[1] ಆರೋನನ ಇಬ್ಬರು ಮಕ್ಕಳು ಯೆಹೋವನ ಸನ್ನಿಧಿಗೆ ಬಂದು ನಾಶವಾದ ಮೇಲೆ ಯೆಹೋವನು ಮೋಶೆಯ ಸಂಗಡ ಮಾತನಾಡಿ,
[2] “ನಿನ್ನ ಅಣ್ಣನಾದ ಆರೋನನು ಮನಸ್ಸಿಗೆ ಬಂದಾಗೆಲ್ಲಾ ತೆರೆಯನ್ನು ದಾಟಿ ಮಹಾಪವಿತ್ರವಾದ ಸ್ಥಾನದೊಳಕ್ಕೆ ಮಂಜೂಷದ ಮೇಲಣ ಕೃಪಾಸನದ ಹತ್ತಿರಕ್ಕೆ ಬರಬಾರದೆಂದು ಅವನಿಗೆ ಹೇಳು. ನಾನು ಕೃಪಾಸನದ ಮೇಲೆ ಮೇಘದಲ್ಲಿ ಕಾಣಿಸಿಕೊಳ್ಳುವುದರಿಂದ ಅವನು ನಾಶವಾಗುವನು.
[3] ಆರೋನನು ಮಹಾಪವಿತ್ರಸ್ಥಾನದೊಳಗೆ ಬರುವಾಗ ಮುಂದೆ ಹೇಳುವ ರೀತಿಯಲ್ಲಿ ಬರಬೇಕು. ಅವನು ದೋಷಪರಿಹಾರಕ ಯಜ್ಞಕ್ಕಾಗಿ ಹೋರಿಯನ್ನು ಮತ್ತು ಸರ್ವಾಂಗಹೋಮಕ್ಕಾಗಿ ಟಗರನ್ನು ತರಬೇಕು.
[4] ಅವನು ಪರಿಶುದ್ಧವಾದ ನಾರಿನ ನಿಲುವಂಗಿಯನ್ನು ತೊಟ್ಟುಕೊಂಡು, ನಾರಿನ ಒಳಉಡುಪನ್ನು ಹಾಕಿಕೊಂಡು, ನಾರಿನ ನಡುಕಟ್ಟನ್ನು ಕಟ್ಟಿಕೊಂಡು ಮತ್ತು ತಲೆಗೆ ನಾರಿನ ಪೇಟವನ್ನು ಸುತ್ತಿಕೊಳ್ಳಬೇಕು. ಅವು ದೀಕ್ಷಾವಸ್ತ್ರಗಳಾದುದರಿಂದ ಅವನು ಅವುಗಳನ್ನು ಧರಿಸಿಕೊಳ್ಳುವುದಕ್ಕೆ ಮುಂಚೆ ಸ್ನಾನಮಾಡಬೇಕು.
[5] ಇಸ್ರಾಯೇಲರ ಜನಸಮೂಹದಿಂದ ದೋಷಪರಿಹಾರಕ ಯಜ್ಞಕ್ಕಾಗಿ ಎರಡು ಹೋತಗಳನ್ನು ಮತ್ತು ಸರ್ವಾಂಗಹೋಮಕ್ಕಾಗಿ ಒಂದು ಟಗರನ್ನು ತೆಗೆದುಕೊಂಡು ಬರಬೇಕು.
[6] ಆರೋನನು ತನಗಾಗಿಯೂ ಮತ್ತು ತನ್ನ ಮನೆತನದವರಿಗಾಗಿಯೂ ದೋಷಪರಿಹಾರ ಮಾಡಬೇಕು.
[7] ಆ ಎರಡು ಹೋತಗಳನ್ನು ಅವನು ದೇವದರ್ಶನದ ಗುಡಾರದ ಬಾಗಿಲಲ್ಲಿ ಯೆಹೋವನ ಸನ್ನಿಧಿಯಲ್ಲಿ ನಿಲ್ಲಿಸಬೇಕು.
