[1] ಯೆಹೋವನು ಮೋಶೆಯೊಂದಿಗೆ ಮಾತನಾಡಿ,
[2] “ಆರೋನನೂ ಮತ್ತು ಅವನ ಮಕ್ಕಳೂ ತಾವು ಅಶುದ್ಧರಾಗಿರುವಾಗ ಇಸ್ರಾಯೇಲರಿಂದ ನನಗೆ ಸಮರ್ಪಿಸಲ್ಪಟ್ಟ ಪರಿಶುದ್ಧ ದ್ರವ್ಯಗಳನ್ನು ಮುಟ್ಟಬಾರದೆಂದು ಅವರಿಗೆ ಆಜ್ಞಾಪಿಸು. ಅವರು ನನ್ನ ಪರಿಶುದ್ಧ ನಾಮದ ಘನತೆಗೆ ಕುಂದನ್ನು ತರಬಾರದು; ನಾನು ಯೆಹೋವನು.
[3] ಅವರಿಗೆ ನೀನು ಹೀಗೆ ಆಜ್ಞಾಪಿಸಬೇಕು, ‘ನಿಮ್ಮಲ್ಲಿಯಾಗಲಿ ಅಥವಾ ನಿಮ್ಮ ಸಂತತಿಯವರಲ್ಲಾಗಲಿ ಯಾವನಾದರೂ ಅಶುದ್ಧನಾಗಿರುವಾಗ ಇಸ್ರಾಯೇಲರು ಯೆಹೋವನಿಗೆ ಮೀಸಲೆಂದು ಸಮರ್ಪಿಸುವ ದ್ರವ್ಯಗಳ ಬಳಿಗೆ ಬಂದರೆ, ಅವನು ನನ್ನ ಸಾನ್ನಿಧ್ಯಸೇವೆಯಿಂದ ತೆಗೆದು ಹಾಕಬೇಕು; ನಾನು ಯೆಹೋವನು.
[4] ಆರೋನನ ಸಂತತಿಯವರಲ್ಲಿ ಯಾವನಿಗಾದರೂ ಕುಷ್ಠರೋಗವಾಗಲಿ ಅಥವಾ ಮೇಹವಾಗಲಿ ಇದ್ದರೆ ಅವನು ಶುದ್ಧನಾಗುವ ತನಕ ದೇವರಿಗೆ ನೈವೇದ್ಯವಾದ ಪದಾರ್ಥಗಳನ್ನು ಊಟಮಾಡಬಾರದು. ಹೆಣದ ಸಂಪರ್ಕದಿಂದ ಅಶುದ್ಧವಾದುದನ್ನು ಮುಟ್ಟಿದವನಾಗಲಿ, ವೀರ್ಯಸ್ಖಲನ ಮಾಡಿಕೊಂಡವನಾಗಲಿ,
[5] ಹರಿದಾಡುವ ಅಶುದ್ಧವಾದ ಕ್ರಿಮಿಕೀಟ ಅಥವಾ ಅಶುದ್ಧನಾದ ಮನುಷ್ಯನನ್ನು ಮುಟ್ಟಿದವನು ಅಶುದ್ಧನಾಗಿರುವನು.
[6] “‘ಅಶುದ್ಧವಾದುದನ್ನು ಮುಟ್ಟುವ ಯಾಜಕನು ಆ ದಿನದ ಸಾಯಂಕಾಲದ ವರೆಗೆ ಅಶುದ್ಧನಾಗಿರುವನು. ಆದುದರಿಂದ ಸ್ನಾನಮಾಡುವ ತನಕ ಅವನು ನೈವೇದ್ಯದ್ರವ್ಯವನ್ನು ತಿನ್ನಬಾರದು.
[7] ಹೊತ್ತುಮುಣುಗಿದ ನಂತರ ಅವನು ಶುದ್ಧನಾಗಿ ನೈವೇದ್ಯದ್ರವ್ಯವನ್ನು ಊಟಮಾಡಬಹುದು. ಅದು ಅವನ ಆಹಾರವೇ.
