Skip to content
Opens in a new window
Listen to this chapter • 5:16

[1] ಯೆಹೋವ ದೇವರು ಮೋಶೆಗೆ ಹೇಳಿದ್ದೇನೆಂದರೆ, “ನೀನು ಆರೋನನ ಮಕ್ಕಳಾದ ಯಾಜಕರೊಂದಿಗೆ ಮಾತನಾಡಿ, ಅವರಿಗೆ ಹೀಗೆ ಹೇಳು: ಸತ್ತವರ ದೇಹವನ್ನು ಮುಟ್ಟುವುದರಿಂದ ಯಾವ ಯಾಜಕನೂ ಅಪವಿತ್ರನಾಗಬಾರದು.

[2] ಆದರೆ ತನ್ನ ಹತ್ತಿರದ ಸಂಬಂಧಿಯಾಗಿ, ಅಂದರೆ ಅವನ ತಾಯಿಯಾಗಿ, ತಂದೆಯಾಗಿ, ಅವನ ಮಗನಿಗಾಗಿ, ಅವನ ಮಗಳಿಗಾಗಿ, ಅವನ ಸಹೋದರನಿಗಾಗಿ,

[3] ಅವನಿಗೆ ಹತ್ತಿರದ ಗಂಡನಿಲ್ಲದ ಕನ್ನಿಕೆಯಾದ ಸಹೋದರಿಗಾಗಿ ಹೊರತು,

[4] ಅವನು ತನ್ನ ಜನರೊಳಗೆ ಮುಖ್ಯಸ್ಥನಾಗಿರುವುದರಿಂದ ತನ್ನನ್ನು ತಾನು ಅಪವಿತ್ರವಾಗಬಾರದು.

[5] “ ‘ಅವರು ತಮ್ಮ ತಲೆಯನ್ನು ಬೋಳಿಸಿಕೊಳ್ಳಬಾರದು. ಅಲ್ಲದೆ ತಮ್ಮ ಗಡ್ಡದ ಮೂಲೆಯನ್ನು ಬೋಳಿಸಿಕೊಳ್ಳಬಾರದು. ದೇಹವನ್ನು ಗಾಯಮಾಡಿಕೊಳ್ಳಬಾರದು.

[6] ಅವರು ತಮ್ಮ ಯೆಹೋವ ದೇವರಿಗೆ ಅಗ್ನಿಯಿಂದ ಮಾಡಿದ ಸಮರ್ಪಣೆಗಳನ್ನು ಮತ್ತು ತನ್ನ ದೇವರ ರೊಟ್ಟಿಯನ್ನು ಸಮರ್ಪಿಸುವುದರಿಂದ, ಅವರು ತಮ್ಮ ದೇವರ ಹೆಸರನ್ನು ಅಗೌರವಪಡಿಸದೆ, ತಮ್ಮ ದೇವರಿಗೆ ಪರಿಶುದ್ಧರಾಗಿರಬೇಕು. ಆದಕಾರಣ ಅವರು ಪರಿಶುದ್ಧರಾಗಿರುವರು.

[7] “ ‘ಯಾಜಕರು ತಮ್ಮ ದೇವರಿಗೆ ಪರಿಶುದ್ಧರಾಗಿರುವುದರಿಂದ ವೇಶ್ಯೆಯನ್ನಾಗಲಿ, ಶೀಲಭ್ರಷ್ಠ ಸ್ತ್ರೀಯನ್ನಾಗಲಿ, ಗಂಡನಿಂದ ವಿಚ್ಛೇದನ ಪಡೆದವಳನ್ನಾಗಲಿ ಹೆಂಡತಿಯನ್ನಾಗಿ ತೆಗೆದುಕೊಳ್ಳಬಾರದು.

[8] ಅವರನ್ನು ಪರಿಶುದ್ಧರೆಣಿಸಿ, ಏಕೆಂದರೆ ನಿಮ್ಮ ದೇವರಾದ ನನಗೆ ಆಹಾರವನ್ನು ಸಮರ್ಪಿಸುವವರಾದ ಕಾರಣ ನೀನು ಅವರನ್ನು ದೇವರ ದಾಸರೆಂದು ಭಾವಿಸಬೇಕು. ನಿಮ್ನನ್ನು ನನ್ನ ಸೇವೆಗೆ ಪ್ರತಿಷ್ಠಿಸಿಕೊಂಡಿರುವ ಯೆಹೋವ ದೇವರೆಂಬ ನಾನು ಪರಿಶುದ್ಧನಾಗಿರುವುದರಿಂದ ಅವರನ್ನೂ ಪರಿಶುದ್ಧರೆಂದು ನೀನು ಭಾವಿಸಬೇಕು.

