[1] ಯೆಹೋವ ದೇವರು ಸೀನಾಯಿ ಬೆಟ್ಟದಲ್ಲಿ ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,
[2] “ಇಸ್ರಾಯೇಲರೊಂದಿಗೆ ನೀನು ಮಾತನಾಡಿ ಅವರಿಗೆ ಹೀಗೆ ಹೇಳು, ‘ನಾನು ನಿಮಗೆ ಕೊಡುವ ದೇಶದಲ್ಲಿ ನೀವು ಬಂದಾಗ, ದೇಶವು ಯೆಹೋವ ದೇವರಿಗಾಗಿ ಸಬ್ಬತ್ ದಿನವನ್ನು ಕೈಗೊಳ್ಳಬೇಕು.
[3] ಆರು ವರ್ಷ ನೀವು ನಿಮ್ಮ ಹೊಲವನ್ನು ಬಿತ್ತಬೇಕು. ಆರು ವರ್ಷ ನೀವು ನಿಮ್ಮ ದ್ರಾಕ್ಷಿತೋಟವನ್ನು ಕತ್ತರಿಸಬೇಕು, ಅವುಗಳಿಂದ ಫಲವನ್ನು ಕೂಡಿಸಬೇಕು.
[4] ಆದರೆ ಏಳನೆಯ ವರ್ಷವು ನೆಲಕ್ಕೆ ವಿಶ್ರಾಂತಿಕಾಲವಾಗಿರುವುದು. ಅದು ಯೆಹೋವ ದೇವರಿಗೆ ಸಬ್ಬತ್ ಕಾಲವಾಗಿರುವುದು. ನೀವು ಆ ವರ್ಷದಲ್ಲಿ ನಿಮ್ಮ ಹೊಲವನ್ನು ಬಿತ್ತಬಾರದು. ಇಲ್ಲವೆ ದ್ರಾಕ್ಷಿತೋಟವನ್ನು ಕತ್ತರಿಸಬಾರದು.
[5] ತನ್ನಷ್ಟಕ್ಕೆ ತಾನೇ ಬೆಳೆದಿರುವ ಪೈರನ್ನು ನೀವು ಕೊಯ್ಯಬಾರದು. ಇಲ್ಲವೆ ಕತ್ತರಿಸದಿರುವ ದ್ರಾಕ್ಷಿಯ ಬಳ್ಳಿಯ ದ್ರಾಕ್ಷಿಹಣ್ಣುಗಳನ್ನು ಕೂಡಿಸಬಾರದು. ಏಕೆಂದರೆ ಅದು ದೇಶಕ್ಕೆ ವಿಶ್ರಾಂತಿಯ ವರ್ಷವಾಗಿರುವುದು.
[6] ದೇಶದ ಆ ಸಬ್ಬತ್ ವರ್ಷದಲ್ಲಿ ತಾನಾಗಿಯೇ ಬೆಳೆದದ್ದು ನಿಮ್ಮ ಆಹಾರಕ್ಕಾಗಿ ಇರುವುದು. ಅದು ನಿಮಗೂ, ನಿಮ್ಮ ದಾಸದಾಸಿಯರಿಗೂ, ನಿಮ್ಮ ಕೂಲಿಯವರಿಗೂ, ನಿಮ್ಮೊಂದಿಗೆ ಪ್ರವಾಸಿಯಾಗಿರುವ ಪರಕೀಯರಿಗೂ,
[7] ನಿಮ್ಮ ದೇಶದಲ್ಲಿರುವ ಹುಟ್ಟುವಳಿಯೆಲ್ಲಾ ನಿಮ್ಮ ಪಶು ಮತ್ತು ಕಾಡುಮೃಗಗಳಿಗೆ ಆಹಾರವಾಗಬಹುದು.
[8] “ ‘ಇದಲ್ಲದೆ ಏಳು ವರ್ಷಕ್ಕೆ ಒಂದರಂತೆ ಏಳು ಸಬ್ಬತ್ ವರ್ಷಗಳನ್ನು ಎಣಿಸಬೇಕು. ಆ ಏಳು ಸಬ್ಬತ್ ವರ್ಷಗಳ ಕಾಲವು ಒಟ್ಟು ನಾಲ್ವತ್ತೊಂಬತ್ತು ವರ್ಷಗಳಾಗಿರುವುವು.
