[1] ಯೆಹೋವನು ಮೋಶೆ ಮತ್ತು ಆರೋನರಿಗೆ,
[2] “ಒಬ್ಬ ಮನುಷ್ಯನ ಮೈಮೇಲೆ ಬಾವಾಗಲಿ, ಗುಳ್ಳೆಯಾಗಲಿ ಅಥವಾ ಹೊಳೆಯುವ ಮಚ್ಚೆಯಾಗಲಿ ಉಂಟಾಗಿ ಅದರಲ್ಲಿ ಕುಷ್ಠರೋಗದ ಲಕ್ಷಣಗಳು ತೋರಿದರೆ ಅವನನ್ನು ಮಹಾಯಾಜಕನಾದ ಆರೋನನ ಬಳಿಗೆ ಇಲ್ಲವೆ ಆರೋನನ ಮಕ್ಕಳಾದ ಯಾಜಕರಲ್ಲಿ ಒಬ್ಬನ ಬಳಿಗೆ ಕರೆದುಕೊಂಡು ಬರಬೇಕು.
[3] ಯಾಜಕನು ಅವನ ಚರ್ಮದಲ್ಲಿರುವ ಮಚ್ಚೆಯನ್ನು ಪರೀಕ್ಷಿಸುವಾಗ ಆ ಮಚ್ಚೆಯಲ್ಲಿರುವ ರೋಮ ಬೆಳ್ಳಗಾಗಿದ್ದರೆ ಮತ್ತು ಆ ಮಚ್ಚೆ ಉಳಿದ ಚರ್ಮಕ್ಕಿಂತ ಆಳವಾಗಿದ್ದರೆ ಅದು ಕುಷ್ಠರೋಗ. ಯಾಜಕನು ಅದನ್ನು ಪರೀಕ್ಷಿಸಿ ಅವನನ್ನು ಅಶುದ್ಧನೆಂದು ನಿರ್ಣಯಿಸಬೇಕು.
[4] ಆ ಹೊಳೆಯುವ ಮಚ್ಚೆ ಬೆಳ್ಳಗಾಗಿದ್ದು ಉಳಿದ ಚರ್ಮಕ್ಕಿಂತ ಆಳವಾಗಿರದೆ ಹೋದರೆ ಮತ್ತು ಅಲ್ಲಿರುವ ರೋಮ ಬೆಳ್ಳಗಾಗದಿದ್ದರೆ ಯಾಜಕನು ಆ ಮಚ್ಚೆಯಿದ್ದವನನ್ನು ಏಳು ದಿನಗಳ ವರೆಗೆ ಪ್ರತ್ಯೇಕವಾಗಿ ಇರಿಸಬೇಕು.
[5] ಏಳನೆಯ ದಿನದಲ್ಲಿ ಯಾಜಕನು ಅವನನ್ನು ಪರೀಕ್ಷಿಸುವಾಗ ಆ ಮಚ್ಚೆ ದೇಹದ ಚರ್ಮದಲ್ಲಿ ಹರಡಿಕೊಳ್ಳದೆ ಮೊದಲು ಇದ್ದಂತೆಯೇ ಕಾಣಿಸಿದರೆ ಯಾಜಕನು ಇನ್ನು ಏಳು ದಿನಗಳ ವರೆಗೂ ಅವನನ್ನು ಪ್ರತ್ಯೇಕವಾಗಿ ಇರಿಸಬೇಕು.
[6] ಆ ಏಳು ದಿನಗಳಾದ ಮೇಲೆ ಯಾಜಕನು ಪುನಃ ಅವನನ್ನು ಪರೀಕ್ಷಿಸುವಾಗ ಆ ಮಚ್ಚೆ ದೇಹದ ಚರ್ಮದಲ್ಲಿ ಹರಡಿಕೊಳ್ಳದೆ ಮೊಬ್ಬಾಗಿದ್ದರೆ ಯಾಜಕನು ಅದು ಬರೀ ಗುಳ್ಳೆಯೆಂದು ತಿಳಿದು ಅವನನ್ನು ಶುದ್ಧನೆಂದು ನಿರ್ಣಯಿಸಬೇಕು. ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಶುದ್ಧನಾಗುವನು.
