Skip to content
Opens in a new window
Listen to this chapter • 8:36

[1] ಯೆಹೋವ ದೇವರು ಮೋಶೆ ಆರೋನರಿಗೆ ಹೀಗೆ ಹೇಳಿದರು,

[2] “ಇಸ್ರಾಯೇಲರೊಂದಿಗೆ ಮಾತನಾಡಿ ಹೀಗೆ ಹೇಳಬೇಕು: ‘ಭೂಮಿಯ ಮೇಲೆ ಇರುವ ಎಲ್ಲಾ ನೀವು ತಿನ್ನತಕ್ಕ ಪ್ರಾಣಿಗಳು ಯಾವವಂದರೆ:

[3] ಪ್ರಾಣಿಗಳಲ್ಲಿ ಕಾಲ್ಗೊರಸು ಸೀಳಿದ ಮತ್ತು ಮೇವನ್ನು ಮೆಲುಕಾಡಿಸುವುದನ್ನೂ ನೀವು ತಿನ್ನಬಹುದು.

[4] “ ‘ಯಾವ ಪ್ರಾಣಿ ಮೆಲುಕು ಹಾಕಿದರೂ ಗೊರಸು ಸೀಳಿರುವುದಿಲ್ಲವೋ ಮತ್ತು ಯಾವ ಪ್ರಾಣಿಯ ಗೊರಸು ಸೀಳಿದ್ದರೂ ಮೆಲುಕು ಹಾಕುವುದಿಲ್ಲವೋ ಅವುಗಳ ಮಾಂಸವನ್ನು ನೀವು ತಿನ್ನಬಾರದು. ಒಂಟೆಯು ಮೇವನ್ನು ಮೆಲುಕಾಡಿಸುವುದಾದರೂ ಅದಕ್ಕೆ ಸೀಳುಗೊರಸು ಇಲ್ಲ. ಅದು ನಿಮಗೆ ಅಶುದ್ಧ.

[5] ಬೆಟ್ಟದ ಕುಣಿ ಮೊಲವು ಮೇವನ್ನು ಮೆಲುಕುಹಾಕುವುದಾದರೂ, ಆದರೂ ಸೀಳುಗೊರಸು ಇಲ್ಲವಾದದ್ದರಿಂದ ಅದು ನಿಮಗೆ ಅಶುದ್ಧವಾಗಿರುವುದು.

[6] ಮೊಲವು ಮೆಲುಕುಹಾಕುವುದಾದರೂ, ಆದರೂ ಸೀಳುಗೊರಸು ಇಲ್ಲವಾದದ್ದರಿಂದ ಅದು ನಿಮಗೆ ಅಶುದ್ಧವಾಗಿರುವುದು.

[7] ಹಂದಿಯ ಗೊರಸು ಸೀಳಿದ್ದರೂ ಅದು ಮೇವನ್ನು ಮೆಲುಕು ಹಾಕುವುದಿಲ್ಲ, ಅದು ನಿಮಗೆ ಅಶುದ್ಧವಾಗಿರುವುದು.

[8] ಅವುಗಳ ಮಾಂಸವನ್ನು ನೀವು ತಿನ್ನಬಾರದು. ಅವುಗಳ ಹೆಣವನ್ನು ಮುಟ್ಟಬಾರದು. ಅವು ನಿಮಗೆ ಅಶುದ್ಧವಾಗಿವೆ.

[9] “ ‘ನೀರಿನಲ್ಲಿ ಬಾಳುವ ಎಲ್ಲವುಗಳಲ್ಲಿ ಅಂದರೆ ಸಮುದ್ರದಲ್ಲಿ ಮತ್ತು ನದಿಯಲ್ಲಿ ಇರುವ ಈಜು ರೆಕ್ಕೆಗಳುಳ್ಳ ಮತ್ತು ಪೊರೆ ಇರುವವುಗಳನ್ನು ತಿನ್ನಬಹುದು.

[10] ಸಮುದ್ರಗಳಲ್ಲಿಯೂ, ನದಿಗಳಲ್ಲಿಯೂ ನೀರೊಳಗೆ ಚಲಿಸುವ ಮತ್ತು ಜೀವಿಸುವ ಎಲ್ಲವುಗಳಲ್ಲಿ ಈಜುರೆಕ್ಕೆ ಮತ್ತು ಪೊರೆಯಿಲ್ಲದವುಗಳು ನಿಮಗೆ ನಿಷಿದ್ಧವಾಗಿವೆ.

