[1] ಯೆಹೋವ ದೇವರು ಮೋಶೆ ಆರೋನರೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,
[2] “ಇಸ್ರಾಯೇಲರೊಂದಿಗೆ ಮಾತನಾಡಿ ಅವರಿಗೆ ಹೀಗೆ ಹೇಳು: ‘ಒಬ್ಬ ಪುರುಷನ ಶರೀರದಿಂದ ಮೇಹಸ್ರಾವ ಹರಿಯುವುದಾಗಿದ್ದರೆ, ಆ ಸ್ರಾವದ ನಿಮಿತ್ತವಾಗಿ ಅವನು ಅಶುದ್ಧನಾಗಿರುವನು.
[3] ಅವನ ಸ್ರಾವದಲ್ಲಿ ಅದು ಅವನ ಅಶುದ್ಧತೆಯಾಗಿರುವುದು. ಅವನ ಶರೀರವು ತನ್ನ ಸ್ರಾವದಿಂದ ಹರಿಯುವುದಾಗಿದ್ದರೂ, ಸ್ರಾವವು ಅವನ ಶರೀರದಲ್ಲಿ ನಿಂತು ಹೋಗಿದ್ದರೂ, ಅದು ಅವನ ಅಶುದ್ಧತೆಯಾಗಿರುವುದು. ಅವನ ವಿಸರ್ಜನೆಯು ಹೇಗೆ ಅಶುದ್ಧತೆಯನ್ನು ತರುತ್ತದೆ ಅಂದರೆ:
[4] “ ‘ಸ್ರಾವವಿರುವವನು ಮಲಗುವ ಪ್ರತಿಯೊಂದು ಹಾಸಿಗೆಯೂ ಅಶುದ್ಧವಾದದ್ದು, ಅವನು ಕೂತುಕೊಳ್ಳುವ ಪ್ರತಿಯೊಂದು ವಸ್ತುವೂ ಅಶುದ್ಧವಾಗಿರುವುದು.
[5] ಅವನ ಹಾಸಿಗೆಯನ್ನು ಮುಟ್ಟುವವರು ತಮ್ಮ ಬಟ್ಟೆಗಳನ್ನು ಒಗೆದುಕೊಂಡು, ನೀರಿನಲ್ಲಿ ಸ್ನಾನಮಾಡಬೇಕು. ಸಂಜೆಯವರೆಗೆ ಅವರು ಅಶುದ್ಧರಾಗಿರಬೇಕು.
[6] ಇದಲ್ಲದೆ ಸ್ರಾವವಿರುವವನು ಕುಳಿತುಕೊಂಡ ಯಾವುದೇ ವಸ್ತುವಿನ ಮೇಲೆ ಕುಳಿತುಕೊಳ್ಳುವವರು ತಮ್ಮ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಸಂಜೆಯವರೆಗೆ ಅವರು ಅಶುದ್ಧರಾಗಿರುವರು.
[7] “ ‘ಸ್ರಾವವಿರುವವನ ಶರೀರವನ್ನು ಮುಟ್ಟುವವರು ತಮ್ಮ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು ಮತ್ತು ಸಂಜೆಯವರೆಗೆ ಅವರು ಅಶುದ್ಧನಾಗಿರಬೇಕು.
[8] “ ‘ಶುದ್ಧರಾಗಿರುವವರ ಮೇಲೆ ಸ್ರಾವವಿರುವವನು ಉಗುಳಿದರೆ, ಅವರು ತಮ್ಮ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಸಂಜೆಯವರೆಗೆ ಅವರು ಅಶುದ್ಧರಾಗಿರಬೇಕು.
[9] “ ‘ಸ್ರಾವವುಳ್ಳವನು ಏರಿ ಕುಳಿತುಕೊಂಡಿದ್ದ ತಡಿಯು ಅಶುದ್ಧವಾಗಿರುವುದು.
[10] ಅವನ ಕೆಳಗಿರುವ ಯಾವುದಾದರೂ ವಸ್ತುವನ್ನು ಮುಟ್ಟಿದವನು ಸಂಜೆಯವರೆಗೆ ಅಶುದ್ಧನಾಗಿರಬೇಕು, ಅವುಗಳಲ್ಲಿ ಯಾವುದನ್ನಾದರೂ ಹೊತ್ತುಕೊಳ್ಳುವವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಸಂಜೆಯವರೆಗೆ ಅವನು ಅಶುದ್ಧನಾಗಿರುವನು.