[9] ಇದಾದ ಮೇಲೆ ಏಳನೆಯ ತಿಂಗಳಿನ ಹತ್ತನೆಯ ದಿವಸದಲ್ಲಿ ಐವತ್ತನೆಯ ವಾರ್ಷಿಕೋತ್ಸವಕ್ಕೆ ತುತೂರಿಯನ್ನು ಊದಿಸಬೇಕು. ಪ್ರಾಯಶ್ಚಿತ್ತದ ದಿನದಲ್ಲಿ ನಿಮ್ಮ ದೇಶದ ಎಲ್ಲಾ ಕಡೆಗಳಲ್ಲಿ ತುತೂರಿಯನ್ನು ಊದಿಸಬೇಕು.
[10] ಐವತ್ತನೆಯ ವರ್ಷವನ್ನು ಪರಿಶುದ್ಧಮಾಡಿ ದೇಶದಲ್ಲಿ ಎಲ್ಲಾ ನಿವಾಸಿಗಳಿಗೆ ಬಿಡುಗಡೆಯನ್ನು ಪ್ರಕಟಿಸಬೇಕು. ಅದು ನಿಮಗೆ ಐವತ್ತನೆಯ ವರ್ಷದ ವಾರ್ಷಿಕೋತ್ಸವವಾಗಿರಬೇಕು. ನಿಮ್ಮಲ್ಲಿ ಪ್ರತಿಯೊಬ್ಬನು ಅವನವನ ಆಸ್ತಿಗೂ, ಅವನವನ ಕುಟುಂಬಕ್ಕೂ, ಹಿಂದಿರುಗಿ ಹೋಗಬೇಕು.
[11] ಐವತ್ತನೆಯ ಆ ವರುಷವು ನಿಮಗೆ ಜೂಬಿಲಿಯಾಗಿರುವುದು. ನೀವು ಬಿತ್ತಲೂಬಾರದು ಮತ್ತು ತನ್ನಷ್ಟಕ್ಕೆ ತಾನೇ ಬೆಳೆಯುವುದನ್ನು ಕೊಯ್ಯಲೂಬಾರದು ಇಲ್ಲವೆ ಕತ್ತರಿಸದಿದ್ದ ದ್ರಾಕ್ಷಿಬಳ್ಳಿಗಳಲ್ಲಿ ದ್ರಾಕ್ಷಿಹಣ್ಣುಗಳನ್ನು ಕೂಡಿಸಲೂಬಾರದು.
[12] ಏಕೆಂದರೆ ಅದು ಜೂಬಿಲಿ. ಅದು ನಿಮಗೆ ಪರಿಶುದ್ಧವಾಗಿರುವುದು. ಹೊಲದೊಳಗಿಂದ ಬೆಳೆದ ಹುಟ್ಟುವಳಿಯನ್ನು ನೀವು ತಿನ್ನಬೇಕು.
[13] “ ‘ಜೂಬಿಲಿಯ ಈ ವರ್ಷದಲ್ಲಿ ಪ್ರತಿಯೊಬ್ಬನು ತನ್ನ ಆಸ್ತಿಗೆ ಹಿಂದಿರುಗಬೇಕು.
[14] “ ‘ನೆರೆಯವನಿಗೆ ಏನಾದರೂ ಮಾರಾಟ ಮಾಡಿದ್ದರೆ, ಇಲ್ಲವೆ ನೆರೆಯವನಿಂದ ಕೊಂಡುಕೊಂಡಿದ್ದರೆ, ಒಬ್ಬರಿಗೊಬ್ಬರು ಅನ್ಯಾಯಮಾಡಬಾರದು.
[15] ಜೂಬಿಲಿಯ ತರುವಾಯ ವರ್ಷಗಳ ಲೆಕ್ಕದ ಪ್ರಕಾರ ನಿನ್ನ ನೆರೆಯವನಿಂದ ಕೊಂಡುಕೊಳ್ಳಬೇಕು. ಫಲದ ವರ್ಷಗಳ ಪ್ರಕಾರ ಅವನು ನಿನಗೆ ಮಾರಾಟಮಾಡಬೇಕು.
