Skip to content
Opens in a new window
Listen to this chapter • 7:26

[1] ನಿರಾಶರಾಗದೆ ಯಾವಾಗಲೂ ಪ್ರಾರ್ಥಿಸಬೇಕೆಂದು ಯೇಸು ತಮ್ಮ ಶಿಷ್ಯರಿಗೆ ಒಂದು ಸಾಮ್ಯವನ್ನು ಹೇಳಿದರು.

[2] “ಒಂದು ಪಟ್ಟಣದಲ್ಲಿ ಒಬ್ಬ ನ್ಯಾಯಾಧಿಪತಿ ಇದ್ದನು. ಅವನು ದೇವರಿಗೂ ಭಯಪಡುತ್ತಿರಲಿಲ್ಲ ಮನುಷ್ಯರಿಗೂ ಲಕ್ಷ್ಯಕೊಡುತ್ತಿರಲಿಲ್ಲ.

[3] ಅದೇ ಪಟ್ಟಣದಲ್ಲಿ ಒಬ್ಬ ವಿಧವೆಯಿದ್ದಳು. ಆಕೆ ಪದೇಪದೇ ಅವನ ಬಳಿಗೆ ಬಂದು, ‘ನನ್ನ ವಿರೋಧಿಯ ಎದುರಾಗಿ ನನಗೆ ನ್ಯಾಯ ದೊರಕಿಸಿಕೊಡು,’ ಎಂದು ಕೇಳಿಕೊಳ್ಳುತ್ತಿದ್ದಳು.

[4] “ಅವನು ಸ್ವಲ್ಪಕಾಲ ಆಕೆಗೆ ಗಮನಕೊಡಲಿಲ್ಲ. ತರುವಾಯ ಅವನು ತನ್ನೊಳಗೆ, ‘ನಾನು ದೇವರಿಗೆ ಭಯಪಡುವುದಿಲ್ಲ ಹಾಗೂ ಮನುಷ್ಯರಿಗೂ ಲಕ್ಷ್ಯಕೊಡುವುದಿಲ್ಲ,

[5] ಆದರೂ ಈ ವಿಧವೆಯು ನನಗೆ ತೊಂದರೆಕೊಟ್ಟು ಪದೇಪದೇ ನನ್ನ ಬಳಿಗೆ ಬಂದು, ನನ್ನನ್ನು ಕಾಡಿಸದಂತೆ ನಾನು ಅವಳಿಗೆ ನ್ಯಾಯತೀರಿಸುವೆನು,’ ” ಎಂದುಕೊಂಡನು.

[6] ಅನಂತರ ಕರ್ತದೇವರು, “ಈ ಅನ್ಯಾಯಗಾರನಾದ ನ್ಯಾಯಾಧಿಪತಿಯು ಹೇಳಿಕೊಂಡಿದ್ದನ್ನು ಕೇಳಿರಿ.

[7] ದೇವರಾದುಕೊಂಡವರು ದೇವರಿಗೆ ಹಗಲುರಾತ್ರಿ ಮೊರೆಯಿಡುವಾಗ, ದೇವರು ಅವರ ವಿಷಯದಲ್ಲಿ ಅವರಿಗೆ ನ್ಯಾಯವನ್ನು ಕೊಡದೆ ಇರುವರೋ? ದೇವರು ನ್ಯಾಯ ಕೊಡಲು ತಡಮಾಡುವರೋ?

[8] ದೇವರು ಬೇಗನೇ ಅವರಿಗೆ ನ್ಯಾಯತೀರಿಸುವರೆಂದು, ನಾನು ನಿಮಗೆ ಹೇಳುತ್ತೇನೆ. ಆದರೂ, ಮನುಷ್ಯಪುತ್ರನಾದ ನಾನು ಬಂದಾಗ ಭೂಮಿಯ ಮೇಲೆ ವಿಶ್ವಾಸವನ್ನು ಕಾಣುವೆನೋ?” ಎಂದರು.

