Skip to content
Opens in a new window
Listen to this chapter • 7:14

[1] ಯೇಸು ಪವಿತ್ರಾತ್ಮಭರಿತರಾಗಿ, ಯೊರ್ದನ್ ನದಿ ತೀರದಿಂದ ಹಿಂದಿರುಗಿ ಬಂದು, ದೇವರಾತ್ಮರಿಂದ ಅರಣ್ಯದೊಳಕ್ಕೆ ಮಾರ್ಗದರ್ಶನ ಹೊಂದಿ,

[2] ನಲವತ್ತು ದಿನಗಳು ಸೈತಾನನಿಂದ ಶೋಧನೆಯನ್ನು ಎದುರಿಸಿದರು. ಆ ದಿನಗಳಲ್ಲಿ ಯೇಸು ಏನೂ ತಿನ್ನಲಿಲ್ಲ. ಆ ದಿನಗಳು ಮುಗಿದ ಮೇಲೆ ಯೇಸುವಿಗೆ ಹಸಿವಾಯಿತು.

[3] ಸೈತಾನನು ಯೇಸುವಿಗೆ, “ನೀನು ದೇವರ ಪುತ್ರನಾಗಿದ್ದರೆ, ಈ ಕಲ್ಲಿಗೆ ರೊಟ್ಟಿಯಾಗುವಂತೆ ಹೇಳು,” ಎಂದನು.

[4] ಅದಕ್ಕೆ ಯೇಸು ಉತ್ತರವಾಗಿ ಅವನಿಗೆ, “ ‘ಮನುಷ್ಯನು ಜೀವಿಸುವುದು ರೊಟ್ಟಿಯಿಂದ ಮಾತ್ರವಲ್ಲ’ ಎಂದು ಪವಿತ್ರ ವೇದದಲ್ಲಿ ಬರೆದಿದೆ,” ಎಂದರು.

[5] ಸೈತಾನನು ಯೇಸುವನ್ನು ಎತ್ತರವಾದ ಒಂದು ಸ್ಥಳಕ್ಕೆ ಕರೆದುಕೊಂಡು ಹೋಗಿ, ಲೋಕದ ಎಲ್ಲಾ ರಾಜ್ಯಗಳನ್ನು ಕ್ಷಣಮಾತ್ರದಲ್ಲಿ ಅವರಿಗೆ ತೋರಿಸಿದನು.

[6] ಅನಂತರ ಸೈತಾನನು ಯೇಸುವಿಗೆ, “ಈ ಎಲ್ಲಾ ರಾಜ್ಯಗಳ ಅಧಿಕಾರವನ್ನೂ ಇವುಗಳ ಮಹಿಮೆಯನ್ನೂ ನಾನು ನಿನಗೆ ಕೊಡುವೆನು. ಇವೆಲ್ಲಾ ನನಗೆ ಕೊಟ್ಟಿರುವುದರಿಂದ ನನಗೆ ಇಷ್ಟ ಬಂದ ಯಾರಿಗಾದರೂ ನಾನು ಕೊಡುವೆನು.

[7] ಆದ್ದರಿಂದ ನೀನು ನನ್ನನ್ನು ಆರಾಧಿಸಿದರೆ, ಎಲ್ಲವೂ ನಿನ್ನದಾಗುವವು,” ಎಂದು ಹೇಳಿದನು.

[8] ಯೇಸು ಅವನಿಗೆ ಉತ್ತರವಾಗಿ, “ ‘ನಿನ್ನ ದೇವರಾದ ಕರ್ತದೇವರನ್ನು ಆರಾಧಿಸಿ, ಅವರಿಗೆ ಮಾತ್ರವೇ ಸೇವೆ ಸಲ್ಲಿಸಬೇಕು,’ ಎಂದು ಪವಿತ್ರ ವೇದದಲ್ಲಿ ಬರೆದಿದೆ,” ಎಂದರು.

