[1] ಯೇಸು ಯೆರಿಕೋ ಪಟ್ಟಣವನ್ನು ಪ್ರವೇಶಿಸಿ ಅಲ್ಲಿಂದ ಪ್ರಯಾಣ ಮಾಡುತ್ತಿದ್ದರು.
[2] ಅಲ್ಲಿ ಜಕ್ಕಾಯ ಎಂಬ ಹೆಸರುಳ್ಳ ಒಬ್ಬ ಮನುಷ್ಯನಿದ್ದನು; ಅವನು ಸುಂಕದವರಲ್ಲಿ ಮುಖಂಡನೂ ಐಶ್ವರ್ಯವಂತನೂ ಆಗಿದ್ದನು.
[3] ಅವನು ಯೇಸು ಯಾರೆಂದು ಕಾಣಬೇಕೆಂದು ಅಪೇಕ್ಷಿಸಿದರೂ ತಾನು ಕುಳ್ಳನಾಗಿದ್ದದರಿಂದ ಜನರ ಗುಂಪಿನ ನಿಮಿತ್ತವಾಗಿ ಅವರನ್ನು ಕಾಣಲಾರದೆ ಇದ್ದನು.
[4] ಆಗ ಯೇಸುವನ್ನು ಕಾಣುವಂತೆ ಅವನು ಮುಂದಾಗಿ ಓಡಿಹೋಗಿ, ಒಂದು ಅತ್ತಿಮರವನ್ನು ಹತ್ತಿದನು. ಏಕೆಂದರೆ ಯೇಸು ಆ ಮಾರ್ಗವಾಗಿಯೇ ಬರುತ್ತಿದ್ದರು.
[5] ಯೇಸು ಆ ಸ್ಥಳಕ್ಕೆ ಬಂದು, ಮೇಲಕ್ಕೆ ನೋಡಿ ಅವನಿಗೆ, “ಜಕ್ಕಾಯನೇ, ತಕ್ಷಣವೇ ಇಳಿದು ಬಾ. ನಾನು ಇಂದು ನಿನ್ನ ಮನೆಯಲ್ಲಿ ತಂಗಬೇಕು,” ಎಂದರು.
[6] ಜಕ್ಕಾಯನು ತಕ್ಷಣವೇ ಇಳಿದುಬಂದು ಅವರನ್ನು ಸಂತೋಷದಿಂದ ಬರಮಾಡಿಕೊಂಡನು.
[7] ಇದನ್ನು ಕಂಡವರೆಲ್ಲರೂ, “ಪಾಪಿಷ್ಠನ ಮನೆಗೆ ಅತಿಥಿಯಾಗಿ ಹೋಗುತ್ತಾನಲ್ಲಾ,” ಎಂದು ಗೊಣಗುಟ್ಟಿದರು.
[8] ಆದರೆ ಜಕ್ಕಾಯನು ನಿಂತುಕೊಂಡು ಕರ್ತದೇವರಿಗೆ, “ಸ್ವಾಮೀ, ಇಗೋ, ನನ್ನ ಸ್ವತ್ತಿನಲ್ಲಿ ಅರ್ಧವನ್ನು ಬಡವರಿಗೆ ಕೊಟ್ಟುಬಿಡುತ್ತೇನೆ. ನಾನು ಯಾರಿಗಾದರೂ ಏನಾದರೂ ಮೋಸಮಾಡಿ ಅವರಿಂದ ತೆಗೆದುಕೊಂಡಿದ್ದರೆ ನಾಲ್ಕರಷ್ಟು ಹಿಂದಕ್ಕೆ ಕೊಡುತ್ತೇನೆ,” ಎಂದನು.
[9] ಯೇಸು ಅವನಿಗೆ, “ಈ ದಿನವೇ ಈ ಮನೆಗೆ ರಕ್ಷಣೆ ಬಂದಿದೆ. ಏಕೆಂದರೆ ಇವನು ಸಹ ಅಬ್ರಹಾಮನ ಪುತ್ರನಲ್ಲವೇ?
[10] ತಪ್ಪಿಹೋದದ್ದನ್ನು ಹುಡುಕಿ ರಕ್ಷಿಸುವುದಕ್ಕಲ್ಲವೇ ಮನುಷ್ಯಪುತ್ರನಾದ ನಾನು ಬಂದೆನು,” ಎಂದು ಹೇಳಿದರು.