[9] ತಾವು ನೀತಿವಂತರೆಂದು ತಮ್ಮಲ್ಲಿಯೇ ಭರವಸೆಯನ್ನಿಟ್ಟುಕೊಂಡು ಬೇರೆಯವರನ್ನು ಅಸಡ್ಡೆ ಮಾಡಿದ ಕೆಲವರಿಗೆ, ಯೇಸು ಈ ಸಾಮ್ಯವನ್ನು ಹೇಳಿದರು:

[10] “ಇಬ್ಬರು ಪ್ರಾರ್ಥನೆಮಾಡುವುದಕ್ಕೆ ದೇವಾಲಯಕ್ಕೆ ಹೋದರು. ಅವರಲ್ಲಿ ಒಬ್ಬನು ಫರಿಸಾಯನು ಮತ್ತೊಬ್ಬನು ಸುಂಕದವನು.

[11] ಫರಿಸಾಯನು ನಿಂತುಕೊಂಡು: ‘ದೇವರೇ, ಸುಲಿಗೆ ಮಾಡುವವರು, ಅನೀತಿವಂತರು, ವ್ಯಭಿಚಾರಿಗಳು ಆಗಿರುವ ಉಳಿದ ಜನರಂತೆ ನಾನಲ್ಲ, ಈ ಸುಂಕದವನಂತೆಯೂ ನಾನಲ್ಲ. ಆದ್ದರಿಂದ ನಾನು ನಿನಗೆ ಸ್ತೋತ್ರ ಮಾಡುತ್ತೇನೆ.

[12] ನಾನು ವಾರಕ್ಕೆ ಎರಡು ಸಾರಿ ಉಪವಾಸ ಮಾಡುತ್ತೇನೆ. ನನಗಿರುವ ಎಲ್ಲವುಗಳಲ್ಲಿ ದಶಾಂಶ ಕೊಡುತ್ತೇನೆ,’ ಎಂದು ಹೇಳಿ ತನಗೆ ತಾನೇ ಪ್ರಾರ್ಥಿಸಿದನು.

[13] “ಆದರೆ ಸುಂಕದವನು ದೂರದಲ್ಲಿ ನಿಂತು, ಆಕಾಶದ ಕಡೆಗೆ ಕಣ್ಣೆತ್ತಿ ನೋಡುವುದಕ್ಕೂ ಧೈರ್ಯಗೊಳ್ಳದೇ ತನ್ನ ಎದೆಯನ್ನು ಬಡಿದುಕೊಳ್ಳುತ್ತಾ, ‘ದೇವರೇ ಪಾಪಿಯಾದವನು ನಾನೇ ನನ್ನನ್ನು ಕರುಣಿಸು,’ ಎಂದು ಪ್ರಾರ್ಥಿಸಿದನು.

[14] “ನಾನು ನಿಮಗೆ ಹೇಳುತ್ತೇನೆ, ಅವನಲ್ಲ, ಇವನೇ ನೀತಿವಂತನೆಂಬ ನಿರ್ಣಯ ಪಡೆದವನಾಗಿ ತನ್ನ ಮನೆಗೆ ಹೋದನು. ಏಕೆಂದರೆ, ಯಾರಾದರೂ ತಮ್ಮನ್ನು ತಾವೇ ಹೆಚ್ಚಿಸಿಕೊಳ್ಳುವರೋ ಅವರು ತಗ್ಗಿಸಲಾಗುವರು ಮತ್ತು ತಮ್ಮನ್ನು ತಾವೇ ತಗ್ಗಿಸಿಕೊಳ್ಳುವವರು ಹೆಚ್ಚಿಸಲಾಗುವರು,” ಎಂದರು.

