Skip to content
Opens in a new window
Listen to this chapter • 10:30

[1] ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,

[2] “ಇಸ್ರಾಯೇಲರೊಂದಿಗೆ ನೀನು ಮಾತನಾಡಿ ಅವರಿಗೆ ಹೀಗೆ ಹೇಳು, ‘ನೀವು ಪರಿಶುದ್ಧ ಸಭೆಗಳಾಗಿ ಸೇರಿ ಯೆಹೋವ ದೇವರಾಗಿರುವ ನನಗೋಸ್ಕರ ನೇಮಕವಾದ ಈ ಹಬ್ಬಗಳನ್ನು ಪ್ರಕಟಿಸಬೇಕು.

[3] “ ‘ಆರು ದಿವಸ ಕೆಲಸ ಮಾಡಬೇಕು. ಆದರೆ ಏಳನೆಯ ದಿನವು ಸಬ್ಬತ್ ದಿನ. ಆ ದಿನವು ಪರಿಶುದ್ಧ ದಿನವಾಗಿರುವುದು. ನೀವು ಆ ದಿನದಲ್ಲಿ ಕೆಲಸಮಾಡಬಾರದು. ನಿಮ್ಮ ಎಲ್ಲಾ ನಿವಾಸಗಳಲ್ಲಿಯೂ ಅದು ಯೆಹೋವ ದೇವರ ಸಬ್ಬತ್ ದಿನವಾಗಿರುವುದು.

[4] “ ‘ಇವು ಯೆಹೋವ ದೇವರ ಹಬ್ಬಗಳು: ನೀವು ನೇಮಕವಾದ ಕಾಲಗಳಲ್ಲಿ ನಿಮ್ಮ ಪವಿತ್ರ ಸಭಾ ಕೂಟಗಳಲ್ಲಿ ಈ ಹಬ್ಬಗಳನ್ನು ಪ್ರಕಟಿಸಬೇಕು.

[5] ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಂಜೆಯಲ್ಲಿ ಯೆಹೋವ ದೇವರ ಪಸ್ಕಹಬ್ಬವಾಗಬೇಕು.

[6] ಅದೇ ತಿಂಗಳಿನ ಹದಿನೈದನೆಯ ದಿನದಲ್ಲಿ ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಯೆಹೋವ ದೇವರಿಗೋಸ್ಕರ ಆಚರಿಸಬೇಕು. ಅದು ಮೊದಲುಗೊಂಡು ಏಳು ದಿನಗಳವರೆಗೆ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು.

[7] ಮೊದಲನೆಯ ದಿನದಲ್ಲಿ ಪರಿಶುದ್ಧ ದೇವಾರಾಧನೆಗಾಗಿ ಸಭೆ ಸೇರಬೇಕು. ಯಾವ ತರವಾದ ಉದ್ಯೋಗವನ್ನು ನೀವು ಆ ದಿನದಲ್ಲಿ ಮಾಡಬೇಡಿರಿ.

[8] ಆದರೆ ಏಳು ದಿವಸ ನೀವು ಯೆಹೋವ ದೇವರಿಗೆ ಬೆಂಕಿಯಿಂದ ಮಾಡಿದ ಬಲಿಯನ್ನು ಸಮರ್ಪಿಸಬೇಕು. ಏಳನೆಯ ದಿನದಲ್ಲಿ ಪರಿಶುದ್ಧ ಸಭಾಕೂಟವಿರುವುದು. ಅದರಲ್ಲಿ ನೀವು ಕಷ್ಟಕರವಾದ ಕೆಲಸವನ್ನು ಮಾಡಬಾರದು.’ ”

[9] ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,

[10] “ಇಸ್ರಾಯೇಲರೊಂದಿಗೆ ಮಾತನಾಡಿ ಅವರಿಗೆ ಹೇಳಬೇಕಾದದ್ದೇನೆಂದರೆ: ‘ನಾನು ನಿಮಗೆ ಕೊಡುವ ದೇಶದೊಳಕ್ಕೆ ನೀವು ಬಂದಾಗ ಮತ್ತು ಅಲ್ಲಿಯ ಸುಗ್ಗಿಯನ್ನು ಕೊಯ್ದರೆ, ನಿಮ್ಮ ಸುಗ್ಗಿಯ ಪ್ರಥಮ ಫಲಗಳ ಸಿವುಡನ್ನು ಯಾಜಕನ ಬಳಿಗೆ ತರಬೇಕು.

