಶೆಪಟ್ಟನು, ಆದರೆ ಅದನ್ನು ಸಹ ಅವನಿಗೆ ಯಾರೂ ಕೊಡಲಿಲ್ಲ.

[17] “ಆಗ ಅವನಿಗೆ ಬುದ್ಧಿ ಬಂದು, ‘ನನ್ನ ತಂದೆಯ ಬಳಿಯಲ್ಲಿ ಎಷ್ಟೋ ಕೂಲಿಯಾಳುಗಳಿಗೆ ಸಾಕಾಗಿಯೂ ಉಳಿಯುವಷ್ಟು ಆಹಾರವಿದೆಯಲ್ಲಾ, ನಾನಾದರೋ ಇಲ್ಲಿ ಹಸಿವಿನಿಂದ ಸಾಯುತ್ತಿದ್ದೇನೆ!

[18] ನಾನು ಎದ್ದು ನನ್ನ ತಂದೆಯ ಬಳಿಗೆ ಹೋಗಿ, ಆತನಿಗೆ: ಅಪ್ಪಾ, ಪರಲೋಕಕ್ಕೆ ವಿರೋಧವಾಗಿಯೂ ನಿಮಗೆ ವಿರೋಧವಾಗಿಯೂ ನಾನು ಪಾಪಮಾಡಿದ್ದೇನೆ.

[19] ಇನ್ನೆಂದಿಗೂ ನಾನು ನಿಮ್ಮ ಮಗನೆಂದು ಕರೆಸಿಕೊಳ್ಳುವುದಕ್ಕೆ ಯೋಗ್ಯನಲ್ಲ; ನನ್ನನ್ನು ಕೂಲಿಯಾಳುಗಳಲ್ಲಿ ಒಬ್ಬನಂತೆ ಮಾಡು ಎನ್ನುವೆನು,’ ಎಂದುಕೊಂಡು,

[20] ಎದ್ದು ತನ್ನ ತಂದೆಯ ಬಳಿಗೆ ಹೋದನು. “ಆದರೆ ಅವನು ಇನ್ನೂ ಬಹಳ ದೂರದಲ್ಲಿರುವಾಗಲೇ, ಅವನ ತಂದೆಯು ಅವನನ್ನು ಕಂಡು, ಕನಿಕರಪಟ್ಟು, ಓಡಿಬಂದು, ಅವನ ಕೊರಳನ್ನು ಅಪ್ಪಿಕೊಂಡು ಅವನಿಗೆ ಮುದ್ದಿಟ್ಟನು.

[21] “ಆದರೂ ಮಗನು ತಂದೆಗೆ, ‘ಅಪ್ಪಾ, ನಾನು ಪರಲೋಕಕ್ಕೆ ವಿರೋಧವಾಗಿಯೂ ನಿಮ್ಮ ಮುಂದೆಯೂ ಪಾಪಮಾಡಿದ್ದೇನೆ. ಇನ್ನೆಂದಿಗೂ ನಾನು ನಿಮ್ಮ ಮಗನೆಂದು ಕರೆಯಿಸಿಕೊಳ್ಳಲು ಯೋಗ್ಯನಲ್ಲ,’ ಎಂದನು.

[22] “ಆದರೆ ತಂದೆಯು ತನ್ನ ಸೇವಕರಿಗೆ, ‘ಶ್ರೇಷ್ಠವಾದ ಅಂಗಿಯನ್ನು ತಕ್ಷಣವೇ ತಂದು ಇವನಿಗೆ ಉಡಿಸಿರಿ. ಇವನ ಬೆರಳಿಗೆ ಉಂಗುರವನ್ನು ತೊಡಿಸಿರಿ, ಪಾದಗಳಿಗೆ ಪಾದರಕ್ಷೆಗಳನ್ನೂ ಮೆಟ್ಟಿಸಿರಿ.

[23] ಇದಲ್ಲದೆ ವಿಶೇಷ ಆಹಾರವನ್ನು ತಂದು ಕೊಯ್ದು ವಿಶೇಷ ಔತಣವನ್ನು ಬೇಗ ಸಿದ್ಧಮಾಡಿರಿ. ನಾವು ಉಂಡು ಸಂತೋಷಪಡೋಣ.