[15] ಚಿಕ್ಕಮಕ್ಕಳನ್ನು ಯೇಸು ಮುಟ್ಟುವಂತೆ ಕೆಲವರು ಚಿಕ್ಕಮಕ್ಕಳನ್ನು ಅವರ ಬಳಿಗೆ ತಂದರು ಆಗ ಅವರ ಶಿಷ್ಯರು ಇದನ್ನು ಕಂಡು, ಜನರನ್ನು ಗದರಿಸಿದರು.

[16] ಆದರೆ ಯೇಸುವೋ ಚಿಕ್ಕಮಕ್ಕಳನ್ನು ತಮ್ಮ ಹತ್ತಿರಕ್ಕೆ ಆಹ್ವಾನಿಸಿ ಶಿಷ್ಯರಿಗೆ, “ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಲು ಬಿಡಿರಿ. ಅವುಗಳಿಗೆ ಅಡ್ಡಿಮಾಡಬೇಡಿರಿ. ಏಕೆಂದರೆ ದೇವರ ರಾಜ್ಯವು ಇಂಥವರದೇ.

[17] ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಯಾರಾದರೂ ಚಿಕ್ಕಮಗುವಿನಂತೆ ದೇವರ ರಾಜ್ಯವನ್ನು ಸ್ವೀಕರಿಸದಿದ್ದರೆ, ಅವರು ಅದರೊಳಗೆ ಸೇರುವುದೇ ಇಲ್ಲ,” ಎಂದರು.

[18] ಒಬ್ಬ ಅಧಿಕಾರಿಯು ಯೇಸುವಿಗೆ, “ಒಳ್ಳೆಯ ಬೋಧಕರೇ, ನಾನು ನಿತ್ಯಜೀವವನ್ನು ಪ್ರಾಪ್ತಿಮಾಡಿಕೊಳ್ಳುವುದಕ್ಕೆ ಏನು ಮಾಡಬೇಕು?” ಎಂದು ಕೇಳಿದನು.

[19] ಅದಕ್ಕೆ ಯೇಸು ಅವನಿಗೆ, “ನೀನು ನನ್ನನ್ನು ಒಳ್ಳೆಯವನೆಂದು ಏಕೆ ಕರೆಯುತ್ತಿ? ದೇವರೊಬ್ಬರೇ ಹೊರತು ಬೇರೆ ಯಾರೂ ಒಳ್ಳೆಯವರಲ್ಲ.

[20] ‘ವ್ಯಭಿಚಾರ ಮಾಡಬಾರದು, ನರಹತ್ಯೆ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು, ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು,’ ಎಂಬ ಈ ಆಜ್ಞೆಗಳು ನಿನಗೆ ಗೊತ್ತಿವೆಯಲ್ಲಾ,” ಎಂದರು.

[21] ಅದಕ್ಕವನು, “ನನ್ನ ಬಾಲ್ಯದಿಂದಲೇ ನಾನು ಇವೆಲ್ಲವನ್ನೂ ಕೈಕೊಂಡಿದ್ದೇನೆ,” ಎಂದು ಹೇಳಿದನು.

[22] ಯೇಸು ಇವುಗಳನ್ನು ಕೇಳಿ ಅವನಿಗೆ, “ಆದರೂ ನಿನಗೆ ಒಂದು ಕೊರತೆ ಇದೆ. ನೀನು ಹೋಗಿ ನಿನಗೆ ಇರುವುದೆಲ್ಲವನ್ನು ಮಾರಿ ಬಡವರಿಗೆ ಕೊಡು; ಆಗ ಪರಲೋಕದಲ್ಲಿ ನಿನಗೆ ಸಂಪತ್ತಿರುವುದು ಮತ್ತು ನೀನು ಬಂದು ನನ್ನನ್ನು ಹಿಂಬಾಲಿಸು,” ಎಂದರು.

[23] ಅವನು ಇದನ್ನು ಕೇಳಿ, ಬಹಳ ದುಃಖವುಳ್ಳವನಾದನು. ಏಕೆಂದರೆ ಅವನು ಬಹಳ ಸಿರಿವಂತನಾಗಿದ್ದನು.