[11] ಅವು ನಿಮಗೆ ಅಶುದ್ಧವಾಗಿಯೇ ಇರುವವು. ನೀವು ಅವುಗಳ ಮಾಂಸವನ್ನು ತಿನ್ನಬಾರದು ಮತ್ತು ಅವುಗಳ ಶವಗಳು ನಿಮಗೆ ಹೇಯವಾಗಿರಬೇಕು.

[12] ನೀರಲ್ಲಿ ಯಾವುದಕ್ಕೆ ಈಜುರೆಕ್ಕೆ ಮತ್ತು ಪೊರೆಗಳಿಲ್ಲವೋ ಅವು ನಿಮಗೆ ಹೇಯವಾಗಿರಬೇಕು.

[13] “ ‘ಪಕ್ಷಿಗಳಲ್ಲಿ ಇವುಗಳು ನಿಮಗೆ ನಿಷಿದ್ಧವಾಗಿವೆ. ಇವುಗಳು ನಿಮಗೆ ಅಸಹ್ಯಕರವಾದ ಮತ್ತು ತಿನ್ನಲು ನಿಷೇಧಿಸಲಾದ ಪಕ್ಷಿಗಳು ನೀವು ತಿನ್ನಬಾರದವುಗಳು ಯಾವುವೆಂದರೆ: ಗರುಡ, ರಣಹದ್ದು, ಕಪ್ಪು ರಣಹದ್ದು.

[14] ಕ್ರೌಂಚ, ಅದರ ಜಾತಿಯ ಹದ್ದು,

[15] ಅದರ ಜಾತಿಗನುಸಾರವಾದ ಪ್ರತಿಯೊಂದು ಕಾಗೆ,

[16] ಉಷ್ಟ್ರಪಕ್ಷಿ, ಚೀರು ಗೂಬೆ, ಕಡಲ ಹಕ್ಕಿ ಮತ್ತು ಅದರ ಪ್ರತಿಯೊಂದು ಜಾತಿಯ ಗಿಡುಗ.

[17] ಸಣ್ಣ ಗೂಬೆ, ನೀರುಕಾಗೆ, ದೊಡ್ಡ ಗೂಬೆ,

[18] ಬಿಳಿಗೂಬೆ, ಮರಳುಗಾಡು ಗೂಬೆ, ರಣಹದ್ದು,

[19] ನೀರು ಕೋಳಿ, ಕೊಕ್ಕರೆ, ಸಕಲವಿಧವಾದ ಬಕ, ಹೆಡೆಹಕ್ಕಿ ಮತ್ತು ಬಾವಲಿ.

[20] “ ‘ನಾಲ್ಕು ಕಾಲುಗಳಿಂದ ಹರಿದಾಡುವ ಕ್ರಿಮಿಕೀಟಗಳು ನಿಮಗೆ ಹೇಯವಾಗಿರಬೇಕು.

[21] ಆದರೂ ಹಾರಾಡುವ, ಹರಿದಾಡುವ ನಾಲ್ಕು ಕಾಲುಗಳ ಮೇಲೆ ಹೋಗುವ, ತಮ್ಮ ಪಾದಗಳ ಮೇಲೆ ಕಾಲುಗಳಿದ್ದು, ಭೂಮಿಯ ಮೇಲೆ ದುಮುಕುವವುಗಳನ್ನೂ ನೀವು ತಿನ್ನಬಹುದು.

[22] ಮಿಡತೆಗಳನ್ನು ಜುಟ್ಟೆ ಮಿಡತೆಗಳನ್ನು ಅವುಗಳ ಜಾತಿಗನುಸಾರವಾಗಿ ತಿನ್ನಬಹುದು.

[23] ಆದರೆ ನಾಲ್ಕು ಪಾದವಿರುವ ಎಲ್ಲಾ ಹಾರಾಡುವ, ಹರಿದಾಡುವ ಬೇರೆಯವುಗಳು ನಿಮಗೆ ಹೇಯವಾಗಿರಬೇಕು.

