[1] ಆರೋನನ ಇಬ್ಬರು ಗಂಡು ಮಕ್ಕಳು ಯೆಹೋವ ದೇವರ ಸನ್ನಿಧಿಗೆ ಬಂದು ಸತ್ತಾಗ ಮೋಶೆಯಂದಿಗೆ ಯೆಹೋವ ದೇವರು ಮಾತನಾಡಿದರು.
[2] ಆಗ ಯೆಹೋವ ದೇವರು ಮೋಶೆಗೆ ಹೇಳಿದ್ದೇನೆಂದರೆ, “ನಿನ್ನ ಅಣ್ಣನಾದ ಆರೋನನು ಮಂಜೂಷದ ಮೇಲಿರುವ ಕರುಣಾಸನದ ಮುಂದಿರುವ ತೆರೆಯ ಒಳಗೆ ಮಹಾಪರಿಶುದ್ಧ ಸ್ಥಳಕ್ಕೆ ಎಲ್ಲಾ ಸಮಯಗಳಲ್ಲಿ ಬಾರದಿರಲಿ, ಇಲ್ಲವಾದರೆ ಅವನು ಸಾಯುತ್ತಾನೆ, ಏಕೆಂದರೆ ಕರುಣಾಸನದ ಮೇಲೆ ಮೇಘದೊಳಗೆ ನಾನು ಪ್ರತ್ಯಕ್ಷನಾಗುವೆನು.
[3] “ಈ ಸೂಚನೆಗಳನ್ನು ಸಂಪೂರ್ಣವಾಗಿ ಅನುಸರಿಸಿದ ನಂತರವೇ ಆರೋನನು ಮಹಾಪರಿಶುದ್ಧ ಸ್ಥಳಕ್ಕೆ ಪ್ರವೇಶಿಸಬೇಕು: ಪಾಪ ಪರಿಹಾರದ ಬಲಿಗಾಗಿ ಒಂದು ಹೋರಿಯನ್ನು ಮತ್ತು ದಹನಬಲಿಗಾಗಿ ಒಂದು ಟಗರನ್ನು ತೆಗೆದುಕೊಂಡು ಬರಬೇಕು.
[4] ಅವನು ಪರಿಶುದ್ಧವಾದ ನಾರುಬಟ್ಟೆಯ ಮೇಲಂಗಿಯನ್ನು ತೊಟ್ಟುಕೊಂಡು, ತನ್ನ ಶರೀರದ ಮೇಲೆ ನಾರುಬಟ್ಟೆಯ ಒಳಉಡುಪನ್ನು ಹಾಕಿಕೊಳ್ಳಬೇಕು ಮತ್ತು ನಾರಿನ ನಡುಕಟ್ಟನ್ನು ಕಟ್ಟಿಕೊಂಡು, ನಾರಿನ ಮುಂಡಾಸವನ್ನು ಧರಿಸಬೇಕು. ಇವು ಪವಿತ್ರವಾದ ಉಡುಪುಗಳು. ಆದಕಾರಣ ಅವನು ನೀರಿನಿಂದ ಸ್ನಾನಮಾಡಿ ಅವುಗಳನ್ನು ಧರಿಸಿಕೊಳ್ಳಬೇಕು.
[5] ಅವನು ಇಸ್ರಾಯೇಲರ ಸಭೆಯ ಕಡೆಯಿಂದ ಪಾಪ ಪರಿಹಾರದ ಬಲಿಗಾಗಿ ಎರಡು ಹೋತಗಳನ್ನು, ದಹನಬಲಿಗಾಗಿ ಒಂದು ಟಗರನ್ನೂ ತೆಗೆದುಕೊಳ್ಳಬೇಕು.
[6] “ಇದಲ್ಲದೆ ಆರೋನನು ತನಗೋಸ್ಕರ ಪಾಪ ಪರಿಹಾರದ ಬಲಿಗಾಗಿ ತನ್ನ ಹೋರಿಯನ್ನು ಸಮರ್ಪಿಸಿ, ತನ್ನ ಮನೆಯವರಿಗೋಸ್ಕರವೂ ಪ್ರಾಯಶ್ಚಿತ್ತ ಮಾಡಬೇಕು.
[7] ಅವನು ಎರಡು ಹೋತಗಳನ್ನು ತೆಗೆದುಕೊಂಡು ದೇವದರ್ಶನದ ಗುಡಾರದ ಬಾಗಿಲ ಬಳಿಗೆ ತಂದು, ಅವುಗಳನ್ನು ಯೆಹೋವ ದೇವರ ಎದುರಿನಲ್ಲಿ ನಿಲ್ಲಿಸಬೇಕು.
