Skip to content
Opens in a new window
Listen to this chapter • 6:28

[1] ಯೇಸು ತಮ್ಮ ಶಿಷ್ಯರಿಗೆ ಹೇಳಿದ್ದು: “ಒಬ್ಬ ಐಶ್ವರ್ಯವಂತನಿದ್ದನು, ಅವನಿಗಿದ್ದ ಒಬ್ಬ ನಿರ್ವಾಹಕನು ಅವನ ಸರಕುಗಳನ್ನು ಹಾಳು ಮಾಡುತ್ತಿದ್ದಾನೆಂದು ಅವನಿಗೆ ಯಾರೋ ದೂರು ಹೇಳಿದರು.

[2] ಆಗ ಐಶ್ವರ್ಯವಂತನು ಆ ನಿರ್ವಾಹಕನನ್ನು ಕರೆದು, ‘ಇದೇನು ನಾನು ನಿನ್ನ ವಿಷಯದಲ್ಲಿ ಕೇಳುವುದು? ನಿನ್ನ ಲೆಕ್ಕವನ್ನು ಒಪ್ಪಿಸು. ನೀನು ಇನ್ನು ಮೇಲೆ ನಿರ್ವಾಹಕನಾಗಿರಲು ಆಗಲ್ಲ,’ ಎಂದನು.

[3] “ಆಗ ಆ ನಿರ್ವಾಹಕನು ತನ್ನೊಳಗೆ, ‘ನಾನೇನು ಮಾಡಲಿ? ನನ್ನ ಯಜಮಾನನು ನನ್ನನ್ನು ಕೆಲಸದಿಂದ ತೆಗೆದುಬಿಡುತ್ತಾನಲ್ಲಾ. ಅಗೆಯಲು ನನಗೆ ಶಕ್ತಿಯಿಲ್ಲ, ಭಿಕ್ಷೆ ಬೇಡಲು ನನಗೆ ನಾಚಿಕೆ.

[4] ಕೆಲಸದಿಂದ ನನ್ನನ್ನು ತೆಗೆದುಹಾಕಿದ ಮೇಲೆ, ಜನರು ನನ್ನನ್ನು ತಮ್ಮ ಮನೆಗಳಲ್ಲಿ ಸೇರಿಸಿಕೊಳ್ಳುವಂತೆ, ನಾನು ಏನು ಮಾಡಬೇಕಾದದ್ದು ಗೊತ್ತಾಯಿತು’ ಎಂದುಕೊಂಡನು.

[5] “ಹೀಗೆ ಅವನು ತನ್ನ ಯಜಮಾನನ ಸಾಲಗಾರರಲ್ಲಿ ಪ್ರತಿಯೊಬ್ಬನನ್ನು ಕರೆದು ಮೊದಲನೆಯವನಿಗೆ, ‘ನೀನು ನನ್ನ ಯಜಮಾನನಿಗೆ ತೀರಿಸಬೇಕಾದ ಸಾಲವೆಷ್ಟು?’ ಎಂದು ಕೇಳಲು,

[6] “ ‘ಅವನು, 3,000 ಲೀಟರ್ ಎಣ್ಣೆ,’ ಎಂದನು. “ಆಗ ನಿರ್ವಾಹಕನು, ‘ನಿನ್ನ ಸಾಲ ಪತ್ರವನ್ನು ತೆಗೆದುಕೋ, ಬೇಗ ಕುಳಿತುಕೊಂಡು 1,500 ಲೀಟರ್ ಎಂದು ಬರೆ,’ ಎಂದು ಹೇಳಿದನು.

[7] “ಬಳಿಕ ಅವನು ಮತ್ತೊಬ್ಬನಿಗೆ, ‘ನೀನೆಷ್ಟು ಸಾಲ ತೀರಿಸಬೇಕು,’ ಎಂದು ಕೇಳಲು, “30 ‘ಟನ್ ಗೋಧಿ,’ ಎಂದನು. “ಆಗ ಅವನು, ‘ನಿನ್ನ ಸಾಲ ಪತ್ರವನ್ನು ತೆಗೆದುಕೊಂಡು 24 ಟನ್ ಎಂದು ಬರೆ,’ ಎಂದನು.

