[1] ಯೆಹೋವ ದೇವರು ಮೋಶೆ ಮತ್ತು ಆರೋನರೊಡನೆ ಮಾತನಾಡಿ ಹೇಳಿದ್ದೇನೆಂದರೆ,
[2] “ಒಬ್ಬ ಮನುಷ್ಯನು ತನ್ನ ಚರ್ಮದ ಮೇಲೆ ಬಾವಾಗಲಿ, ಕಜ್ಜಿಯಾಗಲಿ, ಹೊಳಪಿನ ಮಚ್ಚೆಯಾಗಲಿ ಮತ್ತು ಅವನ ಚರ್ಮದಲ್ಲಿ ಕುಷ್ಠದ ವ್ಯಾಧಿಯಂತಿದ್ದರೆ, ಅವನು ಯಾಜಕನಾದ ಆರೋನನ ಬಳಿಗಾದರೂ ಇಲ್ಲವೆ ಯಾಜಕರಾದ ಅವನ ಪುತ್ರರಲ್ಲಿ ಒಬ್ಬನ ಬಳಿಗಾದರೂ ಕರೆದುಕೊಂಡು ಬರಬೇಕು.
[3] ಯಾಜಕನು ಚರ್ಮದ ಮೇಲಿರುವ ವ್ಯಾಧಿಯನ್ನು ಪರೀಕ್ಷಿಸಬೇಕು. ವ್ಯಾಧಿಯಲ್ಲಿನ ಕೂದಲು ಬೆಳ್ಳಗಾದರೆ, ಆ ವ್ಯಾಧಿಯು ಅವನ ಚರ್ಮಕ್ಕಿಂತಲೂ ಆಳವಾಗಿ ಕಂಡರೆ, ಅದು ಚರ್ಮರೋಗವಾಗಿರುವುದು. ಆಗ ಯಾಜಕನು ಅವನನ್ನು ನೋಡಿ ಅಶುದ್ಧನೆಂದು ನಿರ್ಣಯಿಸಬೇಕು.
[4] ಅವನ ಚರ್ಮದಲ್ಲಿ ಬಿಳುಪಾದ ಮಚ್ಚೆಯಿದ್ದು, ಅದು ನೋಡುವುದಕ್ಕೆ ಚರ್ಮಕ್ಕಿಂತಲೂ ಆಳವಾಗಿದ್ದು, ಅಲ್ಲಿನ ಕೂದಲು ಬೆಳ್ಳಗಾಗದಿದ್ದರೆ ಯಾಜಕನು ಆ ವ್ಯಾಧಿಯವನನ್ನು ಏಳು ದಿನ ಪ್ರತ್ಯೇಕವಾಗಿ ಇರಿಸಬೇಕು.
[5] ಯಾಜಕನು ಏಳನೆಯ ದಿನದಲ್ಲಿ ಅವನನ್ನು ಪರೀಕ್ಷಿಸಿದಾಗ, ಆ ವ್ಯಾಧಿ ನಿಂತ ಹಾಗೆ ಕಾಣಿಸಿದರೆ, ಆ ವ್ಯಾಧಿ ಚರ್ಮದಲ್ಲಿ ಹರಡಿರದಿದ್ದರೆ, ಯಾಜಕನು ಅವನನ್ನು ಇನ್ನೂ ಏಳು ದಿನಗಳು ಪ್ರತ್ಯೇಕವಾಗಿ ಇರಿಸಬೇಕು.
[6] ಯಾಜಕನು ಅವನನ್ನು ಏಳನೆಯ ದಿನದಲ್ಲಿ ಪರೀಕ್ಷಿಸಬೇಕು. ಆಗ ವ್ಯಾಧಿಯು ಸ್ವಲ್ಪ ಕಪ್ಪಾಗಿದ್ದು, ಚರ್ಮದಲ್ಲೆಲ್ಲಾ ಹರಡಿರದಿದ್ದರೆ ಯಾಜಕನು ಅವನನ್ನು ಶುದ್ಧನೆಂದು ನಿರ್ಣಯಿಸಬೇಕು. ಅದು ಬರೀ ಕಜ್ಜಿಯಾದ ಕಾರಣ ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಶುದ್ಧನಾಗಿರುವನು.
