Skip to content
Opens in a new window
Listen to this chapter • 10:32

[1] ಇದಾದ ಮೇಲೆ, ಯೇಸು ಪ್ರತಿಯೊಂದು ಪಟ್ಟಣಕ್ಕೂ ಹಳ್ಳಿಗೂ ಹೋಗಿ, ದೇವರ ರಾಜ್ಯದ ವಿಷಯ ಪ್ರಚಾರ ಮಾಡುತ್ತಾ ಸುವಾರ್ತೆಯನ್ನು ಸಾರುತ್ತಾ ಇದ್ದರು. ಹನ್ನೆರಡು ಮಂದಿ ಶಿಷ್ಯರು ಅವರೊಂದಿಗೆ ಇದ್ದರು.

[2] ಇದಲ್ಲದೆ ದುರಾತ್ಮಗಳಿಂದಲೂ ರೋಗಗಳಿಂದಲೂ ಬಿಡುಗಡೆ ಹೊಂದಿದ ಕೆಲವು ಸ್ತ್ರೀಯರು ಮತ್ತು ಏಳು ದೆವ್ವಗಳು ಬಿಟ್ಟುಹೋಗಿದ್ದ ಮಗ್ದಲಿನ ಎಂದು ಕರೆಯಲಾದ ಮರಿಯಳು,

[3] ಹೆರೋದನ ಅರಮನೆಯ ಗೃಹ ನಿರ್ವಾಹಕನಾದ ಕೂಜನ ಪತ್ನಿ ಯೋಹಾನಳು, ಸುಸನ್ನಳು ಮತ್ತು ಬೇರೆ ಅನೇಕರು ತಮ್ಮ ಆಸ್ತಿಯಿಂದ ಯೇಸುವಿಗೂ ಅವರ ಶಿಷ್ಯರಿಗೂ ಉಪಚಾರಮಾಡುತ್ತಿದ್ದರು.

[4] ಪ್ರತಿಯೊಂದು ಪಟ್ಟಣದಿಂದ ಬಹುಜನರು ಅವರ ಬಳಿಗೆ ಒಟ್ಟಾಗಿ ಸೇರಿ ಬರಲು ಯೇಸು ಒಂದು ಸಾಮ್ಯವನ್ನು ಅವರಿಗೆ ಹೇಳಿದರು.

[5] “ಒಬ್ಬ ರೈತನು ಬಿತ್ತುವುದಕ್ಕೆ ಹೊರಟನು. ಅವನು ಬಿತ್ತುತ್ತಿರುವಾಗ, ಕೆಲವು ಬೀಜಗಳು ದಾರಿಯ ಪಕ್ಕದಲ್ಲಿ ಬಿದ್ದವು; ಅವು ಕಾಲ್ತುಳಿತಕ್ಕೆ ಒಳಗಾದವು, ಆಕಾಶದ ಪಕ್ಷಿಗಳು ಅವುಗಳನ್ನು ಹೆಕ್ಕಿ ತಿಂದವು.

[6] ಇದಲ್ಲದೆ ಕೆಲವು ಬೀಜಗಳು ಕಲ್ಲುಭೂಮಿಯ ಮೇಲೆ ಬಿದ್ದವು, ಅವು ಮೊಳೆತ ಕೂಡಲೇ ತೇವ ಇಲ್ಲದಿರುವ ಕಾರಣ ಒಣಗಿಹೋದವು.

[7] ಇನ್ನು ಕೆಲವು ಮುಳ್ಳುಗಿಡಗಳ ಮಧ್ಯದಲ್ಲಿ ಬಿದ್ದವು, ಆಗ ಮುಳ್ಳುಗಿಡಗಳು ಅವುಗಳೊಂದಿಗೆ ಬೆಳೆದು ಅವುಗಳನ್ನು ಅಡಗಿಸಿಬಿಟ್ಟವು.

[8] ಉಳಿದ ಬೀಜಗಳು ಒಳ್ಳೆಯ ನೆಲದ ಮೇಲೆ ಬಿದ್ದವು. ಆಗ ಅವು ಬೆಳೆದು ನೂರರಷ್ಟು ಫಲಕೊಟ್ಟವು.” ಇದನ್ನು ಯೇಸು ಹೇಳಿ, “ಕೇಳುವುದಕ್ಕೆ ಕಿವಿಯುಳ್ಳವರು ಕೇಳಲಿ,” ಎಂದು ಒತ್ತಿ ಹೇಳಿದರು.