[8] ಆರೋನನು ಆ ಎರಡು ಹೋತಗಳಿಗಾಗಿ ಚೀಟುಹಾಕಬೇಕು. ಒಂದು ಚೀಟು ಯೆಹೋವ ದೇವರಿಗೋಸ್ಕರ, ಮತ್ತೊಂದು ಚೀಟು ಬಲಿಪಶುವಿಗೋಸ್ಕರ.
[9] ಆರೋನನು ಯೆಹೋವ ದೇವರ ಚೀಟು ಬಿದ್ದ ಹೋತವನ್ನು ತಂದು, ಅದನ್ನು ಪಾಪ ಪರಿಹಾರದ ಬಲಿಗಾಗಿ ಸಮರ್ಪಿಸಬೇಕು.
[10] ಆದರೆ ಬಲಿಪಶುವಿಗಾಗಿ ಚೀಟು ಬಿದ್ದ ಆ ಹೋತವನ್ನು ತನ್ನೊಂದಿಗೆ ಪ್ರಾಯಶ್ಚಿತ್ತ ಮಾಡುವುದಕ್ಕಾಗಿ ಯೆಹೋವ ದೇವರ ಸನ್ನಿಧಿಯಲ್ಲಿ ಸಜೀವವಾಗಿ ನಿಲ್ಲಿಸಿ, ಅದನ್ನು ಬಲಿಪಶುವಾಗಿ ಕಾಡಿನಲ್ಲಿ ಹೋಗುವಂತೆ ಬಿಟ್ಟುಬಿಡಬೇಕು.
[11] “ಇದಲ್ಲದೆ ಆರೋನನು ಪಾಪ ಪರಿಹಾರದ ಬಲಿಯಾಗಿರುವ ಹೋರಿಯನ್ನು ತಂದು, ತನಗೋಸ್ಕರ ಮತ್ತು ತನ್ನ ಮನೆತನದವರಿಗೋಸ್ಕರ ಪ್ರಾಯಶ್ಚಿತ್ತ ಮಾಡಬೇಕು. ತನಗೋಸ್ಕರ ದೋಷಪರಿಹಾರಕ ಬಲಿಯಾಗಿ ಆ ಹೋರಿಯನ್ನು ವಧಿಸಬೇಕು.
[12] ಅವನು ಯೆಹೋವ ದೇವರ ಸನ್ನಿಧಿಯಲ್ಲಿರುವ ಬಲಿಪೀಠದಿಂದ ಬೆಂಕಿಯ ಕೆಂಡಗಳನ್ನು ಧೂಪ ಸುಡುವ ಪಾತ್ರೆಯಲ್ಲಿ ತುಂಬಿಸಿ, ತನ್ನ ಎರಡು ಕೈತುಂಬ ಪರಿಮಳ ಧೂಪದ್ರವ್ಯದ ಚೂರ್ಣವನ್ನು ತೆಗೆದುಕೊಂಡು, ತೆರೆಯನ್ನು ದಾಟಿ ತರಬೇಕು.
[13] ಅವನು ಸಾಯದ ಹಾಗೆ ಆ ಧೂಪದ ಹೊಗೆಯು ಸಾಕ್ಷಿಯ ಮೇಲಿರುವ ಕರುಣಾಸನವು ಮುಚ್ಚಿಕೊಳ್ಳುವಂತೆ ಆ ಧೂಪವನ್ನು ಯೆಹೋವ ದೇವರ ಎದುರಿನಲ್ಲಿ ಬೆಂಕಿಯ ಮೇಲೆ ಹಾಕಬೇಕು.
[14] ಆ ಹೋರಿಯ ರಕ್ತದಿಂದ ಸ್ವಲ್ಪ ತೆಗೆದುಕೊಂಡು, ಕರುಣಾಸನದ ಮೇಲೆ ಪೂರ್ವಕ್ಕೆ ತನ್ನ ಬೆರಳಿನಿಂದ ಚಿಮುಕಿಸಬೇಕು, ಕರುಣಾಸನದ ಮುಂದೆ ಆ ರಕ್ತವನ್ನು ತನ್ನ ಬೆರಳಿನಿಂದ ಏಳು ಸಾರಿ ಚಿಮುಕಿಸಬೇಕು.