[9] “ ‘ಯಾವುದೇ ಯಾಜಕನ ಮಗಳು ವ್ಯಭಿಚಾರ ಕೃತ್ಯದಿಂದ ತನ್ನನ್ನು ಅಪವಿತ್ರ ಮಾಡಿಕೊಂಡರೆ, ಅವಳು ತನ್ನ ತಂದೆಯನ್ನು ಅಗೌರವಿಸಿದ್ದಾಳೆ. ಅವಳನ್ನು ಬೆಂಕಿಯಿಂದ ಸುಡಬೇಕು.

[10] “ ‘ತನ್ನ ಸಹೋದರರೊಳಗೆ ಮಹಾಯಾಜಕನಾಗಿದ್ದು, ಯಾವನು ತೈಲಾಭಿಷೇಕ ಹೊಂದಿ, ದೀಕ್ಷಾವಸ್ತ್ರಗಳನ್ನು ಧರಿಸಿ, ಪಟ್ಟಕ್ಕೆ ಬರುವನೋ, ಅವನು ತನ್ನ ತಲೆಯನ್ನು ಮುಚ್ಚಿಕೊಳ್ಳಲೂಬಾರದು, ತನ್ನ ಬಟ್ಟೆಗಳನ್ನು ಹರಿದುಕೊಳ್ಳಲೂಬಾರದು.

[11] ಯಾವ ಮೃತ ಶರೀರದ ಬಳಿಗೂ ಹೋಗಬಾರದು, ಅವನು ತನ್ನ ತಂದೆತಾಯಿಗಳ ಮರಣದ ನಿಮಿತ್ತ, ತನ್ನನ್ನು ಅಶುದ್ಧಮಾಡಿಕೊಳ್ಳಬಾರದು.

[12] ಇದಲ್ಲದೆ ಪರಿಶುದ್ಧ ಸ್ಥಳದಿಂದ ಹೊರಗೆ ಹೋಗಬಾರದು ಮತ್ತು ತನ್ನ ದೇವರ ಪರಿಶುದ್ಧ ಸ್ಥಳವನ್ನು ಅಪವಿತ್ರ ಮಾಡಬಾರದು. ಏಕೆಂದರೆ ತನ್ನ ದೇವರ ಅಭಿಷೇಕ ತೈಲವನ್ನು ತಲೆಯ ಮೇಲೆ ಹೊಯ್ಯಿಸಿಕೊಂಡು ಪ್ರತಿಷ್ಠಿತನಾಗಿದ್ದಾನೆ. ನಾನೇ ಯೆಹೋವ ದೇವರು.

[13] “ ‘ಅವನು ಪುರುಷ ಸಂಪರ್ಕವೇ ಇಲ್ಲದ ಯುವತಿಯನ್ನು ಮದುವೆ ಮಾಡಿಕೊಳ್ಳಬೇಕೇ ಹೊರತು

[14] ವಿಧವೆಯನ್ನಾಗಲಿ, ಗಂಡ ಬಿಟ್ಟ ಸ್ತ್ರೀಯನ್ನಾಗಲಿ, ಇಲ್ಲವೆ ಅಪವಿತ್ರಳನ್ನಾಗಲಿ, ವೇಶ್ಯೆಯನ್ನಾಗಲಿ, ಇಂಥವರನ್ನು ಅವನು ಮದುವೆಯಾಗಬಾರದು. ಆದರೆ ತನ್ನ ಸ್ವಂತ ಜನರಲ್ಲಿ ಒಬ್ಬ ಕನ್ನಿಕೆಯನ್ನು ತನಗೆ ಹೆಂಡತಿಯನ್ನಾಗಿ ಮಾಡಿಕೊಳ್ಳಬೇಕು.

