[1] ಯೆಹೋವನು ಮೋಶೆಯೊಂದಿಗೆ ಮಾತನಾಡಿ, “ನೀನು ಆರೋನನ ಮಕ್ಕಳಾದ ಯಾಜಕರಿಗೆ ಹೀಗೆ ಆಜ್ಞಾಪಿಸಬೇಕು, ‘ಕುಲದಲ್ಲಿ ಸತ್ತವರಿಗೋಸ್ಕರ ಯಾವ ಯಾಜಕನೂ ತನ್ನನ್ನು ಅಪವಿತ್ರ ಮಾಡಿಕೊಳ್ಳಬಾರದು.
[2] ಆದರೂ ಸಮೀಪ ರಕ್ತಸಂಬಂಧಿಗಳಾದ ತಾಯಿ, ತಂದೆ, ಮಕ್ಕಳು ಮತ್ತು ಅಣ್ಣತಮ್ಮಂದಿರು ಇವರಿಗೋಸ್ಕರ ಈ ನಿಯಮ ಇರುವುದಿಲ್ಲ.
[3] ಇದಲ್ಲದೆ ಕನ್ನಿಕೆಯಾಗಿರುವ ತಂಗಿ ಇನ್ನು ಮದುವೆಯಾಗದೆ ಅವನ ಆಶ್ರಯದಲ್ಲಿರುವುದರಿಂದ ಅವಳಿಗೋಸ್ಕರ ಅವನು ಅಪವಿತ್ರ ಮಾಡಿಕೊಳ್ಳಬಹುದು.
[4] ಅವನು ಕುಲದಲ್ಲಿ ನಾಯಕನಾಗಿರುವುದರಿಂದ ತನ್ನನ್ನು ಅಪವಿತ್ರ ಮಾಡಿಕೊಳ್ಳಬಾರದು, ಮಾಡಿದರೆ ಯಾಜಕಸೇವೆಗೆ ಅಯೋಗ್ಯನಾದಾನು.
[5] ಅವರು ತಲೆಬೋಳಿಸಿಕೊಳ್ಳಬಾರದು, ಗಡ್ಡವನ್ನು ಕತ್ತರಿಸಿ ವಿಕಾರಗೊಳಿಸಬಾರದು; ದೇಹವನ್ನು ಗಾಯಮಾಡಿಕೊಳ್ಳಬಾರದು.
[6] ಅವರು ದೇವರಿಗೆ ಮೀಸಲಾಗಿರಬೇಕು; ತಾವು ಸೇವಿಸುವ ದೇವರ ಹೆಸರನ್ನು ಅಪಕೀರ್ತಿಗೆ ಗುರಿಪಡಿಸಬಾರದು. ತಮ್ಮ ದೇವರ ಆಹಾರವನ್ನು ಅಂದರೆ ಯೆಹೋವನ ಹೋಮದ್ರವ್ಯಗಳನ್ನು ಅವರು ಸಮರ್ಪಿಸುವವರು ಆಗಿರುವುದರಿಂದ ಪವಿತ್ರರಾಗಿರಬೇಕು.
[7] ಯಾಜಕರು ತಮ್ಮ ದೇವರಿಗೆ ಮೀಸಲಾದವರು ಆಗಿರುವುದರಿಂದ ವೇಶ್ಯ ಸ್ತ್ರೀಯನ್ನಾಗಲಿ, ಮಾನವನ್ನು ಭಂಗಪಡಿಸಿಕೊಂಡ ಸ್ತ್ರೀಯನ್ನಾಗಲಿ ಅಥವಾ ಗಂಡನಿಂದ ಬಿಡಲ್ಪಟ್ಟವಳನ್ನಾಗಲಿ ಹೆಂಡತಿಯನ್ನಾಗಿ ತೆಗೆದುಕೊಳ್ಳಬಾರದು.
[8] ಅವರು ನಿಮ್ಮ ದೇವರ ಆಹಾರವನ್ನು ಸಮರ್ಪಿಸುವವರಾದ ಕಾರಣ ಅವರನ್ನು ದೇವರ ಸೇವಕರೆಂದು ಭಾವಿಸಬೇಕು. ನಿಮ್ಮನ್ನು ನನ್ನ ಸೇವೆಗೆ ಪ್ರತಿಷ್ಠಿಸಿಕೊಂಡಿರುವ ಯೆಹೋವನೆಂಬ ನಾನು ಪರಿಶುದ್ಧನಾಗಿರುವುದರಿಂದ ಅವರನ್ನು ಪರಿಶುದ್ಧರೆಂದು ನೀವು ಭಾವಿಸಬೇಕು.
