Skip to content
Opens in a new window
Listen to this chapter • 11:18

[1] ಪಸ್ಕವೆಂಬ, ಹುಳಿಯಿಲ್ಲದ ರೊಟ್ಟಿಯ ಹಬ್ಬವು ಸಮೀಪವಾಗಿತ್ತು.

[2] ಮುಖ್ಯಯಾಜಕರೂ ನಿಯಮ ಬೋಧಕರೂ ಯೇಸುವನ್ನು ಹೇಗೆ ಕೊಲ್ಲಬೇಕೆಂದು ಹುಡುಕುತ್ತಿದ್ದರು. ಆದರೆ ಅವರು ಜನರಿಗೆ ಭಯಪಟ್ಟರು.

[3] ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತ ಎಂದು ಕರೆಯಲಾಗುವ ಯೂದನಲ್ಲಿ, ಸೈತಾನನು ಪ್ರವೇಶಿಸಿದನು.

[4] ಅವನು ಮುಖ್ಯಯಾಜಕರ ಬಳಿಗೂ ದೇವಾಲಯದ ಕಾವಲಧಿಕಾರಿಗಳ ಬಳಿಗೂ ಹೋಗಿ ಯೇಸುವನ್ನು ಅವರಿಗೆ ಹಿಡಿದುಕೊಡುವ ವಿಧಾನವನ್ನು ಕುರಿತು ಅವರ ಕೂಡ ಚರ್ಚಿಸಿದನು.

[5] ಆಗ ಅವರು ಸಂತೋಷಪಟ್ಟು ಅವನಿಗೆ ಹಣ ಕೊಡುವುದಕ್ಕೆ ವಾಗ್ದಾನ ಮಾಡಿದರು.

[6] ಅವನೂ ಸಮ್ಮತಿಸಿ, ಜನಸಮೂಹವು ಇಲ್ಲದಿರುವಾಗ ಯೇಸುವನ್ನು ಅವರಿಗೆ ಹಿಡಿದುಕೊಡುವಂತೆ ಸಂದರ್ಭವನ್ನು ಕಾಯುತ್ತಿದ್ದನು.

[7] ಆಗ ಪಸ್ಕದ ಕುರಿಯು ಬಲಿಕೊಡಬೇಕಾಗಿದ್ದ ಹುಳಿಯಿಲ್ಲದ ರೊಟ್ಟಿಯ ಹಬ್ಬದ ದಿನ ಬಂದಿತು.

[8] ಯೇಸು ಪೇತ್ರ ಯೋಹಾನರನ್ನು ಕರೆದು, “ನೀವು ಹೋಗಿ ನಮಗೋಸ್ಕರ ಪಸ್ಕಭೋಜನವನ್ನು ಸಿದ್ಧಮಾಡಿರಿ,” ಎಂದರು.

[9] ಅವರು ಯೇಸುವಿಗೆ, “ನಾವು ಎಲ್ಲಿ ಸಿದ್ಧಮಾಡಬೇಕು?” ಎಂದರು.

[10] ಆಗ ಯೇಸು ಅವರಿಗೆ, “ನೀವು ಪಟ್ಟಣವನ್ನು ಪ್ರವೇಶಿಸಿದಾಗ, ಅಲ್ಲಿ ನೀರಿನ ಕೊಡವನ್ನು ಹೊತ್ತುಕೊಂಡಿರುವ ಒಬ್ಬನು ನಿಮ್ಮನ್ನು ಸಂಧಿಸುವನು. ಅವನು ಪ್ರವೇಶಿಸುವ ಮನೆಯೊಳಗೆ ನೀವು ಅವನ ಹಿಂದೆ ಹೋಗಿರಿ.

[11] ನೀವು ಆ ಮನೆಯ ಯಜಮಾನನಿಗೆ, ‘ನನ್ನ ಶಿಷ್ಯರೊಂದಿಗೆ ಪಸ್ಕಭೋಜನ ಮಾಡಲು ಅತಿಥಿಯ ಕೊಠಡಿ ಎಲ್ಲಿದೆ? ಎಂದು ಬೋಧಕರು ನಿನ್ನನ್ನು ಕೇಳುತ್ತಾರೆ’ ಎಂದು ಹೇಳಿರಿ.