[11] “ ‘ಸ್ರಾವವುಳ್ಳವನು ತನ್ನ ಕೈಗಳನ್ನು ನೀರಿನಿಂದ ತೊಳೆದುಕೊಳ್ಳದೆ, ಯಾರನ್ನಾದರೂ ಮುಟ್ಟಿದರೆ ಅವರು ತಮ್ಮ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಸಂಜೆಯವರೆಗೆ ಅವರು ಅಶುದ್ಧರಾಗಿರಬೇಕು.
[12] “ ‘ಸ್ರಾವವುಳ್ಳವನು ಮುಟ್ಟಿದ ಮಣ್ಣಿನ ಪಾತ್ರೆಯನ್ನು ಒಡೆಯಬೇಕು. ಮರದ ಪ್ರತಿಯೊಂದು ಪಾತ್ರೆಯನ್ನು ನೀರಿನಲ್ಲಿ ಜಾಲಿಸಿ ತೊಳೆಯಬೇಕು.
[13] “ ‘ಸ್ರಾವವುಳ್ಳವನು ತನ್ನ ಸ್ರಾವದಿಂದ ತನ್ನ ಶುದ್ಧತೆಗಾಗಿ ಏಳು ದಿನಗಳನ್ನು ಲೆಕ್ಕ ಮಾಡಿ, ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು. ಇದಲ್ಲದೆ ಹರಿಯುವ ನೀರಿನಲ್ಲಿ ಸ್ನಾನಮಾಡಬೇಕು. ಆಗ ಅವನು ಶುದ್ಧನಾಗಿರುವನು.
[14] ಎಂಟನೆಯ ದಿನದಲ್ಲಿ ಅವನು ತನಗಾಗಿ ಎರಡು ಬೆಳವಕ್ಕಿಗಳನ್ನು ಇಲ್ಲವೆ ಎರಡು ಪಾರಿವಾಳ ಮರಿಗಳನ್ನು ತೆಗೆದುಕೊಂಡು ದೇವದರ್ಶನದ ಗುಡಾರದ ಬಾಗಿಲ ಬಳಿ ಯೆಹೋವ ದೇವರ ಎದುರಿನಲ್ಲಿ ಬಂದು ಅವುಗಳನ್ನು ಯಾಜಕನಿಗೆ ಕೊಡಬೇಕು.
[15] ಆಗ ಯಾಜಕನು ಒಂದನ್ನು ಪಾಪ ಪರಿಹಾರದ ಬಲಿಗಾಗಿ ಮತ್ತು ಇನ್ನೊಂದನ್ನು ದಹನಬಲಿಗಾಗಿ ಅವುಗಳನ್ನು ಸಮರ್ಪಿಸಬೇಕು, ಯಾಜಕನು ಅವನ ಸ್ರಾವಕ್ಕೋಸ್ಕರ ಯೆಹೋವ ದೇವರ ಎದುರಿನಲ್ಲಿ ಪ್ರಾಯಶ್ಚಿತ್ತವನ್ನು ಮಾಡಬೇಕು.
[16] “ ‘ಒಬ್ಬನಿಗೆ ವೀರ್ಯವು ಹೊರಟು ಹೋದರೆ, ಅವನು ತನ್ನ ಶರೀರವನ್ನೆಲ್ಲಾ ನೀರಿನಲ್ಲಿ ತೊಳೆದು, ಸಂಜೆಯವರೆಗೆ ಅಶುದ್ಧನಾಗಿರಬೇಕು.
[17] ವೀರ್ಯವು ಬಿದ್ದ ಪ್ರತಿಯೊಂದು ಬಟ್ಟೆ ಮತ್ತು ಪ್ರತಿಯೊಂದು ಚರ್ಮವನ್ನು ನೀರಿನಿಂದ ತೊಳೆದು, ಸಂಜೆಯವರೆಗೆ ಅಶುದ್ಧವಾಗಿರಬೇಕು.