[11] ಜನರು ಈ ಮಾತುಗಳನ್ನು ಕೇಳುತ್ತಿರಲಾಗಿ, ಯೇಸು ತಾನು ಯೆರೂಸಲೇಮಿಗೆ ಸಮೀಪವಾಗಿದ್ದುದರಿಂದಲೂ ದೇವರ ರಾಜ್ಯವು ಕೂಡಲೇ ಪ್ರತ್ಯಕ್ಷವಾಗುವುದೆಂದು ಅವರು ಭಾವಿಸಿದ್ದರಿಂದ
[12] ಯೇಸು ಇನ್ನೊಂದು ಸಾಮ್ಯವನ್ನು ಹೇಳಿದರು: “ಘನವಂತನಾಗಿದ್ದ ಒಬ್ಬನು ತನಗೋಸ್ಕರ ರಾಜ್ಯವನ್ನು ಪಡೆದುಕೊಂಡು ತಿರುಗಿ ಬರುವುದಕ್ಕಾಗಿ ದೂರದೇಶಕ್ಕೆ ಹೊರಟುಹೋದನು.
[13] ಆ ವ್ಯಕ್ತಿ ತನ್ನ ಹತ್ತು ಕೆಲಸಗಾರರನ್ನು ಕರೆದು, ಅವರಿಗೆ ಹತ್ತು ನಾಣ್ಯಗಳನ್ನು ಒಪ್ಪಿಸಿ, ‘ನಾನು ಬರುವವರೆಗೆ ವ್ಯಾಪಾರ ಮಾಡಿಕೊಂಡಿರಿ,’ ಎಂದು ಹೇಳಿದನು.
[14] “ಆದರೆ ಅವನ ನಾಡಿನವರೋ ಅವನನ್ನು ದ್ವೇಷಿಸುತ್ತಿದ್ದರು. ‘ಇವನು ನಮ್ಮ ಅರಸನಾಗುವುದು ಬೇಡ,’ ಎಂದು ತಿಳಿಸಲು ಅವನ ಹಿಂದೆಯೇ ಪ್ರತಿನಿಧಿಗಳನ್ನು ಕಳುಹಿಸಿದರು.
[15] “ಆದರೂ ಅವನು ತನ್ನ ರಾಜ್ಯವನ್ನು ಪಡೆದು ಹಿಂದಿರುಗಿದಾಗ, ವ್ಯಾಪಾರದಿಂದ ಇನ್ನೂ ಎಷ್ಟು ಲಾಭಗಳಿಸಿದರೆಂದು ತಿಳಿದುಕೊಳ್ಳುವಂತೆ, ತಾನು ಹಣ ಕೊಟ್ಟ ಆ ಕೆಲಸಗಾರರನ್ನು ತನ್ನ ಬಳಿಗೆ ಕರೆತರಲು ಆಜ್ಞಾಪಿಸಿದನು.
[16] “ಆಗ ಮೊದಲನೆಯವನು ಬಂದು, ‘ಸ್ವಾಮಿ, ನಿಮ್ಮ ಒಂದು ನಾಣ್ಯದಿಂದ ಇನ್ನೂ ಹತ್ತು ನಾಣ್ಯಗಳನ್ನು ಸಂಪಾದಿಸಿದೆ,’ ಎಂದನು.
[17] “ಅದಕ್ಕೆ ಅವನು, ‘ಚೆನ್ನಾಗಿ ಮಾಡಿದಿ, ಒಳ್ಳೆಯ ಸೇವಕನೇ. ನೀನು ಅತ್ಯಂತ ಸ್ವಲ್ಪದರಲ್ಲಿ ನಂಬಿಗಸ್ತನಾಗಿದ್ದೀ, ಹತ್ತು ಪಟ್ಟಣಗಳ ಮೇಲೆ ನೀನು ಅಧಿಕಾರಿಯಾಗಿರು,’ ಎಂದನು.
[18] “ಎರಡನೆಯವನು ಬಂದು, ‘ಸ್ವಾಮಿ, ನಿನ್ನ ಒಂದು ನಾಣ್ಯದಿಂದ ಇನ್ನೂ ಐದು ನಾಣ್ಯಗಳನ್ನು ಸಂಪಾದಿಸಿದೆ,’ ಎಂದನು.
[19] “ಅದಕ್ಕೆ ಅವನು, ‘ನೀನು ಐದು ಪಟ್ಟಣಗಳ ಮೇಲೆ ಅಧಿಕಾರಿಯಾಗಿರು,’ ಎಂದು ಅವನಿಗೆ ಹೇಳಿದನು.
