Skip to content
Opens in a new window
Listen to this chapter • 8:41

[1] ಯೆಹೋವನು ಮೋಶೆಯೊಂದಿಗೆ ಮಾತನಾಡಿ,

[2] “ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸಬೇಕು, ‘ಯೆಹೋವನಿಂದ ನೇಮಕವಾದ ಹಬ್ಬಗಳ ದಿನಗಳು ಇವೇ; ಈ ದಿನಗಳಲ್ಲಿ ದೇವಾರಾಧನೆಗಾಗಿ ಜನರು ಸಭೆಸೇರಿಬರಬೇಕೆಂದು ಸಾರಬೇಕು. ನಾನು ನೇಮಿಸಿರುವ ಹಬ್ಬದ ದಿನಗಳು ಇವೇ.

[3] “‘ಆರು ದಿನಗಳಲ್ಲಿ ನೀವು ಕೆಲಸವನ್ನು ಮಾಡಬೇಕು; ಏಳನೆಯ ದಿನ ಯಾವ ಕೆಲಸವನ್ನು ಮಾಡಬಾರದು, ಅದು ಸಬ್ಬತ್ ದಿನವಾಗಿದೆ. ಅದರಲ್ಲಿ ದೇವಾರಾಧನೆಗಾಗಿ ಸಭೆಸೇರಬೇಕು. ಆ ದಿನದಲ್ಲಿ ಯಾವ ವಿಧವಾದ ಕೆಲಸವನ್ನು ಮಾಡಬಾರದು. ನಿಮ್ಮ ಎಲ್ಲಾ ವಾಸಮಾಡುವ ಸ್ಥಳಗಳಲ್ಲಿ ಅದು ಯೆಹೋವನಿಗೆ ಮೀಸಲಾದ ವಿಶ್ರಾಂತಿ ದಿನವಾಗಿದೆ.

[4] “‘ಯೆಹೋವನಿಂದ ನೇಮಕವಾದ ಹಬ್ಬದ ಕಾಲಗಳು ಇವೇ; ಈ ಕಾಲಗಳಲ್ಲಿ ದೇವಾರಾಧನೆಗಾಗಿ ಸಭೆಸೇರಬೇಕು. ನೇಮಕವಾದ ದಿನಗಳಲ್ಲಿ ಇವುಗಳನ್ನು ಪ್ರಕಟಪಡಿಸಬೇಕು.

[5] “‘ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಂಜೆಯ ವೇಳೆಯಲ್ಲಿ ಯೆಹೋವನು ನೇಮಿಸಿದ ಪಸ್ಕ ಹಬ್ಬವನ್ನು ಆಚರಿಸಬೇಕು.

[6] ಅದೇ ತಿಂಗಳಿನ ಹದಿನೈದನೆಯ ದಿನದಲ್ಲಿ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕಾದ ಜಾತ್ರೆಯನ್ನು ಯೆಹೋವನಿಗೋಸ್ಕರ ಆಚರಿಸಬೇಕು. ಅದು ಮೊದಲುಗೊಂಡು ಏಳು ದಿನಗಳಲ್ಲಿಯೂ ಹುಳಿಯಿಲ್ಲದ ರೊಟ್ಟಿಗಳನ್ನು ಊಟಮಾಡಬೇಕು.

[7] ಮೊದಲನೆಯ ದಿನದಲ್ಲಿ ದೇವಾರಾಧನೆಗಾಗಿ ಸಭೆಸೇರಬೇಕು; ಆ ದಿನದಲ್ಲಿ ಯಾವ ಉದ್ಯೋಗವನ್ನು ನಡೆಸಬಾರದು.

[8] ಏಳು ದಿನಗಳಲ್ಲಿಯೂ ನೀವು ಯೆಹೋವನಿಗೆ ಹೋಮವನ್ನು ಸಮರ್ಪಿಸಬೇಕು. ಏಳನೆಯ ದಿನದಲ್ಲಿ ದೇವಾರಾಧನೆಗಾಗಿ ಸಭೆಸೇರಬೇಕು. ಆ ದಿನದಲ್ಲಿ ಯಾವ ಉದ್ಯೋಗವನ್ನು ಮಾಡಬಾರದು’” ಅಂದನು.

