Skip to content
Opens in a new window
Listen to this chapter • 9:41

[1] “ ‘ನೀವು ನಿಮಗಾಗಿ ವಿಗ್ರಹಗಳನ್ನಾಗಲಿ, ಕೆತ್ತಿದ ಪ್ರತಿಮೆಯನ್ನಾಗಲಿ ಮಾಡಿಕೊಳ್ಳಬೇಡಿರಿ, ಇಲ್ಲವೆ ನಿಲ್ಲಿಸುವ ಪ್ರತಿಮೆಯನ್ನು ಮಾಡಿಕೊಳ್ಳಬೇಡಿರಿ, ಕಲ್ಲಿನ ವಿಗ್ರಹಗಳನ್ನು ನಿಮ್ಮ ದೇಶದಲ್ಲಿಟ್ಟುಕೊಂಡು ಅದಕ್ಕೆ ಅಡ್ಡಬೀಳಬೇಡಿರಿ. ಏಕೆಂದರೆ ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.

[2] “ ‘ನನ್ನ ವಿಶ್ರಾಂತಿಯ ದಿನಗಳನ್ನು ನೀವು ಆಚರಿಸಬೇಕು. ನನ್ನ ಪರಿಶುದ್ಧಸ್ಥಳದ ವಿಷಯದಲ್ಲಿ ಭಯಭಕ್ತಿಯುಳ್ಳವರಾಗಿರಬೇಕು. ನಾನೇ ಯೆಹೋವ ದೇವರು.

[3] “ ‘ನೀವು ನನ್ನ ನಿಯಮಗಳ ಪ್ರಕಾರ ನಡೆದುಕೊಂಡು, ನನ್ನ ಆಜ್ಞೆಗಳನ್ನು ಕೈಗೊಂಡು ಅವುಗಳಂತೆ ನಡೆದರೆ,

[4] ನಿಮಗೆ ಮಳೆಯನ್ನು ತಕ್ಕ ಕಾಲದಲ್ಲಿ ಸುರಿಸುವೆನು. ಆಗ ಭೂಮಿಯು ಅದರ ಬೆಳೆಯನ್ನು ಕೊಡುವುದು. ಭೂಮಿಯ ಮರಗಳು ಅವುಗಳ ಫಲವನ್ನು ಕೊಡುವವು.

[5] ಕಣ ತುಳಿಸುವ ಕೆಲಸವು ದ್ರಾಕ್ಷಿ ಬೆಳೆಯುವವರೆಗೂ ದ್ರಾಕ್ಷಿ ಬೆಳೆಯನ್ನು ಕೂಡಿಸುವ ಕೆಲಸವು ಬಿತ್ತನೆಯ ಕಾಲದವರೆಗೂ ನಡೆಯುವವು. ನೀವು ನಿಮ್ಮ ರೊಟ್ಟಿಯನ್ನು ತಿಂದು, ತೃಪ್ತಿಹೊಂದಿ ಸುರಕ್ಷಿತವಾಗಿ ನಿಮ್ಮ ದೇಶದಲ್ಲಿ ವಾಸಮಾಡುವಿರಿ.

[6] “ ‘ನಾನು ದೇಶದಲ್ಲಿ ಶಾಂತಿಯನ್ನು ಕೊಡುವೆನು, ಯಾರ ಭಯವೂ ಇಲ್ಲದೆ ನೀವು ಮಲಗಿಕೊಳ್ಳುವಿರಿ. ದೇಶದಲ್ಲಿ ದುಷ್ಟಮೃಗಗಳು ಇಲ್ಲದ ಹಾಗೆ ನಾನು ಮಾಡುವೆನು. ಖಡ್ಗ ನಿಮ್ಮ ದೇಶದಲ್ಲಿ ಹಾದು ಹೋಗುವುದಿಲ್ಲ.

[7] ನೀವು ನಿಮ್ಮ ಶತ್ರುಗಳನ್ನು ಹಿಂದಟ್ಟುವಾಗ, ಅವರು ಖಡ್ಗದಿಂದ ನಿಮ್ಮ ಮುಂದೆ ಬೀಳುವರು.