[8] ಆಗ ಅವನು ಆ ಹೋತಗಳಲ್ಲಿ ಒಂದು ಯೆಹೋವನಿಗೋಸ್ಕರವೆಂದು ಮತ್ತೊಂದು ಅಜಾಜೇಲನಿಗೋಸ್ಕರವೆಂದು ಚೀಟುಗಳನ್ನು ಬರೆದು ಹಾಕಬೇಕು.
[9] ಯಾವ ಹೋತ ಯೆಹೋವನದೆಂದು ಗೊತ್ತಾಗುವುದೋ ಅದನ್ನು ಆರೋನನು ದೋಷಪರಿಹಾರಕ ಯಜ್ಞವಾಗಿ ಸಮರ್ಪಿಸಬೇಕು.
[10] ಯಾವ ಹೋತ ಅಜಾಜೇಲನದೆಂದು ಗೊತ್ತಾಗುವುದೋ ಅದನ್ನು ಯೆಹೋವನ ಸನ್ನಿಧಿಯಲ್ಲಿ ಸಜೀವವಾಗಿಯೇ ನಿಲ್ಲಿಸಿ, ಅದರ ಮೇಲೆ ದೋಷವನ್ನು ಹೊರಿಸಿ ಅರಣ್ಯಕ್ಕೆ ಅಜಾಜೇಲನಿಗಾಗಿ ಬಿಡಬೇಕು.
[11] “ಆರೋನನು ತನಗಾಗಿ ದೋಷಪರಿಹಾರಕ ಯಜ್ಞದ ಹೋರಿಯನ್ನು ಸಮರ್ಪಿಸಿ ತನಗಾಗಿಯೂ ಮತ್ತು ತನ್ನ ಮನೆತನದವರಿಗಾಗಿಯೂ ದೋಷಪರಿಹಾರವನ್ನು ಮಾಡಬೇಕು.
[12] ಅವನು ತನಗೋಸ್ಕರ ಹೋರಿಯನ್ನು ವಧಿಸಿದ ಮೇಲೆ ಯೆಹೋವನ ಸನ್ನಿಧಿಯಲ್ಲಿರುವ ಯಜ್ಞವೇದಿಯಿಂದ ಕೆಂಡಗಳನ್ನು ಧೂಪಾರತಿಯಲ್ಲಿ ತುಂಬಿಸಿ, ಪರಿಮಳಧೂಪದ್ರವ್ಯದ ಚೂರ್ಣದಲ್ಲಿ ಎರಡು ಹಿಡಿ ತೆಗೆದುಕೊಂಡು ಅವುಗಳನ್ನು ತೆರೆಯೊಳಗೆ ತರಬೇಕು.
[13] ಅವನು ಆ ಧೂಪವನ್ನು ಯೆಹೋವನ ಸನ್ನಿಧಿಯಲ್ಲಿಯೇ ಕೆಂಡಗಳ ಮೇಲೆ ಹಾಕಬೇಕು. ಅವನಿಗೆ ಪ್ರಾಣನಷ್ಟವಾಗದಂತೆ ಆ ಧೂಪದ ಹೊಗೆಯು ಮೇಘದೋಪಾದಿಯಲ್ಲಿ ಆಜ್ಞಾಶಾಸನಗಳ ಮೇಲಣ ಕೃಪಾಸನವನ್ನು ಆವರಿಸಿಕೊಳ್ಳುವುದು.
[14] ಆಗ ಅವನು ಆ ಹೋರಿಯ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಕೃಪಾಸನದ ಪೂರ್ವಭಾಗದ ಮೇಲೆ ಬೆರಳಿನಿಂದ ಚಿಮುಕಿಸಿ ಕೃಪಾಸನದ ಎದುರಾಗಿಯೂ ಏಳು ಸಾರಿ ಚಿಮುಕಿಸಬೇಕು.
[15] “ತರುವಾಯ ಅವನು ಜನರಿಗಾಗಿ ಮಾಡಿದ ದೋಷಪರಿಹಾರಕ ಯಜ್ಞದ ಹೋತವನ್ನು ವಧಿಸಿ, ಅದರ ರಕ್ತವನ್ನು ತೆರೆಯೊಳಗೆ ತಂದು, ಹೋರಿಯ ರಕ್ತದಿಂದ ಮಾಡಿದಂತೆಯೇ ಇದರ ರಕ್ತದಿಂದಲೂ ಮಾಡಿ, ಕೃಪಾಸನದ ಮೇಲೆಯೂ ಮತ್ತು ಅದರ ಎದುರಾಗಿಯೂ ಚಿಮುಕಿಸಬೇಕು.
