Skip to content
Opens in a new window
Listen to this chapter • 7:42

[1] “ ‘ಇವು ಪ್ರಾಯಶ್ಚಿತ್ತ ಬಲಿಯ ನಿಯಮಗಳು: ಇದು ಮಹಾಪರಿಶುದ್ಧವಾದದ್ದು.

[2] ದಹನಬಲಿಯನ್ನು ವಧಿಸಿದ ಸ್ಥಳದಲ್ಲಿಯೇ ಪ್ರಾಯಶ್ಚಿತ್ತದ ಬಲಿಯನ್ನು ವಧಿಸಬೇಕು. ಅದರ ರಕ್ತವನ್ನು ಬಲಿಪೀಠದ ಮೇಲೆ ಸುತ್ತಲೂ ಚಿಮುಕಿಸಬೇಕು.

[3] ಅದರ ಎಲ್ಲಾ ಕೊಬ್ಬನ್ನೂ, ಅಂದರೆ ಬಾಲದ ಕೊಬ್ಬನ್ನೂ ಕರುಳಿನ ಸುತ್ತಲಿರುವ ಕೊಬ್ಬನ್ನು,

[4] ಬದಿಯಲ್ಲಿರುವ ಎರಡು ಮೂತ್ರ ಜನಕಾಂಗಗಳನ್ನೂ, ಅವುಗಳ ಮೇಲಿರುವ ಕೊಬ್ಬನ್ನೂ, ಪಕ್ಕೆಯ ಬದಿಯಲ್ಲಿಯ ಪೊರೆಯನ್ನೂ ಮೂತ್ರಜನಕಾಂಗಗಳೊಂದಿಗೆ ತೆಗೆದುಕೊಂಡು ಅರ್ಪಿಸಬೇಕು.

[5] ಆಗ ಯಾಜಕನು ಅವುಗಳನ್ನು ಬೆಂಕಿಯಿಂದ ಯೆಹೋವ ದೇವರಿಗೆ ಸಮರ್ಪಿಸುವ ಬಲಿಪೀಠದ ಮೇಲೆ ಸುಡಬೇಕು. ಇದು ಪ್ರಾಯಶ್ಚಿತ್ತದ ಬಲಿಯಾಗಿದೆ.

[6] ಯಾಜಕರಲ್ಲಿ ಪ್ರತಿಯೊಬ್ಬ ಪುರುಷನು ಅದನ್ನು ತಿನ್ನಬೇಕು. ಅದನ್ನು ಪರಿಶುದ್ಧವಾದ ಸ್ಥಳದಲ್ಲಿ ತಿನ್ನಬೇಕು. ಅದು ಮಹಾಪರಿಶುದ್ಧವಾದದ್ದು.

[7] “ ‘ಪಾಪ ಪರಿಹಾರದ ಬಲಿಯ ಹಾಗೆಯೇ ಪ್ರಾಯಶ್ಚಿತ್ತದ ಬಲಿಯೂ ಆಗಿದೆ. ಅವುಗಳಿಗೆ ಇರುವುದು ಒಂದೇ ನಿಯಮ, ಅವುಗಳಿಂದ ಪ್ರಾಯಶ್ಚಿತ್ತ ಮಾಡುವ ಯಾಜಕನೇ ಅವುಗಳನ್ನು ತೆಗೆದುಕೊಳ್ಳಬೇಕು.

[8] ದಹನಬಲಿಯನ್ನು ಸಮರ್ಪಿಸುವ ಯಾಜಕನು ತಾನು ಸಮರ್ಪಿಸಿದ ದಹನಬಲಿಯ ತೊಗಲನ್ನು ತಾನೇ ತೆಗೆದುಕೊಳ್ಳಬೇಕು.