[7] ಅವನು ತನ್ನ ಶುದ್ಧಿಗಾಗಿ ಯಾಜಕನಿಗೆ ತೋರಿಸಿಕೊಂಡ ಮೇಲೆ ಕಜ್ಜಿಯು ಚರ್ಮದ ಹೊರಗೆಲ್ಲಾ ಹೆಚ್ಚಾಗಿ ಹಬ್ಬಿದರೆ, ಅವನು ತಿರುಗಿ ಯಾಜಕನಿಗೆ ತೋರಿಸಿಕೊಳ್ಳಬೇಕು.
[8] ಯಾಜಕನು ಅದನ್ನು ಪರೀಕ್ಷಿಸಿದಾಗ, ಕಜ್ಜಿಯ ಚರ್ಮವೇ ಹರಡಿರುವುದಾದರೆ ಆಗ ಅವನನ್ನು ಅಶುದ್ಧನೆಂದು ನಿರ್ಣಯಿಸಬೇಕು. ಏಕೆಂದರೆ ಅದು ಚರ್ಮರೋಗವಾಗಿರುವುದು.
[9] “ಚರ್ಮರೋಗವು ಮನುಷ್ಯನಲ್ಲಿ ಇರುವುದಾದರೆ, ಅವನನ್ನು ಯಾಜಕನ ಬಳಿಗೆ ಕರೆದುಕೊಂಡು ಬರಬೇಕು.
[10] ಆಗ ಯಾಜಕನು ಅವನನ್ನು ಪರೀಕ್ಷಿಸಬೇಕು, ಆ ಬಾವು ಚರ್ಮದಲ್ಲಿ ಬೆಳ್ಳಗಿದ್ದು, ಅದರ ಕೂದಲು ಬೆಳ್ಳಗಾಗಿ ಹೋಗಿದ್ದರೆ ಮತ್ತು ಆ ಬಾವಿನಲ್ಲಿ ಹಸಿ ಮಾಂಸವು ಇದ್ದರೆ,
[11] ಅದು ಅವನ ಚರ್ಮದಲ್ಲಿ ದೀರ್ಘಕಾಲದ ಚರ್ಮರೋಗವಾಗಿರುವುದು. ಆಗ ಯಾಜಕನು ಅವನು ಅಶುದ್ಧನೆಂದು ನುಡಿಯಬೇಕು ಮತ್ತು ಅವನನ್ನು ಪ್ರತ್ಯೇಕವಾಗಿ ಇರಿಸದೆ ಆಗಲೇ ಅಶುದ್ಧನೆಂದು ನಿರ್ಣಯಿಸಬೇಕು.
[12] “ಒಬ್ಬನಲ್ಲಿ ಸಾಂಕ್ರಾಮಿಕ ಚರ್ಮರೋಗ ಹತ್ತಿದರೆ ಮತ್ತು ಚರ್ಮವನ್ನೆಲ್ಲಾ ಹರಡಿಕೊಂಡು ತಲೆಯಿಂದ ಪಾದದವರೆಗೂ ಹರಡಿವುದುನ್ನು ಯಾಜಕನು ಪರೀಕ್ಷಿಸಿದರೆ,
[13] ಆಗ ಯಾಜಕನು ಅದನ್ನು ಗಮನಿಸಬೇಕು. ತೊನ್ನು ಹತ್ತಿದರೆ, ಅವನ ಮೈಯೆಲ್ಲವನ್ನು ಹರಡಿಕೊಂಡಿದ್ದರೆ, ಅವನು ವ್ಯಾಧಿಯಿಂದ ಶುದ್ಧನಾಗಿರುವನೆಂದು ನುಡಿಯಬೇಕು. ಅದು ಪೂರ್ತಿ ಬೆಳ್ಳಗಾಗಿರುವುದರಿಂದ ಅವನು ಶುದ್ಧನಾಗಿರುವನು.
[14] ಆದರೆ ಹಸಿ ಮಾಂಸವು ಅವನಲ್ಲಿ ಕಾಣಿಸಿಕೊಂಡರೆ ಅವನು ಅಶುದ್ಧನಾಗಿರುವನು.
[15] ಯಾಜಕನು ಹಸಿ ಮಾಂಸವನ್ನು ಪರೀಕ್ಷಿಸಿ ಅವನು ಅಶುದ್ಧನೆಂದು ನುಡಿಯಬೇಕು. ಏಕೆಂದರೆ ಹಸಿ ಮಾಂಸವು ಅಶುದ್ಧವಾದದ್ದು, ಅದು ಅಶುದ್ಧಗೊಳಿಸುವ ಚರ್ಮರೋಗವೇ.
