Skip to content
Opens in a new window
Listen to this chapter • 9:53

[1] ಯೆಹೋವನು ಮೋಶೆಯೊಂದಿಗೆ ಮಾತನಾಡಿ,

[2] “ಕುಷ್ಠರೋಗಿಯು ಶುದ್ಧನಾಗುವ ದಿನದಲ್ಲಿ ಅವನ ವಿಷಯವಾಗಿ ನಡೆಸಬೇಕಾದ ಕ್ರಮ ಹೇಗೆಂದರೆ, ಅವನನ್ನು ಯಾಜಕನ ಬಳಿಗೆ ಕರೆದುಕೊಂಡು ಹೋಗಬೇಕು.

[3] ಯಾಜಕನು ಪಾಳೆಯದ ಹೊರಗೆ ಹೋಗಿ ಅವನಲ್ಲಿರುವ ಕುಷ್ಠವು ವಾಸಿಯಾಗಿದೆಯೋ ಎಂದು ಪರೀಕ್ಷಿಸಬೇಕು.

[4] ವಾಸಿಯಾಗಿದೆ ಎಂದು ಕಂಡು ಬಂದರೆ ಶುದ್ಧ ಮಾಡಿಸಿಕೊಳ್ಳುವವನಿಗಾಗಿ ಸಜೀವವಾದ ಮತ್ತು ಶುದ್ಧವಾದ ಎರಡು ಪಕ್ಷಿಗಳನ್ನು, ದೇವದಾರಿನ ಕಟ್ಟಿಗೆಯನ್ನು, ರಕ್ತವರ್ಣವುಳ್ಳ ದಾರವನ್ನು ಮತ್ತು ಹಿಸ್ಸೋಪ್ ಗಿಡದ ಬರಲನ್ನು ತರಬೇಕೆಂದು ಯಾಜಕನು ಆಜ್ಞಾಪಿಸಬೇಕು.

[5] ಆ ಪಕ್ಷಿಗಳಲ್ಲಿ ಒಂದನ್ನು ಹರಿಯುವ ನೀರಿನ ಮೇಲೆ ಮಣ್ಣಿನ ಪಾತ್ರೆಯಲ್ಲಿ ವಧಿಸಬೇಕೆಂದು ಯಾಜಕನು ಆಜ್ಞಾಪಿಸಬೇಕು.

[6] “ಅವನು ಮತ್ತೊಂದು ಪಕ್ಷಿಯನ್ನು, ಆ ದೇವದಾರಿನ ಕಟ್ಟಿಗೆಯನ್ನು, ರಕ್ತವರ್ಣವುಳ್ಳ ದಾರವನ್ನು ಮತ್ತು ಹಿಸ್ಸೋಪ್ ಗಿಡದ ಬರಲನ್ನು ತೆಗೆದುಕೊಂಡು ಹರಿಯುವ ನೀರಿನ ಮೇಲೆ ವಧಿಸಿದ ಆ ಮೊದಲನೆಯ ಪಕ್ಷಿಯ ರಕ್ತದಲ್ಲಿ ಈ ಎಲ್ಲಾ ವಸ್ತುಗಳನ್ನು ಮತ್ತು ಆ ಪಕ್ಷಿಯನ್ನು ಸಜೀವವಾಗಿಯೇ ಅದ್ದಬೇಕು.

[7] ಆಮೇಲೆ ಅವನು ಕುಷ್ಠರೋಗದ ವಿಷಯದಲ್ಲಿ ಶುದ್ಧಮಾಡಿಸಿಕೊಳ್ಳುವವನ ಮೇಲೆ ಏಳು ಸಾರಿ ಆ ರಕ್ತವನ್ನು ಚಿಮುಕಿಸಿ, ಅವನನ್ನು ಶುದ್ಧನೆಂದು ನಿರ್ಣಯಿಸಿ, ಆ ಜೀವವುಳ್ಳ ಪಕ್ಷಿಯನ್ನು ಅಡವಿಯ ಕಡೆಗೆ ಬಿಟ್ಟುಬಿಡಬೇಕು.

