Skip to content
Opens in a new window
Listen to this chapter • 6:11

[1] ಯೆಹೋವನು ಮೋಶೆಗೆ ಇಂತೆಂದನು,

[2] “ನೀನು ಇಸ್ರಾಯೇಲರ ಸಂಗಡ ಮಾತನಾಡಿ ಹೇಳಬೇಕಾದದ್ದೇನೆಂದರೆ ‘ಯಾರೇ ಆಗಲಿ ತಿಳಿಯದೆ ಯೆಹೋವನು ನಿಷೇಧಿಸಿದ ಕಾರ್ಯಗಳಲ್ಲಿ ಯಾವುದನ್ನಾದರೂ ಮಾಡಿ ದೋಷಿಯಾದರೆ ಅವನಿಗೆ ದೋಷಪರಿಹಾರ ಮಾಡಿಕೊಳ್ಳುವ ಕ್ರಮ ಹೀಗಿದೆ.

[3] ಅಭಿಷಿಕ್ತನಾದ ಯಾಜಕನೇ ದೋಷಿಯಾಗಿ ಜನರೆಲ್ಲರನ್ನು ಅಪರಾಧಕ್ಕೆ ಒಳಪಡಿಸಿದರೆ, ತನ್ನ ದೋಷಪರಿಹಾರಕ್ಕಾಗಿ ಅವನು ಪೂರ್ಣಾಂಗವಾದ ಹೋರಿಯನ್ನು ಯೆಹೋವನಿಗೆ ಸಮರ್ಪಿಸಬೇಕು.

[4] ಅವನು ಆ ಹೋರಿಯನ್ನು ಯೆಹೋವನ ಸನ್ನಿಧಿಗೆ ದೇವದರ್ಶನದ ಗುಡಾರದ ಬಾಗಿಲಿಗೆ ತಂದು, ಅದರ ತಲೆಯ ಮೇಲೆ ಕೈಯನ್ನಿಟ್ಟು, ಯೆಹೋವನ ಸನ್ನಿಧಿಯಲ್ಲಿ ಅದನ್ನು ವಧಿಸಬೇಕು.

[5] ಅಭಿಷಿಕ್ತ ಯಾಜಕನು ಆ ಹೋರಿಯ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ದೇವದರ್ಶನದ ಗುಡಾರದೊಳಗೆ ಬರಬೇಕು.

[6] ಯಾಜಕನು ಆ ರಕ್ತದಲ್ಲಿ ತನ್ನ ಬೆರಳನ್ನು ಅದ್ದಿ, ಮಹಾಪವಿತ್ರಸ್ಥಾನದ ಮುಂದಿನ ತೆರೆಯ ಎದುರಾಗಿ ಯೆಹೋವನ ಸನ್ನಿಧಿಯಲ್ಲಿ ಏಳು ಸಾರಿ ಚಿಮುಕಿಸಬೇಕು.

[7] ಆಗ ಯಾಜಕನು ದೇವದರ್ಶನದ ಗುಡಾರದೊಳಗೆ ಯೆಹೋವನ ಸನ್ನಿಧಿಯಲ್ಲಿರುವ ಪರಿಮಳಧೂಪವೇದಿಯ ಕೊಂಬುಗಳಿಗೆ ಆ ರಕ್ತವನ್ನು ಹಚ್ಚಿ, ಹೋರಿಯ ಉಳಿದ ರಕ್ತವನ್ನೆಲ್ಲಾ ದೇವದರ್ಶನದ ಗುಡಾರದ ಬಾಗಿಲಿಗೆ ಎದುರಾಗಿ ಸರ್ವಾಂಗಹೋಮಮಾಡುವ ಯಜ್ಞವೇದಿಯ ಬುಡದಲ್ಲಿ ಸುರಿದುಬಿಡಬೇಕು.

