Skip to content
Opens in a new window
Listen to this chapter • 4:05

[1] “ ‘ಯಾರಾದರೂ ಯೆಹೋವ ದೇವರಿಗೆ ಧಾನ್ಯ ಸಮರ್ಪಣೆಯನ್ನು ಸಮರ್ಪಿಸುವುದಾದರೆ ಅವನ ಸಮರ್ಪಣೆಯು ನಯವಾದ ಹಿಟ್ಟಿನದ್ದಾಗಿರಬೇಕು. ಅವನು ಅದರ ಮೇಲೆ ಎಣ್ಣೆಯನ್ನು ಸುರಿಸಬೇಕು, ಅದರ ಮೇಲೆ ಸಾಂಬ್ರಾಣಿಯನ್ನು ಹಾಕಬೇಕು.

[2] ಇದಲ್ಲದೆ ಅವನು ಅದನ್ನು ಯಾಜಕರಾದ ಆರೋನನ ಪುತ್ರರ ಬಳಿಗೆ ತರಬೇಕು. ಅವನು ಹಿಟ್ಟಿನಲ್ಲಿಯೂ, ಎಣ್ಣೆಯಲ್ಲಿಯೂ ಒಂದು ಹಿಡಿಯನ್ನು ಅದರ ಎಲ್ಲಾ ಸಾಂಬ್ರಾಣಿಯ ಸಂಗಡ ತೆಗೆದುಕೊಳ್ಳಬೇಕು. ಯಾಜಕನು ಅದನ್ನು ಜ್ಞಾಪಕಾರ್ಥವಾಗಿ ಬಲಿಪೀಠದ ಮೇಲೆ ಯೆಹೋವ ದೇವರಿಗೆ ಸುವಾಸನೆಯ ಸಮರ್ಪಣೆಯಾಗಿ ಬೆಂಕಿಯಿಂದ ಸುಡಬೇಕು.

[3] ಧಾನ್ಯ ಸಮರ್ಪಣೆಯಲ್ಲಿ ಉಳಿದದ್ದನ್ನು ಆರೋನನೂ ಅವನ ಪುತ್ರರೂ ತೆಗೆದುಕೊಳ್ಳಬೇಕು. ಅದು ಬೆಂಕಿಯಿಂದ ಮಾಡಿದ್ದಾಗಿದ್ದು ಯೆಹೋವ ದೇವರ ಸಮರ್ಪಣೆಗಳಲ್ಲಿ ಮಹಾಪರಿಶುದ್ಧವಾಗಿರುವುದು.

[4] “ ‘ನೀನು ಒಲೆಯಲ್ಲಿ ಸುಟ್ಟ ಧಾನ್ಯ ಸಮರ್ಪಣೆಯನ್ನು ಕಾಣಿಕೆಯಾಗಿ ತರುವುದಾದರೆ, ಅದು ಹುಳಿಯಿಲ್ಲದ ಮತ್ತು ಎಣ್ಣೆಯಿಂದ ಬೆರೆಸಿದ ನಯವಾದ ಹಿಟ್ಟಿನ ರೊಟ್ಟಿಗಳು ಇಲ್ಲವೆ ಹುಳಿಯಿಲ್ಲದ ಎಣ್ಣೆ ಹೊಯ್ದ ದೋಸೆಗಳಾಗಿರಬೇಕು.

[5] ನಿನ್ನ ಕಾಣಿಕೆಯು ಬೋಗುಣಿಯಲ್ಲಿ ಬೇಯಿಸಿದ ಧಾನ್ಯ ಸಮರ್ಪಣೆಯಾಗಿದ್ದರೆ, ಅದು ಹುಳಿಯಿಲ್ಲದ ನಯವಾದ ಹಿಟ್ಟಿನಿಂದ ಎಣ್ಣೆ ಮಿಶ್ರಿತವಾದದ್ದು ಆಗಿರಬೇಕು.

[6] ನೀನು ಅದನ್ನು ತುಂಡುಗಳನ್ನಾಗಿ ವಿಭಾಗಿಸಿ, ಅದರ ಮೇಲೆ ಎಣ್ಣೆ ಸುರಿಯಬೇಕು, ಅದು ಆಹಾರ ಸಮರ್ಪಣೆಯಾಗಿದೆ.

[7] ನಿನ್ನ ಕಾಣಿಕೆಯು ತವೆಯಲ್ಲಿ ಬೇಯಿಸಿದ ಧಾನ್ಯವಾಗಿದ್ದರೆ, ಅದು ನಯವಾದ ಎಣ್ಣೆಯಿಂದ ಕೂಡಿದ ಹಿಟ್ಟಿನಿಂದ ಮಾಡಿದ್ದಾಗಿರಬೇಕು.

[8] ನೀನು ಇವುಗಳಿಂದ ಮಾಡಿದ ಧಾನ್ಯ ಸಮರ್ಪಣೆಯನ್ನು ಯೆಹೋವ ದೇವರಿಗೆ ತರಬೇಕು. ಅದು ಯಾಜಕನಿಗೆ ಒಪ್ಪಿಸಿದಾಗ, ಅವನು ಅದನ್ನು ಬಲಿಪೀಠದ ಬಳಿಗೆ ತರುವನು.

