[1] ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ:
[2] “ಚರ್ಮರೋಗಿಯು ತನ್ನ ಶುದ್ಧತೆಯ ದಿನದಲ್ಲಿ ಮಾಡತಕ್ಕ ನಿಯಮವು ಇದೇ. ಅವನನ್ನು ಯಾಜಕನ ಬಳಿಗೆ ಕರೆದುಕೊಂಡು ಬರಬೇಕು.
[3] ಯಾಜಕನು ಪಾಳೆಯದ ಆಚೆಗೆ ಹೊರಟು ಹೋಗಬೇಕು. ಚರ್ಮರೋಗದಿಂದ ರೋಗಿಯು ಗುಣವಾದನೆಂದು ಯಾಜಕನು ಪರೀಕ್ಷಿಸಿದರೆ,
[4] ಆಗ ಶುದ್ಧಮಾಡಿಕೊಳ್ಳುವವನಿಗೋಸ್ಕರ ಜೀವವುಳ್ಳ ಮತ್ತು ಶುದ್ಧವಾದ ಎರಡು ಪಕ್ಷಿಗಳನ್ನೂ, ದೇವದಾರು ಕಟ್ಟಿಗೆಯನ್ನೂ, ರಕ್ತವರ್ಣದ ದಾರವನ್ನೂ ಮತ್ತು ಹಿಸ್ಸೋಪನ್ನೂ ತೆಗೆದುಕೊಳ್ಳುವಂತೆ ಯಾಜಕನು ಆಜ್ಞಾಪಿಸಬೇಕು.
[5] ಆ ಪಕ್ಷಿಗಳಲ್ಲಿ ಒಂದನ್ನು ಹರಿಯುವ ನೀರಿನ ಮೇಲೆ ಮಣ್ಣಿನ ಪಾತ್ರೆಯಲ್ಲಿ ಕೊಲ್ಲಬೇಕೆಂದು ಯಾಜಕನು ಆಜ್ಞಾಪಿಸಬೇಕು.
[6] ಇದಲ್ಲದೆ ಜೀವವುಳ್ಳ ಪಕ್ಷಿಯನ್ನೂ, ದೇವದಾರು ಕಟ್ಟಿಗೆಯನ್ನೂ, ರಕ್ತವರ್ಣದ ದಾರವನ್ನೂ ಮತ್ತು ಹಿಸ್ಸೋಪನ್ನೂ ತೆಗೆದುಕೊಂಡು, ಹರಿಯುವ ನೀರಿನ ಬಳಿಯಲ್ಲಿ ವಧಿಸಿದ ಆ ಪಕ್ಷಿಯ ರಕ್ತದಲ್ಲಿ ಅದ್ದಿ,
[7] ಚರ್ಮರೋಗದಿಂದ ಶುದ್ಧಮಾಡಿಸಿಕೊಳ್ಳುವವನ ಮೇಲೆ ಏಳು ಸಾರಿ ಚಿಮುಕಿಸಿ, ಅವನನ್ನು ಶುದ್ಧನೆಂದು ನುಡಿದು, ಆ ಜೀವವುಳ್ಳ ಪಕ್ಷಿಯನ್ನು ಬಯಲಾದ ಹೊಲದಲ್ಲಿ ಬಿಟ್ಟುಬಿಡಬೇಕು.
[8] “ಶುದ್ಧವಾಗುವುದಕ್ಕಿರುವವನು ತನ್ನ ಬಟ್ಟೆಗಳನ್ನು ತೊಳೆದುಕೊಂಡವನಾಗಿ, ತನ್ನ ಎಲ್ಲಾ ಕೂದಲನ್ನು ಬೋಳಿಸಿಕೊಂಡು, ತಾನು ಶುದ್ಧನಾಗುವಂತೆ ತನ್ನನ್ನು ನೀರಿನಲ್ಲಿ ತೊಳೆದುಕೊಳ್ಳಬೇಕು. ತರುವಾಯ ಅವನು ಪಾಳೆಯದೊಳಗೆ ಬಂದು ತನ್ನ ಡೇರೆಯೊಳಗೆ ಏಳು ದಿನಗಳವರೆಗೆ ಕಾಯಬೇಕು.