[20] “ಆಗ ಮತ್ತೊಬ್ಬನು ಬಂದು, ‘ಸ್ವಾಮಿ, ಇಗೋ, ನಾನು ಕರವಸ್ತ್ರದಲ್ಲಿ ಕಟ್ಟಿಟ್ಟಿದ್ದ ನಿಮ್ಮ ನಾಣ್ಯ ಇದೇ.
[21] ನೀವು ಕಠಿಣ ಮನುಷ್ಯರೆಂದು ನಾನು ನಿಮಗೆ ಭಯಪಟ್ಟೆನು. ನೀನು ಕೂಡಿಡದಿರುವುದನ್ನು ತೆಗೆದುಕೊಳ್ಳುವವನೂ ಬಿತ್ತದೆ ಇರುವಲ್ಲಿ ಕೊಯ್ಯುವವನೂ ಆಗಿದ್ದೀ,’ ಎಂದನು.
[22] “ಆಗ ಆ ಯಜಮಾನನು, ‘ಕೆಟ್ಟ ಸೇವಕನೇ! ನಿನ್ನ ಮಾತಿನ ಮೇಲೆಯೇ ನಿನಗೆ ನ್ಯಾಯತೀರಿಸುವೆನು. ನಾನು ಕೂಡಿಡದೆ ಇರುವಲ್ಲಿ ತೆಗೆದುಕೊಳ್ಳುವವನೂ ಬಿತ್ತದೆ ಇರುವಲ್ಲಿ ಕೊಯ್ಯುವವನೂ ಆದ ಕಠಿಣ ಮನುಷ್ಯನೆಂದು ನಿನಗೆ ತಿಳಿದಿತ್ತಲ್ಲಾ.
[23] ಹಾಗಿದ್ದರೆ ನನ್ನ ಹಣವನ್ನು ಬಡ್ಡಿ ಅಂಗಡಿಯಲ್ಲಿ ಏಕೆ ಹಾಕಲಿಲ್ಲ, ನಾನು ಹಿಂದಿರುಗಿದಾಗ ಹಣವನ್ನು ಬಡ್ಡಿ ಸಮೇತವಾಗಿ ತೆಗೆದುಕೊಳ್ಳುತ್ತಿದ್ದೆನು,’ ಎಂದು ಹೇಳಿದನು.
[24] “ಯಜಮಾನನು ಹತ್ತಿರ ನಿಂತಿದ್ದವರಿಗೆ, ‘ಇವನಿಂದ ಆ ನಾಣ್ಯವನ್ನು ತೆಗೆದುಕೊಂಡು ಹತ್ತು ನಾಣ್ಯಗಳಿದ್ದವನಿಗೆ ಕೊಡಿರಿ,’ ಎಂದನು.
[25] “ಆಗ ಅವರು, ‘ಸ್ವಾಮಿ, ಅವನಿಗೆ ಈಗಾಗಲೇ ಹತ್ತು ನಾಣ್ಯಗಳಿವೆಯಲ್ಲಾ!’ ಎಂದರು.
[26] “ಆಗ ಯಜಮಾನನು, ‘ಇದ್ದ ಪ್ರತಿಯೊಬ್ಬರಿಗೆ ಕೊಡಲಾಗುವುದು ಮತ್ತು ಇಲ್ಲದವರ ಕಡೆಯಿಂದ ಇದ್ದ ಅಲ್ಪವನ್ನೂ ಕಸಿದುಕೊಳ್ಳಲಾಗುವುದು.
[27] ಆದರೆ ತಮ್ಮ ಮೇಲೆ ನಾನು ಆಳಿಕೆ ಮಾಡುವುದನ್ನು ಇಷ್ಟಪಡದ ಆ ನನ್ನ ವಿರೋಧಿಗಳನ್ನು ಇಲ್ಲಿಗೆ ತಂದು ನನ್ನ ಮುಂದೆ ಸಂಹಾರ ಮಾಡಿರಿ,’ ಎಂದನು.”
[28] ಯೇಸು ಹೀಗೆ ಹೇಳಿದ ತರುವಾಯ, ಶಿಷ್ಯರಿಗೆ ಮುಂದಾಗಿ, ಯೆರೂಸಲೇಮಿಗೆ ಹೊರಟರು.