[9] ಯೆಹೋವನು ಮೋಶೆಯೊಂದಿಗೆ ಮಾತನಾಡಿ,

[10] “ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸಬೇಕು, ‘ನಾನು ನಿಮಗೆ ಕೊಡುವ ದೇಶದಲ್ಲಿ ನೀವು ಸೇರಿದ ನಂತರ ಅಲ್ಲಿನ ಜವೆಗೋದಿಯ ಪೈರನ್ನು ಕೊಯ್ಯುವಾಗ, ಪ್ರಥಮಫಲದ ಸಿವುಡನ್ನು ಯಾಜಕನ ಬಳಿಗೆ ತಂದು ಒಪ್ಪಿಸಬೇಕು.

[11] ನೀವು ದೇವರಿಗೆ ಅಂಗೀಕಾರವಾಗುವಂತೆ ಯಾಜಕನು ಅದನ್ನು ಯೆಹೋವನ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸಿ ಸಮರ್ಪಿಸುವನು. ಸಬ್ಬತ್ ದಿನದ ಮರು ದಿನದಲ್ಲಿಯೇ ಅದನ್ನು ನಿವಾಳಿಸಬೇಕು.

[12] ಆ ಸಿವುಡನ್ನು ನೈವೇದ್ಯವಾಗಿ ನಿವಾಳಿಸುವ ದಿನದಲ್ಲಿ ನೀವು ಒಂದು ವರ್ಷದ ಪೂರ್ಣಾಂಗವಾದ ಟಗರನ್ನು ಸರ್ವಾಂಗಹೋಮವಾಗಿ ಯೆಹೋವನಿಗೆ ಸಮರ್ಪಿಸಬೇಕು.

[13] ಅದರೊಂದಿಗೆ ಮಾಡಬೇಕಾದ ಧಾನ್ಯನೈವೇದ್ಯವು ಯಾವುದೆಂದರೆ ಎಣ್ಣೆ ಬೆರೆತ ಆರು ಸೇರು ಗೋದಿಯ ಹಿಟ್ಟು. ಯೆಹೋವನಿಗೆ ಪರಿಮಳವನ್ನು ಉಂಟುಮಾಡುವುದಕ್ಕೆ ಇದನ್ನು ಬೆಂಕಿಯಲ್ಲಿ ಹೋಮಮಾಡಬೇಕು. ಅದರೊಂದಿಗೆ ಸಮರ್ಪಿಸಬೇಕಾದ ಪಾನದ್ರವ್ಯವು ಒಂದುವರೆ ಸೇರು ದ್ರಾಕ್ಷಾರಸ.

[14] ನೀವು ನಿಮ್ಮ ದೇವರಿಗೆ ಸಲ್ಲಿಸಬೇಕಾದದ್ದನ್ನು ತಂದು ಕೊಡುವವರೆಗೂ ಆ ವರ್ಷದ ಬೆಳೆಯ ರೊಟ್ಟಿಯನ್ನಾಗಲಿ, ಸುಟ್ಟ ತೆನೆಗಳನ್ನಾಗಲಿ ಅಥವಾ ಹಸಿತೆನೆಗಳನ್ನಾಗಲಿ ತಿನ್ನಲೇಬಾರದು. ನಿಮಗೂ, ನಿಮ್ಮ ಸಂತತಿಯವರಿಗೂ ಮತ್ತು ನಿಮ್ಮ ಎಲ್ಲಾ ವಾಸಸ್ಥಾನಗಳಲ್ಲಿಯೂ ಇದು ಶಾಶ್ವತನಿಯಮ.

[15] “‘ಸಬ್ಬತ್ ದಿನದ ಮರುದಿನದಿಂದ ಆ ಪ್ರಥಮ ಸಿವುಡನ್ನು ನೈವೇದ್ಯವಾಗಿ ನಿವಾಳಿಸಿದ ದಿನ ಮೊದಲುಗೊಂಡು ಪೂರ್ಣವಾಗಿ ಏಳು ವಾರಗಳು ಮುಗಿಯುವಂತೆ ಐವತ್ತು ದಿನಗಳನ್ನು ಲೆಕ್ಕಿಸಬೇಕು.