[8] ನಿಮ್ಮಲ್ಲಿಯ ಐದು ಮಂದಿ ನೂರು ಮಂದಿಯನ್ನು ಹಿಂದಟ್ಟುವರು. ನಿಮ್ಮಲ್ಲಿಯ ನೂರು ಮಂದಿ, ಹತ್ತು ಸಾವಿರ ಮಂದಿಯನ್ನು ಅಟ್ಟಿಬಿಡುವರು. ನಿಮ್ಮ ಶತ್ರುಗಳು ಖಡ್ಗದಿಂದ ನಿಮ್ಮ ಮುಂದೆ ಬೀಳುವರು.

[9] “ ‘ನಾನು ನಿಮ್ಮನ್ನು ಲಕ್ಷಿಸಿ, ನಿಮ್ಮನ್ನು ಅಭಿವೃದ್ಧಿ ಮಾಡಿ, ನಿಮ್ಮನ್ನು ಹೆಚ್ಚಿಸಿ, ನಿಮ್ಮ ಸಂಗಡ ನನ್ನ ಒಡಂಬಡಿಕೆಯನ್ನು ಸ್ಥಾಪಿಸುವೆನು.

[10] ನೀವು ಹಳೆಯ ಧಾನ್ಯವನ್ನು ತಿಂದು, ಹೊಸದು ಬಂದಾಗ ಹಳೆಯದನ್ನು ಹೊರಗೆ ತರುವಿರಿ.

[11] ಇದಲ್ಲದೆ ನಾನು ನನ್ನ ಗುಡಾರವನ್ನು ನಿಮ್ಮ ಮಧ್ಯದಲ್ಲಿ ಮಾಡಿಕೊಳ್ಳುವೆನು. ನನ್ನ ಪ್ರಾಣವು ನಿಮ್ಮನ್ನು ತಿರಸ್ಕರಿಸುವುದಿಲ್ಲ.

[12] ನಾನು ನಿಮ್ಮ ಮಧ್ಯದಲ್ಲಿ ನಡೆದು ನಿಮ್ಮ ದೇವರಾಗಿರುವೆನು. ನೀವು ನನ್ನ ಜನರಾಗಿರುವಿರಿ.

[13] ಈಜಿಪ್ಟ್ ದೇಶದವರಿಗೆ ನೀವು ದಾಸರಾಗಿರದ ಹಾಗೆ ಅವರ ದೇಶದೊಳಗಿಂದ ನಿಮ್ಮನ್ನು ಹೊರಗೆ ಬರಮಾಡಿ, ನಿಮ್ಮ ನೊಗದ ಕಟ್ಟುಗಳನ್ನು ಮುರಿದು, ನಿಮ್ಮನ್ನು ತಲೆಯೆತ್ತಿ ನಡೆಯುವಂತೆ ಮಾಡಿದ ನಿಮ್ಮ ದೇವರಾದ ಯೆಹೋವ ದೇವರು ನಾನೇ.

[14] “ ‘ನೀವು ನನ್ನ ಮಾತನ್ನು ಕೇಳದೆ ಎಲ್ಲಾ ಆಜ್ಞೆಗಳ ಪ್ರಕಾರ ನಡೆಯದೆ ಹೋದರೆ,

[15] ನನ್ನ ನಿಯಮಗಳನ್ನು ನೀವು ತಿರಸ್ಕರಿಸಿದರೆ, ನನ್ನ ನಿರ್ಣಯಗಳಿಗೆ ಅಸಹ್ಯಪಟ್ಟರೆ, ನೀವು ನನ್ನ ಒಡಂಬಡಿಕೆಯನ್ನು ಮೀರಿ, ನನ್ನ ಎಲ್ಲಾ ಆಜ್ಞೆಗಳ ಪ್ರಕಾರ ಮಾಡದೆ ಹೋದರೆ,

[16] ನಾನು ಸಹ ಇದನ್ನು ನಿಮಗೆ ಮಾಡುವೆನು: ನಿಮ್ಮ ಮೇಲೆ ಭೀತಿಯನ್ನು ಉಂಟುಮಾಡುವ, ಕಣ್ಣುಗಳನ್ನು ಕ್ಷೀಣಿಸುವಂತೆಯೂ ಹೃದಯವು ಕುಗ್ಗಿ ದುಃಖಕ್ಕೊಳಗಾಗುವಂತೆಯೂ ಮಾಡುವ ಕ್ಷಯರೋಗವನ್ನೂ ಚಳಿಜ್ವರವನ್ನೂ ಬರಮಾಡುವೆನು. ನೀವು ವ್ಯರ್ಥವಾಗಿ ಬೀಜವನ್ನು ಬಿತ್ತುವಿರಿ. ಏಕೆಂದರೆ ನಿಮ್ಮ ಶತ್ರುಗಳು ಅದನ್ನು ತಿಂದುಬಿಡುವರು.

