Skip to content
Opens in a new window
Listen to this chapter • 7:55

[1] ಕೈಸರ್ ತಿಬೇರಿಯನ ಆಳ್ವಿಕೆಯ ಕಾಲದ ಹದಿನೈದನೆಯ ವರ್ಷದಲ್ಲಿ ಪೊಂತ್ಯ ಪಿಲಾತನು ಯೂದಾಯಕ್ಕೆ ಅಧಿಪತಿಯೂ ಹೆರೋದನು ಗಲಿಲಾಯಕ್ಕೆ ಚತುರಾಧಿಪತಿಯೂ ಅವನ ಸಹೋದರ ಫಿಲಿಪ್ಪನು ಇತುರಾಯ ಮತ್ತು ತ್ರಕೋನಿತಿ ಸೀಮೆಗೆ ಚತುರಾಧಿಪತಿಯೂ ಲುಸನ್ಯನು ಅಬಿಲೇನೆಗೆ ಚತುರಾಧಿಪತಿಯೂ ಆಗಿದ್ದಾಗ,

[2] ಅನ್ನನು ಮತ್ತು ಕಾಯಫನು ಮಹಾಯಾಜಕರು ಆಗಿದ್ದ ಸಮಯದಲ್ಲಿ, ಅರಣ್ಯದಲ್ಲಿದ್ದ ಜಕರೀಯನ ಮಗ ಯೋಹಾನನಿಗೆ ದೇವರ ವಾಕ್ಯವುಂಟಾಯಿತು.

[3] ಅವನು ಯೊರ್ದನ್ ನದಿಯ ಸುತ್ತಲಿರುವ ಎಲ್ಲಾ ಸೀಮೆಗಳಿಗೆ ಬಂದು, ಪಾಪಗಳ ಪರಿಹಾರಕ್ಕಾಗಿ ದೇವರ ಕಡೆಗೆ ತಿರುಗಿಕೊಂಡು ದೀಕ್ಷಾಸ್ನಾನ ಪಡೆಯುವದರ ಕುರಿತು ಸಾರಿ ಹೇಳಿದನು.

[4] ಇದರ ಬಗ್ಗೆ ಪ್ರವಾದಿಯಾದ ಯೆಶಾಯನ ಗ್ರಂಥದಲ್ಲಿ ಮುಂಚಿತವಾಗಿ ಹೀಗೆಂದು ಬರೆದಿದೆ: “ಅರಣ್ಯದಲ್ಲಿ ಕೂಗುವವನ ಸ್ವರವು, ‘ಕರ್ತದೇವರ ಮಾರ್ಗವನ್ನು ಸಿದ್ಧಮಾಡಿರಿ, ಅವರ ದಾರಿಗಳನ್ನು ಸರಾಗಮಾಡಿರಿ.

[5] ಪ್ರತಿಯೊಂದು ಹಳ್ಳಕೊಳ್ಳಗಳೂ ಭರ್ತಿಯಾಗಬೇಕು, ಎಲ್ಲಾ ಬೆಟ್ಟಗುಡ್ಡಗಳು ನೆಲಸಮವಾಗಬೇಕು; ಡೊಂಕಾದ ರಸ್ತೆಗಳು ನೆಟ್ಟಗಾಗಬೇಕು, ಮತ್ತು ಕೊರಕಲಾದ ದಾರಿಗಳು ಸರಾಗವಾಗಬೇಕು;

[6] ಮಾನವರೆಲ್ಲರೂ ದೇವರ ರಕ್ಷಣೆಯನ್ನು ಕಾಣುವರು.’ ”

[7] ಆಗ ತನ್ನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದಕ್ಕಾಗಿ ಹೊರಟು ಬಂದ ಜನಸಮೂಹಕ್ಕೆ, ಯೋಹಾನನು, “ಎಲೈ ಸರ್ಪಸಂತತಿಯವರೇ! ಮುಂದೆ ಬರುವ ಕೋಪಾಗ್ನಿಯಿಂದ ತಪ್ಪಿಸಿಕೊಳ್ಳಲು ನಿಮ್ಮನ್ನು ಎಚ್ಚರಿಸಿದವರು ಯಾರು?

