Skip to content
Opens in a new window
Listen to this chapter • 5:57

[1] ಯೆಹೋವನು ಮೋಶೆಯೊಂದಿಗೆ ಮಾತನಾಡಿ,

[2] “ನೀನು ಇಸ್ರಾಯೇಲರ ಸಮೂಹದವರಿಗೆ ಹೀಗೆ ಆಜ್ಞಾಪಿಸಬೇಕು, ‘ನಿಮ್ಮ ದೇವರಾದ ಯೆಹೋವನೆಂಬ ನಾನು ಪರಿಶುದ್ಧನಾಗಿರುವುದರಿಂದ ನೀವೂ ಪರಿಶುದ್ಧರಾಗಿರಬೇಕು.

[3] “‘ಪ್ರತಿಯೊಬ್ಬನು ತನ್ನ ತಾಯಿತಂದೆಗಳ ವಿಷಯದಲ್ಲಿ ಭಯಭಕ್ತಿಯಿಂದ ನಡೆದುಕೊಳ್ಳಬೇಕು. ನಾನು ನೇಮಿಸಿರುವ ಸಬ್ಬತ್ ದಿನಗಳನ್ನು ಆಚರಿಸಬೇಕು. ನಾನು ನಿಮ್ಮ ದೇವರಾದ ಯೆಹೋವನು.

[4] “‘ಸುಳ್ಳುದೇವರುಗಳ ಕಡೆಗೆ ತಿರುಗಿಕೊಳ್ಳಬಾರದು; ದೇವರೆಂದು ಎರಕದ ವಿಗ್ರಹಗಳನ್ನು ಮಾಡಿಕೊಳ್ಳಬಾರದು. ನಾನು ನಿಮ್ಮ ದೇವರಾದ ಯೆಹೋವನು.

[5] “‘ಸಮಾಧಾನಯಜ್ಞಗಳನ್ನು ಯೆಹೋವನಿಗೆ ಸಮರ್ಪಿಸುವಾಗ ಆತನಿಗೆ ಮೆಚ್ಚಿಕೆಯಾದ ರೀತಿಯಲ್ಲಿ ಸಮರ್ಪಿಸಬೇಕು.

[6] ನೀವು ಮಾಡುವ ಯಜ್ಞದ ಮಾಂಸವನ್ನು ಆ ದಿನದಲ್ಲಿಯಾಗಲಿ ಇಲ್ಲವೇ ಮರುದಿನದಲ್ಲಿಯಾಗಲಿ ಊಟಮಾಡಬೇಕು. ಮೂರನೆಯ ದಿನದವರೆಗೆ ಏನಾದರೂ ಉಳಿದರೆ ಅದನ್ನು ಬೆಂಕಿಯಿಂದ ಸುಟ್ಟುಬಿಡಬೇಕು.

[7] ಮೂರನೆಯ ದಿನದ ತನಕ ಉಳಿದದ್ದು ಹೇಯವಾದುದರಿಂದ ಅದರಲ್ಲಿ ಏನಾದರೂ ತಿಂದರೆ ಆ ಯಜ್ಞವು ಯೆಹೋವನಿಗೆ ಅಂಗೀಕಾರವಾಗುವುದೇ ಇಲ್ಲ.

[8] ಅದರಲ್ಲಿ ಏನಾದರೂ ತಿಂದವನು ಯೆಹೋವನ ಪವಿತ್ರ ದ್ರವ್ಯವನ್ನು ಹೊಲೆಮಾಡಿದವನಾದುದರಿಂದ ತನ್ನ ಪಾಪದ ಫಲವನ್ನು ಅನುಭವಿಸಬೇಕು; ಅವನನ್ನು ಕುಲದಿಂದ ಹೊರಗೆ ಹಾಕಬೇಕು.

[9] “‘ನೀವು ಪೈರುಗಳನ್ನು ಕೊಯ್ಯುವಾಗ ಹೊಲಗಳ ಮೂಲೆಗಳಲ್ಲಿ ಇರುವುದನ್ನೆಲ್ಲಾ ಕೊಯ್ಯಬಾರದು ಮತ್ತು ಕೊಯ್ದಾಗ ಹಕ್ಕಲಾಯಬಾರದು.

[10] ದ್ರಾಕ್ಷಿಯ ತೋಟಗಳಲ್ಲಿಯೂ ಹಕ್ಕಲಾಯಬಾರದು; ಉದುರಿದ ಹಣ್ಣುಗಳನ್ನು ಆರಿಸಿಕೊಳ್ಳದೆ ಬಡವರಿಗೂ ಮತ್ತು ಪರದೇಶಿಗಳಿಗೂ ಬಿಟ್ಟುಬಿಡಬೇಕು. ನಾನು ನಿಮ್ಮ ದೇವರಾದ ಯೆಹೋವನು.