[12] ಅವನು ಕ್ರಮಪಡಿಸಿದ ಮೇಲಂತಸ್ತಿನ ದೊಡ್ಡ ಕೊಠಡಿಯನ್ನು ನಿಮಗೆ ತೋರಿಸುವನು, ಅಲ್ಲಿಯೇ ಪಸ್ಕಭೋಜನ ಸಿದ್ಧಪಡಿಸಿರಿ,” ಎಂದರು.

[13] ಅವರು ಹೊರಟುಹೋಗಿ ಯೇಸು ತಮಗೆ ಹೇಳಿದಂತೆಯೇ ಕಂಡು, ಪಸ್ಕವನ್ನು ಸಿದ್ಧಮಾಡಿದರು.

[14] ನಿಶ್ಚಿತ ಸಮಯ ಬಂದಾಗ ಯೇಸು ಹನ್ನೆರಡು ಮಂದಿ ಅಪೊಸ್ತಲರ ಸಂಗಡ ಕುಳಿತುಕೊಂಡರು.

[15] ಆಗ ಯೇಸು ಅವರಿಗೆ, “ನಾನು ಬಾಧೆಯನ್ನು ಅನುಭವಿಸುವುದಕ್ಕಿಂತ ಮುಂಚೆ ನಿಮ್ಮ ಸಂಗಡ ಈ ಪಸ್ಕಭೋಜನ ಮಾಡುವುದಕ್ಕೆ ಕುತೂಹಲದಿಂದ ಅಪೇಕ್ಷಿಸಿದ್ದೇನೆ.

[16] ದೇವರ ರಾಜ್ಯದಲ್ಲಿ ಇದು ನೆರವೇರುವ ತನಕ ನಾನು ಇನ್ನು ಮೇಲೆ ಪಸ್ಕಭೋಜನ ಮಾಡುವುದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ,” ಎಂದರು.

[17] ಅನಂತರ ಯೇಸು ಪಾನಪಾತ್ರೆಯನ್ನು ತೆಗೆದುಕೊಂಡು, ಸ್ತೋತ್ರಮಾಡಿ, “ಇದನ್ನು ತೆಗೆದುಕೊಳ್ಳಿರಿ ಮತ್ತು ನಿಮ್ಮೊಳಗೆ ಹಂಚಿಕೊಳ್ಳಿರಿ.

[18] ದೇವರ ರಾಜ್ಯವು ಬರುವ ತನಕ ಇನ್ನು ನಾನು ದ್ರಾಕ್ಷಾರಸವನ್ನು ಕುಡಿಯುವುದೇ ಇಲ್ಲವೆಂದು ನಿಮಗೆ ಹೇಳುತ್ತೇನೆ,” ಎಂದರು.

[19] ಆಮೇಲೆ ಯೇಸು ರೊಟ್ಟಿಯನ್ನು ತೆಗೆದುಕೊಂಡು, ಸ್ತೋತ್ರಮಾಡಿ ಅದನ್ನು ಮುರಿದು ಶಿಷ್ಯರಿಗೆ ಕೊಟ್ಟು, “ಇದು ನಿಮಗೋಸ್ಕರ ಕೊಟ್ಟಿರುವ ನನ್ನ ದೇಹ, ನನ್ನ ನೆನಪಿಗಾಗಿ ನೀವು ಇದನ್ನು ಮಾಡಿರಿ,” ಎಂದರು.

[20] ಅದೇ ಪ್ರಕಾರ, ಭೋಜನವಾದ ಮೇಲೆ ಪಾನಪಾತ್ರೆಯನ್ನು ತೆಗೆದುಕೊಂಡು, “ಈ ಪಾತ್ರೆಯು ನಿಮಗೋಸ್ಕರ ಸುರಿಸಲಾಗುವ, ನನ್ನ ರಕ್ತದಿಂದಾದ ಹೊಸ ಒಡಂಬಡಿಕೆಯಾಗಿದೆ.

[21] ಆದರೂ ಇಗೋ, ನನಗೆ ದ್ರೋಹಬಗೆಯುವವನ ಕೈ ನನ್ನ ಕೈಯೊಂದಿಗೆ ಮೇಜಿನ ಮೇಲೆ ಇದೆ.

[22] ನೇಮಕವಾದ ಪ್ರಕಾರ ಮನುಷ್ಯಪುತ್ರನಾದ ನಾನು ಹೊರಟುಹೋಗುತ್ತೇನೆ; ಆದರೆ ನನಗೆ ದ್ರೋಹಬಗೆಯುವವನಿಗೋ ಎಷ್ಟೋ ಕಷ್ಟ!” ಎಂದು ಹೇಳಿದರು.