[9] ಆದರೆ ಏಳನೆಯ ದಿನದಲ್ಲಿ ಅವನು ತನ್ನ ತಲೆಯ ಎಲ್ಲಾ ಕೂದಲನ್ನೂ, ಗಡ್ಡವನ್ನೂ, ತನ್ನ ಕಣ್ಣುಹುಬ್ಬುಗಳನ್ನೂ ಮಾತ್ರವಲ್ಲದೆ ತನ್ನ ಎಲ್ಲಾ ಕೂದಲನ್ನೂ ಬೋಳಿಸಿಕೊಳ್ಳಬೇಕು. ಅವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು. ಇದಲ್ಲದೆ ತನ್ನ ದೇಹವನ್ನು ಸಹ ನೀರಿನಲ್ಲಿ ತೊಳೆಯಬೇಕು. ಆಗ ಅವನು ಶುದ್ಧನಾಗಿರುವನು.
[10] “ಎಂಟನೆಯ ದಿವಸದಲ್ಲಿ ಅವನು ಕಳಂಕರಹಿತವಾದ ಎರಡು ಕುರಿಮರಿಗಳನ್ನು ಮತ್ತು ಒಂದು ವರುಷದ ಕಳಂಕರಹಿತವಾದ ಹೆಣ್ಣು ಕುರಿಯನ್ನು, ಧಾನ್ಯ ಸಮರ್ಪಣೆಗಾಗಿ ಎಣ್ಣೆ ಕಲಸಿದ ಐದು ಕಿಲೋಗ್ರಾಂ ಗೋಧಿ ಹಿಟ್ಟನ್ನು, ಒಂದನೆಯ ಮೂರು ಭಾಗ ಎಣ್ಣೆಯನ್ನು ತೆಗೆದುಕೊಳ್ಳಬೇಕು.
[11] ಅವನನ್ನು ಶುದ್ಧಪಡಿಸುವ ಯಾಜಕನು ಶುದ್ಧಮಾಡಿಸಿಕೊಳ್ಳುವವನನ್ನು ಇವುಗಳೊಂದಿಗೆ ದೇವದರ್ಶನದ ಗುಡಾರದ ಬಾಗಿಲಿನ ಬಳಿಯಲ್ಲಿ ಯೆಹೋವ ದೇವರ ಮುಂದೆ ನಿಲ್ಲಿಸಬೇಕು.
[12] “ಆಗ ಯಾಜಕನು ಒಂದು ಗಂಡು ಕುರಿಮರಿಯನ್ನೂ, ಒಂದನೆಯ ಮೂರು ಭಾಗದಷ್ಟು ಎಣ್ಣೆಯನ್ನೂ ತೆಗೆದುಕೊಂಡು ಪ್ರಾಯಶ್ಚಿತ್ತ ಬಲಿಯಾಗಿ ಅರ್ಪಿಸಿ, ಅವುಗಳನ್ನು ಯೆಹೋವ ದೇವರ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸಬೇಕು.
[13] ಇದಲ್ಲದೆ ಅವನು ಆ ಕುರಿಮರಿಯನ್ನು ಪರಿಶುದ್ಧ ಸ್ಥಳದಲ್ಲಿ ಪಾಪ ಪರಿಹಾರದ ಬಲಿಯನ್ನು, ದಹನಬಲಿಯನ್ನು ವಧಿಸುವ ಸ್ಥಳದಲ್ಲಿ ವಧಿಸಬೇಕು. ದೋಷಪರಿಹಾರ ಬಲಿಯಂತೆಯೇ ಪ್ರಾಯಶ್ಚಿತ್ತ ಬಲಿಯೂ ಯಾಜಕನದಾಗಿದೆ. ಅದು ಮಹಾಪರಿಶುದ್ಧವಾದದ್ದು.
