[1] ತರುವಾಯ ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,
[2] “ಆರೋನನೊಂದಿಗೂ, ಅವನ ಪುತ್ರರೊಂದಿಗೂ ಮಾತನಾಡು, ಅವರು ನನ್ನ ಪರಿಶುದ್ಧ ಹೆಸರನ್ನು ಅಪವಿತ್ರಮಾಡದಂತೆ ಇಸ್ರಾಯೇಲರು ನನಗೆ ಸಲ್ಲಿಸುವ ಪರಿಶುದ್ಧವಾದವುಗಳನ್ನು ಗೌರವದಿಂದ ಅವರು ಪ್ರತ್ಯೇಕವಾಗಿರಿಸಬೇಕು. ನಾನೇ ಯೆಹೋವ ದೇವರು.
[3] “ಅವರಿಗೆ ನೀನು ಹೀಗೆ ಹೇಳು: ‘ನಿಮ್ಮ ಎಲ್ಲಾ ಸಂತತಿಯ ವಂಶಾವಳಿಗಳಲ್ಲಿ ಅಶುದ್ಧತ್ವವಿರುವ ಇಸ್ರಾಯೇಲರು ಯೆಹೋವ ದೇವರಿಗೆ ಸಲ್ಲಿಸುವ ಪರಿಶುದ್ಧವಾದವುಗಳ ಬಳಿಗೆ ಯಾವನು ಬರುವನೋ, ಅವನನ್ನು ನನ್ನ ಸನ್ನಿಧಿಯಿಂದ ತೆಗೆದುಹಾಕಬೇಕು. ನಾನೇ ಯೆಹೋವ ದೇವರು.
[4] “ ‘ಆರೋನನ ಸಂತತಿಯವರಲ್ಲಿ ಯಾವನಾದರೂ ಚರ್ಮರೋಗ ಇಲ್ಲವೆ ಸ್ರಾವವುಳ್ಳವನಿದ್ದರೆ, ಅವನು ಶುದ್ಧನಾಗುವವರೆಗೆ ಪರಿಶುದ್ಧವಾದವುಗಳನ್ನು ತಿನ್ನಬಾರದು. ಹೆಣದಿಂದ ಅಶುದ್ಧವಾದದ್ದನ್ನು ಮುಟ್ಟಿದವನು ಇಲ್ಲವೆ ತನ್ನೊಳಗಿಂದ ವೀರ್ಯ ಹೊರಟವನು
[5] ಇಲ್ಲವೆ ತನ್ನನ್ನು ಅಶುದ್ಧನಾಗುವಂತೆ ಹರಿದಾಡುವ ಯಾವುದನ್ನಾಗಲಿ ಇಲ್ಲವೆ ಅಶುದ್ಧ ಮನುಷ್ಯನನ್ನಾಗಲಿ ಮುಟ್ಟಿದವನು,
[6] ಸಂಜೆಯವರೆಗೆ ಅಶುದ್ಧನಾಗಿರಬೇಕು. ಅವನು ನೀರಿನಲ್ಲಿ ಸ್ನಾನಮಾಡಿದ ಮೇಲೆ ಪರಿಶುದ್ಧವಾದವುಗಳನ್ನು ತಿನ್ನಬಹುದು.
[7] ಸೂರ್ಯನು ಮುಳುಗಿದಾಗ ಅವನು ಶುದ್ಧನಾಗಿರುವನು. ತರುವಾಯ ಅವನು ಪರಿಶುದ್ಧವಾದವುಗಳನ್ನು ತಿನ್ನಲಿ. ಏಕೆಂದರೆ ಅದು ಅವನಿಗೆ ಆಹಾರ.
[8] ತನ್ನನ್ನು ಅಶುದ್ಧಮಾಡಿಕೊಳ್ಳದಂತೆ ತನ್ನಷ್ಟಕ್ಕೆ ತಾನೇ ಸತ್ತಿರುವುದನ್ನಾಗಲಿ ಇಲ್ಲವೆ ಕಾಡುಮೃಗಗಳಿಂದ ಕೊಂದದ್ದನ್ನಾಗಲಿ ತಿನ್ನಬಾರದು. ನಾನೇ ಯೆಹೋವ ದೇವರು.