[23] ಆಗ ಇದನ್ನು ದ್ರೋಹಬಗೆಯುವವನು ಯಾವನು ಎಂದು ಶಿಷ್ಯರು ತಮ್ಮೊಳಗೆ ಪ್ರಶ್ನೆ ಮಾಡಲಾರಂಭಿಸಿದರು.

[24] ಇದಲ್ಲದೆ ತಮ್ಮೊಳಗೆ ಯಾರು ಅತಿ ದೊಡ್ಡವನೆಂಬುದಾಗಿ ಶಿಷ್ಯರಲ್ಲಿ ವಿವಾದವು ಪ್ರಾರಂಭವಾಯಿತು.

[25] ಆಗ ಯೇಸು ಅವರಿಗೆ, “ಯೆಹೂದ್ಯರಲ್ಲದವರ ಅರಸರು ತಮ್ಮ ಜನರ ಮೇಲೆ ದೊರೆತನ ಮಾಡುತ್ತಾರೆ; ಅವರ ಮೇಲೆ ಅಧಿಕಾರವನ್ನು ನಡೆಸುವವರು ಉಪಕಾರಿಗಳು ಎಂದು ಎಣಿಸಿಕೊಳ್ಳುತ್ತಾರೆ.

[26] ಆದರೆ ನೀವು ಹಾಗಿರಬಾರದು. ನಿಮ್ಮೊಳಗೆ ಅತಿ ದೊಡ್ಡವನಾಗಿರುವವನು ಅತಿ ಚಿಕ್ಕವನಂತೆ ಇರಲಿ ಮತ್ತು ಆಳ್ವಿಕೆ ಮಾಡುವವನು ಸೇವೆ ಮಾಡುವವನಂತೆ ಇರಲಿ.

[27] ಯಾರು ದೊಡ್ಡವನು? ಊಟಕ್ಕೆ ಕುಳಿತುಕೊಂಡಿರುವವನೋ ಅಥವಾ ಸೇವೆ ಮಾಡುವವನೋ? ಊಟಕ್ಕೆ ಕುಳಿತುಕೊಂಡವನಲ್ಲವೋ? ಆದರೆ ನಾನು ನಿಮ್ಮೊಳಗೆ ಸೇವೆ ಮಾಡುವವನಂತಿದ್ದೇನೆ.

[28] ನೀವೇ, ನನ್ನ ಕಷ್ಟಗಳಲ್ಲಿ ನನ್ನೊಂದಿಗೆ ನಿಂತವರು.

[29] ನನ್ನ ತಂದೆ ನನಗೆ ರಾಜ್ಯವನ್ನು ನೇಮಕ ಮಾಡಿದ ಹಾಗೆಯೇ, ನಾನೂ ನಿಮಗೆ ರಾಜ್ಯವನ್ನು ನೇಮಕ ಮಾಡುತ್ತೇನೆ.

[30] ಹೀಗೆ ನೀವು ನನ್ನ ರಾಜ್ಯದಲ್ಲಿ ನನ್ನ ಮೇಜಿನ ಬಳಿಯಲ್ಲಿ ಊಟಮಾಡಿ ಪಾನೀಯವನ್ನು ಸೇವಿಸುವಿರಿ ಮತ್ತು ಸಿಂಹಾಸನಗಳ ಮೇಲೆ ಕುಳಿತುಕೊಂಡು, ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ.

[31] “ಸೀಮೋನನೇ, ಸೀಮೋನನೇ, ಇಗೋ, ಸೈತಾನನು ನಿಮ್ಮೆಲ್ಲರನ್ನೂ ಗೋಧಿಯಂತೆ ತೂರಬೇಕೆಂದು ಅಪ್ಪಣೆ ಕೇಳಿದ್ದಾನೆ.

[32] ಆದರೆ ನಿನ್ನ ನಂಬಿಕೆಯು ಕುಂದದಂತೆ ನಾನು ನಿನಗೋಸ್ಕರ ಬೇಡಿಕೊಂಡಿದ್ದೇನೆ. ನೀನು ತಿರುಗಿಕೊಂಡ ಮೇಲೆ ನಿನ್ನ ಸಹೋದರರನ್ನು ಬಲಪಡಿಸು,” ಎಂದು ಹೇಳಿದರು.