[11] “‘ಕದಿಯಬಾರದು, “‘ಮೋಸಮಾಡಬಾರದು, “‘ಒಬ್ಬರಿಗೊಬ್ಬರು ಸುಳ್ಳು ಹೇಳಬಾರದು.

[12] “‘ನನ್ನ ಹೆಸರಿನ ಮೇಲೆ ಸುಳ್ಳಾಣೆಯಿಟ್ಟು ನಿಮ್ಮ ದೇವರ ನಾಮವನ್ನು ಅಪಕೀರ್ತಿಗೆ ಒಳಪಡಿಸಬಾರದು. ನಾನು ಯೆಹೋವನು.

[13] “‘ಮತ್ತೊಬ್ಬನನ್ನು ಬಲಾತ್ಕರಿಸಬಾರದು ಅಥವಾ ಅವನ ಸೊತ್ತನ್ನು ಅಪಹರಿಸಬಾರದು. ಅವನ ಕೂಲಿಯನ್ನು ಮರುದಿನದ ವರೆಗೆ ನಿಮ್ಮ ಬಳಿಯಲ್ಲಿ ಇಟ್ಟುಕೊಳ್ಳಬಾರದು.

[14] ಕಿವುಡರನ್ನು ದೂಷಿಸಬಾರದು; ಕುರುಡರು ನಡೆಯುವ ದಾರಿಯಲ್ಲಿ ಅವರ ಕಾಲು ಎಡವುವಂತೆ ಕಲ್ಲನ್ನು ಇಡಬಾರದು; ನಿಮ್ಮ ದೇವರಿಗೆ ಭಯಭಕ್ತಿಯಿಂದ ನಡೆದುಕೊಳ್ಳಬೇಕು. ನಾನು ಯೆಹೋವನು.

[15] “‘ವ್ಯಾಜ್ಯವನ್ನು ವಿಚಾರಿಸುವಾಗ ಅನ್ಯಾಯವಾದ ತೀರ್ಪನ್ನು ಮಾಡಬಾರದು. ಬಡವನ ಬಡತನವನ್ನಾಗಲಿ ಅಥವಾ ದೊಡ್ಡ ಮನುಷ್ಯನ ಘನತೆಯನ್ನಾಗಲಿ ಲಕ್ಷ್ಯಮಾಡದೆ, ಪಕ್ಷಪಾತವಿಲ್ಲದೆ ತೀರ್ಪನ್ನು ಕೊಡಬೇಕು.

[16] “‘ಪರಿಚಯವುಳ್ಳವರಲ್ಲಿ ಒಬ್ಬರ ಮೇಲೊಬ್ಬರು ಚಾಡಿಹೇಳಬಾರದು. ನೆರೆಯವನಿಗೆ ಮರಣ ಶಿಕ್ಷೆಯಾಗಲೇಬೇಕು ಎಂದು ಹಠ ಹಿಡಿಯಬಾರದು. ನಾನು ಯೆಹೋವನು.

[17] “‘ಸಹೋದರನ ವಿಷಯವಾಗಿ ಮನಸ್ಸಿನಲ್ಲಿ ದ್ವೇಷವನ್ನು ಇಟ್ಟುಕೊಳ್ಳಬಾರದು. ನೆರೆಯವನ ದೋಷಕ್ಕೆ ನೀವು ಒಳಗಾಗದಂತೆ ಅವನ ತಪ್ಪನ್ನು ಅವನಿಗೆ ತಿಳಿಸಲೇಬೇಕು.

[18] “‘ನಿಮ್ಮ ಸ್ವಜನರಲ್ಲಿ ಯಾರಿಗೂ ಕೇಡಿಗೆ ಕೇಡನ್ನು ಮಾಡದೆ, ಮನಸ್ಸಿನಲ್ಲಿ ಮತ್ಸರವನ್ನು ಇಟ್ಟುಕೊಳ್ಳದೆ, ನಿಮ್ಮ ನೆರೆಯವರನ್ನು ನಿಮ್ಮಂತೆಯೇ ಪ್ರೀತಿಸಬೇಕು. ನಾನು ಯೆಹೋವನು.

