[1] ಯೆಹೋವನು ಮೋಶೆ ಮತ್ತು ಆರೋನರೊಂದಿಗೆ ಮಾತನಾಡಿ,
[2] “ನೀವು ಇಸ್ರಾಯೇಲರಿಗೆ ಆಜ್ಞಾಪಿಸಬೇಕಾದದ್ದೇನೆಂದರೆ, ‘ಒಬ್ಬನ ಜನನೇಂದ್ರಿಯದಲ್ಲಿ ಮೇಹಸ್ರಾವವಾದರೆ ಅದರಿಂದ ಅವನು ಅಶುದ್ಧನಾಗುವನು.
[3] ಆ ಸ್ರಾವವು ಹರಿಯುತ್ತಿದ್ದರು ಅಥವಾ ನಿಂತುಹೋಗಿದ್ದರು ಆ ದೇಹಸ್ಥಿತಿಯಿಂದ ಅವನು ಅಶುದ್ಧನು.
[4] ಅಂಥವನು ಮಲಗಿರುವ ಪ್ರತಿಯೊಂದು ಹಾಸಿಗೆಯೂ ಮತ್ತು ಕುಳಿತಿರುವ ಪ್ರತಿಯೊಂದು ಆಸನವೂ ಅಶುದ್ಧವು.
[5] ಅವನ ಹಾಸಿಗೆಯನ್ನು ಮುಟ್ಟಿದವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಬೇಕು; ಅವನು ಆ ದಿನದ ಸಾಯಂಕಾಲದವರೆಗೆ ಅಶುದ್ಧನಾಗಿರುವನು.
[6] ಸ್ರಾವವುಳ್ಳವನು ಕುಳಿತಿದ್ದ ಆಸನದ ಮೇಲೆ ಕುಳಿತುಕೊಂಡವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಬೇಕು, ಅವನು ಆ ಸಾಯಂಕಾಲದ ವರೆಗೆ ಅಶುದ್ಧನಾಗಿರುವನು.
[7] ಅವನ ಶರೀರವನ್ನು ಮುಟ್ಟಿದವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಬೇಕು, ಅವನು ಆ ಸಾಯಂಕಾಲದ ವರೆಗೆ ಅಶುದ್ಧನಾಗಿರುವನು.
[8] ಶುದ್ಧನಾಗಿರುವವನ ಮೇಲೆ ಸ್ರಾವವುಳ್ಳವನು ಉಗುಳಿದರೆ ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಬೇಕು; ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು.
[9] ಸ್ರಾವವುಳ್ಳವನು ಕುಳಿತ್ತಿದ್ದ ತಡಿಯು ಅಶುದ್ಧವು.
[10] ಅವನ ಕೆಳಗಿದ್ದ ಯಾವ ವಸ್ತುವನ್ನಾದರೂ ಮುಟ್ಟಿದವನು ಸಾಯಂಕಾಲದ ವರೆಗೆ ಅಶುದ್ಧನಾಗಿರುವನು. ಅಂತಹ ವಸ್ತುವನ್ನು ಎತ್ತಿದವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಬೇಕು; ಅವನು ಸಾಯಂಕಾಲದ ವರೆಗೆ ಅಶುದ್ಧನಾಗಿರುವನು.
[11] ಸ್ರಾವವುಳ್ಳವನು ಕೈಗಳನ್ನು ತೊಳೆದುಕೊಳ್ಳದೆ ಯಾವನನ್ನು ಮುಟ್ಟಿದರೂ ಆ ಮನುಷ್ಯನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಬೇಕು, ಅವನು ಸಾಯಂಕಾಲದ ವರೆಗೆ ಅಶುದ್ಧನಾಗಿರುವನು.