[15] “ತರುವಾಯ ಅವನು ಜನರಿಗೋಸ್ಕರ ಪಾಪ ಪರಿಹಾರದ ಬಲಿಯಾಗಿರುವ ಹೋತವನ್ನು ವಧಿಸಿ, ಅದರ ರಕ್ತವನ್ನು ತೆರೆಯ ಒಳಗಡೆ ತಂದು, ಹೋರಿಯ ರಕ್ತದಿಂದ ಮಾಡಿದಂತೆಯೇ ಕರುಣಾಸನದ ಮೇಲೆಯೂ, ಕರುಣಾಸನದ ಮುಂದೆಯೂ ಚಿಮುಕಿಸಬೇಕು.
[16] ಇಸ್ರಾಯೇಲರ ಅಶುದ್ಧತ್ವದ ನಿಮಿತ್ತವಾಗಿಯೂ, ಎಲ್ಲಾ ಅಪರಾಧಗಳಿಗಾಗಿಯೂ ಅವನು ಮಹಾಪರಿಶುದ್ಧ ಸ್ಥಳಕ್ಕಾಗಿ ಪ್ರಾಯಶ್ಚಿತ್ತ ಮಾಡಬೇಕು. ಅವರು ಅಶುದ್ಧತ್ವದ ಮಧ್ಯದಲ್ಲಿ ಉಳಿದವರಿಗೋಸ್ಕರ ದೇವದರ್ಶನದ ಗುಡಾರಕ್ಕೂ ಅದರಂತೆಯೇ ಮಾಡಬೇಕು.
[17] ಅವನು ಪ್ರಾಯಶ್ಚಿತ್ತ ಮಾಡುವುದಕ್ಕಾಗಿ ಮಹಾಪರಿಶುದ್ಧ ಸ್ಥಳಕ್ಕೆ ಹೋಗಿರುವಾಗ ತನಗೋಸ್ಕರವೂ, ತನ್ನ ಮನೆಯವರಿಗೆಲ್ಲರಿಗೋಸ್ಕರವೂ, ಇಸ್ರಾಯೇಲರ ಸಭೆಯವರೆಲ್ಲರಿಗೋಸ್ಕರವೂ ಪ್ರಾಯಶ್ಚಿತ್ತ ಮಾಡಿ ಹೊರಗೆ ಬರುವ ತನಕ ದೇವದರ್ಶನದ ಗುಡಾರದಲ್ಲಿ ಒಬ್ಬ ಮನುಷ್ಯನೂ ಇರಬಾರದು.
[18] “ಅವನು ಯೆಹೋವ ದೇವರ ಎದುರಿನಲ್ಲಿರುವ ಬಲಿಪೀಠದ ಬಳಿಗೆ ಬಂದು, ಅದಕ್ಕೋಸ್ಕರ ಪ್ರಾಯಶ್ಚಿತ್ತವನ್ನು ಮಾಡಬೇಕು. ಹೋರಿಯ ರಕ್ತವನ್ನೂ, ಹೋತದ ರಕ್ತವನ್ನೂ ತೆಗೆದುಕೊಂಡು ಬಲಿಪೀಠದ ಸುತ್ತಲೂ ಇರುವ ಕೊಂಬುಗಳಿಗೆ ಹಚ್ಚಬೇಕು.
[19] ಅವನು ಏಳು ಸಾರಿ ಅದರ ಮೇಲೆ ರಕ್ತವನ್ನು ಚಿಮುಕಿಸಿ, ಅದನ್ನು ಶುದ್ಧಮಾಡಬೇಕು ಮತ್ತು ಇಸ್ರಾಯೇಲರ ಅಶುದ್ಧತೆಯನ್ನು ಹೋಗಲಾಡಿಸಿ, ಅದನ್ನು ಪರಿಶುದ್ಧ ಮಾಡಬೇಕು.
[20] “ಹೀಗೆ ಮಹಾಪರಿಶುದ್ಧ ಸ್ಥಳಕ್ಕೂ, ಸಭೆಯ ಗುಡಾರಕ್ಕೂ, ಬಲಿಪೀಠಕ್ಕೂ ಸಂಧಾನದ ಕೊನೆಯಲ್ಲಿ ಅವನು ಒಂದು ಜೀವವುಳ್ಳ ಹೋತವನ್ನು ತರಬೇಕು.