[9] ಒಲೆಯಲ್ಲಿ ಬೇಯಿಸಿದ ಬಾಂಡ್ಲಿಯಲ್ಲಿಯೂ ಬೋಗುಣಿಯಲ್ಲಿಯೂ ತಯಾರಿಸಿದ ಎಲ್ಲಾ ಧಾನ್ಯ ಸಮರ್ಪಣೆಯು ಸಮರ್ಪಿಸಿದ ಯಾಜಕನದಾಗಿರಬೇಕು.

[10] ಎಣ್ಣೆಯಿಂದ ಮಿಶ್ರಿತವಾದ ಮತ್ತು ಒಣಗಿದ್ದ ಪ್ರತಿಯೊಂದು ಧಾನ್ಯ ಸಮರ್ಪಣೆಯನ್ನೂ ಆರೋನನ ಪುತ್ರರು ಸರಿ ಸಮಾನವಾಗಿ ತೆಗೆದುಕೊಳ್ಳಬೇಕು.

[11] “ ‘ಅವನು ಯೆಹೋವ ದೇವರಿಗೆ ಸಮರ್ಪಿಸಬೇಕಾದ ಸಮಾಧಾನದ ಬಲಿಗಳ ನಿಯಮವು ಇದೇ.

[12] “ ‘ಅವನು ಉಪಕಾರ ಸ್ತುತಿಗಾಗಿ ಅರ್ಪಿಸುವುದಾದರೆ, ಕೃತಜ್ಞತಾಸ್ತುತಿ ಬಲಿಯನ್ನು ಎಣ್ಣೆ ಬೆರೆಸಿದ ಹುಳಿಯಿಲ್ಲದ ರೊಟ್ಟಿಗಳೊಂದಿಗೆ, ಎಣ್ಣೆ ಹೊಯ್ದ ಹುಳಿಯಿಲ್ಲದ ದೋಸೆಗಳೊಂದಿಗೆ ಮತ್ತು ನಯವಾದ ಹಿಟ್ಟಿನ ಎಣ್ಣೆ ಬೆರೆಸಿದ ಹುರಿದ ರೊಟ್ಟಿಗಳೊಂದಿಗೆ ಸಮರ್ಪಿಸಬೇಕು.

[13] ರೊಟ್ಟಿಗಳಲ್ಲದೆ, ಅವನು ಸಮಾಧಾನದ ಬಲಿಗಳನ್ನು ಉಪಕಾರಸ್ತುತಿ ಯಜ್ಞದೊಂದಿಗೆ ತನ್ನ ಬಲಿಗಾಗಿ ಹುಳಿರೊಟ್ಟಿಗಳನ್ನು ಸಮರ್ಪಿಸಬೇಕು.

[14] ಅವನು ಇಡೀ ಕಾಣಿಕೆಯಲ್ಲಿ ಒಂದನ್ನು ಕಾಣಿಕೆಯನ್ನಾಗಿ ಯೆಹೋವ ದೇವರಿಗೆ ಅರ್ಪಿಸಬೇಕು. ಅದು ಸಮಾಧಾನ ಬಲಿಗಳ ರಕ್ತವನ್ನು ಚಿಮುಕಿಸುವ ಯಾಜಕನದ್ದಾಗಬೇಕು.

[15] ಉಪಕಾರ ಸ್ತುತಿಗಾಗಿ ಅವನು ಸಮಾಧಾನ ಬಲಿಯ ಮಾಂಸವನ್ನು ಅರ್ಪಿಸಲಾದ ದಿನವೇ ತಿನ್ನಬೇಕು. ಅವನು ಅದರಲ್ಲಿ ಬೆಳಗಿನವರೆಗೆ ಯಾವುದನ್ನೂ ಉಳಿಸಬಾರದು.

[16] “ ‘ಆದರೆ ಅವನ ಯಜ್ಞ ಸಮರ್ಪಣೆಯು ಒಂದು ಹರಕೆಯಾಗಿದ್ದರೆ ಇಲ್ಲವೆ ಸ್ವಯಿಚ್ಛೆಯಾದ ಸಮರ್ಪಣೆಯಾಗಿದ್ದರೆ ಅವನು ತನ್ನ ಯಜ್ಞವನ್ನು ಅರ್ಪಿಸಿದ ದಿನದಲ್ಲಿಯೇ ಅದನ್ನು ತಿನ್ನಬೇಕು. ಅದರಲ್ಲಿ ಉಳಿದದ್ದನ್ನು ಮಾರನೆಯ ದಿನದಲ್ಲಿ ಸಹ ತಿನ್ನಬಹುದು.

