[1] ಎಂಟನೆಯ ದಿನದಲ್ಲಿ ಮೋಶೆಯು ಆರೋನನನ್ನೂ ಅವನ ಪುತ್ರರನ್ನೂ ಮತ್ತು ಇಸ್ರಾಯೇಲಿನ ಹಿರಿಯರನ್ನೂ ಕರೆದನು.
[2] ಅವನು ಆರೋನನಿಗೆ, “ನೀನು ಪಾಪ ಪರಿಹಾರದ ಬಲಿಗಾಗಿ ಒಂದು ಎಳೆಯ ಕರುವನ್ನೂ ಮತ್ತು ದಹನಬಲಿಗಾಗಿ ಕಳಂಕರಹಿತ ಟಗರನ್ನೂ ತೆಗೆದುಕೊಂಡು ಅವುಗಳನ್ನು ಯೆಹೋವ ದೇವರ ಸನ್ನಿಧಿಯಲ್ಲಿ ಸಮರ್ಪಿಸು.
[3] ನೀನು ಇಸ್ರಾಯೇಲರಿಗೆ ಹೇಳಬೇಕಾದದ್ದೇನೆಂದರೆ: ‘ಪಾಪ ಪರಿಹಾರದ ಬಲಿಗಾಗಿ ಹೋತವನ್ನೂ ದಹನಬಲಿಗಾಗಿ ಕಳಂಕರಹಿತ ಒಂದು ವರ್ಷದ ಕರುವನ್ನೂ ಒಂದು ವರ್ಷದ ಕುರಿಮರಿಯನ್ನೂ ತೆಗೆದುಕೊಳ್ಳಬೇಕು.
[4] ಯೆಹೋವ ದೇವರ ಮುಂದೆ ಯಜ್ಞಕ್ಕೆ ಸಮಾಧಾನ ಬಲಿಗಾಗಿ ಒಂದು ಹೋರಿಯನ್ನು ಮತ್ತು ಒಂದು ಟಗರನ್ನು ಸಹ ತೆಗೆದುಕೊಳ್ಳಬೇಕು. ಆಹಾರದ ಬಲಿ ಎಣ್ಣೆಯೊಂದಿಗೆ ಬೆರೆತಿರಬೇಕು. ಏಕೆಂದರೆ ಈ ದಿನವೇ ಯೆಹೋವ ದೇವರು ನಿಮಗೆ ಕಾಣಿಸಿಕೊಳ್ಳುವರು,’ ” ಎಂದನು.
[5] ಅವರು ಮೋಶೆಯು ಆಜ್ಞಾಪಿಸಿದವುಗಳನ್ನು ದೇವದರ್ಶನದ ಗುಡಾರದ ಮುಂದೆ ತಂದರು. ಸಮೂಹವೆಲ್ಲವೂ ಹತ್ತಿರ ಬಂದು ಯೆಹೋವ ದೇವರ ಮುಂದೆ ನಿಂತಿತು.
[6] ಮೋಶೆ ಅವರಿಗೆ, “ಯೆಹೋವ ದೇವರು ಆಜ್ಞಾಪಿಸಿದ ಸಂಗತಿಯು ಇದೇ. ಇದನ್ನು ನೀವು ಮಾಡಿರಿ. ಯೆಹೋವ ದೇವರ ಮಹಿಮೆಯು ನಿಮಗೆ ಕಾಣಿಸಿಕೊಳ್ಳುವುದು,” ಎಂದನು.
[7] ಮೋಶೆಯು ಆರೋನನಿಗೆ, “ಬಲಿಪೀಠದ ಕಡೆಗೆ ಹೋಗಿ, ಯೆಹೋವ ದೇವರು ಆಜ್ಞಾಪಿಸಿದಂತೆಯೇ ನಿನ್ನ ಪಾಪ ಪರಿಹಾರದ ಬಲಿಯನ್ನೂ ದಹನಬಲಿಯನ್ನೂ ಅರ್ಪಿಸು. ನಿನಗಾಗಿ ಪ್ರಾಯಶ್ಚಿತ್ತವನ್ನು ಮಾಡು, ಜನರ ಸಮರ್ಪಣೆಗಳನ್ನು ಸಮರ್ಪಿಸಿ, ಅವರಿಗಾಗಿಯೂ ಪ್ರಾಯಶ್ಚಿತ್ತವನ್ನು ಮಾಡು,” ಎಂದನು.