[9] ಯೇಸುವಿನ ಶಿಷ್ಯರು ಅವರನ್ನು ಈ ಸಾಮ್ಯದ ಅರ್ಥ ಏನಾಗಿರಬಹುದು? ಎಂದು ಕೇಳಿದರು.

[10] ಅದಕ್ಕೆ ಯೇಸು, “ದೇವರ ರಾಜ್ಯದ ರಹಸ್ಯಗಳನ್ನು ತಿಳಿದುಕೊಳ್ಳುವುದಕ್ಕೆ ನಿಮಗೆ ಅನುಮತಿಸಲಾಗಿದೆ, ಆದರೆ ಉಳಿದವರಿಗೆ, “ ‘ಅವರು ಕಣ್ಣಾರೆ ನೋಡಿದರೂ ಕಾಣದಂತೆಯೂ; ಮತ್ತು ಕೇಳಿದರೂ ಗ್ರಹಿಸದಂತೆ ಸಾಮ್ಯಗಳಲ್ಲಿ ಮರೆಯಾಗಿವೆ.’

[11] “ಆ ಸಾಮ್ಯದ ಅರ್ಥ ಹೀಗಿದೆ: ಬೀಜ ಎಂದರೆ ದೇವರ ವಾಕ್ಯ.

[12] ವಾಕ್ಯವನ್ನು ಕೇಳಿದವರು ನಂಬಿ ರಕ್ಷಣೆ ಹೊಂದಿಕೊಳ್ಳದಂತೆ, ಪಿಶಾಚನು ಬಂದು ಅವರ ಹೃದಯದೊಳಗಿಂದ, ಆ ವಾಕ್ಯವನ್ನು ತೆಗೆದುಬಿಡುತ್ತಾನೆ, ಇವರೇ ಆ ಬೀಜಗಳು ಬಿದ್ದ ಪಕ್ಕದ ದಾರಿಯಾಗಿದ್ದಾರೆ.

[13] ಬೀಜ ಬಿದ್ದ ಕಲ್ಲುಭೂಮಿಯು ಯಾರೆಂದರೆ ವಾಕ್ಯವನ್ನು ಕೇಳಿದಾಗ ಸಂತೋಷದಿಂದ ಸ್ವೀಕರಿಸುವವರು, ಆದರೆ ಇವರು ಬೇರಿಲ್ಲದಿರುವುದರಿಂದ, ಸ್ವಲ್ಪಕಾಲ ನಂಬಿ, ಶೋಧನೆ ಬಂದಾಗ ಬಿದ್ದುಹೋಗುವವರು.

[14] ಬೀಜ ಬಿದ್ದ ಮುಳ್ಳುನೆಲವು ಯಾರೆಂದರೆ ವಾಕ್ಯವನ್ನು ಕೇಳಿದ ಮೇಲೆ ಮುಂದುವರಿದು, ಈ ಜೀವನದ ಚಿಂತೆಗಳಿಂದಲೂ ಐಶ್ವರ್ಯಗಳಿಂದಲೂ ಮತ್ತು ಭೋಗಗಳಿಂದಲೂ ಅದುಮಿಬಿಟ್ಟು, ಪರಿಪಕ್ವತೆಗೆ ಫಲಕೊಡದಿದ್ದವರು.

[15] ಆದರೆ ಬೀಜ ಬಿದ್ದ ಒಳ್ಳೆಯ ಭೂಮಿಯವರು ಯಾರೆಂದರೆ ಯಥಾರ್ಥವಾದ ಒಳ್ಳೆಯ ಹೃದಯದಿಂದ, ವಾಕ್ಯವನ್ನು ಕೇಳಿ ಅದನ್ನು ಕೈಕೊಂಡು, ತಾಳ್ಮೆಯಿಂದ ಫಲಿಸುವವರೇ,” ಎಂದು ಹೇಳಿದರು.

[16] “ದೀಪವನ್ನು ಹಚ್ಚಿ ಯಾರೂ ಅದನ್ನು ಪಾತ್ರೆಯಿಂದ ಮುಚ್ಚುವುದಿಲ್ಲ, ಇಲ್ಲವೆ ಮಂಚದ ಕೆಳಗೆ ಇಡುವುದಿಲ್ಲ. ಆದರೆ ಮನೆಯೊಳಗೆ ಪ್ರವೇಶಿಸುವವರು ಬೆಳಕನ್ನು ಕಾಣುವಂತೆ, ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರಷ್ಟೆ.