[33] ಆದರೆ ಅವನು ಯೇಸುವಿಗೆ, “ಕರ್ತದೇವರೇ, ನಾನು ನಿಮ್ಮ ಜೊತೆಯಲ್ಲಿ ಸೆರೆಮನೆಗೆ ಹೋಗುವುದಕ್ಕೂ ಸಾಯುವುದಕ್ಕೂ ಸಿದ್ಧನಾಗಿದ್ದೇನೆ,” ಎಂದನು.

[34] ಆಗ ಯೇಸು, “ಪೇತ್ರನೇ, ನೀನು ನನ್ನನ್ನು ಅರಿಯೆನೆಂದು ಮೂರು ಸಾರಿ ಅಲ್ಲಗಳೆಯುವುದಕ್ಕಿಂತ ಮುಂಚೆ, ಈ ದಿವಸ ಹುಂಜ ಕೂಗುವುದಿಲ್ಲ ಎಂದು ನಿನಗೆ ಹೇಳುತ್ತೇನೆ,” ಎಂದರು.

[35] ನಂತರ ಯೇಸು ಅವರಿಗೆ, “ನಾನು ನಿಮ್ಮನ್ನು ಹಣದ ಚೀಲ, ಪ್ರಯಾಣದ ಚೀಲ ಮತ್ತು ಪಾದರಕ್ಷೆಗಳಿಲ್ಲದೆ ಕಳುಹಿಸಿದಾಗ ನೀವು ಏನಾದರೂ ಕೊರತೆಪಟ್ಟಿರೋ?” ಎಂದು ಕೇಳಲು, ಶಿಷ್ಯರು, “ಏನೂ ಇಲ್ಲ,” ಎಂದರು.

[36] ಆಗ ಯೇಸು ಅವರಿಗೆ, “ಆದರೆ ಈಗ ಹಣದ ಚೀಲ ಇದ್ದವನು ಅದನ್ನು ತೆಗೆದುಕೊಳ್ಳಲಿ. ಅದರಂತೆಯೇ ಪ್ರಯಾಣದ ಚೀಲ ಇದ್ದವನು ಅದನ್ನು ತೆಗೆದುಕೊಳ್ಳಲಿ. ಖಡ್ಗಯಿಲ್ಲದವನು ತನ್ನ ಬಟ್ಟೆಯನ್ನು ಮಾರಿ ಅದನ್ನು ಕೊಂಡುಕೊಳ್ಳಲಿ.

[37] ಏಕೆಂದರೆ, ‘ಆತನು ಪಾತಕರಲ್ಲಿ ಒಬ್ಬನಂತೆ ಎಣಿಸಿಕೊಂಡನು,’ ಎಂಬುದಾಗಿ ಪವಿತ್ರ ವೇದದಲ್ಲಿ ಬರೆದಿರುವುದೆಲ್ಲವೂ ನೆರವೇರಬೇಕು ಎಂದು ನಾನು ನಿಮಗೆ ಹೇಳುತ್ತೇನೆ. ಹೌದು, ನನ್ನ ವಿಷಯವಾಗಿ ಬರೆದದ್ದು ನೆರವೇರಲಿದೆ,” ಎಂದರು.

[38] ಶಿಷ್ಯರು, “ಕರ್ತದೇವರೇ, ಇಗೋ ಇಲ್ಲಿ ಎರಡು ಖಡ್ಗಗಳಿವೆ,” ಎಂದರು. ಅದಕ್ಕೆ ಯೇಸು ಅವರಿಗೆ, “ಅಷ್ಟು ಸಾಕು,” ಎಂದರು.

[39] ಯೇಸು ಹೊರಗೆ ಬಂದು ತಮ್ಮ ವಾಡಿಕೆಯಂತೆ ಓಲಿವ್ ಗುಡ್ಡಕ್ಕೆ ಹೋದರು. ಯೇಸುವಿನ ಶಿಷ್ಯರೂ ಅವರನ್ನು ಹಿಂಬಾಲಿಸಿದರು.

[40] ಯೇಸು ಆ ಸ್ಥಳದಲ್ಲಿದ್ದಾಗ ಅವರಿಗೆ, “ನೀವು ಶೋಧನೆಗೆ ಒಳಗಾಗದಂತೆ ಪ್ರಾರ್ಥಿಸಿರಿ,” ಎಂದರು.