[16] ಹಸಿ ಮಾಂಸವು ಮತ್ತೆ ಬದಲಾಗಿ ಬೆಳ್ಳಗಾದರೆ, ಅವನು ಯಾಜಕನ ಬಳಿಗೆ ಬರಬೇಕು.
[17] ಆಗ ಯಾಜಕನು ಅವನನ್ನು ಪರೀಕ್ಷಿಸಿ, ಆ ವ್ಯಾಧಿಯು ಬೆಳ್ಳಗಾಗಿದ್ದರೆ, ಯಾಜಕನು, ಅವನು ವ್ಯಾಧಿಯಿಂದ ಶುದ್ಧನಾಗಿರುವನೆಂದು ನುಡಿಯಬೇಕು. ಅವನು ಶುದ್ಧನಾಗಿರುವನು.
[18] “ಆ ದೇಹದ ಚರ್ಮದಲ್ಲಿ ಹುಣ್ಣು ಉಂಟಾಗಿ ವಾಸಿಯಾದರೂ
[19] ಆ ಹುಣ್ಣಿನ ಜಾಗದಲ್ಲಿ ಬಿಳಿಯ ಊತವಾಗಲಿ ಇಲ್ಲವೆ ಬಿಳುಪಾದ ಮಚ್ಚೆಯಾಗಲಿ, ಕೆಂಪು ಮಿಶ್ರಿತ ಕಲೆ ಉಂಟಾದರೆ ಅದನ್ನು ಯಾಜಕನಿಗೆ ತೋರಿಸಬೇಕು.
[20] ಯಾಜಕನು ಅದನ್ನು ಪರೀಕ್ಷಿಸಿದಾಗ, ಅದು ಚರ್ಮದಿಂದ ಕೆಳಗೆ ಕಂಡರೆ ಮತ್ತು ಅಲ್ಲಿಯ ಕೂದಲು ಬೆಳ್ಳಗಾಗಿದ್ದರೆ, ಯಾಜಕನು ಅವನನ್ನು ಅಶುದ್ಧನೆಂದು ನುಡಿಯಬೇಕು. ಅದು ಹುಣ್ಣಿನಿಂದ ಒಡೆದುಹೋದ ಚರ್ಮರೋಗವಾಗಿರುವುದು.
[21] ಆದರೆ ಯಾಜಕನು ಅದನ್ನು ಪರೀಕ್ಷಿಸಲು, ಅದರಲ್ಲಿ ಬಿಳಿಯ ಕೂದಲು ಇರದಿದ್ದರೆ ಮತ್ತು ಅದು ಚರ್ಮಕ್ಕಿಂತಲೂ ತಗ್ಗಾಗದಿದ್ದರೆ ಮತ್ತು ಸ್ವಲ್ಪ ಮಬ್ಬಾಗಿದ್ದರೆ, ಆಗ ಯಾಜಕನು ಅವನನ್ನು ಏಳು ದಿನಗಳು ಪ್ರತ್ಯೇಕವಾಗಿ ಇರಿಸಬೇಕು.
[22] ಅದು ಚರ್ಮದ ಹೊರಗೆಲ್ಲಾ ಹೆಚ್ಚಾಗಿ ಹರಡಿದ್ದರೆ, ಯಾಜಕನು ಅವನು ಅಶುದ್ಧನೆಂದು ನುಡಿಯಬೇಕು. ಅದು ಚರ್ಮರೋಗವಾಗಿದೆ.
[23] ಆದರೆ ಆ ಹೊಳಪಾದ ಕಲೆಯು ಹರಡದೆ ಅದೇ ಸ್ಥಳದಲ್ಲಿ ಇದ್ದು, ಅದು ಉರಿಯುವ ಹುಣ್ಣಾಗಿದ್ದರೂ ಯಾಜಕನು ಅವನನ್ನು ಶುದ್ಧನೆಂದು ನುಡಿಯಬೇಕು.