[8] ಆಗ ಶುದ್ಧಮಾಡಿಸಿಕೊಳ್ಳುವವನು ತನ್ನ ಬಟ್ಟೆಗಳನ್ನು ಒಗೆದುಕೊಂಡು, ಸರ್ವಾಂಗಕ್ಷೌರ ಮಾಡಿಸಿಕೊಂಡು ಸ್ನಾನಮಾಡಿದ ಮೇಲೆ ಶುದ್ಧನಾಗುವನು; ತರುವಾಯ ಅವನು ಪಾಳೆಯದೊಳಗೆ ಬರಬಹುದು; ಆದರೂ ಏಳು ದಿನಗಳ ತನಕ ತನ್ನ ಡೇರೆಯ ಹೊರಗೆ ಇರಬೇಕು.

[9] ಏಳನೆಯ ದಿನದಲ್ಲಿ ತನ್ನ ತಲೆಗೂದಲು, ಗಡ್ಡ, ಹುಬ್ಬು, ಮೈಗೂದಲು ಇವುಗಳನ್ನೆಲ್ಲಾ ಕ್ಷೌರಮಾಡಿಸಿಕೊಂಡು, ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಬೇಕು. ಆಗ ಅವನು ಶುದ್ಧನಾಗುವನು.

[10] “ಎಂಟನೆಯ ದಿನದಲ್ಲಿ ಅವನು ಪೂರ್ಣಾಂಗವಾದ ಎರಡು ಟಗರುಗಳನ್ನು, ಪೂರ್ಣಾಂಗವಾದ ಒಂದು ವರ್ಷದ ಕುರಿಯನ್ನು, ನೈವೇದ್ಯಕ್ಕಾಗಿ ಎಣ್ಣೆ ಬೆರೆಸಿದ ಒಂಭತ್ತು ಸೇರು ಗೋದಿಹಿಟ್ಟನ್ನು ಮತ್ತು ಒಂದು ಸೇರು ಎಣ್ಣೆಯನ್ನು ತೆಗೆದುಕೊಂಡು ಬರಬೇಕು.

[11] ಶುದ್ಧಿ ಮಾಡುವ ಯಾಜಕನು ಶುದ್ಧಮಾಡಿಸಿಕೊಳ್ಳುವವನನ್ನು ಇವುಗಳೊಂದಿಗೆ ದೇವದರ್ಶನ ಗುಡಾರದ ಬಾಗಿಲಲ್ಲಿ ಯೆಹೋವನ ಸನ್ನಿಧಿಯಲ್ಲಿ ನಿಲ್ಲಿಸಬೇಕು.

[12] ಯಾಜಕನು ಆ ಟಗರುಗಳಲ್ಲಿ ಒಂದನ್ನು ಮತ್ತು ಆ ಒಂದು ಸೇರು ಎಣ್ಣೆಯನ್ನು ಪ್ರಾಯಶ್ಚಿತ್ತಯಜ್ಞವಾಗಿ ಸಮರ್ಪಿಸಬೇಕು. ಅವುಗಳನ್ನು ನೈವೇದ್ಯವಾಗಿ ಯೆಹೋವನ ಸನ್ನಿಧಿಯಲ್ಲಿ ನಿವಾಳಿಸಬೇಕು.

[13] ದೋಷಪರಿಹಾರಕ ಯಜ್ಞಪಶುವನ್ನು ಮತ್ತು ಸರ್ವಾಂಗಹೋಮ ಪಶುವನ್ನು ವಧಿಸುವ ಸ್ಥಳದಲ್ಲೇ ಅಂದರೆ ದೇವಸ್ಥಾನದ ಪ್ರಾಕಾರದೊಳಗೆ ಆ ಟಗರು ವಧಿಸಲ್ಪಡಬೇಕು. ಏಕೆಂದರೆ ದೋಷಪರಿಹಾರಕ ಯಜ್ಞದ್ರವ್ಯದಂತೆಯೇ ಪ್ರಾಯಶ್ಚಿತ್ತ ಯಜ್ಞದ್ರವ್ಯವೂ ಯಾಜಕನಿಗೆ ಸಲ್ಲತಕ್ಕದ್ದು, ಅದು ಮಹಾಪರಿಶುದ್ಧವಾಗಿವೆ.

