[1] “ ‘ಯಾರಾದರು ಸಮಾಧಾನ ಸಮರ್ಪಣೆಗಾಗಿ ಬಲಿದಾನ ಮಾಡಬೇಕಾದರೆ, ಅಂಥವನು ಸಮರ್ಪಿಸುವ ಪ್ರಾಣಿ ದನಕರುವಾಗಿದ್ದಲ್ಲಿ, ಅದು ಗಂಡಾಗಿರಲಿ ಅಥವಾ ಹೆಣ್ಣಾಗಿರಲಿ ಯೆಹೋವ ದೇವರ ದೃಷ್ಟಿಯಲ್ಲಿ ಕಳಂಕರಹಿತವಾಗಿರಬೇಕು.
[2] ಅವನು ಅರ್ಪಿಸಬೇಕಾದ ಆ ಪ್ರಾಣಿಯನ್ನು ಯೆಹೋವ ದೇವರ ಸನ್ನಿಧಿಗೆ ತಂದು ಅದರ ತಲೆಯ ಮೇಲೆ ಕೈ ಇಡಬೇಕು. ದೇವದರ್ಶನದ ಗುಡಾರದ ಬಾಗಿಲಲ್ಲಿ ವಧಿಸಬೇಕು. ಆರೋನನ ವಂಶದವರಾದ ಯಾಜಕರು ಅದರ ರಕ್ತವನ್ನು ಬಲಿಪೀಠದ ಸುತ್ತಲೂ ಚಿಮುಕಿಸಬೇಕು.
[3] ಅವನು ಸಮಾಧಾನದ ಕಾಣಿಕೆಯ ಯಜ್ಞಾರ್ಪಣೆಯನ್ನು ಅಂದರೆ ಕರುಳುಗಳನ್ನು ಮುಚ್ಚುವ ಕೊಬ್ಬನ್ನೂ,
[4] ಎರಡು ಮೂತ್ರ ಜನಕಾಂಗಗಳನ್ನೂ, ಪಕ್ಕೆಯ ಬದಿಯಲ್ಲಿಯ ಅವುಗಳ ಮೇಲಿರುವ ಕೊಬ್ಬನ್ನೂ, ಮೂತ್ರ ಜನಕಾಂಗಗಳ ಮೇಲಿರುವ ಪೊರೆಯನ್ನೂ ಮೂತ್ರಜನಕಾಂಗಗಳೊಂದಿಗೆ ಅದನ್ನು ತೆಗೆದುಕೊಂಡು ಯೆಹೋವ ದೇವರಿಗೆ ಬೆಂಕಿಯಿಂದ ಕಾಣಿಕೆಯಾಗಿ ಸಮರ್ಪಿಸಬೇಕು.
[5] ಆರೋನನ ಪುತ್ರರು ಅದನ್ನು ಬಲಿಪೀಠದಲ್ಲಿ ಬೆಂಕಿಯ ಮೇಲಿರುವ ಕಟ್ಟಿಗೆಯ ಮೇಲೆ ದಹನಬಲಿಯಾಗಿ ಸುಡಬೇಕು. ಅದು ಬೆಂಕಿಯಿಂದ ಮಾಡಿದ ಕಾಣಿಕೆಯಾಗಿದ್ದು, ಯೆಹೋವ ದೇವರಿಗೆ ಸುವಾಸನೆಯಾಗಿರುವುದು.
[6] “ ‘ಅವನ ಕಾಣಿಕೆಯು ಸಮಾಧಾನದ ಬಲಿಯಾಗಿ, ಅದು ಯೆಹೋವ ದೇವರಿಗೆ ತನ್ನ ಆಡುಕುರಿಗಳಿಂದಾದ ಕಾಣಿಕೆಯಾಗಿದ್ದರೆ, ಗಂಡಾಗಲಿ, ಹೆಣ್ಣಾಗಲಿ ಕಳಂಕರಹಿತವಾದದ್ದನ್ನು ಅವನು ಸಮರ್ಪಿಸಬೇಕು.
[7] ಅವನು ಕುರಿಮರಿಯನ್ನು ಅರ್ಪಣೆಗೋಸ್ಕರ ಅರ್ಪಿಸುವುದಾದರೆ, ಅದನ್ನು ಅವನು ಯೆಹೋವ ದೇವರ ಎದುರಿನಲ್ಲಿ ಸಮರ್ಪಿಸಬೇಕು.
[8] ಅವನು ತನ್ನ ಅರ್ಪಣೆಯ ತಲೆಯ ಮೇಲೆ ತನ್ನ ಕೈಯನ್ನು ಇಟ್ಟು, ಅದನ್ನು ದೇವದರ್ಶನದ ಗುಡಾರದ ಎದುರಿನಲ್ಲಿ ವಧಿಸಬೇಕು. ಇದಲ್ಲದೆ ಆರೋನನ ಪುತ್ರರು ಬಲಿಪೀಠದ ಮೇಲೆ ಸುತ್ತಲೂ ರಕ್ತವನ್ನು ಚಿಮುಕಿಸಬೇಕು.