[16] ಏಳನೆಯ ಸಬ್ಬತ್ ದಿನದ ಮರುದಿನದಲ್ಲಿ ಯೆಹೋವನಿಗೆ ಹೊಸಬೆಳೆಯ ಧಾನ್ಯನೈವೇದ್ಯವನ್ನು ಸಮರ್ಪಿಸಬೇಕು.

[17] ನಿಮ್ಮ ನಿವಾಸಗಳಿಂದ ತಂದ ಹಿಟ್ಟಿನಲ್ಲಿ ಆರು ಸೇರು ಹಿಟ್ಟಿನಿಂದ ಎರಡು ನೈವೇದ್ಯದ ರೊಟ್ಟಿಗಳನ್ನು ಮಾಡಬೇಕು. ಇವುಗಳನ್ನು ಹುಳಿಹಾಕಿದ ಗೋದಿಯ ಹಿಟ್ಟಿನಿಂದ ಮಾಡಿ ಪ್ರಥಮಫಲವಾಗಿ ಯೆಹೋವನಿಗೆ ಸಮರ್ಪಿಸಬೇಕು.

[18] ಆ ರೊಟ್ಟಿಗಳೊಡನೆ ಒಂದು ವರ್ಷದ ಪೂರ್ಣಾಂಗವಾದ ಏಳು ಕುರಿಗಳನ್ನು, ಒಂದು ಹೋರಿಯನ್ನು ಮತ್ತು ಎರಡು ಟಗರುಗಳನ್ನು ಸಮರ್ಪಿಸಬೇಕು. ಇವು ಧಾನ್ಯದ್ರವ್ಯದೊಡನೆ ಮತ್ತು ಪಾನದ್ರವ್ಯದೊಡನೆ ಅಗ್ನಿಯ ಮೂಲಕ ಯೆಹೋವನಿಗೆ ಪರಿಮಳವನ್ನು ಉಂಟುಮಾಡುವ ಸರ್ವಾಂಗಹೋಮವಾಗುವವು.

[19] ಅದಲ್ಲದೆ ದೋಷಪರಿಹಾರಕ ಯಜ್ಞವಾಗಿ ಒಂದು ಹೋತವನ್ನು ಮತ್ತು ಸಮಾಧಾನ ಯಜ್ಞಕ್ಕಾಗಿ ಒಂದು ವರ್ಷದ ಎರಡು ಟಗರುಗಳನ್ನು ಸಮರ್ಪಿಸಬೇಕು.

[20] ಯಾಜಕನು ಇವುಗಳನ್ನು, ಪ್ರಥಮಫಲದ ರೊಟ್ಟಿಗಳನ್ನು ಮತ್ತು ಎರಡು ಕುರಿಗಳನ್ನು ಯೆಹೋವನ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸಬೇಕು. ಅವು ಯೆಹೋವನಿಗೆ ಮೀಸಲಾಗಿ ಯಾಜಕನಿಗೆ ಸಲ್ಲಬೇಕು.

[21] ಆ ದಿನದಲ್ಲಿ ದೇವಾರಾಧನೆಗಾಗಿ ಸಭೆಸೇರಬೇಕೆಂಬುದಾಗಿ ಪ್ರಕಟಪಡಿಸಬೇಕು. ಆ ದಿನದಲ್ಲಿ ಯಾವ ಉದ್ಯೋಗವನ್ನು ನಡೆಸಬಾರದು. ಇದು ನಿಮಗೂ, ನಿಮ್ಮ ಸಂತತಿಯವರಿಗೂ ಮತ್ತು ನಿಮ್ಮ ಎಲ್ಲಾ ನಿವಾಸಗಳಲ್ಲಿ ಶಾಶ್ವತನಿಯಮ.