[14] ಆಗ ಯಾಜಕನು ಆ ಪ್ರಾಯಶ್ಚಿತ್ತಯಜ್ಞ ಪಶುವಿನ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಶುದ್ಧಮಾಡಿಸಿಕೊಳ್ಳುವವನ ಬಲಗಿವಿಯ ತುದಿಗೂ, ಬಲಗೈಯ ಹೆಬ್ಬೆರಳಿಗೂ ಮತ್ತು ಬಲಗಾಲಿನ ಹೆಬ್ಬೆರಳಿಗೂ ಹಚ್ಚಬೇಕು.

[15] ಆಗ ಯಾಜಕನು ಆ ಒಂದು ಸೇರು ಎಣ್ಣೆಯಲ್ಲಿ ಸ್ವಲ್ಪವನ್ನು ತನ್ನ ಎಡಗೈಯಲ್ಲಿ ಹೊಯ್ದುಕೊಂಡು,

[16] ತನ್ನ ಬಲಗೈಯ ಬೆರಳನ್ನು ಅದರಲ್ಲಿ ಅದ್ದಿ, ಯೆಹೋವನ ಸನ್ನಿಧಿಯಲ್ಲಿ ಏಳು ಸಾರಿ ಬೆರಳಿನಿಂದ ಚಿಮುಕಿಸಬೇಕು.

[17] ಯಾಜಕನು ತನ್ನ ಕೈಯಲ್ಲಿರುವ ಉಳಿದ ಎಣ್ಣೆಯಲ್ಲಿ ಸ್ವಲ್ಪವನ್ನು ಶುದ್ಧ ಮಾಡಿಸಿಕೊಳ್ಳುವವನ ಬಲಗಿವಿಯ ತುದಿಗೂ, ಬಲಗೈಯ ಹೆಬ್ಬೆರಳಿಗೂ ಮತ್ತು ಬಲಗಾಲಿನ ಹೆಬ್ಬೆಟ್ಟಿಗೂ ಪ್ರಾಯಶ್ಚಿತ್ತಯಜ್ಞ ಪಶುವಿನ ರಕ್ತವನ್ನು ಹಚ್ಚಿದ ಸ್ಥಳಗಳಲ್ಲಿಯೇ ಹಚ್ಚಬೇಕು.

[18] ಅವನು ತನ್ನ ಕೈಯಲ್ಲಿರುವ ಉಳಿದ ಎಣ್ಣೆಯನ್ನು ಶುದ್ಧಮಾಡಿಸಿಕೊಳ್ಳುವವನ ತಲೆಯ ಮೇಲೆ ಹೊಯ್ದುಬಿಡಬೇಕು. ಹೀಗೆ ಯಾಜಕನು ಯೆಹೋವನ ಸನ್ನಿಧಿಯಲ್ಲಿ ಅವನ ದೋಷವನ್ನು ಪರಿಹರಿಸುವನು.

[19] “ಅದಲ್ಲದೆ ಯಾಜಕನು ಶುದ್ಧಮಾಡಿಸಿಕೊಳ್ಳುವವನ ಅಪವಿತ್ರತೆಯನ್ನು ಹೋಗಲಾಡಿಸುವುದಕ್ಕೆ ಆ ಕುರಿಯನ್ನು ದೋಷಪರಿಹಾರಕ ಯಜ್ಞವಾಗಿ ಸಮರ್ಪಿಸಿ ಅವನ ದೋಷವನ್ನು ಪರಿಹರಿಸುವನು. ಆ ಮೇಲೆ ಯಾಜಕನು ಆ ಎರಡನೆಯ ಟಗರುಮರಿಯನ್ನು ಸರ್ವಾಂಗಹೋಮಕ್ಕಾಗಿ ವಧಿಸಬೇಕು.