[41] ಯೇಸು ಅವರಿಂದ ಒಂದು ಕಲ್ಲೆಸೆಯುವಷ್ಟು ದೂರಹೋಗಿ ಮೊಣಕಾಲೂರಿ,

[42] “ತಂದೆಯೇ, ನಿಮ್ಮ ಚಿತ್ತವಿದ್ದರೆ ಈ ಪಾತ್ರೆಯನ್ನು ನನ್ನಿಂದ ತೊಲಗಿಸಿ. ಆದರೂ ನನ್ನ ಚಿತ್ತವಲ್ಲ ನಿಮ್ಮ ಚಿತ್ತದಂತೆಯೇ ಆಗಲಿ,” ಎಂದು ಪ್ರಾರ್ಥಿಸಿದರು.

[43] ಆಗ ಪರಲೋಕದಿಂದ ಒಬ್ಬ ದೇವದೂತನು ಯೇಸುವಿಗೆ ಕಾಣಿಸಿಕೊಂಡು, ಅವರನ್ನು ಬಲಪಡಿಸುತ್ತಾ ಇದ್ದನು.

[44] ಯೇಸು ವೇದನೆಯಲ್ಲಿದ್ದು ಬಹಳ ಆಸಕ್ತಿಯಿಂದ ಪ್ರಾರ್ಥಿಸಿದರು. ಯೇಸುವಿನ ಬೆವರು ನೆಲಕ್ಕೆ ಬೀಳುತ್ತಿರುವ ರಕ್ತದ ದೊಡ್ಡ ಹನಿಗಳಂತಿದ್ದವು.

[45] ಯೇಸು ಪ್ರಾರ್ಥನೆಮಾಡಿ ಎದ್ದ ಮೇಲೆ ತಮ್ಮ ಶಿಷ್ಯರ ಕಡೆಗೆ ಬಂದು, ಅವರು ದುಃಖದಿಂದ ಬಳಲಿ ನಿದ್ರೆ ಮಾಡುತ್ತಿರುವುದನ್ನು ಕಂಡು ಅವರಿಗೆ,

[46] “ನೀವು ನಿದ್ರೆ ಮಾಡುವುದು ಏಕೆ? ಶೋಧನೆಗೆ ಒಳಗಾಗದಂತೆ ಎದ್ದು ಪ್ರಾರ್ಥಿಸಿರಿ,” ಎಂದರು.

[47] ಯೇಸು ಇನ್ನೂ ಮಾತನಾಡುತ್ತಿರುವಾಗಲೇ, ಜನರ ಗುಂಪು ಕಾಣಿಸಿತು. ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾಗಿದ್ದ ಯೂದನು ಅವರಿಗೆ ಮುಂದಾಳಾಗಿ ಬಂದು, ಮುದ್ದಿಡುವುದಕ್ಕಾಗಿ ಯೇಸುವನ್ನು ಸಮೀಪಿಸಿದನು.

[48] ಆಗ ಯೇಸು ಅವನಿಗೆ, “ಯೂದಾ, ಮುದ್ದಿನಿಂದ ಮನುಷ್ಯಪುತ್ರನಾದ ನನಗೆ ದ್ರೋಹಮಾಡುತ್ತೀಯೋ?” ಎಂದರು.

[49] ಯೇಸುವಿನ ಸುತ್ತಲಿದ್ದ ಶಿಷ್ಯರು ಮುಂದೆ ಸಂಭವಿಸುವುದನ್ನು ಅರಿತು ಯೇಸುವಿಗೆ, “ಕರ್ತದೇವರೇ, ನಾವು ಖಡ್ಗದಿಂದ ಹೊಡೆಯೋಣವೋ?” ಎಂದು ಕೇಳಿದರು.

[50] ಅವರಲ್ಲಿ ಒಬ್ಬನು ಮಹಾಯಾಜಕನ ಆಳನ್ನು ಹೊಡೆದು, ಅವನ ಬಲಗಿವಿಯನ್ನು ಕತ್ತರಿಸಿದನು.

[51] ಆದರೆ ಯೇಸು, “ಸಾಕು ಇಂಥದ್ದು ಬೇಡ!” ಎಂದು ಹೇಳಿ, ಅವನ ಕಿವಿಯನ್ನು ಮುಟ್ಟಿ ಸ್ವಸ್ಥಮಾಡಿದರು.