[16] ವರ್ಷಗಳು ಹೆಚ್ಚಿದಂತೆಯೇ ಫಲದ ಬೆಲೆಯನ್ನೂ ಹೆಚ್ಚಿಸಬೇಕು. ವರ್ಷಗಳು ಕಡಿಮೆಯಿರುವಂತೆಯೇ ಫಲದ ಬೆಲೆಯನ್ನು ಕಡಿಮೆ ಮಾಡಬೇಕು. ಫಲದ ವರ್ಷಗಳ ಸಂಖ್ಯೆಗನುಸಾರವಾಗಿಯೇ ಅವನು ನಿನಗೆ ಮಾರಾಟಮಾಡಬೇಕು.
[17] ಆದ್ದರಿಂದ ನೀವು ಒಬ್ಬರಿಗೊಬ್ಬರು ಅನ್ಯಾಯಮಾಡಬಾರದು. ಆದರೆ ದೇವರಿಗೆ ನೀನು ಭಯಪಡಬೇಕು. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.
[18] “ ‘ಹೀಗೆ ನೀವು ನನ್ನ ನಿಯಮಗಳನ್ನು ಪಾಲಿಸಬೇಕು, ನನ್ನ ನಿರ್ಣಯಗಳನ್ನು ಕೈಗೊಂಡು ನಡೆಯಬೇಕು. ಆಗ ನೀವು ದೇಶದಲ್ಲಿ ಸುರಕ್ಷಿತವಾಗಿ ವಾಸಿಸುವಿರಿ.
[19] ಭೂಮಿಯು ತನ್ನ ಫಲವನ್ನು ಕೊಡುವುದು. ನೀವು ತಿಂದು ತೃಪ್ತರಾಗುವಿರಿ, ಅದರಲ್ಲಿ ಸುರಕ್ಷಿತವಾಗಿ ವಾಸಿಸುವಿರಿ.
[20] ನೀವು, “ನಾವು ಬಿತ್ತುವುದಿಲ್ಲ, ಇಲ್ಲವೆ ನಮ್ಮ ಹುಟ್ಟುವಳಿಯಲ್ಲಿ ಕೂಡಿಸಿಕೊಳ್ಳುವುದಿಲ್ಲ. ಏಳನೆಯ ವರ್ಷದಲ್ಲಿ ನಾವು ಏನು ತಿನ್ನೋಣ,” ಎನ್ನುವಿರಿ.
[21] ಆಗ ನಾನು, “ಆರನೆಯ ವರ್ಷದಲ್ಲಿ ಮೂರು ವರ್ಷಗಳಿಗೆ ಫಲಫಲಿಸುವಂತೆ ನಿಮ್ಮ ಮೇಲೆ ನನ್ನ ಆಶೀರ್ವಾದವನ್ನು ಕೊಡುವೆನು.
[22] ನೀವು ಎಂಟನೆಯ ವರ್ಷದಲ್ಲಿ ಬಿತ್ತಿ, ಅದರ ಫಲವನ್ನು ಒಂಬತ್ತನೆಯ ವರ್ಷದವರೆಗೆ ತಿನ್ನುವಿರಿ. ಅದರ ಫಲ ಬರುವವರೆಗೆ ತಿನ್ನುವಿರಿ, ಅದರ ಫಲ ಬರುವವರೆಗೆ ನೀವು ಸಂಗ್ರಹಿಸಿದ ಹಳೆಯದನ್ನೇ ತಿನ್ನುವಿರಿ,” ಎಂದು ಹೇಳುತ್ತೇನೆ.
[23] “ ‘ಇದಲ್ಲದೆ ಭೂಮಿಯನ್ನು ಎಂದಿಗೂ ಮಾರಬಾರದು. ಏಕೆಂದರೆ ಭೂಮಿಯು ನನ್ನದು. ನನ್ನೊಂದಿಗೆ ನೀವು ಪರಕೀಯರೂ, ಪ್ರವಾಸಿಗಳೂ ಆಗಿದ್ದೀರಿ.
[24] ನಿಮ್ಮ ಸ್ವಾಧೀನದಲ್ಲಿರುವ ನಿಮ್ಮ ಎಲ್ಲಾ ಭೂಮಿಗೆ ಬಿಡುಗಡೆಯನ್ನು ಕೊಡಬೇಕು.
[25] “ ‘ನಿಮ್ಮ ಸಹೋದರನು ಬಡತನದ ನಿಮಿತ್ತವಾಗಿ ತನ್ನ ಸೊತ್ತಿನಲ್ಲಿ ಸ್ವಲ್ಪವನ್ನು ಮಾರಿದರೆ, ಅವನ ಬಂಧುವು ಅದನ್ನು ಬಿಡಿಸಿಕೊಳ್ಳಬೇಕು.