[9] “ ‘ಯಾಜಕರು ಅದನ್ನು ಅಪವಿತ್ರ ಪಡಿಸಿದರೆ, ಅದರ ನಿಮಿತ್ತ ಅಪರಾಧಿಯಾಗಿ ಸಾಯದಂತೆ ನನ್ನ ವಿಧಿಗಳನ್ನು ಕೈಗೊಳ್ಳಬೇಕು. ಅವರನ್ನು ಶುದ್ಧೀಕರಿಸುವ ಯೆಹೋವ ದೇವರು ನಾನೇ.
[10] “ ‘ಪರಿಶುದ್ಧವಾದದ್ದನ್ನು ಪರಕೀಯನು ತಿನ್ನಬಾರದು. ಯಾಜಕನ ಅತಿಥಿಯಾಗಲಿ ಇಲ್ಲವೆ ಕೂಲಿ ಆಳಾಗಲಿ ಪರಿಶುದ್ಧವಾದವುಗಳಲ್ಲಿ ತಿನ್ನಬಾರದು.
[11] ಆದರೆ ಯಾಜಕನು ಯಾವನನ್ನಾದರೂ ತನ್ನ ಹಣದಿಂದ ಕೊಂಡುಕೊಂಡರೆ, ಅವನು ಅದರಲ್ಲಿ ತಿನ್ನಬಹುದು. ಅವನ ಮನೆಯಲ್ಲಿ ಹುಟ್ಟಿದವನು ಅದನ್ನು ತಿನ್ನಬಹುದು.
[12] ಯಾಜಕನ ಮಗಳು ಒಬ್ಬ ಯಾಜಕನಲ್ಲದವನನ್ನು ಮದುವೆಯಾದರೆ, ಅವಳು ಸಮರ್ಪಣೆಯಾದ ಪರಿಶುದ್ಧವಾದವುಗಳಲ್ಲಿ ತಿನ್ನಬಾರದು.
[13] ಯಾಜಕನ ಮಗಳು ವಿಧವೆಯಾಗಿದ್ದರೆ ಇಲ್ಲವೆ ಗಂಡಬಿಟ್ಟವಳಾಗಿದ್ದರೆ ಮತ್ತು ಮಕ್ಕಳಿಲ್ಲದವಳಾಗಿ ತನ್ನ ಯೌವನದಲ್ಲಿದ್ದಂತೆಯೇ ತನ್ನ ತಂದೆಯ ಮನೆಗೆ ಹಿಂದಿರುಗಿದವಳಾಗಿದ್ದರೆ, ಅವಳು ತನ್ನ ತಂದೆಯ ಆಹಾರದಲ್ಲಿ ತಿನ್ನಲಿ. ಆದರೆ ಯಾಜಕರಲ್ಲದ ಕುಟುಂಬದವರು ಅದರಲ್ಲಿ ತಿನ್ನಬಾರದು.
[14] “ ‘ಇದಲ್ಲದೆ ಯಾವನಾದರೂ ತಿಳಿಯದೆ ಪರಿಶುದ್ಧವಾದದ್ದನ್ನು ತಿಂದರೆ, ಅವನು ಅದರ ಐದನೆಯ ಪಾಲನ್ನು ಕೂಡಿಸಿ, ಪರಿಶುದ್ಧವಾದದ್ದನ್ನು ಯಾಜಕನಿಗೆ ಕೊಡಬೇಕು.
[15] ಇಸ್ರಾಯೇಲರು ಯೆಹೋವ ದೇವರಿಗೆ ಅರ್ಪಿಸುವ ಪರಿಶುದ್ಧವಾದವುಗಳನ್ನು ಅವರು ಅಪವಿತ್ರ ಮಾಡಬಾರದು.
