[1] ಯೆಹೋವನು ಮೋಶೆಯೊಂದಿಗೆ ಮಾತನಾಡಿ,
[2] “ನೀನು ಆರೋನನನ್ನು ಮತ್ತು ಅವನ ಗಂಡು ಮಕ್ಕಳನ್ನು ಕರೆದುಕೊಂಡು ಅವರಿಗೆ ಬೇಕಾದ ದೀಕ್ಷಾವಸ್ತ್ರಗಳನ್ನು ಮತ್ತು ಅಭಿಷೇಕತೈಲವನ್ನು, ದೋಷಪರಿಹಾರಕ್ಕಾಗಿ ಸಮರ್ಪಿಸಬೇಕಾದ ಹೋರಿಯನ್ನು, ಎರಡು ಟಗರುಗಳನ್ನು ಮತ್ತು ಹುಳಿಯಿಲ್ಲದ ಭಕ್ಷ್ಯಗಳು ತುಂಬಿರುವ ಪುಟ್ಟಿಯನ್ನು ತೆಗೆದುಕೊಂಡುಬಂದು,
[3] ಜನಸಮೂಹವನ್ನೆಲ್ಲಾ ದೇವದರ್ಶನದ ಗುಡಾರದ ಬಾಗಿಲಿನ ಹತ್ತಿರಕ್ಕೆ ಕರೆದುಕೊಂಡು ಬಾ” ಎಂದು ಹೇಳಿದನು.
[4] ಯೆಹೋವನು ಹೇಳಿದಂತೆಯೇ ಮೋಶೆಯು ಮಾಡಿದನು. ಜನಸಮೂಹವೆಲ್ಲಾ ದೇವದರ್ಶನದ ಗುಡಾರದ ಬಾಗಿಲಿನ ಹತ್ತಿರ ಕೂಡಿಬಂದರು.
[5] ಆಗ ಮೋಶೆ ಅವರಿಗೆ, “ನಾನು ಈಗ ಮಾಡುವ ಕಾರ್ಯವು ಯೆಹೋವನು ಆಜ್ಞಾಪಿಸಿದ್ದು” ಎಂದು ಹೇಳಿದನು.
[6] ಆಗ ಮೋಶೆ ಆರೋನನನ್ನು ಮತ್ತು ಅವನ ಮಕ್ಕಳನ್ನು ಹತ್ತಿರಕ್ಕೆ ಬರಮಾಡಿಕೊಂಡು ಸ್ನಾನಮಾಡಿಸಿದನು.
[7] ಆ ಮೇಲೆ ಯೆಹೋವನು ಆಜ್ಞಾಪಿಸಿದಂತೆ ಆರೋನನಿಗೆ ನಿಲುವಂಗಿಯನ್ನು ತೊಡಿಸಿ, ನಡುಕಟ್ಟನ್ನು ಸುತ್ತಿ, ಮೇಲಂಗಿಯನ್ನು ತೊಡಿಸಿ, ಏಫೋದ್ ಕವಚವನ್ನು ಹಾಕಿಸಿ, ಕವಚದ ಮೇಲೆ ಸೊಗಸಾಗಿ ನೇಯ್ದ ನಡುಕಟ್ಟನ್ನು ಕಟ್ಟಿದನು, ಅದರಿಂದ ಕವಚವನ್ನು ಅವನಿಗೆ ಹೊದಿಸಿದನು.
[8] ಅವನು ಎದೆಯ ಮೇಲೆ ಪದಕವನ್ನು ಬಿಗಿದು ಆರೋನನಿಗೆ ಹಾಕಿ ಅದರೊಳಗೆ ಊರೀಮ್ ಮತ್ತು ತುಮ್ಮೀಮ್ ಎಂಬ ವಸ್ತುಗಳನ್ನು ಇಟ್ಟನು.
[9] ಅವನ ತಲೆಗೆ ಪೇಟವನ್ನು ಇಟ್ಟು, ಅದರ ಮುಂಭಾಗದಲ್ಲಿ ಬಂಗಾರದ ಪಟ್ಟಿಯನ್ನು ಕಟ್ಟಿದನು; ಅದೇ ಅವನಿಗೆ ಪರಿಶುದ್ಧವಾದ ಕಿರೀಟದಂತೆ ಇತ್ತು. ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆಯು ಮಾಡಿದನು.