[26] ಬಿಡಿಸುವ ಬಂಧುವು ಇಲ್ಲದೆ ಹೋದರೆ, ಮಾರಿದವನೇ ಸ್ಥಿತಿವಂತನಾಗಿ ಅದನ್ನು ಬಿಡಿಸಿಕೊಳ್ಳುವಂತಾದರೆ,
[27] ಅವನು ಅದನ್ನು ಮಾರಿದ ವರ್ಷಗಳನ್ನು ಲೆಕ್ಕಿಸಿ, ಅದನ್ನು ಮಾರಿದವನಿಗೆ ಮಿಕ್ಕ ಕ್ರಯವನ್ನು ಪೂರ್ತಿಮಾಡಿ, ತನ್ನ ಸ್ವಂತ ಹೊಲವನ್ನು ಸ್ವಾಧೀನಪಡಿಸಿಕೊಳ್ಳಬಹುದು.
[28] ತಿರುಗಿ ಸಲ್ಲಿಸುವುದಕ್ಕೆ ಅವನಿಗೆ ಆಗದಿದ್ದರೆ, ಅವನು ಮಾರಿದ್ದು ಜೂಬಿಲಿಯ ವರ್ಷದವರೆಗೆ ಕೊಂಡುಕೊಂಡವನ ಕೈಯಲ್ಲಿ ಇರಬೇಕು ಮತ್ತು ಸಂಭ್ರಮದ ವರ್ಷದಲ್ಲಿ ಅದು ಬಿಡುಗಡೆಯಾಗಬೇಕು, ಅವನು ತನ್ನ ಸೊತ್ತನ್ನು ಪಡೆಯಬೇಕು.
[29] “ ‘ಇದಲ್ಲದೆ ಒಬ್ಬನು ಗೋಡೆಯುಳ್ಳ ಪಟ್ಟಣದಲ್ಲಿರುವ ನಿವಾಸದ ಮನೆಯನ್ನು ಮಾರಿದರೆ, ಅದನ್ನು ಮಾರಿದ ಒಂದು ಪೂರ್ಣ ವರ್ಷದೊಳಗಾಗಿ ಅದನ್ನು ಬಿಡುಗಡೆ ಮಾಡಬೇಕು. ಒಂದು ಪೂರ್ಣ ವರ್ಷದೊಳಗಾಗಿ ಅದನ್ನು ಬಿಡಿಸಬಹುದು.
[30] ಆದರೆ ವರ್ಷವು ಪೂರ್ಣವಾಗುವುದರೊಳಗಾಗಿ ಅದು ಬಿಡುಗಡೆಯಾಗದಿದ್ದರೆ, ಗೋಡೆಯ ಪಟ್ಟಣದೊಳಗಿರುವ ಆ ಮನೆಯು ಅದನ್ನು ಕೊಂಡುಕೊಂಡವನಿಗೂ ಅವನ ಸಂತತಿಯವರಿಗೂ ಶಾಶ್ವತವಾಗಿ ನಿಲ್ಲುವುದು. ಜೂಬಿಲಿಯ ವರ್ಷದಲ್ಲಿ ಅದು ಬಿಡುಗಡೆಯಾಗಬಾರದು.
[31] ಆದರೆ ಸುತ್ತಲೂ ಗೋಡೆಗಳಿಲ್ಲದೆ ಹಳ್ಳಿಗಳಲ್ಲಿರುವ ಮನೆಗಳು ಬಯಲಿನ ಹೊಲಗಳಂತೆ ಎಣಿಸಬೇಕು. ಅವುಗಳನ್ನು ಬಿಡಿಸಿಕೊಳ್ಳುವ ಅಧಿಕಾರವಿರುವದು. ಜೂಬಿಲಿಯ ವರ್ಷದಲ್ಲಿ ಅವು ಬಿಡುಗಡೆ ಆಗಬೇಕು.
[32] “ ‘ಲೇವಿಯರ ಪಟ್ಟಣಗಳ ವಿಷಯವಾಗಿಯೂ, ಅವರ ಸ್ವಾಧೀನವಾಗಿರುವ ಪಟ್ಟಣಗಳ ಮನೆಗಳ ವಿಷಯವಾಗಿಯೂ ಲೇವಿಯರು ಯಾವ ಸಮಯದಲ್ಲಿಯಾದರೂ ಬಿಡಿಸಿಕೊಳ್ಳಬಹುದು.
