Skip to content
Opens in a new window
Listen to this chapter • 4:44

[1] ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,

[2] “ಬೆಳಕಿಗೋಸ್ಕರ ದೀಪಗಳು ಯಾವಾಗಲೂ ಉರಿಯುತ್ತಿರುವಂತೆ ಅವರು ಕುಟ್ಟಿದ ಶುದ್ಧವಾದ ಓಲಿವ್ ಎಣ್ಣೆಯನ್ನು ನನ್ನ ಬಳಿಗೆ ತರುವಂತೆ ನೀನು ಇಸ್ರಾಯೇಲರಿಗೆ ಆಜ್ಞಾಪಿಸಬೇಕು.

[3] ದೇವದರ್ಶನದ ಗುಡಾರದಲ್ಲಿ ಒಡಂಬಡಿಕೆಯ ಮಂಜೂಷದ ಮುಂದೆ ಇರುವ ಪರದೆಯ ಹೊರಗೆ, ಆರೋನನು ಸಂಜೆಯಿಂದ ಉದಯದವರೆಗೆ ಯೆಹೋವ ದೇವರ ಮುಂದೆ ದೀಪವನ್ನು ಸರಿಪಡಿಸುತ್ತಾ ಉರಿಸುತ್ತಿರಬೇಕು. ಈ ನಿಯಮವು ನಿಮಗೆ ಮತ್ತು ನಿಮ್ಮ ಸಂತತಿಯವರಿಗೆ ಶಾಶ್ವತವಾದ ನಿಯಮವಾಗಿರುವುದು.

[4] ದೀಪಗಳು ಚೊಕ್ಕ ಬಂಗಾರದ ದೀಪಸ್ತಂಭದ ಮೇಲೆ ಯೆಹೋವ ದೇವರ ಸನ್ನಿಧಿಯಲ್ಲಿ ಯಾವಾಗಲೂ ಇರುವಂತೆ ಅವನು ಕ್ರಮಪಡಿಸಬೇಕು.

[5] “ನೀನು ನಯವಾದ ಹಿಟ್ಟನ್ನು ತೆಗೆದುಕೊಂಡು ಹನ್ನೆರಡು ರೊಟ್ಟಿಗಳನ್ನು ಸುಡಬೇಕು. ಪ್ರತಿಯೊಂದು ರೊಟ್ಟಿ ಎರಡೆರಡು ಓಮರನಷ್ಟು ಇರಬೇಕು.

[6] ಅವುಗಳನ್ನು ಚೊಕ್ಕ ಬಂಗಾರದ ಮೇಜಿನ ಮೇಲೆ ಯೆಹೋವ ದೇವರ ಸನ್ನಿಧಿಯಲ್ಲಿ ಒಂದು ಸಾಲಿನಲ್ಲಿ ಆರರಂತೆ, ಎರಡು ಸಾಲುಗಳನ್ನಾಗಿ ಇಡಬೇಕು.

[7] ರೊಟ್ಟಿಯ ಮೇಲೆ ಅದು ಜ್ಞಾಪಕಾರ್ಥವಾಗಿ ಇರುವಂತೆಯೂ, ಬೆಂಕಿಯ ಮೂಲಕ ಯೆಹೋವ ದೇವರಿಗೆ ಸಮರ್ಪಣೆಯಾಗುವಂತೆಯೂ, ಪ್ರತಿಯೊಂದು ಸಾಲಿನ ಮೇಲೆ ಶುದ್ಧವಾದ ಸಾಂಬ್ರಾಣಿಯನ್ನು ಹಾಕಬೇಕು.

[8] ಪ್ರತಿಯೊಂದು ಸಬ್ಬತ್ ದಿನದಲ್ಲಿಯೂ ಯೆಹೋವ ದೇವರ ಎದುರಿನಲ್ಲಿ ಯಾವಾಗಲೂ ಅವನು ಅದನ್ನು ಕ್ರಮಪಡಿಸಬೇಕು. ಇದು ಇಸ್ರಾಯೇಲರ ಕಡೆಯಿಂದ ನಿತ್ಯವಾದ ಒಡಂಬಡಿಕೆಯಾಗಿರಬೇಕು.

[9] ಅದು ಆರೋನನ ಮತ್ತು ಅವನ ಪುತ್ರರದಾಗಿರಬೇಕು. ಅವರು ಅದನ್ನು ಪರಿಶುದ್ಧವಾದ ಸ್ಥಳದಲ್ಲಿ ತಿನ್ನಬೇಕು. ಏಕೆಂದರೆ ಅದು ನಿತ್ಯವಾದ ನಿಯಮವಾಗಿ ಯೆಹೋವ ದೇವರಿಗೆ ದಹನಬಲಿಯಾಗಿ ಸಮರ್ಪಿಸುವವುಗಳಲ್ಲಿ ಅವನಿಗೆ ಮಹಾಪರಿಶುದ್ಧವಾಗಿರುವುದು.”

[10] ಇಸ್ರಾಯೇಲಿನವಳಾದ ಒಬ್ಬ ಸ್ತ್ರೀಗೂ, ಈಜಿಪ್ಟಿನವನಾದ ಪುರುಷನಿಗೂ ಹುಟ್ಟಿದ ಮಗನು ಇಸ್ರಾಯೇಲರ ಪಾಳ್ಯಕ್ಕೆ ಬಂದನು. ಇಸ್ರಾಯೇಲಿನವಳಾದ ಸ್ತ್ರೀಯ ಈ ಮಗನು ಇಸ್ರಾಯೇಲಿನ ಒಬ್ಬ ಮನುಷ್ಯನೊಂದಿಗೆ ಪಾಳೆಯದಲ್ಲಿ ಜಗಳವಾಡಿದರು.