[9] ಸಮಾಧಾನದ ಬಲಿಗಾಗಿ ಅದರ ಇಡೀ ಹಿಂಭಾಗವನ್ನೂ, ಅದರ ಕೊಬ್ಬನ್ನೂ, ಅವನು ಬೆನ್ನೆಲುಬಿನಿಂದ ತೆಗೆದು ಕರುಳುಗಳನ್ನು ಮುಚ್ಚುವ ಕೊಬ್ಬನ್ನೂ, ಕರುಳುಗಳ ಮೇಲಿರುವ ಎಲ್ಲಾ ಕೊಬ್ಬನ್ನೂ,
[10] ಎರಡು ಮೂತ್ರ ಜನಕಾಂಗಗಳನ್ನೂ, ಪಕ್ಕೆಯ ಬದಿಗಳಲ್ಲಿರುವವುಗಳ ಮೇಲಿರುವ ಕೊಬ್ಬನ್ನೂ, ಕಾಳಿಜದ ಉತ್ತಮ ಭಾಗ, ಮೂತ್ರಜನಕಾಂಗಗಳೊಂದಿಗೆ ವಪೆಯ ಮೇಲಿರುವ ಪೊರೆಯನ್ನೂ ತೆಗೆದುಕೊಂಡು ಬೆಂಕಿಯಿಂದ ಮಾಡಿದ ಕಾಣಿಕೆಯಾಗಿ ಯೆಹೋವ ದೇವರಿಗೆ ಸಮರ್ಪಿಸಬೇಕು.
[11] ಯಾಜಕನು ಅದನ್ನು ಬಲಿಪೀಠದ ಮೇಲೆ ಸುಡಬೇಕು. ಅದು ಯೆಹೋವ ದೇವರಿಗೆ ಬೆಂಕಿಯಿಂದ ಮಾಡಿದ ಸಮರ್ಪಣೆಯ ಆಹಾರವಾಗಿರುವುದು.
[12] “ ‘ಸಮರ್ಪಣೆಯು ಮೇಕೆಯಾಗಿದ್ದರೆ, ಅದನ್ನು ಯೆಹೋವ ದೇವರ ಎದುರಿನಲ್ಲಿ ಸಮರ್ಪಿಸಬೇಕು.
[13] ಅವನು ಅದರ ತಲೆಯ ಮೇಲೆ ತನ್ನ ಕೈಯನ್ನಿಟ್ಟು ದೇವದರ್ಶನದ ಗುಡಾರದ ಮುಂದೆ ಅದನ್ನು ವಧಿಸಬೇಕು. ಆಗ ಆರೋನನ ಪುತ್ರರು ಅದರ ರಕ್ತವನ್ನು ಬಲಿಪೀಠದ ಸುತ್ತಲೂ ಚಿಮುಕಿಸಬೇಕು.
[14] ಕರುಳುಗಳನ್ನು ಮುಚ್ಚುವ ಕೊಬ್ಬನ್ನೂ, ಕರುಳುಗಳ ಮೇಲಿರುವ ಎಲ್ಲಾ ಕೊಬ್ಬನ್ನೂ,
[15] ಎರಡು ಮೂತ್ರ ಜನಕಾಂಗಗಳನ್ನೂ ಪಕ್ಕೆಯ ಬದಿಗಳಲ್ಲಿರುವವುಗಳ ಮೇಲಿರುವ ಕೊಬ್ಬನ್ನೂ ಕಾಳಿಜದ ಉತ್ತಮ ಭಾಗ, ಮೂತ್ರಜನಕಾಂಗಗಳೊಂದಿಗೆ ವಪೆಯ ಮೇಲಿರುವ ಪೊರೆಯನ್ನೂ ತೆಗೆದುಕೊಂಡು ಬೆಂಕಿಯಿಂದ ಮಾಡಿದ ಕಾಣಿಕೆಯಾಗಿ ಯೆಹೋವ ದೇವರಿಗೆ ಸಮರ್ಪಿಸಬೇಕು.
[16] ಯಾಜಕನು ಅವುಗಳನ್ನು ಬಲಿಪೀಠದ ಮೇಲೆ ಸುಡಬೇಕು. ಅದು ಬೆಂಕಿಯಿಂದ ಮಾಡಿದ ಸುವಾಸನೆಯ ಯಜ್ಞಾರ್ಪಣೆಯ ಆಹಾರವಾಗಿರುವುದು. ಎಲ್ಲಾ ಕೊಬ್ಬು ಯೆಹೋವ ದೇವರದೇ.
[17] “ ‘ನೀವು ಕೊಬ್ಬನ್ನಾಗಲಿ, ರಕ್ತವನ್ನಾಗಲಿ ತಿನ್ನದೆ ಇರುವುದು ನಿಮ್ಮ ಸಂತತಿಯವರಿಗೆಲ್ಲಾ ನಿಮ್ಮ ಎಲ್ಲಾ ನಿವಾಸಗಳಲ್ಲಿ ನಿರಂತರವಾದ ಕಟ್ಟಳೆಯಾಗಿರುವುದು,’ ” ಎಂದು ಹೇಳಿದರು.