[17] ನಾನು ನಿಮಗೆ ವಿಮುಖನಾಗಿರುವೆನು. ಆದ್ದರಿಂದ ನೀವು ನಿಮ್ಮ ವೈರಿಗಳಿಂದ ಸೋತುಹೋಗುವಿರಿ. ನಿಮ್ಮ ವೈರಿಗಳು ನಿಮ್ಮ ಮೇಲೆ ದೊರೆತನ ಮಾಡುವರು. ಓಡಿಸುವವನು ಯಾರೂ ಇಲ್ಲದಿರುವಾಗಲೂ ಓಡಿಹೋಗುವಿರಿ.

[18] “ ‘ಹೀಗೂ ನನ್ನ ಮಾತನ್ನು ಕೇಳದೆ ಹೋದರೆ, ನಾನು ನಿಮ್ಮನ್ನು ನಿಮ್ಮ ಪಾಪಗಳ ನಿಮಿತ್ತ ಏಳರಷ್ಟು ಹೆಚ್ಚಾಗಿ ಶಿಕ್ಷಿಸುವೆನು.

[19] ನಿಮ್ಮ ಬಲದ ಗರ್ವವನ್ನು ಮುರಿದುಹಾಕಿ, ನಿಮ್ಮ ಆಕಾಶವನ್ನು ಕಬ್ಬಿಣದ ಹಾಗೆಯೂ ನಿಮ್ಮ ಭೂಮಿಯನ್ನು ಕಂಚಿನಂತೆಯೂ ಮಾಡುವೆನು.

[20] ಆಗ ನಿಮ್ಮ ಶಕ್ತಿಯು ವ್ಯರ್ಥವಾಗಿ ಮುಗಿದುಹೋಗುವುದು. ಏಕೆಂದರೆ ನಿಮ್ಮ ಭೂಮಿಯು ತನ್ನ ಬೆಳೆಯನ್ನು ಕೊಡದೆ ಇರುವುದು ಭೂಮಿಯ ಮರಗಳು ತಮ್ಮ ಫಲಗಳನ್ನು ಕೊಡುವುದಿಲ್ಲ.

[21] “ ‘ನನ್ನ ಮಾತನ್ನು ಕೇಳಲೊಲ್ಲದೆ ನನಗೆ ವಿರೋಧವಾಗಿ ನಡೆದರೆ, ನಾನು ನಿಮ್ಮ ಪಾಪಗಳಿಗೆ ತಕ್ಕಂತೆ ನಿಮ್ಮನ್ನು ಏಳರಷ್ಟು ಹೆಚ್ಚಾಗಿ ಬಾಧಿಸುವೆನು.

[22] ಕಾಡುಮೃಗಗಳು ನಿಮ್ಮ ಮೇಲೆ ಬರುವಂತೆ ಮಾಡುವೆನು. ಅವು ನಿಮ್ಮನ್ನು ಮಕ್ಕಳಿಲ್ಲದವರನ್ನಾಗಿ ಮಾಡಿ, ನಿಮ್ಮ ದನಗಳನ್ನು ತಿಂದುಬಿಡುವವು. ನಿಮ್ಮನ್ನು ಸ್ವಲ್ಪ ಮಂದಿಯಾಗಿ ಮಾಡುವುವು. ನಿಮ್ಮ ಮಾರ್ಗಗಳು ಹಾಳಾಗಿ ಹೋಗುವುವು.

[23] “ ‘ನನ್ನಿಂದಾಗುವ ಇವುಗಳಿಂದ ನೀವು ಶಿಕ್ಷಿತರಾಗದೆ ನನಗೆ ವಿರೋಧವಾಗಿ ನಡೆದರೆ,

[24] ನಾನು ಸಹ ನಿಮಗೆ ವಿರೋಧವಾಗಿ ನಡೆದು, ಇನ್ನೂ ಹೆಚ್ಚಾಗಿ ನಿಮ್ಮ ಪಾಪಗಳ ನಿಮಿತ್ತ, ಏಳರಷ್ಟು ಶಿಕ್ಷಿಸುವೆನು.

