Skip to content
Opens in a new window
Listen to this chapter • 6:54

[1] ಯೆಹೋವ ದೇವರು ಮೋಶೆಯೊಡನೆ ಮಾತನಾಡಿ,

[2] “ಯಾರಾದರೂ ಪಾಪಮಾಡಿದರೆ ಮತ್ತು ನೆರೆಯವರಿಗೆ ಮೋಸ ಮಾಡುವ ಮೂಲಕ ಯೆಹೋವ ದೇವರಿಗೆ ವಿಶ್ವಾಸದ್ರೋಹಿ ಆಗಿದ್ದರೆ ಅಥವಾ ಅವರ ಆರೈಕೆಯಲ್ಲಿ ಏನಾದರೂ ಉಳಿಸಿಕೊಂಡಿದ್ದರೆ ಅಥವಾ ಯಾವುದನ್ನಾದರೂ ಕದ್ದುಕೊಂಡಿದ್ದರೆ ಅಥವಾ ಅವರು ತಮ್ಮ ನೆರೆಹೊರೆಯವರಿಗೆ ಮೋಸ ಮಾಡಿದ್ದರೆ,

[3] ಇಲ್ಲವೆ ಕಳೆದುಹೋಗಿದ ವಸ್ತು ಸಿಕ್ಕಿ, ಅದರ ವಿಷಯದಲ್ಲಿ ಸುಳ್ಳಾಡಿದ್ದರೆ ಮತ್ತು ಸುಳ್ಳಾಗಿ ಪ್ರಮಾಣ ಮಾಡಿದ್ದರೆ, ಇವೆಲ್ಲವುಗಳಲ್ಲಿ ಯಾವುದನ್ನಾದರೂ ಒಬ್ಬನು ಮಾಡಿದ್ದರೆ, ಅವನು ಪಾಪಮಾಡುವವನಾಗಿದ್ದಾನೆ.

[4] ಅವನು ಪಾಪಮಾಡಿ, ಅಪರಾಧಿಯಾಗಿರುವುದರಿಂದ ಬಲಾತ್ಕಾರವಾಗಿ ಪಡೆದುಕೊಂಡದ್ದನ್ನೂ ಇಲ್ಲವೆ ಅವನು ಮೋಸದಿಂದ ಪಡೆದ ವಸ್ತುವನ್ನೂ ಇಲ್ಲವೆ ಅವನ ವಶಕ್ಕೆ ಸಿಕ್ಕಿದ ವಸ್ತುವನ್ನೂ ಹಿಂದಕ್ಕೆ ತಂದುಕೊಡಬೇಕು.

[5] ಅಥವಾ ಅವನು ಸುಳ್ಳಾಗಿ ಪ್ರಮಾಣಮಾಡಿ, ಪಡೆದವುಗಳೆಲ್ಲವುಗಳನ್ನೂ ಕೂಡಿಸಿ, ಹಿಂದಕ್ಕೆ ಕೊಡಬೇಕು. ಪ್ರಾಯಶ್ಚಿತ್ತದ ಬಲಿ ಅರ್ಪಿಸುವ ದಿನದಲ್ಲಿ, ಅದರ ಯಜಮಾನನು ಯಾವನಾಗಿರುವನೋ, ಅವನಿಗೆ ಕೊಡಬೇಕು.

[6] ಅವನು ತನ್ನ ಪ್ರಾಯಶ್ಚಿತ್ತಕ್ಕಾಗಿ ಕಳಂಕರಹಿತವಾದ ಒಂದು ಟಗರನ್ನು ಹಿಂಡಿನಿಂದ ತಂದು ಅದನ್ನು ಯೆಹೋವ ದೇವರಿಗೆಂದು ಯಾಜಕನ ಬಳಿಗೆ ತರಬೇಕು.

[7] ಯಾಜಕನು ಅವನಿಗಾಗಿ ಯೆಹೋವ ದೇವರ ಸನ್ನಿಧಿಯಲ್ಲಿ ದೋಷಪರಿಹಾರವನ್ನು ಮಾಡಬೇಕು. ಅತಿಕ್ರಮದಲ್ಲಿ ಅವನು ಏನನ್ನಾದರೂ ಮಾಡಿದ್ದರೆ, ಆ ವಿಷಯದಲ್ಲಿ ಅವನಿಗೆ ಕ್ಷಮಾಪಣೆಯಾಗುವುದು,” ಎಂದರು.