[8] ಹಾಗಾದರೆ ದೇವರ ಕಡೆಗೆ ತಿರುಗಿಕೊಂಡದ್ದಕ್ಕೆ ತಕ್ಕ ಫಲಗಳನ್ನು ತೋರಿಸಿರಿ. ‘ಅಬ್ರಹಾಮನು ನಮಗೆ ತಂದೆಯಾಗಿದ್ದಾನೆ,’ ಎಂದು ನಿಮ್ಮೊಳಗೆ ಕೊಚ್ಚಿಕೊಳ್ಳಬೇಡಿರಿ. ಈ ಕಲ್ಲುಗಳಿಂದಲೂ ದೇವರು ಅಬ್ರಹಾಮನಿಗೆ ಮಕ್ಕಳನ್ನು ಹುಟ್ಟಿಸಲು ಶಕ್ತರೆಂದು ನಾನು ನಿಮಗೆ ಹೇಳುತ್ತೇನೆ.

[9] ಮರಗಳ ಬೇರಿಗೆ ಈಗಾಗಲೇ ಕೊಡಲಿ ಬಿದ್ದಿದೆ, ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಹಾಕಲಾಗುವುದು,” ಎಂದು ಹೇಳಿದನು.

[10] ಆಗ ಜನರು, “ಹಾಗಾದರೆ ನಾವೇನು ಮಾಡಬೇಕು?” ಎಂದು ಕೇಳಿದರು.

[11] ಅದಕ್ಕೆ ಯೋಹಾನನು ಉತ್ತರವಾಗಿ, “ಎರಡು ಅಂಗಿಗಳಿದ್ದರೆ ಇಲ್ಲದವನಿಗೆ ಒಂದನ್ನು ಕೊಡಲಿ, ಆಹಾರವುಳ್ಳವನು ಇಲ್ಲದವನೊಂದಿಗೆ ಹಂಚಿಕೊಳ್ಳಲಿ,” ಎಂದು ಹೇಳಿದನು.

[12] ತರುವಾಯ ಸುಂಕದವರು ಸಹ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದಕ್ಕಾಗಿ ಬಂದು ಯೋಹಾನನಿಗೆ, “ಬೋಧಕರೇ, ನಾವೇನು ಮಾಡಬೇಕು?” ಎಂದು ಕೇಳಿದರು.

[13] ಅದಕ್ಕೆ ಯೋಹಾನನು ಅವರಿಗೆ, “ನಿಮಗೆ ಆಜ್ಞಾಪಿಸಿದ್ದಕ್ಕಿಂತ ಹೆಚ್ಚೇನೂ ವಸೂಲಿ ಮಾಡಬೇಡಿರಿ,” ಎಂದನು.

[14] ಅದರಂತೆಯೇ ಸೈನಿಕರು, “ನಾವೇನು ಮಾಡಬೇಕು?” ಎಂದು ಕೇಳಿದರು. ಅದಕ್ಕೆ ಯೋಹಾನನು, “ಯಾರನ್ನೂ ಬೆದರಿಸಿ ಹಣ ತೆಗೆದುಕೊಳ್ಳಬೇಡಿರಿ. ಯಾರ ಮೇಲೆಯೂ ಸುಳ್ಳು ದೂರು ಹೇಳಬೇಡಿರಿ. ನಿಮ್ಮ ಸಂಬಳದಲ್ಲಿ ತೃಪ್ತರಾಗಿರಿ,” ಎಂದು ಹೇಳಿದನು.