[14] ಯಾಜಕನು ಪ್ರಾಯಶ್ಚಿತ್ತ ಬಲಿಯಲ್ಲಿ ಸ್ವಲ್ಪ ರಕ್ತವನ್ನು ತೆಗೆದುಕೊಳ್ಳಬೇಕು ಮತ್ತು ಯಾಜಕನು ಅದನ್ನು ಶುದ್ಧಮಾಡಿಸಿಕೊಳ್ಳುವವನ ಬಲಗಿವಿಯ ತುದಿಗೂ ಮತ್ತು ಬಲಗೈಯ ಹೆಬ್ಬೆರಳಿನ ಮೇಲೆಯೂ, ಬಲಗಾಲಿನ ಹೆಬ್ಬೆಟ್ಟಿನ ಮೇಲೆಯೂ ಹಚ್ಚಬೇಕು.
[15] ಯಾಜಕನು ಒಂದನೆಯ ಮೂರು ಭಾಗದಷ್ಟು ಎಣ್ಣೆಯಲ್ಲಿ ಸ್ವಲ್ಪ ತೆಗೆದುಕೊಂಡು ತನ್ನ ಸ್ವಂತ ಎಡ ಅಂಗೈಯಲ್ಲಿ ಹೊಯ್ಯಬೇಕು.
[16] ಯಾಜಕನು ತನ್ನ ಎಡಗೈಯಲ್ಲಿರುವ ಎಣ್ಣೆಯಲ್ಲಿ ತನ್ನ ಬಲಗೈ ಬೆರಳನ್ನು ಅದ್ದಿ, ತನ್ನ ಬೆರಳಿನಿಂದ ಆ ಎಣ್ಣೆಯನ್ನು ಏಳು ಸಾರಿ ಯೆಹೋವ ದೇವರ ಎದುರಿನಲ್ಲಿ ಚಿಮುಕಿಸಬೇಕು.
[17] ತನ್ನ ಕೈಯಲ್ಲಿ ಮಿಕ್ಕಿದ ಎಣ್ಣೆಯನ್ನು ಯಾಜಕನು ಶುದ್ಧಮಾಡಿಸಿಕೊಳ್ಳುವವನ ಬಲಗಿವಿಯ ತುದಿಯ ಮೇಲೆ ಮತ್ತು ಅವನ ಬಲಗೈಯ ಹೆಬ್ಬೆರಳಿನ ಮೇಲೆ, ಅವನ ಬಲಗಾಲಿನ ಹೆಬ್ಬೆಟ್ಟಿನ ಮೇಲೆ ಹಚ್ಚಬೇಕು. ಅದೇ ರೀತಿ ಪ್ರಾಯಶ್ಚಿತ್ತ ಬಲಿಯ ರಕ್ತದ ಮೇಲೆ ಹಚ್ಚಬೇಕು.
[18] ಯಾಜಕನ ಕೈಯಲ್ಲಿರುವ ಉಳಿದ ಆ ಎಣ್ಣೆಯನ್ನು ಶುದ್ಧಮಾಡಿಸಿಕೊಳ್ಳುವವನ ತಲೆಯ ಮೇಲೆ ಹೊಯ್ಯಬೇಕು. ಯಾಜಕನು ಅವನಿಗಾಗಿ ಯೆಹೋವ ದೇವರ ಎದುರಿನಲ್ಲಿ ಪ್ರಾಯಶ್ಚಿತ್ತ ಮಾಡಬೇಕು.
[19] “ಯಾಜಕನು ಪಾಪ ಪರಿಹಾರದ ಬಲಿಯನ್ನು ಸಮರ್ಪಿಸಿ, ಶುದ್ಧಮಾಡಿಸಿಕೊಳ್ಳುವವನಿಗೋಸ್ಕರ ಅವನ ಅಶುದ್ಧತೆಗಾಗಿ ಪ್ರಾಯಶ್ಚಿತ್ತ ಮಾಡಬೇಕು. ತರುವಾಯ ಅವನು ದಹನಬಲಿಯ ಪ್ರಾಣಿಯನ್ನು ವಧಿಸಬೇಕು.