[12] ಸ್ರಾವವುಳ್ಳವನು ಮುಟ್ಟಿದ ಮಣ್ಣಿನ ಪಾತ್ರೆಯನ್ನು ಒಡೆದುಬಿಡಬೇಕು. ಅವನು ಮರದ ಪಾತ್ರೆಯನ್ನು ಮುಟ್ಟಿದರೆ ಅದನ್ನು ನೀರಿನಿಂದ ತೊಳೆಯಬೇಕು.
[13] “‘ಸ್ರಾವವುಳ್ಳವನ ಸ್ರಾವವು ನಿಂತು ವಾಸಿಯಾದಾಗ, ಅವನು ಶುದ್ಧಮಾಡಿಸಿಕೊಳ್ಳುವುದಕ್ಕೆ ಆ ದಿನದಿಂದ ಏಳು ದಿನಗಳನ್ನು ಲೆಕ್ಕಮಾಡಿ, ತನ್ನ ಬಟ್ಟೆಗಳನ್ನು ಒಗೆದುಕೊಂಡು, ಹರಿಯುವ ನೀರಿನಿಂದ ತನ್ನ ಶರೀರವನ್ನು ತೊಳೆದುಕೊಂಡು ಶುದ್ಧನಾಗುವನು.
[14] ಎಂಟನೆಯ ದಿನದಲ್ಲಿ ಎರಡು ಬೆಳವಕ್ಕಿಗಳನ್ನಾಗಲಿ ಅಥವಾ ಎರಡು ಪಾರಿವಾಳದ ಮರಿಗಳನ್ನಾಗಲಿ ತೆಗೆದುಕೊಂಡು ದೇವದರ್ಶನದ ಗುಡಾರದ ಬಾಗಿಲಿಗೆ ಯೆಹೋವನ ಸನ್ನಿಧಿಗೆ ಬಂದು ಯಾಜಕನಿಗೆ ಒಪ್ಪಿಸಬೇಕು.
[15] ಯಾಜಕನು ದೋಷಪರಿಹಾರಕ ಯಜ್ಞಕ್ಕಾಗಿ ಒಂದನ್ನು ಮತ್ತು ಸರ್ವಾಂಗಹೋಮಕ್ಕಾಗಿ ಇನ್ನೊಂದನ್ನು ಸಮರ್ಪಿಸಬೇಕು. ಹೀಗೆ ಯಾಜಕನು ಅವನ ಸ್ರಾವದ ವಿಷಯದಲ್ಲಿ ಯೆಹೋವನ ಸನ್ನಿಧಿಯಲ್ಲಿ ಅವನಿಗಾಗಿ ದೋಷಪರಿಹಾರ ಮಾಡುವನು.
[16] “‘ಒಬ್ಬನಿಗೆ ವೀರ್ಯಸ್ಖಲನವಾದರೆ ಅವನು ಸರ್ವಾಂಗ ಸ್ನಾನಮಾಡಬೇಕು, ಅವನು ಆ ಸಾಯಂಕಾಲದವರೆಗೆ ಅಶುದ್ಧನಾಗಿರುವನು.
[17] ಯಾವ ಬಟ್ಟೆಯ ಮೇಲಾಗಲಿ ಅಥವಾ ತೊಗಲಿನ ಮೇಲಾಗಲಿ ವೀರ್ಯವು ಬಿದ್ದರೆ ಅದನ್ನು ನೀರಿನಿಂದ ತೊಳೆಯಬೇಕು, ಅದು ಸಾಯಂಕಾಲದ ವರೆಗೆ ಅಶುದ್ಧವಾಗಿರುವುದು.
[18] ಪುರುಷನಿಗೆ ಸ್ತ್ರೀಸಂಗದಿಂದ ವೀರ್ಯಸ್ಖಲನವಾದರೆ ಅವರಿಬ್ಬರೂ ಸ್ನಾನಮಾಡಿಕೊಳ್ಳಬೇಕು; ಅವರು ಸಾಯಂಕಾಲದ ವರೆಗೆ ಅಶುದ್ಧರಾಗಿರುವರು.