[24] ಏಕೆಂದರೆ ಈ ನನ್ನ ಮಗನು ಸತ್ತುಹೋಗಿದ್ದನು, ತಿರುಗಿ ಬದುಕಿದ್ದಾನೆ; ಕಳೆದುಹೋಗಿದ್ದನು, ಸಿಕ್ಕಿದ್ದಾನೆ,’ ಎಂದು ಹೇಳಿದನು. ಹೀಗೆ ಅವರು ಅವನ ಬರುವಿಕೆಯನ್ನು ಆಚರಿಸತೊಡಗಿದರು.

[25] “ಆಗ, ಹಿರಿಯ ಮಗನು ಹೊಲದಲ್ಲಿದ್ದನು. ಅವನು ಮನೆಯ ಸಮೀಪಕ್ಕೆ ಬರುತ್ತಿದ್ದಾಗ, ನರ್ತನವನ್ನೂ ವಾದ್ಯವನ್ನೂ ಕೇಳಿ,

[26] ಸೇವಕರಲ್ಲಿ ಒಬ್ಬನನ್ನು ಕರೆದು, ‘ಇವುಗಳು ಏನು?’ ಎಂದು ಕೇಳಿದನು.

[27] ಆ ಸೇವಕನು ಅವನಿಗೆ, ‘ನಿನ್ನ ತಮ್ಮನು ಬಂದಿದ್ದಾನೆ, ನಿನ್ನ ತಂದೆಯು ಅವನು ಸುರಕ್ಷಿತವಾಗಿ ಮತ್ತು ಸೌಖ್ಯವಾಗಿ ಹಿಂದಿರುಗಿದ್ದರಿಂದ, ವಿಶೇಷ ಔತಣವನ್ನು ಮಾಡಿಸಿದ್ದಾನೆ,’ ಎಂದನು.

[28] “ಅದಕ್ಕೆ ಹಿರಿಯ ಮಗನು ಕೋಪಗೊಂಡು ಒಳಗೆ ಹೋಗಲು ಇಷ್ಟಪಡಲಿಲ್ಲ. ತಂದೆಯು ಹೊರಗೆ ಬಂದು ಅವನನ್ನು ಬೇಡಿಕೊಂಡನು.

[29] ಆದರೆ ಅವನು ಉತ್ತರವಾಗಿ ತನ್ನ ತಂದೆಗೆ, ‘ಎಷ್ಟೋ ವರ್ಷಗಳಿಂದ ನಾನು ನಿನ್ನ ಸೇವೆ ಮಾಡುತ್ತಿದ್ದೇನೆ. ನಾನು ನಿನ್ನ ಒಂದು ಅಪ್ಪಣೆಯನ್ನಾದರೂ ಎಂದೂ ಮೀರಲಿಲ್ಲ. ಆದರೂ ನಾನು ನನ್ನ ಸ್ನೇಹಿತರೊಂದಿಗೆ ಉಲ್ಲಾಸಪಡುವುದಕ್ಕಾಗಿ ನೀನು ಎಂದೂ ನನಗೆ ಒಂದು ಮೇಕೆಯ ಮರಿಯನ್ನಾದರೂ ಕೊಡಲಿಲ್ಲ.

[30] ಆದರೆ ನಿನ್ನ ಆಸ್ತಿಯನ್ನು ವೇಶ್ಯೆಯರೊಂದಿಗೆ ನುಂಗಿಬಿಟ್ಟ ಈ ನಿನ್ನ ಮಗನು ಬಂದಾಗ, ವಿಶೇಷ ಔತಣವನ್ನೇ ಮಾಡಿಸಿದ್ದೀಯಲ್ಲಾ!’ ಎಂದನು.

[31] “ಆಗ ತಂದೆ, ‘ಕಂದಾ, ನೀನು ಯಾವಾಗಲೂ ನನ್ನ ಸಂಗಡ ಇದ್ದೀ, ನನಗಿರುವುದೆಲ್ಲವೂ ನಿನ್ನದೇ.

[32] ಆದರೆ ಈ ನಿನ್ನ ತಮ್ಮ ಸತ್ತುಹೋಗಿದ್ದನು, ತಿರುಗಿ ಬದುಕಿದ್ದಾನೆ; ಕಳೆದುಹೋಗಿದ್ದನು, ಸಿಕ್ಕಿದ್ದಾನೆ. ಆದಕಾರಣ ನಾವು ಉಲ್ಲಾಸಪಟ್ಟು ಆನಂದಪಡುವುದು ಯುಕ್ತವಾದದ್ದೇ ಎಂದು ಹೇಳಿದನು.’ ”

ಲೂಕ — Chapters