Skip to content
Opens in a new window
Listen to this chapter • 7:16

[1] ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,

[2] “ಇಸ್ರಾಯೇಲರಿಗೆ ಹೀಗೆ ಹೇಳು: ‘ಯಾರಾದರೂ ಉದ್ದೇಶವಿಲ್ಲದೆ ಪಾಪಮಾಡಿದರೆ ಹಾಗೂ ಯೆಹೋವ ದೇವರ ಆಜ್ಞೆಗಳಲ್ಲಿ ನಿಷೇಧಿಸಿದ ಯಾವುದನ್ನಾದರೂ ಮಾಡಿದರೆ, ಅವರು ದೋಷಪರಿಹಾರಕ್ಕಾಗಿ ಈ ಕ್ರಮಗಳನ್ನು ಕೈಗೊಳ್ಳಬೇಕು:

[3] “ ‘ಅಭಿಷಿಕ್ತನಾದ ಯಾಜಕನು ಪಾಪಮಾಡಿ ಜನರ ಮೇಲೆ ಅಪರಾಧವನ್ನು ತಂದರೆ, ತಾನು ಮಾಡಿದ ಪಾಪಕ್ಕಾಗಿ ಕಳಂಕರಹಿತವಾದ ಒಂದು ಎಳೆಯ ಹೋರಿಯನ್ನು ದೋಷಪರಿಹಾರಕ ಬಲಿಯಾಗಿ ಯೆಹೋವ ದೇವರಿಗೆ ಸಮರ್ಪಿಸಬೇಕು.

[4] ಅವನು ಆ ಹೋರಿಯನ್ನು ದೇವದರ್ಶನದ ಗುಡಾರದ ಬಾಗಿಲ ಬಳಿಯಲ್ಲಿ ಯೆಹೋವ ದೇವರ ಎದುರಿಗೆ ತರಬೇಕು. ತನ್ನ ಕೈಯನ್ನು ಆ ಹೋರಿಯ ತಲೆಯ ಮೇಲಿಟ್ಟು, ಆ ಹೋರಿಯನ್ನು ಯೆಹೋವ ದೇವರ ಮುಂದೆ ವಧಿಸಬೇಕು.

[5] ಆಗ ಅಭಿಷಿಕ್ತನಾದ ಯಾಜಕನು ಆ ಹೋರಿಯ ರಕ್ತವನ್ನು ತೆಗೆದುಕೊಂಡು ದೇವದರ್ಶನದ ಗುಡಾರದ ಬಳಿಗೆ ತರಬೇಕು.

[6] ಯಾಜಕನು ತನ್ನ ಬೆರಳನ್ನು ರಕ್ತದಲ್ಲಿ ಅದ್ದಿ, ಯೆಹೋವ ದೇವರ ಮುಂದಿನ ಪವಿತ್ರ ಸ್ಥಳದ ತೆರೆಯ ಮುಂದೆ ರಕ್ತವನ್ನು ಏಳು ಸಾರಿ ಚಿಮುಕಿಸಬೇಕು.

[7] ಯಾಜಕನು ಸ್ವಲ್ಪ ರಕ್ತವನ್ನು ದೇವದರ್ಶನದ ಗುಡಾರದೊಳಗಿರುವ ಸುವಾಸನೆಯುಳ್ಳ ಧೂಪವನ್ನು ಬಲಿಪೀಠದ ಕೊಂಬುಗಳಿಗೆ ಯೆಹೋವ ದೇವರ ಮುಂದೆ ಹಚ್ಚಬೇಕು. ಅಲ್ಲದೆ ಆ ಹೋರಿಯ ಎಲ್ಲಾ ರಕವನ್ನು ದೇವದರ್ಶನದ ಗುಡಾರದ ಬಾಗಿಲ ಬಳಿಯಲ್ಲಿರುವ ದಹನಬಲಿಯ ಪೀಠದ ಅಡಿಯಲ್ಲಿ ಸುರಿಯಬೇಕು.

[8] ಅವನು ಪಾಪ ಪರಿಹಾರದ ಬಲಿಗಾಗಿರುವ ಹೋರಿಯ ಎಲ್ಲಾ ಕೊಬ್ಬನ್ನು ಅದರಿಂದ ತೆಗೆಯಬೇಕು. ಕರುಳುಗಳನ್ನು ಮುಚ್ಚುವ ಕೊಬ್ಬನ್ನೂ,

[9] ಎರಡು ಮೂತ್ರಪಿಂಡಗಳನ್ನು ಪಕ್ಕೆಯ ಬದಿಯಲ್ಲಿರುವ ಕೊಬ್ಬನ್ನೂ, ಮೂತ್ರಪಿಂಡದೊಂದಿಗೂ ಕಾಳಿಜದ ಉತ್ತಮ ಭಾಗವನ್ನೂ ಅವನು ತೆಗೆಯಬೇಕು.