[8] ಆ ದೋಷಪರಿಹಾರಕ ಯಜ್ಞದ ಹೋರಿಯ ಕೊಬ್ಬನ್ನೆಲ್ಲಾ ಅಂದರೆ ಅಂಗಾಂಶದ ಕೊಬ್ಬನ್ನು, ಕರುಳುಗಳ ಮೇಲಣ ಕೊಬ್ಬನ್ನು,

[9] ಎರಡು ಮೂತ್ರಪಿಂಡಗಳನ್ನು, ಇವುಗಳ ಮೇಲೆ ಸೊಂಟದ ಹತ್ತಿರ ಇರುವ ಕೊಬ್ಬನ್ನು ಮತ್ತು ಕಳಿಜದ ಹತ್ತಿರದಿಂದ ಮೂತ್ರಪಿಂಡಗಳ ತನಕ ಇರುವ ಕೊಬ್ಬನ್ನು ತೆಗೆದುಬಿಡಬೇಕು.

[10] ಅವನು ಅವುಗಳನ್ನು ಸಮಾಧಾನಯಜ್ಞದ ಹೋರಿಯಲ್ಲಿ ಪ್ರತ್ಯೇಕಿಸಿದಂತೆಯೇ ಇದರಲ್ಲಿಯೂ ಪ್ರತ್ಯೇಕಿಸಿ ಸರ್ವಾಂಗಹೋಮದ ಯಜ್ಞವೇದಿಯ ಮೇಲೆ ಹೋಮ ಮಾಡಬೇಕು.

[11] ಆ ಹೋರಿಯಲ್ಲಿ ಉಳಿದದ್ದನ್ನೆಲ್ಲಾ ಅಂದರೆ ಅದರ ಚರ್ಮ, ಮಾಂಸ, ತಲೆ, ಕಾಲುಗಳು,

[12] ಕರುಳುಗಳು, ಕರುಳುಗಳಲ್ಲಿರುವ ಕಲ್ಮಷ ಇವುಗಳನ್ನೆಲ್ಲಾ ಪಾಳೆಯದ ಹೊರಗೆ ಯಜ್ಞವೇದಿಯ ಬೂದಿಯನ್ನು ಹಾಕುವ ಶುದ್ಧವಾದ ಸ್ಥಳಕ್ಕೆ ತೆಗೆದುಕೊಂಡು ಹೋಗಿ, ಕಟ್ಟಿಗೆಯ ಮೇಲಿರಿಸಿ, ಬೆಂಕಿಯಲ್ಲಿ ಸುಡಿಸಿಬಿಡಬೇಕು. ಬೂದಿಯನ್ನು ಹಾಕುವ ಸ್ಥಳದಲ್ಲೇ ಅದನ್ನು ಸುಡಿಸಿಬಿಡಬೇಕು.

[13] “‘ಇಸ್ರಾಯೇಲರ ಸಮೂಹವೆಲ್ಲಾ ತಿಳಿಯದೆ ದೋಷಿಗಳಾದರೆ ಅಂದರೆ ಯೆಹೋವನು ನಿಷೇಧಿಸಿದ ಕಾರ್ಯಗಳಲ್ಲಿ ಅವರು ಯಾವುದನ್ನಾದರೂ ಮಾಡಿ ದೋಷಕ್ಕೆ ಗುರಿಯಾದರೆ,

[14] ಮೊದಲು ತಮಗೂ ಮರೆಯಾಗಿದ್ದ ಆ ದೋಷವು ತಿಳಿದುಬಂದ ನಂತರ ಅದನ್ನು ಪರಿಹರಿಸಿಕೊಳ್ಳುವುದಕ್ಕಾಗಿ ಪೂರ್ಣಾಂಗವಾದ ಹೋರಿಯನ್ನು ಸಮರ್ಪಿಸಬೇಕು. ಆ ಹೋರಿಯನ್ನು ದೇವದರ್ಶನದ ಗುಡಾರದ ಬಾಗಿಲಿಗೆ ತರಿಸಬೇಕು.