[17] ಆದರೆ ಉಳಿದಿರುವ ಯಜ್ಞದ ಮಾಂಸವನ್ನು ಮೂರನೆಯ ದಿನದಲ್ಲಿ ಬೆಂಕಿಯಿಂದ ಸುಡಬೇಕು.

[18] ತನ್ನ ಸಮಾಧಾನ ಬಲಿಯ ಯಜ್ಞದ ಮಾಂಸದಲ್ಲಿ ಯಾವ ಭಾಗವನ್ನಾದರೂ ಮೂರನೆಯ ದಿನದಲ್ಲಿ ತಿಂದರೆ ಅದು ಬಲಿಯಾಗುವುದಿಲ್ಲ, ಇಲ್ಲವೆ ಅರ್ಪಿಸುವವನ ಲೆಕ್ಕಕ್ಕೆ ಸೇರುವುದಿಲ್ಲ. ಅದು ಅಶುಚಿಯಾಗಿರುವುದು, ಅದನ್ನು ತಿನ್ನುವವನು ತನ್ನ ಅಪರಾಧವನ್ನು ಹೊರುವನು.

[19] “ ‘ಅಶುದ್ಧವಾದ ಯಾವುದನ್ನಾದರೂ ಮುಟ್ಟಿದ ಮಾಂಸವನ್ನು ತಿನ್ನಬಾರದು, ಅದನ್ನು ಬೆಂಕಿಯಿಂದ ಸುಟ್ಟುಬಿಡಬೇಕು. ಮಾಂಸದ ವಿಷಯದಲ್ಲಿ ಶುದ್ಧವಾಗಿರುವವರೆಲ್ಲರೂ ಅದರಲ್ಲಿ ತಿನ್ನಬಹುದು.

[20] ಆದರೆ ಯೆಹೋವ ದೇವರಿಗೆ ಸಂಬಂಧಪಟ್ಟ ಸಮಾಧಾನದ ಬಲಿಯ ಯಜ್ಞದ ಮಾಂಸವನ್ನು ಯಾವನಾದರೂ ಅಶುದ್ಧನಾಗಿದ್ದು ತಿನ್ನುವನೋ, ಅಂಥವರನ್ನು ತಮ್ಮ ಜನರಿಂದ ತೆಗೆದುಹಾಕಬೇಕು.

[21] ಇದಲ್ಲದೆ ಯಾವನಾದರೂ ಮನುಷ್ಯನ ಅಶುದ್ಧ ವಸ್ತುವನ್ನೇ ಇಲ್ಲವೆ ಯಾವುದೇ ಹೊಲೆಯಾದ ಅಶುದ್ಧವಸ್ತುವನ್ನಾಗಲಿ ಮುಟ್ಟಿದರೆ ಮತ್ತು ಯೆಹೋವ ದೇವರಿಗೆ ಸಂಬಂಧಿಸಿದ ಸಮಾಧಾನ ಬಲಿಯ ಯಜ್ಞದ ಮಾಂಸವನ್ನು ತಿಂದರೆ ಅವನು ತನ್ನ ಕುಲದಿಂದ ಬಹಿಷ್ಕೃತನಾಗಬೇಕು,’ ” ಎಂದರು.

[22] ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ,

[23] “ಇಸ್ರಾಯೇಲರೊಂದಿಗೆ ಮಾತನಾಡಿ ಹೀಗೆ ಹೇಳು: ‘ನೀವು ಎತ್ತು ಇಲ್ಲವೆ ಕುರಿ ಇಲ್ಲವೆ ಮೇಕೆಗಳ ಕೊಬ್ಬನ್ನು ತಿನ್ನಬಾರದು.