[9] ಯಾಜಕನ ಮಗಳು ವೇಶ್ಯೆ ಎಂಬ ನಿಂದೆಗೆ ಒಳಗಾದರೆ ತನ್ನ ತಂದೆಯನ್ನು ನಿಂದೆಗೆ ಒಳಪಡಿಸಿದವಳಾದಳು, ಅವಳನ್ನು ಬೆಂಕಿಯಿಂದ ಸುಟ್ಟುಬಿಡಬೇಕು.
[10] “‘ಮಹಾಯಾಜಕನು ಅಂದರೆ ತನ್ನ ಸಹೋದರರಲ್ಲಿ ಪ್ರಧಾನನು, ಯಾವನು ತೈಲಾಭಿಷೇಕಹೊಂದಿ, ದೀಕ್ಷಾವಸ್ತ್ರಗಳನ್ನು ಧರಿಸಿ, ಪಟ್ಟಕ್ಕೆ ಬರುವನೋ ಅವನು ದುಃಖಸೂಚನೆಗಾಗಿ ತನ್ನ ತಲೆಯ ಕೂದಲನ್ನು ಕೆದರಿಕೊಳ್ಳಬಾರದು, ಬಟ್ಟೆಗಳನ್ನು ಹರಿದುಕೊಳ್ಳಬಾರದು.
[11] ಅವನು ಶವವಿರುವ ಯಾವ ಸ್ಥಳಕ್ಕೂ ಹೋಗಬಾರದು. ತಂದೆತಾಯಿಗಳ ಮರಣದ ನಿಮಿತ್ತ ತನ್ನನ್ನು ಅಪವಿತ್ರ ಮಾಡಿಕೊಳ್ಳಬಾರದು.
[12] ಇದಕ್ಕಾಗಿ ಅವನು ದೇವಸ್ಥಾನವನ್ನು ಬಿಡಲೇ ಬಾರದು; ಬಿಟ್ಟುಹೋದರೆ ತಾನು ಸೇವೆಮಾಡುವ ದೇವರ ಮಂದಿರದ ಗೌರವಕ್ಕೆ ಕುಂದು ಬರುವುದು. ತನ್ನ ದೇವರ ಅಭಿಷೇಕತೈಲವನ್ನು ತಲೆಯ ಮೇಲೆ ಹೊಯ್ಯಿಸಿಕೊಂಡು ಪ್ರತಿಷ್ಠಿತನಾಗಿದ್ದಾನಲ್ಲಾ, ನಾನು ಯೆಹೋವನು.
[13] ಅವನು ಕನ್ನಿಕೆಯನ್ನು ಮದುವೆ ಮಾಡಿಕೊಳ್ಳಬೇಕು.
[14] ಅವನು ವಿಧವೆಯನ್ನಾಗಲಿ, ಗಂಡನಿಂದ ಬಿಡಲ್ಪಟ್ಟವಳನ್ನಾಗಲಿ, ಮಾನವನ್ನು ಭಂಗಪಡಿಸಿಕೊಂಡ ಸ್ತ್ರೀಯನ್ನಾಗಲಿ ಅಥವಾ ವೇಶ್ಯ ಸ್ತ್ರೀಯನ್ನಾಗಲಿ ಹೆಂಡತಿಯನ್ನಾಗಿ ಮಾಡಿಕೊಳ್ಳಬಾರದು. ಸ್ವದೇಶದವರಲ್ಲಿಯ ಕನ್ನಿಕೆಯನ್ನೇ ಮದುವೆ ಮಾಡಿಕೊಳ್ಳಬೇಕು.