[9] ಸೈತಾನನು ಯೇಸುವನ್ನು ಯೆರೂಸಲೇಮಿಗೆ ಕರೆತಂದು ದೇವಾಲಯದ ಅತಿ ಎತ್ತರವಾದ ಶಿಖರದ ಮೇಲೆ ನಿಲ್ಲಿಸಿ ಯೇಸುವಿಗೆ, “ನೀನು ದೇವರ ಪುತ್ರನಾಗಿದ್ದರೆ ಇಲ್ಲಿಂದ ಕೆಳಕ್ಕೆ ಧುಮುಕು,

[10] ಏಕೆಂದರೆ ಪವಿತ್ರ ವೇದದಲ್ಲಿ ಬರೆದಿರುವಂತೆ: “ ‘ದೇವರು ನಿನ್ನನ್ನು ಕಾಪಾಡುವುದಕ್ಕೆ ತಮ್ಮ ದೂತರಿಗೆ ಆಜ್ಞಾಪಿಸುವರು

[11] ಮತ್ತು ನಿನ್ನ ಪಾದಗಳು ಕಲ್ಲಿಗೆ ತಗಲದಂತೆ, ದೂತರು ನಿನ್ನನ್ನು ತಮ್ಮ ಕೈಗಳಲ್ಲಿ ಎತ್ತಿಕೊಳ್ಳುವರು,’” ಎಂದನು.

[12] ಅದಕ್ಕೆ ಯೇಸು ಅವನಿಗೆ, “ ‘ನಿನ್ನ ದೇವರಾದ ಕರ್ತದೇವರನ್ನು ಪರೀಕ್ಷಿಸಬಾರದು,’ ಎಂದೂ ಹೇಳಿದೆ,” ಎಂದು ಉತ್ತರಕೊಟ್ಟರು.

[13] ಸೈತಾನನು ಯೇಸುವನ್ನು ನಾನಾರೀತಿಯಲ್ಲಿ ಶೋಧಿಸಿದ ಮೇಲೆ, ತಕ್ಕಕಾಲ ಬರುವ ತನಕ ಅವರನ್ನು ಬಿಟ್ಟು ಹೊರಟುಹೋದನು.

[14] ಯೇಸು ಪವಿತ್ರಾತ್ಮರ ಶಕ್ತಿಯಿಂದ ಗಲಿಲಾಯಕ್ಕೆ ಹಿಂದಿರುಗಿದರು. ಅವರ ಸುದ್ದಿಯು ಸುತ್ತಮುತ್ತೆಲ್ಲಾ ಹರಡಿತು.

[15] ಯೇಸು ಯೆಹೂದ್ಯರ ಸಭಾಮಂದಿರಗಳಲ್ಲಿ ಬೋಧಿಸಿದ್ದರಿಂದ, ಎಲ್ಲರೂ ಅವರನ್ನು ಹೊಗಳಿದರು.

[16] ಯೇಸು ತಾವು ಬೆಳೆದ ನಜರೇತಿಗೆ ಬಂದು, ತಮ್ಮ ಪದ್ಧತಿಯಂತೆ ಸಬ್ಬತ್ ದಿನದಲ್ಲಿ ಸಭಾಮಂದಿರದೊಳಕ್ಕೆ ಹೋಗಿ ಪವಿತ್ರ ವೇದದ ಸುರುಳಿಯನ್ನು ಓದುವುದಕ್ಕಾಗಿ ಎದ್ದು ನಿಂತರು.

[17] ಯೇಸುವಿನ ಕೈಗೆ ಪ್ರವಾದಿ ಯೆಶಾಯನ ಗ್ರಂಥದ ಸುರುಳಿಯನ್ನು ಕೊಟ್ಟರು. ಯೇಸು ಅದನ್ನು ಬಿಚ್ಚಿ, ಅದರಲ್ಲಿ ಬರೆದಿರುವ ಈ ವಾಕ್ಯಗಳನ್ನು ಕಂಡು ಓದಿದರು:

[18] “ಕರ್ತದೇವರ ಆತ್ಮರು ನನ್ನ ಮೇಲೆ ಇದ್ದಾರೆ, ಅವರು ನನ್ನನ್ನು ಬಡವರಿಗೆ ಸುವಾರ್ತೆ ಸಾರುವುದಕ್ಕೆ ಅಭಿಷೇಕಿಸಿದ್ದಾರೆ. ಸೆರೆಯಲ್ಲಿದ್ದವರಿಗೆ ಬಿಡುಗಡೆಯನ್ನು ಸಾರುವುದಕ್ಕೂ, ಕುರುಡರಿಗೆ ದೃಷ್ಟಿ ಕೊಡುವುದಕ್ಕೂ, ಜಜ್ಜಿ ಹೋದವರನ್ನು ಬಿಡಿಸಿ ಕಳುಹಿಸುವುದಕ್ಕೂ,

[19] ಕರ್ತದೇವರ ಮೆಚ್ಚುಗೆಯ ವರ್ಷವನ್ನು ಸಾರುವುದಕ್ಕೂ ಅವರು ನನ್ನನ್ನು ಕಳುಹಿಸಿದ್ದಾರೆ.”