[20] ಅವನು ಆ ಸರ್ವಾಂಗಹೋಮವನ್ನು ಮತ್ತು ಧಾನ್ಯನೈವೇದ್ಯವನ್ನು ಯಜ್ಞವೇದಿಯ ಮೇಲೆ ಸಮರ್ಪಿಸಬೇಕು. ಯಾಜಕನು ಅವನಿಗೋಸ್ಕರ ಹೀಗೆ ದೋಷಪರಿಹಾರ ಮಾಡಿದಾಗ ಅವನು ಶುದ್ಧನಾಗುವನು.

[21] “ಅವನು ಬಡವನಾಗಿದ್ದು ಅಷ್ಟನ್ನು ಸಮರ್ಪಿಸುವುದಕ್ಕೆ ಆಗದಿದ್ದರೆ ಪ್ರಾಯಶ್ಚಿತ್ತಯಜ್ಞಕ್ಕಾಗಿ ಒಂದು ಟಗರುಮರಿಯನ್ನು ತಂದು ದೋಷಪರಿಹಾರ ಮಾಡಿಸಿಕೊಳ್ಳುವುದಕ್ಕಾಗಿ ಯಾಜಕನ ಕೈಯಿಂದ ನೈವೇದ್ಯವಾಗಿ ನಿವಾಳಿಸಬೇಕು; ಮತ್ತು ಧಾನ್ಯನೈವೇದ್ಯಕ್ಕಾಗಿ ಹತ್ತರಲ್ಲಿ ಒಂದು ಭಾಗ ಎಣ್ಣೆ ಕಲಸಿದ ಗೋದಿಹಿಟ್ಟನ್ನು ಮತ್ತು ಒಂದು ಸೇರು ಎಣ್ಣೆಯನ್ನು ತರಬೇಕು.

[22] ಅದಲ್ಲದೆ ಅವನು ತನ್ನ ಸ್ಥಿತಿಗೆ ತಕ್ಕಂತೆ ಎರಡು ಬೆಳವಕ್ಕಿಗಳನ್ನಾಗಲಿ ಅಥವಾ ಎರಡು ಪಾರಿವಾಳದ ಮರಿಗಳನ್ನಾಗಲಿ ತಂದು ದೋಷಪರಿಹಾರಕ ಯಜ್ಞವಾಗಿ ಒಂದನ್ನು, ಸರ್ವಾಂಗಹೋಮಕ್ಕಾಗಿ ಮತ್ತೊಂದನ್ನು ಸಮರ್ಪಿಸಬೇಕು.

[23] ಅವನು ತನ್ನ ಶುದ್ಧೀಕರಣಕ್ಕಾಗಿ ಎಂಟನೆಯ ದಿನದಲ್ಲಿ ಇವುಗಳನ್ನು ದೇವದರ್ಶನದ ಗುಡಾರದ ಬಾಗಿಲಿಗೆ ಯೆಹೋವನ ಸನ್ನಿಧಿಗೆ ತಂದು ಯಾಜಕನಿಗೆ ಒಪ್ಪಿಸಬೇಕು.

[24] ಯಾಜಕನು ಪ್ರಾಯಶ್ಚಿತ್ತಯಜ್ಞದ ಕುರಿಯನ್ನು, ಒಂದು ಸೇರು ಎಣ್ಣೆಯನ್ನು ಯೆಹೋವನ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸಬೇಕು.