[16] ಹೀಗೆ ಇಸ್ರಾಯೇಲರು ನಾನಾ ವಿಧವಾದ ಅಶುದ್ಧತ್ವ, ಅಪರಾಧ, ದ್ರೋಹ ಇವುಗಳಿಂದ ಮಹಾಪವಿತ್ರಸ್ಥಾನಕ್ಕೆ ಉಂಟುಮಾಡಿದ ದೋಷವನ್ನು ಆರೋನನು ಪರಿಹರಿಸುವನು. ಅಶುದ್ಧರಾದ ಅವರ ನಡುವೆ ಇರುವ ದೇವದರ್ಶನದ ಗುಡಾರಕ್ಕೋಸ್ಕರವೂ ಅವನು ಹಾಗೆಯೇ ದೋಷಪರಿಹಾರ ಮಾಡುವನು.
[17] ಅವನು ದೋಷಪರಿಹಾರ ಮಾಡುವುದಕ್ಕಾಗಿ ಮಹಾ ಪವಿತ್ರಸ್ಥಾನದೊಳಗೆ ಹೋಗಿ ಹೊರಗೆ ಬರುವ ತನಕ ಯಾರೂ ದೇವದರ್ಶನದ ಗುಡಾರದಲ್ಲಿ ಹೋಗಬಾರದು. ಹಾಗೆ ತನಗಾಗಿಯೂ, ತನ್ನ ಮನೆತನದವರಿಗಾಗಿಯೂ ಮತ್ತು ಇಸ್ರಾಯೇಲರ ಎಲ್ಲಾ ಜನಸಮೂಹಕ್ಕಾಗಿಯೂ ದೋಷಪರಿಹಾರ ಮಾಡುವನು.
[18] ತರುವಾಯ ಅವನು ಹೊರಗೆ ಬಂದು ಯೆಹೋವನ ಸನ್ನಿಧಿಯಲ್ಲಿರುವ ಯಜ್ಞವೇದಿಯ ಬಳಿಗೆ ಹೋಗಿ ಅದಕ್ಕಾಗಿ ದೋಷಪರಿಹಾರ ಮಾಡಬೇಕು. ಆ ಹೋರಿಯ ರಕ್ತದಲ್ಲಿಯೂ ಹಾಗೂ ಆ ಹೋತದ ರಕ್ತದಲ್ಲಿಯೂ ಸ್ವಲ್ಪವನ್ನು ತೆಗೆದುಕೊಂಡು ಯಜ್ಞವೇದಿಯ ಕೊಂಬುಗಳಿಗೆ ಸುತ್ತಲೂ ಹಚ್ಚಬೇಕು.
[19] ಅವನು ಆ ರಕ್ತದಲ್ಲಿ ಸ್ವಲ್ಪವನ್ನು ಅದರ ಮೇಲೆ ಏಳು ಸಾರಿ ಬೆರಳಿನಿಂದ ಚಿಮುಕಿಸಿ ಇಸ್ರಾಯೇಲರಿಂದ ಅದಕ್ಕೆ ಉಂಟಾದ ಅಶುದ್ಧತ್ವವನ್ನು ಹೋಗಲಾಡಿಸಿ ಅದನ್ನು ಪರಿಶುದ್ಧಪಡಿಸಬೇಕು.
[20] “ಆರೋನನು ಮಹಾಪವಿತ್ರಸ್ಥಾನ, ದೇವದರ್ಶನದ ಗುಡಾರ, ಯಜ್ಞವೇದಿ ಇವುಗಳಿಗೋಸ್ಕರ ದೋಷಪರಿಹಾರ ಮಾಡಿ ಮುಗಿಸಿದ ಮೇಲೆ ಆ ಸಜೀವವಾದ ಹೋತವನ್ನು ತರಿಸಬೇಕು.