[8] ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ,

[9] “ಆರೋನನಿಗೂ ಅವನ ಪುತ್ರರಿಗೂ ಆಜ್ಞಾಪಿಸಿ ಹೀಗೆ ಹೇಳು, ‘ಇದು ದಹನಬಲಿಯ ನಿಯಮವಾಗಿದೆ. ದಹನಬಲಿ ಇಡೀ ರಾತ್ರಿ, ಅಂದರೆ ಬೆಳಗಿನವರೆಗೆ ಬಲಿಪೀಠದ ಅಗ್ನಿಕುಂಡದ ಮೇಲೆ ಇರಬೇಕು. ಬಲಿಪೀಠದ ಬೆಂಕಿಯು ಅದರೊಳಗೆ ಸುಡುತ್ತಾ ಇರುವುದು.

[10] ಯಾಜಕನು ತನ್ನ ನಾರುಮಡಿಯ ಉಡುಪನ್ನೂ ತನ್ನ ಶರೀರದ ಮೇಲೆ ನಾರುಮಡಿಯ ಒಳಉಡುಪುಗಳನ್ನೂ ಧರಿಸಿಕೊಂಡು, ಬಲಿಪೀಠದ ಮೇಲೆ ದಹನಬಲಿಯೊಂದಿಗೆ ಸುಟ್ಟ ಬೂದಿಯನ್ನು ತೆಗೆದುಕೊಂಡು, ಅದನ್ನು ಬಲಿಪೀಠದ ಬಳಿಯಲ್ಲಿ ಹಾಕಬೇಕು.

[11] ಆಮೇಲೆ ಅವನು ತನ್ನ ಉಡುಪುಗಳನ್ನು ತೆಗೆದುಹಾಕಿ, ಬೇರೆ ಉಡುಪುಗಳನ್ನು ಧರಿಸಿಕೊಂಡು, ಆ ಬೂದಿಯನ್ನು ಪಾಳೆಯದ ಆಚೆಗೆ ಶುದ್ಧವಾದ ಸ್ಥಳಕ್ಕೆ ತೆಗೆದುಕೊಂಡು ಹೋಗಬೇಕು.

[12] ಬಲಿಪೀಠದ ಮೇಲೆ ಬೆಂಕಿಯು ಅದರೊಳಗೆ ಸುಡುತ್ತಲೇ ಇರಬೇಕು. ಅದು ಆರಿಹೋಗಿರಬಾರದು. ಪ್ರತಿ ಮುಂಜಾನೆ ಯಾಜಕನು ಅದರ ಮೇಲೆ ಕಟ್ಟಿಗೆಯನ್ನು ಹಾಕಬೇಕು. ದಹನಬಲಿಯನ್ನು ಅದರ ಮೇಲೆ ಕ್ರಮವಾಗಿ ಇಡಬೇಕು. ಇದಲ್ಲದೆ ಅವನು ಅದರ ಮೇಲೆ ಸಮಾಧಾನ ಬಲಿ ಅರ್ಪಣೆಗಳ ಕೊಬ್ಬನ್ನು ಸುಡಬೇಕು.

[13] ಬಲಿಪೀಠದ ಮೇಲೆ ಬೆಂಕಿಯು ಯಾವಾಗಲೂ ಉರಿಯುತ್ತಿರಬೇಕು, ಅದು ಎಂದಿಗೂ ಆರಬಾರದು.

[14] “ ‘ಧಾನ್ಯ ಸಮರ್ಪಣೆಯ ನಿಯಮವು ಇದೇ. ಆರೋನನ ಪುತ್ರರು ಬಲಿಪೀಠದ ಮುಂದೆ ಯೆಹೋವ ದೇವರ ಸನ್ನಿಧಿಯಲ್ಲಿ ಅದನ್ನು ಸಮರ್ಪಿಸಬೇಕು.

[15] ಯಾಜಕನು ಧಾನ್ಯ ಸಮರ್ಪಣೆಯ ಹಿಟ್ಟಿನಲ್ಲಿ ಒಂದು ಹಿಡಿ ಹಿಟ್ಟನ್ನೂ, ಧಾನ್ಯ ಸಮರ್ಪಣೆಯ ಮೇಲಿರುವ ಅದರ ಎಣ್ಣೆಯನ್ನೂ, ಅದರ ಎಲ್ಲಾ ಸಾಂಬ್ರಾಣಿಯನ್ನೂ ತೆಗೆದುಕೊಂಡು ಜ್ಞಾಪಕಾರ್ಥವಾಗಿ ಯೆಹೋವ ದೇವರಿಗೆ ಬಲಿಪೀಠದ ಮೇಲೆ ಸುವಾಸನೆಗಾಗಿ ಅದನ್ನು ಸುಡಬೇಕು.