[11] ಅದು ನಿಮಗೋಸ್ಕರ ಅಂಗೀಕಾರವಾಗುವಂತೆ ಅದನ್ನು ಯೆಹೋವ ದೇವರ ಸನ್ನಿಧಿಯಲ್ಲಿ ಅರ್ಪಿಸಬೇಕು. ಸಬ್ಬತ್ ದಿನವಾದ ಮಾರನೆಯ ದಿನ ಯಾಜಕನು ಅದನ್ನು ಅರ್ಪಿಸಬೇಕು.

[12] ನೀವು ಸಿವುಡನ್ನು ಅರ್ಪಿಸುವ ದಿನದಲ್ಲಿ ಯೆಹೋವ ದೇವರಿಗೆ ದಹನಬಲಿಯಾಗಿ ಸಮರ್ಪಿಸುವಂತೆ ಒಂದು ವರ್ಷದ ಮತ್ತು ಕಳಂಕರಹಿತವಾದ ಕುರಿಮರಿಯನ್ನು ಅರ್ಪಿಸಬೇಕು.

[13] ಇದರೊಂದಿಗೆ, ಧಾನ್ಯ ಸಮರ್ಪಣೆಯಲ್ಲಿ ಬೆರೆಸಿದ ಎಣ್ಣೆ ಮತ್ತು ಮೂರು ಕಿಲೋಗ್ರಾಂ ನಯವಾದ ಹಿಟ್ಟನ್ನು ಆಹ್ಲಾದಕರವಾದ ಪರಿಮಳದ ರೂಪದಲ್ಲಿ ಯೆಹೋವ ದೇವರಿಗೆ ಅರ್ಪಿಸಬೇಕು. ಇದಲ್ಲದೆ ಅದರೊಂದಿಗೆ ಸಮರ್ಪಿಸಬೇಕಾದ ಪಾನದ್ರವ್ಯವು ಸುಮಾರು ಒಂದು ಲೀಟರ್ ದ್ರಾಕ್ಷಾರಸ ಆಗಿರಬೇಕು.

[14] ಅದೇ ದಿನದಲ್ಲಿ ನೀವು ನಿಮ್ಮ ದೇವರಿಗೆ ಬಲಿಯನ್ನು ತರುವವರೆಗೆ ರೊಟ್ಟಿಯನ್ನಾಗಲಿ, ಹುರಿದ ಕಾಳನ್ನಾಗಲಿ ಇಲ್ಲವೆ ಹಸಿರಾದ ತೆನೆಗಳನ್ನಾಗಲಿ ತಿನ್ನಬಾರದು. ಇದು ನಿಮಗೆ ನಿಮ್ಮ ಸಂತತಿಯ ಎಲ್ಲಾ ನಿವಾಸಗಳಲ್ಲಿಯೂ ಶಾಶ್ವತವಾದ ನಿಯಮವಾಗಿರಬೇಕು.

[15] “ ‘ಸಬ್ಬತ್ ದಿನದ ಮಾರನೆಯ ದಿನ ನೀವು ನೈವೇದ್ಯವಾಗಿ ನಿವಾಳಿಸಿದ ಸಿವುಡನ್ನು ತಂದ ದಿನದಿಂದ ಏಳು ವಾರಗಳು ಪೂರ್ಣವಾಗುವವರೆಗೆ ಲೆಕ್ಕಿಸಬೇಕು.

[16] ಏಳನೆಯ ಸಬ್ಬತ್ ದಿನದ ಮಾರನೆಯ ದಿನದಿಂದ ನೀವು ಐವತ್ತು ದಿನಗಳನ್ನು ಲೆಕ್ಕಿಸಬೇಕು. ನೀವು ಯೆಹೋವ ದೇವರಿಗೆ ಹೊಸ ಧಾನ್ಯ ಸಮರ್ಪಣೆಯನ್ನು ಅರ್ಪಿಸಬೇಕು.