[24] “ ‘ಇವುಗಳಿಂದ ನೀವು ಅಶುದ್ಧರಾಗುವಿರಿ. ಅಂದರೆ ಅವುಗಳ ಶವಗಳನ್ನು ಮುಟ್ಟುವವರು ಸಂಜೆಯವರೆಗೂ ಅಶುದ್ಧರಾಗಿರುವರು.

[25] ಯಾರಾದರೂ ಅವುಗಳ ಶವವನ್ನು ಹೊತ್ತರೂ, ಅವರು ಬಟ್ಟೆಗಳನ್ನು ಒಗೆದುಕೊಂಡು ಸಂಜೆಯವರೆಗೂ ಅಶುದ್ಧರಾಗಿರುವರು.

[26] “ ‘ಯಾವ ಪ್ರಾಣಿಯ ಗೊರಸು ಸ್ವಲ್ಪ ಸೀಳಿದ್ದರೂ, ಇಗ್ಗೊರಸಾಗಿಲ್ಲವೋ ಮತ್ತು ಮೆಲುಕು ಹಾಕುವುದಿಲ್ಲವೋ ಅದು ನಿಮಗೆ ಅಶುದ್ಧ. ಅವುಗಳ ಶವವನ್ನು ಮುಟ್ಟುವವರು ಅಶುದ್ಧರಾಗಿರುವರು.

[27] ನಾಲ್ಕು ಕಾಲುಗಳ ಮೇಲೆ ಹೋಗುವ ಎಲ್ಲಾ ಬಗೆಯ ಮೃಗಗಳಲ್ಲಿ ಅಂಗಾಲಿನ ಮೇಲೆ ಹೋಗುವುದೆಲ್ಲವೂ ನಿಮಗೆ ಅಶುದ್ಧವಾಗಿರುವುವು. ಯಾರಾದರೂ ಅವುಗಳ ಶವವನ್ನು ಮುಟ್ಟಿದರೆ ಅವರು ಸಂಜೆಯವರೆಗೂ ಅಶುದ್ಧರಾಗಿರುವರು.

[28] ಅವುಗಳ ಶವವನ್ನು ಹೊರುವವರು ತಮ್ಮ ಬಟ್ಟೆಗಳನ್ನು ಒಗೆದುಕೊಳ್ಳಬೇಕು. ಅವರು ಸಂಜೆಯವರೆಗೂ ಅಶುದ್ಧರಾಗಿರುವರು. ಈ ಪ್ರಾಣಿಗಳು ನಿಮಗೆ ಅಶುದ್ಧವಾದವುಗಳು.

[29] “ ‘ಭೂಮಿಯ ಮೇಲೆ ಹರಿದಾಡುವವುಗಳಲ್ಲಿ ಇವು ಸಹ ನಿಮಗೆ ಅಶುದ್ಧವಾಗಿರಬೇಕು: ಮುಂಗುಲಿ, ಇಲಿ, ಸಕಲವಿಧವಾದ ಉಡ,

[30] ಅರೆ ಪಳಗಿಸಿದ ಪ್ರಾಣಿ, ಹಾವುರಾಣಿ, ಊಸುರುವಳ್ಳಿ, ಹಲ್ಲಿ, ಬಸವನ ಹುಳು ಮತ್ತು ಚಿಟ್ಟಿಲಿ.

[31] ನೆಲದ ಮೇಲೆ ಹರಿದಾಡುವ ಇವು ನಿಮಗೆ ಅಶುದ್ಧ. ಸತ್ತಿರುವಾಗ ಅವುಗಳನ್ನು ಯಾರಾದರೂ ಮುಟ್ಟಿದರೆ ಅವರು ಸಂಜೆಯವರೆಗೂ ಅಶುದ್ಧರಾಗಿರುವರು.

[32] ಅವು ಸತ್ತು ಹೋಗಿ, ಯಾವುದರ ಮೇಲೆ ಬೀಳುವವೋ ಅವೆಲ್ಲಾ ಅಶುದ್ಧವಾಗಿರುವುದು. ಅದು ಮರದ ಪಾತ್ರೆಯೇ ಆಗಿರಲಿ, ಉಡುಪೇ ಆಗಿರಲಿ, ಚೀಲವೇ ಆಗಿರಲಿ, ಕೆಲಸ ಮಾಡುವ ಯಾವ ವಸ್ತುವಾಗಲಿ, ಅದು ಏನೇ ಆಗಿರಲಿ ಸಂಜೆಯವರೆಗೆ ನೀರಲ್ಲಿ ಇಡುವವರೆಗೆ ಅಶುದ್ಧವಾಗಿರುವುದು. ನಂತರ ಅದು ಶುದ್ಧವಾಗುವುದು.