[15] ಸಮೂಹದ ಹಿರಿಯರು ಯೆಹೋವನ ಸನ್ನಿಧಿಯಲ್ಲಿ ಅದರ ತಲೆಯ ಮೇಲೆ ತಮ್ಮ ಕೈಗಳನ್ನಿಟ್ಟು ಯೆಹೋವನ ಸನ್ನಿಧಿಯಲ್ಲಿ ಅದನ್ನು ವಧಿಸಬೇಕು.

[16] ಅಭಿಷಿಕ್ತ ಯಾಜಕನು ಅದರ ರಕ್ತದಲ್ಲಿ ಸ್ವಲ್ಪವನ್ನು ದೇವದರ್ಶನ ಗುಡಾರದೊಳಗೆ ತಂದು,

[17] ಅದರಲ್ಲಿ ಬೆರಳನ್ನು ಅದ್ದಿ, ತೆರೆಯ ಮುಂದೆ ಯೆಹೋವನ ಸನ್ನಿಧಿಯಲ್ಲಿ ಅದನ್ನು ಏಳು ಸಾರಿ ಚಿಮುಕಿಸಬೇಕು.

[18] ಆ ರಕ್ತದಲ್ಲಿ ಸ್ವಲ್ಪವನ್ನು ದೇವದರ್ಶನದ ಗುಡಾರದೊಳಗೆ ಯೆಹೋವನ ಸನ್ನಿಧಿಯಲ್ಲಿರುವ ಧೂಪವೇದಿಯ ಕೊಂಬುಗಳಿಗೆ ಹಚ್ಚಿ ಉಳಿದದ್ದನ್ನೆಲ್ಲಾ ದೇವದರ್ಶನದ ಗುಡಾರದ ಬಾಗಿಲಿಗೆ ಎದುರಾಗಿರುವ ಯಜ್ಞವೇದಿಯ ಬುಡದಲ್ಲಿ ಸುರಿದುಬಿಡಬೇಕು.

[19] ಅವನು ಹೋರಿಯ ಕೊಬ್ಬನ್ನೆಲ್ಲಾ ಪ್ರತ್ಯೇಕಿಸಿ ಯಜ್ಞವೇದಿಯ ಮೇಲೆ ಹೋಮಮಾಡಬೇಕು.

[20] ಅವನು (ಅಭಿಷಿಕ್ತ ಯಾಜಕ) ದೋಷಪರಿಹಾರಕ ಯಜ್ಞದ ಹೋರಿಯ ವಿಷಯದಲ್ಲಿ ಹೇಗೆ ಮಾಡಬೇಕೆಂದು ವಿಧಿಸಲ್ಪಟ್ಟಿತೋ, ಇದರ ವಿಷಯದಲ್ಲಿಯೂ ಹಾಗೆಯೇ ಮಾಡಬೇಕು. ಯಾಜಕನು ಅವರಿಗೋಸ್ಕರ ದೋಷಪರಿಹಾರ ಮಾಡಿದನಂತರ ಅವರಿಗೆ ಕ್ಷಮಾಪಣೆಯಾಗುವುದು.

[21] ಆ ಮೊದಲನೆಯ ಹೋರಿಯನ್ನು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಿ ಸುಡಿಸಿಬಿಟ್ಟ ಪ್ರಕಾರ ಈ ಹೋರಿಯನ್ನು ಸುಡಿಸಿಬಿಡಬೇಕು. ಇದು ಜನಸಮೂಹದ ದೋಷಪರಿಹಾರಕ ಯಜ್ಞ.

