[1] “ನೀವು ವಿಗ್ರಹಗಳನ್ನು ಮಾಡಿಸಿಕೊಳ್ಳಬಾರದು; ಕೆತ್ತಿದ ಪ್ರತಿಮೆಯನ್ನಾಗಲಿ ಅಥವಾ ಕಲ್ಲು ಕಂಬವನ್ನಾಗಲಿ ನಿಲ್ಲಿಸಿಕೊಳ್ಳಬಾರದು; ಅಡ್ಡಬೀಳುವುದಕ್ಕಾಗಿ ವಿಚಿತ್ರವಾಗಿ ಕೆತ್ತಿದ ಕಲ್ಲುಗಳನ್ನು ನಿಮ್ಮ ದೇಶದಲ್ಲಿ ಇಡಬಾರದು; ನಾನೇ ಯೆಹೋವನೆಂಬ ನಿಮ್ಮ ದೇವರು.
[2] ನಾನು ನೇಮಿಸಿರುವ ಸಬ್ಬತ್ ದಿನಗಳನ್ನು ನೀವು ಆಚರಿಸಬೇಕು; ನನ್ನ ದೇವಸ್ಥಾನದ ವಿಷಯದಲ್ಲಿ ಭಯಭಕ್ತಿಯುಳ್ಳವರಾಗಿರಬೇಕು. ನಾನು ಯೆಹೋವನು.
[3] “ನೀವು ನನ್ನ ನಿಯಮಗಳನ್ನು ಕೈಕೊಂಡು, ನನ್ನ ಆಜ್ಞೆಗಳನ್ನು ಅನುಸರಿಸಿ ನಡೆದರೆ,
[4] ನಾನು ಮುಂಗಾರು ಮತ್ತು ಹಿಂಗಾರು ಮಳೆಗಳನ್ನು ಆಯಾ ಕಾಲದಲ್ಲಿಯೇ ಬರಮಾಡುವೆನು; ನಿಮ್ಮ ಹೊಲಗಳು ಒಳ್ಳೆಯ ಬೆಳೆಯನ್ನು ಕೊಡುವವು ಹಾಗು ತೋಟದ ಮರಗಳು ಹೇರಳವಾದ ಫಲಕೊಡುವವು.
[5] ಕಣತುಳಿಸುವ ಕೆಲಸವು ದ್ರಾಕ್ಷಿಯ ಬೆಳೆಯ ಕಾಲದ ತನಕ ಮತ್ತು ದ್ರಾಕ್ಷಿಯ ಬೆಳೆಯನ್ನು ಕೂಡಿಸುವ ಕೆಲಸವು ಬಿತ್ತನೆಯ ಕಾಲದ ವರೆಗೂ ನಡೆಯುವವು, ನೀವು ಸಮೃದ್ಧಿಯಾಗಿ ಊಟ ಮಾಡುವಿರಿ, ನಿಮ್ಮ ದೇಶದಲ್ಲಿ ಸುರಕ್ಷಿತವಾಗಿ ವಾಸಮಾಡುವಿರಿ.
[6] ನಿಮ್ಮ ದೇಶದಲ್ಲಿ ನಿಮಗೆ ಸಮಾಧಾನವನ್ನು ಅನುಗ್ರಹಿಸುವೆನು; ಯಾರ ಭಯವೂ ಇಲ್ಲದೆ ಮಲಗಿಕೊಳ್ಳುವಿರಿ; ದುಷ್ಟಮೃಗಗಳನ್ನು ದೇಶದಿಂದ ತೆಗೆದುಹಾಕುವೆನು; ನಿಮ್ಮ ದೇಶವು ಶತ್ರುಗಳ ಕತ್ತಿಯಿಂದ ಹಾಳಾಗುವುದಿಲ್ಲ.
[7] ನೀವು ನಿಮ್ಮ ವೈರಿಗಳನ್ನು ಓಡಿಸುವಿರಿ ಮತ್ತು ಅವರನ್ನು ಕತ್ತಿಯಿಂದ ಸಂಹರಿಸುವಿರಿ.
[8] ನಿಮ್ಮಲ್ಲಿ ಐದು ಜನರು ನೂರು ಜನರನ್ನೂ ಮತ್ತು ನೂರು ಜನರು ಹತ್ತು ಸಾವಿರ ಜನರನ್ನೂ ಓಡಿಸುವರು; ನಿಮ್ಮ ಶತ್ರುಗಳು ನಿಮ್ಮ ಕತ್ತಿಯಿಂದ ಹತರಾಗುವರು.