[24] ತಾನಾಗಿಯೇ ಸತ್ತ ಪ್ರಾಣಿಯ ಕೊಬ್ಬನ್ನೂ, ಕಾಡುಮೃಗಗಳು ಸೀಳಿದ್ದರ ಕೊಬ್ಬನ್ನೂ ಬೇರೆ ಯಾವುದಕ್ಕಾದರೂ ಉಪಯೋಗಿಸಬಹುದು. ಆದರೆ ನೀವು ಅದನ್ನು ಎಷ್ಟು ಮಾತ್ರವೂ ತಿನ್ನಬಾರದು.

[25] ಏಕೆಂದರೆ ಮನುಷ್ಯರು ಯೆಹೋವ ದೇವರಿಗೆ ಬೆಂಕಿಯಿಂದ ಸಮರ್ಪಿಸಿದ ಬಲಿ, ಪ್ರಾಣಿಯ ಕೊಬ್ಬನ್ನು ಯಾವನಾದರೂ ತಿಂದರೆ, ಅಂಥವರನ್ನು ತಮ್ಮ ಜನರಿಂದ ತೆಗೆದುಹಾಕಬೇಕು.

[26] ಇದಲ್ಲದೆ ನೀವು ಯಾವ ತರದ ರಕ್ತವನ್ನೂ ಅಂದರೆ ಅದು ಪಕ್ಷಿಯದಾಗಿರಲಿ, ಪ್ರಾಣಿಯದಾಗಿರಲಿ ನಿಮ್ಮ ಯಾವ ನಿವಾಸಗಳಲ್ಲಿಯೂ ತಿನ್ನಬಾರದು.

[27] ಯಾವುದೇ ತರದ ರಕ್ತವನ್ನು ತಿಂದವನು ಯಾವನೇ ಆಗಿರಲಿ, ಅಂಥವನನ್ನು ತನ್ನ ಜನರಿಂದ ತೆಗೆದುಹಾಕಬೇಕು.’ ”

[28] ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ,

[29] “ನೀನು ಇಸ್ರಾಯೇಲರೊಂದಿಗೆ ಮಾತನಾಡಿ ಹೀಗೆ ಹೇಳು: ‘ಯೆಹೋವ ದೇವರಿಗೆ ಸಮಾಧಾನ ಬಲಿಯನ್ನು ಅರ್ಪಿಸುವವನು, ಸಮಾಧಾನ ಬಲಿಯ ತನ್ನ ಕಾಣಿಕೆಯನ್ನು ಯೆಹೋವ ದೇವರಿಗೆ ತರಬೇಕು.

[30] ಅವನು ಯೆಹೋವ ದೇವರಿಗೆ ಬೆಂಕಿಯಿಂದ ಮಾಡಿದ ಸಮರ್ಪಣೆಗಳನ್ನು ತನ್ನ ಸ್ವಂತ ಕೈಗಳಿಂದಲೇ ತರಬೇಕು. ಯೆಹೋವ ದೇವರ ಮುಂದೆ ನೈವೇದ್ಯರೂಪವಾಗಿ ನಿವಾಳಿಸುವದಕ್ಕೆ ಕೊಬ್ಬಿನೊಂದಿಗೆ ಎದೆಯನ್ನು ತರಬೇಕು.

[31] ಯಾಜಕನು ಆ ಕೊಬ್ಬನ್ನು ಬಲಿಪೀಠದ ಮೇಲೆ ಸುಡಬೇಕು. ಆದರೆ ಎದೆಯು ಆರೋನನ ಮತ್ತು ಅವನ ಮಕ್ಕಳಿಗೆ ಸೇರುವುದು.

[32] ಬಲಭುಜವನ್ನು ನೀವು ಯಾಜಕನಿಗೆ ಸಮಾಧಾನದ ಬಲಿಯಾಗಿ ಕೊಡಬೇಕು.