[8] ಆದ್ದರಿಂದ ಆರೋನನು ಬಲಿಪೀಠದ ಕಡೆಗೆ ಹೋಗಿ, ತನಗಾಗಿ ಪಾಪ ಪರಿಹಾರದ ಬಲಿಯಾದ ಕರುವನ್ನು ವಧಿಸಿದನು.
[9] ಆಗ ಆರೋನನ ಪುತ್ರರು ಅವನ ಬಳಿಗೆ ರಕ್ತವನ್ನು ತಂದರು. ಅವನು ಆ ರಕ್ತದಲ್ಲಿ ತನ್ನ ಬೆರಳನ್ನು ಅದ್ದಿ, ಬಲಿಪೀಠದ ಕೊಂಬುಗಳಿಗೆ ಹಚ್ಚಿ, ಬಲಿಪೀಠದ ಅಡಿಯಲ್ಲಿ ಉಳಿದ ರಕ್ತವನ್ನು ಹೊಯ್ದನು.
[10] ಅದರ ಪಾಪ ಪರಿಹಾರದ ಬಲಿಯ ಕೊಬ್ಬು, ಮೂತ್ರಪಿಂಡಗಳು ಮತ್ತು ಕಾಳಿಜದ ಹತ್ತಿರವಿರುವ ಕೊಬ್ಬು, ಇವುಗಳನ್ನು ಅವನು ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆಯೇ, ಬಲಿಪೀಠದ ಮೇಲೆ ಸುಟ್ಟನು.
[11] ಮಾಂಸವನ್ನೂ ಚರ್ಮವನ್ನೂ ಅವನು ಪಾಳೆಯದ ಹೊರಗೆ ಬೆಂಕಿಯಿಂದ ಸುಟ್ಟನು.
[12] ಅವನು ದಹನಬಲಿಯನ್ನು ವಧಿಸಿದಾಗ, ಆರೋನನ ಪುತ್ರರು ಅವನಿಗೆ ರಕ್ತವನ್ನು ತಂದು ಕೊಟ್ಟರು. ಅದನ್ನು ಅವನು ಬಲಿಪೀಠದ ಮೇಲೆ ಸುತ್ತಲೂ ಚಿಮುಕಿಸಿದನು.
[13] ಅವರು ಅವನಿಗೆ ದಹನಬಲಿಯನ್ನೂ ಅವುಗಳ ತುಂಡುಗಳೊಂದಿಗೆ ತಲೆಯನ್ನೂ ತಂದು ಕೊಡಲು, ಅವನು ಅವುಗಳನ್ನು ಬಲಿಪೀಠದ ಮೇಲೆ ಸುಟ್ಟನು.
[14] ಅವನು ಕರುಳುಗಳನ್ನು ಮತ್ತು ಕಾಲುಗಳನ್ನು ತೊಳೆದು, ಅವುಗಳನ್ನು ದಹನಬಲಿಯ ಜೊತೆ ಮೇಲಿನ ಬಲಿಪೀಠದ ಮೇಲೆ ಸುಟ್ಟನು.
[15] ಅದಾದ ಮೇಲೆ ಆರೋನನು ಜನರಿಗಾಗಿ ಅರ್ಪಿಸಿದ ಬಲಿಯನ್ನು ತಂದು, ಹೋತವನ್ನು ತೆಗೆದುಕೊಂಡು, ಜನರಿಗಾಗಿ ಪಾಪ ಪರಿಹಾರದ ಬಲಿಯಾಗಿರುವುದನ್ನು ವಧಿಸಿ, ಮೊದಲನೆಯದರ ಹಾಗೆ ಅದನ್ನು ಸಮರ್ಪಿಸಿದನು.
[16] ಅವನು ದಹನಬಲಿಯನ್ನು ತಂದು, ಅದನ್ನು ವಿಧಿಬದ್ಧವಾಗಿ ಸಮರ್ಪಿಸಿದನು.