[19] “‘ಸ್ತ್ರೀಗೆ ರಕ್ತಸ್ರಾವವಾದರೆ ಅವಳು ಏಳು ದಿನಗಳ ತನಕ ಪ್ರತ್ಯೇಕವಾಗಿರಬೇಕು. ಅವಳನ್ನು ಮುಟ್ಟಿದವರು ಆ ದಿನದ ಸಾಯಂಕಾಲದ ವರೆಗೆ ಅಶುದ್ಧರಾಗಿರುವರು.
[20] ಅವಳು ಮುಟ್ಟಾಗಿರುವಾಗ ಯಾವುದರ ಮೇಲೆ ಮಲಗಿದರು ಅಥವಾ ಕುಳಿತುಕೊಂಡರು ಅದು ಅಶುದ್ಧವಾಗಿರುವುದು.
[21] ಅವಳ ಹಾಸಿಗೆಯನ್ನು ಮುಟ್ಟಿದವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಬೇಕು; ಅವನು ಸಾಯಂಕಾಲದ ವರೆಗೆ ಅಶುದ್ಧನಾಗಿರುವನು.
[22] ಅವಳು ಯಾವುದರ ಮೇಲೆ ಕುಳಿತ್ತಿದ್ದಳೋ ಅದನ್ನು ಮುಟ್ಟಿದವರು ಅವರ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಬೇಕು; ಅವರು ಸಾಯಂಕಾಲದ ವರೆಗೆ ಅಶುದ್ಧರಾಗಿರುವರು.
[23] ಅವಳು ಮಲಗಿದ್ದ ಹಾಸಿಗೆಯ ಮೇಲಾಗಲಿ ಅಥವಾ ಕುಳಿತ್ತಿದ್ದ ಸ್ಥಳದ ಮೇಲಾಗಲಿ ಇದ್ದ ಯಾವುದನ್ನಾದರೂ ಮುಟ್ಟಿದವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು.
[24] ಪುರುಷನು ಒಂದು ವೇಳೆ ಅಂಥವಳೊಡನೆ ಸಂಗಮಿಸಿದರೆ, ಅವಳ ಋತುಸ್ರಾವ ಅವನಿಗೆ ತಗುಲಿದರೆ, ಅವನು ಏಳು ದಿನಗಳ ತನಕ ಅಶುದ್ಧನಾಗಿರುವನು. ಅಷ್ಟರಲ್ಲಿ ಅವನು ಯಾವ ಹಾಸಿಗೆಯ ಮೇಲೆ ಮಲಗಿಕೊಂಡರೂ ಅದು ಅಶುದ್ಧವಾಗಿರುವುದು.
[25] “‘ಸ್ತ್ರೀಗೆ ಮುಟ್ಟಿನ ಕಾಲದಲ್ಲಿ ಮಾತ್ರವಲ್ಲದೆ ಬೇರೆ ದಿನಗಳಲ್ಲಿಯೂ ರಕ್ತಸ್ರಾವವಾದರೆ, ಇಲ್ಲವೆ ಮುಟ್ಟಿನ ಕಾಲಕ್ಕಿಂತ ಹೆಚ್ಚು ದಿನಗಳು ರಕ್ತಸ್ರಾವವಾದರೆ ಅವಳು ತಿಂಗಳಿನ ಮುಟ್ಟಿನಿಂದ ಹೇಗೆ ಅಶುದ್ಧಳೋ ಹಾಗೆಯೇ ಆ ಸ್ರಾವವಾಗುವ ದಿನಗಳಲ್ಲೆಲ್ಲಾ ಅಶುದ್ಧಳಾಗಿರುವಳು.