[9] ನಾನು ನಿಮ್ಮ ಮೇಲೆ ಕಟಾಕ್ಷವಿಟ್ಟು ಬಹುಸಂತಾನವನ್ನು ಕೊಟ್ಟು ಹೆಚ್ಚಿಸುವೆನು; ನಿಮ್ಮೊಂದಿಗೆ ನನ್ನ ಒಡಂಬಡಿಕೆಯನ್ನು ಸ್ಥಿರಪಡಿಸುವೆನು.
[10] ನೀವು ಬಹುದಿನದಿಂದ ಇಟ್ಟುಕೊಂಡಿರುವ ಹಳೆಯ ಧಾನ್ಯವನ್ನು ಊಟಮಾಡುವಿರಿ; ಹೊಸದಕ್ಕೆ ಸ್ಥಳ ಉಂಟಾಗುವಂತೆ ಹಳೆಯದನ್ನು ತೆಗೆಯುವಿರಿ.
[11] ನಾನು ನಿಮ್ಮ ನಡುವೆ ವಾಸಮಾಡುವೆನು; ನಿಮ್ಮನ್ನು ತಳ್ಳಿಬಿಡುವುದಿಲ್ಲ.
[12] ನಿಮ್ಮ ನಡುವೆ ತಿರುಗಾಡುತ್ತಾ ನಿಮಗೆ ದೇವರಾಗಿರುವೆನು, ನೀವು ನನಗೆ ಪ್ರಜೆಯಾಗಿರುವಿರಿ.
[13] ನೀವು ಐಗುಪ್ತ್ಯರಿಗೆ ಗುಲಾಮರಾಗಿರಬಾರದೆಂದು ನಿಮ್ಮನ್ನು ಅವರ ದೇಶದೊಳಗಿಂದ ಬರಮಾಡಿದ ನಿಮ್ಮ ದೇವರಾದ ಯೆಹೋವನು ನಾನೇ; ನಿಮ್ಮನ್ನು ಕುಗ್ಗಿಸಿದ ನೊಗವನ್ನು ಮುರಿದು ನೀವು ನೆಟ್ಟಗೆ ನಿಂತು ನಡೆಯುವಂತೆ ಮಾಡಿದವನು ನಾನು.
[14] “ಆದರೆ ನೀವು ನನ್ನ ಮಾತನ್ನು ಕೇಳದೆ ಈ ಆಜ್ಞೆಗಳನ್ನೆಲ್ಲಾ ಅನುಸರಿಸದೆ,
[15] ನನ್ನ ನಿಯಮಗಳನ್ನು ಬೇಡವೆಂದು ನನ್ನ ವಿಧಿಗಳನ್ನು ತಳ್ಳಿಬಿಟ್ಟರೆ ನೀವು ನನ್ನ ಆಜ್ಞೆಗಳನ್ನು ಅನುಸರಿಸದೆ ನನ್ನ ನಿಬಂಧನೆಯನ್ನು ಮೀರಿ ನಡೆದರೆ,
[16] ನಾನು ನಿಮಗೆ ಮಾಡುವುದೇನೆಂದರೆ, ಕ್ಷಯರೋಗ, ಚಳಿಜ್ವರ ಮುಂತಾದ ಭಯಂಕರ ವ್ಯಾಧಿಗಳನ್ನು ನಿಮ್ಮಲ್ಲಿ ಇರುವಂತೆ ಮಾಡುವೆನು; ಇವುಗಳ ದೆಸೆಯಿಂದ ನೀವು ಕಂಗೆಟ್ಟವರಾಗಿಯೂ, ಮನಗುಂದಿದವರಾಗಿಯೂ ಇರುವಿರಿ. ನೀವು ಬೀಜಬಿತ್ತಿದಾಗ ಅದರ ಫಲವು ನಿಮಗೆ ದೊರೆಯದೆ ಹೋಗುವುದು; ಶತ್ರುಗಳು ಬಂದು ಅದನ್ನು ತಿಂದುಬಿಡುವರು.