[20] ಯಾಜಕನು ದಹನಬಲಿಯನ್ನೂ, ಧಾನ್ಯ ಸಮರ್ಪಣೆಯನ್ನೂ ಬಲಿಪೀಠದ ಮೇಲೆ ಸಮರ್ಪಿಸಬೇಕು. ಇದಲ್ಲದೆ ಯಾಜಕನು ಅವನಿಗೋಸ್ಕರ ಪ್ರಾಯಶ್ಚಿತ್ತವನ್ನು ಮಾಡಬೇಕು. ಆಗ ಅವನು ಶುದ್ಧನಾಗಿರುವನು.
[21] “ಅವನು ಬಡವನಾಗಿದ್ದರೆ ಅಷ್ಟೊಂದು ತರುವುದಕ್ಕೆ ಆಗದಿದ್ದರೆ, ಅವನು ತನ್ನ ಪ್ರಾಯಶ್ಚಿತ್ತಕ್ಕಾಗಿ ಬಲಿ ಕೊಡಲು ನೈವೇದ್ಯ ಮಾಡುವುದಕ್ಕೆ ಒಂದು ಕುರಿಮರಿಯನ್ನೂ, ಎಣ್ಣೆ ಬೆರೆಸಿದ ಒಂದುವರೆ ಕಿಲೋಗ್ರಾಂ ನಯವಾದ ಹಿಟ್ಟನ್ನೂ, ಒಂದನೆಯ ಮೂರು ಭಾಗದಷ್ಟು ಎಣ್ಣೆಯನ್ನೂ
[22] ಮತ್ತು ಅವನಿಂದಾಗುವಷ್ಟು ಎರಡು ಬೆಳವಕ್ಕಿಗಳನ್ನೂ ಇಲ್ಲವೆ ಎರಡು ಪಾರಿವಾಳದ ಮರಿಗಳನ್ನೂ ತೆಗೆದುಕೊಳ್ಳಬೇಕು. ಅವುಗಳಲ್ಲಿ ಒಂದು ಪಾಪ ಪರಿಹಾರದ ಬಲಿಗಾಗಿಯೂ, ಇನ್ನೊಂದು ದಹನಬಲಿಗಾಗಿಯೂ ಇರುವುದು.
[23] “ಅವನು ತನ್ನ ಶುದ್ಧತೆಗಾಗಿ ಎಂಟನೆಯ ದಿನದಲ್ಲಿ ಇವುಗಳನ್ನು ದೇವದರ್ಶನದ ಗುಡಾರದ ಬಾಗಿಲ ಬಳಿಗೆ ಯಾಜಕನ ಹತ್ತಿರಕ್ಕೆ ಯೆಹೋವ ದೇವರ ಎದುರಿನಲ್ಲಿ ತರಬೇಕು.
[24] ಯಾಜಕನು ಪ್ರಾಯಶ್ಚಿತ್ತದ ಸಮರ್ಪಣೆಯ ಆ ಕುರಿಮರಿಯನ್ನೂ, ಒಂದನೆಯ ಮೂರು ಭಾಗದಷ್ಟು ಎಣ್ಣೆಯನ್ನೂ ತೆಗೆದುಕೊಳ್ಳಬೇಕು. ಯಾಜಕನು ಅವುಗಳನ್ನು ಯೆಹೋವ ದೇವರ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸಬೇಕು.