[16] ಅದರಲ್ಲಿ ಉಳಿದದ್ದನ್ನು ಆರೋನನೂ, ಅವನ ಪುತ್ರರೂ ತಿನ್ನಬೇಕು. ಅದನ್ನು ಪರಿಶುದ್ಧ ಸ್ಥಳದಲ್ಲಿ ಹುಳಿಯಿಲ್ಲದ ರೊಟ್ಟಿಯೊಂದಿಗೆ ತಿನ್ನಬೇಕು. ಅದನ್ನು ಅವರು ದೇವದರ್ಶನದ ಗುಡಾರದ ಅಂಗಳದಲ್ಲಿ ತಿನ್ನಬೇಕು.

[17] ಅದನ್ನು ಹುಳಿಯೊಂದಿಗೆ ಬೇಯಿಸಬಾರದು. ಅವರು ನನಗೆ ಬೆಂಕಿಯಿಂದ ಮಾಡಿದ ನನ್ನ ಸಮರ್ಪಣೆಗಳಲ್ಲಿ ಅವರ ಪಾಲನ್ನು ಅವರಿಗೆ ನಾನು ಕೊಟ್ಟಿದ್ದೇನೆ. ಅದು ದೋಷಪರಿಹಾರದ ಬಲಿಯ ಹಾಗೆಯೂ ಮಹಾಪರಿಶುದ್ಧವಾದದ್ದು.

[18] ಆರೋನನ ಮಕ್ಕಳಲ್ಲಿ ಎಲ್ಲಾ ಗಂಡುಮಕ್ಕಳೂ ಅದನ್ನು ತಿನ್ನಬಹುದು. ಯೆಹೋವ ದೇವರಿಗೆ ಬೆಂಕಿಯಿಂದ ಮಾಡಿದ ಸಮರ್ಪಣೆಗಳ ವಿಷಯದಲ್ಲಿ ನಿಮ್ಮ ಸಂತತಿಗಳಿಗೆ ಇದು ಒಂದು ಶಾಶ್ವತ ಕಟ್ಟಳೆಯಾಗಿರುವುದು. ಅವುಗಳನ್ನು ಮುಟ್ಟುವ ಪ್ರತಿಯೊಬ್ಬನೂ ಪರಿಶುದ್ಧನಾಗಿರಬೇಕು,’ ” ಎಂದರು.

[19] ಯೆಹೋವ ದೇವರು ಮೋಶೆಯೊಡನೆ ಮಾತನಾಡಿ,

[20] “ಆರೋನನೂ, ಅವನ ಪುತ್ರರೂ ಅಭಿಷಿಕ್ತರಾದ ದಿನದಲ್ಲಿ, ಅವರು ಯೆಹೋವ ದೇವರಿಗೆ ಸಮರ್ಪಿಸಬೇಕಾದ ಬಲಿಯು ಇದೇ. ಮೂರು ಸೇರು ಗೋಧಿ ಹಿಟ್ಟಿನಲ್ಲಿ ನಿರಂತರವಾಗಿರುವ ಧಾನ್ಯ ಸಮರ್ಪಣೆಗಾಗಿ ಮುಂಜಾನೆ ಅದರಲ್ಲಿ ಅರ್ಧಭಾಗವನ್ನು ಮತ್ತು ರಾತ್ರಿ ಅದರಲ್ಲಿ ಅರ್ಧಭಾಗವನ್ನು ಸಮರ್ಪಿಸಬೇಕು.

[21] ಅದನ್ನು ಒಂದು ಬೋಗುಣಿಯಲ್ಲಿ ಎಣ್ಣೆಯೊಂದಿಗೆ ಮಾಡಬೇಕು. ಅದನ್ನು ತರುವಾಗ ಅದು ಎಣ್ಣೆಯಿಂದ ನೆನೆದೇ ಇರಬೇಕು. ಬೇಯಿಸಿದ ಧಾನ್ಯ ಸಮರ್ಪಣೆಯ ತುಂಡುಗಳನ್ನು ನೀನು ಯೆಹೋವ ದೇವರಿಗೆ ಸುವಾಸನೆಯಾಗಿ ಸಮರ್ಪಿಸಬೇಕು.