[15] ಆಗ ಜನರು ಕ್ರಿಸ್ತನಿಗಾಗಿ ಎದುರುನೋಡುತ್ತಾ ಇದ್ದದ್ದರಿಂದ, ಯೋಹಾನನೇ ಕ್ರಿಸ್ತನಾಗಿರಬಹುದೋ ಏನೋ ಎಂದು ತಮ್ಮ ಹೃದಯಗಳಲ್ಲಿ ಆಲೋಚಿಸುತ್ತಿದ್ದರು.

[16] ಯೋಹಾನನು ಉತ್ತರವಾಗಿ ಅವರೆಲ್ಲರಿಗೆ: “ನಾನಂತೂ ನಿಮಗೆ ನೀರಿನಿಂದ ದೀಕ್ಷಾಸ್ನಾನ ಮಾಡಿಸುತ್ತೇನೆ. ಆದರೆ ನನಗಿಂತ ಶಕ್ತರೊಬ್ಬರು ಬರುತ್ತಾರೆ, ಅವರ ಪಾದರಕ್ಷೆಗಳ ದಾರವನ್ನು ಬಿಚ್ಚುವ ಗುಲಾಮನಾಗಿರುವುದಕ್ಕೂ ನಾನು ಯೋಗ್ಯನಲ್ಲ. ಅವರು ಪವಿತ್ರಾತ್ಮನಿಂದಲೂ ಬೆಂಕಿಯಿಂದಲೂ ನಿಮಗೆ ದೀಕ್ಷಾಸ್ನಾನ ಮಾಡಿಸುವರು.

[17] ಮೊರವು ಅವರ ಕೈಯಲ್ಲಿದೆ, ಅವರು ತಮ್ಮ ಕಣವನ್ನು ಶುದ್ಧಮಾಡಿ ಗೋಧಿಯನ್ನು ತಮ್ಮ ಕಣಜದಲ್ಲಿ ಕೂಡಿಸುವರು. ಆದರೆ ಹೊಟ್ಟನ್ನು ಆರಿಸಲಾಗದ ಬೆಂಕಿಯಲ್ಲಿ ಸುಟ್ಟುಹಾಕುವರು,” ಎಂದು ಹೇಳಿದನು.

[18] ಯೋಹಾನನು ಇನ್ನೂ ಅನೇಕ ರೀತಿಗಳಿಂದ ಜನರನ್ನು ಎಚ್ಚರಿಸಿ ಅವರಿಗೆ ಸುವಾರ್ತೆಯನ್ನು ಸಾರುತ್ತಿದ್ದನು.

[19] ಚತುರಾಧಿಪತಿಯಾದ ಹೆರೋದನು, ತನ್ನ ಸಹೋದರ ಫಿಲಿಪ್ಪನ ಹೆಂಡತಿ ಹೆರೋದ್ಯಳನ್ನು ಇಟ್ಟುಕೊಂಡಿದ್ದನು ಮತ್ತು ಹೆರೋದನು ಮಾಡಿದ್ದ ಎಲ್ಲಾ ದುಷ್ಕೃತ್ಯಗಳಿಗಾಗಿ ಯೋಹಾನನು ಅವನನ್ನು ಬಹಿರಂಗವಾಗಿ ಗದರಿಸಿದ್ದರಿಂದ,

[20] ಹೆರೋದನು ಯೋಹಾನನನ್ನು ಸೆರೆಯಲ್ಲಿ ಬಂಧಿಸಿ, ತನ್ನ ಎಲ್ಲಾ ದುಷ್ಕೃತ್ಯಗಳೊಂದಿಗೆ ಮತ್ತೊಂದನ್ನು ಕೂಡಿಸಿದ್ದನು.

[21] ಜನರೆಲ್ಲಾ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿದ್ದರು, ಆಗ ಯೇಸು ಸಹ ದೀಕ್ಷಾಸ್ನಾನ ಮಾಡಿಸಿಕೊಂಡು ಪ್ರಾರ್ಥಿಸುತ್ತಿರುವಲ್ಲಿ, ಸ್ವರ್ಗವು ತೆರೆಯಿತು.