[25] ಅವನು ಪ್ರಾಯಶ್ಚಿತ್ತ ಬಲಿಗಾಗಿ ಆ ಕುರಿಮರಿಯನ್ನು ವಧಿಸಬೇಕು. ಆ ಪ್ರಾಯಶ್ಚಿತ್ತ ಬಲಿಯ ಸ್ವಲ್ಪ ರಕ್ತವನ್ನು ಯಾಜಕನು ತೆಗೆದುಕೊಂಡು, ಶುದ್ಧಪಡಿಸಿಕೊಳ್ಳುವವನ ಬಲಗಿವಿಯ ತುದಿಯ ಮೇಲೆಯೂ, ಅವನ ಬಲಗೈಯ ಹೆಬ್ಬೆರಳಿನ ಮೇಲೆಯೂ ಹಚ್ಚಬೇಕು.
[26] ಇದಲ್ಲದೆ ಯಾಜಕನು ತನ್ನ ಸ್ವಂತ ಎಡ ಅಂಗೈಯಲ್ಲಿ ಎಣ್ಣೆಯನ್ನು ಸುರಿಯಬೇಕು.
[27] ಯಾಜಕನು ತನ್ನ ಬಲಬೆರಳಿನಿಂದ ತನ್ನ ಎಡಗೈಯಲ್ಲಿರುವ ಸ್ವಲ್ಪ ಎಣ್ಣೆಯನ್ನು ಏಳು ಸಾರಿ ಯೆಹೋವ ದೇವರ ಎದುರಿನಲ್ಲಿ ಚಿಮುಕಿಸಬೇಕು.
[28] ಇದಲ್ಲದೆ ಯಾಜಕನು ತನ್ನ ಕೈಯಲ್ಲಿದ್ದ ಎಣ್ಣೆಯನ್ನು ಶುದ್ಧಪಡಿಸಿಕೊಳ್ಳುವವನ ಬಲಗಿವಿಯ ತುದಿಯ ಮೇಲೆಯೂ, ಅವನ ಬಲಗೈಯ ಹೆಬ್ಬೆರಳಿನ ಮೇಲೆಯೂ, ಅವನ ಬಲಗಾಲಿನ ಹೆಬ್ಬೆಟ್ಟಿನ ಮೇಲೆಯೂ ಪ್ರಾಯಶ್ಚಿತ್ತ ಬಲಿಯ ರಕ್ತದ ಸ್ಥಳದ ಮೇಲೆಯೂ ಹಚ್ಚಬೇಕು.
[29] ಯಾಜಕನ ಕೈಯಲ್ಲಿರುವ ಉಳಿದ ಎಣ್ಣೆಯನ್ನು ಶುದ್ಧಪಡಿಸಿಕೊಳ್ಳುವವನ ತಲೆಯ ಮೇಲೆ ಹೊಯ್ದು, ಯೆಹೋವ ದೇವರ ಎದುರಿನಲ್ಲಿ ಅವನಿಗಾಗಿ ಪ್ರಾಯಶ್ಚಿತ್ತ ಮಾಡಬೇಕು.
[30] ತರುವಾಯ ಅವನು ತನ್ನ ಸ್ಥಿತಿಗೆ ತಕ್ಕಂತೆ ತಂದ ಬೆಳವಕ್ಕಿಗಳಲ್ಲಿಯಾಗಲಿ ಪಾರಿವಾಳದ ಮರಿಗಳಲ್ಲಿಯಾಗಲಿ ಸಮರ್ಪಿಸಬೇಕು.
[31] ಅದರಂತೆಯೇ ಅವನು ತನ್ನ ಸ್ಥಿತಿಗೆ ತಕ್ಕಂತೆ ಒಂದನ್ನು ಪಾಪ ಪರಿಹಾರದ ಬಲಿಗಾಗಿ ಮತ್ತು ಇನ್ನೊಂದನ್ನು ದಹನಬಲಿಗಾಗಿ ಧಾನ್ಯಸಮರ್ಪಣೆಯೊಂದಿಗೆ ಸಮರ್ಪಿಸಬೇಕು, ಶುದ್ಧಪಡಿಸಿಕೊಳ್ಳುವವನಿಗೋಸ್ಕರ ಯಾಜಕನು ಯೆಹೋವ ದೇವರ ಎದುರಿನಲ್ಲಿ ಪ್ರಾಯಶ್ಚಿತ್ತವನ್ನು ಮಾಡಬೇಕು.”