[17] ಪ್ರಕಟವಾಗದಂತೆ ಯಾವುದೂ ಮರೆಯಾಗಿರುವುದಿಲ್ಲ, ಬೆಳಕಿಗೆ ಬಾರದೆ ಇರುವ ರಹಸ್ಯವು ಯಾವುದೂ ಇಲ್ಲ.

[18] ಆದ್ದರಿಂದ ನೀವು ಕೇಳುವ ವಿಷಯಗಳಲ್ಲಿ ಎಚ್ಚರಿಕೆಯಾಗಿರಿ. ಏಕೆಂದರೆ ಇದ್ದವರಿಗೆ ಇನ್ನೂ ಹೆಚ್ಚಾಗಿ ಕೊಡಲಾಗುವುದು; ಇಲ್ಲದವರ ಕಡೆಯಿಂದ ತಮಗಿದೆ ಎಂದುಕೊಳ್ಳುವುದನ್ನು ಸಹ, ಅವರಿಂದ ಕಿತ್ತುಕೊಳ್ಳಲಾಗುವುದು,” ಎಂದು ಹೇಳಿದರು.

[19] ಯೇಸುವಿನ ತಾಯಿ ಮತ್ತು ಸಹೋದರರು ಅವರಿದ್ದಲ್ಲಿಗೆ ಬಂದು ಜನರ ಗುಂಪಿನ ನಿಮಿತ್ತ ಅವರ ಬಳಿಗೆ ಹೋಗಲಾರದೆ ಇದ್ದರು.

[20] ಆಗ ಒಬ್ಬನು ಯೇಸುವಿಗೆ, “ನಿಮ್ಮ ತಾಯಿಯೂ ಸಹೋದರರೂ ನಿಮ್ಮನ್ನು ಕಾಣಬೇಕೆಂದು, ಅಪೇಕ್ಷಿಸಿ ಹೊರಗೆ ನಿಂತಿದ್ದಾರೆ,” ಎಂದನು.

[21] ಅದಕ್ಕೆ ಯೇಸು, “ದೇವರ ವಾಕ್ಯವನ್ನು ಕೇಳಿ ಅದರಂತೆ ನಡೆಯುವವರೇ ನನ್ನ ತಾಯಿ ಮತ್ತು ನನ್ನ ಸಹೋದರರು ಆಗಿದ್ದಾರೆ,” ಎಂದು ಹೇಳಿದರು.

[22] ಒಂದು ದಿನ ಯೇಸು ತಮ್ಮ ಶಿಷ್ಯರಿಗೆ, “ನಾವು ಕೆರೆಯ ಆಚೆದಡಕ್ಕೆ ಹೋಗೋಣ,” ಎಂದು ಹೇಳಿದರು, ಆಗ ಅವರು ದೋಣಿಯನ್ನು ಹತ್ತಿ ಹೊರಟರು.

[23] ಆದರೆ ಅವರು ಪ್ರಯಾಣ ಮಾಡುತ್ತಿದ್ದಾಗ, ಯೇಸು ನಿದ್ರಿಸುತ್ತಿದ್ದರು. ಆಗ ಬಿರುಗಾಳಿಯು ಸರೋವರದ ಮೇಲೆ ಬೀಸಲು, ದೋಣಿಯು ನೀರಿನಿಂದ ತುಂಬಿದ್ದರಿಂದ, ಅವರು ಅಪಾಯಕ್ಕೊಳಗಾದರು.

[24] ಆಗ ಶಿಷ್ಯರು ಯೇಸುವಿನ ಬಳಿ ಬಂದು ಅವರನ್ನು ಎಬ್ಬಿಸಿ, “ಗುರುವೇ, ಗುರುವೇ, ನಾವು ಮುಳುಗುತ್ತಿದ್ದೇವೆ!” ಎಂದರು. ಆಗ ಯೇಸು ಎದ್ದು ಬಿರುಗಾಳಿಯನ್ನೂ ರಭಸವಾಗಿ ಬರುತ್ತಿದ್ದ ಅಲೆಗಳನ್ನೂ ಗದರಿಸಿದರು; ಆಗ ಬಿರುಗಾಳಿಯು ನಿಂತು ಹೋಗಿ, ಎಲ್ಲಾ ಪ್ರಶಾಂತವಾಯಿತು.