[33] ಲೇವಿಯರಿಂದ ಏನಾದರೂ ಕೊಂಡುಕೊಂಡರೆ, ಕೊಂಡುಕೊಂಡ ಮನೆಯೂ, ಅವನ ಸ್ವಾಸ್ತ್ಯದ ಪಟ್ಟಣವೂ ಜೂಬಿಲಿಯ ವರ್ಷದಲ್ಲಿ ಬಿಡುಗಡೆಯಾಗಬೇಕು. ಏಕೆಂದರೆ ಲೇವಿಯರ ಪಟ್ಟಣಗಳ ಮನೆಗಳು ಇಸ್ರಾಯೇಲರ ಮಧ್ಯದಲ್ಲಿ ಅವರಿಗೆ ಸ್ವಾಧೀನವಾಗಿವೆ.
[34] ಆದರೆ ಅವರ ಪಟ್ಟಣಗಳ ಉಪನಗರಗಳ ಹೊಲವನ್ನು ಮಾರಬಾರದು. ಏಕೆಂದರೆ ಅದು ಅವರಿಗೆ ಶಾಶ್ವತವಾದ ಸೊತ್ತು.
[35] “ ‘ನಿನ್ನ ಸಹೋದರನು ಬಡವನಾಗಿ ನಿನ್ನ ಬಳಿಯಲ್ಲಿ ಕ್ಷೀಣವಾಗಿ ಬಿದ್ದುಕೊಂಡರೆ, ಅವನು ಪರಕೀಯನಾಗಿದ್ದರೂ, ಪ್ರವಾಸಿಯಾಗಿದ್ದರೂ ಅವನು ನಿನ್ನ ಬಳಿಯಲ್ಲಿ ಬದುಕುವ ಹಾಗೆ ಅವನಿಗೆ ಸಹಾಯಮಾಡಬೇಕು.
[36] ನೀನು ಅವನಿಂದ ಬಡ್ಡಿಯನ್ನಾಗಲಿ ಇಲ್ಲವೆ ಲಾಭವನ್ನಾಗಲಿ ತೆಗೆದುಕೊಳ್ಳಬಾರದು. ನಿನ್ನ ಸಹೋದರನು ನಿನ್ನೊಂದಿಗೆ ಬದುಕುವಂತೆ ನಿನ್ನ ದೇವರಿಗೆ ಭಯಪಡು.
[37] ನೀನು ಅವನಿಗೆ ಹಣವನ್ನು ಸಾಲವಾಗಿ ಕೊಟ್ಟರೆ ಬಡ್ಡಿಯನ್ನು ಕೇಳಬಾರದು, ನಿನ್ನ ಆಹಾರವನ್ನು ಲಾಭಕ್ಕಾಗಿ ಸಾಲವಾಗಿ ಕೊಡಬೇಡ.
[38] ನಿನಗೆ ಕಾನಾನ್ ದೇಶವನ್ನು ಕೊಡುವಂತೆಯೂ, ನಿನಗೆ ದೇವರಾಗಿರುವಂತೆಯೂ ನಿನ್ನನ್ನು ಈಜಿಪ್ಟ್ ದೇಶದೊಳಗಿಂದ ಹೊರಗೆ ಕರತಂದ ನಿನ್ನ ದೇವರಾಗಿರುವ ಯೆಹೋವ ದೇವರು ನಾನೇ.
[39] “ ‘ನಿನ್ನೊಂದಿಗೆ ವಾಸಿಸುವ ನಿನ್ನ ಸಹೋದರನು ಬಡವನಾಗಿದ್ದು ತನ್ನನ್ನೇ ಮಾರಿಕೊಂಡಿದ್ದರೆ, ದಾಸನ ಹಾಗೆ ಸೇವೆಯನ್ನು ಮಾಡುವಂತೆ ಅವನನ್ನು ನೀನು ಬಲಾತ್ಕರಿಸಬಾರದು.
[40] ಆದರೆ ಕೂಲಿಯಾಳಂತೆಯೂ, ಪ್ರವಾಸಿಯಂತೆಯೂ ಅವನು ನಿನ್ನ ಬಳಿಯಲ್ಲಿ ಇರಲಿ. ಜೂಬಿಲಿ ಸಂವತ್ಸರದವರೆಗೆ ನಿನಗೆ ಸೇವೆಮಾಡಲಿ.