[22] “‘ನಿಮ್ಮ ದೇಶದ ಪೈರನ್ನು ಕೊಯ್ಯುವಾಗ ಹೊಲಗಳ ಮೂಲೆಗಳಲ್ಲಿರುವುದನ್ನೆಲ್ಲಾ ಕೊಯ್ಯಬಾರದು ಮತ್ತು ಹಕ್ಕಲಾಯಬಾರದು. ಇವುಗಳನ್ನು ಬಡವರಿಗೋಸ್ಕರವು ಹಾಗು ಪರದೇಶದವರಿಗೋಸ್ಕರವು ಬಿಟ್ಟುಬಿಡಬೇಕು. ನಾನು ನಿಮ್ಮ ದೇವರಾಗಿರುವ ಯೆಹೋವನು’” ಎಂದು ಹೇಳಿದನು.

[23] ಯೆಹೋವನು ಮೋಶೆಯೊಂದಿಗೆ ಮಾತನಾಡಿ,

[24] “ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸಬೇಕು, ‘ಏಳನೆಯ ತಿಂಗಳಿನ ಮೊದಲನೆಯ ದಿನದಲ್ಲಿ ನಿಮಗೆ ಸಂಪೂರ್ಣ ವಿರಾಮವಿರಬೇಕು. ಅದನ್ನು ತುತ್ತೂರಿಗಳ ಧ್ವನಿಯಿಂದ ಪ್ರಕಟಪಡಿಸಬೇಕು. ದೇವಾರಾಧನೆಗಾಗಿ ಸಭೆಸೇರಬೇಕು.

[25] ಆ ದಿನದಲ್ಲಿ ಯಾವ ಉದ್ಯೋಗವನ್ನು ನಡೆಸಬಾರದು; ಯೆಹೋವನಿಗೆ ಹೋಮವನ್ನು ಮಾಡಬೇಕು’” ಅಂದನು.

[26] ಯೆಹೋವನು ಮೋಶೆಯೊಂದಿಗೆ ಮಾತನಾಡಿ,

[27] “ಅದೇ ಏಳನೆಯ ತಿಂಗಳಿನ ಹತ್ತನೆಯ ದಿನ ದೋಷಪರಿಹಾರಕ ದಿನ. ಅದರಲ್ಲಿ ದೇವಾರಾಧನೆಗಾಗಿ ಸಭೆಸೇರಬೇಕು; ನೀವು ಪೂರ್ಣವಾಗಿ ಉಪವಾಸಮಾಡಬೇಕು ಮತ್ತು ಯೆಹೋವನ ಸನ್ನಿಧಿಯಲ್ಲಿ ಹೋಮವನ್ನು ಮಾಡಬೇಕು.

[28] ಆ ದಿನದಲ್ಲಿ ಯಾವ ಉದ್ಯೋಗವನ್ನೂ ನಡೆಸಬಾರದು. ಅದು ದೋಷಪರಿಹಾರಕ ದಿನವಾಗಿದೆ, ಅದರಲ್ಲಿ ನಿಮಗೋಸ್ಕರ ಯೆಹೋವನ ಸನ್ನಿಧಿಯಲ್ಲಿ ದೋಷಪರಿಹಾರಕ ಆಚರಣೆ ನಡೆಯುವುದು.

[29] ಯಾವನಾದರೂ ಆ ದಿನದಲ್ಲಿ ಉಪವಾಸ ಮಾಡದೆಹೋದರೆ ಅವನನ್ನು ಕುಲದಿಂದ ಹೊರಗೆ ಹಾಕಬೇಕು.

[30] ಯಾವನಾದರೂ ಆ ದಿನದಲ್ಲಿ ಕೆಲಸವನ್ನು ಮಾಡಿದರೆ ಅವನನ್ನು ಇಸ್ರಾಯೇಲರಲ್ಲಿ ಇರದಂತೆ ನಾಶಮಾಡುವೆನು.

[31] ಆ ದಿನದಲ್ಲಿ ಯಾವ ಕೆಲಸವನ್ನು ಮಾಡಬಾರದು. ಇದು ನಿಮಗೂ, ನಿಮ್ಮ ಸಂತತಿಯವರಿಗೂ ಮತ್ತು ನಿಮ್ಮ ಎಲ್ಲಾ ನಿವಾಸಗಳಲ್ಲಿ ಶಾಶ್ವತನಿಯಮ.