[15] ಇಲ್ಲವಾದರೆ ಅವನ ಸಂತತಿಯ ಸ್ವಜನರೊಳಗೆ ಅವನು ಅಪವಾದಕ್ಕೆ ಗುರಿಯಾಗುವನು. ಅವನನ್ನು ನನ್ನ ಸೇವೆಗೆ ಪ್ರತಿಷ್ಠಿಸಿಕೊಂಡ ಯೆಹೋವನು ನಾನು’” ಎಂದು ಹೇಳಿದನು.
[16] ಯೆಹೋವನು ಮೋಶೆಯೊಂದಿಗೆ ಮಾತನಾಡಿ,
[17] “ನೀನು ಆರೋನನಿಗೆ ಹೀಗೆ ಆಜ್ಞಾಪಿಸು, ‘ನಿನ್ನ ಸಂತತಿಯವರ ಎಲ್ಲಾ ತಲಾಂತರಗಳಲ್ಲಿಯೂ ಯಾವ ಅಂಗವಿಕಲನೂ ದೇವರ ಆಹಾರವನ್ನು ಸಮರ್ಪಿಸುವುದಕ್ಕೆ ನನ್ನ ಸನ್ನಿಧಿಗೆ ಬರಬಾರದು; ಅಂಗವಿಕಲನು ಈ ಕಾರ್ಯವನ್ನು ವಹಿಸಿಕೊಳ್ಳಲೇ ಬಾರದು.
[18] ಅವನು ಕುರುಡನಾಗಲಿ, ಕುಂಟನಾಗಲಿ, ವಿಕಾರ ಮುಖವುಳ್ಳವನಾಗಲಿ,
[19] ವಿಪರೀತ ಅವಯವಗಳುಳ್ಳವನಾಗಲಿ, ಕೈಕಾಲು ಮುರಿದವನಾಗಲಿ,
[20] ಗೂನು ಇಲ್ಲವೇ ಕುಬ್ಜರಾಗಲಿ, ಹೂಗಣ್ಣ ಅಥವಾ ಕಾಯಿಗಣ್ಣನಾಗಲಿ, ಕಜ್ಜಿ, ತುರಿಗಳುಳ್ಳವನಾಗಲಿ,
[21] ನಪುಂಸಕನಾಗಲಿ, ಬೇರೆ ಯಾವ ಕಳಂಕವಿದ್ದವನಾಗಲಿ ಯೆಹೋವನಿಗೆ ಹೋಮದ್ರವ್ಯಗಳನ್ನು ಸಮರ್ಪಿಸುವುದಕ್ಕೆ ಸನ್ನಿಧಿಗೆ ಬರಬಾರದು. ಅಂಥವನು ದೇಹದಲ್ಲಿ ದೋಷವಿರುವುದರಿಂದ ದೇವರ ಆಹಾರವನ್ನು ಸಮರ್ಪಿಸಲೇಬಾರದು.
[22] ದೇವರಿಗೆ ನೈವೇದ್ಯವಾದ ಆಹಾರದಲ್ಲಿ ಪರಿಶುದ್ಧವಾದದ್ದನ್ನು ಮತ್ತು ಮಹಾಪರಿಶುದ್ಧವಾದುದನ್ನು ಅವನು ಊಟಮಾಡಬಹುದು.
[23] ಅವನಿಗೆ ಕಳಂಕವಿರುವುದರಿಂದ ತೆರೆಯನ್ನು ದಾಟಿ ಒಳಗೆ ಬರಬಾರದು; ಯಜ್ಞವೇದಿಯ ಬಳಿಗೆ ಬರಬಾರದು; ನನ್ನ ಪವಿತ್ರಸ್ಥಾನಗಳ ಗೌರವಕ್ಕೆ ಅವನಿಂದ ಕುಂದು ಉಂಟಾಗಬಾರದು; ಆ ಸ್ಥಾನಗಳನ್ನು ನನ್ನ ಸೇವೆಗೆ ಪ್ರತಿಷ್ಠಿಸಿಕೊಂಡ ಯೆಹೋವನು ನಾನು’” ಎಂದು ಹೇಳಿದನು.
[24] ಮೋಶೆಯು ಆರೋನನಿಗೂ, ಅವನ ಮಕ್ಕಳಿಗೂ ಮತ್ತು ಇಸ್ರಾಯೇಲರೆಲ್ಲರಿಗೂ ಈ ಆಜ್ಞೆಗಳನ್ನು ತಿಳಿಸಿದನು.