[52] ಆಗ ಯೇಸು ತಮ್ಮ ಬಳಿಗೆ ಬಂದಿದ್ದ ಮುಖ್ಯಯಾಜಕರಿಗೂ ದೇವಾಲಯದ ಕಾವಲಾಧಿಕಾರಿಗಳಿಗೂ ಹಿರಿಯರಿಗೂ, “ದಂಗೆಗಾರನನ್ನು ಹಿಡಿಯುವುದಕ್ಕಾಗಿ ಬಂದ ಹಾಗೆ ಖಡ್ಗಗಳಿಂದಲೂ ದೊಣ್ಣೆಗಳಿಂದಲೂ ನೀವು ಹೊರಟು ಬಂದಿರುವಿರೋ?

[53] ನಾನು ನಿಮ್ಮ ಸಂಗಡ ಪ್ರತಿದಿನವೂ ದೇವಾಲಯದಲ್ಲಿದ್ದಾಗ, ನೀವು ನನ್ನನ್ನು ಹಿಡಿಯಲಿಲ್ಲ. ಆದರೆ ಇದು ನಿಮ್ಮ ಸಮಯ, ಅಂಧಕಾರ ದೊರೆತನ ಮಾಡುವ ಕಾಲ,” ಎಂದರು.

[54] ಆಗ ಅವರು ಯೇಸುವನ್ನು ಬಂಧಿಸಿ, ಮಹಾಯಾಜಕನ ಭವನಕ್ಕೆ ಕರೆದುಕೊಂಡು ಬಂದರು. ಪೇತ್ರನೋ ದೂರದಿಂದ ಹಿಂಬಾಲಿಸಿದನು.

[55] ಅವರು ಭವನದ ಹೊರಾಂಗಣದ ನಡುವೆ ಬೆಂಕಿಮಾಡಿ, ಅದರ ಸುತ್ತಲೂ ಒಟ್ಟಾಗಿ ಕುಳಿತುಕೊಂಡಾಗ ಪೇತ್ರನೂ ಅವರ ಸಂಗಡ ಸೇರಿ ಕುಳಿತುಕೊಂಡನು.

[56] ಆದರೆ ಒಬ್ಬ ದಾಸಿಯು ಬೆಂಕಿಯ ಬಳಿಯಲ್ಲಿ ಕುಳಿತುಕೊಂಡಿದ್ದ ಪೇತ್ರನನ್ನು ದೃಷ್ಟಿಸಿ ನೋಡಿ, “ಈ ಮನುಷ್ಯನು ಸಹ ಯೇಸುವಿನ ಸಂಗಡ ಇದ್ದವನು,” ಎಂದಳು.

[57] ಆದರೆ ಪೇತ್ರನು ಅಲ್ಲಗಳೆದು, “ಅಮ್ಮಾ, ನಾನು ಯೇಸುವನ್ನು ಅರಿಯೆನು,” ಎಂದನು.

[58] ಸ್ವಲ್ಪ ಸಮಯದ ಮೇಲೆ ಮತ್ತೊಬ್ಬನು ಪೇತ್ರನನ್ನು ಕಂಡು, “ನೀನು ಸಹ ಅವರಲ್ಲಿ ಒಬ್ಬನು,” ಎಂದನು. ಅದಕ್ಕೆ ಪೇತ್ರನು, “ಇಲ್ಲಪ್ಪ, ನಾನಲ್ಲ,” ಎಂದನು.

[59] ಹೆಚ್ಚು ಕಡಿಮೆ ಒಂದು ತಾಸು ಕಳೆದನಂತರ ಮತ್ತೊಬ್ಬನು, “ನಿಜವಾಗಿಯೂ ಇವನು ಸಹ ಯೇಸುವಿನೊಂದಿಗೆ ಇದ್ದವನು. ಏಕೆಂದರೆ ಇವನು ಗಲಿಲಾಯದವನೇ,” ಎಂದನು.

[60] ಆದರೆ ಪೇತ್ರನು, “ಅಯ್ಯಾ, ನೀನು ಏನು ಹೇಳುತ್ತೀಯೋ ನನಗೆ ಅರ್ಥವಾಗುತ್ತಾಯಿಲ್ಲ,” ಎಂದನು. ಹೀಗೆ ಅವನು ಇನ್ನೂ ಮಾತನಾಡುತ್ತಿರುವಾಗಲೇ ಹುಂಜ ಕೂಗಿತು.