[20] ಯೇಸು ಗ್ರಂಥದ ಸುರುಳಿಯನ್ನು ಸುತ್ತಿ, ಪರಿಚಾರಕನ ಕೈಗೆ ಕೊಟ್ಟು ಕುಳಿತುಕೊಂಡರು. ಆಗ ಆ ಸಭಾಮಂದಿರದಲ್ಲಿ ಇದ್ದವರೆಲ್ಲರ ಕಣ್ಣುಗಳು ಅವರ ಮೇಲೆಯೇ ನಾಟಿದ್ದವು.

[21] ಯೇಸು ಅವರಿಗೆ, “ನೀವು ಕೇಳುತ್ತಿದ್ದಂತೆಯೇ ಈ ಪವಿತ್ರ ವೇದದ ವಾಕ್ಯವು ಇಂದು ನೆರವೇರಿತು,” ಎಂದು ಹೇಳಲಾರಂಭಿಸಿದರು.

[22] ಎಲ್ಲರೂ ಅವರನ್ನು ಹೊಗಳಿದರು. ಯೇಸುವಿನ ಬಾಯಿಂದ ಬಂದ ಕೃಪೆಯುಳ್ಳ ಮಾತುಗಳಿಗೆ ಆಶ್ಚರ್ಯಪಟ್ಟು, “ಈತನು ಯೋಸೇಫನ ಮಗನಲ್ಲವೇ?” ಎಂದು ಮಾತನಾಡಿಕೊಂಡರು.

[23] ಯೇಸು ಅವರಿಗೆ, “ ‘ವೈದ್ಯನೇ, ನಿನ್ನನ್ನು ನೀನೇ ವಾಸಿಮಾಡಿಕೋ!’ ಎಂಬ ಗಾದೆಯನ್ನು ನೀವು ನಿಸ್ಸಂದೇಹವಾಗಿ ನನಗೆ ಹೇಳಿ, ‘ಕಪೆರ್ನೌಮಿನಲ್ಲಿ ಎಂತೆಂಥ ಕಾರ್ಯಗಳು ನಡೆಯಿತೆಂದು ನಾವು ಕೇಳಿದೆವು. ಅದನ್ನು ಇಲ್ಲಿ ನಿನ್ನ ಸ್ವಂತ ಊರಿನಲ್ಲಿಯೂ ಮಾಡು’ ಎಂದು ನನಗೆ ಹೇಳುವಿರಿ,” ಎಂದರು.

[24] ಯೇಸು ಮುಂದುವರಿಸಿ, “ನಾನು ನಿಮಗೆ ನಿಜವಾಗಿ ಹೇಳುವುದೇನೆಂದರೆ, ಯಾವ ಪ್ರವಾದಿಯೂ ಸ್ವಂತ ಊರಿನಲ್ಲಿ ಸ್ವೀಕಾರವಾಗುವುದಿಲ್ಲ.

[25] ನಿಮಗೆ ಸತ್ಯವನ್ನು ಹೇಳುತ್ತೇನೆ: ಎಲೀಯನ ದಿವಸಗಳಲ್ಲಿ ಮೂರು ವರ್ಷ ಆರು ತಿಂಗಳು ಮಳೆ ಬಾರದೆ ದೇಶದಲ್ಲೆಲ್ಲಾ ದೊಡ್ಡ ಬರ ಉಂಟಾದಾಗ, ಇಸ್ರಾಯೇಲಿನಲ್ಲಿ ಅನೇಕ ವಿಧವೆಯರು ಇದ್ದರು.

[26] ಅವರಲ್ಲಿ ಯಾರ ಬಳಿಗೂ ದೇವರು ಎಲೀಯನನ್ನು ಕಳುಹಿಸದೆ ಸೀದೋನ್ ಪಟ್ಟಣದ ಸರೆಪ್ತದಲ್ಲಿದ್ದ ಒಬ್ಬ ವಿಧವೆಯ ಬಳಿಗೆ ಕಳುಹಿಸಿದರು.