[7] ಆದರೆ ಅವನು ತನ್ನ ಶುದ್ಧಿಯ ವಿಷಯದಲ್ಲಿ ತನ್ನನ್ನು ಯಾಜಕನಿಗೆ ತೋರಿಸಿಕೊಂಡನಂತರ ಆ ಗುಳ್ಳೆ ದೇಹದ ಚರ್ಮದಲ್ಲಿ ಹರಡಿಕೊಂಡರೆ ಅವನು ಪುನಃ ಯಾಜಕನಿಗೆ ತೋರಿಸಿಕೊಳ್ಳಬೇಕು.
[8] ಯಾಜಕನು ಪರೀಕ್ಷಿಸುವಾಗ ಆ ಮಚ್ಚೆ ದೇಹದ ಚರ್ಮದಲ್ಲಿ ಹರಡಿಕೊಂಡಿದ್ದರೆ ಅದು ಕುಷ್ಠವೆಂದು ತಿಳಿದು ಅವನನ್ನು ಅಶುದ್ಧನೆಂದು ನಿರ್ಣಯಿಸಬೇಕು.
[9] “ಕುಷ್ಠರೋಗದ ಲಕ್ಷಣಗಳು ಯಾವನಲ್ಲಾದರೂ ಕಾಣಿಸಿದರೆ ಅವನನ್ನು ಯಾಜಕನ ಬಳಿಗೆ ಕರೆದುಕೊಂಡು ಬರಬೇಕು.
[10] ಯಾಜಕನು ಅವನನ್ನು ಪರೀಕ್ಷಿಸುವಾಗ ದೇಹದ ಚರ್ಮದಲ್ಲಿ ಬೆಳ್ಳಗಾದ ಬಾವು ಇದ್ದರೆ ಮತ್ತು ಅಲ್ಲಿರುವ ರೋಮವು ಬೆಳ್ಳಗಾಗಿದ್ದರೆ ಮತ್ತು ಆ ಬಾವಿನಲ್ಲಿ ಮಾಂಸ ಕಾಣಿಸಿದರೆ ಅದು ಹಳೇ ಕುಷ್ಠರೋಗದ ಗುರುತು.
[11] ಅವನು ಅಶುದ್ಧನಾದುದರಿಂದ ಯಾಜಕನು ಅವನನ್ನು ಪ್ರತ್ಯೇಕಿಸದೆ ಅಶುದ್ಧನೆಂದು ನಿರ್ಣಯಿಸಬೇಕು.
[12] “ಆದರೆ ಒಬ್ಬನ ಚರ್ಮದಲ್ಲಿ ತೊನ್ನು ಹತ್ತಿ ಯಾಜಕನು ನೋಡುವ ಎಲ್ಲಾ ಕಡೆಯಲ್ಲಿಯೂ ತಲೆ ಮೊದಲುಗೊಂಡು ಅಂಗಾಲಿನವರೆಗೂ ಹರಡಿಕೊಂಡಿದ್ದರೆ,
[13] ಯಾಜಕನು ಪರೀಕ್ಷಿಸುವಾಗ ಆ ತೊನ್ನು ದೇಹದಲ್ಲೆಲ್ಲಾ ವ್ಯಾಪಿಸಿಕೊಂಡಿದ್ದರೆ, ಅಂಥವನನ್ನು ಶುದ್ಧನೆಂದು ಯಾಜಕನು ನಿರ್ಣಯಿಸಬೇಕು. ಅವನ ಚರ್ಮವೆಲ್ಲಾ ಬೆಳ್ಳಗಾಗಿ ಹೋದುದರಿಂದ ಅವನು ಶುದ್ಧನು.
[14] ಆದರೆ ಅಂಥವನ ದೇಹದಲ್ಲಿ ಎಲ್ಲಿಯಾದರೂ ಮಾಂಸ ಕಂಡುಬಂದರೆ ಅವನು ಅಶುದ್ಧನಾಗುವನು.
[15] ಯಾಜಕನು ಆ ಮಾಂಸವನ್ನು ನೋಡಿ ಅವನನ್ನು ಅಶುದ್ಧನೆಂದು ನಿರ್ಣಯಿಸಬೇಕು. ಅಂತಹ ಮಾಂಸವು ಅಶುದ್ಧವೇ; ಅದು ಕುಷ್ಠವೇ.
[16] ಆದರೆ ಆ ಮಾಂಸವು ಅದೇ ಪ್ರಕಾರವಾಗಿ ಇರದೆ ಪುನಃ ಬೆಳ್ಳಗಾದರೆ ಅವನು ಯಾಜಕನ ಬಳಿಗೆ ಬರಬೇಕು.