[17] ಇದಲ್ಲದೆ ನೀವು ನಿಮ್ಮ ಮನೆಗಳಿಂದ ತಂದ ಹಿಟ್ಟಿನಲ್ಲಿ ಎರಡೆರಡು ಓಮರ್ ಹಿಟ್ಟಿನಿಂದ ಎರಡು ರೊಟ್ಟಿಗಳನ್ನು ಮಾಡಬೇಕು. ಇವುಗಳನ್ನು ಹುಳಿಹಾಕಿದ ಗೋಧಿಯ ಹಿಟ್ಟಿನಿಂದ ಮಾಡಿ ಪ್ರಥಮಫಲವಾಗಿ ಯೆಹೋವ ದೇವರಿಗೆ ನೈವೇದ್ಯವಾಗಿ ನಿವಾಳಿಸಬೇಕು.

[18] ಇದಲ್ಲದೆ ನೀವು ರೊಟ್ಟಿಯೊಂದಿಗೆ ಕಳಂಕರಹಿತವಾದ ಒಂದು ವರ್ಷದ ಏಳು ಕುರಿಮರಿಗಳನ್ನೂ ಒಂದು ಎಳೆಯ ಹೋರಿಯನ್ನೂ ಎರಡು ಟಗರುಗಳನ್ನೂ ಸಮರ್ಪಿಸಬೇಕು. ಅವು ಯೆಹೋವ ದೇವರಿಗೆ ದಹನಬಲಿಗಳಾಗುವುವು. ಅವುಗಳೊಂದಿಗೆ ಆಹಾರ ಬಲಿಯು ಮತ್ತು ಪಾನಾರ್ಪಣೆಗಳು, ಯೆಹೋವ ದೇವರಿಗೆ ಬೆಂಕಿಯಿಂದ ಮಾಡಿದ ಸುವಾಸನೆಯಾದ ಅರ್ಪಣೆಗಳಾಗಿರಬೇಕು.

[19] ತರುವಾಯ ಹೋತವನ್ನು ಪಾಪ ಪರಿಹಾರದ ಬಲಿಯಾಗಿಯೂ ಮತ್ತು ಸಮಾಧಾನ ಬಲಿಯಾಗಿ ಒಂದು ವರ್ಷದ ಎರಡು ಕುರಿಮರಿಗಳನ್ನು ಬಲಿಯಾಗಿ ಅರ್ಪಿಸಬೇಕು.

[20] ಯಾಜಕನು ಯೆಹೋವ ದೇವರ ಸನ್ನಿಧಿಯಲ್ಲಿ ಪ್ರಥಮ ಫಲದ ರೊಟ್ಟಿಯೊಂದಿಗೂ, ಎರಡು ಕುರಿಮರಿಗಳೊಂದಿಗೂ ಅವುಗಳನ್ನು ನೈವೇದ್ಯವಾಗಿ ನಿವಾಳಿಸಬೇಕು. ಅವು ಯೆಹೋವ ದೇವರಿಗೆ ಪರಿಶುದ್ಧವಾಗಿದ್ದು ಯಾಜಕನಿಗೋಸ್ಕರ ಇರಬೇಕು.

[21] ಅದೇ ದಿನದಲ್ಲಿ ಪವಿತ್ರ ಸಭೆ ಕೂಡುವುದೆಂದು ಪ್ರಕಟಿಸಬೇಕು ಮತ್ತು ಆ ದಿನದಲ್ಲಿ ನೀವು ಉದ್ಯೋಗವನ್ನೂ ಮಾಡಬಾರದು. ಇದು ನಿಮಗೂ, ನಿಮ್ಮ ಸಂತತಿಯವರಿಗೂ, ನೀವು ಎಲ್ಲೇ ಇದ್ದರೂ ಪಾಲಿಸಬೇಕಾದ ಶಾಶ್ವತ ನಿಯಮ.