[25] ಆಗ ಯೇಸು ತಮ್ಮ ಶಿಷ್ಯರಿಗೆ, “ನಿಮ್ಮ ನಂಬಿಕೆ ಎಲ್ಲಿ?” ಎಂದರು. ಅವರು ಹೆದರಿದವರಾಗಿ ಆಶ್ಚರ್ಯದಿಂದ ಒಬ್ಬರಿಗೊಬ್ಬರು, “ಇವರು ಯಾರಿರಬಹುದು? ಗಾಳಿಗೂ ನೀರಿಗೂ ಸಹ ಅಪ್ಪಣೆ ಕೊಡುತ್ತಾರಲ್ಲಾ. ಅವು ಇವರು ಹೇಳಿದ ಹಾಗೆ ಕೇಳುತ್ತಾವಲ್ಲಾ?” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.

[26] ಅವರು ಗಲಿಲಾಯಕ್ಕೆ ಎದುರಾಗಿದ್ದ, ಗೆರಸೇನರ ಸೀಮೆಗೆ ತಲುಪಿದರು.

[27] ಯೇಸು ದಡಕ್ಕೆ ಸೇರಿದಾಗ, ಬಹುಕಾಲದಿಂದ ದೆವ್ವಗಳು ಹಿಡಿದು ಬಟ್ಟೆ ಧರಿಸಿಕೊಳ್ಳದೆ ಯಾವ ಮನೆಯಲ್ಲಿ ಇರದೆ ಸಮಾಧಿಯ ಗುಹೆಗಳಲ್ಲಿ ವಾಸಿಸುತ್ತಿದ್ದ ಒಬ್ಬ ಮನುಷ್ಯನನ್ನು ಯೇಸು ಸಂಧಿಸಿದರು.

[28] ಅವನು ಯೇಸುವನ್ನು ಕಂಡಾಗ, ಅವರ ಮುಂದೆ ಅಡ್ಡಬಿದ್ದು, “ಯೇಸುವೇ, ಮಹೋನ್ನತ ದೇವಪುತ್ರರೇ, ನನ್ನ ಗೊಡವೆ ನಿಮಗೆ ಏಕೆ? ನನ್ನನ್ನು ಪೀಡಿಸಬೇಡಿ, ನಿಮ್ಮನ್ನು ಬೇಡಿಕೊಳ್ಳುತ್ತೇನೆ!” ಎಂದು ಗಟ್ಟಿಯಾದ ಸ್ವರದಿಂದ ಕೂಗಿ ಹೇಳಿದನು.

[29] ಏಕೆಂದರೆ, ದೆವ್ವಕ್ಕೆ ಅವನಿಂದ ಹೊರಗೆ ಬರಬೇಕೆಂದು ಯೇಸು ಅಪ್ಪಣೆ ಕೊಟ್ಟಿದ್ದರು. ಅದು ಬಹಳ ಸಾರಿ ಅವನನ್ನು ಹಿಡಿಯುತ್ತಿದ್ದುದರಿಂದ, ಅವನು ಸರಪಣಿಗಳಿಂದಲೂ ಬೇಡಿಗಳಿಂದಲೂ ಬಂಧಿತನಾದರೂ ಅವನು ಆ ಬಂಧನಗಳನ್ನು ಮುರಿದು ಬಿಡುತ್ತಿದ್ದನು ಮತ್ತು ದೆವ್ವವು ಅವನನ್ನು ಏಕಾಂತ ಸ್ಥಳಕ್ಕೆ ಓಡಿಸಿಕೊಂಡು ಹೋಗುತ್ತಿತ್ತು.

[30] ಯೇಸು ಅವನಿಗೆ, “ನಿನ್ನ ಹೆಸರೇನು?” ಎಂದು ಕೇಳಿದರು. ಅದಕ್ಕವನು, “ಸೇನೆ,” ಎಂದನು. ಏಕೆಂದರೆ ಬಹಳ ದೆವ್ವಗಳು ಅವನಲ್ಲಿ ಸೇರಿಕೊಂಡಿದ್ದವು.