[17] ಯಾಜಕನು ಪರೀಕ್ಷಿಸುವಾಗ ಆ ಮಚ್ಚೆಯು ಬೆಳ್ಳಗಾಗಿಹೋಗಿದ್ದರೆ ಆ ಮನುಷ್ಯನನ್ನು ಶುದ್ಧನೆಂದು ನಿರ್ಣಯಿಸಬೇಕು; ಅವನು ಶುದ್ಧನೇ.
[18] “ಒಬ್ಬನ ದೇಹದ ಚರ್ಮದಲ್ಲಿ ಹುಣ್ಣು ಆಗಿದ್ದು ಅದು ವಾಸಿಯಾದ ಮೇಲೆ,
[19] ಅದು ಇದ್ದ ಸ್ಥಳದಲ್ಲಿ ಬಿಳಿ ಬಾವಾಗಲಿ ಅಥವಾ ಕೆಂಪು ಬಿಳುಪು ಮಿಶ್ರವಾಗಿ ಹೊಳೆಯುವ ಕಲೆಯಾಗಲಿ ಉಂಟಾದರೆ ಅವನು ತನ್ನನ್ನು ಯಾಜಕನಿಗೆ ತೋರಿಸಿಕೊಳ್ಳಬೇಕು.
[20] ಯಾಜಕನು ಪರೀಕ್ಷಿಸುವಾಗ ಆ ಕಲೆ ಉಳಿದ ಚರ್ಮಕ್ಕಿಂತ ಆಳವಾಗಿ ಕಂಡರೆ ಮತ್ತು ಅದರಲ್ಲಿರುವ ರೋಮ ಬೆಳ್ಳಗಾಗಿ ಹೋಗಿದ್ದರೆ ಆ ಹುಣ್ಣಿನಲ್ಲಿ ಕುಷ್ಠ ಹುಟ್ಟಿದ್ದರಿಂದ ಅವನು ಅಶುದ್ಧನೆಂದು ಯಾಜಕನು ನಿರ್ಣಯಿಸಬೇಕು.
[21] ಆದರೆ ಯಾಜಕನು ಪರೀಕ್ಷಿಸುವಾಗ ಅದರಲ್ಲಿ ಬಿಳಿ ರೋಮವಿಲ್ಲದೆ ಹೋದರೆ ಮತ್ತು ಆ ಕಲೆ ಉಳಿದ ಚರ್ಮಕ್ಕಿಂತ ಆಳವಾಗಿರದೆ ಮೊಬ್ಬಾಗಿದ್ದರೆ ಯಾಜಕನು ಅವನನ್ನು ಏಳು ದಿನಗಳು ಪ್ರತ್ಯೇಕವಾಗಿ ಇರಿಸಬೇಕು.
[22] ತರುವಾಯ ಅದು ಚರ್ಮದಲ್ಲಿ ಹರಡಿಕೊಂಡಿದ್ದರೆ ಯಾಜಕನು ಅವನನ್ನು ಅಶುದ್ಧನೆಂದು ನಿರ್ಣಯಿಸಬೇಕು; ಅದು ಕುಷ್ಠರೋಗವೇ.
[23] ಆದರೆ ಆ ಹೊಳೆಯುವ ಕಲೆ ಹರಡಿಕೊಳ್ಳದೆ ಮೊದಲಿದ್ದಂತೆಯೇ ಇದ್ದರೆ ಅದು ಆ ಹುಣ್ಣಿನ ಕಲೆಯೆಂದು ತಿಳಿದುಕೊಂಡು ಯಾಜಕನು ಅವನನ್ನು ಶುದ್ಧನೆಂದು ನಿರ್ಣಯಿಸಬೇಕು.
[24] “ಒಬ್ಬನ ದೇಹದ ಚರ್ಮದಲ್ಲಿ ಬೆಂಕಿಯಿಂದುಂಟಾದ ಬೊಬ್ಬೆ ಇರಲಾಗಿ ಆ ಬೊಬ್ಬೆಯ ಸ್ಥಳವು ಹೊಳೆಯುವ ಕಲೆಯಾಗಿ ಬೆಳ್ಳಗಾಗಿಯಾಗಲಿ ಕೆಂಪು ಬಿಳುಪು ಮಿಶ್ರವಾಗಿ ಇದ್ದರೆ ಯಾಜಕನು ಅದನ್ನು ನೋಡಬೇಕು.