[22] “ ‘ನಿಮ್ಮ ಭೂಮಿಯ ಸುಗ್ಗಿಯನ್ನು ನೀವು ಕೊಯ್ಯುವಾಗ, ನಿಮ್ಮ ಹೊಲದ ಮೂಲೆಯನ್ನು ಸಂಪೂರ್ಣವಾಗಿ ಕೊಯ್ಯಬಾರದು, ಇಲ್ಲವೆ ನಿಮ್ಮ ಸುಗ್ಗಿಯಲ್ಲಿ ಯಾವ ಹಕ್ಕಲನ್ನೂ ಕೂಡಿಸಿಕೊಳ್ಳಬಾರದು. ನೀವು ಅವುಗಳನ್ನು ಬಡವರಿಗಾಗಿ ಮತ್ತು ಪರಕೀಯರಿಗಾಗಿ ಬಿಟ್ಟುಬಿಡಬೇಕು. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.’ ”

[23] ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,

[24] “ಇಸ್ರಾಯೇಲರೊಂದಿಗೆ ಮಾತನಾಡಿ: ‘ಏಳನೆಯ ತಿಂಗಳಿನಲ್ಲಿ ಮೊದಲನೆಯ ದಿನದಲ್ಲಿ ನಿಮಗೆ ತುತೂರಿಗಳನ್ನು ಊದುವ ಜ್ಞಾಪಕಾರ್ಥವಾದ ಸಬ್ಬತ್ ದಿನವಾಗಿರಬೇಕು. ಆ ದಿನ ಪರಿಶುದ್ಧ ಸಭೆಯ ಕೂಟವೂ ಇರಬೇಕು.

[25] ನೀವು ಅದರಲ್ಲಿ ಕಷ್ಟಕರವಾದ ಕೆಲಸವನ್ನು ಮಾಡಬಾರದು. ಆದರೆ ದಹನಬಲಿಯನ್ನು ಯೆಹೋವ ದೇವರಿಗೆ ಅರ್ಪಿಸಬೇಕು,’ ” ಎಂದು ಹೇಳಿದರು.

[26] ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,

[27] “ಈ ಏಳನೆಯ ತಿಂಗಳಿನ ಹತ್ತನೆಯ ದಿವಸವು ಪ್ರಾಯಶ್ಚಿತ್ತದ ದಿವಸವಾಗಿರುವುದು. ಅದು ನಿಮಗೆ ಒಂದು ಪರಿಶುದ್ಧ ಸಭೆಯ ಕೂಟವಾಗಿರುವುದು. ನೀವು ಉಪವಾಸ ಮಾಡಿ ಬೆಂಕಿಯಿಂದ ಮಾಡಿದ ಸಮರ್ಪಣೆಯನ್ನು ಯೆಹೋವ ದೇವರಿಗೆ ಅರ್ಪಿಸಬೇಕು.

[28] ಆ ದಿವಸದಲ್ಲಿ ನೀವು ಕೆಲಸವನ್ನು ಮಾಡಬಾರದು. ಏಕೆಂದರೆ ಅದು ನಿಮಗೋಸ್ಕರ ನಿಮ್ಮ ದೇವರಾಗಿರುವ ಯೆಹೋವ ದೇವರ ಸನ್ನಿಧಿಯಲ್ಲಿ ಪ್ರಾಯಶ್ಚಿತ್ತ ಮಾಡುವುದಕ್ಕಾಗಿ ಪ್ರಾಯಶ್ಚಿತ್ತದ ದಿವಸವಾಗಿರುವುದು.

[29] ಅದೇ ದಿವಸದಲ್ಲಿ ಯಾರಾದರೂ ಉಪವಾಸ ಮಾಡದೆ ಇದ್ದಲ್ಲಿ, ಅವರು ತಮ್ಮ ಜನರೊಳಗಿಂದ ಸಂಪೂರ್ಣವಾಗಿ ತೆಗೆಯಲಾಗುವುದು.

[30] ಅದೇ ದಿವಸದಲ್ಲಿ ಯಾರಾದರೂ ಕೆಲಸವನ್ನು ಮಾಡಿದರೆ, ಅವರನ್ನು ನಾನು ಅವರ ಜನರ ಮಧ್ಯದಿಂದ ನಾಶಮಾಡುವೆನು.

