[1] ಆ ದಿನಗಳಲ್ಲಿ ಇಡೀ ರೋಮನ್ ರಾಜ್ಯದಲ್ಲಿ ಜನಗಣತಿಯಾಗಬೇಕೆಂದು ಕೈಸರ್ ಔಗುಸ್ತನಿಂದ ಶಾಸನವು ಹೊರಟಿತು.
[2] ಕುರೇನ್ಯನು ಸಿರಿಯ ಪ್ರಾಂತಕ್ಕೆ ಅಧಿಪತಿಯಾಗಿದ್ದಾಗ, ಈ ಜನಗಣತಿಯು ಮೊದಲನೆಯ ಸಾರಿ ನಡೆಯಿತು.
[3] ಆಗ ಎಲ್ಲರೂ ತಮ್ಮ ಹೆಸರುಗಳನ್ನು ದಾಖಲೆ ಮಾಡಿಸಿಕೊಳ್ಳುವುದಕ್ಕಾಗಿ ತಮ್ಮ ತಮ್ಮ ಸ್ವಂತ ಪಟ್ಟಣಗಳಿಗೆ ಹೋದರು.
[4] ಯೋಸೇಫನು ದಾವೀದನ ಕುಟುಂಬದವನೂ ವಂಶದವನೂ ಆಗಿದ್ದರಿಂದ, ಅವನು ಸಹ ಗಲಿಲಾಯ ಪ್ರಾಂತದ ನಜರೇತೆಂಬ ಪಟ್ಟಣದಿಂದ ಯೂದಾಯ ಪ್ರಾಂತದ ಬೇತ್ಲೆಹೇಮ್ ಎಂಬ ದಾವೀದನ ಪಟ್ಟಣಕ್ಕೆ ಹೋದನು.
[5] ಅವನು ತನಗೆ ನಿಶ್ಚಯಿಸಿದ್ದ ಮತ್ತು ಪೂರ್ಣ ಗರ್ಭಿಣಿಯಾಗಿದ್ದ ಮರಿಯಳೊಂದಿಗೆ ಜನಗಣತಿಯ ದಾಖಲೆ ಮಾಡಿಸಿಕೊಳ್ಳುವುದಕ್ಕಾಗಿ ಹೋದನು.
[6] ಅವರು ಬೇತ್ಲೆಹೇಮಿನಲ್ಲಿ ಇದ್ದಾಗ, ಆಕೆಗೆ ಹೆರಿಗೆಯ ಕಾಲ ಸಮೀಪಿಸಿತು.
[7] ಮರಿಯಳು ತನ್ನ ಚೊಚ್ಚಲು ಮಗನನ್ನು ಹೆತ್ತು, ಬಟ್ಟೆಗಳಿಂದ ಸುತ್ತಿ, ಛತ್ರದಲ್ಲಿ ಅವರಿಗೆ ಸ್ಥಳವಿಲ್ಲವಾದ್ದರಿಂದ ಶಿಶುವನ್ನು ದನದ ಕೊಟ್ಟಿಗೆಯಲ್ಲಿ ಮಲಗಿಸಿದಳು.
[8] ಅದೇ ಸೀಮೆಯಲ್ಲಿ ಕುರುಬರು ಹೊಲದಲ್ಲಿದ್ದು, ರಾತ್ರಿಯಲ್ಲಿ ತಮ್ಮ ಹಿಂಡನ್ನು ಕಾಯುತ್ತಿದ್ದರು.
[9] ಆಗ ಕರ್ತದೇವರ ದೂತನು ಅವರಿಗೆ ಪ್ರತ್ಯಕ್ಷನಾದನು. ಕರ್ತದೇವರ ಮಹಿಮೆಯು ಅವರ ಸುತ್ತಲೂ ಪ್ರಕಾಶಿಸಿತು, ಅವರು ಬಹಳವಾಗಿ ಹೆದರಿದರು.
[10] ಆ ದೂತನು ಅವರಿಗೆ, “ಹೆದರಬೇಡಿರಿ. ಎಲ್ಲಾ ಜನರಿಗೆ ಮಹಾ ಸಂತೋಷವನ್ನುಂಟು ಮಾಡುವ ಶುಭಸಮಾಚಾರವನ್ನು ನಾನು ನಿಮಗೆ ತಿಳಿಸುತ್ತೇನೆ.
[11] ಅದೇನೆಂದರೆ, ಈ ದಿನ ದಾವೀದನ ಪಟ್ಟಣದಲ್ಲಿ ನಿಮಗೋಸ್ಕರ ಒಬ್ಬ ರಕ್ಷಕರು ಹುಟ್ಟಿದ್ದಾರೆ. ಅವರು ಯಾರೆಂದರೆ ಕರ್ತದೇವರು ಆಗಿರುವ ಕ್ರಿಸ್ತ.