[32] ಆ ಸಬ್ಬತ್ ದಿನವು ಸಂಪೂರ್ಣವಿರಾಮವುಳ್ಳ ದಿನವಾಗಿರಬೇಕು. ಆ ದಿನದಲ್ಲಿ ಉಪವಾಸದಿಂದಿರಬೇಕು. ಆ ತಿಂಗಳಿನ ಒಂಭತ್ತನೆಯ ದಿನದ ಸಾಯಂಕಾಲದಲ್ಲಿ ಪ್ರಾರಂಭಿಸಿ ಮರುದಿನದ ಸಾಯಂಕಾಲದ ವರೆಗೆ ನೀವು ಆ ವಿರಾಮದಿನವನ್ನು ಆಚರಿಸಬೇಕು” ಎಂದು ಹೇಳಿದನು.

[33] ಯೆಹೋವನು ಮೋಶೆಯೊಂದಿಗೆ ಮಾತನಾಡಿ,

[34] “ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸು, ‘ಏಳನೆಯ ತಿಂಗಳಿನ ಹದಿನೈದನೆಯ ದಿನ ಮೊದಲುಗೊಂಡು ಏಳು ದಿನಗಳ ವರೆಗೆ ಪರ್ಣಶಾಲೆಗಳ ಜಾತ್ರೆಯನ್ನು ಯೆಹೋವನಿಗೋಸ್ಕರ ಆಚರಿಸಬೇಕು.

[35] ಮೊದಲನೆಯ ದಿನದಲ್ಲಿ ದೇವಾರಾಧನೆಗಾಗಿ ಸಭೆಸೇರಬೇಕು; ಯಾವ ಉದ್ಯೋಗವನ್ನು ನಡೆಸಬಾರದು.

[36] ಆ ಏಳು ದಿನಗಳಲ್ಲಿಯೂ ನೀವು ಯೆಹೋವನ ಸನ್ನಿಧಿಯಲ್ಲಿ ಹೋಮಮಾಡಬೇಕು. ಎಂಟನೆಯ ದಿನದಲ್ಲಿಯೂ ದೇವಾರಾಧನೆಗಾಗಿ ಸಭೆಸೇರಬೇಕು, ಯೆಹೋವನ ಸನ್ನಿಧಿಯಲ್ಲಿ ಹೋಮಮಾಡಬೇಕು. ಅದು ಸಭೆಸೇರುವ ದಿನವಾದುದರಿಂದ ಆ ದಿನದಲ್ಲಿ ಯಾವ ಉದ್ಯೋಗವನ್ನು ಮಾಡಬಾರದು.

[37] “‘ಯೆಹೋವನು ನೇಮಿಸಿರುವ ಸಬ್ಬತ್ ದಿನಗಳ ಹೊರತಾಗಿ ಮೇಲೆ ಹೇಳಿದ ದಿನಗಳೇ ಯೆಹೋವನ ಹಬ್ಬದ ದಿನಗಳು. ಆ ದಿನಗಳಲ್ಲಿ ದೇವಾರಾಧನೆಗಾಗಿ ಸಭೆಸೇರುವಂತೆ ನೀವು ಪ್ರಕಟಿಸಬೇಕು. ಆಯಾ ದಿನಕ್ಕೆ ನೇಮಿಸಿರುವ ಪ್ರಕಾರ ಸರ್ವಾಂಗಹೋಮ, ಧಾನ್ಯನೈವೇದ್ಯ, ಸಮಾಧಾನಯಜ್ಞ, ಪಾನದ್ರವ್ಯ ಇವುಗಳನ್ನು ತಂದು ಯೆಹೋವನ ಸನ್ನಿಧಿಯಲ್ಲಿ ಹೋಮಮಾಡಬೇಕು.

[38] ಯೆಹೋವನಿಗೆ ಒಪ್ಪಿಸಬೇಕಾದ ಕಪ್ಪ, ಕಾಣಿಕೆ, ಹರಕೆ ಇವುಗಳನ್ನು ನೀವು ಯೆಹೋವನು ನೇಮಿಸಿರುವ ಸಬ್ಬತ್ ದಿನದಲ್ಲಿ ಮಾತ್ರವಲ್ಲದೆ ಮೇಲೆ ಸೂಚಿಸಿರುವ ಹಬ್ಬದ ದಿನಗಳಲ್ಲಿಯೂ ಸಮರ್ಪಿಸಬೇಕು.