[31] ನೀವು ಯಾವ ತರಹದ ಕೆಲಸವನ್ನೂ ಮಾಡಬಾರದು. ಇದು ನಿಮ್ಮ ಸಂತತಿಗೆ ಎಲ್ಲಾ ನಿವಾಸಗಳಲ್ಲಿ ಶಾಶ್ವತವಾದ ನಿಯಮವಾಗಿರಬೇಕು.

[32] ಇದು ನಿಮಗೆ ಸಬ್ಬತ್ ದಿನವಾಗಿರುವುದು. ನೀವು ನಿಮ್ಮನ್ನು ಉಪವಾಸ ಇಡಬೇಕು. ಆ ತಿಂಗಳಿನ ಒಂಬತ್ತನೆಯ ದಿವಸದ ಸಾಯಂಕಾಲದಿಂದ ಹಿಡಿದು ಮರುದಿನದ ಸಂಜೆಯವರೆಗೆ ಸಬ್ಬತ್ ದಿನವನ್ನು ಆಚರಿಸಬೇಕು,” ಎಂಬದೇ.

[33] ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,

[34] “ಇಸ್ರಾಯೇಲರೊಂದಿಗೆ ಮಾತನಾಡಿ ಅವರಿಗೆ ಹೀಗೆ ಹೇಳು: ‘ಈ ಏಳನೆಯ ತಿಂಗಳಿನ ಹದಿನೈದನೆಯ ದಿವಸವು ಏಳು ದಿವಸಗಳವರೆಗೆ ಯೆಹೋವ ದೇವರಿಗೆ ಗುಡಾರಗಳ ಹಬ್ಬವಾಗಿರುವುದು.

[35] ಮೊದಲನೆಯ ದಿವಸದಲ್ಲಿ ಪರಿಶುದ್ಧ ಸಭೆಯ ಕೂಟವಿರುವುದು. ನೀವು ಅದರಲ್ಲಿ ಕಷ್ಟಕರವಾದ ಕೆಲಸಗಳನ್ನು ಮಾಡಬಾರದು.

[36] ಏಳು ದಿವಸ ನೀವು ಬೆಂಕಿಯ ಮೂಲಕ ಬಲಿಗಳನ್ನು ಯೆಹೋವ ದೇವರಿಗೆ ಅರ್ಪಿಸಬೇಕು. ಎಂಟನೆಯ ದಿವಸವು ನಿಮಗೆ ಪರಿಶುದ್ಧ ಕೂಟವಾಗಿರುವುದು. ನೀವು ಬೆಂಕಿಯ ಮೂಲಕ ಬಲಿಯನ್ನು ಯೆಹೋವ ದೇವರಿಗೆ ಅರ್ಪಿಸಬೇಕು. ಅದೊಂದು ಗಂಭೀರ ಸಭೆಯಾಗಿರುವುದು. ಅದರಲ್ಲಿ ನೀವು ಕಷ್ಟಕರವಾದ ಕೆಲಸಗಳನ್ನು ಮಾಡಬಾರದು.

[37] “ ‘ನೀವು ಪರಿಶುದ್ಧ ಸಭೆಯಾಗಿ ಯೆಹೋವ ದೇವರ ನೇಮಕವಾದ ಹಬ್ಬಗಳು ಇವೇ. ಇವುಗಳ ಒಂದೊಂದು ದಿವಸದಲ್ಲಿ ಯೆಹೋವ ದೇವರಿಗೆ ದಹನಬಲಿಯನ್ನೂ, ಧಾನ್ಯ ಸಮರ್ಪಣೆಯನ್ನೂ, ಯಜ್ಞವನ್ನೂ, ಪಾನದ್ರವ್ಯ ಬಲಿಗಳನ್ನೂ ಅರ್ಪಿಸಬೇಕು.