[26] ಆ ಸ್ರಾವವಿರುವ ತನಕ ಅವಳು ಯಾವ ಹಾಸಿಗೆಯ ಮೇಲೆ ಮಲಗಿದರೂ ಅದು ಮುಟ್ಟಿನ ಕಾಲದಲ್ಲಿ ಮಲಗಿದ ಹಾಸಿಗೆಯಂತೆಯೇ ಅಶುದ್ಧವಾಗುವುದು. ಅವಳು ಯಾವುದರ ಮೇಲೆ ಕುಳಿತುಕೊಂಡರೂ ಅದು ಮುಟ್ಟಿನ ಕಾಲದಲ್ಲಿ ಕುಳಿತುಕೊಂಡ ವಸ್ತುವಿನಂತೆ ಅಶುದ್ಧವಾಗಿರುವುದು.
[27] ಆ ವಸ್ತುಗಳನ್ನು ಮುಟ್ಟಿದವನು ಅಶುದ್ಧನಾದ್ದರಿಂದ ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಬೇಕು; ಅವನು ಸಾಯಂಕಾಲದ ವರೆಗೆ ಅಶುದ್ಧನಾಗಿರುವನು.
[28] ಅವಳಿಗೆ ರಕ್ತಸ್ರಾವ ನಿಂತ ದಿನದಿಂದ ಅವಳು ಏಳು ದಿನಗಳನ್ನು ಲೆಕ್ಕ ಹಾಕಿಕೊಂಡ ತರುವಾಯ ಶುದ್ಧಳಾಗುವಳು.
[29] ಎಂಟನೆಯ ದಿನದಲ್ಲಿ ಅವಳು ಎರಡು ಬೆಳವಕ್ಕಿಗಳನ್ನಾಗಲಿ ಅಥವಾ ಎರಡು ಪಾರಿವಾಳದ ಮರಿಗಳನ್ನಾಗಲಿ ದೇವದರ್ಶನದ ಗುಡಾರದ ಬಾಗಿಲಿಗೆ ಯಾಜಕನ ಬಳಿಗೆ ತರಬೇಕು.
[30] ಯಾಜಕನು ದೋಷಪರಿಹಾರಕ ಯಜ್ಞಕ್ಕಾಗಿ ಒಂದನ್ನು ಮತ್ತು ಸರ್ವಾಂಗಹೋಮಕ್ಕಾಗಿ ಇನ್ನೊಂದನ್ನು ಸಮರ್ಪಿಸಬೇಕು. ಹೀಗೆ ಯಾಜಕನು ಅವಳ ಸ್ರಾವದಿಂದುಂಟಾದ ಅಶುದ್ಧತೆಯ ವಿಷಯವಾಗಿ ಯೆಹೋವನ ಸನ್ನಿಧಿಯಲ್ಲಿ ಅವಳಿಗೋಸ್ಕರ ದೋಷಪರಿಹಾರ ಮಾಡುವನು.
[31] “‘ಇಸ್ರಾಯೇಲರು ಅಶುದ್ಧತೆಗೆ ದೂರವಾಗಿರುವಂತೆ ನೀವು ಅವರನ್ನು ಈ ರೀತಿಯಾಗಿ ಕಾಪಾಡಬೇಕು. ಅವರು ಅಪವಿತ್ರರಾಗಿದ್ದು ತಮ್ಮ ಮಧ್ಯದಲ್ಲಿರುವ ನನ್ನ ಗುಡಾರವನ್ನು ಹೊಲೆಮಾಡಿದರೆ ನಾಶವಾಗುವರು.
[32] “‘ಮೇಹಸ್ರಾವವುಳ್ಳವನು, ವೀರ್ಯಸ್ಖಲನದಿಂದ ಅಶುದ್ಧನಾದವನು,
[33] ಮುಟ್ಟಾದ ಸ್ತ್ರೀಯು, ಸ್ರಾವವುಂಟಾಗುವ ಸ್ತ್ರೀ ಮತ್ತು ಪುರುಷರು, ಅಶುದ್ಧಳಾದ ಸ್ತ್ರೀಯನ್ನು ಸಂಗಮಿಸಿದವನು ಇವರ ವಿಷಯವಾಗಿ ಇದೇ ನಿಯಮ’” ಎಂದು ಹೇಳಿದನು.