[15] ಇದಲ್ಲದೆ ಅವನು ತನ್ನ ಜನರೊಳಗೆ ತನ್ನ ಸಂತತಿಯನ್ನು ಅಪವಿತ್ರ ಮಾಡಬಾರದು. ಏಕೆಂದರೆ ಯೆಹೋವ ದೇವರಾದ ನಾನು ಅವನನ್ನು ಶುದ್ಧೀಕರಿಸುತ್ತೇನೆ.’ ”

[16] ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,

[17] “ಆರೋನನೊಂದಿಗೆ ಮಾತನಾಡಿ ಹೀಗೆ ಹೇಳು: ‘ನಿನ್ನ ಸಂತತಿಯ ವಂಶಾವಳಿಗಳಲ್ಲಿ ಯಾವನಿಗೆ ನ್ಯೂನತೆವಿರುತ್ತದೋ, ಅವನು ದೇವರ ರೊಟ್ಟಿಯನ್ನು ಸಮರ್ಪಿಸುವುದಕ್ಕಾಗಿ ಬರಬಾರದು.

[18] ಊನಗೊಂಡ ಮನುಷ್ಯನು ಸಮೀಪಕ್ಕೆ ಬರಬಾರದು. ಎಂದರೆ, ಕಣ್ಣಿಲ್ಲದವನು, ಕುಂಟನು, ಕುರೂಪವುಳ್ಳವನು, ಅಂಗವಿಕಲನು,

[19] ಮುರಿದ ಪಾದವುಳ್ಳವನು, ಮುರಿದ ಕೈಯುಳ್ಳವನು,

[20] ಗೂನು ಬೆನ್ನುಳ್ಳವನು, ಗಿಡ್ಡನು, ಕಣ್ಣುಗಳಲ್ಲಿ ನ್ಯೂನತೆವುಳ್ಳವನು, ಕಜ್ಜಿತುರಿಗಳುಳ್ಳವನು, ತನ್ನನ್ನು ನಪುಂಸಕನನ್ನಾಗಿ ಮಾಡಿಕೊಂಡವನು,

[21] ಯಾಜಕನಾದ ಆರೋನನ ಸಂತತಿಯಲ್ಲಿ ನ್ಯೂನತೆವುಳ್ಳ ಯಾವ ಮನುಷ್ಯನೂ ಅಗ್ನಿ ಸಮರ್ಪಣೆಗಳನ್ನು ಅರ್ಪಿಸುವುದಕ್ಕಾಗಿ ಯೆಹೋವ ದೇವರ ಸನ್ನಿಧಿಯಲ್ಲಿ ಬರಬಾರದು. ನ್ಯೂನತೆವುಳ್ಳವನು ತನ್ನ ದೇವರ ರೊಟ್ಟಿಯನ್ನು ಅರ್ಪಿಸುವುದಕ್ಕಾಗಿ ಸಮೀಪ ಬರಬಾರದು.

[22] ಅವನು ದೇವರ ರೊಟ್ಟಿಯಲ್ಲಿ ಪರಿಶುದ್ಧವಾದದ್ದನ್ನೂ, ಮಹಾಪರಿಶುದ್ಧವಾದದ್ದನ್ನೂ ತಿನ್ನಬಹುದು.

[23] ಆದರೆ ಅವನು ನ್ಯೂನತೆವುಳ್ಳವನಾದ್ದರಿಂದ ತೆರೆಯ ಒಳಗೆ ಹೋಗಬಾರದು ಹಾಗು ಯಜ್ಞವೇದಿಯ ಬಳಿಗೆ ಬರಬಾರದು. ಹೀಗೆ ಅವನು ನನ್ನ ಪರಿಶುದ್ಧ ಸ್ಥಳವನ್ನು ಅಪವಿತ್ರ ಮಾಡಬಾರದು. ಏಕೆಂದರೆ ಅವರನ್ನು ಶುದ್ಧೀಕರಿಸುವ ಯೆಹೋವ ದೇವರು ನಾನೇ.’ ”

[24] ಮೋಶೆಯು ಅದನ್ನು ಆರೋನನಿಗೂ, ಅವನ ಪುತ್ರರಿಗೂ, ಇಸ್ರಾಯೇಲರಿಗೂ ಹೇಳಿದನು.

ಯಾಜಕಕಾಂಡ — Chapters