[38] ಯೆಹೋವ ದೇವರ ವಿಶ್ರಾಂತಿಯ ದಿನಗಳ ಹೊರತಾಗಿಯೂ, ನೀವು ಯೆಹೋವ ದೇವರಿಗೆ ಸಮರ್ಪಿಸುವ ನಿಮ್ಮ ದಾನಗಳ ಹೊರತಾಗಿಯೂ, ನಿಮ್ಮ ಎಲ್ಲಾ ಹರಕೆಗಳ ಹೊರತಾಗಿಯೂ, ನಿಮ್ಮ ಎಲ್ಲಾ ಸ್ವಯಿಚ್ಛೆಯ ಕಾಣಿಕೆಗಳ ಹೊರತಾಗಿಯೂ ಸಲ್ಲಿಸಬೇಕಾದ ಅರ್ಪಣೆಗಳಿರುತ್ತವೆ.

[39] “ ‘ಏಳನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ಭೂಮಿಯ ಫಲವನ್ನು ಕೂಡಿಸಿದಾಗ, ಯೆಹೋವ ದೇವರಿಗೆ ಏಳು ದಿವಸಗಳ ಹಬ್ಬವನ್ನು ಕೈಗೊಳ್ಳಬೇಕು. ಮೊದಲನೆಯ ದಿನವು ಸಬ್ಬತ್ ದಿನವಾಗಿರಬೇಕು ಮತ್ತು ಎಂಟನೆಯ ದಿನವು ಸಬ್ಬತ್ ದಿನವಾಗಿರಬೇಕು.

[40] ಮೊದಲನೆಯ ದಿವಸದಲ್ಲಿ ನೀವು ಸುಂದರವಾದ ಮರಗಳ ರೆಂಬೆಗಳನ್ನೂ, ಖರ್ಜೂರ ಮರಗಳ ರೆಂಬೆಗಳನ್ನೂ, ದಟ್ಟವಾದ ಮರಗಳ ರೆಂಬೆಗಳನ್ನೂ, ಹಳ್ಳದ ನೀರವಂಜಿ ಮರಗಳನ್ನೂ ತೆಗೆದುಕೊಂಡು ಏಳು ದಿನಗಳವರೆಗೆ ನಿಮ್ಮ ದೇವರಾಗಿರುವ ಯೆಹೋವ ದೇವರ ಎದುರಿನಲ್ಲಿ ಸಂತೋಷ ಪಡಬೇಕು.

[41] ವರ್ಷದಲ್ಲಿ ನೀವು ಏಳು ದಿವಸಗಳ ಹಬ್ಬವನ್ನು ಯೆಹೋವ ದೇವರಿಗಾಗಿ ಕೈಗೊಳ್ಳಬೇಕು. ಇದು ನಿಮ್ಮ ಸಂತತಿಗಳಲ್ಲಿ ಶಾಶ್ವತವಾದ ನಿಯಮವಾಗಿರಬೇಕು. ನೀವು ಇದನ್ನು ಏಳನೆಯ ತಿಂಗಳಿನಲ್ಲಿ ಆಚರಿಸಬೇಕು.

[42] ಏಳು ದಿವಸಗಳವರೆಗೆ ನೀವು ಗುಡಾರಗಳಲ್ಲಿ ವಾಸಿಸಬೇಕು. ಸ್ವದೇಶೀಯರಾದ ಇಸ್ರಾಯೇಲರಾಗಿ ಹುಟ್ಟಿದವರೆಲ್ಲರೂ ಗುಡಾರಗಳಲ್ಲಿ ವಾಸಿಸಬೇಕು.

[43] ಏಕೆಂದರೆ ನಾನು ಇಸ್ರಾಯೇಲರನ್ನು ಈಜಿಪ್ಟ್ ದೇಶದೊಳಗಿನಿಂದ ಹೊರಗೆ ಬರಮಾಡಿದಾಗ, ಅವರು ಗುಡಾರಗಳಲ್ಲಿ ವಾಸಿಸುವಂತೆ ಮಾಡಿದೆನೆಂದು ನಿಮ್ಮ ಸಂತತಿಯವರು ತಿಳಿದುಕೊಳ್ಳುವರು. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.’ ”

[44] ಹೀಗೆ ಮೋಶೆಯು ಇಸ್ರಾಯೇಲರಿಗೆ ಯೆಹೋವ ದೇವರ ಹಬ್ಬಗಳನ್ನು ನೇಮಕಮಾಡಿದನು.

ಯಾಜಕಕಾಂಡ — Chapters