[1] ಯೆಹೋವ ದೇವರು ಮೋಶೆಗೆ,
[2] “ನೀನು ಇಸ್ರಾಯೇಲರೊಂದಿಗೆ ಮಾತನಾಡಿ ಹೀಗೆ ಹೇಳಬೇಕು, ‘ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.
[3] ನೀವು ವಾಸವಾಗಿದ್ದ ಈಜಿಪ್ಟ್ ದೇಶದ ಆಚಾರಗಳನ್ನು ಅನುಸರಿಸಬಾರದು. ನಿಮ್ಮನ್ನು ಸೇರಿಸಲಿರುವ ಕಾನಾನ್ ದೇಶದವರ ಆಚಾರಗಳನ್ನು ನೀವು ಮಾಡಬಾರದು. ಇಲ್ಲವೆ ನೀವು ಅವರ ಪದ್ಧತಿಗಳನುಸಾರ ನಡೆಯಬಾರದು.
[4] ನೀವು ನನ್ನ ನಿರ್ಣಯಗಳನ್ನು ಕೈಗೊಂಡು ಕಟ್ಟಳೆಗಳ ಪ್ರಕಾರ ನಡೆಯಬೇಕು. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.
[5] ಆದ್ದರಿಂದ ನೀವು ನನ್ನ ನಿಯಮಗಳನ್ನೂ, ನನ್ನ ನಿರ್ಣಯಗಳನ್ನೂ ಕೈಗೊಳ್ಳಿರಿ. ಇವುಗಳನ್ನು ಅನುಸರಿಸುವವರು ನಿಯಮಗಳ ಮೂಲಕವೇ ಬದುಕುವರು, ನಾನೇ ಯೆಹೋವ ದೇವರು.
[6] “ ‘ನಿಮ್ಮಲ್ಲಿ ಯಾವನಾದರೂ ತನ್ನ ಹತ್ತಿರ ಸಂಬಂಧಿಯೊಡನೆ ಲೈಂಗಿಕ ಸಂಬಂಧ ಬೆಳೆಸಬಾರದು, ನಾನೇ ಯೆಹೋವ ದೇವರು.
[7] “ ‘ನಿನ್ನ ತಾಯಿಯೊಂದಿಗೆ ಲೈಂಗಿಕ ಸಂಬಂಧ ಮಾಡಿ, ನಿನ್ನ ತಂದೆಯನ್ನು ಅಗೌರವಿಸಬೇಡ. ಆಕೆ ನಿನ್ನ ತಾಯಿ: ಆಕೆಯೊಂದಿಗೆ ಇಂಥ ಸಂಬಂಧ ಬೇಡ.
[8] “ ‘ನಿನ್ನ ಮಲತಾಯಿಯೊಂದಿಗೆ ಲೈಂಗಿಕ ಸಂಬಂಧ ಮಾಡಬೇಡ. ಅದು ನಿನ್ನ ತಂದೆಗೆ ಅಗೌರವವನ್ನುಂಟು ಮಾಡುವುದು.
[9] “ ‘ನಿನ್ನ ಸಹೋದರಿಯೊಂದಿಗೆ ಲೈಂಗಿಕ ಸಂಬಂಧ ಮಾಡಬೇಡ. ಆಕೆ ನಿನ್ನ ತಂದೆಯ ಮಗಳಾಗಿರಬಹುದು ಇಲ್ಲವೆ ತಾಯಿಯ ಮಗಳಾಗಿರಬಹುದು. ಆಕೆ ಒಂದೇ ಮನೆಯಲ್ಲಿ ಹುಟ್ಟಿರಬಹುದು ಇಲ್ಲವೆ ಬೇರೆ ಕಡೆಯಲ್ಲಿ ಹುಟ್ಟಿರಬಹುದು ಆಕೆಯೊಂದಿಗೆ ಲೈಂಗಿಕ ಸಂಬಂಧ ಮಾಡಬೇಡ.
[10] “ ‘ನಿನ್ನ ಮಗನ ಮಗಳ ಕೂಡ, ಇಲ್ಲವೆ ಮಗಳ ಮಗಳ ಕೂಡ ಲೈಂಗಿಕ ಸಂಬಂಧ ಮಾಡಬೇಡ. ಅದು ನಿನಗೆ ಅಗೌರವವಾಗಿದೆ.
[11] “ ‘ನಿನ್ನ ತಂದೆಯಿಂದ ಜನಿಸಿದ ನಿನ್ನ ತಂದೆಯ ಮಗಳೊಂದಿಗೆ ಲೈಂಗಿಕ ಸಂಬಂಧ ಮಾಡಬೇಡ. ಆಕೆ ನಿನ್ನ ಸಹೋದರಿ.