[25] ಪ್ರಾಯಶ್ಚಿತ್ತಯಜ್ಞದ ಕುರಿಯನ್ನು ವಧಿಸಿದನಂತರ ಯಾಜಕನು ಅದರ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಶುದ್ಧಮಾಡಿಸಿಕೊಳ್ಳುವವನ ಬಲಗಿವಿಯ ತುದಿಗೂ, ಬಲಗೈಯ ಹೆಬ್ಬೆರಳಿಗೂ ಮತ್ತು ಬಲಗಾಲಿನ ಹೆಬ್ಬೆಟ್ಟಿಗೂ ಹಚ್ಚಬೇಕು.

[26] ಅನಂತರ ಯಾಜಕನು ಆ ಎಣ್ಣೆಯಲ್ಲಿ ಸ್ವಲ್ಪವನ್ನು ತನ್ನ ಎಡಗೈಯಲ್ಲಿ ಹೊಯ್ದುಕೊಂಡು,

[27] ಅದರಲ್ಲಿ ಸ್ವಲ್ಪವನ್ನು ಬಲಗೈಯ ಬೆರಳಿನಿಂದ ಏಳು ಸಾರಿ ಯೆಹೋವನ ಸನ್ನಿಧಿಯಲ್ಲಿ ಚಿಮುಕಿಸಬೇಕು.

[28] ಆಮೇಲೆ ಯಾಜಕನು ತನ್ನ ಕೈಯಲ್ಲಿರುವ ಎಣ್ಣೆಯಲ್ಲಿ ಸ್ವಲ್ಪವನ್ನು ಶುದ್ಧ ಮಾಡಿಸಿಕೊಳ್ಳುವವನ ಬಲಗಿವಿಯ ತುದಿಗೂ, ಬಲಗೈಯ ಹೆಬ್ಬೆರಳಿಗೂ, ಬಲಗಾಲಿನ ಹೆಬ್ಬೆಟ್ಟಿಗೂ ಪ್ರಾಯಶ್ಚಿತ್ತಯಜ್ಞ ಪಶುವಿನ ರಕ್ತವನ್ನು ಹಚ್ಚಿದ ಸ್ಥಳಗಳಲ್ಲಿಯೇ ಹಚ್ಚಬೇಕು.

[29] ಶುದ್ಧ ಮಾಡಿಸಿಕೊಳ್ಳುವವನಿಗಾಗಿ ಯೆಹೋವನ ಸನ್ನಿಧಿಯಲ್ಲಿ ದೋಷಪರಿಹಾರವನ್ನು ಮಾಡುವುದಕ್ಕಾಗಿ ಯಾಜಕನು ತನ್ನ ಕೈಯಲ್ಲಿರುವ ಉಳಿದ ಎಣ್ಣೆಯನ್ನೆಲ್ಲಾ ಅವನ ತಲೆಯ ಮೇಲೆ ಹೊಯ್ಯಬೇಕು.

[30] ತರುವಾಯ ಅವನು ತನ್ನ ಸ್ಥಿತಿಗೆ ತಕ್ಕಂತೆ ತಂದ ಎರಡು ಬೆಳವಕ್ಕಿಗಳನ್ನಾಗಲಿ

[31] ಪಾರಿವಾಳದ ಮರಿಗಳನ್ನಾಗಲಿ ದೋಷಪರಿಹಾರಕ ಯಜ್ಞವಾಗಿ ಒಂದನ್ನು ಮತ್ತು ಸರ್ವಾಂಗಹೋಮಕ್ಕಾಗಿ ಮತ್ತೊಂದನ್ನು ಧಾನ್ಯನೈವೇದ್ಯದೊಂದಿಗೆ ಸಮರ್ಪಿಸಬೇಕು. ಹೀಗೆ ಯಾಜಕನು ಶುದ್ಧ ಮಾಡಿಸಿಕೊಳ್ಳುವವನಿಗಾಗಿ ಯೆಹೋವನ ಸನ್ನಿಧಿಯಲ್ಲಿ ದೋಷಪರಿಹಾರವನ್ನು ಮಾಡುವನು.