[8] “ಆಗ ಯಜಮಾನನು ಆ ಅಪನಂಬಿಗಸ್ತ ನಿರ್ವಾಹಕನು ಕುಯುಕ್ತಿಯಿಂದ ಮಾಡಿದ್ದನ್ನು ಹೊಗಳಿದನು. ಯೇಸು ಮುಂದುವರಿಸಿ ಹೇಳಿದ್ದು: ಈ ಲೋಕದ ಮಕ್ಕಳು ತಮ್ಮ ಸಂತತಿಯವರಲ್ಲಿ ಬೆಳಕಿನ ಮಕ್ಕಳಿಗಿಂತ ಯುಕ್ತಿಯುಳ್ಳವರಾಗಿದ್ದಾರೆ.

[9] ನಾನು ನಿಮಗೆ ಹೇಳುವುದೇನೆಂದರೆ, ಲೌಕಿಕ ಸಂಪತ್ತಿನಿಂದ ನಿಮಗೆ ಸ್ನೇಹಿತರನ್ನು ಮಾಡಿಕೊಳ್ಳಿರಿ. ಅದು ನಿಮ್ಮನ್ನು ಬಿಟ್ಟುಹೋದಾಗ ನಿಮ್ಮನ್ನು ನಿತ್ಯ ನಿವಾಸಗಳಲ್ಲಿ ಸೇರಿಸಿಕೊಳ್ಳುವರು.

[10] “ಸ್ವಲ್ಪವಾದದ್ದರಲ್ಲಿ ನಂಬಿಗಸ್ತರಾಗಿರುವವರು ಬಹಳವಾದದ್ದರಲ್ಲಿಯೂ ನಂಬಿಗಸ್ತರಾಗಿರುವರು ಮತ್ತು ಸ್ವಲ್ಪವಾದದ್ದರಲ್ಲಿ ಅಪನಂಬಿಗಸ್ತರಾಗಿರುವವರು ಬಹಳವಾದದ್ದರಲ್ಲಿಯೂ ಅಪನಂಬಿಗಸ್ತರಾಗಿರುವರು.

[11] ಆದ್ದರಿಂದ ಲೌಕಿಕ ಸಂಪತ್ತಿನ ವಿಷಯದಲ್ಲಿ ನೀವು ನಂಬಿಗಸ್ತರಾಗಿ ಇರದಿದ್ದರೆ, ನಿಜವಾದ ಧನವನ್ನು ನಿಮ್ಮ ವಶಕ್ಕೆ ಯಾರು ಒಪ್ಪಿಸುವರು?

[12] ಮತ್ತೊಬ್ಬರಿಗೆ ಸೇರಿದ ವಸ್ತುಗಳಲ್ಲಿ ನೀವು ನಂಬಿಗಸ್ತರಾಗಿ ಇರದಿದ್ದರೆ ನಿಮ್ಮ ಪಾಲನ್ನು ನಿಮಗೆ ಯಾರು ಒಪ್ಪಿಸುವರು?

[13] “ಯಾವ ಸೇವಕನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು. ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು. ಇಲ್ಲವೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಿರಸ್ಕರಿಸುವನು. ನೀವು ದೇವರಿಗೂ ಧನಕ್ಕೂ ಸೇವೆ ಮಾಡಲಾರಿರಿ,” ಎಂದರು.

[14] ಆಗ ಹಣದಾಶೆಯಿಂದ ಕೂಡಿದ ಫರಿಸಾಯರು, ಇವುಗಳನ್ನು ಕೇಳಿ ಯೇಸುವನ್ನು ಪರಿಹಾಸ್ಯ ಮಾಡಿದರು.

[15] ಯೇಸು ಅವರಿಗೆ, “ನೀವು ಮನುಷ್ಯರ ಮುಂದೆ ನೀತಿಕರಿಸಿಕೊಳ್ಳುವವರು, ಆದರೆ ದೇವರು ನಿಮ್ಮ ಹೃದಯಗಳನ್ನು ತಿಳಿದಿದ್ದಾರೆ. ಮನುಷ್ಯರಲ್ಲಿ ಶ್ರೇಷ್ಠವೆಂದು ಎಣಿಸಿಕೊಳ್ಳುವಂಥದ್ದು ದೇವರ ದೃಷ್ಟಿಯಲ್ಲಿ ಅದು ಅಸಹ್ಯವಾಗಿದೆ.