[21] ಅವನು ಅದರ ತಲೆಯ ಮೇಲೆ ಎರಡು ಕೈಗಳನ್ನು ಇಟ್ಟು, ಇಸ್ರಾಯೇಲರ ಎಲ್ಲಾ ಪಾಪಗಳನ್ನು, ದ್ರೋಹಗಳನ್ನು ಮತ್ತು ಅಪರಾಧಗಳನ್ನು ಯೆಹೋವನಿಗೆ ಅರಿಕೆಮಾಡಿ ಆ ಹೋತದ ತಲೆಯ ಮೇಲೆ ಹೊರಿಸಿ, ಅದನ್ನು ಆ ಕೆಲಸಕ್ಕೆ ನೇಮಕವಾದವನ ಕೈಯಿಂದ ಅರಣ್ಯಕ್ಕೆ ಕಳುಹಿಸಿಬಿಡಬೇಕು.
[22] ಆ ಹೋತ ಅವರ ಎಲ್ಲಾ ಪಾಪಗಳನ್ನು ತನ್ನ ಮೇಲೆ ಹೊತ್ತುಕೊಂಡು ನಿರ್ಜನವಾದ ಪ್ರದೇಶಕ್ಕೆ ಹೋಗುವಂತೆ ಆ ಮನುಷ್ಯನು ಅದನ್ನು ಅರಣ್ಯಕ್ಕೆ ತೆಗೆದುಕೊಂಡುಹೋಗಿ ಅಲ್ಲೇ ಬಿಟ್ಟುಬಿಡಬೇಕು.
[23] “ತರುವಾಯ ಆರೋನನು ದೇವದರ್ಶನದ ಗುಡಾರದೊಳಗೆ ಬಂದು ತಾನು ಮಹಾಪವಿತ್ರಸ್ಥಾನದೊಳಗೆ ಹೋಗುವುದಕ್ಕಾಗಿ ಧರಿಸಿಕೊಂಡಿದ್ದ ನಾರುಮಡಿಗಳನ್ನು ತೆಗೆದು ಅಲ್ಲೇ ಇಡಬೇಕು.
[24] ಅವನು ಪವಿತ್ರ ಸ್ಥಳದ ಪ್ರಾಕಾರದಲ್ಲಿ ಸ್ನಾನಮಾಡಿ, ತನ್ನ ವಸ್ತ್ರಗಳನ್ನು ಧರಿಸಿಕೊಳ್ಳಬೇಕು. ಆಗ ಅವನು ಹೊರಗೆ ಬಂದು ತನಗಾಗಿಯೂ ಮತ್ತು ಜನಸಮೂಹಕ್ಕಾಗಿಯೂ ಸರ್ವಾಂಗಹೋಮಗಳನ್ನು ಸಮರ್ಪಿಸಿ, ತನಗಾಗಿಯೂ ಮತ್ತು ಜನರಿಗಾಗಿಯೂ ದೋಷಪರಿಹಾರ ಮಾಡಬೇಕು.
[25] ಅವನು ದೋಷಪರಿಹಾರಕ ಯಜ್ಞಪಶುಗಳ ಕೊಬ್ಬನ್ನು ಯಜ್ಞವೇದಿಯ ಮೇಲೆ ಹೋಮಮಾಡಬೇಕು.
[26] “ಅಜಾಜೇಲನಿಗೆ ಹೋತವನ್ನು ಬಿಟ್ಟುಬಂದವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಿಯೇ ಪಾಳೆಯಕ್ಕೆ ಬರಬೇಕು.
[27] ದೋಷಪರಿಹಾರಕ ಯಜ್ಞಪಶುಗಳಾದ ಹೋರಿ ಮತ್ತು ಹೋತಗಳ ರಕ್ತವನ್ನು ಮಹಾಪವಿತ್ರಸ್ಥಾನದಲ್ಲಿ ದೋಷಪರಿಹಾರ ಮಾಡುವುದಕ್ಕಾಗಿ ತಂದ ಮೇಲೆ ಅವುಗಳ ಶರೀರಗಳನ್ನು ಪಾಳೆಯದ ಆಚೆಗೆ ತೆಗೆದುಕೊಂಡು ಹೋಗಿ, ಚರ್ಮ, ಮಾಂಸ ಮತ್ತು ಕಲ್ಮಷಗಳೆಲ್ಲವನ್ನು ಬೆಂಕಿಯಿಂದ ಸುಡಿಸಬೇಕು.