[16] ಇಲ್ಲವೆ ಅವರು ಪರಿಶುದ್ಧವಾದವುಗಳನ್ನು ತಿನ್ನುವುದರಿಂದ ತಮ್ಮ ಮೇಲೆ ಅತಿಕ್ರಮದ ಅಪರಾಧವನ್ನು ಹೊತ್ತುಕೊಳ್ಳದಿರಲಿ. ಏಕೆಂದರೆ ಅವರನ್ನು ಶುದ್ಧೀಕರಿಸುವ ಯೆಹೋವ ದೇವರು ನಾನೇ.’ ”
[17] ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,
[18] “ಆರೋನನೊಂದಿಗೂ, ಅವನ ಪುತ್ರರೊಂದಿಗೂ ಮಾತನಾಡಿ ಅವರಿಗೆ ಹೇಳಬೇಕಾದದ್ದು ಇದೇ, ‘ಇಸ್ರಾಯೇಲ್ ಮನೆತನದವರಲ್ಲಿಯಾಗಲಿ, ಇಸ್ರಾಯೇಲರಾದ ಪರಕೀಯರಲ್ಲಿಯಾಗಲಿ ಯಾರಾದರೂ ತಮ್ಮ ಎಲ್ಲಾ ಪ್ರಮಾಣಗಳ ನಿಮಿತ್ತವಾಗಿ ಕಾಣಿಕೆಯನ್ನು ದಹನಬಲಿಯಾಗಿ ಯೆಹೋವ ದೇವರಿಗೆ ಅರ್ಪಿಸುವ ಉಚಿತವಾದ ಅರ್ಪಣೆಗಳಲ್ಲಿ
[19] ನೀವು ನಿಮ್ಮ ಸ್ವಯಿಚ್ಛೆಯಿಂದ ಕಳಂಕರಹಿತವಾದ ಗಂಡು ಪಶು, ಕುರಿ ಅಥವಾ ಮೇಕೆಯನ್ನೇ ಅರ್ಪಿಸಬೇಕು.
[20] ಆದರೆ ದೋಷವಿರುವ ಯಾವುದನ್ನೂ ಸಮರ್ಪಿಸಬಾರದು. ಏಕೆಂದರೆ ಅದು ನಿಮಗೋಸ್ಕರ ಅಂಗೀಕಾರವಾಗುವುದಿಲ್ಲ.
[21] ತಮ್ಮ ಪ್ರಮಾಣವನ್ನು ಪೂರೈಸುವ ಹಾಗೆ ಯಾರಾದರೂ ಸಮಾಧಾನದ ಬಲಿಯನ್ನಾಗಲಿ, ಪಶುಗಳನ್ನಾಗಲಿ, ಕುರಿಗಳನ್ನಾಗಲಿ ಉಚಿತವಾದ ಕಾಣಿಕೆಯಾಗಿ ಯೆಹೋವ ದೇವರಿಗೆ ಅರ್ಪಿಸುವುದಾದರೆ, ಅದು ಅಂಗೀಕಾರಕ್ಕೆ ಪರಿಪೂರ್ಣವುಳ್ಳದ್ದಾಗಿರಬೇಕು. ಅದರೊಳಗೆ ಯಾವ ದೋಷವೂ ಕಳಂಕವೂ ಇರಬಾರದು.
[22] ಕುರುಡಾದದ್ದು, ಮುರಿದದ್ದು, ಅಂಗಹೀನವಾದದ್ದು, ಬೊಕ್ಕೆಯುಳ್ಳದ್ದು, ಕಜ್ಜಿ ತುರಿಯುಳ್ಳದ್ದು, ಇವುಗಳನ್ನು ನೀವು ಯೆಹೋವ ದೇವರಿಗೆ ಸಮರ್ಪಿಸಲೂಬಾರದು ಮತ್ತು ಅವುಗಳನ್ನು ಬಲಿಪೀಠದ ಮೇಲೆ ದಹನಬಲಿಯಾಗಿ ಯೆಹೋವ ದೇವರಿಗೆ ಸಮರ್ಪಿಸಲೂಬಾರದು.
[23] ಹೋರಿಯಾಗಲಿ ಇಲ್ಲವೆ ಕುರಿಮರಿಯಾಗಲಿ ಅದಕ್ಕೆ ಹೆಚ್ಚಾದ ಅಂಗವಿರುವದಾಗಿದ್ದರೆ ಇಲ್ಲವೆ ಅದರ ಅಂಗಗಳಲ್ಲಿ ಕೊರತೆಯಿರುವುದಾದರೆ, ಅದನ್ನು ಉಚಿತ ಕಾಣಿಕೆಯಾಗಿ ಅರ್ಪಿಸಬಹುದು. ಆದರೆ ಹರಕೆಯಾಗಿ ಅದು ಅಂಗೀಕಾರವಾಗುವುದಿಲ್ಲ.
[24] ಜಜ್ಜಿ ಗಾಯವಾದ, ನುಜ್ಜುಗುಜ್ಜಾದ, ಮುರಿದ ಇಲ್ಲವೆ ಕೊಯ್ದಿರುವ ಯಾವುದನ್ನೂ ಯೆಹೋವ ದೇವರಿಗೆ ಸಮರ್ಪಿಸಬಾರದು. ನಿಮ್ಮ ದೇಶದೊಳಗಿರುವ ಅಂಥ ಯಾವ ಬಲಿಯನ್ನಾದರೂ ನೀವು ಸಮರ್ಪಿಸಬಾರದು.