[10] ಅನಂತರ ಮೋಶೆ ಅಭಿಷೇಕತೈಲವನ್ನು ತೆಗೆದುಕೊಂಡು, ದೇವದರ್ಶನದ ಗುಡಾರವನ್ನು ಮತ್ತು ಅದರಲ್ಲಿದ್ದ ಎಲ್ಲವನ್ನು ಅಭಿಷೇಕಿಸಿ ಪ್ರತಿಷ್ಠಿಸಿದನು.
[11] ಯಜ್ಞವೇದಿಯ ಮೇಲೆ ಏಳು ಸಾರಿ ಆ ತೈಲವನ್ನು ಚಿಮುಕಿಸಿ, ಯಜ್ಞವೇದಿಯನ್ನು ಅದರ ಎಲ್ಲಾ ಉಪಕರಣಗಳನ್ನು, ಬೋಗುಣಿಯನ್ನು ಅದರ ಪೀಠವನ್ನು ಅಭಿಷೇಕಿಸಿ ಪ್ರತಿಷ್ಠಿಸಿದನು.
[12] ಆರೋನನನ್ನು ಪ್ರತಿಷ್ಠಿಸುವುದಕ್ಕಾಗಿ ಆ ತೈಲದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಆರೋನನ ತಲೆಯ ಮೇಲೆ ಹೊಯ್ದು ಅವನನ್ನು ಅಭಿಷೇಕಿಸಿದನು.
[13] ಆ ಮೇಲೆ ಯೆಹೋವನು ಆಜ್ಞಾಪಿಸಿದಂತೆ ಮೋಶೆ ಆರೋನನ ಮಕ್ಕಳನ್ನು ಹತ್ತಿರಕ್ಕೆ ಕರೆದು, ಅವರಿಗೆ ನಿಲುವಂಗಿಗಳನ್ನು ತೊಡಿಸಿ, ನಡುಕಟ್ಟುಗಳನ್ನು ಸುತ್ತಿ, ತಲೆಗೆ ಪೇಟಗಳನ್ನು ಇಟ್ಟನು.
[14] ಅನಂತರ ಅವನು ದೋಷಪರಿಹಾರಕ್ಕಾಗಿ ಹೋರಿಯನ್ನು ತರಿಸಿದನು. ಆಗ ಆರೋನನೂ ಮತ್ತು ಅವನ ಮಕ್ಕಳೂ ತಮ್ಮ ಕೈಗಳನ್ನು ಅದರ ತಲೆಯ ಮೇಲೆ ಇಟ್ಟರು.
[15] ಆ ಹೋರಿಯನ್ನು ವಧಿಸಿದ ಮೇಲೆ ಮೋಶೆ ಅದರ ರಕ್ತವನ್ನು ತನ್ನ ಬೆರಳಿನಿಂದ ಯಜ್ಞವೇದಿಯ ಕೊಂಬುಗಳಿಗೆ ಸುತ್ತಲೂ ಹಚ್ಚಿ, ಯಜ್ಞವೇದಿಯನ್ನು ಶುದ್ಧಪಡಿಸಿ, ಉಳಿದ ರಕ್ತವನ್ನು ಯಜ್ಞವೇದಿಯ ಬುಡದಲ್ಲಿ ಸುರಿದುಬಿಟ್ಟನು. ಇದರ ನಿಮಿತ್ತ ದೋಷಪರಿಹಾರಕ ಆಚಾರವನ್ನು ನಡೆಸಿ, ಅದನ್ನು ಪ್ರತಿಷ್ಠಿಸಿದನು.
[16] ಆ ಹೋರಿಯ ಕರುಳುಗಳ ಮೇಲಣ ಕೊಬ್ಬನ್ನು, ಕಳಿಜದ ಹತ್ತಿರವಿರುವ ಕೊಬ್ಬನ್ನು, ಎರಡು ಮೂತ್ರಪಿಂಡಗಳನ್ನು ಅವುಗಳ ಮೇಲಿರುವ ಕೊಬ್ಬನ್ನು ಮೋಶೆ ತೆಗೆದುಕೊಂಡು ಯಜ್ಞವೇದಿಯ ಮೇಲೆ ಹೋಮ ಮಾಡಿದನು.