[24] “ಅವನ ದೇಹದ ಚರ್ಮದಲ್ಲಿ ಬೆಂಕಿಯ ಬೊಬ್ಬೆಯು ಉಂಟಾಗಿ ಆ ಬೊಬ್ಬೆಯ ಸಹ ಮಾಂಸವು ಬಿಳುಪಾದ ಇಲ್ಲವೆ ಸ್ವಲ್ಪ ಕೆಂಪಗೆ, ಬಿಳಿಯ ಹೊಳಪಾದ ಕಲೆಯಾಗಿದ್ದರೆ,
[25] ಯಾಜಕನು ಅದನ್ನು ಪರೀಕ್ಷಿಸಬೇಕು. ಆ ಹೊಳಪಾದ ಕಲೆಯ ಮೇಲೆ ಕೂದಲು ಬಿಳುಪಾಗಿ ತಿರುಗಿದ್ದರೆ ಮತ್ತು ಅದು ನೋಡುವುದಕ್ಕೆ ಚರ್ಮಕ್ಕಿಂತಲೂ ಆಳವಾಗಿದ್ದರೆ, ಅದು ಬೊಬ್ಬೆಯಿಂದ ಒಡೆದ ಚರ್ಮರೋಗವಾಗಿರುವುದು. ಆದಕಾರಣ ಅವನು ಅಶುದ್ಧನೆಂದು ಯಾಜಕನು ನುಡಿಯಬೇಕು. ಅದು ಚರ್ಮವ್ಯಾಧಿಯಾಗಿದೆ.
[26] ಆದರೆ ಯಾಜಕನು ಅದನ್ನು ಪರೀಕ್ಷಿಸಿದಾಗ, ಆ ಹೊಳಪಾದ ಮಚ್ಚೆಯ ಮೇಲೆ ಕೂದಲು ಬೆಳ್ಳಗಾಗದಿದ್ದರೆ ಮತ್ತು ಅದು ಚರ್ಮಕ್ಕಿಂತಲೂ ಆಳವಾಗಿರದೆ ಸ್ವಲ್ಪ ಮೋಟಾಗಿದ್ದರೆ, ಯಾಜಕನು ಆಗ ಅವನನ್ನು ಏಳು ದಿನಗಳ ಕಾಲ ಮುಚ್ಚಿಡಬೇಕು.
[27] ಯಾಜಕನು ಅವನನ್ನು ಏಳನೆಯ ದಿನದಲ್ಲಿ ಪರೀಕ್ಷಿಸಬೇಕು. ಆಗ ಅದು ಚರ್ಮದ ಹೊರಗೆಲ್ಲಾ ಹೆಚ್ಚಾಗಿ ಹರಡಿದ್ದರೆ, ಯಾಜಕನು ಆಗ ಅವನು ಅಶುದ್ಧನೆಂದು ಹೇಳಬೇಕು. ಅದು ಚರ್ಮರೋಗ.
[28] ಆ ಹೊಳಪಾದ ಕಲೆಯು ಅದೇ ಸ್ಥಳದಲ್ಲಿ ಉಳಿದಿದ್ದರೆ ಮತ್ತು ಚರ್ಮದಲ್ಲಿ ಹರಡದೆ ಸ್ವಲ್ಪ ಮಬ್ಬಾಗಿದ್ದರೆ, ಬೆಂಕಿ ಸುಟ್ಟ ಬೊಬ್ಬೆಯ ಊತವೆಂದು ಮತ್ತು ಅವನು ಶುದ್ಧನೆಂದು ಯಾಜಕನು ನುಡಿಯಬೇಕು. ಏಕೆಂದರೆ ಅದು ಬೆಂಕಿಯ ಬೊಬ್ಬೆಯಾಗಿರುವುದು.
[29] “ಒಬ್ಬ ಪುರುಷನಿಗಾಗಲಿ ಇಲ್ಲವೆ ಸ್ತ್ರೀಗಾಗಲಿ ವ್ಯಾಧಿಯು ತಲೆಯ ಮೇಲಾಗಲಿ, ಗಡ್ಡದ ಮೇಲಾಗಲಿ ಕಲೆ ಇದ್ದರೆ,
[30] ಆಗ ಯಾಜಕನು ಆ ವ್ಯಾಧಿಯನ್ನು ಪರೀಕ್ಷಿಸಬೇಕು. ಅದು ನೋಡುವುದಕ್ಕೆ ಚರ್ಮಕ್ಕಿಂತಲೂ ಆಳವಾಗಿದ್ದರೆ ಮತ್ತು ಅದರಲ್ಲಿ ಹಳದಿಯ ತೆಳ್ಳನೆಯ ಕೂದಲಿದ್ದರೆ, ಯಾಜಕನು ಆಗ ಅವನು ಅಶುದ್ಧನೆಂದು ಹೇಳಬೇಕು. ಅದು ತಲೆಯ ಮೇಲಾಗಲಿ ಇಲ್ಲವೆ ಗಡ್ಡದ ಮೇಲಾಗಲಿ ಇರುವ ಚರ್ಮರೋಗವಾಗಿದೆ.