[22] “‘ಮುಖ್ಯಾಧಿಕಾರಿ ತನ್ನ ದೇವರಾಗಿರುವ ಯೆಹೋವನು ನಿಷೇಧಿಸಿದ ಕಾರ್ಯಗಳಲ್ಲಿ ಯಾವುದನ್ನಾದರೂ ತಿಳಿಯದೆ ಮಾಡಿ ದೋಷಿಯಾದರೆ,

[23] ತನ್ನ ತಪ್ಪು ತನಗೆ ತಿಳಿದುಬಂದಾಗ ಅವನು ಪೂರ್ಣಾಂಗವಾದ ಹೋತವನ್ನು ತಂದು ಸಮರ್ಪಿಸಬೇಕು.

[24] ಅವನು ಆ ಹೋತದ ತಲೆಯ ಮೇಲೆ ಕೈಯನ್ನಿಟ್ಟು ಯೆಹೋವನ ಸನ್ನಿಧಿಯಲ್ಲಿ ಸರ್ವಾಂಗಹೋಮದ ಪಶುಗಳನ್ನು ವಧಿಸುವ ಸ್ಥಳದಲ್ಲೇ ಅದನ್ನು ವಧಿಸಬೇಕು. ಅದು ದೋಷಪರಿಹಾರಕ ಯಜ್ಞ.

[25] ಯಾಜಕನು ಆ ಪಶುರಕ್ತದಲ್ಲಿ ಸ್ವಲ್ಪವನ್ನು ಬೆರೆಳಿನಿಂದ ತೆಗೆದುಕೊಂಡು ಯಜ್ಞವೇದಿಯ ಕೊಂಬುಗಳಿಗೆ ಹಚ್ಚಿ, ಉಳಿದ ರಕ್ತವನ್ನು ಯಜ್ಞವೇದಿಯ ಬುಡದಲ್ಲಿ ಸುರಿದುಬಿಡಬೇಕು.

[26] ಸಮಾಧಾನಯಜ್ಞದ ಪಶುವಿನ ಕೊಬ್ಬನ್ನು ಅವನು ಹೋಮಮಾಡುವ ಪ್ರಕಾರವೇ ಇದರ ಎಲ್ಲಾ ಕೊಬ್ಬನ್ನು ಹೋಮಮಾಡಬೇಕು. ಹೀಗೆ ಯಾಜಕನು ಅವನಿಗೋಸ್ಕರ ದೋಷಪರಿಹಾರವನ್ನು ಮಾಡುವುದರಿಂದ ಅವನಿಗೆ ಕ್ಷಮಾಪಣೆಯಾಗುವುದು.

[27] “‘ನಿಮ್ಮ ದೇಶದ ಜನರಲ್ಲಿ ಬೇರೆ ಯಾವನಾದರೂ ಯೆಹೋವನು ನಿಷೇಧಿಸಿದ ಕಾರ್ಯಗಳಲ್ಲಿ ಯಾವುದನ್ನಾದರೂ ತಿಳಿಯದೆ ಮಾಡಿ ದೋಷಿಯಾದರೆ,

[28] ತನ್ನ ತಪ್ಪು ತನಗೆ ತಿಳಿದುಬಂದಾಗ ಆ ದೋಷಪರಿಹಾರಕ್ಕಾಗಿ ಪೂರ್ಣಾಂಗವಾದ ಹೆಣ್ಣು ಮೇಕೆಯನ್ನು ತಂದು ಸಮರ್ಪಿಸಬೇಕು.

[29] ಅವನು ಅದರ ತಲೆಯ ಮೇಲೆ ಕೈಯನ್ನಿಟ್ಟನಂತರ ಸರ್ವಾಂಗಹೋಮದ ಪಶುಗಳನ್ನು ವಧಿಸುವ ಸ್ಥಳದಲ್ಲೇ ಅದನ್ನು ವಧಿಸಬೇಕು.