[22] ಆಗ ಪವಿತ್ರಾತ್ಮರು ದೇಹಾಕಾರವಾಗಿ ಪಾರಿವಾಳದಂತೆ ಯೇಸುವಿನ ಮೇಲೆ ಇಳಿದರು. ಆಗ, “ನೀನು ನನ್ನ ಪ್ರಿಯ ಪುತ್ರನು, ನಿನ್ನನ್ನು ಅಪಾರವಾಗಿ ಮೆಚ್ಚಿದ್ದೇನೆ,” ಎಂಬ ಧ್ವನಿಯು ಪರಲೋಕದಿಂದ ಕೇಳಿಬಂತು.

[23] ಯೇಸು ಸೇವೆಯನ್ನು ಪ್ರಾರಂಭಿಸಿದಾಗ ಹೆಚ್ಚು ಕಡಿಮೆ ಮೂವತ್ತು ವರ್ಷದವರಾಗಿದ್ದರು. ಯೇಸು ಜನರ ಎಣಿಕೆಯಲ್ಲಿ ಯೋಸೇಫನ ಮಗನು. ಯೋಸೇಫನು, ಹೇಲೀಯ ಮಗನು,

[24] ಹೇಲೀಯನು ಮತ್ಥಾತನ ಮಗನು, ಮತ್ಥಾತನನು ಲೇವಿಯ ಮಗನು, ಲೇವಿಯನು ಮೆಲ್ಖಿಯ ಮಗನು, ಮೆಲ್ಖಿಯನು ಯನ್ನಾಯನ ಮಗನು, ಯನ್ನಾಯನು ಯೋಸೇಫನ ಮಗನು,

[25] ಯೋಸೇಫನು ಮತ್ತಥೀಯನ ಮಗನು, ಮತ್ತಥೀಯನು ಆಮೋಸನ ಮಗನು, ಆಮೋಸನು ನಹೂಮನ ಮಗನು, ನಹೂಮನು ಎಸ್ಲಿಯ ಮಗನು, ಎಸ್ಲಿಯನು ನಗ್ಗಾಯನ ಮಗನು,

[26] ನಗ್ಗಾಯನು ಮಹಾಥನ ಮಗನು, ಮಹಾಥನು ಮತ್ತಥೀಯನ ಮಗನು, ಮತ್ತಥೀಯನು ಶಿಮೀಯಿನ ಮಗನು, ಶಿಮೀಯಿನು ಯೊಸೇಖನ ಮಗನು, ಯೊಸೇಖನು ಯೋದನ ಮಗನು,

[27] ಯೋದನು ಯೋಹಾನನ ಮಗನು, ಯೋಹಾನನು ರೇಸನ ಮಗನು, ರೇಸನು ಜೆರುಬ್ಬಾಬೆಲನ ಮಗನು, ಜೆರುಬ್ಬಾಬೆಲನು ಶೆಯಲ್ತೀಯೇಲನ ಮಗನು, ಶೆಯಲ್ತಿಯೇಲನು ನೇರಿಯನ ಮಗನು,

[28] ನೇರಿಯನು ಮೆಲ್ಖಿಯನ ಮಗನು, ಮೆಲ್ಖಿಯನು ಅದ್ದಿಯನ ಮಗನು, ಅದ್ದಿಯನು ಕೋಸಾಮನ ಮಗನು, ಕೋಸಾಮನು ಎಲ್ಮದಾಮನ ಮಗನು, ಎಲ್ಮದಾಮನು ಏರನ ಮಗನು,

[29] ಏರನು ಯೆಹೋಷುವನ ಮಗನು, ಯೆಹೋಷುವನು ಎಲೀಯೆಜೆರನ ಮಗನು, ಎಲಿಯೇಜರನು ಯೋರೈಮನ ಮಗನು, ಯೋರೈಮನು ಮತ್ಥಾತನ ಮಗನು, ಮತ್ಥಾತನು ಲೇವಿಯನ ಮಗನು,