[27] ಹಾಗೆಯೇ, ಪ್ರವಾದಿ ಎಲೀಷನ ಕಾಲದಲ್ಲಿ ಅನೇಕ ಕುಷ್ಠರೋಗಿಗಳು ಇಸ್ರಾಯೇಲಿನಲ್ಲಿದ್ದರೂ ಸಿರಿಯದ ನಾಮಾನನ ಹೊರತು ಅವರಲ್ಲಿ ಬೇರೆ ಯಾರೂ ಶುದ್ಧರಾಗಲಿಲ್ಲ,” ಎಂದರು.

[28] ಆಗ ಸಭಾಮಂದಿರದಲ್ಲಿ ಇದ್ದವರೆಲ್ಲರೂ ಇವುಗಳನ್ನು ಕೇಳಿ ಬಹು ಕೋಪಗೊಂಡರು.

[29] ಅವರು ಮೇಲಕ್ಕೆದ್ದು, ಯೇಸುವನ್ನು ಪಟ್ಟಣದ ಹೊರಗೆ ದಬ್ಬಬೇಕೆಂದು, ತಮ್ಮ ಬೆಟ್ಟದ ಮೇಲೆ ಕಟ್ಟಿರುವ ಪಟ್ಟಣದ ಕಡಿದಾದ ಸ್ಥಳಕ್ಕೆ ಅವರನ್ನು ಹಿಡಿದುಕೊಂಡು ಹೋದರು.

[30] ಆದರೆ ಯೇಸು ಅವರ ಮಧ್ಯದಿಂದ ಹಾದು ಹೊರಟು ಹೋದರು.

[31] ಯೇಸು ಗಲಿಲಾಯದ ಕಪೆರ್ನೌಮಿಗೆ ಬಂದು, ಸಬ್ಬತ್ ದಿನಗಳಲ್ಲಿ ಅವರಿಗೆ ಬೋಧಿಸುತ್ತಿದ್ದರು.

[32] ಯೇಸುವಿನ ಬೋಧನೆಯನ್ನು ಕೇಳಿ ಜನರು ಆಶ್ಚರ್ಯಪಟ್ಟರು. ಏಕೆಂದರೆ ಅವರ ವಾಕ್ಯವು ಅಧಿಕಾರದಿಂದ ಕೂಡಿದ್ದಾಗಿತ್ತು.

[33] ಆ ಸಭಾಮಂದಿರದಲ್ಲಿ ದೆವ್ವಹಿಡಿದ ಒಬ್ಬ ಮನುಷ್ಯನಿದ್ದನು. ಅವನು ಗಟ್ಟಿಯಾಗಿ ಕಿರುಚುತ್ತಾ,

[34] “ನಜರೇತಿನ ಯೇಸುವೇ, ನಮ್ಮ ಗೊಡವೆ ನಿಮಗೆ ಏಕೆ? ನಮ್ಮನ್ನು ನಾಶಮಾಡುವುದಕ್ಕಾಗಿ ಬಂದಿರಾ? ನೀವು ಯಾರೆಂದು ನಾನು ಬಲ್ಲೆನು. ನೀವು ದೇವರ ಪರಿಶುದ್ಧರು,” ಎಂದು ಹೇಳಿದನು.

[35] ಆಗ ಯೇಸು ಅವನನ್ನು ಗದರಿಸಿ, “ಸುಮ್ಮನಿರು, ಅವನೊಳಗಿಂದ ಹೊರಗೆ ಬಾ,” ಎಂದರು. ಆ ದೆವ್ವವು ಅವನನ್ನು ಮಧ್ಯದಲ್ಲಿ ಕೆಡವಿ, ಬಾಧಿಸದೆ ಅವನೊಳಗಿಂದ ಹೊರಗೆ ಬಂತು.

[36] ಜನರೆಲ್ಲರೂ ಬೆರಗಾಗಿ, “ಇದೆಂಥಾ ಮಾತಾಗಿದೆ! ಈತನು ಅಧಿಕಾರದಿಂದಲೂ ಶಕ್ತಿಯಿಂದಲೂ ಅಶುದ್ಧಾತ್ಮಗಳಿಗೆ ಅಪ್ಪಣೆಕೊಡಲು ಅವು ಹೊರಗೆ ಬರುತ್ತವಲ್ಲಾ!” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.