[33] ಪ್ರತಿಯೊಂದು ಮಣ್ಣಿನ ಪಾತ್ರೆಯಲ್ಲಿ ಅವುಗಳಲ್ಲಿ ಯಾವುದಾದರೂ ಬಿದ್ದರೆ, ಅದರಲ್ಲಿ ಏನಿದ್ದರೂ ಅಶುದ್ಧವಾಗುವುದು ಮತ್ತು ನೀವು ಅದನ್ನು ಒಡೆದುಹಾಕಬೇಕು.

[34] ಅದರಲ್ಲಿರುವ ಆಹಾರ ಪದಾರ್ಥವೆಲ್ಲಾ ನೀರಿನಿಂದ ನೆನೆದಿದ್ದರೆ ಅದು ಅಶುದ್ಧವಾಗಿರುವುದು. ಅಂಥ ಪ್ರತಿ ಪಾತ್ರೆಯಲ್ಲಿ ಕುಡಿಯುವ ಎಲ್ಲಾ ಪಾನವೂ ಅಶುದ್ಧವಾಗಿರುವುದು.

[35] ಅವುಗಳ ಹೆಣ ಯಾವ ಸಾಮಾನಿನ ಮೇಲೆ ಬಿದ್ದರೂ ಅದು ಅಶುದ್ಧವಾಗಿರುವುದು. ಅದು ಹರಿವಾಣವಾಗಿದ್ದರೂ, ಮಣ್ಣುಗಳ ಒಲೆಯಾಗಿದ್ದರೂ ಅದನ್ನು ಒಡೆದುಹಾಕಬೇಕು. ಏಕೆಂದರೆ ಅವು ಅಶುದ್ಧವಾಗಿವೆ. ಅವು ನಿಮಗೆ ಅಶುದ್ಧವೇ.

[36] ನೀರು ಹೆಚ್ಚಾಗಿರುವ ಬುಗ್ಗೆಯಾಗಲಿ, ಹಳ್ಳವಾಗಲಿ ಶುದ್ಧವಾಗಿರುವುದು. ಅವುಗಳೊಳಗಿಂದ ಹೆಣಗಳನ್ನು ಎತ್ತಿದವರು ಅಶುದ್ಧರಾಗುವರು.

[37] ಯಾವ ಭಾಗವಾದರೂ ಬಿತ್ತುವ ಬೀಜದಲ್ಲಿ ಬಿದ್ದರೂ ಶುದ್ಧವಾಗಿರುವುದು.

[38] ಆದರೆ ನೀರು ಹಾಕಿ ನೆನಸಿದ ಬೀಜದ ಮೇಲೆ ಆ ಹೆಣವು ಬಿದ್ದರೆ, ಅದು ನಿಮಗೆ ಅಶುದ್ಧವಾಗಿರುವುದು.

[39] “ ‘ನೀವು ತಿನ್ನುವ ಯಾವುದಾದರೂ ಪ್ರಾಣಿ ಸತ್ತಿದ್ದರೆ, ಅದರ ಶವವನ್ನು ಮುಟ್ಟಿದವರು ಸಂಜೆಯವರೆಗೆ ಅಶುದ್ಧರಾಗಿರುವರು.

[40] ಯಾರಾದರೂ ಅದರ ಮಾಂಸವನ್ನು ತಿಂದಲ್ಲಿ ತಮ್ಮ ಬಟ್ಟೆಗಳನ್ನು ಒಗೆದುಕೊಳ್ಳಬೇಕು. ಅವರು ಸಂಜೆಯವರೆಗೆ ಅಶುದ್ಧರಾಗಿರುವರು. ಅದರ ಶವವನ್ನು ಹೊರುವವರೂ ತಮ್ಮ ಬಟ್ಟೆಗಳನ್ನು ಒಗೆದುಕೊಳ್ಳಬೇಕು. ಅವರು ಸಂಜೆಯವರೆಗೆ ಅಶುದ್ಧರಾಗಿರುವರು.