[32] ಚರ್ಮರೋಗವುಳ್ಳವನು ಶುದ್ಧತೆ ಮಾಡಿಸಿಕೊಳ್ಳಲು ಗತಿಯಿಲ್ಲದವನಿಗೆ ತನ್ನ ಶುದ್ಧತೆಗಾಗಿ ಇರುವ ನಿಯಮವು ಇದೇ.
[33] ಯೆಹೋವ ದೇವರು ಮೋಶೆ ಮತ್ತು ಆರೋನರೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ:
[34] “ನಾನು ನಿಮಗೆ ಸೊತ್ತಾಗಿ ಕೊಡುವ ಕಾನಾನ್ ದೇಶದೊಳಗೆ ನೀವು ಬಂದ ಬಳಿಕ ನಾನು ನಿಮಗೆ ಸೊತ್ತಾಗಿ ಕೊಡುವ ಮನೆಯಲ್ಲಿ ಬೂಜನ್ನು ಬರಮಾಡಿದಾಗ,
[35] ಮನೆಯವನು ಯಾಜಕನ ಬಳಿಗೆ ಬಂದು, ‘ನನ್ನ ಮನೆಯಲ್ಲಿ ಬೂಜಿನ ಗುರುತಿದ್ದಂತೆ ಕಾಣುತ್ತಿದೆ,’ ಎಂದು ಹೇಳಬೇಕು.
[36] ಆಗ ಯಾಜಕನು ಆ ಮನೆಯಲ್ಲಿ ಬೂಜನ್ನು ಪರೀಕ್ಷಿಸುವುದಕ್ಕೆ ಹೋಗುವ ಮೊದಲು, ಆ ಮನೆಯೊಳಗೆ ಇರುವವುಗಳು ಅಶುದ್ಧವಾಗದಂತೆ ಆ ಮನೆಯನ್ನು ಬರಿದುಮಾಡಬೇಕೆಂದು ಆಜ್ಞಾಪಿಸಬೇಕು. ತರುವಾಯ ಯಾಜಕನು ಮನೆಯನ್ನು ಪರೀಕ್ಷಿಸುವುದಕ್ಕೆ ಒಳಗೆ ಹೋಗಬೇಕು.
[37] ಅವನು ಆ ಬೂಜನ್ನು ಪರೀಕ್ಷಿಸಿದಾಗ, ಅದು ಮನೆಯ ಗೋಡೆಗಳಲ್ಲಿ ತಗ್ಗಾದ ಸಾಲುಗಳಲ್ಲಿ ಹಸಿರಾಗಿಯಾದರೂ, ಕೆಂಪಾಗಿ ಗೋಡೆಯ ಮಟ್ಟಕ್ಕಿಂತ ತಗ್ಗಿನಲ್ಲಿ ತೋರಿಬಂದರೆ,
[38] ಯಾಜಕನು ಆ ಮನೆಯ ಹೊರಗೆ ಮನೆಯ ಬಾಗಿಲ ಬಳಿಗೆ ಹೋಗಿ ಅದನ್ನು ಏಳು ದಿವಸಗಳವರೆಗೆ ಮುಚ್ಚಬೇಕು.