[10] ಸಮಾಧಾನದ ಬಲಿಯನ್ನು ಹೋರಿಯಿಂದ ತೆಗೆದಂತೆಯೇ ತೆಗೆಯಬೇಕು. ಯಾಜಕನು ದಹನಬಲಿಯ ಪೀಠದ ಮೇಲೆ ಅವುಗಳನ್ನು ಸುಡಬೇಕು.

[11] ಆ ಹೋರಿಯ ಚರ್ಮವನ್ನು, ಅದರ ಎಲ್ಲಾ ಮಾಂಸವನ್ನು, ಅದರ ತಲೆ, ಅದರ ಕಾಲುಗಳು, ಅದರ ಕರುಳುಗಳು, ಅದರ ಸಗಣಿಯೊಂದಿಗೆ

[12] ಎಂದರೆ ಇಡೀ ಹೋರಿಯನ್ನು ಪಾಳೆಯದ ಹೊರಗೆ ಶುದ್ಧವಾದ ಸ್ಥಳಕ್ಕೆ ಅಂದರೆ ಬೂದಿ ಚೆಲ್ಲುವ ಸ್ಥಳಕ್ಕೆ ತಂದು, ಕಟ್ಟಿಗೆಯ ಮೇಲೆ ಬೆಂಕಿಯಿಂದ ಅದನ್ನು ಸುಡಬೇಕು.

[13] “ ‘ಮಾಡಬಾರದ ಕೆಲಸಗಳನ್ನು ಯೆಹೋವ ದೇವರ ಆಜ್ಞೆಗಳಿಗೆ ವಿರೋಧವಾಗಿ ಯಾವುದನ್ನಾದರೂ ಇಸ್ರಾಯೇಲರು ಅರಿಯದೆ ಮಾಡಿ ಅಪರಾಧಿಗಳಾಗಿದ್ದರೆ ಮತ್ತು ಅದು ಸಮೂಹಕ್ಕೆ ಕಣ್ಮರೆಯಾಗಿದ್ದರೆ

[14] ಅವರು ಮಾಡಿದ ಪಾಪವು ಗೊತ್ತಾದಾಗ, ಆ ಪಾಪಕ್ಕಾಗಿ ಸಮಾಜವು ಒಂದು ಎಳೆಯ ಹೋರಿಯನ್ನು ದೇವದರ್ಶನದ ಗುಡಾರದ ಮುಂದೆ ಪಾಪ ಪರಿಹಾರದ ಬಲಿಯಾಗಿ ತರಬೇಕು.

[15] ಸಮಾಜದ ಹಿರಿಯರು ಯೆಹೋವ ದೇವರ ಮುಂದೆ ಆ ಹೋರಿಯ ತಲೆಯ ಮೇಲೆ ತಮ್ಮ ಕೈಗಳನ್ನಿಡಬೇಕು. ಆ ಹೋರಿಯನ್ನು ಯೆಹೋವ ದೇವರ ಮುಂದೆ ವಧಿಸಬೇಕು.

[16] ಅಭಿಷಿಕ್ತನಾದ ಯಾಜಕನು ಆ ಹೋರಿಯ ಸ್ವಲ್ಪ ರಕ್ತವನ್ನು ದೇವದರ್ಶನದ ಗುಡಾರದೊಳಗೆ ತಂದು,

[17] ಅದರಲ್ಲಿ ಬೆರಳನ್ನು ಅದ್ದಿ ಅದನ್ನು ಯೆಹೋವ ದೇವರ ಮುಂದೆ ಅಂದರೆ ತೆರೆಯ ಮುಂದೆ ಏಳು ಸಾರಿ ಚಿಮುಕಿಸಬೇಕು.

[18] ಇದಲ್ಲದೆ ಅವನು ಸ್ವಲ್ಪ ರಕ್ತವನ್ನು ದೇವದರ್ಶನದ ಗುಡಾರದೊಳಗಿರುವ ಬಲಿಪೀಠದ ಕೊಂಬುಗಳಿಗೆ ಯೆಹೋವ ದೇವರ ಎದುರಿನಲ್ಲಿ ಹಚ್ಚಿ, ಉಳಿದ ಎಲ್ಲಾ ರಕ್ತವನ್ನು ದೇವದರ್ಶನದ ಗುಡಾರದೊಳಗಿರುವ ದಹನಬಲಿಯ ಪೀಠದ ಅಡಿಯಲ್ಲಿ ಸುರಿಯಬೇಕು.