[31] ಯಾಜಕನು ಆ ಇಸಬಿನ ವ್ಯಾಧಿಯನ್ನು ನೋಡಿದಾಗ, ಅದು ಉಳಿದ ಚರ್ಮಕ್ಕಿಂತಲೂ ಆಳವಾಗಿರದಿದ್ದರೆ ಮತ್ತು ಕಪ್ಪುಕೂದಲು ಇರದಿದ್ದರೆ, ಯಾಜಕನು ಆಗ ಆ ಇಸಬಿನ ವ್ಯಾಧಿಯವನನ್ನು ಏಳು ದಿನಗಳ ಕಾಲ ಪ್ರತ್ಯೇಕವಾಗಿ ಇರಿಸಬೇಕು.
[32] ಏಳನೆಯ ದಿನದಲ್ಲಿ ಯಾಜಕನು ಆ ವ್ಯಾಧಿಯನ್ನು ಪರೀಕ್ಷಿಸಿದಾಗ, ಆ ಇಸಬು ಹರಡದೆ ಮತ್ತು ಅದರಲ್ಲಿ ಹಳದಿ ಕೂದಲು ಇರದೆ, ಆ ಇಸಬು ಮಿಕ್ಕ ಚರ್ಮಕ್ಕಿಂತಲೂ ಆಳವಾಗಿ ಕಾಣದಿದ್ದರೆ,
[33] ಅವನು ಕ್ಷೌರ ಮಾಡಿಸಿಕೊಳ್ಳಲಿ. ಆದರೆ ಅವನು ಇಸಬನ್ನು ಕ್ಷೌರ ಮಾಡಬಾರದು. ಯಾಜಕನು ಆ ಇಸಬಿನವನನ್ನು ಏಳು ದಿನ ಹೆಚ್ಚಾಗಿ ಪ್ರತ್ಯೇಕವಾಗಿ ಇರಿಸಬೇಕು.
[34] ಏಳನೆಯ ದಿನದಲ್ಲಿ ಯಾಜಕನು ಆ ಇಸಬನ್ನು ನೋಡಬೇಕು. ಆ ಇಸಬು ಚರ್ಮದಲ್ಲಿ ಹರಡಿರದಿದ್ದರೆ ಇಲ್ಲವೆ ನೋಡಲು ಅದು ಮಿಕ್ಕ ಚರ್ಮಕ್ಕಿಂತಲೂ ತಗ್ಗಾಗಿರದಿದ್ದರೆ, ಯಾಜಕನು ಆಗ ಅವನನ್ನು ಶುದ್ಧನೆಂದು ನುಡಿಯಬೇಕು, ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಶುದ್ಧನಾಗಿರಬೇಕು.
[35] ಆದರೆ ಅವನು ಶುದ್ಧನಾದ ಮೇಲೆ ಆ ಇಸಬು ಚರ್ಮದಲ್ಲಿ ಹೆಚ್ಚಾಗಿ ಹರಡಿರದಿದ್ದರೆ,
[36] ಯಾಜಕನು ಆಗ ಅವನನ್ನು ಪರೀಕ್ಷಿಸಬೇಕು, ಆ ಇಸಬು ಚರ್ಮದಲ್ಲಿ ಹರಡಿದ್ದರೆ, ಯಾಜಕನು ಹಳದಿ ಕೂದಲಿಗಾಗಿ ವಿಚಾರಿಸದಿರಲಿ. ಅವನು ಅಶುದ್ಧನು.
[37] ಆದರೆ ಆ ಇಸಬು ಅವನಿಗೆ ನಿಂತ ಹಾಗೆ ಕಂಡರೆ ಮತ್ತು ಅದರಲ್ಲಿ ಕಪ್ಪುಕೂದಲು ಬೆಳೆದರೆ, ಇಸಬು ವಾಸಿಯಾಗಿ ಅವನು ಶುದ್ಧನಾಗುವನು, ಯಾಜಕನು ಅವನನ್ನು ಶುದ್ಧನೆಂದು ನುಡಿಯಬೇಕು.