[18] ಇದಲ್ಲದೆ ಸ್ತ್ರೀಯೊಂದಿಗೆ ಒಬ್ಬನು ಮಲಗಿ, ವೀರ್ಯ ಸ್ರಾವವಾಗಿದ್ದರೆ, ಅವರಿಬ್ಬರೂ ನೀರಿನಲ್ಲಿ ಸ್ನಾನಮಾಡಬೇಕು. ಸಂಜೆಯವರೆಗೆ ಅಶುದ್ಧರಾಗಿರಬೇಕು.
[19] “ ‘ಒಬ್ಬ ಸ್ತ್ರೀಗೆ ತನ್ನ ಶರೀರದಲ್ಲಿ ರಕ್ತ ಸ್ರಾವವಿದ್ದರೆ, ಅವಳು ಏಳು ದಿವಸಗಳವರೆಗೆ ಪ್ರತ್ಯೇಕವಾಗಿರಬೇಕು, ಅವಳನ್ನು ಯಾರಾದರೂ ಮುಟ್ಟಿದರೆ, ಅವರು ಸಂಜೆಯವರೆಗೆ ಅಶುದ್ಧರಾಗಿರುವರು.
[20] “ ‘ಅವಳು ಮುಟ್ಟಾದಾಗ ಅವಳು ಮಲಗುವ ಪ್ರತಿಯೊಂದು ಹಾಸಿಗೆ ಅಶುದ್ಧವಾಗಿರುವುದು. ಅವಳು ಕೂತುಕೊಳ್ಳುವ ಪ್ರತಿಯೊಂದು ವಸ್ತುವು ಅಶುದ್ಧವಾಗಿರುವುದು.
[21] ಅವಳ ಹಾಸಿಗೆಯನ್ನು ಮುಟ್ಟುವವರು ತಮ್ಮ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಸಂಜೆಯವರೆಗೆ ಅಶುದ್ಧರಾಗಿರುವರು.
[22] ಅವಳು ಯಾವುದರ ಮೇಲೆ ಕುಳಿತಿದ್ದಳೋ, ಅದನ್ನು ಮುಟ್ಟಿದವರು ತಮ್ಮ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಬೇಕು. ಅವರು ಸಂಜೆಯವರೆಗೆ ಅಶುದ್ಧರಾಗಿರುವರು.
[23] ಇದಲ್ಲದೆ ಅವಳ ಹಾಸಿಗೆಯ ಮೇಲಾಗಲಿ ಇಲ್ಲವೆ ಅವಳು ಕುಳಿತುಕೊಂಡ ಯಾವದರ ಮೇಲಾಗಲಿ ಇರುವುದನ್ನು ಮುಟ್ಟಿದವರು ಸಂಜೆಯವರೆಗೆ ಅಶುದ್ಧರಾಗಿರುವರು.
[24] “ ‘ಯಾವನಾದರೂ ಅವಳೊಂದಿಗೆ ಸಂಗಮಿಸಿದರೆ ಮತ್ತು ಅವಳ ಸ್ರಾವವು ಅವನಿಗೆ ತಗಲಿದರೆ, ಅವನು ಏಳು ದಿವಸ ಅಶುದ್ಧನಾಗಿರಬೇಕು. ಅವನು ಮಲಗಿಕೊಳ್ಳುವ ಹಾಸಿಗೆಯೆಲ್ಲಾ ಅಶುದ್ಧವಾಗಿರುವುದು.
[25] “ ‘ಇದಲ್ಲದೆ ಸ್ತ್ರೀಗೆ ಅವಳ ಮುಟ್ಟಿನ ಕಾಲಕ್ಕಿಂತಲೂ ಹೆಚ್ಚು ದಿನ ರಕ್ತಸ್ರಾವವು ಇದ್ದರೆ, ಇಲ್ಲವೆ ಮುಟ್ಟಾಗಿದ್ದ ಕಾಲದಲ್ಲಾಗುವ ರಕ್ತಸ್ರಾವಕ್ಕಿಂತ ಹೆಚ್ಚಾಗಿ ಹರಿಯುತ್ತಿದ್ದರೆ, ಅವಳ ಸ್ರಾವದ ಅಶುದ್ಧತ್ವದ ಎಲ್ಲಾ ದಿನಗಳು ಅವಳ ಮುಟ್ಟಿನ ದಿನಗಳಂತೆ ಇರಬೇಕು. ಅವಳು ಅಶುದ್ಧಳಾಗಿರುವಳು.