[21] ಆರೋನನು ಆ ಜೀವವುಳ್ಳ ಹೋತದ ತಲೆಯ ಮೇಲೆ ತನ್ನ ಎರಡೂ ಕೈಗಳನ್ನು ಇಟ್ಟು, ಅದರ ಮೇಲೆ ಇಸ್ರಾಯೇಲರ ಎಲ್ಲಾ ಅಕ್ರಮಗಳನ್ನೂ, ಅವರ ಎಲ್ಲಾ ಪಾಪಗಳಲ್ಲಿರುವ ದ್ರೋಹಗಳನ್ನೂ ಅರಿಕೆಮಾಡಿ ಅವುಗಳನ್ನು ಹೋತದ ತಲೆಯ ಮೇಲೆ ಇರಿಸಿ, ನೇಮಕವಾದ ಒಬ್ಬ ಮನುಷ್ಯನ ಕೈಯಿಂದ ಅದನ್ನು ಅಡವಿಯೊಳಗೆ ಕಳುಹಿಸಿಬಿಡಬೇಕು.
[22] ಆ ಹೋತ ಅವರ ಎಲ್ಲಾ ಪಾಪಗಳನ್ನೂ ತನ್ನ ಮೇಲೆ ಹೊತ್ತುಕೊಂಡು ನಿರ್ಜನವಾದ ಸ್ಥಳಕ್ಕೆ ತೆಗೆದುಕೊಂಡು ಹೋಗುವಂತೆ ಆ ಮನುಷ್ಯನು ಹೋತವನ್ನು ಅಡವಿಗೆ ತೆಗೆದುಕೊಂಡುಹೋಗಿ ಅಲ್ಲೇ ಬಿಟ್ಟುಬಿಡಬೇಕು.
[23] “ಆರೋನನು ದೇವದರ್ಶನದ ಗುಡಾರದೊಳಗೆ ಬಂದು, ತಾನು ಮಹಾಪರಿಶುದ್ಧ ಸ್ಥಳದೊಳಕ್ಕೆ ಹೋಗುವಾಗ ತೊಟ್ಟುಕೊಂಡಿದ್ದ ನಾರಿನ ಬಟ್ಟೆಗಳನ್ನು ತೆಗೆದುಹಾಕಿ ಅವುಗಳನ್ನು ಅಲ್ಲಿಯೇ ಬಿಡಬೇಕು.
[24] ಅವನು ಪರಿಶುದ್ಧ ಸ್ಥಳದಲ್ಲಿ ನೀರಿನಲ್ಲಿ ಸ್ನಾನಮಾಡಿ, ತನ್ನ ಬಳಕೆಯ ಬಟ್ಟೆಗಳನ್ನು ಧರಿಸಿಕೊಂಡು, ಹೊರಗೆ ಬಂದು ತನ್ನ ದಹನಬಲಿಯನ್ನೂ, ಜನರ ದಹನಬಲಿಯನ್ನೂ ಸಮರ್ಪಿಸಿ ತನಗೋಸ್ಕರವೂ, ಜನರಿಗೋಸ್ಕರವೂ ಪ್ರಾಯಶ್ಚಿತ್ತ ಮಾಡಬೇಕು.
[25] ಪಾಪ ಪರಿಹಾರದ ಬಲಿಯ ಕೊಬ್ಬನ್ನು ಬಲಿಪೀಠದ ಮೇಲೆ ಸುಡಬೇಕು.
[26] “ಬಲಿಪಶುವಿಗಾಗಿ ಹೋತವನ್ನು ಹೋಗಲು ಬಿಟ್ಟವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಿದ ಮೇಲೆ ಅವನು ಪಾಳೆಯದೊಳಕ್ಕೆ ಬರಬೇಕು.
[27] ಇದಲ್ಲದೆ ಮಹಾಪರಿಶುದ್ಧ ಸ್ಥಳದಲ್ಲಿ ಪ್ರಾಯಶ್ಚಿತ್ತ ಮಾಡುವುದಕ್ಕಾಗಿ ಯಾವುದರ ರಕ್ತವು ತರಲಾಗಿತ್ತೋ, ಆ ಪಾಪ ಪರಿಹಾರದ ಬಲಿಯ ಹೋರಿಯನ್ನು ಮತ್ತು ದೋಷಪರಿಹಾರ ಬಲಿಯ ಹೋತವನ್ನು ಪಾಳೆಯದ ಆಚೆಗೆ ತೆಗೆದುಕೊಂಡುಹೋಗಿ ಅವುಗಳ ಚರ್ಮವನ್ನೂ, ಮಾಂಸವನ್ನೂ, ಸಗಣಿಯನ್ನೂ ಸುಡಬೇಕು.