[12] ಅಲ್ಲಿ ಬಟ್ಟೆಯಿಂದ ಸುತ್ತಿರುವ ಶಿಶುವು ಕೊಟ್ಟಿಗೆಯಲ್ಲಿ ಮಲಗಿರುವುದನ್ನು ನೀವು ಕಾಣುವಿರಿ. ಇದೇ ನಿಮಗೆ ಗುರುತು,” ಎಂದು ಹೇಳಿದನು.
[13] ತಕ್ಷಣವೇ ಆ ದೂತನ ಸಂಗಡ ಇದ್ದ ಪರಲೋಕ ಸೈನ್ಯದ ಸಮೂಹವು ದೇವರನ್ನು ಕೊಂಡಾಡುತ್ತಾ ಹೀಗೆ ಹೇಳಿದರು:
[14] “ಮಹೋನ್ನತದಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ದೇವರ ಮೆಚ್ಚುಗೆ, ಮಾನವರಿಗೆ ಸಮಾಧಾನ.”
[15] ದೇವದೂತರು ಅವರ ಬಳಿಯಿಂದ ಪರಲೋಕಕ್ಕೆ ಹೋದ ಮೇಲೆ ಕುರುಬರು, “ದೇವರು ನಮಗೆ ತಿಳಿಯಪಡಿಸಿದ ಈ ಸಂಗತಿಯನ್ನು ನಾವು ಈಗಲೇ ಬೇತ್ಲೆಹೇಮಿಗೆ ಹೋಗಿ ನೋಡೋಣ,” ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು.
[16] ಅವರು ಅವಸರದಿಂದ ಹೋಗಿ ಮರಿಯಳನ್ನೂ ಯೋಸೇಫನನ್ನೂ ಕೊಟ್ಟಿಗೆಯಲ್ಲಿ ಮಲಗಿದ್ದ ಶಿಶುವನ್ನು ಕಂಡರು.
[17] ಅನಂತರ, ಈ ಶಿಶುವಿನ ವಿಷಯವಾಗಿ ತಮಗೆ ತಿಳಿಯಪಡಿಸಿದ ದೇವದೂತನ ಮಾತನ್ನು ಪ್ರಕಟಮಾಡಿದರು.
[18] ಕುರುಬರು ಹೇಳಿದ ವಿಷಯಗಳನ್ನು ಕೇಳಿದವರೆಲ್ಲರೂ ಆಶ್ಚರ್ಯಪಟ್ಟರು.
[19] ಆದರೆ ಮರಿಯಳು ಈ ಎಲ್ಲಾ ವಿಷಯಗಳನ್ನು ತನ್ನ ಹೃದಯದಲ್ಲಿಟ್ಟುಕೊಂಡು ಆಲೋಚಿಸುತ್ತಿದ್ದಳು.
[20] ತಮಗೆ ತಿಳಿಸಿದ ಪ್ರಕಾರವೇ ಕುರುಬರು ತಾವು ಕೇಳಿ, ಕಂಡ ಎಲ್ಲಾ ವಿಷಯಗಳಿಗಾಗಿ ದೇವರನ್ನು ಮಹಿಮೆಪಡಿಸುತ್ತಾ, ಕೊಂಡಾಡುತ್ತಾ ಹಿಂದಿರುಗಿ ಹೋದರು.
[21] ಶಿಶುವಿಗೆ ಸುನ್ನತಿ ಮಾಡಬೇಕಾಗಿದ್ದ ಎಂಟನೆಯ ದಿನದಲ್ಲಿ, ಮರಿಯಳು ಗರ್ಭಿಣಿಯಾಗುವುದಕ್ಕೆ ಮುಂಚೆಯೇ ದೂತನು ಸೂಚಿಸಿದ್ದಂತೆ “ಯೇಸು” ಎಂದು ನಾಮಕರಣ ಮಾಡಿದರು.
[22] ಮೋಶೆಯ ನಿಯಮದ ಪ್ರಕಾರ ಮರಿಯಳಿಗೆ ಶುದ್ಧೀಕರಣದ ದಿವಸಗಳು ಮುಗಿದ ಮೇಲೆ, ಯೋಸೇಫನು ಮತ್ತು ಮರಿಯಳು ಶಿಶುವನ್ನು ಕರ್ತದೇವರಿಗೆ ಸಮರ್ಪಿಸುವುದಕ್ಕಾಗಿ ಯೆರೂಸಲೇಮಿಗೆ ತಂದರು.