[17] ಯೆಹೋವನು ಆಜ್ಞಾಪಿಸಿದಂತೆ ಅದರಲ್ಲಿ ಉಳಿದದ್ದನ್ನೆಲ್ಲಾ ಅಂದರೆ ಅದರ ಚರ್ಮವನ್ನು, ಮಾಂಸವನ್ನು ಮತ್ತು ಕಲ್ಮಷವನ್ನು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಿ ಬೆಂಕಿಯಿಂದ ಸುಡಿಸಿಬಿಟ್ಟನು.
[18] ತರುವಾಯ ಅವನು ಸರ್ವಾಂಗಹೋಮಕ್ಕಾಗಿ ಟಗರನ್ನು ತರಿಸಿದನು. ಆರೋನನೂ ಮತ್ತು ಅವನ ಮಕ್ಕಳೂ ಅದರ ತಲೆಯ ಮೇಲೆ ತಮ್ಮ ಕೈಗಳನ್ನು ಇಟ್ಟರು.
[19] ಅದನ್ನು ವಧಿಸಿದ ಮೇಲೆ ಮೋಶೆ ಅದರ ರಕ್ತವನ್ನು ಯಜ್ಞವೇದಿಯ ಸುತ್ತಲೂ ಎರಚಿದನು.
[20] ಆ ಟಗರನ್ನು ತುಂಡುತುಂಡಾಗಿ ಕಡಿದ ಮೇಲೆ ಮೋಶೆ ಅದರ ತಲೆಯನ್ನು, ಮಾಂಸಭಾಗಗಳನ್ನು ಮತ್ತು ಕೊಬ್ಬನ್ನು ಹೋಮಮಾಡಿದನು.
[21] ಅದರ ಕರುಳುಗಳನ್ನು ಮತ್ತು ಕಾಲುಗಳನ್ನು ನೀರಿನಿಂದ ತೊಳೆದು, ಮೋಶೆ ಆ ಟಗರನ್ನು ಯಜ್ಞವೇದಿಯ ಮೇಲೆ ಪೂರ್ತಿಯಾಗಿ ಹೋಮ ಮಾಡಿದನು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅದು ಅಗ್ನಿಯ ಮೂಲಕ ಯೆಹೋವನಿಗೆ ಪರಿಮಳಯುಕ್ತ ಸರ್ವಾಂಗಹೋಮವಾಗಿತ್ತು.
[22] ಆ ಮೇಲೆ ಅವನು ಯಾಜಕ ಪಟ್ಟಾಭಿಷೇಕಕ್ಕಾಗಿ ಸಮರ್ಪಿಸಬೇಕಾದ ಎರಡನೆಯ ಟಗರನ್ನು ತರಿಸಿದನು. ಆರೋನನೂ ಮತ್ತು ಅವನ ಮಕ್ಕಳೂ ಅದರ ತಲೆಯ ಮೇಲೆ ತಮ್ಮ ಕೈಗಳನ್ನಿಟ್ಟರು.
[23] ಅದನ್ನು ವಧಿಸಿದ ನಂತರ ಮೋಶೆ ಅದರ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಆರೋನನ ಬಲಗಿವಿಯ ತುದಿಗೂ, ಬಲಗೈಯ ಹೆಬ್ಬೆರಳಿಗೂ ಮತ್ತು ಬಲಗಾಲಿನ ಹೆಬ್ಬೆಟ್ಟಿಗೂ ಹಚ್ಚಿದನು.
[24] ಆಗ ಮೋಶೆ ಆರೋನನ ಮಕ್ಕಳನ್ನು ಹತ್ತಿರಕ್ಕೆ ಕರೆದು, ಆ ರಕ್ತದಲ್ಲಿ ಸ್ವಲ್ಪವನ್ನು ಅವರವರ ಬಲಗಿವಿಯ ತುದಿಗೂ, ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೆಟ್ಟಿಗೂ ಹಚ್ಚಿ, ಉಳಿದ ರಕ್ತವನ್ನು ಯಜ್ಞವೇದಿಯ ಸುತ್ತಲೂ ಎರಚಿದನು.
