[1] ಸಬ್ಬತ್ ದಿನ ಕಳೆದ ಮೇಲೆ ಮಗ್ದಲದ ಮರಿಯಳೂ ಯಾಕೋಬನ ತಾಯಿ ಮರಿಯಳೂ ಸಲೋಮೆಯೂ ಯೇಸುವಿನ ದೇಹಕ್ಕೆ ಹಚ್ಚುವುದಕ್ಕಾಗಿ ಸುಗಂಧದ್ರವ್ಯಗಳನ್ನು ಕೊಂಡುಕೊಂಡು ಬಂದರು.
[2] ವಾರದ ಮೊದಲನೆಯ ದಿನ ಮುಂಜಾನೆ ಸೂರ್ಯೋದಯವಾಗಲು ಅವರು ಸಮಾಧಿಯ ಬಳಿಗೆ ಬರುವಾಗ,
[3] “ಸಮಾಧಿಯ ದ್ವಾರದಿಂದ ಆ ಬಂಡೆಯನ್ನು ನಮಗೋಸ್ಕರ ಉರುಳಿಸುವವರು ಯಾರು?” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
[4] ಏಕೆಂದರೆ ಆ ಬಂಡೆ ಬಹಳ ದೊಡ್ಡದಾಗಿತ್ತು. ಆದರೆ ಅವರು ಮತ್ತೆ ಕಂಡಾಗ ಆ ಬಂಡೆ ಉರುಳಿಸಲಾಗಿತ್ತು.
[5] ಅವರು ಸಮಾಧಿಯೊಳಕ್ಕೆ ಪ್ರವೇಶಿಸಿದಾಗ, ಬಿಳಿ ಉಡುಪನ್ನು ತೊಟ್ಟುಕೊಂಡಿದ್ದ ಒಬ್ಬ ಯುವಕನು ಬಲಗಡೆಯಲ್ಲಿ ಕುಳಿತಿರುವುದನ್ನು ಕಂಡು ಭಯಭ್ರಾಂತರಾದರು.
[6] ಅವನು ಅವರಿಗೆ, “ಭಯಪಡಬೇಡಿರಿ, ಶಿಲುಬೆಗೆ ಹಾಕಲಾದ ನಜರೇತಿನ ಯೇಸುವನ್ನು ಹುಡುಕುತ್ತಿದ್ದೀರೊ? ಅವರು ಜೀವಿತರಾಗಿ ಎದ್ದಿದ್ದಾರೆ! ಇಲ್ಲಿ ಇಲ್ಲ; ಅವರನ್ನು ಇಟ್ಟಿದ್ದ ಸ್ಥಳವನ್ನು ನೋಡಿರಿ.
[7] ಆದರೆ ನೀವು ಹೊರಟುಹೋಗಿ ಯೇಸು ನಿಮಗೆ ಹೇಳಿದಂತೆ, ‘ನಿಮಗಿಂತ ಮುಂಚಿತವಾಗಿ ಗಲಿಲಾಯಕ್ಕೆ ಹೋಗುತ್ತಾರೆ, ಅಲ್ಲಿ ನೀವು ಯೇಸುವನ್ನು ಕಾಣುವಿರಿ’ ಎಂದು ಅವರ ಶಿಷ್ಯರಿಗೆ ಮತ್ತು ಪೇತ್ರನಿಗೆ ಹೇಳಿರಿ,” ಎಂದನು.
[8] ಅವರು ವಿಸ್ಮಯಗೊಂಡು ಭಯದಿಂದ ನಡುಗುತ್ತಾ ಸಮಾಧಿಯ ಬಳಿಯಿಂದ ಓಡಿಹೋದರು. ಅವರು ಹೆದರಿದ್ದರಿಂದ ಯಾರಿಗೂ ಏನೂ ಹೇಳಲಿಲ್ಲ.
[9] ವಾರದ ಮೊದಲನೆಯ ದಿನದ ಬೆಳಿಗ್ಗೆ ಯೇಸು ಎದ್ದ ಮೇಲೆ ತಾವು ಏಳು ದೆವ್ವಗಳನ್ನು ಬಿಡಿಸಿದ್ದ ಮಗ್ದಲದ ಮರಿಯಳಿಗೆ ಅವರು ಮೊದಲು ಕಾಣಿಸಿಕೊಂಡರು.
[10] ಯೇಸುವಿನ ಸಂಗಡ ಇದ್ದವರು ಶೋಕಿಸಿ ಅಳುತ್ತಿರುವಾಗ ಆಕೆಯು ಹೋಗಿ ಅವರಿಗೆ ಯೇಸುವಿನ ಬಗ್ಗೆ ಹೇಳಿದಳು.