[41] “ ‘ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದು ಕ್ರಿಮಿಯೂ ಹೇಯವಾಗಿದೆ. ಅದನ್ನು ತಿನ್ನಬಾರದು.

[42] ಹೊಟ್ಟೆಯಿಂದ ಹರಿದಾಡುವ ಯಾವುದನ್ನೂ, ನಾಲ್ಕು ಕಾಲಿನ ಮೇಲೆ ನಡೆದಾಡುವ ಯಾವುದನ್ನೂ, ಇಲ್ಲವೆ ಭೂಮಿಯ ಮೇಲೆ ಹರಿದಾಡುವ ಎಲ್ಲಾ ಕ್ರಿಮಿಗಳಲ್ಲಿ ಬಹಳ ಕಾಲುಗಳಿದ್ದ ಯಾವುದನ್ನು ನೀವು ತಿನ್ನಬಾರದು. ಏಕೆಂದರೆ ಅವು ಹೇಯವಾಗಿವೆ.

[43] ಯಾವುದೇ ಹರಿದಾಡುವ ಪ್ರಾಣಿಯೊಡನೆಯೂ ನೀವು ನಿಮ್ಮನ್ನು ಅಶುದ್ಧಪಡಿಸಿಕೊಳ್ಳಬಾರದು, ನೀವು ಅವುಗಳೊಂದಿಗೆ ನಿಮ್ಮನ್ನು ಅಶುದ್ಧಪಡಿಸಿಕೊಂಡು ಅವುಗಳಿಂದ ಮಲಿನರಾಗಬಾರದು.

[44] ಏಕೆಂದರೆ ನಿಮ್ಮ ದೇವರಾದ ಯೆಹೋವ ದೇವರು ನಾನೇ. ನೀವು ನಿಮ್ಮನ್ನು ಪ್ರತಿಷ್ಠಿಸಿಕೊಳ್ಳಿರಿ. ನಾನು ಪರಿಶುದ್ಧನಾಗಿರುವುದರಿಂದ ನೀವೂ ಪರಿಶುದ್ಧರಾಗಿರಬೇಕು. ಇದಲ್ಲದೆ ಭೂಮಿಯ ಮೇಲೆ ಹರಿದಾಡುವ ಯಾವ ಬಗೆಯ ಜಂತುಗಳಿಂದಲೂ ನಿಮ್ಮನ್ನು ಅಶುದ್ಧಮಾಡಿಕೊಳ್ಳಬಾರದು.

[45] ಏಕೆಂದರೆ ನಿಮ್ಮ ದೇವರಾಗಿರುವುದಕ್ಕೆ ಈಜಿಪ್ಟ್ ದೇಶದಿಂದ ನಿಮ್ಮನ್ನು ಹೊರಗೆ ಕರೆತಂದ ಯೆಹೋವ ದೇವರು ನಾನೇ. ನಾನು ಪರಿಶುದ್ಧನಾಗಿರುವುದರಿಂದ ನೀವು ಪರಿಶುದ್ಧರಾಗಿರಬೇಕು.

[46] “ ‘ಪ್ರಾಣಿಗಳು, ಪಕ್ಷಿಗಳು, ನೀರಿನಲ್ಲಿರುವ ಮತ್ತು ನೆಲದ ಮೇಲೆ ತೆವಳುವ ಪ್ರತಿಯೊಂದು ಜೀವಿಗಳಿಗೆ ಕುರಿತಾದ ನಿಯಮವು ಇದೇ.

[47] ಅಶುದ್ಧ ಮತ್ತು ಶುದ್ಧಗಳ ನಡುವಿನ ವ್ಯತ್ಯಾಸವನ್ನೂ ಮತ್ತು ತಿನ್ನಲರ್ಹವಾದ ಮೃಗ ಮತ್ತು ತಿನ್ನಬಾರದ ಮೃಗಗಳ ನಡುವಿನ ವ್ಯತ್ಯಾಸವನ್ನು ಹೀಗೆ ತಿಳಿದುಕೊಳ್ಳುವಿರಿ.’ ”

ಯಾಜಕಕಾಂಡ — Chapters