[32] “ಶುದ್ಧೀಕರಣ ಯಜ್ಞಗಳನ್ನು ಮಾಡುವುದಕ್ಕೆ ಗತಿಯಿಲ್ಲದ ಕುಷ್ಠರೋಗಿಯ ವಿಷಯದಲ್ಲಿ ಇದೇ ನಿಯಮ” ಎಂದು ಹೇಳಿದನು.

[33] ಯೆಹೋವನು ಮೋಶೆ ಮತ್ತು ಆರೋನರಿಗೆ,

[34] “ನಾನು ನಿಮಗೆ ಸ್ವದೇಶವಾಗಿ ಕೊಡುವ ಕಾನಾನ್ ದೇಶಕ್ಕೆ ನೀವು ಬಂದ ನಂತರ ಆ ದೇಶದ ಯಾವ ಮನೆಯ ಗೋಡೆಗಳಲ್ಲಿ ನಾನು ಕುಷ್ಠದ ಗುರುತನ್ನು ಉಂಟುಮಾಡುವೆನೋ,

[35] ಆ ಮನೆಯ ಒಡೆಯನು ಯಾಜಕನ ಬಳಿಗೆ ಬಂದು, ‘ನನ್ನ ಮನೆಯಲ್ಲಿ ಕುಷ್ಠರೋಗದ ಗುರುತು ಉಂಟಾದಂತೆ ತೋರುತ್ತದೆ’ ಎಂದು ಅವನಿಗೆ ತಿಳಿಸಬೇಕು.

[36] ಯಾಜಕನು ತಾನು ಆ ರೋಗದ ಗುರುತನ್ನು ನೋಡಲು ಬರುವುದಕ್ಕೆ ಮೊದಲು ಆ ಮನೆಯನ್ನು ಬರಿದುಮಾಡಲು ಆಜ್ಞಾಪಿಸಬೇಕು. ಹಾಗೆ ಬರಿದುಮಾಡದಿದ್ದರೆ ಆ ಮನೆಯಲ್ಲಿರುವ ಎಲ್ಲಾ ವಸ್ತುಗಳೂ ಅಶುದ್ಧವಾಗುತ್ತದೆ. ಬರಿದುಮಾಡಿದ ಮೇಲೆ ಯಾಜಕನು ಆ ಮನೆಯನ್ನು ನೋಡುವುದಕ್ಕೆ ಒಳಗೆ ಹೋಗಬೇಕು.

[37] ಅವನು ಮನೆಯ ಗೋಡೆಗಳಲ್ಲಿರುವ ರೋಗದ ಗುರುತುಗಳನ್ನು ಪರೀಕ್ಷಿಸಿ ನೋಡುವಾಗ ಆ ಗುರುತುಗಳು ಹಸುರಾಗಿ ಅಥವಾ ಕೆಂಪಾಗಿ ಇದ್ದು, ಗೋಡೆಯ ಮಟ್ಟಕ್ಕಿಂತ ಆಳವಾಗಿ ತೋರಿದರೆ,

[38] ಯಾಜಕನು ಹೊರಗೆ ಬಂದು ಆ ಮನೆಯನ್ನು ಏಳು ದಿನಗಳವರೆಗೂ ಮುಚ್ಚಿಸಿಬಿಡಬೇಕು.

[39] ಏಳನೆಯ ದಿನದಲ್ಲಿ ಯಾಜಕನು ಬಂದು ಪರೀಕ್ಷಿಸಿ ನೋಡುವಾಗ ಆ ಗುರುತು ಮನೆಯ ಗೋಡೆಗಳಲ್ಲಿ ಹಬ್ಬಿಕೊಂಡಿದ್ದರೆ,

[40] ಆ ಗುರುತುಗಳು ಇರುವ ಕಲ್ಲುಗಳನ್ನು ತೆಗೆದುಬಿಟ್ಟು, ಊರಿನ ಹೊರಗೆ ಅಪವಿತ್ರವಾದ ಸ್ಥಳದಲ್ಲಿ ಹಾಕಿಸಬೇಕು.