[9] ಆಗ ಯಾಜಕನು ಅದರಿಂದ ಜ್ಞಾಪಕಾರ್ಥವಾಗಿ ಧಾನ್ಯ ಸಮರ್ಪಣೆಯನ್ನಾಗಿ ತೆಗೆದುಕೊಂಡು ಅದನ್ನು ಬಲಿಪೀಠದ ಮೇಲೆ ಸುಡಬೇಕು. ಅದು ಬೆಂಕಿಯಿಂದ ಮಾಡಿದ್ದಾಗಿದ್ದು, ಯೆಹೋವ ದೇವರಿಗೆ ಸುವಾಸನೆಯ ಸಮರ್ಪಣೆಯಾಗಿರುವುದು.

[10] ಧಾನ್ಯ ಸಮರ್ಪಣೆಯಲ್ಲಿ ಉಳಿದದ್ದನ್ನು ಆರೋನನೂ ಅವನ ಪುತ್ರರೂ ತೆಗೆದುಕೊಳ್ಳಬೇಕು. ಅದು ಬೆಂಕಿಯಿಂದ ಮಾಡಿದ್ದಾಗಿದ್ದು ಯೆಹೋವ ದೇವರ ಸಮರ್ಪಣೆಗಳಲ್ಲಿ ಮಹಾಪರಿಶುದ್ಧವಾಗಿರುವುದು.

[11] “ ‘ಯೆಹೋವ ದೇವರಿಗೆ ನೀನು ತರುವ ಧಾನ್ಯ ಸಮರ್ಪಣೆಯು ಯಾವುದೂ ಹುಳಿಯಿಂದ ಮಾಡಿದ್ದಾಗಿರಬಾರದು. ಏಕೆಂದರೆ ಯೆಹೋವ ದೇವರಿಗೆ ನೀವು ಬೆಂಕಿಯಿಂದ ಮಾಡುವ ಯಾವ ಸಮರ್ಪಣೆಯಲ್ಲಿ ಹುಳಿಯನ್ನಾಗಲಿ, ಜೇನನ್ನಾಗಲಿ ಬೆರೆಸಬಾರದು.

[12] ಪ್ರಥಮ ಫಲದ ಕಾಣಿಕೆಯ ವಿಷಯದಲ್ಲಿಯಾದರೋ ನೀವು ಅವುಗಳನ್ನು ಯೆಹೋವ ದೇವರಿಗೆ ಸಮರ್ಪಿಸಬೇಕು. ಆದರೆ ಅವುಗಳನ್ನು ಬಲಿಪೀಠದ ಮೇಲೆ ಸುವಾಸನೆಗಾಗಿ ಸುಡಬಾರದು.

[13] ನಿನ್ನ ಪ್ರತಿಯೊಂದು ಧಾನ್ಯ ಸಮರ್ಪಣೆಯೂ ಉಪ್ಪಿನಲ್ಲಿ ಬೆರಕೆಯಾಗಿರಬೇಕು. ನಿನ್ನ ದೇವರ ಒಡಂಬಡಿಕೆಯ ಉಪ್ಪು ನಿನ್ನ ಸಮರ್ಪಣೆಯಲ್ಲಿ ಇಲ್ಲದೆ ಇರಬಾರದು. ನಿನ್ನ ಎಲ್ಲಾ ಸಮರ್ಪಣೆಗಳಲ್ಲಿ ನೀನು ಉಪ್ಪನ್ನು ಸಮರ್ಪಿಸಬೇಕು.

[14] “ ‘ನೀನು ನಿನ್ನ ಪ್ರಥಮ ಫಲಗಳ ಧಾನ್ಯ ಸಮರ್ಪಣೆಯನ್ನು ಯೆಹೋವ ದೇವರಿಗೆ ಮಾಡಿದರೆ, ನಿನ್ನ ಪ್ರಥಮ ಫಲ ಧಾನ್ಯ ಕಾಣಿಕೆಯನ್ನು ಬೆಂಕಿಯಿಂದ ಸುಟ್ಟ ಕಾಳಿನ ಹಸಿರು ತೆನೆಗಳನ್ನೂ ಅಲ್ಲದೆ ತುಂಬಿದ ತೆನೆಗಳಿಂದ ಬಡಿದ ಒಣಗಿದ ಕಾಳುಗಳನ್ನೂ ಸಮರ್ಪಿಸಬೇಕು.

[15] ನೀನು ಅದರ ಮೇಲೆ ಎಣ್ಣೆಯನ್ನು ಸಾಂಬ್ರಾಣಿಯನ್ನು ಹಾಕು. ಇದೇ ಧಾನ್ಯ ಸಮರ್ಪಣೆ.

[16] ಯಾಜಕನು ಬಡಿದ ಕಾಳುಗಳಲ್ಲಿ ಕೆಲವು ಭಾಗವನ್ನು ಅದರ ಜೊತೆಯಲ್ಲಿ ಎಲ್ಲಾ ಸಾಂಬ್ರಾಣಿಯನ್ನು ಜ್ಞಾಪಕಾರ್ಥವಾಗಿ ಸುಡಬೇಕು. ಇದು ಯೆಹೋವ ದೇವರಿಗೆ ಬೆಂಕಿಯಿಂದ ಮಾಡಿದ ಸಮರ್ಪಣೆಯಾಗಿದೆ.

ಯಾಜಕಕಾಂಡ — Chapters