[61] ಆಗ ಕರ್ತದೇವರು ಹಿಂದಿರುಗಿ ಪೇತ್ರನ ಕಡೆಗೆ ದಿಟ್ಟಿಸಿ ನೋಡಿದರು. “ಹುಂಜ ಕೂಗುವುದಕ್ಕಿಂತ ಮುಂಚಿತವಾಗಿ ಮೂರು ಸಾರಿ ನೀನು ನನ್ನನ್ನು ನಿರಾಕರಿಸುವೆ,” ಎಂದು ಕರ್ತದೇವರು ತನಗೆ ಹೇಳಿದ್ದ ಮಾತನ್ನು ಪೇತ್ರನು ಜ್ಞಾಪಕಮಾಡಿಕೊಂಡು

[62] ಹೊರಗೆ ಹೋಗಿ ಬಹಳವಾಗಿ ವ್ಯಥೆಪಟ್ಟು ಅತ್ತನು.

[63] ಯೇಸುವನ್ನು ಕಾಯುತ್ತಿದ್ದ ಜನರು, ಹಾಸ್ಯಮಾಡಿ ಅವರನ್ನು ಹೊಡೆದರು.

[64] ಇದಲ್ಲದೆ ಅವರು ಯೇಸುವಿನ ಕಣ್ಣಿಗೆ ಬಟ್ಟೆ ಕಟ್ಟಿ, ಅವರ ಮುಖದ ಮೇಲೆ ಹೊಡೆದು ಯೇಸುವಿಗೆ, “ನಿನ್ನನ್ನು ಹೊಡೆದವರು ಯಾರು? ಪ್ರವಾದನೆ ಹೇಳು,” ಎಂದರು.

[65] ಅವರು ಯೇಸುವಿಗೆ ವಿರೋಧವಾಗಿ ಅನೇಕ ದೂಷಣೆಯ ಮಾತುಗಳನ್ನಾಡಿದರು.

[66] ಬೆಳಗಾದ ಕೂಡಲೇ ಜನರ ಹಿರಿಯರೂ ಮುಖ್ಯಯಾಜಕರೂ ನಿಯಮ ಬೋಧಕರೂ ಒಟ್ಟಾಗಿ ಬಂದು ಯೇಸುವನ್ನು ತಮ್ಮ ಆಲೋಚನಾ ಸಭೆಗೆ ಸಾಗಿಸಿಕೊಂಡು ಹೋಗಿ,

[67] “ನೀನು ಆ ಕ್ರಿಸ್ತನೋ? ನಮಗೆ ಹೇಳು,” ಎಂದರು. ಯೇಸು ಅವರಿಗೆ, “ನಾನು ನಿಮಗೆ ಹೇಳಿದರೂ ನೀವು ನಂಬುವುದಿಲ್ಲ.

[68] ನಾನು ನಿಮ್ಮನ್ನು ಕೇಳಿದರೂ ನೀವು ಉತ್ತರ ಕೊಡುವುದಿಲ್ಲ.

[69] ಆದರೆ ಇಂದಿನಿಂದ ಮನುಷ್ಯಪುತ್ರನಾದ ನಾನು ಸರ್ವಶಕ್ತರಾದ ದೇವರ ಬಲಗಡೆಯಲ್ಲಿ ಕುಳಿತುಕೊಂಡಿರುವೆನು,” ಎಂದರು.

[70] ಆಗ ಅವರೆಲ್ಲರೂ, “ಹಾಗಾದರೆ ನೀನು ದೇವರ ಪುತ್ರನೋ?” ಎಂದು ಕೇಳಿದರು. ಅದಕ್ಕೆ ಯೇಸು ಅವರಿಗೆ, “ನಾನೇ ಆತನು ಎಂದು ನೀವೇ ಹೇಳುತ್ತಿದ್ದೀರಿ,” ಎಂದು ಉತ್ತರಕೊಟ್ಟರು.

[71] ಆಗ ಅವರು, “ನಮಗೆ ಇನ್ನೇನು ಸಾಕ್ಷಿ ಬೇಕು? ನಾವೇ ಈತನ ಬಾಯಿಂದ ಕೇಳಿದ್ದೇವಲ್ಲಾ?” ಎಂದರು.

ಲೂಕ — Chapters