[41] ತರುವಾಯ ಅವನು ನಿನ್ನ ಬಳಿಯಿಂದ ತನ್ನ ಮಕ್ಕಳೊಂದಿಗೆ ಹೊರಟು ತನ್ನ ಕುಟುಂಬಕ್ಕೆ ಹಿಂದಿರುಗಬೇಕು. ತನ್ನ ಪಿತೃಗಳ ಸೊತ್ತಿಗೂ ಅವನು ಹಿಂದಿರುಗಬೇಕು.
[42] ಏಕೆಂದರೆ ಈಜಿಪ್ಟ್ ದೇಶದೊಳಗಿಂದ ನಾನು ಹೊರಗೆ ಕರತಂದ ಇಸ್ರಾಯೇಲರು ನನ್ನ ಸೇವಕರಾಗಿದ್ದಾರೆ, ದಾಸರನ್ನು ಮಾರುವಂತೆ ಅವರನ್ನು ಮಾರಬಾರದು.
[43] ನೀನು ಕಠಿಣವಾಗಿ ಅವನ ಮೇಲೆ ಅಧಿಕಾರ ಚಲಾಯಿಸಬಾರದು. ನಿನ್ನ ದೇವರಿಗೆ ಭಯಪಡಬೇಕು.
[44] “ ‘ನಿನ್ನ ಸುತ್ತಲೂ ಇರುವ ಇತರ ಜನರು ನಿನಗೆ ದಾಸ ದಾಸಿಯರಾಗಿರುವಂತೆ ಅವರಿಂದ ದಾಸದಾಸಿಯರನ್ನು ನೀನು ಕೊಂಡುಕೊಳ್ಳಬೇಕು.
[45] ಇದಲ್ಲದೆ ನಿನ್ನ ಮಧ್ಯದೊಳಗಿರುವ ಪರಕೀಯ ಪ್ರವಾಸಿಗಳ ಮಕ್ಕಳಿಂದ ಮತ್ತು ನಿನ್ನ ಬಳಿಯಲ್ಲಿರುವ ಅವರ ಕುಟುಂಬಗಳಲ್ಲಿ ದೇಶದೊಳಗೆ ಅವರು ಪಡೆದವರಿಂದ ನೀನು ಕೊಂಡುಕೊಳ್ಳಬಹುದು ಮತ್ತು ಅವರು ನಿನ್ನ ಸ್ವತ್ತಾಗಿರುವರು.
[46] ನಿಮ್ಮ ತರುವಾಯ ಅವರನ್ನು ನಿಮ್ಮ ಮಕ್ಕಳಿಗೆ ಸ್ವತ್ತಾಗುವ ಬಾಧ್ಯತೆಯಾಗಿ ತೆಗೆದುಕೊಳ್ಳಬೇಕು. ಅವರು ಶಾಶ್ವತವಾಗಿ ನಿಮ್ಮ ದಾಸರಾಗಿರುವರು. ಆದರೆ ಇಸ್ರಾಯೇಲರಾದ ನಿಮ್ಮ ಸಹೋದರರಲ್ಲಿ ಒಬ್ಬರ ಮೇಲೊಬ್ಬರು ಕಠಿಣವಾದ ದಬ್ಬಾಳಿಕೆಯನ್ನು ನಡೆಸಬೇಡಿರಿ.
[47] “ ‘ನಿನ್ನ ಬಳಿಯಲ್ಲಿರುವ ಪರಕೀಯ ಇಲ್ಲವೆ ಪ್ರವಾಸಿಯ ಸಂಪತ್ತು ಹೆಚ್ಚಾಗಲಾಗಿ ನಿನ್ನ ಸಹೋದರನು ಅವನ ಬಳಿಯಲ್ಲಿ ಬಡವನಾಗಿ ನಿನ್ನ ಬಳಿಯಲ್ಲಿರುವ ಪರಕೀಯ ಇಲ್ಲವೆ ಪ್ರವಾಸಿ ಇಲ್ಲವೆ ಪರಕೀಯನ ಸಂತತಿಯಲ್ಲಿ ಹುಟ್ಟಿದವನಿಗೆ ತನ್ನನ್ನು ಮಾರಿಕೊಂಡಿದ್ದರೂ ಅವನಿಗೆ ಬಿಡುಗಡೆಯಾಗಬಹುದು.