[25] ಒಡಂಬಡಿಕೆಯನ್ನು ಮುರಿದದ್ದಕ್ಕಾಗಿ, ಮುಯ್ಯಿಗೆ ಮುಯ್ಯಿ ತೀರಿಸುವ ಖಡ್ಗವನ್ನು ನಾನು ನಿಮ್ಮ ಮೇಲೆ ಬರಮಾಡುವೆನು. ನೀವು ನಿಮ್ಮ ಪಟ್ಟಣಗಳಲ್ಲಿ ಸೇರಿದಾಗ, ವ್ಯಾಧಿಯನ್ನು ನಿಮ್ಮೊಳಗೆ ಬರಮಾಡುವೆನು. ನಿಮ್ಮನ್ನು ಶತ್ರುವಿನ ಕೈಗೆ ಒಪ್ಪಿಸಲಾಗುವುದು.

[26] ನಾನು ನಿಮ್ಮ ಅನ್ನಾಧಾರವನ್ನು ಮುರಿದುಹಾಕಿದಾಗ, ಹತ್ತು ಸ್ತ್ರೀಯರು ನಿಮ್ಮ ರೊಟ್ಟಿಯನ್ನು ಒಂದೇ ಒಲೆಯಲ್ಲಿ ಸುಟ್ಟು, ತೂಕದ ಪ್ರಕಾರ ನಿಮಗೆ ರೊಟ್ಟಿಯನ್ನು ಕೊಡುವರು. ನೀವು ಅದನ್ನು ತಿನ್ನುವಿರಿ, ನಿಮಗೆ ತೃಪ್ತಿಯಾಗುವುದಿಲ್ಲ.

[27] “ ‘ಇದೆಲ್ಲಾ ಆದರೂ, ನೀವು ನನ್ನ ಮಾತನ್ನು ಕೇಳದೆ ನನಗೆ ವಿರೋಧವಾಗಿ ನಡೆದರೆ,

[28] ನಾನು ಕೋಪದಿಂದ ನಿಮಗೆ ವಿರೋಧವಾಗಿ ನಡೆದು, ನಿಮ್ಮ ಪಾಪಗಳ ನಿಮಿತ್ತ ನಾನೇ ನಿಮ್ಮನ್ನು ಏಳರಷ್ಟಾಗಿ ಶಿಕ್ಷಿಸುವೆನು.

[29] ನೀವು ನಿಮ್ಮ ಪುತ್ರಪುತ್ರಿಯರ ಮಾಂಸವನ್ನು ತಿನ್ನುವಿರಿ.

[30] ಇದಲ್ಲದೆ ನಾನು ನಿಮ್ಮ ಉನ್ನತ ಸ್ಥಳಗಳನ್ನು ಹಾಳು ಮಾಡಿ, ನಿಮ್ಮ ಧೂಪವೇದಿಗಳನ್ನು ಕಡಿದುಹಾಕಿ, ನಿಮ್ಮ ಹೆಣಗಳನ್ನು ನಿಮ್ಮ ವಿಗ್ರಹಗಳ ಮೇಲೆ ಹಾಕುವೆನು. ನಿಮ್ಮ ಬಗ್ಗೆ ನಾನು ಅಸಹ್ಯಪಡುವೆನು.

[31] ನಿಮ್ಮ ಪಟ್ಟಣಗಳನ್ನು ನಾನು ಕೆಡವಿಹಾಕಿ, ನಿಮ್ಮ ಪರಿಶುದ್ಧ ಸ್ಥಳಗಳನ್ನು ಹಾಳು ಮಾಡಿ, ನಿಮ್ಮ ಸುವಾಸನೆಗಳನ್ನು ಮೂಸಿ ನೋಡದೆ ಇರುವೆನು.

[32] ನಾನು ದೇಶವನ್ನು ಹಾಳುಮಾಡುವೆನು. ಅದರಲ್ಲಿ ವಾಸವಾಗುವ ನಿಮ್ಮ ಶತ್ರುಗಳೂ ಅದಕ್ಕೆ ಆಶ್ಚರ್ಯಪಡುವರು.

