[1] ಯೆಹೋವನು ಮೋಶೆಯ ಸಂಗಡ ಮಾತನಾಡಿ,
[2] “ದೇವಸ್ಥಾನದಲ್ಲಿನ ದೀಪಗಳನ್ನು ಪ್ರತಿನಿತ್ಯವೂ ಉರಿಸುವುದಕ್ಕಾಗಿ ಇಸ್ರಾಯೇಲರು ಎಣ್ಣೆಮರದ ಕಾಯಿಗಳನ್ನು ಕುಟ್ಟಿ ತೆಗೆದ ನಿರ್ಮಲವಾದ ಎಣ್ಣೆಯನ್ನು ನಿನಗೆ ತಂದುಕೊಡಬೇಕೆಂದು ಅವರಿಗೆ ಆಜ್ಞಾಪಿಸು.
[3] ದೇವದರ್ಶನದ ಗುಡಾರದಲ್ಲಿ ಆಜ್ಞಾಶಾಸನಗಳ ಮಂಜೂಷದ ಪೆಟ್ಟಿಗೆಯ ಮುಂದಣ ತೆರೆಯ ಹೊರಗೆ, ಆ ದೀಪಗಳು ಯೆಹೋವನ ಸನ್ನಿಧಿಯಲ್ಲಿ ಸಾಯಂಕಾಲದಿಂದ ಬೆಳಗಿನ ಜಾವದ ವರೆಗೂ ಉರಿಯುತ್ತಿರುವಂತೆ ಆರೋನನು ಅವುಗಳನ್ನು ಸರಿಪಡಿಸಬೇಕು. ಇದು ನಿಮಗೂ ಮತ್ತು ನಿಮ್ಮ ಸಂತತಿಯವರಿಗೂ ಶಾಶ್ವತನಿಯಮ.
[4] ಅವನು ಪ್ರತಿನಿತ್ಯವೂ ಯೆಹೋವನ ಸನ್ನಿಧಿಯಲ್ಲಿ ಹಣತೆಗಳನ್ನು ಆ ಚೊಕ್ಕಬಂಗಾರದ ದೀಪಸ್ತಂಭದ ಮೇಲೆ ಸರಿಯಾಗಿ ಇಟ್ಟು ನಿರ್ವಹಿಸಬೇಕು.
[5] “ಅದಲ್ಲದೆ ನೀನು ಗೋದಿಯ ಹಿಟ್ಟಿನಿಂದ ಹನ್ನೆರಡು ರೊಟ್ಟಿಗಳನ್ನು ಮಾಡಬೇಕು; ಪ್ರತಿಯೊಂದು ರೊಟ್ಟಿಯು ಆರಾರು ಸೇರಿನದಾಗಿರಬೇಕು.
[6] ಅವುಗಳನ್ನು ಆರಾರು ರೊಟ್ಟಿಗಳ ಮೇರೆಗೆ ಎರಡು ರಾಶಿಗಳಾಗಿ, ಚೊಕ್ಕಬಂಗಾರದ ಮೇಜಿನ ಮೇಲೆ ಯೆಹೋವನ ಸನ್ನಿಧಿಯಲ್ಲಿ ಇಡಬೇಕು.
[7] ಒಂದೊಂದು ರಾಶಿಯ ಮೇಲೆ ಸ್ವಚ್ಛವಾದ ಧೂಪವನ್ನು ಇಡಬೇಕು. ಆ ರೊಟ್ಟಿಗಳ ನೈವೇದ್ಯವನ್ನು ಸೂಚಿಸುವುದಕ್ಕಾಗಿ ಆ ಧೂಪವೇ ಯೆಹೋವನಿಗೆ ಹೋಮಮಾಡಬೇಕು.