[30] ಯಾಜಕನು ಅದರ ರಕ್ತದಲ್ಲಿ ಸ್ವಲ್ಪವನ್ನು ಬೆರಳಿನಿಂದ ತೆಗೆದುಕೊಂಡು ಯಜ್ಞವೇದಿಯ ಕೊಂಬುಗಳಿಗೆ ಹಚ್ಚಿ, ಉಳಿದ ರಕ್ತವನ್ನೆಲ್ಲಾ ಯಜ್ಞವೇದಿಯ ಬುಡದಲ್ಲಿ ಸುರಿದುಬಿಡಬೇಕು.

[31] ಸಮಾಧಾನ ಯಜ್ಞಪಶುಗಳ ಕೊಬ್ಬನ್ನು ಪ್ರತ್ಯೇಕಿಸುವ ಪ್ರಕಾರ ಯಾಜಕನು ಇದರ ಎಲ್ಲಾ ಕೊಬ್ಬನ್ನು ಪ್ರತ್ಯೇಕಿಸಿ ಯೆಹೋವನಿಗೆ ಪರಿಮಳವನ್ನು ಉಂಟುಮಾಡುವುದಕ್ಕೆ ಯಜ್ಞವೇದಿಯ ಮೇಲೆ ಹೋಮಮಾಡಬೇಕು. ಹೀಗೆ ಯಾಜಕನು ಅವನಿಗೋಸ್ಕರ ದೋಷಪರಿಹಾರವನ್ನು ಮಾಡುವುದರಿಂದ ಅವನಿಗೆ ಕ್ಷಮಾಪಣೆಯಾಗುವುದು.

[32] “‘ಅವನು ತನ್ನ ದೋಷಪರಿಹಾರಕ್ಕಾಗಿ ತರುವುದು ಕುರಿಯಾದರೆ ಅದು ಪೂರ್ಣಾಂಗವಾದ ಹೆಣ್ಣಾಗಿರಬೇಕು.

[33] ಅವನು ಅದರ ತಲೆಯ ಮೇಲೆ ಕೈಯನ್ನಿಟ್ಟನಂತರ ಸರ್ವಾಂಗಹೋಮದ ಪಶುಗಳನ್ನು ವಧಿಸುವ ಸ್ಥಳದಲ್ಲೇ ಅದನ್ನು ದೋಷಪರಿಹಾರಕ್ಕಾಗಿ ವಧಿಸಬೇಕು.

[34] ಯಾಜಕನು ಅದರ ರಕ್ತದಲ್ಲಿ ಸ್ವಲ್ಪವನ್ನು ಬೆರಳಿನಿಂದ ತೆಗೆದುಕೊಂಡು, ಯಜ್ಞವೇದಿಯ ಕೊಂಬುಗಳಿಗೆ ಹಚ್ಚಿ, ಉಳಿದ ರಕ್ತವನ್ನೆಲ್ಲಾ ಯಜ್ಞವೇದಿಯ ಬುಡದಲ್ಲಿ ಸುರಿದುಬಿಡಬೇಕು.

[35] ಸಮಾಧಾನ ಯಜ್ಞಪಶುಗಳ ಕೊಬ್ಬನ್ನು ಪ್ರತ್ಯೇಕಿಸುವ ಪ್ರಕಾರ ಯಾಜಕನು ಇದರ ಎಲ್ಲಾ ಕೊಬ್ಬನ್ನು ಪ್ರತ್ಯೇಕಿಸಿ, ಯಜ್ಞವೇದಿಯಲ್ಲಿ ಉರಿಯುವ ಹೋಮ ದ್ರವ್ಯಗಳ ಮೇಲೆ ಯೆಹೋವನಿಗೆ ಹೋಮಮಾಡಬೇಕು. ಅವನ ತಪ್ಪಿನ ನಿಮಿತ್ತ ಯಾಜಕನು ಹೀಗೆ ಅವನಿಗೋಸ್ಕರ ದೋಷಪರಿಹಾರವನ್ನು ಮಾಡುವುದರಿಂದ ಅವನಿಗೆ ಕ್ಷಮಾಪಣೆಯಾಗುವುದು.

ಯಾಜಕಕಾಂಡ — Chapters