[37] ಯೇಸುವಿನ ಸುದ್ದಿಯು ಸುತ್ತಲಿನ ಪ್ರದೇಶದ ಪ್ರತಿಯೊಂದು ಸ್ಥಳದಲ್ಲಿ ಹರಡಿತು.

[38] ಯೇಸು ಸಭಾಮಂದಿರದಿಂದ ಎದ್ದು ಸೀಮೋನನ ಮನೆಗೆ ಹೋದರು. ಅಲ್ಲಿ ಸೀಮೋನನ ಅತ್ತೆಗೆ ಕಠಿಣ ಜ್ವರವಿದ್ದುದರಿಂದ ಅಲ್ಲಿದ್ದವರು ಆಕೆಗೆ ಸಹಾಯ ಮಾಡಬೇಕೆಂದು ಯೇಸುವನ್ನು ಬೇಡಿಕೊಂಡರು.

[39] ಆಗ ಯೇಸು ಆಕೆಯ ಬಳಿಯಲ್ಲಿ ನಿಂತು ಜ್ವರವನ್ನು ಗದರಿಸಲು ಅದು ಆಕೆಯನ್ನು ಬಿಟ್ಟುಹೋಯಿತು. ಕೂಡಲೇ ಆಕೆಯು ಎದ್ದು ಅವರನ್ನು ಉಪಚರಿಸಿದಳು.

[40] ಸಂಜೆಯಾದ ನಂತರ, ನಾನಾ ವಿಧವಾದ ರೋಗಗಳಿಂದ ಅಸ್ವಸ್ಥರಾದವರೆಲ್ಲರನ್ನು ಜನರು ಯೇಸುವಿನ ಬಳಿಗೆ ಕರೆತಂದರು, ಅವರಲ್ಲಿ ಪ್ರತಿಯೊಬ್ಬನ ಮೇಲೆ ಯೇಸು ತಮ್ಮ ಕೈಗಳನ್ನಿಟ್ಟು ಅವರನ್ನು ಸ್ವಸ್ಥಪಡಿಸಿದರು.

[41] ಅನೇಕರೊಳಗಿಂದ, ದೆವ್ವಗಳು ಸಹ ಹೊರಗೆ ಬಂದು, “ನೀವು ದೇವರ ಪುತ್ರ” ಎಂದು ಅರಚಿದವು. ಯೇಸು ಅವುಗಳನ್ನು ಗದರಿಸಿ ಮಾತನಾಡಬಾರದೆಂದು ಹೇಳಿದರು. ಏಕೆಂದರೆ ಅವರೇ ಕ್ರಿಸ್ತನೆಂದು ಅವುಗಳಿಗೆ ಗೊತ್ತಿತ್ತು.

[42] ಬೆಳಗಾದ ಮೇಲೆ, ಯೇಸು ಏಕಾಂತ ಸ್ಥಳಕ್ಕೆ ಹೊರಟು ಹೋದರು. ಜನರು ಅವರನ್ನು ಹುಡುಕಿಕೊಂಡು ಅವರ ಬಳಿಗೆ ಬಂದು ತಮ್ಮನ್ನು ಬಿಟ್ಟು ಹೋಗಬಾರದೆಂದು ಅವರನ್ನು ತಡೆದರು.

[43] ಆದರೆ ಯೇಸು ಅವರಿಗೆ, “ಬೇರೆ ಪಟ್ಟಣಗಳಿಗೂ ದೇವರ ರಾಜ್ಯದ ಸುವಾರ್ತೆಯನ್ನು ನಾನು ಸಾರಬೇಕಾಗಿದೆ. ನನ್ನನ್ನು ಕಳುಹಿಸಿರುವುದು ಇದಕ್ಕಾಗಿಯೇ,” ಎಂದರು.

[44] ಅನಂತರ ಯೇಸು ಯೂದಾಯದ ಸಭಾಮಂದಿರಗಳಲ್ಲಿ ಸುವಾರ್ತೆ ಸಾರುತ್ತಾ ಇದ್ದರು.

ಲೂಕ — Chapters