[12] “ ‘ನಿನ್ನ ತಂದೆಯ ಸಹೋದರಿಯೊಂದಿಗೆ ಲೈಂಗಿಕ ಸಂಬಂಧ ಮಾಡಬೇಡ. ಆಕೆ ನಿನ್ನ ತಂದೆಯ ಸಮೀಪ ಬಂಧು.
[13] “ ‘ನಿನ್ನ ತಾಯಿಯ ಸಹೋದರಿಯೊಂದಿಗೆ ಲೈಂಗಿಕ ಸಂಬಂಧ ಮಾಡಬೇಡ. ಅವಳು ನಿನ್ನ ತಾಯಿಗೆ ಹತ್ತಿರದ ಸಂಬಂಧಿಯಾಗಿದ್ದಾಳೆ.
[14] “ ‘ನಿನ್ನ ತಂದೆಯ ಸಹೋದರನ ಹೆಂಡತಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಬೇಡ. ನಿನ್ನ ತಂದೆಯ ಸಹೋದರನನ್ನು ಅಗೌರವಿಸಬೇಡ. ಆಕೆ ನಿನ್ನ ದೊಡ್ಡಮ್ಮ.
[15] “ ‘ನಿನ್ನ ಸೊಸೆಯೊಂದಿಗೆ ಲೈಂಗಿಕ ಸಂಪರ್ಕ ಬೇಡ. ಆಕೆ ನಿನ್ನ ಮಗನ ಹೆಂಡತಿ. ನೀನು ಅವಳ ಬೆತ್ತಲೆತನವನ್ನು ಕಾಣುವಂತೆ ಮಾಡಬಾರದು.
[16] “ ‘ನೀನು ನಿನ್ನ ಸಹೋದರನ ಹೆಂಡತಿಯೊಂದಿಗೆ ಲೈಂಗಿಕ ಸಂಬಂಧ ಮಾಡಬೇಡ. ಅದು ನಿನ್ನ ಸಹೋದರನನ್ನು ಅಗೌರವಿಸುವುದು.
[17] “ ‘ಸ್ತ್ರೀಯೊಂದಿಗೂ, ಆಕೆಯ ಮಗಳೊಂದಿಗೂ ಒಟ್ಟಿಗೆ ಲೈಂಗಿಕ ಸಂಪರ್ಕ ಬೇಡ. ಆಕೆಯ ಮಗನ ಮಗಳೊಂದಿಗಾದರೂ, ಮಗಳ ಮಗಳೊಂದಿಗಾದರೂ ಲೈಂಗಿಕ ಸಂಪರ್ಕ ಬೇಡ. ಅವರು ಆಕೆಯ ಹತ್ತಿರ ಸಂಬಂಧಿಗಳು. ಅದು ದುಷ್ಟತನ.
[18] “ ‘ನಿನ್ನ ಹೆಂಡತಿಗೆ ವೈರಿಯಾಗುವ ಹಾಗೆ ಅವಳ ಸಹೋದರಿಯನ್ನು ಹೆಂಡತಿಯಾಗಿ ತೆಗೆದುಕೊಳ್ಳಬೇಡ. ಒಬ್ಬಳು ಜೀವಂತವಾಗಿರುವಾಗ ಮತ್ತೊಬ್ಬಳೊಂದಿಗೆ ಲೈಂಗಿಕ ಸಂಬಂಧ ಮಾಡಬೇಡ.
[19] “ ‘ಮುಟ್ಟಿನಿಂದ ಅಶುದ್ಧಳಾದ ಸ್ತ್ರೀಯ ಸಂಪರ್ಕ ಮಾಡಬೇಡ.
[20] “ ‘ಪರರ ಹೆಂಡತಿಯೊಂದಿಗೆ ನೀನು ಸಂಗಮಿಸಿ ಅಶುದ್ಧನಾಗಬೇಡ.
[21] “ ‘ನಿನ್ನ ಮಕ್ಕಳಲ್ಲಿ ಯಾರನ್ನೂ ಮೋಲೆಕ್ ದೇವತೆಗೆ ಸಮರ್ಪಿಸಿ, ನಿನ್ನ ದೇವರ ಹೆಸರನ್ನು ಅಪಕೀರ್ತಿಗೆ ಗುರಿಮಾಡಬಾರದು. ನಾನು ಯೆಹೋವ ದೇವರು.