[22] ಅವನ ಪುತ್ರರಲ್ಲಿ ಅವನಿಗೆ ಬದಲಾಗಿ ಅಭಿಷಿಕ್ತನಾದ ಯಾಜಕನು ಅದನ್ನು ಸಮರ್ಪಿಸಬೇಕು. ಇದು ಯೆಹೋವ ದೇವರಿಗಾಗಿ ನಿರಂತರವಾದ ಒಂದು ಕಟ್ಟಳೆಯಾಗಿದೆ. ಅದು ಸಂಪೂರ್ಣವಾಗಿ ಸುಟ್ಟಿರಬೇಕು.

[23] ಏಕೆಂದರೆ ಯಾಜಕನಿಗಾಗಿರುವ ಪ್ರತಿಯೊಂದು ಧಾನ್ಯ ಸಮರ್ಪಣೆಯೂ ಸಂಪೂರ್ಣವಾಗಿ ಸುಟ್ಟಿರಬೇಕು. ಅದನ್ನು ತಿನ್ನಬಾರದು,” ಎಂದರು.

[24] ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ,

[25] “ಆರೋನನಿಗೂ, ಅವನ ಪುತ್ರರಿಗೂ ಹೇಳು: ‘ಪಾಪ ಪರಿಹಾರದ ಬಲಿಯ ನಿಯಮವು ಇದೇ. ದಹನಬಲಿಯನ್ನು ವಧಿಸುವ ಸ್ಥಳದಲ್ಲಿ ಪಾಪ ಪರಿಹಾರದ ಬಲಿಯೂ ಯೆಹೋವ ದೇವರ ಸನ್ನಿಧಿಯಲ್ಲಿ ವಧಿಸಬೇಕು. ಅದು ಮಹಾಪರಿಶುದ್ಧವಾದದ್ದು.

[26] ಪಾಪ ಪರಿಹಾರದ ಬಲಿಯನ್ನು ಮಾಡುವ ಯಾಜಕನು ಅದನ್ನು ತಿನ್ನಬೇಕು. ಅದನ್ನು ಸಭೆಯ ದೇವದರ್ಶನದ ಗುಡಾರದ ಅಂಗಳದ ಪರಿಶುದ್ಧ ಸ್ಥಳದಲ್ಲಿ ತಿನ್ನಬೇಕು.

[27] ಅದರ ಮಾಂಸವನ್ನು ಮುಟ್ಟಿದ್ದೆಲ್ಲವೂ ಪರಿಶುದ್ಧವಾಗಿರುವುದು. ಅದರ ರಕ್ತದಲ್ಲಿ ಸ್ವಲ್ಪವಾದರೂ ಉಡುಪಿನ ಮೇಲೆ ಬಿದ್ದರೆ, ಅದನ್ನು ಚಿಮುಕಿಸಿದ ಪರಿಶುದ್ಧ ಸ್ಥಳದಲ್ಲಿಯೇ ತೊಳೆಯಬೇಕು.

[28] ಆದರೆ ಅದನ್ನು ಬೇಯಿಸಿದ ಮಣ್ಣಿನ ಪಾತ್ರೆಯನ್ನು ಒಡೆಯಬೇಕು. ಅದನ್ನು ಒಂದು ಕಂಚಿನ ಪಾತ್ರೆಯಲ್ಲಿ ಬೇಯಿಸಿದ್ದಾದರೆ, ಅದನ್ನು ಬೆಳಗಿ, ನೀರಿನಿಂದ ತೊಳೆಯಬೇಕು.

[29] ಯಾಜಕರ ಕುಟುಂಬದಲ್ಲಿ ಇರುವ ಗಂಡಸರೆಲ್ಲಾ ಅದನ್ನು ತಿನ್ನಬೇಕು. ಅದು ಮಹಾಪರಿಶುದ್ಧವಾದದ್ದು.

[30] ಯಾವ ಪಾಪ ಪರಿಹಾರದ ಬಲಿಯ ರಕ್ತವನ್ನು ದೇವದರ್ಶನದ ಗುಡಾರದೊಳಗೆ ಸಮಾಧಾನಕ್ಕಾಗಿ ತರಲಾಗಿದೆಯೋ, ಆ ಬಲಿಯನ್ನು ಪರಿಶುದ್ಧ ಸ್ಥಳದಲ್ಲಿ ತಿನ್ನಬಾರದು, ಅದನ್ನು ಬೆಂಕಿಯಿಂದ ಸುಡಬೇಕು.

ಯಾಜಕಕಾಂಡ — Chapters