[38] “ಒಬ್ಬ ಪುರುಷನಿಗಾಗಲಿ ಇಲ್ಲವೆ ಸ್ತ್ರೀಗಾಗಲಿ ದೇಹದ ಚರ್ಮದಲ್ಲಿ ಬಿಳಿಯ ಹೊಳಪಾದ ಮಚ್ಚೆಗಳು ಅಲ್ಲಲ್ಲಿ ಇದ್ದರೆ,
[39] ಅವುಗಳನ್ನು ಯಾಜಕನು ಪರೀಕ್ಷಿಸಬೇಕು, ಅವರ ದೇಹದ ಚರ್ಮದಲ್ಲಿ ಹೊಳಪಾದ ಕಲೆಗಳು ಮಬ್ಬಾಗಿ ಬಿಳುಪಾಗಿದ್ದರೆ, ಅದು ಚರ್ಮದ ಮೇಲೆ ಬಿಸಿಲಿನಿಂದಾದ ಕೆಂಪು ಮಚ್ಚೆಯಾಗಿರುವುದು. ಅವನು ಶುದ್ಧನಾಗಿರುವನು.
[40] “ಒಬ್ಬ ಗಂಡಸಿನ ತಲೆಯ ಕೂದಲು ಉದುರಿ ಹೋದರೆ, ಅವನು ಬೋಳು ತಲೆಯವನು. ಆದರೂ ಅವನು ಶುದ್ಧನಾಗಿರುವನು.
[41] ಮುಂದಲೆಯ ಭಾಗದಲ್ಲಿ ಕೂದಲು ಉದುರಿ ಹೋಗಿದ್ದರೆ, ಅವನು ಪಟ್ಟೆ ತಲೆಯವನು, ಆದರೂ ಅವನು ಶುದ್ಧನಾಗಿರುವನು.
[42] ಆದರೆ ಆ ಬೋಳು ತಲೆಯಲ್ಲಿ ಇಲ್ಲವೆ ಪಟ್ಟೆ ತಲೆಯಲ್ಲಿ ಕೆಂಪಗಿರುವ ಬಿಳುಪಾದ ಮಚ್ಚೆಯಿದ್ದರೆ, ಅದು ಅವನ ಬೋಳು ತಲೆಯಲ್ಲಾಗಲಿ ಇಲ್ಲವೆ ಪಟ್ಟೆ ತಲೆಯಲ್ಲಾಗಲಿ ಹುಟ್ಟುತ್ತಿರುವ ಚರ್ಮರೋಗವೇ.
[43] ಆಗ ಯಾಜಕನು ಅವನನ್ನು ಪರೀಕ್ಷಿಸಬೇಕು. ಅವನ ಬೋಳು ತಲೆಯಲ್ಲಾಗಲಿ, ಇಲ್ಲವೆ ಅವನ ಪಟ್ಟೆ ತಲೆಯಲ್ಲಾಗಲಿ ಏಳುತ್ತಿರುವ ಆ ಕಲೆಯು ಬಿಳುಪಾಗಿ ಕೆಂಪಾಗಿದ್ದರೆ ಮತ್ತು ಮಾಂಸದ ತೊಗಲಿನಲ್ಲಿ ಇರುವ ಚರ್ಮರೋಗದ ಹಾಗಿದ್ದರೆ, ಅವನು ರೋಗಿ ಎಂದೂ ಅಶುದ್ಧನೆಂದೂ
[44] ಅವನ ವ್ಯಾಧಿಯು ಅವನ ತಲೆಯಲ್ಲಿ ಕಾಣಿಸಿದ್ದರಿಂದ ಅವನು ಖಂಡಿತವಾಗಿ ಅಶುದ್ಧನೆಂದೂ ಯಾಜಕನು ಹೇಳಬೇಕು.
[45] “ಚರ್ಮರೋಗ ಇರುವ ಅವನು ತನ್ನ ಬಟ್ಟೆಗಳನ್ನು ಹರಿದುಕೊಂಡವನಾಗಿ, ತಲೆಗೂದಲನ್ನು ಕೆದರಿಕೊಂಡು, ಮುಖದ ಕೆಳಭಾಗವನ್ನು ಮುಚ್ಚಿಕೊಂಡು, ‘ನಾನು ಅಶುದ್ಧನು, ಅಶುದ್ಧನು,’ ಎಂದು ಕೂಗಬೇಕು.
[46] ಆ ವ್ಯಾಧಿ ಅವನಲ್ಲಿ ಇರುವಷ್ಟು ದಿನಗಳೂ ಅವನು ಅಶುದ್ಧನಾಗಿರುವನು. ಅವನು ಪಾಳೆಯದ ಹೊರಗೆ ಒಂಟಿಯಾಗಿ ವಾಸಿಸಬೇಕು.