[17] ನಾನು ನಿಮ್ಮ ಮೇಲೆ ಉಗ್ರಕೋಪಗೊಳ್ಳುವುದರಿಂದ ನೀವು ನಿಮ್ಮ ಶತ್ರುಗಳ ಮುಂದೆ ಸೋತು ಹೋಗುವಿರಿ; ನಿಮ್ಮ ವೈರಿಗಳು ನಿಮ್ಮನ್ನು ಆಳುವರು; ಯಾರೂ ಬೆನ್ನಟ್ಟಿ ಬರದಿದ್ದರು ನೀವು ಹೆದರಿ ಓಡುವಿರಿ.
[18] “ಇಷ್ಟಾದರೂ ನೀವು ನನ್ನ ಮಾತಿಗೆ ಲಕ್ಷ್ಯಕೊಡದೆ ಹೋದರೆ ನಾನು ನಿಮ್ಮ ಪಾಪಗಳ ನಿಮಿತ್ತ ಏಳರಷ್ಟಾಗಿ ನಿಮ್ಮನ್ನು ಶಿಕ್ಷಿಸುವೆನು.
[19] ನಿಮ್ಮ ಗರ್ವಕ್ಕೆ ಕಾರಣವಾದ ಬಲವನ್ನು ಮುರಿಯುವೆನು. ನಿಮ್ಮ ಮೇಲಿರುವ ಆಕಾಶವನ್ನು ಕಬ್ಬಿಣದಂತೆಯೂ ಹಾಗು ನೀವು ಸಾಗುವಳಿಮಾಡುವ ಭೂಮಿಯನ್ನು ತಾಮ್ರದಂತೆಯೂ ಮಾಡುವೆನು.
[20] ನೀವು ದುಡಿದದ್ದೆಲ್ಲಾ ವ್ಯರ್ಥವಾಗುವುದು; ನಿಮ್ಮ ಭೂಮಿಯಲ್ಲಿ ಬೆಳೆಯಾಗುವುದಿಲ್ಲ, ತೋಟಗಳ ಮರಗಳು ಫಲ ಕೊಡುವುದಿಲ್ಲ.
[21] “ನೀವು ನನ್ನ ಮಾತನ್ನು ಕೇಳದೆ ನನ್ನ ವಿರುದ್ಧವಾಗಿ ನಡೆದರೆ ನಾನು ನಿಮ್ಮ ಪಾಪಗಳ ನಿಮಿತ್ತ ಇನ್ನೂ ಏಳರಷ್ಟಾಗಿ ನಿಮ್ಮನ್ನು ಬಾಧಿಸುವೆನು.
[22] ನಿಮ್ಮ ಮೇಲೆ ಕಾಡುಮೃಗಗಳನ್ನು ಬರಮಾಡುವೆನು; ಅವು ನಿಮ್ಮ ಮಕ್ಕಳನ್ನು ಕದ್ದುಕೊಂಡು ಹೋಗುವವು, ನಿಮ್ಮ ಪಶುಗಳನ್ನು ಕೊಲ್ಲುವವು, ನಿಮ್ಮನ್ನು ಸ್ವಲ್ಪ ಜನರನ್ನಾಗಿ ಮಾಡುವವು; ನಿಮ್ಮ ದಾರಿಗಳು ಪಾಳು ಬೀಳುತ್ತದೆ.
[23] “ಇಷ್ಟು ಶಿಕ್ಷೆಗಳಿಂದಲೂ ನೀವು ನನ್ನ ಆಜ್ಞೆಗೆ ಒಳಗಾಗದೆ ನನಗೆ ವಿರೋಧವಾಗಿ ನಡೆದರೆ,
[24] ನಿಮ್ಮ ಪಾಪಗಳ ನಿಮಿತ್ತ ನಾನೇ ನಿಮ್ಮನ್ನು ಏಳರಷ್ಟಾಗಿ ಬಾಧಿಸುವೆನು.
[25] ಶತ್ರುಗಳ ಕತ್ತಿಯ ಮೂಲಕವಾಗಿ ನಿಮ್ಮನ್ನು ಸಂಹರಿಸುವೆನು; ನೀವು ನನ್ನ ನಿಬಂಧನೆಯನ್ನು ಮೀರಿದ್ದರಿಂದ ಆ ಕತ್ತಿಯು ಪ್ರತಿದಂಡನೆಮಾಡುವುದು. ನೀವು ನಿಮ್ಮ ಪಟ್ಟಣಗಳಲ್ಲಿ ಕೂಡಿರುವಾಗ ನಿಮ್ಮಲ್ಲಿ ಅಂಟುರೋಗ ಉಂಟಾಗುವಂತೆ ಮಾಡುವೆನು; ಹೀಗೆ ನೀವು ಶತ್ರುಗಳ ಕೈಗೆ ಬೀಳುವಿರಿ.