[30] ಲೇವಿಯನು ಸಿಮಿಯೋನನ ಮಗನು, ಸಿಮಿಯೋನನು ಯೂದನ ಮಗನು, ಯೂದನು ಯೋಸೇಫನ ಮಗನು, ಯೋಸೇಫನು ಯೋನಾಮನ ಮಗನು, ಯೋನಾಮನು ಎಲಿಯಕೀಮನ ಮಗನು,

[31] ಎಲಿಯಕೀಮನು ಮೆಲೆಯಾನ ಮಗನು, ಮೆಲೆಯಾನು ಮೆನ್ನನ ಮಗನು, ಮೆನ್ನನು ಮತ್ತಾಥನ ಮಗನು, ಮತ್ತಾಥನು ನಾತಾನನ ಮಗನು, ನಾತಾನನು ದಾವೀದನ ಮಗನು,

[32] ದಾವೀದನು ಇಷಯನ ಮಗನು, ಇಷಯನು ಓಬೇದನ ಮಗನು, ಓಬೇದನು ಬೋವಜನ ಮಗನು, ಬೋವಜನು ಸಲ್ಮೋನನ ಮಗನು, ಸಲ್ಮೋನನು ನಹಶೋನನ ಮಗನು,

[33] ನಹಶೋನನು ಅಮ್ಮೀನಾದಾಬನ ಮಗನು, ಅಮ್ಮೀನಾದಾಬನು ಆರ್ನೈಯನ ಮಗನು, ಆರ್ನೈಯನು ಹೆಚ್ರೋನನ ಮಗನು, ಹೆಚ್ರೋನನು ಪೆರೆಸನ ಮಗನು, ಪೆರೆಸನು ಯೂದನ ಮಗನು,

[34] ಯೂದನು ಯಾಕೋಬನ ಮಗನು, ಯಾಕೋಬನು ಇಸಾಕನ ಮಗನು, ಇಸಾಕನು ಅಬ್ರಹಾಮನ ಮಗನು, ಅಬ್ರಹಾಮನು ತೇರನ ಮಗನು, ತೇರನು ನಹೋರನ ಮಗನು,

[35] ನಹೋರನು ಸೆರೂಗನ ಮಗನು, ಸೆರೂಗನು ರೆಗೂವನ ಮಗನು, ರೆಗೂವನು ಪೆಲೆಗನ ಮಗನು, ಪೆಲೆಗನು ಹೆಬೆರನ ಮಗನು, ಹೆಬೆರನು ಶೆಲಹ ಮಗನು,

[36] ಶೆಲಹ ಕಯಿನಾನನ ಮಗನು, ಕಯಿನಾನನು ಅರ್ಫಕ್ಷಾದನ ಮಗನು, ಅರ್ಫಕ್ಷಾದನು ಶೇಮನ ಮಗನು, ಶೇಮನು ನೋಹನ ಮಗನು, ನೋಹನು ಲಾಮೆಕನ ಮಗನು,

[37] ಲಾಮೆಕನು ಮತೂಷಲನ ಮಗನು, ಮತೂಷಲನು ಹನೋಕನ ಮಗನು, ಹನೋಕನು ಯೆರೆದನ ಮಗನು, ಯೆರೆದನು ಮಹಲಲೇಲನ ಮಗನು, ಮಹಲಲೇಲನು ಕಯಿನಾನನ ಮಗನು,

[38] ಕಯಿನಾನನು ಎನೋಷನ ಮಗನು, ಎನೋಷನು ಸೇಥನ ಮಗನು, ಸೇತನು ಆದಾಮನ ಮಗನು, ಆದಾಮನು ದೇವರ ಮಗನು.

ಲೂಕ — Chapters