[16] “ಮೋಶೆಯ ನಿಯಮವೂ ಪ್ರವಾದನೆಗಳೂ ಯೋಹಾನನವರೆಗೆ ಇದ್ದವು. ಅಂದಿನಿಂದ, ದೇವರ ರಾಜ್ಯವು ಸಾರಲಾಗಿದೆ. ಪ್ರತಿಯೊಬ್ಬನು ಬಲವಂತದಿಂದ ಅದರೊಳಗೆ ನುಗ್ಗುತ್ತಿದ್ದಾನೆ.

[17] ನಿಯಮದ ಒಂದು ಚುಕ್ಕೆಯು ಬಿದ್ದುಹೋಗುವುದಕ್ಕಿಂತ ಆಕಾಶವೂ ಭೂಮಿಯೂ ಅಳಿದುಹೋಗುವುದು ಸುಲಭ.

[18] “ಯಾವನಾದರೂ ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆ ಮಾಡಿಕೊಳ್ಳುತ್ತಾನೋ ಅವನು ವ್ಯಭಿಚಾರ ಮಾಡುವವನಾಗಿದ್ದಾನೆ. ಯಾವನು ಗಂಡ ಬಿಟ್ಟವಳನ್ನು ಮದುವೆ ಮಾಡಿಕೊಳ್ಳುತ್ತಾನೋ ಅವನು ವ್ಯಭಿಚಾರ ಮಾಡುವವನಾಗಿದ್ದಾನೆ.”

[19] ಅನಂತರ ಯೇಸು ಹೀಗೆ ಒಂದು ಸಾಮ್ಯ ಹೇಳಿದರು, “ಬಹು ಬೆಲೆಬಾಳುವ ಹಾಗೂ ನಯವಾದ ನಾರುಮಡಿ ವಸ್ತ್ರಗಳನ್ನೂ ಧರಿಸಿಕೊಂಡು ಪ್ರತಿದಿನವೂ ಭೋಗಗಳಲ್ಲಿಯೂ ಆಡಂಭರದಲ್ಲಿಯೂ ಬಾಳುತ್ತಿದ್ದ ಒಬ್ಬ ಧನವಂತನಿದ್ದನು.

[20] ಅವನ ಬಾಗಿಲಲ್ಲಿ, ಮೈತುಂಬಾ ಹುಣ್ಣುಗಳಿದ್ದ ಲಾಜರನೆಂಬ ಒಬ್ಬ ಭಿಕ್ಷುಕನು ಬಿದ್ದಿರುತ್ತಿದ್ದನು.

[21] ಧನವಂತನ ಮೇಜಿನಿಂದ ಬೀಳುವ ರೊಟ್ಟಿತುಂಡುಗಳನ್ನು ತಿನ್ನುವುದಕ್ಕೆ ಆ ಲಾಜರನು ಹಂಬಲಿಸುತ್ತಿದ್ದನು. ಇದಲ್ಲದೆ ನಾಯಿಗಳು ಬಂದು ಅವನ ಹುಣ್ಣುಗಳನ್ನು ನೆಕ್ಕುತ್ತಿದ್ದವು.

[22] “ಒಂದು ದಿನ ಆ ಭಿಕ್ಷುಕನು ಸತ್ತುಹೋದನು. ದೇವದೂತರು ಅವನನ್ನು ಅಬ್ರಹಾಮನ ಬಳಿಗೆ ತೆಗೆದುಕೊಂಡು ಹೋದರು. ಧನವಂತನು ಸಹ ಸತ್ತುಹೋದನು. ಅವನಿಗೆ ಶವಸಂಸ್ಕಾರವಾಯಿತು.

[23] ಅವನು ಪಾತಾಳದಲ್ಲಿ, ಯಾತನೆಪಡುತ್ತಾ ತನ್ನ ಕಣ್ಣುಗಳನ್ನು ಮೇಲಕ್ಕೆತ್ತಿ ದೂರದಲ್ಲಿ ಅಬ್ರಹಾಮನನ್ನೂ, ಅವನ ಎದೆಗೆ ಒರಗಿಕೊಂಡಿದ್ದ ಲಾಜರನನ್ನೂ ಕಂಡನು.