[28] ಅವುಗಳನ್ನು ಸುಟ್ಟವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಿಯೇ ಪಾಳೆಯದೊಳಗೆ ಬರಬೇಕು.
[29] “ಸ್ವದೇಶಸ್ಥರಾದ ನೀವೂ ಮತ್ತು ನಿಮ್ಮಲ್ಲಿ ವಾಸವಾಗಿರುವ ಅನ್ಯದೇಶದವರು, ಎಲ್ಲರೂ ಏಳನೆಯ ತಿಂಗಳಿನ ಹತ್ತನೆಯ ದಿನದಲ್ಲಿ ಸಕಲ ವಿಧವಾದ ಕೆಲಸಗಳನ್ನು ಬಿಟ್ಟು ಉಪವಾಸಮಾಡಿ ನಿಮ್ಮ ಆತ್ಮಗಳನ್ನು ಕುಂದಿಸಿಕೊಳ್ಳಬೇಕು. ಇದು ನಿಮಗೆ ಶಾಶ್ವತವಾದ ನಿಯಮ.
[30] ಏಕೆಂದರೆ ನೀವು ಪರಿಶುದ್ಧರಾಗುವುದಕ್ಕಾಗಿ ಈ ದಿನದಲ್ಲಿ ನಿಮಗೋಸ್ಕರ ದೋಷಪರಿಹಾರವಾಗುವುದು, ಯೆಹೋವನ ದೃಷ್ಟಿಯಲ್ಲಿ ನಿಮ್ಮ ಎಲ್ಲಾ ದೋಷಗಳು ನಿವಾರಣೆಯಾಗುವವು.
[31] ಈ ದಿನ ನೀವು ಸಂಪೂರ್ಣವಾಗಿ ಕೆಲಸವನ್ನು ನಿಲ್ಲಿಸಬೇಕಾದ ಸಬ್ಬತ್ ದಿನವಾಗಿರಬೇಕು; ಇದರಲ್ಲಿ ನೀವು ಉಪವಾಸ ಮಾಡಬೇಕು; ಇದೇ ನಿಮಗೆ ಶಾಶ್ವತನಿಯಮ.
[32] “ಆರೋನನ ವಂಶದವರಲ್ಲಿ ಯಾವನಿಗೆ ಪಿತೃಸ್ಥಾನದಲ್ಲಿ ಮಹಾಯಾಜಕನ ಸೇವಾವೃತ್ತಿಯನ್ನು ನಡೆಸುವುದಕ್ಕೆ ಪಟ್ಟಾಭಿಷೇಕವಾಗುವುದೋ ಅವನೇ ಈ ದೋಷಪರಿಹಾರ ಕಾರ್ಯವನ್ನು ಆಚರಿಸಬೇಕು. ಅವನೇ ಆ ಪರಿಶುದ್ಧವಾದ ನಾರುಮಡಿಗಳನ್ನು ಧರಿಸಿಕೊಳ್ಳಬೇಕು.
[33] ಅವನು ದೇವಸ್ಥಾನ, ದೇವದರ್ಶನದ ಗುಡಾರ, ಯಜ್ಞವೇದಿ, ಯಾಜಕರು, ಜನಸಮೂಹದವರು ಈ ಎಲ್ಲರಿಗೋಸ್ಕರ ದೋಷಪರಿಹಾರವನ್ನು ಮಾಡಬೇಕು.
[34] ಇಸ್ರಾಯೇಲರ ಎಲ್ಲಾ ದೋಷಗಳನ್ನು ನಿವಾರಣೆಮಾಡುವುದಕ್ಕಾಗಿ ಅವರಿಗೋಸ್ಕರ ವರ್ಷಕ್ಕೆ ಒಂದಾವರ್ತಿ ದೋಷಪರಿಹಾರವನ್ನು ಮಾಡಬೇಕೆಂಬುದೇ ನಿಮಗೆ ಶಾಶ್ವತನಿಯಮ” ಎಂದು ಹೇಳಿದನು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಆರೋನನು ಮಾಡಿದನು.