[33] ಸಮಾಧಾನದ ಬಲಿಗಳ ರಕ್ತವನ್ನೂ, ಕೊಬ್ಬನ್ನೂ ಸಮರ್ಪಿಸುವ ಆರೋನನ ಪುತ್ರರಲ್ಲಿ ಒಬ್ಬನು ಭುಜದ ಬಲಭಾಗವನ್ನು ತನ್ನ ಪಾಲಾಗಿ ತೆಗೆದುಕೊಳ್ಳಲಿ.

[34] ಏಕೆಂದರೆ ನೈವೇದ್ಯ ಮಾಡಿದ ಎದೆಯನ್ನು ಮತ್ತು ನಿವಾಳಿಸುವ ಭುಜವನ್ನು ಇಸ್ರಾಯೇಲಿನ ಮಕ್ಕಳ ಸಮಾಧಾನದ ಬಲಿಗಳ ಯಜ್ಞಗಳಿಂದ ನಾನು ತೆಗೆದುಕೊಂಡು ಯಾಜಕನಾದ ಆರೋನನಿಗೂ, ಅವನ ಪುತ್ರರಿಗೂ ಇಸ್ರಾಯೇಲರಲ್ಲಿ ಒಂದು ನಿರಂತರವಾದ ಕಟ್ಟಳೆಯಾಗಿ ಅವರಿಗೆ ಕೊಟ್ಟಿದ್ದೇನೆ.’ ”

[35] ಆರೋನನ ಅಭಿಷೇಕದ ಮತ್ತು ಅವನ ಮಕ್ಕಳ ಅಭಿಷೇಕದ ದಿನದಲ್ಲಿ ಅವರು ತಮ್ಮನ್ನು ಯಾಜಕನ ಉದ್ಯೋಗದ ಸೇವೆಗಾಗಿ ಯೆಹೋವ ದೇವರಿಗೆ ಒಪ್ಪಿಸಿಕೊಳ್ಳುವಾಗ, ಯೆಹೋವ ದೇವರಿಗೆ ಬೆಂಕಿಯಿಂದ ಸಮರ್ಪಿಸುವ ಬಲಿಗಳಲ್ಲಿ ಇರುವ ಪಾಲು ಇದೆ.

[36] ಅವರನ್ನು ಅಭಿಷೇಕಿಸಿದ ದಿನದಲ್ಲಿ ಇದನ್ನು ಯೆಹೋವ ದೇವರು ಇಸ್ರಾಯೇಲರಿಗೆ ಅವರ ಎಲ್ಲಾ ಸಂತತಿಗಳಲ್ಲಿ ಒಂದು ನಿರಂತರವಾದ ಕಟ್ಟಳೆಯಾಗಿರುವಂತೆ ಅವರಿಗೆ ಆಜ್ಞಾಪಿಸಿದ್ದಾರೆ.

[37] ದಹನಬಲಿ, ಧಾನ್ಯ ಬಲಿ, ಪಾಪ ಪರಿಹಾರದ ಬಲಿ, ಪ್ರಾಯಶ್ಚಿತ್ತದ ಬಲಿ, ಪ್ರತಿಷ್ಠೆಗಳ ಮತ್ತು ಸಮಾಧಾನದ ಬಲಿಗಳ ಉಪದೇಶಗಳು ಇವೇ.

[38] ಇವುಗಳನ್ನು ಯೆಹೋವ ದೇವರು ಇಸ್ರಾಯೇಲರಿಗೆ ಅವರು ತಮ್ಮ ಕಾಣಿಕೆಗಳನ್ನು ಸಮರ್ಪಿಸುವಂತೆ ಆಜ್ಞಾಪಿಸಿದ ದಿನದಲ್ಲಿ ಸೀನಾಯಿ ಮರುಭೂಮಿಯ ಸೀನಾಯಿ ಬೆಟ್ಟದಲ್ಲಿ ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದರು.

ಯಾಜಕಕಾಂಡ — Chapters