[26] ನಾನು ನಿಮ್ಮ ಜೀವನಾಧಾರವನ್ನು ತೆಗೆದುಬಿಟ್ಟಾಗ ಹತ್ತು ಜನರು ಹೆಂಗಸರು ಒಂದೇ ಒಲೆಯಲ್ಲಿ ರೊಟ್ಟಿಸುಟ್ಟು, ಅದನ್ನು ತೂಕದ ಪ್ರಕಾರ ಹಂಚಿಕೊಡುವರು; ನೀವು ಅದನ್ನು ಊಟಮಾಡಿದಾಗ ತೃಪ್ತಿಹೊಂದುವುದಿಲ್ಲ.
[27] “ಇದನ್ನೆಲ್ಲಾ ನೀವು ಅನುಭವಿಸಿದ ಮೇಲೆಯೂ ಇನ್ನೂ ನನ್ನ ಮಾತನ್ನು ಕೇಳದೆ ನನಗೆ ವಿರೋಧವಾಗಿ ನಡೆದರೆ,
[28] ನಾನು ನಿಮ್ಮ ಮೇಲೆ ಕೋಪಗೊಂಡವನಾಗಿ ನಿಮ್ಮ ಪಾಪಗಳ ನಿಮಿತ್ತ ಏಳರಷ್ಟಾಗಿ ಶಿಕ್ಷಿಸುವೆನು.
[29] ನೀವು ನಿಮ್ಮ ಗಂಡು ಮತ್ತು ಹೆಣ್ಣುಮಕ್ಕಳ ಮಾಂಸವನ್ನೇ ತಿನ್ನುವಿರಿ.
[30] ನಿಮ್ಮ ಪೂಜಾಸ್ಥಳಗಳನ್ನು ಇಲ್ಲದಂತೆ ಮಾಡುವೆನು; ನೀವು ಸೂರ್ಯನ ಪೂಜೆಗೆ ಇಟ್ಟಿರುವ ಕಂಬಗಳನ್ನು ಕಡಿದುಹಾಕುವೆನು; ನಿಮ್ಮ ವಿಗ್ರಹಗಳ ಮೇಲೆ ನಿಮ್ಮ ಹೆಣಗಳನ್ನು ಬೀಸಾಡುವೆನು; ನಾನು ನಿಮ್ಮ ವಿಷಯದಲ್ಲಿ ಅಸಹ್ಯಪಡುವೆನು.
[31] ನಿಮ್ಮ ಪಟ್ಟಣಗಳನ್ನು ಹಾಳುಮಾಡುವೆನು. ನಿಮ್ಮ ದೇವಸ್ಥಾನಗಳನ್ನು ನಾಶಮಾಡುವೆನು; ನೀವು ಸಮರ್ಪಿಸುವ ಸುಗಂಧದ್ರವ್ಯಗಳ ಪರಿಮಳವನ್ನು ನಾನು ಮೂಸಿಯೂ ನೋಡುವುದಿಲ್ಲ.
[32] ನಾನು ನಿಮ್ಮ ದೇಶವನ್ನು ಸಂಪೂರ್ಣವಾಗಿ ಹಾಳುಮಾಡುವೆನು; ಅದರಲ್ಲಿ ವಾಸವಾಗಿರುವ ನಿಮ್ಮ ಶತ್ರುಗಳೂ ಅದನ್ನು ನೋಡಿ ಆಶ್ಚರ್ಯಪಡುವರು.
[33] ನಿಮ್ಮನ್ನು ಅನ್ಯಜನಗಳಲ್ಲಿ ಚದುರಿಸಿ, ನಿಮ್ಮ ಹಿಂದೆ ಕತ್ತಿಯನ್ನು ಬೀಸುವೆನು. ನಿಮ್ಮ ದೇಶವು ಹಾಳಾಗುವುದು, ನಿಮ್ಮ ಪಟ್ಟಣಗಳು ನಾಶವಾಗುವವು.