[25] ಅವನು ಪರೀಕ್ಷಿಸುವಾಗ ಆ ಹೊಳೆಯುವ ಕಲೆಯಲ್ಲಿರುವ ರೋಮವು ಬೆಳ್ಳಗಾಗಿದ್ದರೆ ಮತ್ತು ಆ ಕಲೆಯು ಉಳಿದ ಚರ್ಮಕ್ಕಿಂತ ಆಳವಾಗಿ ತೋರಿದರೆ ಅದು ಆ ಬೊಬ್ಬೆಯಲ್ಲಿ ಹುಟ್ಟಿದ ಕುಷ್ಠವೆಂದು ತಿಳಿದು ಯಾಜಕನು ಅವನನ್ನು ಅಶುದ್ಧನೆಂದು ನಿರ್ಣಯಿಸಬೇಕು.
[26] ಆದರೆ ಯಾಜಕನು ಪರೀಕ್ಷಿಸುವಾಗ ಆ ಹೊಳೆಯುವ ಕಲೆಯಲ್ಲಿ ಬಿಳಿ ರೋಮವಿಲ್ಲದೆ ಹೋದರೆ ಮತ್ತು ಅದು ಉಳಿದ ಚರ್ಮಕ್ಕಿಂತ ಆಳವಾಗಿ ಕಾಣದೆ, ಮೊಬ್ಬಾಗಿ ಹೋಗಿದ್ದರೆ ಯಾಜಕನು ಅವನನ್ನು ಏಳು ದಿನಗಳ ತನಕ ಪ್ರತ್ಯೇಕವಾಗಿ ಇರಿಸಬೇಕು.
[27] ಏಳನೆಯ ದಿನದಲ್ಲಿ ಯಾಜಕನು ಅವನನ್ನು ಪರೀಕ್ಷಿಸುವಾಗ ಅದು ಚರ್ಮದಲ್ಲಿ ಹರಡಿಕೊಂಡಿದ್ದರೆ ಅದು ಕುಷ್ಠರೋಗವೆಂದು ತಿಳಿದು ಅವನನ್ನು ಅಶುದ್ಧನೆಂದು ನಿರ್ಣಯಿಸಬೇಕು.
[28] ಆ ಹೊಳೆಯುವ ಕಲೆಯು ಚರ್ಮದಲ್ಲಿ ಹರಡಿಕೊಳ್ಳದೆ ಮೊದಲಿನಂತೆಯೇ ಇದ್ದು ಮೊಬ್ಬಾಗಿಹೋಗಿದ್ದರೆ ಅದು ಬೆಂಕಿಸುಟ್ಟ ಬೊಬ್ಬೆಯೆಂದು ತಿಳಿದು ಯಾಜಕನು ಅವನನ್ನು ಶುದ್ಧನೆಂದು ನಿರ್ಣಯಿಸಬೇಕು. ಅದು ಬೆಂಕಿಯಿಂದ ಸುಟ್ಟ ಕಲೆಯೇ ಹೊರತು ಮತ್ತೇನೂ ಅಲ್ಲ.
[29] “ಹೆಂಗಸಿನ ತಲೆಯಲ್ಲಿ ಆಗಲಿ, ಗಂಡಸಿನ ತಲೆಯಲ್ಲಿ ಆಗಲಿ ಅಥವಾ ಗಡ್ಡದ ಮೇಲೆ ಆಗಲಿ ಕಲೆಯುಂಟಾದರೆ ಯಾಜಕನು ಅದನ್ನು ಪರೀಕ್ಷಿಸಬೇಕು.
[30] ಆಗ ಅದು ಉಳಿದ ಚರ್ಮಕ್ಕಿಂತ ಆಳವಾಗಿ ತೋರಿದರೆ ಮತ್ತು ಅದರಲ್ಲಿ ಹಳದಿಬಣ್ಣವುಳ್ಳ ಸಣ್ಣ ಕೂದಲು ಇದ್ದರೆ ಅದು ತಲೆಯಲ್ಲಾಗಲಿ ಅಥವಾ ಗಡ್ಡದಲ್ಲಾಗಲಿ ಉಂಟಾದ ಕುಷ್ಠವನ್ನು ಸೂಚಿಸುವ ಲಕ್ಷಣವಿದ್ದರೆ ಯಾಜಕನು ಅಂಥವನನ್ನು ಅಶುದ್ಧನೆಂದು ನಿರ್ಣಯಿಸಬೇಕು.