[31] ಅವು ತಮ್ಮನ್ನು ಪಾತಾಳಕ್ಕೆ ಹೋಗುವಂತೆ ಅಪ್ಪಣೆ ಕೊಡಬಾರದೆಂದು ಯೇಸುವನ್ನು ಬೇಡಿಕೊಂಡವು.

[32] ಆಗ ಅಲ್ಲಿ ಬೆಟ್ಟದ ಮೇಲೆ ಹಂದಿಗಳ ಹಿಂಡು ಮೇಯುತ್ತಿದ್ದರಿಂದ ಅವುಗಳೊಳಗೆ ತಾವು ಸೇರಿಕೊಳ್ಳಲು ಅಪ್ಪಣೆ ಕೊಡಬೇಕೆಂದು ಯೇಸುವನ್ನು ಬೇಡಿಕೊಂಡವು, ಅವರು ಅವುಗಳಿಗೆ ಅನುಮತಿ ಕೊಟ್ಟರು.

[33] ಆಗ ಆ ದೆವ್ವಗಳು ಆ ಮನುಷ್ಯನೊಳಗಿಂದ ಹೊರಗೆ ಬಂದು, ಹಂದಿಗಳೊಳಗೆ ಸೇರಿದವು. ಆ ಗುಂಪು ಚುರುಕಾಗಿ ಓಡಿ, ಕಡಿದಾದ ಬದಿಯಿಂದ ಸರೋವರಕ್ಕೆ ಬಿದ್ದು ಮುಳುಗಿಹೋಯಿತು.

[34] ಹಂದಿಗಳನ್ನು ಮೇಯಿಸುತ್ತಿದ್ದವರು ನಡೆದದ್ದನ್ನು ಕಂಡು, ಓಡಿಹೋಗಿ ಪಟ್ಟಣದಲ್ಲಿಯೂ ಸೀಮೆಯಲ್ಲಿಯೂ ಅದನ್ನು ತಿಳಿಯಪಡಿಸಿದರು,

[35] ಆಗ ಜನರು ನಡೆದ ಸಂಗತಿ ಏನೆಂದು ಕಾಣುವುದಕ್ಕಾಗಿ ಹೊರಟು ಯೇಸುವಿನ ಬಳಿಗೆ ಬಂದರು. ದೆವ್ವಗಳು ಬಿಟ್ಟುಹೋಗಿದ್ದ ಆ ಮನುಷ್ಯನು ಬಟ್ಟೆಯನ್ನು ಧರಿಸಿಕೊಂಡು ಸ್ವಸ್ಥಬುದ್ಧಿಯುಳ್ಳವನಾಗಿ, ಯೇಸುವಿನ ಪಾದಗಳ, ಬಳಿಯಲ್ಲಿ ಕುಳಿತಿರುವುದನ್ನು ಕಂಡು ಭಯಪಟ್ಟರು.

[36] ನಡೆದದ್ದನ್ನು ಕಂಡವರು, ಯಾವ ರೀತಿಯಲ್ಲಿ ದೆವ್ವಪೀಡಿತನಾಗಿದ್ದವನು ಮತ್ತೆ ಸ್ವಸ್ಥನಾದನೆಂದು ಅವರಿಗೆ ತಿಳಿಯಪಡಿಸಿದರು.

[37] ಆಗ ಗೆರಸೇನರ ಸೀಮೆಯ ಸುತ್ತಮುತ್ತಲಿನ ಜನಸಮೂಹವೆಲ್ಲವು, ಬಹಳ ಭಯಹಿಡಿದವರಾದುದರಿಂದ ಅವರು ತಮ್ಮ ಬಳಿಯಿಂದ ಹೊರಟುಹೋಗಬೇಕೆಂದು ಯೇಸುವನ್ನು ಬೇಡಿಕೊಂಡರು. ಯೇಸು ದೋಣಿಯನ್ನು ಹತ್ತಿ ಹಿಂದಿರುಗಿದರು.