[23] ಕರ್ತದೇವರ ನಿಯಮದಲ್ಲಿ ಬರೆದಿರುವಂತೆ, “ಪ್ರತಿಯೊಂದು ಚೊಚ್ಚಲ ಗಂಡು ಮಗು ಕರ್ತದೇವರಿಗೆ ಪವಿತ್ರವಾಗಿ ಸಮರ್ಪಿಸಬೇಕು,”
[24] ಎಂತಲೂ, “ಒಂದು ಜೊತೆ ಬೆಳವಕ್ಕಿಗಳನ್ನಾಗಲಿ ಎರಡು ಪಾರಿವಾಳದ ಮರಿಗಳನ್ನಾಗಲಿ ಬಲಿ ಅರ್ಪಿಸಬೇಕು,” ಎಂತಲೂ ಕರ್ತದೇವರ ನಿಯಮದಲ್ಲಿ ಹೇಳಿರುವ ಪ್ರಕಾರ ಅವರು ಸಮರ್ಪಿಸಿದರು.
[25] ಆಗ ಸಿಮೆಯೋನನೆಂಬ ಒಬ್ಬ ಮನುಷ್ಯನು ಯೆರೂಸಲೇಮಿನಲ್ಲಿದ್ದನು. ಅವನು ನೀತಿವಂತನೂ ಭಕ್ತನೂ ಆಗಿದ್ದನು. ಅವನು ಇಸ್ರಾಯೇಲರನ್ನು ಸಂತೈಸುವ ಒಬ್ಬರ ಬರುವಿಕೆಗಾಗಿ ಕಾಯುತ್ತಿದ್ದನು. ಪವಿತ್ರಾತ್ಮ ದೇವರ ಪ್ರಸನ್ನತೆ ಅವನ ಮೇಲಿತ್ತು.
[26] ಇದಲ್ಲದೆ, ಅವನು ಕರ್ತದೇವರು ಕಳುಹಿಸಲಿರುವ ಕ್ರಿಸ್ತನನ್ನು ಕಾಣುವುದಕ್ಕಿಂತ ಮುಂಚೆ ಮರಣ ಹೊಂದುವುದಿಲ್ಲವೆಂದು ಪವಿತ್ರಾತ್ಮನಿಂದ ಅವನಿಗೆ ಪ್ರಕಟನೆಯಾಗಿತ್ತು.
[27] ಅವನು ಪವಿತ್ರಾತ್ಮ ಪ್ರೇರಣೆಯಿಂದ ದೇವಾಲಯದ ಅಂಗಳದೊಳಗೆ ಬಂದನು, ಆಗ ನಿಯಮವನ್ನು ಪೂರೈಸಲು ತಂದೆತಾಯಿಗಳು ಶಿಶು ಯೇಸುವನ್ನು ಒಳಗೆ ತಂದರು.
[28] ಆಗ ಸಿಮೆಯೋನನು ಶಿಶುವನ್ನು ತನ್ನ ಕೈಗಳಲ್ಲಿ ತೆಗೆದುಕೊಂಡು ದೇವರನ್ನು ಕೊಂಡಾಡುತ್ತಾ ಹೀಗೆಂದನು:
[29] “ಸರ್ವೇಶ್ವರರಾದ ಕರ್ತದೇವರೇ, ನಿಮ್ಮ ವಾಗ್ದಾನದ ಪ್ರಕಾರ, ನಿಮ್ಮ ದಾಸನನ್ನು ಸಮಾಧಾನದಿಂದ ಈಗ ಕಳುಹಿಸಿರಿ.
[30] ನನ್ನ ಕಣ್ಣುಗಳು ನಿಮ್ಮ ರಕ್ಷಣೆಯನ್ನು ಕಂಡವು,
[31] ಈ ರಕ್ಷಣೆಯನ್ನು ನೀವು ಎಲ್ಲಾ ಜನಗಳ ಮುಂದೆ ಸಿದ್ಧಪಡಿಸಿದ್ದೀರಿ:
[32] ಅದು ಯೆಹೂದ್ಯರಲ್ಲದವರಿಗೆ ಪ್ರಕಟಣೆಯ ಬೆಳಕೂ, ನಿಮ್ಮ ಪ್ರಜೆಯಾದ ಇಸ್ರಾಯೇಲರ ಮಹಿಮೆಯೂ ಆಗಿದೆ.”