[47] “ಬೂಜು ಚರ್ಮರೋಗದ ಗುರುತು ಅವನ ಉಡುಪಿನಲ್ಲೂ ಇದ್ದು, ಅದು ಉಣ್ಣೆಯ ಉಡುಪಾಗಲಿ ಇಲ್ಲವೆ ನಾರಿನ ಉಡುಪಾಗಲಿ,
[48] ನಾರಿನ ಇಲ್ಲವೆ ಉಣ್ಣೆಯ ಹಾಸಿನಲ್ಲಾಗಲಿ, ಹೊಕ್ಕಿನಲ್ಲಾಗಲಿ, ಚರ್ಮದಲ್ಲಾಗಲಿ, ಚರ್ಮದಿಂದ ಮಾಡಿದ ಯಾವ ವಸ್ತುವಿನಲ್ಲಾಗಲಿ ಇದಲ್ಲದೆ ಹಸುರಾಗಿ ಇಲ್ಲವೆ,
[49] ಆ ಬಟ್ಟೆ ತೊಗಲು ಹಾಸು ಇಲ್ಲವೆ ಚರ್ಮದಿಂದ ಮಾಡಿದ ಯಾವ ವಸ್ತುವಿನಲ್ಲಾಗಲಿ, ಹಸುರಾಗಿ ಇಲ್ಲವೆ ಕೆಂಪಾಗಿ ಇದ್ದರೆ ಅದು ಬೂಜಾಗಿದೆ. ಅದನ್ನು ಯಾಜಕನಿಗೆ ತೋರಿಸಬೇಕು.
[50] ಯಾಜಕನು ಅದನ್ನು ಪರೀಕ್ಷಿಸಿ, ಆ ವಸ್ತುವನ್ನು ಏಳು ದಿನಗಳು ಪ್ರತ್ಯೇಕವಾಗಿ ಇರಿಸಬೇಕು.
[51] ಅವನು ಏಳನೆಯ ದಿನದಲ್ಲಿ ಅದನ್ನು ಪರೀಕ್ಷಿಸಬೇಕು. ಆ ಬೂಜು ಅವನ ಉಣ್ಣೆ ಬಟ್ಟೆಯಲ್ಲಾಗಲಿ, ನಾರಿನ ಬಟ್ಟೆಯಲ್ಲಾಗಲಿ, ನೇಯ್ಗೆಯಲ್ಲಾಗಲಿ, ಹೆಣಿಗೆಯಲ್ಲಾಗಲಿ, ತೊಗಲಿನ ವಸ್ತುವಿನ್ನಾಗಲಿ ಹರಡಿದ್ದರೆ ಅದು ನಾಶಕರವಾದ ಬೂಜುರೋಗವಾಗಿದೆ. ಅದು ಅಶುದ್ಧವು.
[52] ಆದ್ದರಿಂದ ಅವನು ಆ ಉಡುಪುಗಳನ್ನು ಅಂದರೆ ಅದು ಉಣ್ಣೆ ಬಟ್ಟೆಯಲ್ಲಾಗಲಿ, ನಾರಿನ ಬಟ್ಟೆಯಲ್ಲಾಗಲಿ, ನೇಯ್ಗೆಯಲ್ಲಾಗಲಿ, ಹಣಿಗೆಯಲ್ಲಾಗಲಿ, ತೊಗಲಿನ ವಸ್ತುವಿನ್ನಾಗಲಿ ಎಲ್ಲಿ ಬೂಜಿದೆಯೋ ಅದನ್ನು ಸುಡಬೇಕು. ಏಕೆಂದರೆ ಅದು ನಾಶಕರವಾದ ಬೂಜುರೋಗವಾಗಿದೆ. ಅದನ್ನು ಬೆಂಕಿಯಿಂದ ಸುಡಬೇಕು.
[53] “ಯಾಜಕನು ಪರೀಕ್ಷಿಸಿದಾಗ ಬೂಜು ಉಡುಪಿನಲ್ಲಾಗಲಿ, ಹಾಸಿನಲ್ಲಾಗಲಿ, ಹೊಕ್ಕಿನಲ್ಲಾಗಲಿ, ತೊಗಲಿನ ವಸ್ತುಗಳಲ್ಲಾಗಲಿ ಹರಡದಿದ್ದರೆ,
[54] ಆಗ ಯಾಜಕನು ಆ ಬೂಜುಳ್ಳ ವಸ್ತುವನ್ನು ತೊಳೆಯುವಂತೆ ಆಜ್ಞಾಪಿಸಿ, ಅದನ್ನು ಅವನು ಏಳು ದಿನಗಳ ಕಾಲ ಹೆಚ್ಚಾಗಿ ಪ್ರತ್ಯೇಕವಾಗಿ ಇರಿಸಬೇಕು.