[34] ನೀವು ನಿಮ್ಮ ಶತ್ರುಗಳ ದೇಶದಲ್ಲಿ ಸೆರೆ ಇರುವ ದಿನಗಳಲ್ಲೆಲ್ಲಾ ನಿಮ್ಮ ದೇಶವು ಹಾಳುಬಿದ್ದು ತನಗೆ ಸಲ್ಲಬೇಕಾಗಿದ್ದ ಸಬ್ಬತ್ ಕಾಲವನ್ನು ಅನುಭವಿಸುವುದು; ಅದು ವಿಶ್ರಾಂತಿಯನ್ನು ಹೊಂದಿ ಸಬ್ಬತ್ ಕಾಲವನ್ನು ಅನುಭವಿಸುವುದು.
[35] ನೀವು ಅದರಲ್ಲಿ ವಾಸವಾಗಿದ್ದಾಗ ಅದಕ್ಕೆ ತಕ್ಕ ಸಬ್ಬತ್ ಕಾಲದಲ್ಲಿ ದೊರೆಯದ ವಿಶ್ರಾಂತಿಯನ್ನು, ಅದು ಹಾಳುಬಿದ್ದಿರುವ ಎಲ್ಲಾ ದಿನಗಳಲ್ಲಿ ಅನುಭವಿಸುವುದು.
[36] “ನಿಮ್ಮಲ್ಲಿ ಯಾರಾರು ಶತ್ರುಗಳ ದೇಶದಲ್ಲಿ ಉಳಿದಿರುವರೋ ಅವರ ಹೃದಯಗಳಲ್ಲಿ ನಾನು ಭೀತಿಯನ್ನು ಹುಟ್ಟಿಸುವೆನು. ಗಾಳಿಯಿಂದ ಬಡಿದಾಡುವ ಉದುರೆಲೆಯ ಸಪ್ಪಳವೂ ಅವರಲ್ಲಿ ದಿಗಿಲು ಹುಟ್ಟಿಸುವುದು. ಅವರು ಆ ಸಪ್ಪಳವನ್ನು ಕೇಳಿ ಕತ್ತಿಯ ಎದುರಿನಿಂದ ಓಡಿಹೋಗುವವರಂತೆ ಓಡಿಹೋಗುವರು. ಯಾರೂ ಬೆನ್ನಟ್ಟಿ ಬಾರದಿರುವಾಗಲೂ ಅವರು ಓಡಿಹೋಗಿ ಬೀಳುವರು.
[37] ಯಾರೂ ಓಡಿಸದಿದ್ದರೂ ಕತ್ತಿಗೆ ಹೆದರಿ ಓಡುವವರಂತೆ ಒಬ್ಬರ ಮೇಲೊಬ್ಬರು ಬೀಳುವರು; ಶತ್ರುಗಳ ಮುಂದೆ ನಿಲ್ಲಲಾರದೆ ತತ್ತರಿಸುವಿರಿ.
[38] ಅನ್ಯಜನಗಳಲ್ಲಿ ಚದರಿಸಲ್ಪಟ್ಟು ಕಾಣಿಸದೆ ಹೋಗುವಿರಿ, ನಿಮ್ಮ ಶತ್ರುಗಳ ದೇಶವು ನಿಮ್ಮನ್ನು ನುಂಗಿಬಿಡುವುದು.
[39] ನಿಮ್ಮಲ್ಲಿ ಉಳಿದವರು ತಮ್ಮ ಪಾಪದ ದೆಸೆಯಿಂದಲೂ ಮತ್ತು ತಮ್ಮ ಪೂರ್ವಿಕರ ಪಾಪದ ದೆಸೆಯಿಂದಲೂ ಅವರಂತೆಯೇ ಶತ್ರುಗಳ ದೇಶಗಳಲ್ಲಿ ಕ್ಷೀಣವಾಗಿ ಹೋಗುವರು.