[25] ಇದಲ್ಲದೆ ಪರಕೀಯನಿಂದ ತೆಗೆದುಕೊಂಡ ಅಂತಹ ಯಾವ ಪಶುವನ್ನೂ ನಿಮ್ಮ ದೇವರಿಗೆ ಆಹಾರವಾಗಿ ಅರ್ಪಿಸಬಾರದು. ಏಕೆಂದರೆ ಅವರ ಕುಂದುಳ್ಳದ್ದು ಮತ್ತು ದೋಷಗಳೂ ಅವುಗಳಲ್ಲಿ ಇರುತ್ತವೆ. ಅವು ನಿಮಗೋಸ್ಕರವಾಗಿ ಅಂಗೀಕಾರವಾಗುವುದಿಲ್ಲ.’ ”
[26] ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,
[27] “ಹೋರಿಯನ್ನಾಗಲಿ ಇಲ್ಲವೆ ಕುರಿಯನ್ನಾಗಲಿ ಇಲ್ಲವೆ ಆಡನ್ನಾಗಲಿ ತಂದಾಗ, ಏಳು ದಿವಸಗಳವರೆಗೆ ಅದು ತನ್ನ ತಾಯಿಯ ಬಳಿಯಲ್ಲಿ ಇರಲಿ. ಎಂಟನೆಯ ದಿನದಿಂದ ಅದು ಯೆಹೋವ ದೇವರಿಗೆ ದಹನಬಲಿಯಾಗಿ ಸಮರ್ಪಿಸಿದರೆ ಅಂಗೀಕಾರವಾಗುವುದು.
[28] ಹಸುವನ್ನಾಗಲಿ ಇಲ್ಲವೆ ಕುರಿಯನ್ನಾಗಲಿ ಅದರ ಮರಿಯೊಂದಿಗೆ ಎರಡನ್ನೂ ಒಂದೇ ದಿನದಲ್ಲಿ ವಧಿಸಬಾರದು.
[29] “ನೀವು ಕೃತಜ್ಞತೆಯ ಯಜ್ಞಾರ್ಪಣೆಯನ್ನು, ಯೆಹೋವ ದೇವರಿಗೆ ಮಾಡುವ ಬಲಿದಾನವನ್ನು ಮೆಚ್ಚಿಗೆಯಾದ ರೀತಿಯಲ್ಲಿ ಸಮರ್ಪಿಸಬೇಕು.
[30] ಅದೇ ದಿನದಲ್ಲಿ ಅದನ್ನು ತಿಂದುಬಿಡಬೇಕು. ಅದರಲ್ಲಿ ಯಾವುದನ್ನೂ ಮಾರನೆಯ ದಿನದವರೆಗೆ ಉಳಿಸಬಾರದು. ನಾನೇ ಯೆಹೋವ ದೇವರು.
[31] “ಆದ್ದರಿಂದ ನೀವು ನನ್ನ ಆಜ್ಞೆಗಳನ್ನು ಕೈಗೊಂಡು ಅವುಗಳನ್ನು ಮಾಡಬೇಕು. ನಾನೇ ಯೆಹೋವ ದೇವರು.
[32] ನನ್ನ ಪರಿಶುದ್ಧವಾದ ಹೆಸರನ್ನು ಅಪರಿಶುದ್ಧಗೊಳಿಸಬಾರದು, ಏಕೆಂದರೆ ಇಸ್ರಾಯೇಲರ ಮಧ್ಯದಲ್ಲಿ ನಾನು ಪರಿಶುದ್ಧನೆಂದು ಪರಿಗಣಿಸಬೇಕು. ನಿಮ್ಮನ್ನು ನನ್ನ ಸೇವೆಗೆ ಪ್ರತಿಷ್ಠಿಸಿಕೊಂಡ ಯೆಹೋವ ದೇವರು ನಾನೇ.
[33] ನಿಮಗೆ ದೇವರಾಗಿರಲು ನಿಮ್ಮನ್ನು ಈಜಿಪ್ಟ್ ದೇಶದೊಳಗಿಂದ ಹೊರಗೆ ತಂದೆನು. ನಾನೇ ಯೆಹೋವ ದೇವರು.”