[31] ಯಾಜಕನು ಆ ಗಾಯವನ್ನು ನೋಡುವಾಗ ಅದು ಬೇರೆ ಚರ್ಮಕ್ಕಿಂತ ಆಳವಾಗಿ ಕಾಣದೆ ಹೋದಾಗ್ಯೂ, ಅದು ಇರುವ ಭಾಗದಲ್ಲಿ ಕಪ್ಪು ಕೂದಲು ಇಲ್ಲದಿದ್ದರೆ ಯಾಜಕನು ಅವನನ್ನು ಏಳು ದಿನಗಳ ತನಕ ಪ್ರತ್ಯೇಕವಾಗಿ ಇರಿಸಬೇಕು.
[32] ಏಳನೆಯ ದಿನದಲ್ಲಿ ಯಾಜಕನು ಪರೀಕ್ಷಿಸುವಾಗ ಆ ಗಾಯ ಹರಡಿಕೊಳ್ಳದೆ ಇದ್ದರೆ ಮತ್ತು ಅದು ಇರುವ ಭಾಗದಲ್ಲಿ ಹಳದಿ ಬಣ್ಣದ ಕೂದಲು ಇಲ್ಲದಿದ್ದರೆ ಮತ್ತು ಅದು ಉಳಿದ ಚರ್ಮಕ್ಕಿಂತ ಆಳವಾಗಿ ಕಾಣದೆಹೋದರೆ,
[33] ಅವನು ಕ್ಷೌರಮಾಡಿಸಿಕೊಳ್ಳಬೇಕು. ಆ ಗಾಯ ಇರುವ ಭಾಗವನ್ನು ಮಾತ್ರ ಕ್ಷೌರಮಾಡಿಸಿಕೊಳ್ಳಬಾರದು. ಯಾಜಕನು ಅವನನ್ನು ಇನ್ನು ಏಳು ದಿನಗಳವರೆಗೂ ಪ್ರತ್ಯೇಕಿಸಬೇಕು.
[34] ಏಳನೆಯ ದಿನದಲ್ಲಿ ಯಾಜಕನು ಪುನಃ ಆ ಗಾಯವನ್ನು ನೋಡುವಾಗ ಅದು ಚರ್ಮದಲ್ಲಿ ಹರಡಿಕೊಳ್ಳದೆ ಹೋಗಿದ್ದರೆ ಉಳಿದ ಚರ್ಮಕ್ಕಿಂತ ಆಳವಾಗಿ ತೋರದೆ ಇದ್ದರೆ ಯಾಜಕನು ಅವನನ್ನು ಶುದ್ಧನೆಂದು ನಿರ್ಣಯಿಸಬೇಕು. ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡಾಗ ಶುದ್ಧನಾಗುವನು.
[35] ಆದರೆ ಅವನು ಶುದ್ಧನೆಂದು ನಿರ್ಣಯಿಸಲ್ಪಟ್ಟ ಮೇಲೆ ಆ ಗಾಯ ಚರ್ಮದಲ್ಲಿ ಹರಡಿಕೊಂಡರೆ,
[36] ಯಾಜಕನು ಅವನನ್ನು ಪರೀಕ್ಷಿಸಬೇಕು; ಆದರೆ ಹಳದಿಬಣ್ಣದ ಕೂದಲು ಇದೆಯೋ ಇಲ್ಲವೋ ಎಂದು ನೋಡಬೇಕಾದ ಅಗತ್ಯವಿಲ್ಲ; ಅವನು ಅಶುದ್ಧನೇ.
[37] ಆ ಗಾಯ ಮೊದಲು ಇದ್ದಂತೆಯೇ ಇದ್ದು ಅದರಲ್ಲಿ ಕಪ್ಪು ಕೂದಲು ಹುಟ್ಟಿದ್ದರೆ ಅದು ವಾಸಿಯಾಯಿತು. ಅವನು ಶುದ್ಧನು; ಯಾಜಕನು ಅವನನ್ನು ಶುದ್ಧನೆಂದು ನಿರ್ಣಯಿಸಬೇಕು.