[25] ಅವನು ಆ ಟಗರಿನ ಕೊಬ್ಬನ್ನು ಅಂದರೆ ಬಾಲದ ಕೊಬ್ಬು, ಕರುಳುಗಳ ಮೇಲಣ ಎಲ್ಲಾ ಕೊಬ್ಬು, ಕಳಿಜದ ಹತ್ತಿರವಿರುವ ಕೊಬ್ಬು, ಎರಡು ಮೂತ್ರಪಿಂಡಗಳು, ಅವುಗಳ ಮೇಲಿದ್ದ ಕೊಬ್ಬನ್ನು ಮತ್ತು ಬಲತೊಡೆಯನ್ನು,
[26] ಯೆಹೋವನ ಸನ್ನಿಧಿಯಲ್ಲಿ ಪುಟ್ಟಿಯಲ್ಲಿ ಇಟ್ಟಿದ್ದ ಹುಳಿಯಿಲ್ಲದ ಭಕ್ಷ್ಯಗಳಲ್ಲಿ ಒಂದು ರೊಟ್ಟಿಯನ್ನು, ಎಣ್ಣೆಮಿಶ್ರವಾದ ಒಂದು ಹೋಳಿಗೆಯನ್ನು ಹಾಗು ಒಂದು ಕಡುಬನ್ನು ತೆಗೆದುಕೊಂಡು ಈ ಭಕ್ಷ್ಯಗಳನ್ನು ಆ ಕೊಬ್ಬಿನ ಮತ್ತು ಬಲದೊಡೆಯ ಮೇಲೆ ಇಟ್ಟನು.
[27] ಅವನು ಅವೆಲ್ಲವುಗಳನ್ನು ಆರೋನನ ಮತ್ತು ಅವನ ಮಕ್ಕಳ ಕೈಗಳಿಗೆ ಕೊಟ್ಟು ನೈವೇದ್ಯವೆಂದು ಸೂಚಿಸುವುದಕ್ಕೆ ಯೆಹೋವನ ಸನ್ನಿಧಿಯಲ್ಲಿ ಅದನ್ನು ನಿವಾಳಿಸಿದನು.
[28] ಆ ಮೇಲೆ ಮೋಶೆ ಅವುಗಳನ್ನು ಅವರ ಕೈಯಿಂದ ತೆಗೆದುಕೊಂಡು ಸರ್ವಾಂಗಹೋಮದ್ರವ್ಯದ ಮೇಲಿಟ್ಟು ಯಜ್ಞವೇದಿಯಲ್ಲಿ ಅದನ್ನು ಹೋಮಮಾಡಿದನು. ಅದು ಅಗ್ನಿಯ ಮೂಲಕ ಯೆಹೋವನಿಗೆ ಪರಿಮಳಯುಕ್ತ ಪಟ್ಟಾಭಿಷೇಕ ಯಜ್ಞವಾಗಿತ್ತು.
[29] ಮೋಶೆ ಅದರ ಎದೆಯ ಭಾಗವನ್ನು ತೆಗೆದುಕೊಂಡು ನೈವೇದ್ಯವಾಗಿ ಯೆಹೋವನ ಸನ್ನಿಧಿಯಲ್ಲಿ ನಿವಾಳಿಸಿದನು. ಯೆಹೋವನು ಆಜ್ಞಾಪಿಸಿದಂತೆ ಆ ಪಟ್ಟಾಭಿಷೇಕಯಜ್ಞದ ಟಗರಿನಲ್ಲಿ ಆ ಎದೆಯ ಭಾಗವೇ ಮೋಶೆಗೆ ಸಲ್ಲಬೇಕಾದದ್ದು.