[41] ಅದಲ್ಲದೆ ಅವನು ಆ ಮನೆಯ ಗೋಡೆಗಳ ಒಳಗೋಡೆಯನ್ನೆಲ್ಲಾ ಕೆರೆದು, ಅದರ ಮಣ್ಣನ್ನು ಊರಿನ ಹೊರಗೆ ಅಪವಿತ್ರ ಸ್ಥಳದಲ್ಲಿ ಹಾಕಿಸಬೇಕು.

[42] ಆಗ ಅವರು ಬೇರೆ ಕಲ್ಲುಗಳನ್ನು ತರಿಸಿ ಮೊದಲಿದ್ದ ಕಲ್ಲುಗಳ ಸ್ಥಳದಲ್ಲಿ ಹಾಕಿಸಿ, ಹೊಸ ಮಣ್ಣನ್ನು ತರಿಸಿ ಆ ಗೋಡೆಗಳಿಗೆ ಗಿಲಾವು ಮಾಡಿಸಬೇಕು.

[43] “ಅವನು ಆ ಕಲ್ಲುಗಳನ್ನು ತೆಗಿಸಿ, ಮನೆಯ ಗೋಡೆಗಳನ್ನು ಕೆರೆದು ಗಿಲಾವು ಮಾಡಿಸಿದ ಮೇಲೆ ಆ ರೋಗದ ಗುರುತು ಪುನಃ ಕಂಡುಬಂದರೆ ಯಾಜಕನು ಬಂದು ಅದನ್ನು ನೋಡಬೇಕು.

[44] ಆ ಗುರುತು ಮನೆಯ ಗೋಡೆಗಳಲ್ಲಿ ಹಬ್ಬಿಕೊಂಡಿದ್ದರೆ ಅದು ಪ್ರಾಣಹಾನಿಕರವಾದ ಕುಷ್ಠವೇ; ಆ ಮನೆ ಅಶುದ್ಧವಾಗಿರುವುದು.

[45] ಅವನು ಆ ಮನೆಯನ್ನು ಕೆಡವಿ, ಅದರ ಎಲ್ಲಾ ಕಲ್ಲುಗಳನ್ನು, ತೊಲೆಗಳನ್ನು ಮತ್ತು ಮಣ್ಣನ್ನು ಊರಿನ ಹೊರಗೆ ಅಪವಿತ್ರಸ್ಥಳದಲ್ಲಿ ಹಾಕಿಸಬೇಕು.

[46] ಆ ಮನೆಯು ಮುಚ್ಚಿರುವ ದಿನಗಳಲ್ಲಿ ಯಾವನಾದರೂ ಒಳಕ್ಕೆ ಹೋದರೆ ಅವನು ಆ ದಿನದ ಸಾಯಂಕಾಲದ ವರೆಗೆ ಅಶುದ್ಧನಾಗಿರುವನು.

[47] ಆ ಮನೆಯಲ್ಲಿ ಮಲಗಿಕೊಂಡವನು ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು; ಅಲ್ಲಿ ಊಟಮಾಡಿದವನೂ ಬಟ್ಟೆಗಳನ್ನು ಒಗೆದುಕೊಳ್ಳಬೇಕು.

[48] “ಆದರೆ ತಾನು ಆ ಮನೆಗೆ ಹೊಸದಾಗಿ ಗಿಲಾವು ಮಾಡಿಸಿದ ಮೇಲೆ ಯಾಜಕನು ಬಂದು ಪರೀಕ್ಷಿಸುವಾಗ ಆ ರೋಗದ ಗುರುತು ಕಾಣಿಸದೆಹೋದರೆ, ರೋಗಪರಿಹಾರವಾಗಿ ಆ ಮನೆ ಶುದ್ಧವಾಯಿತೆಂದು ನಿರ್ಣಯಿಸಬೇಕು.