[38] “ಪುರುಷನಿಗಾಗಲಿ ಅಥವಾ ಸ್ತ್ರೀಗಾಗಲಿ ಚರ್ಮದಲ್ಲಿ ಹೊಳೆಯುವ ಬಿಳುಪಾದ ಕಲೆಗಳು ಅಲ್ಲಲ್ಲಿ ಹುಟ್ಟಿದ್ದರೆ ಯಾಜಕನು ಅವುಗಳನ್ನು ಪರೀಕ್ಷಿಸಬೇಕು.
[39] ಆ ಹೊಳೆಯುವ ಕಲೆಗಳು ಮೊಬ್ಬಾದ ಬಿಳೀ ಬಣ್ಣವಾಗಿದ್ದರೆ ಅದು ದೇಹದ ಚರ್ಮದಲ್ಲಿ ಹುಟ್ಟಿದ ಚಿಬ್ಬು; ಅವನು ಶುದ್ಧನು.
[40] “ಯಾವನ ತಲೆಯ ಕೂದಲು ಉದುರಿ ಹೋಗಿ ಅವನು ಬೋಳುತಲೆಯವನಾದರೂ ಅವನು ಶುದ್ಧನೇ.
[41] ಮುಂದಲೆಯ ಕೂದಲು ಉದುರಿದರೆ ಅವನು ಪಟ್ಟೆತಲೆಯವನಾದರೂ ಶುದ್ಧನೇ.
[42] ಆದರೆ ಬೋಳುತಲೆಯಲ್ಲಾಗಲಿ ಅಥವಾ ಪಟ್ಟೆತಲೆಯಲ್ಲಾಗಲಿ ಕೆಂಪು ಬಿಳುಪು ಮಿಶ್ರವಾದ ಮಚ್ಚೆ ಹುಟ್ಟಿದರೆ ಅದು ಕುಷ್ಠವೇ.
[43] ಯಾಜಕನು ಅವನನ್ನು ಪರೀಕ್ಷಿಸಬೇಕು. ಆಗ ಅದರಿಂದುಂಟಾದ ಬಾವು ಕೆಂಪು ಬಿಳುಪು ಮಿಶ್ರವಾಗಿ ಚರ್ಮದಲ್ಲಿನ ಕುಷ್ಠದಂತೆ ತೋರಿದರೆ,
[44] ಅವನು ಕುಷ್ಠರೋಗಿ ಮತ್ತು ಅಶುದ್ಧನು. ಅವನ ತಲೆಯ ಮೇಲೆ ಕುಷ್ಠದ ಗುರುತು ಕಾಣಿಸಿದ್ದರಿಂದ ಅವನು ಅಶುದ್ಧನೆಂದು ಯಾಜಕನು ನಿರ್ಣಯಿಸಬೇಕು.
[45] “ಯಾರಲ್ಲಿ ಕುಷ್ಠದ ಗುರುತು ಕಾಣಿಸಿತೋ ಅವನು ತನ್ನ ಬಟ್ಟೆಗಳನ್ನು ಹರಿದುಕೊಂಡು, ತಲೆಯನ್ನು ಕೆದರಿಕೊಂಡು, ಬಾಯಿಯನ್ನು ಬಟ್ಟೆಯಿಂದ ಮುಚ್ಚಿಕೊಂಡು ‘ನಾನು ಅಶುದ್ಧನು, ಅಶುದ್ಧನು’ ಎಂದು ಕೂಗಿಕೊಳ್ಳಬೇಕು.
[46] ಆ ರೋಗದ ಗುರುತುಗಳು ಅವನಲ್ಲಿ ಇರುವ ದಿನಗಳೆಲ್ಲಾ ಅವನು ಅಶುದ್ಧನಾಗಿರುವನು. ಅವನು ಅಶುದ್ಧನಾದುದರಿಂದ ಪ್ರತ್ಯೇಕವಾಗಿಯೇ ವಾಸವಾಗಿರಬೇಕು; ಅವನ ನಿವಾಸವು ಪಾಳೆಯದ ಹೊರಗೆ ಇರಬೇಕು.