[8] ಯಾಜಕನು ಯಾವಾಗಲೂ ಪ್ರತಿ ಸಬ್ಬತ್ ದಿನದಲ್ಲಿ ರೊಟ್ಟಿಗಳನ್ನು ತಂದು ಯೆಹೋವನ ಸನ್ನಿಧಿಯಲ್ಲಿ ಕ್ರಮಪಡಿಸಬೇಕು. ಶಾಶ್ವತವಾದ ನಿಬಂಧನೆಯ ಮೇರೆಗೆ ಅವುಗಳನ್ನು ಇಸ್ರಾಯೇಲರಿಗೋಸ್ಕರ ಯೆಹೋವನಿಗೆ ಸಮರ್ಪಿಸಬೇಕು.
[9] ಅವು ಆರೋನನಿಗೂ ಮತ್ತು ಅವನ ಸಂತತಿಯವರಿಗೂ ಸಲ್ಲಬೇಕು. ಮಹಾಪರಿಶುದ್ಧವಾದ ಅವುಗಳನ್ನು ದೇವಸ್ಥಾನದ ಪ್ರಾಕಾರದಲ್ಲಿಯೇ ತಿನ್ನಬೇಕು. ಅವು ಯೆಹೋವನಿಗೆ ಸಮರ್ಪಿತವಾದ ಹೋಮದ್ರವ್ಯಗಳಿಗೆ ಸೇರಿದವುಗಳಾದುದರಿಂದ ಶಾಶ್ವತನಿಯಮದ ಪ್ರಕಾರ ಯಾಜಕರಿಗೇ ಸಲ್ಲಬೇಕು” ಅಂದನು.
[10] ಇಸ್ರಾಯೇಲ್ ಸ್ತ್ರೀಯಲ್ಲಿ ಐಗುಪ್ತ ಪುರುಷನಿಂದ ಹುಟ್ಟಿದವನೊಬ್ಬನು ಇಸ್ರಾಯೇಲರ ಪಾಳೆಯದಲ್ಲಿ, ಇಸ್ರಾಯೇಲನಾದ ಒಬ್ಬ ಮನುಷ್ಯನ ಸಂಗಡ ಜಗಳವಾಡುತ್ತಾ ಬಂದನು.
[11] ಅವನು ಯೆಹೋವನ ಹೆಸರನ್ನು ದೂಷಿಸಿ ಆತನನ್ನು ಶಪಿಸಿದ್ದರಿಂದ ಅವರು ಅವನನ್ನು ಮೋಶೆಯ ಬಳಿಗೆ ಹಿಡಿದು ಕರೆದುಕೊಂಡು ಬಂದರು. ಅವನ ತಾಯಿಯು ದಾನ್ ಕುಲದ ದಿಬ್ರೀಯ ಮಗಳಾದ ಶೆಲೋಮೀತ್ ಎಂಬುವವಳು.
[12] ಅವನ ವಿಷಯವಾಗಿ ಯೆಹೋವನ ತೀರ್ಪನ್ನು ತಿಳುಕೊಳ್ಳುವ ತನಕ ಅವನನ್ನು ಕಾವಲಲ್ಲಿರಿಸಿದರು.
[13] ಆಗ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ,
[14] “ದೂಷಿಸಿದ ಆ ಮನುಷ್ಯನನ್ನು ಪಾಳೆಯದ ಹೊರಗೆ ಒಯ್ಯಬೇಕು. ಅವನ ದೂಷಣೆಯ ಮಾತುಗಳನ್ನು ಕೇಳಿದವರೆಲ್ಲರೂ ಅವನ ತಲೆಯ ಮೇಲೆ ತಮ್ಮ ಕೈಗಳನ್ನಿಟ್ಟನಂತರ ಸಮೂಹದವರೆಲ್ಲರೂ ಅವನನ್ನು ಕಲ್ಲೆಸೆದು ಕೊಲ್ಲಬೇಕು.
[15] ಮತ್ತು ನೀನು ಇಸ್ರಾಯೇಲರಿಗೆ ಹೀಗೆ ಹೇಳಬೇಕು, ‘ತನ್ನ ದೇವರನ್ನು ದೂಷಿಸಿದವನು ಆ ದೋಷದ ಫಲವನ್ನು ಅನುಭವಿಸಬೇಕು.