[29] ಇದಾದ ಮೇಲೆ ಅವರು ಓಲಿವ್ ಗುಡ್ಡದ ಕಡೆಗೆ ಇರುವ ಬೇತ್ಫಗೆಗೂ ಬೇಥಾನ್ಯಕ್ಕೂ ಸಮೀಪಿಸಿದಾಗ, ತಮ್ಮ ಶಿಷ್ಯರಲ್ಲಿ ಇಬ್ಬರನ್ನು ಕರೆದು,
[30] “ನಿಮ್ಮ ಎದುರಿಗಿರುವ ಹಳ್ಳಿಗೆ ಹೋಗಿರಿ, ನೀವು ಅದರೊಳಗೆ ಪ್ರವೇಶಿಸುತ್ತಿರುವಾಗ, ಅಲ್ಲಿ ಕಟ್ಟಿರುವ ಮತ್ತು ಯಾರೂ ಅದರ ಮೇಲೆ ಸವಾರಿ ಮಾಡದಿರುವ ಒಂದು ಕತ್ತೆಮರಿಯನ್ನು ಅಲ್ಲಿ ಕಾಣುವಿರಿ. ಅದನ್ನು ಬಿಚ್ಚಿ ಇಲ್ಲಿಗೆ ತೆಗೆದುಕೊಂಡು ಬನ್ನಿರಿ.
[31] ಯಾರಾದರೂ ನಿಮಗೆ, ‘ಏಕೆ ಅದನ್ನು ಬಿಚ್ಚುತ್ತೀರಿ?’ ಎಂದು ಕೇಳಿದರೆ, ನೀವು ಅವರಿಗೆ, ‘ಇದು ಕರ್ತದೇವರಿಗೆ ಬೇಕಾಗಿದೆ,’ ಎಂದು ಹೇಳಿರಿ,” ಎಂದರು.
[32] ಆ ಶಿಷ್ಯರಿಬ್ಬರೂ ತಮ್ಮ ಮಾರ್ಗವಾಗಿ ಹೊರಟುಹೋಗಿ ಯೇಸು ತಮಗೆ ಹೇಳಿದಂತೆಯೇ ಕಂಡರು.
[33] ಅವರು ಆ ಕತ್ತೆಮರಿಯನ್ನು ಬಿಚ್ಚುತ್ತಿರುವಾಗ, ಅದರ ಯಜಮಾನರು ಅವರಿಗೆ, “ನೀವು ಕತ್ತೆಮರಿಯನ್ನು ಯಾಕೆ ಬಿಚ್ಚುತ್ತೀರಿ?” ಎಂದು ಕೇಳಿದ್ದಕ್ಕೆ,
[34] ಅವರು, “ಇದು ಕರ್ತದೇವರಿಗೆ ಬೇಕಾಗಿದೆ,” ಎಂದರು.
[35] ಶಿಷ್ಯರು ಅದನ್ನು ಯೇಸುವಿನ ಬಳಿಗೆ ತಂದು, ತಮ್ಮ ಬಟ್ಟೆಗಳನ್ನು ಕತ್ತೆಮರಿಯ ಮೇಲೆ ಹಾಕಿ, ಅದರ ಮೇಲೆ ಯೇಸುವನ್ನು ಕೂರಿಸಿದರು.
[36] ಯೇಸು ಹೋಗುತ್ತಿರುವಾಗ, ಜನರು ತಮ್ಮ ಬಟ್ಟೆಗಳನ್ನು ದಾರಿಯಲ್ಲಿ ಹಾಸಿದರು.
[37] ಇದಲ್ಲದೆ ಯೇಸು ಓಲಿವ್ ಗುಡ್ಡದಿಂದ ಇಳಿಜಾರನ್ನು ಸಮೀಪಿಸಿದಾಗ ಶಿಷ್ಯ ಸಮೂಹವೆಲ್ಲಾ ತಾವು ಕಂಡ ಎಲ್ಲ ಮಹತ್ಕಾರ್ಯಗಳಿಗಾಗಿ ಸಂತೋಷಪಡುತ್ತಾ, ಮಹಾ ಸ್ವರದಿಂದ ದೇವರನ್ನು ಹೀಗೆ ಕೊಂಡಾಡಲಾರಂಭಿಸಿದರು:
[38] “ಕರ್ತದೇವರ ಹೆಸರಿನಲ್ಲಿ ಬರುವ ಅರಸನು ಆಶೀರ್ವಾದ ಹೊಂದಲಿ!” “ಪರಲೋಕದಲ್ಲಿ ಸಮಾಧಾನ, ಅತ್ಯುನ್ನತದಲ್ಲಿ ಮಹಿಮೆ!”
[39] ಜನಸಮೂಹದಲ್ಲಿದ್ದ ಕೆಲವು ಫರಿಸಾಯರು ಯೇಸುವಿಗೆ, “ಬೋಧಕರೇ, ನಿಮ್ಮ ಶಿಷ್ಯರನ್ನು ಗದರಿಸಿ!” ಎಂದರು.