[19] ಅವನು ಅದರ ಎಲ್ಲಾ ಕೊಬ್ಬನ್ನೂ ತೆಗೆದುಕೊಂಡು ಬಲಿಪೀಠದ ಮೇಲೆ ಸುಡಬೇಕು.

[20] ಪಾಪ ಪರಿಹಾರದ ಬಲಿಗಾಗಿ ಇರುವ ಆ ಹೋರಿಗೆ ಮಾಡಿದಂತೆಯೇ, ಈ ಹೋರಿಗೂ ಮಾಡಬೇಕು. ಇದಲ್ಲದೆ ಯಾಜಕನು ಅವರಿಗಾಗಿ ಪ್ರಾಯಶ್ಚಿತ್ತ ಮಾಡಬೇಕು, ಆಗ ಅವರಿಗೆ ಕ್ಷಮಾಪಣೆಯಾಗುವುದು.

[21] ಅವನು ಮೊದಲನೆಯ ಹೋರಿಯನ್ನು ಸುಟ್ಟಂತೆಯೇ, ಈ ಹೋರಿಯನ್ನು ಪಾಳೆಯದ ಆಚೆಗೆ ತೆಗೆದುಕೊಂಡುಹೋಗಿ ಸುಡಬೇಕು. ಅದು ಸಮಾಜಕ್ಕೆ ಪಾಪ ಪರಿಹಾರದ ಬಲಿಯಾಗಿ ಇರುವುದು.

[22] “ ‘ಒಬ್ಬ ಅಧಿಪತಿಯು ದೇವರಾದ ಯೆಹೋವ ದೇವರ ಆಜ್ಞೆಗಳಿಗೆ ವಿರೋಧವಾಗಿ ತಿಳಿಯದೆ ಪಾಪಮಾಡಿ ಅಪರಾಧಿಯಾಗಿದ್ದರೆ,

[23] ಇಲ್ಲವೆ ಅವನು ಮಾಡಿದ ಆ ಪಾಪವು ಅವನಿಗೆ ತಿಳಿದುಬಂದರೆ, ಅವನು ಬಲಿಗಾಗಿ ಹೋತಗಳಲ್ಲಿ ಕಳಂಕರಹಿತವಾದ ಒಂದು ಹೋತವನ್ನು ತಂದು ಸಮರ್ಪಿಸಬೇಕು.

[24] ಅವನು ತನ್ನ ಕೈಯನ್ನು ಆ ಹೋತದ ತಲೆಯ ಮೇಲೆ ಇಟ್ಟು, ಯೆಹೋವ ದೇವರ ಮುಂದೆ ದಹನಬಲಿಯನ್ನು ವಧಿಸುವ ಸ್ಥಳದಲ್ಲಿ ಅದನ್ನು ವಧಿಸಬೇಕು. ಅದು ಪಾಪ ಪರಿಹಾರದ ಬಲಿಯಾಗಿರುವುದು.

[25] ಯಾಜಕನು ಪಾಪ ಪರಿಹಾರದ ಬಲಿಯ ರಕ್ತವನ್ನು ತನ್ನ ಬೆರಳಿನಿಂದ ತೆಗೆದುಕೊಂಡು, ದಹನಬಲಿಯ ಪೀಠದ ಮೇಲೆ ಅಡಿಯಲ್ಲಿ ಹೊಯ್ಯಬೇಕು.

[26] ಅವರು ಸಮಾಧಾನದ ಕೊಬ್ಬಿನಂತೆಯೇ ಅದರ ಎಲ್ಲಾ ಕೊಬ್ಬನ್ನು ಬಲಿಪೀಠದ ಮೇಲೆ ಸುಡಬೇಕು. ಯಾಜಕನು ಅವನ ಪಾಪದ ವಿಷಯದಲ್ಲಿ ಅವನಿಗೆ ಪ್ರಾಯಶ್ಚಿತ್ತ ಮಾಡಬೇಕು. ಆಗ ಅವನಿಗೆ ಕ್ಷಮೆ ದೊರಕುವುದು.

[27] “ ‘ಸಾಮಾನ್ಯ ಜನರಲ್ಲಿ ಯಾವನಾದರೂ ಮಾಡಬಾರದವುಗಳನ್ನು ಯೆಹೋವ ದೇವರ ಆಜ್ಞೆಗಳಿಗೆ ವಿರೋಧವಾಗಿ ತಿಳಿಯದೆ ಪಾಪಮಾಡಿ ಅಪರಾಧಿಯಾಗಿದ್ದರೆ,

[28] ಇಲ್ಲವೆ ಅವರು ಮಾಡಿದ ಪಾಪವು ಅವರಿಗೆ ತಿಳಿದುಬಂದರೆ, ಅವರು ಪಾಪ ಪರಿಹಾರಕ್ಕಾಗಿ ಕಳಂಕರಹಿತವಾದ ಒಂದು ಹೆಣ್ಣು ಮೇಕೆಯನ್ನು ತಂದು ಸಮರ್ಪಿಸಬೇಕು.