[16] ಯೆಹೋವನ ಹೆಸರನ್ನು ನಿಂದಿಸಿದವನಿಗೆ ಮರಣ ಶಿಕ್ಷೆಯಾಗಬೇಕು; ಸಮೂಹದವರೆಲ್ಲರೂ ಅವನನ್ನು ಕಲ್ಲೆಸೆದು ಕೊಲ್ಲಬೇಕು. ಅನ್ಯದೇಶಸ್ಥನೇ ಆಗಿರಲಿ ಅಥವಾ ಸ್ವದೇಶಸ್ಥನೇ ಆಗಿರಲಿ ಯೆಹೋವನ ಹೆಸರನ್ನು ನಿಂದಿಸಿದರೆ ಅವನಿಗೆ ಮರಣಶಿಕ್ಷೆಯಾಗಬೇಕು.
[17] “‘ಮನುಷ್ಯನನ್ನು ಕೊಂದವನಿಗೆ ಮರಣ ಶಿಕ್ಷೆಯಾಗಬೇಕು.
[18] ಪಶುವನ್ನು ಹೊಡೆದು ಕೊಂದವನಿಂದ ಅದಕ್ಕೆ ಪ್ರತಿಯಾಗಿ ಈಡನ್ನು ಕೊಡಿಸಬೇಕು, ಪ್ರಾಣಿಗೆ ಪ್ರತಿಯಾಗಿ ಪ್ರಾಣಿಯನ್ನು ಕೊಡಿಸಬೇಕು.
[19] ಯಾವನಾದರೂ ಮತ್ತೊಬ್ಬನನ್ನು ಅಂಗಹೀನಮಾಡಿದರೆ ಅವನು ಮಾಡಿದಂತೆಯೇ ಅವನಿಗೆ ಮಾಡಿಸಬೇಕು.
[20] ಅವಯವವನ್ನು ಮುರಿದವನಿಗೆ ಅವಯವವನ್ನು ಮುರಿಯುವುದೇ ಶಿಕ್ಷೆ. ಕಣ್ಣಿಗೆ ಪ್ರತಿಯಾಗಿ ಕಣ್ಣನ್ನೂ, ಹಲ್ಲಿಗೆ ಪ್ರತಿಯಾಗಿ ಹಲ್ಲನ್ನೂ ತೆಗೆಸಬೇಕು. ಮತ್ತೊಬ್ಬನನ್ನು ಅಂಗಹೀನ ಮಾಡಿದವನಿಗೆ ಈ ಪ್ರಕಾರ ಪ್ರತಿಕಾರ ಮಾಡಬೇಕು.
[21] ಪಶುವನ್ನು ಕೊಂದವನು ಅದಕ್ಕೆ ಬದಲಾಗಿ ಈಡು ಕೊಡಬೇಕು. ಮನುಷ್ಯನನ್ನು ಕೊಂದವನಿಗೆ ಮರಣಶಿಕ್ಷೆಯಾಗಬೇಕು.
[22] ಅನ್ಯರಿಗಾಗಲಿ ಅಥವಾ ಸ್ವದೇಶದವರಿಗಾಗಲಿ ಪಕ್ಷಪಾತವಿಲ್ಲದೆ ಒಂದೇ ನಿಯಮವಿರಬೇಕು. ನಾನು ನಿಮ್ಮ ದೇವರಾದ ಯೆಹೋವನು’” ಎಂಬುದೇ.
[23] ಮೋಶೆ ಈ ಮಾತುಗಳನ್ನು ಇಸ್ರಾಯೇಲರಿಗೆ ತಿಳಿಸಲಾಗಿ ಅವರು ದೂಷಿಸಿದವನಾದ ಆ ಮನುಷ್ಯನನ್ನು ಪಾಳೆಯದ ಹೊರಕ್ಕೆ ತೆಗೆದುಕೊಂಡು ಹೋಗಿ ಕಲ್ಲೆಸೆದು ಕೊಂದುಬಿಟ್ಟರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಾಯೇಲರು ಮಾಡಿದರು.