[33] ಶಿಶುವಿನ ವಿಷಯವಾಗಿ ಸಿಮೆಯೋನನು ಹೇಳಿದ ಮಾತುಗಳಿಗೆ ಶಿಶುವಿನ ತಂದೆತಾಯಿಗಳು ಆಶ್ಚರ್ಯಪಟ್ಟರು.
[34] ಅನಂತರ ಸಿಮೆಯೋನನು ಅವರನ್ನು ಆಶೀರ್ವದಿಸಿ, ಶಿಶುವಿನ ತಾಯಿ ಮರಿಯಳಿಗೆ, “ಇಗೋ, ಇಸ್ರಾಯೇಲಿನಲ್ಲಿ ಅನೇಕರು ಬೀಳುವುದಕ್ಕೂ ಏಳುವುದಕ್ಕೂ ಈ ಮಗು ನೇಮಕವಾಗಿದೆ, ಜನರು ಎದುರು ಮಾತನಾಡುವುದಕ್ಕೆ ಈ ಮಗು ಗುರುತಾಗಿರುವದು.
[35] ಹೀಗೆ ಅನೇಕ ಹೃದಯಗಳ ಆಲೋಚನೆಗಳು ಪ್ರಕಟವಾಗುವವು. ನಿನ್ನ ಸ್ವಂತ ಪ್ರಾಣವನ್ನು ಸಹ ಖಡ್ಗವು ತಿವಿಯುವುದು” ಎಂದನು.
[36] ಅಲ್ಲಿ ಆಶೇರನ ಗೋತ್ರದ ಫನೂಯೇಲನ ಮಗಳಾದ ಅನ್ನಳೆಂಬ ಒಬ್ಬ ಬಹು ಮುಪ್ಪಿನ ಪ್ರವಾದಿನಿಯಿದ್ದಳು. ಅವಳು ಮದುವೆಯಾಗಿ ಗಂಡನೊಂದಿಗೆ ಏಳು ವರ್ಷ ಬಾಳಿದ್ದಳು.
[37] ಅವಳು ಎಂಬತ್ತನಾಲ್ಕು ವರ್ಷ ವಿಧವೆಯಾಗಿದ್ದು, ದೇವಾಲಯವನ್ನು ಬಿಟ್ಟುಹೋಗದೆ ಉಪವಾಸಗಳಿಂದಲೂ ಪ್ರಾರ್ಥನೆಗಳಿಂದಲೂ ರಾತ್ರಿ ಹಗಲೂ ಆರಾಧನೆ ಮಾಡುತ್ತಿದ್ದಳು.
[38] ಆ ಸಂದರ್ಭದಲ್ಲಿ ಅನ್ನಳು ಬಂದು, ದೇವರನ್ನು ಕೊಂಡಾಡಿ ಯೆರೂಸಲೇಮಿನಲ್ಲಿ ವಿಮೋಚನೆಗಾಗಿ ಎದುರು ನೋಡುತ್ತಿದ್ದವರೆಲ್ಲರೊಂದಿಗೆ ಶಿಶುವಿನ ವಿಷಯವಾಗಿ ಮಾತನಾಡಿದಳು.
[39] ಯೋಸೇಫನೂ ಮರಿಯಳೂ ಕರ್ತದೇವರ ನಿಯಮದ ಪ್ರಕಾರ ಎಲ್ಲವನ್ನು ಮಾಡಿ ಮುಗಿಸಿದ ಮೇಲೆ, ತಮ್ಮ ಊರಾಗಿದ್ದ ಗಲಿಲಾಯದ ನಜರೇತಿಗೆ ಹಿಂದಿರುಗಿದರು.
[40] ಆ ಶಿಶುವು ಬೆಳೆದು ಬಲಗೊಂಡು; ಜ್ಞಾನದಲ್ಲಿ ವೃದ್ಧಿಯಾಯಿತು ಮತ್ತು ದೇವರ ಕೃಪೆಯು ಶಿಶುವಿನ ಮೇಲೆ ಇತ್ತು.
[41] ಯೇಸುವಿನ ತಂದೆತಾಯಿಗಳು ಪ್ರತಿವರ್ಷವೂ ಪಸ್ಕಹಬ್ಬಕ್ಕೆ ಯೆರೂಸಲೇಮಿಗೆ ಹೋಗುತ್ತಿದ್ದರು.
[42] ಯೇಸುವಿಗೆ ಹನ್ನೆರಡು ವರ್ಷವಾದಾಗ, ಪದ್ಧತಿಯ ಪ್ರಕಾರ ಅವರು ಹಬ್ಬಕ್ಕಾಗಿ ಯೆರೂಸಲೇಮಿಗೆ ಹೋದರು.