[19] “‘ನನ್ನ ಆಜ್ಞೆಗಳನ್ನು ನೀವು ಅನುಸರಿಸಿ ನಡೆಯಬೇಕು. “‘ನಿಮ್ಮ ಪಶುಗಳನ್ನು ಬೇರೆ ಜಾತಿಯ ಪಶುಗಳೊಂದಿಗೆ ಕೂಡಿಸಿ ತಳಿಪಡಿಯಬಾರದು; “‘ನಿಮ್ಮ ಹೊಲಗಳಲ್ಲಿ ಮಿಶ್ರಬೀಜಗಳನ್ನು ಬಿತ್ತಬಾರದು; “‘ನಾರು ಮತ್ತು ಉಣ್ಣೆ ಕೂಡಿರುವ ಬಟ್ಟೆಯನ್ನು ಹಾಕಿಕೊಳ್ಳಬಾರದು.

[20] “‘ಒಬ್ಬನ ಅಧೀನದಲ್ಲಿರುವ ದಾಸಿ ಹಣಕೊಡುವುದರಿಂದಾಗಲಿ ಅಥವಾ ಉಚಿತವಾಗಿಯಾಗಲಿ ಬಿಡುಗಡೆಯನ್ನು ಹೊಂದದೆ ಇದ್ದರೆ, ಯಾವನಾದರೂ ಅವಳನ್ನು ಸಂಗಮಿಸಿದರೆ ಅವರಿಗೆ ವಿಧಿಸಬೇಕಾದ ಶಿಕ್ಷೆಯ ವಿಷಯವಾಗಿ ನ್ಯಾಯವಿಚಾರಣೆ ಆಗಬೇಕು. ಅವಳು ಸ್ವತಂತ್ರಳಲ್ಲವಾದುದರಿಂದ ಅವರಿಗೆ ಮರಣಶಿಕ್ಷೆಯನ್ನು ವಿಧಿಸಬಾರದು.

[21] ಆ ಪುರುಷನು ಪ್ರಾಯಶ್ಚಿತ್ತಯಜ್ಞಕ್ಕಾಗಿ ಯೆಹೋವನ ಸನ್ನಿಧಿಗೆ ದೇವದರ್ಶನದ ಗುಡಾರದ ಬಾಗಿಲಿಗೆ ಒಂದು ಟಗರನ್ನು ತರಬೇಕು.

[22] ಅವನ ದೋಷಪರಿಹಾರಕ್ಕಾಗಿ ಯಾಜಕನು ಆ ಟಗರನ್ನು ಪ್ರಾಯಶ್ಚಿತ್ತಯಜ್ಞವಾಗಿ ಯೆಹೋವನಿಗೆ ಸಮರ್ಪಿಸಿ, ಅವನಿಗೋಸ್ಕರ ದೋಷಪರಿಹಾರವನ್ನು ಮಾಡಿದಾಗ ಅವನಿಗೆ ಕ್ಷಮಾಪಣೆಯಾಗುವುದು.

[23] “‘ನೀವು ಆ ದೇಶದಲ್ಲಿ ಸೇರಿದಾಗ ಆಹಾರಕ್ಕಾಗಿ ಯಾವ ಜಾತಿಯ ಹಣ್ಣಿನ ಸಸಿಯನ್ನು ನೆಟ್ಟರೂ, ಅದರ ಫಲವನ್ನು ಮೂರು ವರ್ಷದ ತನಕ ಅಶುದ್ಧವೆಂದೆಣಿಸಿ ತಿನ್ನದಿರಬೇಕು.

[24] ನಾಲ್ಕನೆಯ ವರ್ಷದಲ್ಲಿ ಅದರ ಎಲ್ಲಾ ಹಣ್ಣುಗಳೂ ದೇವರದಾಗಿರಬೇಕು; ಅವುಗಳನ್ನು ಯೆಹೋವನಿಗೆ ಕೃತಜ್ಞತೆಯ ಕಾಣಿಕೆಯನ್ನಾಗಿ ಸಮರ್ಪಿಸಬೇಕು.

[25] ಐದನೆಯ ವರ್ಷದಲ್ಲಿ ಅದರಿಂದ ಉಂಟಾಗುವ ಆದಾಯವು ನಿಮ್ಮದೇ ಆಗಿರುವುದು; ಅದರ ಫಲಗಳನ್ನು ನೀವು ತಿನ್ನಬಹುದು. ನಾನು ನಿಮ್ಮ ದೇವರಾದ ಯೆಹೋವನು.

[26] “‘ರಕ್ತಸಹಿತವಾದ ಯಾವ ಮಾಂಸವನ್ನು ತಿನ್ನಬಾರದು. “‘ಯಂತ್ರಮಂತ್ರಗಳನ್ನು ಮಾಡಬಾರದು, ಶಕುನಗಳನ್ನು ನೋಡಬಾರದು.

[27] “‘ಚಂಡಿಕೆ ಬಿಡಬಾರದು ಹಾಗೂ ಗಡ್ಡವನ್ನು ವಿಕಾರಗೊಳಿಸಬಾರದು.