[38] ಆಗ ದೆವ್ವಗಳು ಬಿಟ್ಟುಹೋಗಿದ್ದ ಆ ಮನುಷ್ಯನು ತಾನೂ ಅವರ ಜೊತೆಯಲ್ಲಿ ಬರುವೆನೆಂದು, ಯೇಸುವನ್ನು ಬೇಡಿಕೊಂಡನು, ಆದರೆ ಯೇಸು ಅವನಿಗೆ,

[39] “ನೀನು ನಿನ್ನ ಮನೆಗೆ ಹಿಂದಿರುಗಿ ಹೋಗಿ ದೇವರು ನಿನಗೆ ಎಂಥಾ ಮಹಾಕಾರ್ಯಗಳನ್ನು ಮಾಡಿದ್ದಾರೆಂಬುದನ್ನು ಹೇಳು,” ಎಂದು ಅವನನ್ನು ಕಳುಹಿಸಿಬಿಟ್ಟರು. ಅವನು ತನ್ನ ಮಾರ್ಗವಾಗಿ ಹೊರಟುಹೋಗಿ ಯೇಸು ತನಗೆ ಮಾಡಿದ ಮಹಾಕಾರ್ಯಗಳನ್ನು ಊರೆಲ್ಲಾ ಸಾರಿದನು.

[40] ಯೇಸು ಹಿಂತಿರುಗಿ ಬಂದಾಗ ಅವರ ಬರುವಿಕೆಯನ್ನು ಎದುರುನೋಡುತ್ತಿದ್ದ ಜನರೆಲ್ಲರೂ ಅವರನ್ನು ಸ್ವಾಗತಿಸಿದರು.

[41] ಆಗ ಸಭಾಮಂದಿರದ ಅಧಿಕಾರಿಯಾಗಿದ್ದ, ಯಾಯೀರನೆಂಬವನು ಬಂದು ಯೇಸುವಿನ ಪಾದಗಳ ಮುಂದೆ ಅಡ್ಡಬಿದ್ದು, ತನ್ನ ಮನೆಗೆ ಬರಬೇಕೆಂದು ಬೇಡಿಕೊಂಡನು

[42] ಏಕೆಂದರೆ ಸುಮಾರು ಹನ್ನೆರಡು ವರ್ಷದ, ಅವನ ಒಬ್ಬಳೇ ಮಗಳು, ಸಾಯುವ ಹಾಗಿದ್ದಳು. ಯೇಸು ದಾರಿಯಲ್ಲಿ ಹೋಗುತ್ತಿದ್ದಾಗ, ಜನರು ಅವರನ್ನು ನೂಕಾಡುತ್ತಿದ್ದರು.

[43] ಹನ್ನೆರಡು ವರ್ಷಗಳಿಂದಲೂ ರಕ್ತಸ್ರಾವ ರೋಗದಿಂದ ನರಳುತ್ತಿದ್ದ ಒಬ್ಬ ಸ್ತ್ರೀ ಆ ಗುಂಪಿನಲ್ಲಿದ್ದಳು. ಅವಳು ತನ್ನ ಆಸ್ತಿಯನ್ನೆಲ್ಲಾ ವೆಚ್ಚಮಾಡಿದ್ದರೂ ಆಕೆಯನ್ನು ಗುಣಪಡಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ.

[44] ಅವಳು ಯೇಸುವಿನ ಹಿಂದೆ ಬಂದು ಅವರ ಉಡುಪಿನ ಅಂಚನ್ನು ಮುಟ್ಟಿದಳು, ಕೂಡಲೇ ಆಕೆಯ ರಕ್ತಸ್ರಾವವು ನಿಂತುಹೋಯಿತು.

[45] ಯೇಸು, “ನನ್ನನ್ನು ಮುಟ್ಟಿದವರು ಯಾರು?” ಎಂದರು. ಎಲ್ಲರೂ ನಿರಾಕರಿಸಿದರು, ಪೇತ್ರನು ಯೇಸುವಿಗೆ, “ಬೋಧಕರೇ, ಇಷ್ಟೊಂದು ಜನರು ನಿಮ್ಮನ್ನು ನೂಕುತ್ತಾ ನಿಮ್ಮನ್ನು ಒತ್ತುತ್ತಿದ್ದಾರಲ್ಲಾ” ಎಂದನು.

[46] ಆದರೆ ಯೇಸು, “ಯಾರೋ ಒಬ್ಬರು ನನ್ನನ್ನು ಮುಟ್ಟಿದ್ದಾರೆ; ನನ್ನಿಂದ ಗುಣಪಡಿಸುವ ಶಕ್ತಿಯು ಹೊರಟಿತೆಂದು ನನಗೆ ತಿಳಿಯಿತು,” ಎಂದರು.