[33] ನಿಮ್ಮನ್ನು ಜನಾಂಗಗಳಲ್ಲಿ ಚದರಿಸಿ, ನಿಮ್ಮ ಹಿಂದೆ ಖಡ್ಗವನ್ನು ಬೀಸುವೆನು. ನಿಮ್ಮ ಭೂಮಿ ಹಾಳಾಗಿರುವುದು, ನಿಮ್ಮ ಪಟ್ಟಣಗಳು ನಾಶವಾಗಿರುವುವು.

[34] ಆಗ ನಾಡು ಹಾಳಾಗಿರುವ ಎಲ್ಲಾ ದಿನಗಳಲ್ಲಿಯೂ ನೀವು ನಿಮ್ಮ ಶತ್ರುಗಳ ದೇಶದಲ್ಲಿ ಇರುವವರೆಗೂ, ನಾಡು ತನ್ನ ಸಬ್ಬತ್ ಕಾಲವನ್ನು ಅನುಭವಿಸುವುದು. ಆಗ ನೆಲವು ವಿಶ್ರಮಿಸಿಕೊಂಡು ತನ್ನ ವಿಶ್ರಾಂತಿಯ ಕಾಲವನ್ನು ಅನುಭವಿಸುವುದು.

[35] ನೀವು ನಿಮ್ಮ ಶತ್ರುಗಳ ದೇಶದಲ್ಲಿ ವಾಸವಾಗಿದ್ದಾಗ, ಹಾಳುಬಿದ್ದ ನಿಮ್ಮ ನಾಡು ತಾನು ಹೊಂದದ ವಿಶ್ರಾಂತಿಯನ್ನು ಈಗ ಸುದೀರ್ಘವಾಗಿ ಹೊಂದಿಕೊಳ್ಳುವುದು.

[36] “ ‘ನಿಮ್ಮಲ್ಲಿ ಯಾರು ಉಳಿದು ಶತ್ರುಗಳ ದೇಶದಲ್ಲಿ ಇರುವರೋ, ಅವರ ಹೃದಯದಲ್ಲಿ ಭೀತಿಯನ್ನು ಹುಟ್ಟಿಸುವೆನು. ಬಡಿದಾಡುವ ಎಲೆಯ ಶಬ್ದವು ಅವರನ್ನು ಓಡಿಸುವುದು. ಖಡ್ಗಕ್ಕೆ ಓಡಿ ಹೋದ ಹಾಗೆ ಓಡಿಹೋಗುವರು.

[37] ಓಡಿಸುವವನಿಲ್ಲದೆ ಒಬ್ಬರ ಮೇಲೊಬ್ಬರು ಖಡ್ಗದ ಭಯದಿಂದಾದ ಹಾಗೆ ಬೀಳುವರು. ನಿಮ್ಮ ಶತ್ರುಗಳಿಗೆದುರಾಗಿ ನಿಂತುಕೊಳ್ಳುವುದು ನಿಮ್ಮಿಂದಾಗದು.

[38] ಜನಾಂಗಗಳೊಳಗೆ ನಾಶವಾಗುವಿರಿ. ನಿಮ್ಮ ಶತ್ರುಗಳ ದೇಶವು ನಿಮ್ಮನ್ನು ತಿಂದುಬಿಡುವುದು.

[39] ನಿಮ್ಮಲ್ಲಿ ಉಳಿದವರು ತಮ್ಮ ಅಕ್ರಮದಿಂದ ನಿಮ್ಮ ಶತ್ರುಗಳ ದೇಶದಲ್ಲಿ ಕ್ಷೀಣವಾಗುವರು, ತಮ್ಮ ಪಿತೃಗಳ ಅಕ್ರಮಗಳಿಂದ ಅವರ ಸಂಗಡ ಕ್ಷೀಣವಾಗುವರು.

[40] “ ‘ಆದರೆ ಅವರು ನನಗೆ ಮಾಡಿದ ತಮ್ಮ ದುಷ್ಕೃತ್ಯದಲ್ಲಿರುವ ತಮ್ಮ ಅಕ್ರಮವನ್ನೂ, ತಮ್ಮ ಪಿತೃಗಳ ಅಕ್ರಮವನ್ನೂ ತಾವು ನನಗೆ ವಿರೋಧವಾಗಿ ನಡೆದುಕೊಂಡದ್ದನ್ನೂ,