[28] “‘ಸತ್ತವರಿಗೋಸ್ಕರ ದುಃಖವನ್ನು ಸೂಚಿಸುವುದಕ್ಕಾಗಿ ದೇಹವನ್ನು ಗಾಯಮಾಡಿಕೊಳ್ಳಬಾರದು. ಶರೀರದ ಮೇಲೆ ಹಚ್ಚೇ ಹಾಕಿಸಿಕೊಳ್ಳಬಾರದು. ನಾನು ಯೆಹೋವನು.

[29] “‘ಮಗಳನ್ನು ವೇಶ್ಯೆಯನ್ನಾಗಿ ಮಾಡಬಾರದು. ಹಾಗೆ ಮಾಡಿದರೆ ವೇಶ್ಯಾವಾಟಿಕೆ ಪ್ರಬಲವಾಗಿ ದೇಶದಲ್ಲೆಲ್ಲಾ ತುಂಬಿಹೋಗುವುದು.

[30] “‘ನಾನು ನೇಮಿಸಿರುವ ಸಬ್ಬತ್ ದಿನಗಳನ್ನು ನೀವು ಆಚರಿಸಬೇಕು; ನನ್ನ ದೇವಸ್ಥಾನದ ವಿಷಯದಲ್ಲಿ ಭಯಭಕ್ತಿಯುಳ್ಳವರಾಗಿರಬೇಕು. ನಾನು ಯೆಹೋವನು.

[31] “‘ಸತ್ತವರಲ್ಲಿ ವಿಚಾರಿಸುವವರ ಮತ್ತು ಮಂತ್ರವಾದಿಗಳ ಹತ್ತಿರ ಹೋಗಬಾರದು; ಅವರ ಆಲೋಚನೆಯನ್ನು ಕೇಳಿ ಅಶುದ್ಧರಾಗಬಾರದು. ನಾನು ನಿಮ್ಮ ದೇವರಾದ ಯೆಹೋವನು.

[32] “‘ವಯೋ ವೃದ್ಧರ ಮುಂದೆ ಎದ್ದು ನಿಂತು ಅವರನ್ನು ಸನ್ಮಾನಿಸಬೇಕು. ನಿಮ್ಮ ದೇವರಲ್ಲಿ ಭಯಭಕ್ತಿಯುಳ್ಳವರಾಗಿರಬೇಕು; ನಾನು ಯೆಹೋವನು.

[33] “‘ನಿಮ್ಮ ದೇಶದಲ್ಲಿ ವಾಸವಾಗಿರುವ ಪರದೇಶದವರಿಗೆ ಅನ್ಯಾಯವೇನೂ ಮಾಡಬಾರದು.

[34] ಅವರು ನಿಮಗೆ ಸ್ವದೇಶದವರಂತೆಯೇ ಇರಬೇಕು; ಅವರನ್ನು ನಿಮ್ಮಂತೆಯೇ ಪ್ರೀತಿಸಬೇಕು. ಐಗುಪ್ತ ದೇಶದಲ್ಲಿದ್ದಾಗ ನೀವೂ ಅನ್ಯರಾಗಿದ್ದಿರಲ್ಲವೇ. ನಾನು ನಿಮ್ಮ ದೇವರಾದ ಯೆಹೋವನು.

[35] “‘ನ್ಯಾಯವಿಚಾರಣೆ, ತೂಕ, ಅಳತೆ ಮತ್ತು ಪರಿಮಾಣಗಳಲ್ಲಿ ನೀವು ನ್ಯಾಯವಿರುದ್ಧವಾಗಿ ನಡೆಯಬಾರದು.

[36] ತಕ್ಕಡಿ, ತೂಕದ ಕಲ್ಲು, ಕೊಳಗ ಮತ್ತು ಸೇರು ಇವುಗಳೆಲ್ಲಾ ನ್ಯಾಯವಾಗಿಯೇ ಇರಬೇಕು. ನಾನು ನಿಮ್ಮನ್ನು ಐಗುಪ್ತದೇಶದಿಂದ ಬರಮಾಡಿದ ನಿಮ್ಮ ದೇವರಾದ ಯೆಹೋವನು ನಾನೇ.

[37] ಆದುದರಿಂದ ನನ್ನ ಆಜ್ಞಾವಿಧಿಗಳನ್ನೆಲ್ಲಾ ನೀವು ಅನುಸರಿಸಿ ನಡೆಯಬೇಕು. ನಾನು ಯೆಹೋವನು’” ಎಂದು ಹೇಳಿದನು.

ಯಾಜಕಕಾಂಡ — Chapters