[24] ಅವನು ಬಹಳ ವ್ಯಥೆಗೊಂಡದ್ದನ್ನು ಯೇಸು ಕಂಡು, “ಐಶ್ವರ್ಯವಂತರು ದೇವರ ರಾಜ್ಯದಲ್ಲಿ ಸೇರುವುದು ಎಷ್ಟೋ ಕಷ್ಟ!

[25] ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವುದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಗ್ಗುವುದು ಸುಲಭ,” ಎಂದು ಹೇಳಿದರು.

[26] ಇದನ್ನು ಕೇಳಿದವರು, “ಹಾಗಾದರೆ ಯಾರು ರಕ್ಷಣೆ ಹೊಂದುವವರು?” ಎಂದರು.

[27] ಅದಕ್ಕೆ ಯೇಸು, “ಮನುಷ್ಯರಿಗೆ ಅಸಾಧ್ಯವಾದವುಗಳು ದೇವರಿಗೆ ಸಾಧ್ಯವಾಗಿವೆ,” ಎಂದು ಹೇಳಿದರು.

[28] ಆಗ ಪೇತ್ರನು, “ಇಗೋ, ನಾವು ಎಲ್ಲವನ್ನೂ ಬಿಟ್ಟು ನಿಮ್ಮನ್ನು ಹಿಂಬಾಲಿಸಿದ್ದೇವಲ್ಲ,” ಎಂದನು.

[29] ಯೇಸು ಅವರಿಗೆ, “ನಾನು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ, ಮನೆಯನ್ನಾದರೂ ಹೆಂಡತಿಯನ್ನಾದರೂ ಸಹೋದರರನ್ನಾದರೂ ತಂದೆತಾಯಿಗಳನ್ನಾದರೂ ಮಕ್ಕಳನ್ನಾದರೂ ದೇವರ ರಾಜ್ಯಕ್ಕೋಸ್ಕರ ಬಿಟ್ಟುಬಿಡುವವನು,

[30] ಈ ಕಾಲದಲ್ಲಿ ಅತ್ಯಧಿಕವಾದವುಗಳನ್ನೂ ಬರುವ ಕಾಲದಲ್ಲಿ ನಿತ್ಯಜೀವವನ್ನೂ ಹೊಂದುವನು,” ಎಂದರು.

[31] ಯೇಸು ಹನ್ನೆರಡು ಮಂದಿಯನ್ನು ಹತ್ತಿರಕ್ಕೆ ಕರೆದು ಅವರಿಗೆ, “ಇಗೋ, ನಾವು ಯೆರೂಸಲೇಮಿಗೆ ಹೋಗುತ್ತಿದ್ದೇವೆ, ಮನುಷ್ಯಪುತ್ರನಾದ ನನ್ನ ವಿಷಯದಲ್ಲಿ ಪ್ರವಾದಿಗಳಿಂದ ಬರೆದಿರುವುದೆಲ್ಲವೂ ನೆರವೇರಬೇಕು.

[32] ನಾನು ಯೆಹೂದ್ಯರಲ್ಲದವರ ಕೈಗೆ ಸೆರೆಯಾಗುವೆನು. ಅವರು ನನ್ನನ್ನು ಹಾಸ್ಯಮಾಡಿ, ನನಗೆ ಅವಮಾನ ಮಾಡಿ, ನನ್ನ ಮೇಲೆ ಉಗುಳುವರು.

[33] ಇದಲ್ಲದೆ ಅವರು ನನ್ನನ್ನು ಕೊರಡೆಗಳಿಂದ ಹೊಡೆದು, ಕೊಂದುಹಾಕುವರು. ಆದರೆ ನಾನು ಮೂರನೆಯ ದಿನ ಜೀವಿತನಾಗಿ ಎದ್ದು ಬರುವೆನು,” ಎಂದರು.