[41] ನಾನು ಸಹ ಅವರಿಗೆ ವಿರೋಧವಾಗಿ ನಡೆದುಕೊಂಡು ಅವರನ್ನು ತಮ್ಮ ಶತ್ರುಗಳ ದೇಶದಲ್ಲಿ ಬರಮಾಡಿದ್ದನ್ನೂ ಅರಿಕೆಮಾಡಿದರೆ, ಆಗಲೇ ತಮ್ಮ ಮೊಂಡತನವನ್ನು ಬಿಟ್ಟು ನನ್ನ ಆಜ್ಞೆಗೆ ತಲೆಬಾಗಿ, ಅವರು ತಮ್ಮ ಅಕ್ರಮದಿಂದ ಉಂಟಾದ ಶಿಕ್ಷೆಗೆ ಒಪ್ಪಿಕೊಳ್ಳುವುದಾದರೆ,

[42] ನಾನು ಯಾಕೋಬನಿಗೆ, ಇಸಾಕನಿಗೆ ಮತ್ತು ಅಬ್ರಹಾಮನಿಗೆ ಮಾಡಿದ ನನ್ನ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಂಡು, ದೇಶವನ್ನು ದಯೆಯಿಂದ ನೆನಪಿಸಿಕೊಳ್ಳುವೆನು.

[43] ಅವರು ಬಿಟ್ಟುಹೋದ ಸ್ವದೇಶವು ಯಾರೂ ಇಲ್ಲದೆ ಹಾಳಾದ ವೇಳೆಯಲ್ಲಿ ತನ್ನ ವಿಶ್ರಾಂತಿಯನ್ನು ಅನುಭವಿಸುವುದು. ಆದರೆ ಅವರು ತಮ್ಮ ಪಾಪಗಳಿಗಾಗಿ ಶಿಕ್ಷೆಯನ್ನು ಅನುಭವಿಸುವರು. ಅದು ಏಕೆಂದರೆ, ಅವರು ನನ್ನ ನ್ಯಾಯಗಳನ್ನು ಹೇಸಿ, ತಮ್ಮ ಹೃದಯಗಳಲ್ಲಿ ನನ್ನ ನಿಯಮಗಳನ್ನು ತಾತ್ಸಾರ ಮಾಡಿದ್ದರಿಂದಲೇ.

[44] ಆದರೂ ಅವರು ತಮ್ಮ ಶತ್ರುಗಳ ದೇಶದಲ್ಲಿರುವಾಗ ಅವರನ್ನು ಧಿಕ್ಕರಿಸದೆ, ಅವರನ್ನು ಅಸಹ್ಯಪಡದೆ, ಅವರನ್ನು ಸಂಪೂರ್ಣವಾಗಿ ನಾಶಮಾಡದೆಯೂ, ಅವರ ಸಂಗಡ ಇರುವ ನನ್ನ ಒಡಂಬಡಿಕೆಯನ್ನು ಮುರಿಯದೆಯೂ ಇರುವೆನು. ಏಕೆಂದರೆ ಅವರ ದೇವರಾಗಿರುವ ಯೆಹೋವ ದೇವರು ನಾನೇ.

[45] ನಾನು ಅವರ ಪಿತೃಗಳ ಸಂಗಡ ಮಾಡಿಕೊಂಡ ಒಡಂಬಡಿಕೆಯನ್ನು ನೆನಪಿಗೆ ತಂದುಕೊಂಡು, ಅವರಿಗೆ ಹಿತವನ್ನೇ ಮಾಡುವೆನು. ನಾನು ಅವರಿಗೆ ದೇವರಾಗಿರಬೇಕೆಂದೇ, ಅವರ ಪಿತೃಗಳನ್ನು ಎಲ್ಲಾ ಜನಾಂಗಗಳ ಮುಂದೆ ಈಜಿಪ್ಟಿನಿಂದ ಬರಮಾಡಿದೆನು. ನಾನೇ ಯೆಹೋವ ದೇವರು.’ ”

[46] ಯೆಹೋವ ದೇವರು ಸೀನಾಯಿ ಬೆಟ್ಟದಲ್ಲಿ ಮೋಶೆಯ ಮೂಲಕ ತನಗೂ, ಇಸ್ರಾಯೇಲರಿಗೂ ಮಧ್ಯದಲ್ಲಿ ಇಟ್ಟ ನಿಯಮಗಳೂ, ನ್ಯಾಯಗಳೂ, ಆಜ್ಞಾವಿಧಿಗಳೂ ಇವೇ.

ಯಾಜಕಕಾಂಡ — Chapters