[55] ಅದನ್ನು ತೊಳೆದಾದ ಮೇಲೆ ಯಾಜಕನು ಆ ಬೂಜನ್ನು ಪರೀಕ್ಷಿಸಬೇಕು. ಆ ಬೂಜು ಬಣ್ಣವನ್ನು ಬದಲಾಯಿಸದಿದ್ದರೆ ಮತ್ತು ಹರಡದಿದ್ದರೆ ಅದು ಅಶುದ್ಧವಾಗಿರುವುದು. ಅದನ್ನು ನೀನು ಬೆಂಕಿಯಿಂದ ಸುಡಬೇಕು. ಅದು ಒಳಗಿನಿಂದಾಗಲಿ ಇಲ್ಲವೆ ಹೊರಗಿನಿಂದಾಗಲಿ ವ್ಯಾಪಿಸಿದೆ.
[56] ಯಾಜಕನು ಅದನ್ನು ಪರೀಕ್ಷಿಸಿದರೆ, ಆ ಬೂಜು ಹಿಡಿದ ವಸ್ತುವನ್ನು ತೊಳೆದ ನಂತರ ಮಬ್ಬಾಗಿದ್ದರೆ ಅವನು ಅದನ್ನು ಬಟ್ಟೆಯಿಂದಾಗಲಿ, ಚರ್ಮದಿಂದಾಗಲಿ, ಹಾಸಿನಿಂದಾಗಲಿ, ಹೊಕ್ಕಿನಿಂದಾಗಲಿ ಹರಿದುಹಾಕಬೇಕು.
[57] ಆದರೆ ಉಣ್ಣೆ ಬಟ್ಟೆಯಲ್ಲಾಗಲಿ, ನಾರಿನ ಬಟ್ಟೆಯಲ್ಲಾಗಲಿ, ನೇಯ್ಗೆಯಲ್ಲಾಗಲಿ ಹಣಿಗೆಯಲ್ಲಾಗಲಿ, ತೊಗಲಿನ ವಸ್ತುವಿನಲ್ಲಾಗಲಿ ಕಂಡು ಬಂದರೆ ಅದು ಹರಡುವ ಬೂಜು ಮತ್ತು ಬೂಜಿರುವ ವಸ್ತುವನ್ನು ನೀನು ಬೆಂಕಿಯಿಂದ ಸುಡಬೇಕು.
[58] ನೀನು ತೊಳೆದ ಮೇಲೆ ಆ ಬೂಜು ಯಾವ ವಸ್ತುವಿನಿಂದ ಹೊರಟು ಹೋಯಿತೋ, ಆ ಬಟ್ಟೆಯನ್ನೂ, ಹಾಸನ್ನೂ, ಹೊಕ್ಕನ್ನೂ ಇಲ್ಲವೆ ಚರ್ಮದ ಯಾವುದೇ ಸಾಮಗ್ರಿಗಳನ್ನೂ ಎರಡನೆಯ ಸಾರಿ ತೊಳೆಯಬೇಕು. ಆಗ ಅದು ಶುದ್ಧವಾಗಿರುವುದು.”
[59] ಉಣ್ಣೆ ಬಟ್ಟೆಯಲ್ಲಾಗಲಿ ನಾರಿನ ಬಟ್ಟೆಯಲ್ಲಾಗಲಿ, ನೇಯ್ಗೆಯಲ್ಲಾಗಲಿ, ಹಣಿಗೆಯಲ್ಲಾಗಲಿ, ತೊಗಲಿನ ವಸ್ತುವಿನ್ನಾಗಲಿ ಬೂಜು ಹಿಡಿದಿದ್ದರೆ ಪಾಲಿಸತಕ್ಕ ನಿಯಮಗಳಿವು. ಅದನ್ನು ಶುದ್ಧವೆಂದು ಇಲ್ಲವೆ ಅಶುದ್ಧವೆಂದು ನುಡಿಯುವುದಕ್ಕೆ ವಿಧಿಯು ಇಲ್ಲವೆ ಅಶುದ್ಧವೆಂದು ನುಡಿಯುವುದಕ್ಕೆ ವಿಧಿಯು ಇದೇ.