[39] ಏಳನೆಯ ದಿನದಲ್ಲಿ ಯಾಜಕನು ತಿರುಗಿಬಂದು ಪರೀಕ್ಷಿಸಿದಾಗ, ಆ ಬೂಜು ಮನೆಯ ಗೋಡೆಗಳಲ್ಲಿ ಹರಡಿಕೊಂಡಿದ್ದರೆ,
[40] ಬೂಜುಳ್ಳ ಕಲ್ಲುಗಳನ್ನು ಅವರು ತೆಗೆದು ಪಟ್ಟಣದ ಆಚೆಗೆ ಅಶುದ್ಧ ಸ್ಥಳದಲ್ಲಿ ಬಿಸಾಡಬೇಕೆಂದೂ,
[41] ಆ ಮನೆಯ ಒಳಭಾಗದಲ್ಲಿ ಸುತ್ತಲೂ ಕೆರೆದು, ಕೆರೆದ ಧೂಳನ್ನು ಪಟ್ಟಣದ ಹೊರಗೆ ಅಶುದ್ಧ ಸ್ಥಳದಲ್ಲಿ ಸುರಿಯಬೇಕೆಂದೂ,
[42] ಅವರು ಆ ಕಲ್ಲುಗಳಿಗೆ ಬದಲಾಗಿ ಬೇರೆ ಕಲ್ಲುಗಳನ್ನು ತೆಗೆದುಕೊಳ್ಳಬೇಕೆಂದೂ ಯಾಜಕನು ಆಜ್ಞಾಪಿಸಬೇಕು, ಅವನು ಬೇರೆ ಗಾರೆಯಿಂದ ಆ ಮನೆಗೆ ಗಿಲಾವುಮಾಡಬೇಕು.
[43] “ಅವನು ಆ ಮನೆಯ ಕಲ್ಲುಗಳನ್ನು ತೆಗೆಸಿ ಅದನ್ನು ಕೆತ್ತಿ ಗಿಲಾವು ಮಾಡಿಸಿದ ಮೇಲೆ ಆ ಬೂಜು ತಿರುಗಿ ಕಾಣಬಂದರೆ,
[44] ಯಾಜಕನು ಬಂದು ಪರೀಕ್ಷಿಸಬೇಕು. ಆಗ ಬೂಜು ಮನೆಯಲ್ಲಿ ಹರಡಿಕೊಂಡಿದ್ದರೆ, ಆ ಮನೆಯಲ್ಲಿ ಅದೊಂದು ನಾಶಕರವಾದ ಬೂಜು ಆಗಿರುವುದು, ಆ ಮನೆ ಅಶುದ್ಧವಾದದ್ದು.
[45] ಅವನು ಆ ಮನೆಯನ್ನು ಕೆಡವಿಹಾಕಿ, ಅದರ ಕಲ್ಲುಗಳನ್ನೂ, ಮರಗಳನ್ನೂ, ಆ ಮನೆಯ ಎಲ್ಲಾ ಧೂಳನ್ನೂ ತೆಗೆದು, ಅವುಗಳನ್ನು ಪಟ್ಟಣದ ಹೊರಗೆ ಅಶುದ್ಧವಾದ ಸ್ಥಳಕ್ಕೆ ತೆಗೆದುಕೊಂಡು ಹೋಗಬೇಕು.
[46] “ಆ ಮನೆಯು ಮುಚ್ಚಿರುವ ಕಾಲದಲ್ಲೆಲ್ಲಾ ಅದರೊಳಗೆ ಯಾವನಾದರೂ ಹೋದರೆ ಸಾಯಂಕಾಲದವರೆಗೆ ಅವನು ಅಶುದ್ಧನಾಗಿರುವನು.
[47] ಆ ಮನೆಯೊಳಗೆ ಮಲಗಿಕೊಳ್ಳುವವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು. ಅಲ್ಲದೆ ಆ ಮನೆಯೊಳಗೆ ತಿನ್ನುವವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು.
[48] “ಆದರೆ ಯಾಜಕನು ಒಳಗೆ ಬಂದು ಅದನ್ನು ಪರೀಕ್ಷಿಸಿದಾಗ, ಗಿಲಾವು ಮಾಡಿದ ನಂತರ ಆ ಮನೆಯಲ್ಲಿ ಆ ಬೂಜು ಹರಡಿಕೊಂಡಿರದಿದ್ದರೆ, ಆ ಮನೆಯು ಶುದ್ಧವೆಂದು ಯಾಜಕನು ನಿರ್ಣಯಿಸಬೇಕು. ಏಕೆಂದರೆ ಆ ಬೂಜು ಹೊರಟುಹೋಯಿತು.