[29] ಅವರು ತಮ್ಮ ಕೈಯನ್ನು ಪಾಪದ ಬಲಿಯ ಮೇಲಿಟ್ಟು, ಆ ಪಾಪ ಪರಿಹಾರದ ಬಲಿಯನ್ನು ದಹನಬಲಿಯ ಸ್ಥಳದಲ್ಲಿ ವಧಿಸಬೇಕು.

[30] ಆಗ ಯಾಜಕನು ತನ್ನ ಬೆರಳಿನಿಂದ ಅದರ ರಕ್ತವನ್ನು ತೆಗೆದುಕೊಂಡು, ದಹನಬಲಿಯ ಪೀಠದ ಕೊಂಬುಗಳಿಗೆ ಹಚ್ಚಿ, ಉಳಿದ ಎಲ್ಲಾ ರಕ್ತವನ್ನು ಆ ಬಲಿಪೀಠದ ಅಡಿಯಲ್ಲಿ ಸುರಿಯಬೇಕು.

[31] ಅವನು ಸಮಾಧಾನ ಬಲಿಯ ಕೊಬ್ಬನ್ನು ತೆಗೆದಂತೆ, ಅದರ ಎಲ್ಲಾ ಕೊಬ್ಬನ್ನು ತೆಗೆಯಬೇಕು. ಯಾಜಕನು ಅದನ್ನು ಬಲಿಪೀಠದ ಮೇಲೆ ಯೆಹೋವ ದೇವರಿಗೆ ಸುವಾಸನೆಯಾಗಿ ಸುಡಬೇಕು. ಇದಲ್ಲದೆ ಯಾಜಕನು ಅವನಿಗಾಗಿ ಪ್ರಾಯಶ್ಚಿತ್ತ ಮಾಡಬೇಕು, ಆಗ ಅವನಿಗೆ ಕ್ಷಮಾಪಣೆಯಾಗುವುದು.

[32] “ ‘ಯಾರಾದರೂ ಪಾಪ ಪರಿಹಾರದ ಬಲಿಗಾಗಿ ಒಂದು ಕುರಿಮರಿಯನ್ನು ತರುವುದಾದರೆ, ಕಳಂಕರಹಿತವಾದ ಒಂದು ಹೆಣ್ಣನ್ನು ತರಬೇಕು.

[33] ಅವರು ಪಾಪ ಪರಿಹಾರದ ಬಲಿಯ ತಲೆಯ ಮೇಲೆ ತಮ್ಮ ಕೈಯನ್ನು ಇಟ್ಟು, ದೋಷಪರಿಹಾರ ಬಲಿಯಾಗಿ ದಹನಬಲಿಯನ್ನು ವಧಿಸುವ ಸ್ಥಳದಲ್ಲಿ ವಧಿಸಬೇಕು.

[34] ಯಾಜಕನು ಪಾಪ ಪರಿಹಾರದ ಬಲಿಯ ರಕ್ತವನ್ನು ತನ್ನ ಬೆರಳಿನಿಂದ ತೆಗೆದುಕೊಂಡು, ದಹನಬಲಿಯ ಪೀಠದ ಕೊಂಬುಗಳಿಗೆ ಹಚ್ಚಬೇಕು. ಉಳಿದ ಎಲ್ಲಾ ರಕ್ತವನ್ನು ಬಲಿಪೀಠದ ಅಡಿಯಲ್ಲಿ ಹೊಯ್ಯಬೇಕು.

[35] ಇದಲ್ಲದೆ ಸಮಾಧಾನ ಬಲಿಗಳ ಕುರಿಮರಿಯ ಕೊಬ್ಬಿನಂತೆಯೇ, ಅದರ ಎಲ್ಲಾ ಕೊಬ್ಬನ್ನೂ ತೆಗೆಯಬೇಕು. ಯಾಜಕನು ಬೆಂಕಿಯ ಸಮರ್ಪಣೆಗಳನ್ನು ಯೆಹೋವ ದೇವರಿಗೆ ಮಾಡಿದಂತೆಯೇ, ಬಲಿಪೀಠದ ಮೇಲೆ ಅವುಗಳನ್ನು ಸುಡಬೇಕು. ಯಾಜಕನು ಅವನು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಬೇಕು, ಆಗ ಅವನಿಗೆ ಕ್ಷಮಾಪಣೆಯಾಗುವುದು.

ಯಾಜಕಕಾಂಡ — Chapters