[24] ಆಗ ಧನವಂತನು, ‘ತಂದೆಯೇ ಅಬ್ರಹಾಮನೇ, ನನ್ನನ್ನು ಕರುಣಿಸು. ಲಾಜರನು ತನ್ನ ತುದಿಬೆರಳನ್ನು ನೀರಲ್ಲಿ ಅದ್ದಿ, ನನ್ನ ನಾಲಿಗೆಯನ್ನು ತಣ್ಣಗೆ ಮಾಡಲು ಅವನನ್ನು ಕಳುಹಿಸು, ಈ ಅಗ್ನಿಜ್ವಾಲೆಯಲ್ಲಿ ಯಾತನೆಪಡುತ್ತಿದ್ದೇನೆ,’ ಎಂದು ಕೂಗಿ ಹೇಳಿದನು.

[25] “ಆದರೆ ಅಬ್ರಹಾಮನು, ‘ಮಗನೇ, ನೀನು ನಿನ್ನ ಜೀವಮಾನದಲ್ಲಿ ಒಳ್ಳೆಯವುಗಳನ್ನು ಹೊಂದಿದೆಯಲ್ಲಾ, ಲಾಜರನು ಕೆಟ್ಟವುಗಳನ್ನು ಅನುಭವಿಸಿದ್ದನ್ನು ನೆನಪಿಗೆ ತಂದುಕೋ, ಈಗ ಅವನು ಆದರಣೆ ಹೊಂದುತ್ತಿದ್ದಾನೆ. ನೀನು ಯಾತನೆಪಡುತ್ತಿದ್ದೀ.

[26] ಇದಲ್ಲದೆ ಇಲ್ಲಿಂದ ನಿಮ್ಮ ಕಡೆಗೆ ದಾಟಬೇಕೆಂದಿರುವವರು ದಾಟದ ಹಾಗೆಯೂ ಅಲ್ಲಿಂದ ನಮ್ಮ ಕಡೆಗೆ ಬರಬೇಕೆಂದಿರುವವರು ಬಾರದಂತೆಯೂ ನಮಗೂ ನಿಮಗೂ ನಡುವೆ ಒಂದು ದೊಡ್ಡ ಅಂತರ ಸ್ಥಾಪಿಸಿದೆ,’ ಎಂದನು.

[27] “ಆಗ ಅವನು, ‘ಅಪ್ಪಾ, ಹಾಗಾದರೆ ನೀನು ಲಾಜರನನ್ನು ನನ್ನ ತಂದೆಯ ಮನೆಗೆ ಕಳುಹಿಸಬೇಕೆಂದು ನಾನು ಬೇಡಿಕೊಳ್ಳುತ್ತೇನೆ.

[28] ನನಗೆ ಐದು ಮಂದಿ ಸಹೋದರರಿದ್ದಾರೆ. ಅವರೂ ಈ ಯಾತನೆಯ ಸ್ಥಳಕ್ಕೆ ಬಾರದ ಹಾಗೆ ಲಾಜರನು ಅವರನ್ನು ಎಚ್ಚರಿಸಲಿ,’ ಎಂದನು.

[29] “ಅದಕ್ಕೆ ಅಬ್ರಹಾಮನು ಅವನಿಗೆ, ‘ಅವರಿಗೆ ಮೋಶೆಯ ಮತ್ತು ಪ್ರವಾದಿಗಳ ಗ್ರಂಥಗಳಿವೆ; ಅದರಲ್ಲಿರುವುದಕ್ಕೆ ಅವರು ಕಿವಿಗೊಡಲಿ,’ ಎಂದನು.

[30] “ಆಗ ಅವನು, ‘ಹಾಗಲ್ಲ, ತಂದೆ ಅಬ್ರಹಾಮನೇ, ಸತ್ತವರೊಳಗಿಂದ ಒಬ್ಬನು ಜೀವಂತವಾಗಿ ಅವರ ಬಳಿಗೆ ಹೋದರೆ, ಅವರು ಪಶ್ಚಾತ್ತಾಪ ಪಡುವರು,’ ಎಂದನು.

[31] “ಅದಕ್ಕೆ ಅಬ್ರಹಾಮನು ಅವನಿಗೆ, ‘ಮೋಶೆಯು ಮತ್ತು ಪ್ರವಾದಿಗಳು ಹೇಳಿದ್ದನ್ನೇ ಅವರು ಕೇಳದೆ ಹೋದರೆ, ಸತ್ತವರೊಳಗಿಂದ ಒಬ್ಬನು ಎದ್ದರೂ ಅವರು ಒಪ್ಪುವುದಿಲ್ಲ,’ ಎಂದು ಹೇಳಿದನು.”

ಲೂಕ — Chapters