[11] ಇಸ್ರಾಯೇಲ್ ಸ್ತ್ರೀಯ ಮಗನು ಯೆಹೋವ ದೇವರ ನಾಮವನ್ನು ದೂಷಿಸಿ, ಶಪಿಸಿದನು. ಅವರು ಅವನನ್ನು ಮೋಶೆಯ ಬಳಿಗೆ ತಂದರು. ಅವನ ತಾಯಿಯ ಹೆಸರು ಶೆಲೋಮಿತ್. ಇವಳು ದಾನ್ ಕುಲದ ದಿಬ್ರೀಯನ ಮಗಳು.

[12] ಯೆಹೋವ ದೇವರ ಮನಸ್ಸನ್ನು ತಿಳಿಯುವಂತೆ ಅವನನ್ನು ಕಾವಲಲ್ಲಿ ಬಿಟ್ಟರು.

[13] ಆಗ ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,

[14] “ಶಪಿಸಿದವನನ್ನು ಪಾಳೆಯದ ಆಚೆಗೆ ತೆಗೆದುಕೊಂಡು ಹೋಗಿರಿ, ಅವನಿಂದ ಕೇಳಿದವರೆಲ್ಲರೂ ಅವನ ತಲೆಯ ಮೇಲೆ ತಮ್ಮ ಕೈಗಳನ್ನಿಡಲಿ, ಸಭೆಯವರೆಲ್ಲರೂ ಅವನಿಗೆ ಕಲ್ಲೆಸೆಯಲಿ.

[15] ನೀನು ಇಸ್ರಾಯೇಲರೊಂದಿಗೆ ಮಾತನಾಡಿ ಅವರಿಗೆ ಹೀಗೆ ಹೇಳಬೇಕು, ‘ತನ್ನ ದೇವರನ್ನು ಶಪಿಸುವವನು, ತನ್ನ ಪಾಪವನ್ನು ಹೊತ್ತುಕೊಳ್ಳಬೇಕು.

[16] ಯೆಹೋವ ದೇವರ ನಾಮವನ್ನು ದೂಷಣೆ ಮಾಡುವವನಿಗೆ ನಿಶ್ಚಯವಾಗಿ ಮರಣವನ್ನು ವಿಧಿಸಬೇಕು. ಸಭೆಯವರೆಲ್ಲರೂ ನಿಶ್ಚಯವಾಗಿ ಅವನಿಗೆ ಕಲ್ಲೆಸೆಯಬೇಕು. ಇದಲ್ಲದೆ ಸ್ವದೇಶೀಯನಾಗಿರಲಿ, ಪರಕೀಯನಾಗಿರಲಿ ಯೆಹೋವ ದೇವರ ಹೆಸರನ್ನು ದೂಷಣೆ ಮಾಡಿದಾಗ, ಅವನನ್ನು ಮರಣ ಶಿಕ್ಷೆಗೆ ಒಳಪಡಿಸಬೇಕು.

[17] “ ‘ಯಾರಾದರೂ ಮನುಷ್ಯನನ್ನು ಕೊಂದರೆ, ನಿಶ್ಚಯವಾಗಿ ಮರಣಕ್ಕೆ ಒಳಪಡಬೇಕು.

[18] ಪಶುವನ್ನು ಕೊಲ್ಲುವವರು, ಅದಕ್ಕೆ ಪ್ರತಿಯಾಗಿ ಒಂದು ಪಶುವನ್ನು ಕೊಡಬೇಕು.

[19] ಯಾರಾದರೂ ತಮ್ಮ ನೆರೆಯವನಿಗೆ ಊನವಾಗುವಂತೆ ಮಾಡಿದರೆ, ಅವರು ಮಾಡಿದಂತೆಯೇ ಅವರಿಗೆ ಮಾಡಬೇಕು.

[20] ಮುರಿತಕ್ಕೆ ಮುರಿತ, ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು, ಅವರು ಒಬ್ಬರಿಗೆ ಊನ ಮಾಡಿದ ಹಾಗೆಯೇ ಅವರಿಗೂ ಮಾಡಬೇಕು.

[21] ಪಶುವನ್ನು ಕೊಲ್ಲುವವರು ಅದಕ್ಕೆ ಬದಲುಕೊಡಬೇಕು. ಮನುಷ್ಯರನ್ನು ಕೊಲ್ಲುವವರನ್ನು ಮರಣಕ್ಕೆ ಒಳಪಡಿಸಬೇಕು.

[22] ನಿಮಗೆ ಒಂದೇ ವಿಧವಾದ ನಿಯಮವಿರಬೇಕು. ಸ್ವದೇಶಸ್ಥನಿಗೆ ಇರುವಂತೆಯೇ ಪರಕೀಯನಿಗೂ ಇರಬೇಕು. ಏಕೆಂದರೆ ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.’ ”

[23] ಶಪಿಸಿದವನನ್ನು ಪಾಳೆಯದ ಹೊರಗೆ ತಂದು, ಅವನನ್ನು ಕಲ್ಲುಗಳಿಂದ ಹೊಡೆಯುವಂತೆ ಮೋಶೆಯು ಇಸ್ರಾಯೇಲರೊಂದಿಗೆ ಮಾತನಾಡಿದನು. ಆಗ ಇಸ್ರಾಯೇಲರು ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆಯೇ ಮಾಡಿದರು.

ಯಾಜಕಕಾಂಡ — Chapters