[8] ಅವನು ತಾನಾಗಿ ಸತ್ತುಬಿದ್ದದ್ದನ್ನಾಗಲಿ, ಕಾಡುಮೃಗದಿಂದ ಕೊಲ್ಲಲ್ಪಟ್ಟ ಪ್ರಾಣಿಗಳನ್ನು ತಿಂದು ತನ್ನನ್ನು ಅಪವಿತ್ರಮಾಡಿಕೊಳ್ಳಬಾರದು; ನಾನು ಯೆಹೋವನು.
[9] ಯಾಜಕರು ಈ ನನ್ನ ಆಜ್ಞೆಗಳನ್ನು ಅನುಸರಿಸಿ ನಡೆಯಬೇಕು. ಇವುಗಳನ್ನು ಮೀರಿ ನನ್ನ ನೈವೇದ್ಯವನ್ನು ಅಪವಿತ್ರಪಡಿಸಿದರೆ ಆ ದೋಷದ ಫಲವನ್ನು ಅನುಭವಿಸಿ ಸತ್ತಾರು. ಅವರನ್ನು ನನ್ನ ಸೇವೆಗೆ ಪ್ರತಿಷ್ಠಿಸಿಕೊಂಡ ಯೆಹೋವನು ನಾನು.
[10] “‘ಯಾಜಕನಲ್ಲದೆ ಇತರರು ನೈವೇದ್ಯದ ಪದಾರ್ಥವನ್ನು ಊಟಮಾಡಬಾರದು. ಯಾಜಕನ ಬಳಿಯಲ್ಲಿರುವ ಅತಿಥಿಯಾಗಲಿ ಅಥವಾ ಕೂಲಿಯಾಳಾಗಲಿ ಅದನ್ನು ಊಟಮಾಡಬಾರದು.
[11] ಆದರೆ ಯಾಜಕನು ಕ್ರಯಕ್ಕೆ ತೆಗೆದುಕೊಂಡ ಗುಲಾಮರೂ ಮತ್ತು ಅವನ ಮನೆಯಲ್ಲಿ ಹುಟ್ಟಿದ ಗುಲಾಮರು ಅದನ್ನು ಊಟಮಾಡಬಹುದು.
[12] ಯಾಜಕನ ಮಗಳು ಯಾಜಕನಲ್ಲದ ಇತರರಿಗೆ ಮದುವೆಯಾಗಿದ್ದರೆ ಅವಳು ನೈವೇದ್ಯದ ಪದಾರ್ಥಗಳನ್ನು ಊಟಮಾಡಬಾರದು.
[13] ಯಾಜಕನ ಮಗಳು ವಿಧವೆಯಾಗಲಿ ಅಥವಾ ಗಂಡನಿಂದ ಬಿಡಲ್ಪಟ್ಟವಳಾಗಲಿ, ಮಕ್ಕಳಿಲ್ಲದೆ ಇದ್ದರೆ ಬಾಲ್ಯದಲ್ಲಿ ತಂದೆಯ ಬಳಿಯಲ್ಲಿ ಇದ್ದಂತೆಯೇ ಕನ್ಯೆಯಾಗಿಯೇ ತಂದೆಯ ಮನೆಯನ್ನು ಸೇರಿ ತಂದೆಯ ಆಹಾರದಲ್ಲಿ ಭಾಗಿಯಾಗಬಹುದು. ಯಾಜಕರಲ್ಲದ ಇತರರು ಅದನ್ನು ಊಟಮಾಡಲೇಬಾರದು.
[14] ಯಾವನಾದರೂ ತಿಳಿಯದೆ ನೈವೇದ್ಯವಾದದ್ದನ್ನು ಊಟಮಾಡಿದರೆ ಅದನ್ನು ಮತ್ತು ಅದರ ಐದನೆಯ ಭಾಗವನ್ನು ಯಾಜಕನಿಗೆ ತಂದುಕೊಡಬೇಕು.
[15] ಇಸ್ರಾಯೇಲರು ಯೆಹೋವನಿಗೆ ಮೀಸಲೆಂದು ಇಟ್ಟ ನೈವೇದ್ಯದ ಪದಾರ್ಥಗಳನ್ನು ಯಾಜಕರು ಸಾಧಾರಣವೆಂದು ಎಣಿಸಬಾರದು.