[34] ಆದರೆ ಶಿಷ್ಯರಿಗೆ ಇವುಗಳಲ್ಲಿ ಒಂದೂ ಅರ್ಥವಾಗಲಿಲ್ಲ. ಈ ಮಾತುಗಳು ಅವರಿಗೆ ಮರೆಯಾಗಿದ್ದುದರಿಂದ, ಯೇಸು ಹೇಳಿದವುಗಳನ್ನು ಅವರು ತಿಳಿದುಕೊಳ್ಳಲಿಲ್ಲ.

[35] ಯೇಸು ಯೆರಿಕೋವಿನ ಸಮೀಪಕ್ಕೆ ಬಂದಾಗ, ಒಬ್ಬ ಕುರುಡನು ದಾರಿಯ ಪಕ್ಕದಲ್ಲಿ ಕುಳಿತುಕೊಂಡು ಭಿಕ್ಷೆಬೇಡುತ್ತಿದ್ದನು.

[36] ಜನಸಮೂಹವು ಹಾದು ಹೋಗುವುದನ್ನು ಇವನು ಕೇಳಿಸಿಕೊಂಡು, ಅದೇನೆಂದು ವಿಚಾರಿಸಿದನು.

[37] “ನಜರೇತಿನ ಯೇಸು ಹಾದು ಹೋಗುತ್ತಿದ್ದಾರೆ,” ಎಂದು ಜನರು ಅವನಿಗೆ ಹೇಳಿದರು.

[38] ಆಗ ಅವನು, “ಯೇಸುವೇ, ದಾವೀದನ ಪುತ್ರನೇ, ನನ್ನನ್ನು ಕರುಣಿಸಿ!” ಎಂದು ಗಟ್ಟಿಯಾಗಿ ಕೂಗಿಕೊಂಡನು.

[39] ಮುಂದೆ ಹೋಗುತ್ತಿದ್ದವರು ಸುಮ್ಮನಿರುವಂತೆ ಅವನನ್ನು ಗದರಿಸಿದರು, ಆದರೂ ಅವನು, “ದಾವೀದನ ಪುತ್ರರೇ, ನನ್ನನ್ನು ಕರುಣಿಸಿ,” ಎಂದು ಮತ್ತಷ್ಟು ಹೆಚ್ಚಾಗಿ ಕೂಗಿಕೊಂಡನು.

[40] ಆಗ ಯೇಸು ನಿಂತು ಅವನನ್ನು ತಮ್ಮ ಬಳಿಗೆ ಕರೆತರುವಂತೆ ಅಪ್ಪಣೆಕೊಟ್ಟರು. ಅವನು ಯೇಸುವಿನ ಬಳಿಗೆ ಬಂದಾಗ, ಅವರು ಅವನಿಗೆ,

[41] “ನನ್ನಿಂದ ನಿನಗೇನಾಗಬೇಕು?” ಎಂದು ಕೇಳಿದರು. ಅದಕ್ಕವನು, “ಕರ್ತದೇವರೇ, ನನಗೆ ದೃಷ್ಟಿ ಕೊಡಿ,” ಎಂದನು.

[42] ಆಗ ಯೇಸು ಅವನಿಗೆ, “ನೀನು ದೃಷ್ಟಿ ಪಡೆ; ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಪಡಿಸಿದೆ,” ಎಂದರು.

[43] ಕೂಡಲೇ ಅವನು ದೃಷ್ಟಿಯನ್ನು ಪಡೆದನು. ಆಗ ಅವನು ದೇವರನ್ನು ಸ್ತುತಿಸುತ್ತಾ, ಯೇಸುವನ್ನು ಹಿಂಬಾಲಿಸಿದನು. ಎಲ್ಲಾ ಜನರು ಅದನ್ನು ಕಂಡು, ದೇವರಿಗೆ ಸ್ತೋತ್ರ ಸಲ್ಲಿಸಿದರು.

ಲೂಕ — Chapters