[39] “‘ಏಳನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ನೀವು ತೋಟ ಮತ್ತು ತೋಪುಗಳ ಬೆಳೆಯನ್ನು ಕೂಡಿಸಿದ ನಂತರ ಯೆಹೋವನು ನೇಮಿಸಿದ ಪರ್ಣಶಾಲೆಗಳ ಜಾತ್ರೆಯನ್ನು ಏಳು ದಿನಗಳ ವರೆಗೂ ಆಚರಿಸಬೇಕು. ಮೊದಲನೆಯ ದಿನದಲ್ಲಿಯೂ ಮತ್ತು ಎಂಟನೆಯ ದಿನದಲ್ಲಿಯೂ ಯಾವ ಕೆಲಸವನ್ನು ಮಾಡದೆ ಸಂಪೂರ್ಣ ವಿರಾಮದಿಂದಿರಬೇಕು.

[40] ಮೊದಲನೆಯ ದಿನದಲ್ಲಿ ಶ್ರೇಷ್ಠವೃಕ್ಷದ ಹಣ್ಣುಗಳನ್ನು, ಖರ್ಜೂರ ಮರದ ಗರಿಗಳನ್ನು, ಎಲೆಗಳು ದಟ್ಟವಾಗಿರುವ ಮರಗಳ ಕೊಂಬೆಗಳನ್ನು ಮತ್ತು ನೀರಿನ ಕಾಲುವೆಗಳ ಬಳಿಯಲ್ಲಿ ಬೆಳೆಯುವ ನೀರವಂಜಿ ಚಿಗುರುಗಳನ್ನು ತೆಗೆದುಕೊಂಡು ಯೆಹೋವನ ಸನ್ನಿಧಿಯಲ್ಲಿ ಏಳು ದಿನಗಳ ವರೆಗೆ ಸಂಭ್ರಮವಾಗಿರಬೇಕು.

[41] ಹೀಗೆ ಪ್ರತಿ ವರ್ಷದಲ್ಲಿಯೂ ಏಳು ದಿನಗಳ ವರೆಗೆ ಈ ಹಬ್ಬವನ್ನು ಆಚರಿಸಬೇಕು; ನಿಮಗೂ ಮತ್ತು ನಿಮ್ಮ ಸಂತತಿಯವರಿಗೂ ಇದು ಶಾಶ್ವತನಿಯಮ; ಏಳನೆಯ ತಿಂಗಳಿನಲ್ಲಿ ಇದನ್ನು ಆಚರಿಸಬೇಕು.

[42] ಏಳು ದಿನಗಳು ನೀವು ಪರ್ಣಶಾಲೆಗಳಲ್ಲಿ ವಾಸವಾಗಿರಬೇಕು, ಸ್ವದೇಶಸ್ಥರಾದ ಇಸ್ರಾಯೇಲರೆಲ್ಲರೂ ಪರ್ಣಶಾಲೆಗಳಲ್ಲಿಯೇ ವಾಸವಾಗಿರಬೇಕು.

[43] ನಾನು ನಿಮ್ಮನ್ನು ಐಗುಪ್ತ ದೇಶದಿಂದ ಬರಮಾಡಿದಾಗ ಇಸ್ರಾಯೇಲರು ಪರ್ಣಶಾಲೆಗಳಲ್ಲಿ ವಾಸವಾಗಿರುವಂತೆ ಮಾಡಿದೆನೆಂಬುದಾಗಿ ಇದರಿಂದ ನಿಮ್ಮ ಸಂತತಿಯವರಿಗೆ ತಿಳಿಯುವುದು. ನಾನು ನಿಮ್ಮ ದೇವರಾದ ಯೆಹೋವನು’” ಅಂದನು.

[44] ಯೆಹೋವನಿಂದ ನೇಮಕವಾದ ಹಬ್ಬಗಳ ದಿನಗಳ ವಿಷಯವಾಗಿ ಮೋಶೆಯು ಅದೇ ಮೇರೆಗೆ ಇಸ್ರಾಯೇಲರಿಗೆ ತಿಳಿಸಿದನು.

ಯಾಜಕಕಾಂಡ — Chapters