[28] ಅವುಗಳನ್ನು ಸುಡುವವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಿದ ನಂತರ ಪಾಳೆಯದೊಳಕ್ಕೆ ಬರಬೇಕು.
[29] “ಇದು ನಿಮಗೆ ಶಾಶ್ವತವಾದ ನಿಯಮ: ಸ್ವದೇಶೀಯರಾದ ನೀವೂ, ನಿಮ್ಮೊಡನೆ ವಾಸಿಸುತ್ತಿರುವ ಪರಕೀಯರೂ, ಏಳನೆಯ ತಿಂಗಳಿನ ಹತ್ತನೆಯ ದಿನದಲ್ಲಿ ಎಲ್ಲಾ ಕೆಲಸಗಳನ್ನು ಬಿಟ್ಟು, ನಿಮ್ಮ ಆತ್ಮಗಳನ್ನು ಕುಂದಿಸಿಕೊಳ್ಳಬೇಕು.
[30] ನೀವು ಯೆಹೋವ ದೇವರ ಸನ್ನಿಧಿಯಲ್ಲಿ ನಿಮ್ಮ ಎಲ್ಲಾ ಪಾಪಗಳಿಂದ ಶುದ್ಧರಾಗಿರುವಂತೆ ನಿಮ್ಮನ್ನು ಶುದ್ಧೀಕರಿಸುವ ಹಾಗೆ, ಆ ದಿನದಲ್ಲಿ ಯಾಜಕನು ನಿಮಗೋಸ್ಕರ ಪ್ರಾಯಶ್ಚಿತ್ತವನ್ನು ಮಾಡುವನು.
[31] ಇದೇ ನಿಮಗೆ ಸಬ್ಬತ್ ದಿನವಾಗಿರುವುದು. ನಿಮಗೆ ನಿತ್ಯವಾದ ನಿಯಮವಿರುವಂತೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ.
[32] ಯಾವನು ತನ್ನ ತಂದೆಯ ಬದಲಾಗಿ ಮಹಾಯಾಜಕ ಉದ್ಯೋಗಕ್ಕೋಸ್ಕರ ಅಭಿಷಿಕ್ತನಾಗಿ ಪ್ರತಿಷ್ಟಿಸಲಾಗಿದ್ದಾನೋ, ಆ ಮಹಾಯಾಜಕನು ಪ್ರಾಯಶ್ಚಿತ್ತವನ್ನು ಮಾಡಬೇಕು. ಅವನು ಪರಿಶುದ್ಧ ಉಡುಪುಗಳಾದ ನಾರು ಬಟ್ಟೆಗಳನ್ನು ಧರಿಸಿಕೊಳ್ಳಬೇಕು.
[33] ಹೀಗೆ ಅವನು ಮಹಾಪರಿಶುದ್ಧ ಸ್ಥಳಕ್ಕಾಗಿ ಪ್ರಾಯಶ್ಚಿತ್ತ ಮಾಡಬೇಕು. ಇದಲ್ಲದೆ ಸಭೆಯ ಗುಡಾರಕ್ಕಾಗಿಯೂ, ಬಲಿಪೀಠಕ್ಕಾಗಿಯೂ ಪ್ರಾಯಶ್ಚಿತ್ತ ಮಾಡಬೇಕು. ಯಾಜಕರಿಗಾಗಿಯೂ, ಸಭೆಯ ಎಲ್ಲಾ ಜನರಿಗೋಸ್ಕರವೂ ಪ್ರಾಯಶ್ಚಿತ್ತ ಮಾಡಬೇಕು.
[34] “ಹೀಗೆ ಇಸ್ರಾಯೇಲರ ಎಲ್ಲಾ ಪಾಪಗಳಿಗಾಗಿ ವರ್ಷಕ್ಕೊಂದಾವರ್ತಿ ಪ್ರಾಯಶ್ಚಿತ್ತ ಮಾಡುವುದು, ನಿಮಗೆ ನಿರಂತರವಾದ ನಿಯಮವಾಗಿರುವುದು,” ಎಂದು ಹೇಳಿದರು. ಯೆಹೋವ ದೇವರು ಆಜ್ಞಾಪಿಸಿದಂತೆಯೇ ಮೋಶೆ ಮಾಡಿದನು.