[40] “ಆದರೆ ಅವರು ತಾವೂ ಹಾಗು ತಮ್ಮ ಪೂರ್ವಿಕರು ನನಗೆ ದ್ರೋಹಿಗಳಾಗಿ ಪಾಪಮಾಡಿದವರೆಂದೂ ಅರಿಕೆಮಾಡಿದರೆ, ತಾವು ನನಗೆ ವಿರೋಧವಾಗಿ ನಡೆದುದರಿಂದಲೇ
[41] ನಾನು ಅವರಿಗೆ ವಿರೋಧವಾಗಿ ನಡೆದುಕೊಂಡು ಶತ್ರುದೇಶದಲ್ಲಿ ಸೆರೆಯವರನ್ನಾಗಿ ಮಾಡಬೇಕಾಯಿತೆಂದೂ ಒಪ್ಪಿ, ತಮ್ಮ ಮೊಂಡತನವನ್ನು ಬಿಟ್ಟು ನನ್ನ ಆಜ್ಞೆಗೆ ತಲೆ ಬಾಗಿ ತಮ್ಮ ಪಾಪದಿಂದುಂಟಾದ ಶಿಕ್ಷೆಯನ್ನು ಸ್ವೀಕರಿಸುವುದಾದರೆ,
[42] ನಾನು ಯಾಕೋಬ್ ಇಸಾಕ್ ಅಬ್ರಹಾಮ್ ಇವರಿಗೆ ಮಾಡಿದ ಒಡಂಬಡಿಕೆಯನ್ನು ನೆನಪಿಗೆ ತಂದುಕೊಂಡು ನೆರವೇರಿಸುವೆನು; ಅವರ ಸ್ವದೇಶವನ್ನೂ ನಾನು ದಯೆಯಿಂದ ಜ್ಞಾಪಿಸಿಕೊಳ್ಳುವೆನು.
[43] ಅವರು ಬಿಟ್ಟುಹೋದ ಸ್ವದೇಶವು ನಿರ್ಜನವಾಗಿ ಬಿದ್ದಿರುವಾಗ ತನಗೆ ಸಲ್ಲಬೇಕಾದ ಸಬ್ಬತ್ ವಿಶ್ರಾಂತಿಯನ್ನು ಅನುಭವಿಸಬೇಕು. ಅವರು ಯೆಹೋವನ ಆಜ್ಞೆ ಬೇಡವೆಂದು ಆತನ ವಿಧಿಗಳನ್ನು ತಾತ್ಸಾರ ಮಾಡಿದ ಕಾರಣವೇ ತಮ್ಮ ಪಾಪದ ಫಲವನ್ನು ಅನುಭವಿಸಬೇಕಾಗಿರುವುದು.
[44] ಆದರೂ ಅವರು ಶತ್ರುಗಳ ದೇಶದಲ್ಲಿರುವಾಗಲೂ ನಾನು ಅವರನ್ನು ಬೇಡವೆನ್ನುವುದಿಲ್ಲ, ತಾತ್ಸಾರಮಾಡುವುದಿಲ್ಲ; ನಾನು ಅವರಿಗೆ ಮಾಡಿದ ಒಡಂಬಡಿಕೆಯನ್ನು ಮೀರುವುದಿಲ್ಲ, ಅವರನ್ನು ಇಲ್ಲದಂತೆ ಮಾಡುವುದಿಲ್ಲ; ನಾನು ಅವರ ದೇವರಾದ ಯೆಹೋವನಲ್ಲವೇ.
[45] ಅವರ ಪೂರ್ವಿಕರ ಸಂಗಡ ಮಾಡಿಕೊಂಡ ಒಡಂಬಡಿಕೆಯನ್ನು ನೆನಪಿಗೆ ತಂದುಕೊಂಡು ಅವರಿಗೆ ಹಿತವನ್ನು ಮಾಡುವೆನು. ನಾನು ಅವರಿಗೆ ದೇವರಾಗಿರಬೇಕೆಂದು ಅವರ ಪೂರ್ವಿಕರನ್ನು ಎಲ್ಲಾ ಜನಾಂಗಗಳ ಎದುರಿನಲ್ಲಿಯೇ ಐಗುಪ್ತದೇಶದೊಳಗಿಂದ ಬರಮಾಡಿದೆನಲ್ಲವೇ. ನಾನು ಯೆಹೋವನು” ಎಂಬುದೇ.
[46] ಯೆಹೋವನು ಸೀನಾಯಿಬೆಟ್ಟದಲ್ಲಿ ಮೋಶೆಯ ಮೂಲಕವಾಗಿ ಇಸ್ರಾಯೇಲರ ಸಂಗಡ ಒಡಂಬಡಿಕೆಯನ್ನು ಮಾಡಿಕೊಂಡು ಅವರಿಗೆ ಕೊಟ್ಟ ಆಜ್ಞಾವಿಧಿಗಳೇ ಇವು.