[48] ಅವನ ಸಹೋದರರಲ್ಲಿ ಒಬ್ಬನು ಈಡುಕೊಟ್ಟು ಅವನನ್ನು ವಿಮೋಚಿಸಬಹುದು.
[49] ಅವನ ಚಿಕ್ಕಪ್ಪನಾಗಲಿ ಇಲ್ಲವೆ ಅವನ ಚಿಕ್ಕಪ್ಪನ ಮಗನಾಗಲಿ ಇಲ್ಲವೆ ಅವನ ಕುಟುಂಬದಲ್ಲಿ ಸಮೀಪವಾಗಿರುವ ಸಂಬಂಧಿಕರಲ್ಲಿ ಯಾರಾಗಲಿ ಅವನನ್ನು ವಿಮೋಚಿಸಬಹುದು. ಇಲ್ಲವೆ ಅವನು ಶಕ್ತನಾಗಿದ್ದರೆ ತನ್ನನ್ನು ತಾನೇ ವಿಮೋಚಿಸಿಕೊಳ್ಳಬಹುದು.
[50] ಅವನು ತನ್ನನ್ನು ಮಾರಿಕೊಂಡ ವರುಷ ಮೊದಲುಗೊಂಡು ಮುಂದಿನ ಜೂಬಿಲಿ ಸಂವತ್ಸರದವರೆಗೆ ಅವನೊಂದಿಗೆ ಲೆಕ್ಕಮಾಡಬೇಕು. ಅವನ ಮಾರಾಟದ ಕ್ರಯವು ವರುಷಗಳ ಲೆಕ್ಕದ ಪ್ರಕಾರ ಕೂಲಿಯಾಳಿನ ಸಮಯಕ್ಕೆ ತಕ್ಕಂತೆ ಅವನೊಂದಿಗೆ ಅದು ಇರುವುದು.
[51] ಜೂಬಿಲಿ ಸಂವತ್ಸರದವರೆಗೆ ಇನ್ನು ಬಹಳ ವರುಷಗಳಿದ್ದರೆ ಅವುಗಳ ಪ್ರಕಾರ ತನ್ನ ವಿಮೋಚನೆಯ ಕ್ರಯವನ್ನು ಕೊಡಬೇಕು.
[52] ಜೂಬಿಲಿ ಸಂವತ್ಸರದವರೆಗೆ ಕೆಲವು ವರುಷಗಳು ಮಾತ್ರ ಉಳಿದಿದ್ದರೆ ಅವನೊಂದಿಗೆ ಎಣಿಸಬೇಕು. ಅವನ ವರ್ಷಗಳ ಮೇರೆಗೆ ತನ್ನ ವಿಮೋಚನೆಯ ಕ್ರಯವನ್ನು ತಿರುಗಿ ಅವನಿಗೆ ಸಲ್ಲಿಸಬೇಕು.
[53] ವರ್ಷದ ಕೂಲಿಯಾಳಿನಂತೆ ಅವನ ಬಳಿಯಲ್ಲಿ ಇರಬೇಕು. ಆದರೆ ಯಜಮಾನನು ಅವನನ್ನು ಕಠಿಣವಾಗಿ ನಡೆಸಿಕೊಳ್ಳುತ್ತಿರುವುದನ್ನು ನೀವು ನೋಡುತ್ತಾ ಸುಮ್ಮನಿರಬಾರದು.
[54] “ ‘ಈ ವರುಷಗಳಲ್ಲಿ ಅವನು ಬಿಡಿಸಿಕೊಳ್ಳದೆ ಹೋದರೆ, ಜೂಬಿಲಿ ಸಂವತ್ಸರದಲ್ಲಿ ಅವನು ಮಕ್ಕಳೊಂದಿಗೆ ಬಿಡುಗಡೆಯಾಗಬೇಕು.
[55] ಏಕೆಂದರೆ ಇಸ್ರಾಯೇಲರು ನನ್ನ ದಾಸರು ಈಜಿಪ್ಟ್ ದೇಶದೊಳಗಿಂದ ನಾನು ಹೊರಗೆ ಬರಮಾಡಿದ ಇವರು ನನ್ನ ದಾಸರೇ. ನಿನ್ನ ದೇವರಾದ ಯೆಹೋವ ದೇವರು ನಾನೇ.