[26] ಅವಳ ಸ್ರಾವದ ಎಲ್ಲಾ ದಿನಗಳಲ್ಲಿ ಅವಳು ಮಲಗಿಕೊಳ್ಳುವ ಹಾಸಿಗೆಯು, ಅವಳ ಮುಟ್ಟಿನ ಹಾಸಿಗೆಯಂತೆ ಅಶುದ್ಧವಾಗಿರುವುದು. ಅವಳು ಕುಳಿತುಕೊಳ್ಳುವುದೆಲ್ಲವೂ ಅವಳ ಮುಟ್ಟಿನ ಅಶುದ್ಧತೆಯಂತೆಯೇ ಅಶುದ್ಧವಾಗಿರುವುದು.
[27] ಯಾರಾದರೂ ಆ ವಸ್ತುಗಳನ್ನು ಮುಟ್ಟಿದರೆ ಅಶುದ್ಧರಾಗಿರುವರು. ತಮ್ಮ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಅವರು ಸಂಜೆಯವರೆಗೆ ಅಶುದ್ಧರಾಗಿರುವರು.
[28] “ ‘ಅವಳು ತನ್ನ ಸ್ರಾವದಿಂದ ಶುದ್ಧಳಾದರೆ, ಅವಳು ಶುದ್ಧಳಾದಂದಿನಿಂದ ತನಗಾಗಿ ಏಳು ದಿನಗಳನ್ನು ಲೆಕ್ಕಿಸಬೇಕು.
[29] ಎಂಟನೆಯ ದಿನದಲ್ಲಿ ಅವಳು ಎರಡು ಬೆಳವಕ್ಕಿಗಳನ್ನಾಗಲಿ, ಎರಡು ಪಾರಿವಾಳದ ಮರಿಗಳನ್ನಾಗಲಿ ತೆಗೆದುಕೊಂಡು, ದೇವದರ್ಶನದ ಗುಡಾರದ ಬಾಗಿಲ ಬಳಿ ಯಾಜಕನ ಬಳಿಗೆ ತರಬೇಕು.
[30] ಯಾಜಕನು ಒಂದನ್ನು ಪಾಪ ಪರಿಹಾರದ ಬಲಿಗಾಗಿಯೂ, ಇನ್ನೊಂದನ್ನು ದಹನಬಲಿಗಾಗಿಯೂ ಸಮರ್ಪಿಸಬೇಕು, ಯಾಜಕನು ಅವಳಿಗಾಗಿ ಅವಳ ಅಶುದ್ಧತೆಯ ಸ್ರಾವದ ವಿಷಯದಲ್ಲಿ ಯೆಹೋವ ದೇವರ ಎದುರಿನಲ್ಲಿ ಪ್ರಾಯಶ್ಚಿತ್ತ ಮಾಡಬೇಕು.
[31] “ ‘ಹೀಗೆ ನೀವು ಇಸ್ರಾಯೇಲರನ್ನು ಅಶುದ್ಧತೆಯಿಂದ ದೂರವಾಗಿರುವಂತೆ ನೋಡಿಕೊಳ್ಳಬೇಕು. ಆಗ ಅವರು ತಮ್ಮ ಮಧ್ಯದಲ್ಲಿರುವ ನನ್ನ ಗುಡಾರವನ್ನು ಅಶುದ್ಧ ಮಾಡದೆ, ತಮ್ಮ ಅಶುದ್ಧತ್ವದಿಂದ ಸಾಯುವುದಿಲ್ಲ.’ ”
[32] ಮೇಹಸ್ರಾವವುಳ್ಳವನಿಗೂ ವೀರ್ಯ ಸ್ರಾವವುಳ್ಳವನಿಗೂ ಅವುಗಳಿಂದ ಅಶುದ್ಧವಾಗುವವರೆಗೂ ಇರುವ ನಿಯಮವು ಇದೆ.
[33] ಮುಟ್ಟು ಇರುವವಳಿಗೂ, ಸ್ರಾವವಿರುವ ಪುರುಷನಿಗೂ ಸ್ತ್ರೀಗೂ, ಅಶುದ್ಧವಾದವಳ ಸಂಗಡ ಮಲಗಿದವನಿಗೂ ಇರುವ ನಿಯಮ ಇದೆ.