[16] ಹಾಗೆ ಎಣಿಸಿದರೆ ತಾವು ಆ ನೈವೇದ್ಯಪದಾರ್ಥಗಳನ್ನು ಊಟಮಾಡುವುದರಿಂದ ಪಾಪಕ್ಕೆ ಒಳಗಾಗಿ ಶಿಕ್ಷೆಹೊಂದುವರು. ನನ್ನ ಸೇವೆಗೆ ಅವರನ್ನು ಪ್ರತಿಷ್ಠಿಸಿಕೊಂಡ ಯೆಹೋವನು ನಾನು’” ಎಂದು ಹೇಳಿದನು.
[17] ಯೆಹೋವನು ಮೋಶೆಯೊಂದಿಗೆ ಮಾತನಾಡಿ,
[18] “ನೀನು ಆರೋನನಿಗೂ, ಅವನ ಮಕ್ಕಳಿಗೂ ಹಾಗೂ ಇಸ್ರಾಯೇಲರೆಲ್ಲರಿಗೂ ಹೀಗೆ ಆಜ್ಞಾಪಿಸಬೇಕು, ‘ಇಸ್ರಾಯೇಲರಲ್ಲಿ ಆಗಲಿ, ಅವರ ನಡುವೆ ವಾಸಿಸುವ ಇತರರಲ್ಲಿಯಾಗಲಿ ಯಾವನಾದರೂ ಹರಕೆಯಾಗಿ ಅಥವಾ ಕಾಣಿಕೆಯಾಗಿ ಯೆಹೋವನಿಗೆ ಸರ್ವಾಂಗಹೋಮ ಮಾಡುವಾಗ,
[19] ಅದು ಸಮರ್ಪಕವಾಗುವಂತೆ ದನಗಳಿಂದಾಗಲಿ ಅಥವಾ ಆಡು ಮತ್ತು ಕುರಿಗಳಿಂದಾಗಲಿ ಪೂರ್ಣಾಂಗವಾದ ಗಂಡನ್ನೇ ಸಮರ್ಪಿಸಬೇಕು.
[20] ಕುಂದುಕೊರತೆ ಇರುವಂಥದ್ದನ್ನು ತರಬಾರದು; ಅಂಥದು ಸಮರ್ಪಣೆ ಆಗುವುದಿಲ್ಲ.
[21] ಯಾವನಾದರೂ ಸಮಾಧಾನಯಜ್ಞಕ್ಕಾಗಿ ಹರಕೆಯಾಗಿ ಅಥವಾ ಕಾಣಿಕೆಯಾಗಿ ದನವನ್ನು ಅಥವಾ ಹಿಂಡಿನ ಆಡು ಇಲ್ಲವೇ ಕುರಿಗಳನ್ನು ತಂದರೆ ಅವು ಯೆಹೋವನಿಗೆ ಸಮರ್ಪಕವಾಗುವುದಕ್ಕಾಗಿ ಅದು ಪೂರ್ಣಾಂಗವಾಗಿಯೇ ಇರಬೇಕು; ಅದರಲ್ಲಿ ಯಾವ ಕುಂದುಕೊರತೆಯೂ ಇರಬಾರದು.
[22] ಕುರುಡಾದದ್ದು, ಕುಂಟಾದದ್ದು, ಗಾಯವಾದದ್ದು, ಹುಣ್ಣುಳ್ಳದ್ದು, ಕಜ್ಜಿ ತುರಿಯುಳ್ಳದ್ದು ಇಂಥವುಗಳನ್ನು ಯೆಹೋವನಿಗೆ ಸಮರ್ಪಿಸಲೇಬಾರದು, ಯಜ್ಞವೇದಿಯ ಮೇಲೆ ಹೋಮ ಮಾಡಲೇಬಾರದು.
[23] ಹೋರಿಯ ಇಲ್ಲವೆ ಕುರಿಯ ಅವಯವಗಳಲ್ಲಿ ಏನಾದರೂ ಹೆಚ್ಚುಕಡಿಮೆ ಇದ್ದರೆ ಅದನ್ನು ಕಾಣಿಕೆಯಾಗಿ ಸಮರ್ಪಿಸಬಹುದೇ ಹೊರತು ಹರಕೆಯಾಗಿ ಒಪ್ಪಿಸಿದರೆ ಅದು ಸಮರ್ಪಣೆ ಆಗುವುದಿಲ್ಲ.