[47] ಆ ಸ್ತ್ರೀಯು, ತಾನು ಇನ್ನು ಮರೆಮಾಡಲು ಸಾಧ್ಯವಿಲ್ಲವೆಂದು ತಿಳಿದು, ನಡುಗುತ್ತಾ ಬಂದು ಯೇಸುವಿನ ಮುಂದೆ ಅಡ್ಡಬಿದ್ದು, ಯಾವ ಕಾರಣದಿಂದ ಆಕೆಯು ಯೇಸುವನ್ನು ಮುಟ್ಟಿದಳೆಂದೂ ಹೇಗೆ ತಾನು ಕೂಡಲೇ ಸ್ವಸ್ಥಳಾದಳೆಂದೂ ಎಲ್ಲಾ ಜನರ ಮುಂದೆ ಅವರಿಗೆ ತಿಳಿಯಪಡಿಸಿದಳು.

[48] ಆಗ ಯೇಸು ಆಕೆಗೆ, “ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಗುಣಪಡಿಸಿದೆ. ಸಮಾಧಾನದಿಂದ ಹೋಗು,” ಎಂದರು.

[49] ಯೇಸು ಇನ್ನೂ ಮಾತನಾಡುತ್ತಿರುವಾಗಲೇ, ಸಭಾಮಂದಿರದ ಅಧಿಕಾರಿಯಾದ ಯಾಯೀರನ ಮನೆಯಿಂದ ಒಬ್ಬನು ಬಂದು ಅಧಿಕಾರಿಗೆ, “ನಿನ್ನ ಮಗಳು ತೀರಿಹೋದಳು, ಇನ್ನೂ ಗುರುವಿಗೆ ತೊಂದರೆಪಡಿಸುವುದೇಕೆ?” ಎಂದನು.

[50] ಯೇಸು ಅದನ್ನು ಕೇಳಿ, ಆ ಅಧಿಕಾರಿಗೆ, “ಭಯಪಡಬೇಡ; ನಂಬಿಕೆ ಮಾತ್ರ ಇರಲಿ, ಅವಳು ಬದುಕುವಳು,” ಎಂದು ಹೇಳಿದರು.

[51] ಯೇಸು ಯಾಯೀರನ ಮನೆಯೊಳಕ್ಕೆ ಬಂದಾಗ ಪೇತ್ರ, ಯಾಕೋಬ ಯೋಹಾನ ಮತ್ತು ಹುಡುಗಿಯ ತಂದೆತಾಯಿಗಳ ಹೊರತು ಯಾರನ್ನೂ ಒಳಗೆ ಬರಗೊಡಲಿಲ್ಲ.

[52] ಎಲ್ಲರೂ ಅಳುತ್ತಾ ಹುಡುಗಿಗಾಗಿ ಗೋಳಾಡುತ್ತಿದ್ದರು. ಯೇಸು, “ಅಳಬೇಡಿರಿ, ಆಕೆಯು ಸತ್ತಿಲ್ಲ, ನಿದ್ರೆ ಮಾಡುತ್ತಾಳೆ,” ಎಂದರು.

[53] ಆಕೆಯು ಸತ್ತಿದ್ದಾಳೆಂದು ತಿಳಿದು ಅಳುತ್ತಿದ್ದವರು ಯೇಸುವನ್ನು ಹಾಸ್ಯಮಾಡಿದರು.

[54] ಆದರೆ ಯೇಸು ಆಕೆಯ ಕೈಹಿಡಿದು, “ಮಗಳೇ, ಎದ್ದೇಳು!” ಎಂದು ಕರೆದರು.

[55] ಆಗ ಆಕೆಯ ಪ್ರಾಣವು ಹಿಂದಿರುಗಿ ಬಂತು. ಕೂಡಲೇ ಆಕೆಯು ಎದ್ದಳು. ಆಕೆಗೆ ತಿನ್ನಲು ಏನಾದರೂ ಕೊಡುವಂತೆ ಯೇಸು ಅಪ್ಪಣೆಕೊಟ್ಟರು.

[56] ಆಕೆಯ ತಂದೆತಾಯಿಗಳು ಬೆರಗಾದರು, ಆಗ ನಡೆದದ್ದನ್ನು ಅವರು ಯಾರಿಗೂ ಹೇಳಬಾರದೆಂದು ಯೇಸು ಅವರಿಗೆ ಆಜ್ಞಾಪಿಸಿದರು.

ಲೂಕ — Chapters