[40] ಆಗ ಯೇಸು ಅವರಿಗೆ, “ಇವರು ಸುಮ್ಮನಾದರೆ, ಈ ಕಲ್ಲುಗಳು ಕೂಗುವವು ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು.
[41] ತರುವಾಯ ಯೇಸು ಯೆರೂಸಲೇಮ ಪಟ್ಟಣವನ್ನೂ ಅದರ ಸ್ಥಿತಿಯನ್ನೂ ಕಂಡು, ಅದರ ಸಲುವಾಗಿ ಅತ್ತು,
[42] “ನೀನು ಇಂದಾದರೂ ನಿನ್ನ ಸಮಾಧಾನದ ವಿಷಯಗಳನ್ನು ಅರಿತುಕೊಂಡಿದ್ದರೆ, ಚೆನ್ನಾಗಿತ್ತು. ಆದರೆ ಈಗ ಅದು ನಿನ್ನ ಕಣ್ಣಿಗೆ ಮರೆಯಾಗಿದೆ.
[43] ನಿನ್ನ ಶತ್ರುಗಳು ನಿನ್ನ ಸುತ್ತಲೂ ಅಡ್ಡಗೋಡೆಯನ್ನು ಕಟ್ಟಿ, ಎಲ್ಲಾ ಕಡೆಯಲ್ಲಿಯೂ ನಿನ್ನನ್ನು ಮುತ್ತಿಗೆ ಹಾಕಿ ಪ್ರತಿಯೊಂದು ಕಡೆಯಿಂದಲೂ ನಿನ್ನನ್ನು ಬಂಧಿಸುವ ದಿನಗಳು ಬರುವವು.
[44] ಇದಲ್ಲದೆ ಅವರು ಗೋಡೆಯೊಳಗಿನ ನಿನ್ನನ್ನೂ ನಿನ್ನ ಮಕ್ಕಳನ್ನೂ ನೆಲಕ್ಕೆ ಬಡಿಯುವರು. ನಿನ್ನಲ್ಲಿ ಒಂದು ಕಲ್ಲಿನ ಮೇಲೆ ಮತ್ತೊಂದು ಕಲ್ಲು ನಿಲ್ಲದಂತೆ ಮಾಡುವರು. ಏಕೆಂದರೆ ದೇವರು ನಿನ್ನನ್ನು ಸಂಧಿಸಿದ ಸಮಯವನ್ನು ನೀನು ತಿಳಿದುಕೊಳ್ಳಲಿಲ್ಲ,” ಎಂದರು.
[45] ಅನಂತರ ಯೇಸು ದೇವಾಲಯದ ಅಂಗಳದೊಳಗೆ ಹೋಗಿ, ಅದರಲ್ಲಿ ವ್ಯಾಪಾರಮಾಡುವವರನ್ನು ಹೊರಗೆ ಹಾಕುವುದಕ್ಕೆ ಪ್ರಾರಂಭಿಸಿ,
[46] ಅವರಿಗೆ, “ ‘ನನ್ನ ಮನೆಯು ಪ್ರಾರ್ಥನೆಯ ಮನೆಯಾಗಿದೆ,’ ಎಂದು ಬರೆದದೆ. ನೀವೋ ಅದನ್ನು, ‘ಕಳ್ಳರ ಗವಿಯನ್ನಾಗಿ’ ಮಾಡಿದ್ದೀರಿ,” ಎಂದರು.
[47] ಯೇಸು ಪ್ರತಿದಿನವೂ ದೇವಾಲಯದಲ್ಲಿ ಬೋಧಿಸುತ್ತಿದ್ದರು. ಆದರೆ ಮುಖ್ಯಯಾಜಕರೂ ನಿಯಮ ಬೋಧಕರೂ ಜನರ ಪ್ರಮುಖರೂ ಯೇಸುವನ್ನು ಕೊಲ್ಲುವುದಕ್ಕೆ ಹವಣಿಸುತ್ತಿದ್ದರು.
[48] ಜನರೆಲ್ಲರೂ ಯೇಸು ಹೇಳುವ ಒಂದೊಂದು ಮಾತಿಗೂ ಬಹಳ ಲಕ್ಷ್ಯಕೊಟ್ಟು ಯೇಸುವಿನ ಉಪದೇಶವನ್ನು ಕೇಳುತ್ತಿದ್ದುದರಿಂದ, ಅವರಿಗೆ ಏನು ಮಾಡಬೇಕೋ ತೋಚಲಿಲ್ಲ.