[47] “ಕುಷ್ಠರೋಗದ ಗುರುತು ಬಟ್ಟೆಯಲ್ಲಿ ಕಂಡು ಬಂದಾಗ ಅದು ಉಣ್ಣೆಯ ಬಟ್ಟೆಯಾಗಲಿ ಅಥವಾ ನಾರಿನ ಬಟ್ಟೆಯಾಗಲಿ,
[48] ನಾರಿನ ಅಥವಾ ಉಣ್ಣೆಯ ಹಾಸಿನಲ್ಲಾಗಲಿ, ಹೆಣಿಗೆಯಲ್ಲಾಗಲಿ ಇಲ್ಲವೆ ತೊಗಲಿನಲ್ಲಾಗಲಿ, ತೊಗಲಿನಿಂದ ಮಾಡಲ್ಪಟ್ಟ ವಸ್ತುವಿನಲ್ಲಾಗಲಿ,
[49] ಆ ಬಟ್ಟೆ, ತೊಗಲು, ಹಾಸು, ಹೆಣಿಗೆ, ತೊಗಲಿನ ಸಾಮಾನುಗಳಲ್ಲಿ ಹಸುರಾಗಿ ಇಲ್ಲವೆ ಕೆಂಪಾಗಿ ಮಚ್ಚೆಕಾಣಿಸಿದರೆ ಅದು ಕುಷ್ಠದ ಗುರುತು; ಅದನ್ನು ಯಾಜಕನಿಗೆ ತೋರಿಸಬೇಕು.
[50] ಯಾಜಕನು ಅದನ್ನು ಪರೀಕ್ಷಿಸಿ ನೋಡಿ ಏಳು ದಿನಗಳ ವರೆಗೆ ಪ್ರತ್ಯೇಕವಾಗಿ ಇಡಿಸಬೇಕು.
[51] ಏಳನೆಯ ದಿನದಲ್ಲಿ ಅವನು ಅದನ್ನು ಪರೀಕ್ಷಿಸುವಾಗ ಆ ಬಟ್ಟೆಯ ಹಾಸಿನಲ್ಲಾಗಲಿ ಅಥವಾ ಹೆಣಿಗೆಯಲ್ಲಾಗಲಿ ಇಲ್ಲವೆ ಯಾವುದಾದರೂ ಒಂದು ಕೆಲಸಕ್ಕೆ ಉಪಯೋಗವಾಗಿರುವ ಆ ತೊಗಲಿನಲ್ಲಿ ಆ ಮಚ್ಚೆ ಹರಡಿಕೊಂಡಿದ್ದರೆ ಅದು ಪ್ರಾಣಕ್ಕೆ ಅಪಾಯಕರವಾದ ಕುಷ್ಠವೇ, ಆ ವಸ್ತುವು ಅಶುದ್ಧ.
[52] ಆ ವಸ್ತುವು ಬಟ್ಟೆಯಾದರೂ, ಹಾಸಾದರೂ, ಹೊಕ್ಕಾದರೂ, ಉಣ್ಣೆಯದಾದರೂ, ನಾರಿನದಾದರೂ ಅಥವಾ ತೊಗಲಿನದಾದರೂ ಅದರಲ್ಲಿ ಪ್ರಾಣಕ್ಕೆ ಅಪಾಯಕರವಾದ ಕುಷ್ಠವಿರುವುದರಿಂದ ಅದನ್ನು ಬೆಂಕಿಯಿಂದ ಸುಡಿಸಿಬಿಡಬೇಕು.
[53] ಆದರೆ ಯಾಜಕನು ಪರೀಕ್ಷಿಸುವಾಗ ಆ ವಸ್ತುವಿನಲ್ಲಿ ಅಂದರೆ ಆ ಬಟ್ಟೆ, ಹಾಸು, ಹೆಣಿಗೆ, ತೊಗಲಿನ ಸಾಮಾನು ಇವುಗಳಲ್ಲಿ ಆ ಮಚ್ಚೆ ಹರಡಿಕೊಳ್ಳದಿದ್ದರೆ,
[54] ಅದನ್ನು ನೀರಿನಿಂದ ತೊಳೆಯಬೇಕೆಂದು ಯಾಜಕನು ಅಪ್ಪಣೆಕೊಟ್ಟು ಇನ್ನು ಏಳು ದಿನಗಳ ತನಕ ಅದನ್ನು ಪ್ರತ್ಯೇಕವಾಗಿ ಇಡಿಸಬೇಕು.