[30] ಆಗ ಮೋಶೆ ಅಭಿಷೇಕತೈಲದಲ್ಲಿ ಮತ್ತು ಯಜ್ಞವೇದಿಯ ಮೇಲಿದ್ದ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಆರೋನನ ಹಾಗೂ ಅವನ ವಸ್ತ್ರಗಳ ಮೇಲೆಯೂ, ಅವನ ಮಕ್ಕಳ ಮತ್ತು ಅವರ ವಸ್ತ್ರಗಳ ಮೇಲೆಯೂ ಚಿಮುಕಿಸಿದನು. ಹೀಗೆ ಆರೋನನನ್ನು ಅವನ ವಸ್ತ್ರಗಳನ್ನು, ಅವನ ಮಕ್ಕಳನ್ನು ಮತ್ತು ಅವರ ವಸ್ತ್ರಗಳನ್ನು ಪ್ರತಿಷ್ಠಿಸಿದನು.
[31] ಮೋಶೆ ಆರೋನನಿಗೂ ಮತ್ತು ಅವನ ಮಕ್ಕಳಿಗೂ, “ಮಾಂಸವನ್ನು ನೀವು ದೇವದರ್ಶನದ ಗುಡಾರದ ಬಾಗಿಲಿನ ಹತ್ತಿರ ಬೇಯಿಸಿ ಅದನ್ನು ಮತ್ತು ಪಟ್ಟಾಭಿಷೇಕಕ್ಕಾಗಿ ಪುಟ್ಟಿಯಲ್ಲಿ ಇಟ್ಟಿರುವ ಭಕ್ಷ್ಯಗಳನ್ನು ಅಲ್ಲೇ ಊಟಮಾಡಬೇಕು. ‘ಆರೋನನೂ ಅವನ ಮಕ್ಕಳೂ ಅದನ್ನು ತಿನ್ನಬೇಕು’ ಎಂಬುದೇ ನನಗಾದ ಅಪ್ಪಣೆ.
[32] ಆ ಮಾಂಸದಲ್ಲಿಯೂ, ಭಕ್ಷ್ಯಗಳಲ್ಲಿಯೂ ಉಳಿದದ್ದನ್ನು ನೀವು ಬೆಂಕಿಯಿಂದ ಸುಟ್ಟುಬಿಡಬೇಕು.
[33] ಇದಲ್ಲದೆ ಈ ನಿಮ್ಮ ಯಾಜಕೋದ್ಯೋಗದ ದೀಕ್ಷೆಯು ಪೂರೈಸುವುದಕ್ಕೆ ಏಳು ದಿನಗಳು ಆಗುವುದರಿಂದ ನೀವು ದೇವದರ್ಶನದ ಗುಡಾರದ ಬಾಗಿಲಿನ ಆಚೆಗೆ ಹೋಗಬಾರದು.
[34] ನಿಮ್ಮ ದೋಷಪರಿಹಾರಕ್ಕಾಗಿ ಈ ಹೊತ್ತು ಏನೇನು ನಡೆಯಿತೋ ಅದನ್ನು ಏಳು ದಿನವೂ ನಡೆಸಬೇಕೆಂದು ಯೆಹೋವನು ಆಜ್ಞಾಪಿಸಿದ್ದಾನೆ.
[35] ಆದುದರಿಂದ ನೀವು ಯೆಹೋವನ ಆಜ್ಞೆಯ ಮೇರೆಗೆ ಏಳು ದಿನವೂ ಹಗಲಿರುಳು ದೇವದರ್ಶನ ಗುಡಾರದ ಬಾಗಿಲಿನ ಹತ್ತಿರ ಇರಬೇಕು; ಇಲ್ಲದಿದ್ದರೆ ಸಾಯುವಿರಿ, ಹೀಗೆಯೇ ನನಗೆ ಅಪ್ಪಣೆಯಾಗಿದೆ” ಎಂದು ಹೇಳಿದನು.
[36] ಯೆಹೋವನು ಮೋಶೆಯ ಮೂಲಕವಾಗಿ ಆಜ್ಞಾಪಿಸಿದಂತೆ ಆರೋನನೂ ಮತ್ತು ಅವನ ಮಕ್ಕಳೂ ಅನುಸರಿಸಿ ನಡೆದರು.