[11] ಆದರೆ ಯೇಸು ಜೀವಂತರಾಗಿದ್ದಾರೆ ಮತ್ತು ಆಕೆಗೆ ಕಾಣಿಸಿಕೊಂಡಿದ್ದಾರೆ ಎಂಬ ವಾರ್ತೆಯನ್ನು ಕೇಳಿದಾಗ, ಶಿಷ್ಯರು ನಂಬಲಿಲ್ಲ.
[12] ಇದಾದ ಮೇಲೆ ಅವರಲ್ಲಿ ಇಬ್ಬರು ಒಂದು ಗ್ರಾಮಕ್ಕೆ ನಡೆದು ಹೋಗುತ್ತಿದ್ದಾಗ ಯೇಸು ಅವರಿಗೆ ಬೇರೊಂದು ರೀತಿಯಲ್ಲಿ ಕಾಣಿಸಿಕೊಂಡರು.
[13] ಅವರು ಹೋಗಿ ಉಳಿದ ಶಿಷ್ಯರಿಗೆ ತಿಳಿಸಿದರು. ಆದರೆ ಇವರನ್ನೂ ಅವರು ನಂಬಲಿಲ್ಲ.
[14] ತರುವಾಯ ಊಟಕ್ಕೆ ಕುಳಿತಿದ್ದ ಹನ್ನೊಂದು ಮಂದಿಗೆ ಯೇಸು ಕಾಣಿಸಿಕೊಂಡರು. ತಾವು ಜೀವಿತರಾಗಿ ಎದ್ದು ಬಂದ ಮೇಲೆ ತಮ್ಮನ್ನು ಕಂಡವರ ಮಾತನ್ನು ಅವರು ನಂಬದಿದ್ದ ಕಾರಣ ಅವರ ಅಪನಂಬಿಕೆಯನ್ನೂ ಹೃದಯದ ಕಾಠಿಣ್ಯವನ್ನೂ ಯೇಸು ಗದರಿಸಿದರು.
[15] ಯೇಸು ಅವರಿಗೆ, “ನೀವು ಜಗತ್ತಿನ ಎಲ್ಲಾ ಕಡೆಗಳಿಗೆ ಹೋಗಿ ಸರ್ವಸೃಷ್ಟಿಗೂ ಸುವಾರ್ತೆಯನ್ನು ಸಾರಿರಿ.
[16] ನಂಬಿ ದೀಕ್ಷಾಸ್ನಾನ ಮಾಡಿಸಿಕೊಳ್ಳುವವನು ರಕ್ಷಣೆಹೊಂದುವನು. ಆದರೆ ನಂಬದೆ ಹೋಗುವವನು ದಂಡನೆಗೆ ಗುರಿಯಾಗುವನು.
[17] ಇದಲ್ಲದೆ ನಂಬುವವರಿಂದ ಈ ಸೂಚಕಕಾರ್ಯಗಳು ಉಂಟಾಗುವುವು: ಅವರು ನನ್ನ ಹೆಸರಿನಲ್ಲಿ ದೆವ್ವಗಳನ್ನು ಓಡಿಸುವರು, ಅವರು ಹೊಸ ಭಾಷೆಗಳಲ್ಲಿ ಮಾತನಾಡುವರು.
[18] ಅವರು ಸರ್ಪಗಳನ್ನು ಎತ್ತುವರು ಮತ್ತು ಮಾರಣಾಂತಿಕವಾದ ಯಾವುದನ್ನಾದರೂ ಕುಡಿದರೆ ಅದು ಅವರಿಗೆ ಯಾವ ಕೇಡನ್ನೂ ಮಾಡುವುದಿಲ್ಲ. ಅವರು ರೋಗಿಗಳ ಮೇಲೆ ಕೈಗಳನ್ನಿಟ್ಟಾಗ ರೋಗಿಗಳು ಸ್ವಸ್ಥರಾಗುವರು,” ಎಂದು ಹೇಳಿದರು.
[19] ಕರ್ತ ಯೇಸು ಅವರೊಂದಿಗೆ ಮಾತನಾಡಿದ ನಂತರ, ಅವರು ಪರಲೋಕಕ್ಕೆ ಏರಿ ದೇವರ ಬಲಪಾರ್ಶ್ವದಲ್ಲಿ ಕುಳಿತುಕೊಂಡರು.
[20] ಶಿಷ್ಯರು ಹೊರಟುಹೋಗಿ ಎಲ್ಲಾ ಕಡೆಗಳಲ್ಲಿಯೂ ಸುವಾರ್ತೆಯನ್ನು ಸಾರಿದರು. ಕರ್ತನು ಅವರ ಜೊತೆಯಲ್ಲಿ ಕೆಲಸ ಮಾಡುತ್ತಾ, ಸೂಚಕಕಾರ್ಯಗಳಿಂದ ತಮ್ಮ ವಾಕ್ಯವನ್ನು ಸ್ಥಿರಪಡಿಸುತ್ತಾ ಇದ್ದರು.