[17] ಅವನು ಧಾನ್ಯ ಸಮರ್ಪಣೆಯ ಬಲಿಯನ್ನು ತಂದು, ಅದರಲ್ಲಿ ಒಂದು ಹಿಡಿ ತೆಗೆದುಕೊಂಡು, ಬಲಿಪೀಠದ ಮೇಲೆ ಬೆಳಗಿನ ದಹನಬಲಿ ಯಜ್ಞದ ಬಳಿಯಲ್ಲಿ ಅದನ್ನು ಹೋಮ ಮಾಡಿದನು.
[18] ಅವನು ಜನರಿಗಾಗಿದ್ದ ಹೋರಿ ಮತ್ತು ಟಗರನ್ನು ಸಮಾಧಾನ ಬಲಿಗಳ ಯಜ್ಞಕ್ಕಾಗಿ ವಧಿಸಿದನು. ಆರೋನನ ಪುತ್ರರು ರಕ್ತವನ್ನು ಅವನ ಬಳಿಗೆ ತರಲು, ಅದನ್ನು ಅವನು ಬಲಿಪೀಠದ ಮೇಲೆ ಸುತ್ತಲೂ ಚಿಮುಕಿಸಿದನು.
[19] ಹೋರಿಯ ಮತ್ತು ಟಗರಿನ ಕೊಬ್ಬನ್ನೂ ಹಿಂಭಾಗದ ಕೊಬ್ಬನ್ನೂ ಮತ್ತು ಕರುಳುಗಳ ಸುತ್ತಲಿನ ಕೊಬ್ಬನ್ನೂ ಮೂತ್ರಪಿಂಡಗಳ ಮತ್ತು ಕಾಳಿಜದ ಹತ್ತಿರವಿರುವ ಕೊಬ್ಬನ್ನೂ
[20] ಕೊಬ್ಬನ್ನು ಎದೆಯ ಭಾಗಗಳ ಮೇಲೆ ಇಡಲು, ಆರೋನನು ಆ ಕೊಬ್ಬನ್ನು ಬಲಿಪೀಠದ ಮೇಲೆ ಸುಟ್ಟನು.
[21] ಎದೆಯ ಭಾಗಗಳನ್ನು, ಬಲತೊಡೆಗಳನ್ನು ಆರೋನನು, ಮೋಶೆ ಆಜ್ಞಾಪಿಸಿದಂತೆ ಯೆಹೋವ ದೇವರ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸಿದನು.
[22] ಆರೋನನು ಜನರ ಕಡೆಗೆ ತನ್ನ ಕೈಗಳನ್ನು ಎತ್ತಿ, ಅವರನ್ನು ಆಶೀರ್ವದಿಸಿದನು. ಪಾಪ ಪರಿಹಾರದ ಬಲಿಯನ್ನೂ ದಹನಬಲಿಯನ್ನೂ ಮತ್ತು ಸಮಾಧಾನದ ಬಲಿಯನ್ನೂ ಸಮರ್ಪಿಸಿದ ಮೇಲೆ ಇಳಿದು ಬಂದನು.
[23] ಮೋಶೆಯೂ ಆರೋನನೂ ದೇವದರ್ಶನದ ಗುಡಾರದ ಒಳಗೆ ಹೋಗಿ, ಹೊರಗೆ ಬಂದು ಜನರನ್ನು ಆಶೀರ್ವದಿಸಿದರು. ಆಗ ಯೆಹೋವ ದೇವರ ಮಹಿಮೆಯು ಜನರೆಲ್ಲರಿಗೂ ಕಾಣಿಸಿತು.
[24] ಆಗ ಅಲ್ಲಿ ಬೆಂಕಿಯು ಯೆಹೋವ ದೇವರ ಸನ್ನಿಧಿಯಿಂದ ಬಂದು, ಬಲಿಪೀಠದ ಮೇಲಿದ್ದ ದಹನಬಲಿಯನ್ನು ಮತ್ತು ಕೊಬ್ಬನ್ನು ದಹಿಸಿಬಿಟ್ಟಿತು. ಇದನ್ನು ಜನರೆಲ್ಲರೂ ಕಂಡಾಗ, ಅವರು ಆನಂದದಿಂದ ಜಯಘೋಷ ಮಾಡಿ ಅಡ್ಡಬಿದ್ದರು.