[22] “ ‘ಸ್ತ್ರೀಯೊಂದಿಗೆ ಮಲಗಿಕೊಳ್ಳುವಂತೆ ಪುರುಷನೊಂದಿಗೆ ಮಲಗಬಾರದು. ಅದು ಅಸಹ್ಯವಾದದ್ದು.
[23] “ ‘ಇದಲ್ಲದೆ ಪಶುವಿನೊಂದಿಗೆ ನೀನು ಮಲಗಿ ನಿನ್ನನ್ನು ಅಶುದ್ಧಮಾಡಿಕೊಳ್ಳಬಾರದು. ಯಾವ ಸ್ತ್ರೀಯೂ ಸಂಗಮಕ್ಕಾಗಿ ಪಶುವಿನ ಮುಂದೆ ನಿಲ್ಲಬಾರದು. ಅದು ಸ್ವಭಾವಕ್ಕೆ ವ್ಯತಿರಿಕ್ತವಾದದ್ದು.
[24] “ ‘ನೀವು ಈ ಯಾವ ವಿಷಯಗಳಲ್ಲಿಯೂ ನಿಮ್ಮನ್ನು ಅಶುದ್ಧಮಾಡಿಕೊಳ್ಳಬಾರದು. ಏಕೆಂದರೆ ನಿಮ್ಮ ಮುಂದೆಯೇ ನಾನು ಹೊರಡಿಸಿಬಿಟ್ಟ ಜನಾಂಗಗಳು ಇವೆಲ್ಲವುಗಳಿಂದ ಹೊಲೆಯಾಗಿವೆ.
[25] ದೇಶವೂ ಅಶುದ್ಧವಾಗಿದೆ. ಆದ್ದರಿಂದ ಅದರ ಮೇಲಿರುವ ಅಕ್ರಮವನ್ನು ನಾನು ದಂಡಿಸುವೆನು. ಆಗ ದೇಶವು ತಾನೇ ತನ್ನೊಳಗಿನ ನಿವಾಸಿಗಳನ್ನು ಕಾರಿಬಿಡುವುದು.
[26] ಆದ್ದರಿಂದ ನೀವು ನನ್ನ ನಿಯಮಗಳನ್ನು, ನನ್ನ ನಿರ್ಣಯಗಳನ್ನು ಕೈಗೊಳ್ಳಬೇಕು. ಸ್ವದೇಶದವರಲ್ಲಿ ಯಾವನಾಗಲಿ ಇಲ್ಲವೆ ನಿಮ್ಮೊಳಗೆ ಪ್ರವಾಸಿಯಾಗಿದ್ದ ಪರಕೀಯನಾಗಲಿ ಈ ಅಸಹ್ಯವಾದವುಗಳಲ್ಲಿ ಒಂದನ್ನೂ ಮಾಡಬಾರದು.
[27] ನಿಮ್ಮೆದುರಿನಲ್ಲಿದ್ದ ಆ ದೇಶದವರು ಈ ಎಲ್ಲಾ ಅಸಹ್ಯವಾದವುಗಳನ್ನು ಮಾಡಿದ್ದರಿಂದ ದೇಶವೂ ಅಶುದ್ಧವಾಯಿತು.
[28] ನೀವೂ ಅದನ್ನು ಅಶುದ್ಧಮಾಡಿದರೆ, ಅದು ನಿಮಗಿಂತ ಮೊದಲಿದ್ದ ಜನಾಂಗಗಳವರನ್ನು ಕಾರಿದಂತೆ ನಿಮ್ಮನ್ನೂ ಕಾರುವುದು.
[29] “ ‘ಏಕೆಂದರೆ ಯಾವನಾದರೂ ಈ ಅಸಹ್ಯವಾದವುಗಳಲ್ಲಿ ಯಾವುದನ್ನಾದರೂ ಮಾಡಿದರೆ, ಅವನನ್ನು ಅವರ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು.
[30] ನಿಮಗಿಂತ ಮೊದಲಿನವರು ಮಾಡಿದಂತೆ ಅಸಹ್ಯವಾದ ಆಚರಣೆಗಳಲ್ಲಿ ಒಂದನ್ನಾದರೂ ನೀವು ಮಾಡದಂತೆ ಮತ್ತು ಅವುಗಳಲ್ಲಿ ನಿಮ್ಮನ್ನು ಅಶುದ್ಧಮಾಡಿಕೊಳ್ಳದಂತೆ ನೀವು ನನ್ನ ಕಟ್ಟಳೆಗಳನ್ನು ಕೈಗೊಳ್ಳಬೇಕು. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.’ ”