[24] ಬೀಜಹೊಡೆದ, ಕುಟ್ಟಿದ, ಒಡೆದ ಮತ್ತು ಕೊಯ್ದ ಪಶುವನ್ನು ಯೆಹೋವನಿಗೆ ಸಮರ್ಪಿಸಬಾರದು, ಮತ್ತು ನಿಮ್ಮ ದೇಶದಲ್ಲಿ ಪಶುಗಳಿಗೆ ಹಾಗೆ ಮಾಡಲೇ ಬಾರದು.
[25] ಅನ್ಯದೇಶದವನಿಂದ ತೆಗೆದುಕೊಂಡ ಅಂತಹ ಪಶುವನ್ನು ನಿಮ್ಮ ದೇವರಿಗೆ ಆಹಾರವಾಗಿ ಒಪ್ಪಿಸಬಾರದು; ಅದು ಕುಂದುಳ್ಳದ್ದು, ಪೂರ್ಣಾಂಗವಾದುದಲ್ಲ; ಆದಕಾರಣ ಸಮರ್ಪಣೆ ಆಗುವುದಿಲ್ಲ’” ಅಂದನು.
[26] ಯೆಹೋವನು ಮೋಶೆಯೊಂದಿಗೆ ಮಾತನಾಡಿ,
[27] “ಕರುವಾಗಲಿ, ಕುರಿಮರಿಯಾಗಲಿ ಅಥವಾ ಆಡುಮರಿಯಾಗಲಿ ಹುಟ್ಟಿದಾಗ ಅದು ಏಳು ದಿನಗಳ ವರೆಗೆ ತಾಯಿಯ ಬಳಿಯಲ್ಲಿ ಇರಬೇಕು. ಎಂಟನೆಯ ದಿನದಿಂದ ಅದನ್ನು ಯೆಹೋವನಿಗೆ ಹೋಮವಾಗಿ ಸಮರ್ಪಿಸಿದರೆ ಅದು ಅಂಗೀಕಾರವಾಗುವುದು.
[28] ಹೆತ್ತ ಆಕಳನ್ನು, ಅದರ ಕರುವನ್ನು ಇಲ್ಲವೆ ಈದ ಆಡು, ಕುರಿಗಳನ್ನು, ಅವುಗಳ ಮರಿಗಳನ್ನು ಒಂದೇ ದಿನದಲ್ಲಿ ವಧಿಸಬಾರದು.
[29] “ನೀವು ಕೃತಜ್ಞತೆಯನ್ನು ತೋರಿಸುವುದಕ್ಕಾಗಿ ಯೆಹೋವನಿಗೆ ಮಾಡುವ ಯಜ್ಞವನ್ನು ಮೆಚ್ಚಿಗೆಯಾದ ರೀತಿಯಲ್ಲೇ ಸಮರ್ಪಿಸಬೇಕು.
[30] ಅದೇ ದಿನದಲ್ಲಿ ಅದನ್ನು ಊಟಮಾಡಬೇಕು; ಮರುದಿನದ ವರೆಗೆ ಸ್ವಲ್ಪವನ್ನಾದರೂ ಉಳಿಸಬಾರದು. ನಾನು ಯೆಹೋವನು.
[31] “ಈ ನನ್ನ ಆಜ್ಞೆಗಳನ್ನು ನೀವು ಅನುಸರಿಸಿ ನಡೆಯಬೇಕು; ನಾನು ಯೆಹೋವನು.
[32] ನನ್ನ ಪರಿಶುದ್ಧ ನಾಮದ ಘನತೆಗೆ ಕುಂದು ತರಬಾರದು; ಇಸ್ರಾಯೇಲರಲ್ಲಿ ನಾನು ಪರಿಶುದ್ಧನೆಂದು ಎಣಿಸಲ್ಪಡಬೇಕು; ನಾನು ನಿಮ್ಮನ್ನು ನನ್ನ ಸೇವೆಗೆ ಪ್ರತಿಷ್ಠಿಸಿಕೊಂಡ ಯೆಹೋವನು.
[33] ನಿಮ್ಮ ದೇವರಾಗುವುದಕ್ಕೆ ನಿಮ್ಮನ್ನು ಐಗುಪ್ತದೇಶದಿಂದ ಬರಮಾಡಿದೆನಲ್ಲಾ; ನಾನು ಯೆಹೋವನು” ಎಂದು ಹೇಳಿದನು.