[49] ಆ ಮನೆಯನ್ನು ಶುದ್ಧಪಡಿಸುವುದಕ್ಕೋಸ್ಕರ ಎರಡು ಪಕ್ಷಿಗಳನ್ನೂ, ದೇವದಾರು ಕಟ್ಟಿಗೆಯನ್ನೂ, ರಕ್ತವರ್ಣ ದಾರವನ್ನೂ, ಹಿಸ್ಸೋಪನ್ನೂ ತೆಗೆದುಕೊಳ್ಳಬೇಕು.
[50] ಆ ಪಕ್ಷಿಗಳಲ್ಲಿ ಒಂದನ್ನು ಹರಿಯುವ ನೀರಿನ ಮೇಲೆ ಒಂದು ಮಣ್ಣಿನ ಪಾತ್ರೆಯಲ್ಲಿ ವಧಿಸಬೇಕು.
[51] ತರುವಾಯ ದೇವದಾರು ಕಟ್ಟಿಗೆಯನ್ನೂ, ಹಿಸ್ಸೋಪನ್ನೂ, ರಕ್ತವರ್ಣ ದಾರವನ್ನೂ, ಸಜೀವವುಳ್ಳ ಪಕ್ಷಿಯನ್ನೂ ತೆಗೆದುಕೊಂಡು, ಅವುಗಳನ್ನು ವಧಿಸಿದ ಪಕ್ಷಿಯ ರಕ್ತದಲ್ಲಿ ಮತ್ತು ಹರಿಯುವ ನೀರಿನಲ್ಲಿ ಅದ್ದಿ, ಏಳು ಸಾರಿ ಆ ಮನೆಗೆ ಚಿಮುಕಿಸಬೇಕು.
[52] ಅವನು ಪಕ್ಷಿಯ ರಕ್ತದಿಂದಲೂ, ಹರಿಯುವ ನೀರಿನಿಂದಲೂ, ಸಜೀವವುಳ್ಳ ಪಕ್ಷಿಯಿಂದಲೂ, ದೇವದಾರು ಕಟ್ಟಿಗೆಯಿಂದಲೂ, ಹಿಸ್ಸೋಪಿನಿಂದಲೂ, ರಕ್ತವರ್ಣ ದಾರದಿಂದಲೂ ಆ ಮನೆಯನ್ನು ಶುದ್ಧೀಕರಿಸಬೇಕು.
[53] ಆದರೆ ಜೀವವುಳ್ಳ ಆ ಪಕ್ಷಿಯನ್ನು ಪಟ್ಟಣದ ಆಚೆಗೆ ಬಯಲಾದ ಹೊಲಗಳಲ್ಲಿ ಬಿಟ್ಟುಬಿಡಬೇಕು. ಆ ಮನೆಗೋಸ್ಕರ ಪಾಪದ ಪ್ರಾಯಶ್ಚಿತ್ತವನ್ನು ಮಾಡಬೇಕು. ಆಗ ಅದು ಶುದ್ಧವಾಗುವುದು.”
[54] ಎಲ್ಲಾ ವಿಧವಾದ ಚರ್ಮರೋಗಕ್ಕೂ, ಇಸಬಿಗೂ,
[55] ಬಟ್ಟೆಯ ಮತ್ತು ಮನೆಯ ಬೂಜಿಗೂ,
[56] ಬಾವು, ಚರ್ಮವ್ಯಾಧಿಗೂ, ಹೊಳೆಯುವ ಕಲೆಗೂ
[57] ಅವುಗಳ ಶುದ್ಧಾಶುದ್ಧ ಬೇಧವನ್ನು ಬೋಧಿಸುವ ನಿಯಮಗಳು ಇವೇ. ಚರ್ಮರೋಗಗಳ ಹಾಗೂ ಬೂಜಿನ ವಿಷಯದಲ್ಲಿರುವ ನಿಯಮಗಳು ಇವೇ.