[55] ಆ ಮಚ್ಚೆ ಇದ್ದ ವಸ್ತುಗಳನ್ನು ತೊಳೆಸಿದ ಮೇಲೆ ಯಾಜಕನು ಪರೀಕ್ಷಿಸುವಾಗ ಆ ಮಚ್ಚೆಯು ಹರಡಿಕೊಳ್ಳದೆ ಇದ್ದಾಗ್ಯೂ ಅದರ ಬಣ್ಣ ಮೊದಲಿದ್ದಂತೆಯೇ ಇದ್ದರೆ ಆ ವಸ್ತು ಅಶುದ್ಧ. ಕುಷ್ಠರೋಗದ ಗುರುತು ಅದರ ಮೇಲ್ಭಾಗದಿಂದಾಗಲಿ ಅಥವಾ ಕೆಳಭಾಗದಿಂದಾಗಲಿ ಆ ವಸ್ತುವಿನೊಳಗೆ ವ್ಯಾಪಿಸಿದ್ದರಿಂದ ಅದನ್ನು ಬೆಂಕಿಯಿಂದ ಸುಟ್ಟುಬಿಡಬೇಕು.
[56] ಆದರೆ ತೊಳೆದ ಬಟ್ಟೆಯನ್ನು ಯಾಜಕನು ಪರೀಕ್ಷಿಸುವಾಗ ಅದರಲ್ಲಿದ್ದ ಮಚ್ಚೆ ಮೊಬ್ಬಾಗಿಹೋಗಿದ್ದರೆ ಅವನು ಆ ಮಚ್ಚೆ ಇರುವ ಭಾಗವನ್ನು ಆ ಬಟ್ಟೆಯಿಂದಾಗಲಿ, ತೊಗಲಿನಿಂದಾಗಲಿ, ಹಾಸಿನಿಂದಾಗಲಿ, ಹೆಣಿಗೆಯಿಂದಾಗಲಿ ಕತ್ತರಿಸಬೇಕು.
[57] ಆ ಮೇಲೆಯೂ ಕುಷ್ಠದ ಮಚ್ಚೆ ಆ ಬಟ್ಟೆಯಲ್ಲಾಗಲಿ, ಹಾಸಿನಲ್ಲಾಗಲಿ, ಹೆಣಿಗೆಯಲ್ಲಾಗಲಿ ಅಥವಾ ತೊಗಲಿನ ಸಾಮಾನಿನಲ್ಲಾಗಲಿ ಕಂಡು ಬಂದರೆ ಕುಷ್ಠರೋಗವು ಇನ್ನು ಅದರಲ್ಲಿ ಉಂಟೆಂದು ತಿಳಿದುಕೊಳ್ಳಬೇಕು. ಆ ಮಚ್ಚೆ ಇರುವ ವಸ್ತುವನ್ನೇ ಬೆಂಕಿಯಿಂದ ಸುಟ್ಟುಬಿಡಬೇಕು.
[58] ಆ ಬಟ್ಟೆಯನ್ನಾಗಲಿ, ಹಾಸನ್ನಾಗಲಿ, ಹೆಣಿಗೆಯನ್ನಾಗಲಿ ಅಥವಾ ತೊಗಲಿನ ಸಾಮಾನನ್ನಾಗಲಿ ತೊಳೆದನಂತರ ಆ ಮಚ್ಚೆ ಕಾಣದೆಹೋದರೆ ಅದನ್ನು ಎರಡನೆಯ ಸಾರಿ ತೊಳೆಯಬೇಕು; ಆಗ ಅದು ಶುದ್ಧವಾಗುವುದು.
[59] “ಉಣ್ಣೇ ಬಟ್ಟೆಯಲ್ಲಾಗಲಿ, ನಾರಿನ ಬಟ್ಟೆಯಲ್ಲಾಗಲಿ, ಹಾಸಿನಲ್ಲಾಗಲಿ, ಹೆಣಿಗೆಯಲ್ಲಾಗಲಿ ಅಥವಾ ತೊಗಲಿನ ಸಾಮಾನಿನಲ್ಲಾಗಲಿ ಕಂಡುಬಂದ ಕುಷ್ಠರೋಗದ ಗುರುತಿನ ವಿಷಯವಾದ ನಿಯಮ ಇದೇ. ಅದು ಶುದ್ಧವೆಂದು ನಿರ್ಣಯಿಸಬೇಕೋ ಅಥವಾ ಅಶುದ್ಧವೆಂದು ನಿರ್ಣಯಿಸಬೇಕೋ ಎಂಬುದು ಇದರಿಂದ ತಿಳಿಯುವುದು” ಎಂದು ಹೇಳಿದನು.