[49] ಆ ಮನೆಯ ಶುದ್ಧೀಕರಣಕ್ಕಾಗಿ ಅವನು ಎರಡು ಪಕ್ಷಿಗಳನ್ನು, ದೇವದಾರಿನ ಕಟ್ಟಿಗೆಯನ್ನು, ರಕ್ತವರ್ಣವುಳ್ಳ ದಾರವನ್ನು ಮತ್ತು ಹಿಸ್ಸೋಪ್ ಗಿಡದ ಬರಲನ್ನು ತೆಗೆದುಕೊಳ್ಳಬೇಕು.

[50] ಅವನು ಒಂದು ಪಕ್ಷಿಯನ್ನು ಒರತೆ ನೀರಿನ ಮೇಲೆ ಮಣ್ಣಿನ ಪಾತ್ರೆಯಲ್ಲಿ ವಧಿಸಬೇಕು,

[51] ಆ ದೇವದಾರಿನ ಕಟ್ಟಿಗೆಯನ್ನು, ಹಿಸ್ಸೋಪಿನ ಬರಲನ್ನು, ರಕ್ತವರ್ಣವುಳ್ಳ ದಾರವನ್ನು ಮತ್ತು ಸಜೀವವಾದ ಮತ್ತೊಂದು ಪಕ್ಷಿಯನ್ನು ತೆಗೆದುಕೊಂಡು ತಾನು ವಧಿಸಿದ ಪಕ್ಷಿಯ ರಕ್ತದಲ್ಲಿಯೂ ಹಾಗು ಒರತೆಯ ನೀರಿನಲ್ಲಿಯೂ ಅದ್ದಿ ಏಳು ಸಾರಿ ಆ ಮನೆಯ ಗೋಡೆಗಳಿಗೆ ಪ್ರೋಕ್ಷಿಸಬೇಕು.

[52] ಹಾಗೆ ಆ ಪಕ್ಷಿಯ ರಕ್ತ, ಸೆಲೇ ನೀರು, ಸಜೀವಪಕ್ಷಿ, ದೇವದಾರಿನ ಕಟ್ಟಿಗೆ, ಹಿಸ್ಸೋಪು, ರಕ್ತವರ್ಣದ ದಾರ ಇವುಗಳಿಂದ ಆ ಮನೆಯನ್ನು ಅವನು ಶುದ್ಧಿಮಾಡುವನು.

[53] ಅವನು ಆ ಜೀವವುಳ್ಳ ಪಕ್ಷಿಯನ್ನು ಊರ ಹೊರಕ್ಕೆ ಅಡವಿಯ ಕಡೆಗೆ ಬಿಟ್ಟುಬಿಡಬೇಕು. ಹೀಗೆ ಅವನು ಆ ಮನೆಗೋಸ್ಕರ ದೋಷಪರಿಹಾರ ಮಾಡಿದಾಗ ಅದು ಶುದ್ಧವಾಗಿರುವುದು.

[54] “ನಾನಾ ವಿಧವಾದ ಕುಷ್ಠರೋಗದ ಗುರುತುಗಳು ಅಂದರೆ,

[55] ಕೂದಲು ಬೆಳೆಯದ ಗಾಯ, ಬಟ್ಟೆಯಲ್ಲಿ ಅಥವಾ ಮನೆಯ ಗೋಡೆಯಲ್ಲಿ ಕಾಣಿಸುವ ಕುಷ್ಠ ರೋಗದ ಗುರುತು,

[56] ಶರೀರದ ಚರ್ಮದ ಮೇಲೆ ಉಂಟಾಗುವ ಬಾವು, ಗುಳ್ಳೆ, ಹೊಳೆಯುವ ಕಲೆ

[57] ಇವುಗಳಲ್ಲಿ ಶುದ್ಧ ಅಥವಾ ಅಶುದ್ಧದ ಭೇದವನ್ನು ತಿಳಿಸುವ ನಿಯಮ ಇದೇ” ಎಂದು ಹೇಳಿದನು.

ಯಾಜಕಕಾಂಡ — Chapters