[43] ಅವರು ಆ ಹಬ್ಬವನ್ನು ಮುಗಿಸಿಕೊಂಡು ಹಿಂದಿರುಗಿ ಬರುವಾಗ ಬಾಲಕ ಯೇಸು ಯೆರೂಸಲೇಮಿನಲ್ಲಿಯೇ ಉಳಿದದ್ದು, ತಂದೆತಾಯಿಗಳಿಗೆ ತಿಳಿದಿರಲಿಲ್ಲ.
[44] ಯೇಸು ಗುಂಪಿನಲ್ಲಿ ಇದ್ದಿರಬಹುದೆಂದು ಅವರು ಭಾವಿಸಿ, ಒಂದು ದಿನದ ಪ್ರಯಾಣವನ್ನು ಮಾಡಿದ ಮೇಲೆ ತಮ್ಮ ಬಳಗದವರಲ್ಲಿಯೂ ಪರಿಚಿತರಲ್ಲಿಯೂ ಬಾಲಕ ಯೇಸುವನ್ನು ಹುಡುಕಿದರು.
[45] ಆದರೆ ಅವರು ಯೇಸುವನ್ನು ಕಂಡುಕೊಳ್ಳದೆ ಹೋದುದರಿಂದ, ಅವರನ್ನು ಹುಡುಕುತ್ತಾ ಪುನಃ ಯೆರೂಸಲೇಮಿಗೆ ಹಿಂತಿರುಗಿ ಬಂದರು.
[46] ಮೂರು ದಿವಸಗಳಾದ ಮೇಲೆ ಯೇಸುವನ್ನು ದೇವಾಲಯದಲ್ಲಿ ಕಂಡರು. ಬೋಧಕರ ನಡುವೆ ಕೂತುಕೊಂಡು, ಬಾಲಕ ಯೇಸು ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಾ, ಪ್ರಶ್ನಿಸುತ್ತಾ ಇರುವುದನ್ನು ಅವರು ಕಂಡರು.
[47] ಯೇಸು ಆಡಿದ ಮಾತುಗಳನ್ನು ಕೇಳಿದವರೆಲ್ಲರೂ ಅವರ ಜ್ಞಾನಕ್ಕೂ ಉತ್ತರಗಳಿಗೂ ಬೆರಗಾದರು.
[48] ತಂದೆತಾಯಿಗಳು ಯೇಸುವನ್ನು ಕಂಡಾಗ ಆಶ್ಚರ್ಯಪಟ್ಟರು. ಆತನ ತಾಯಿಯು, “ಮಗು, ನೀನು ನಮಗೆ ಹೀಗೇಕೆ ಮಾಡಿದೆ? ನಿನ್ನ ತಂದೆಯೂ ನಾನೂ ಎಷ್ಟೋ ಕಳವಳಗೊಂಡು ನಿನ್ನನ್ನು ಹುಡುಕಿದೆವು,” ಎಂದಳು.
[49] ಯೇಸು ಅವರಿಗೆ, “ನೀವು ನನ್ನನ್ನು ಹುಡುಕಿದ್ದೇಕೆ? ನಾನು ನನ್ನ ತಂದೆಯ ಮನೆಯಲ್ಲಿ ಇರಬೇಕೆಂಬುದು ನಿಮಗೆ ತಿಳಿಯಲಿಲ್ಲವೋ?” ಎಂದರು.
[50] ಆದರೆ ಯೇಸು ಅವರಿಗೆ ಹೇಳಿದ ಮಾತನ್ನು ಅವರು ಗ್ರಹಿಸಲಿಲ್ಲ.
[51] ಬಳಿಕ ಯೇಸು ಅವರ ಜೊತೆಯಲ್ಲಿ ನಜರೇತಿಗೆ ಬಂದು ಅವರಿಗೆ ಅಧೀನರಾಗಿದ್ದರು. ಆದರೆ ಯೇಸುವಿನ ತಾಯಿಯು ಈ ಮಾತುಗಳನ್ನೆಲ್ಲಾ ತನ್ನ ಮನಸ್ಸಿನಲ್ಲಿ ಸಂಗ್ರಹಿಸಿ ಇಟ್ಟುಕೊಂಡಳು.
[52] ಯೇಸು ಜ್ಞಾನದಲ್ಲಿಯೂ ದೇಹಬಲದಲ್ಲಿಯೂ ಬೆಳೆದು, ದೇವರ ಮೆಚ್ಚುಗೆ ಮತ್ತು ಮನುಷ್ಯರ ಮೆಚ್ಚುಗೆ ಹೆಚ್ಚಾಗಿ ಅವರಿಗೆ ದೊರೆಯಿತು.