Skip to content
Opens in a new window
Listen to this chapter • 4:28

[1] ಎಂಟನೆಯ ದಿನದಲ್ಲಿ ಮೋಶೆ ಆರೋನನನ್ನು, ಅವನ ಮಕ್ಕಳನ್ನು ಮತ್ತು ಇಸ್ರಾಯೇಲರ ಹಿರಿಯರನ್ನು ಕರೆದನು.

[2] ಅವನು ಆರೋನನಿಗೆ, “ನೀನು ದೋಷಪರಿಹಾರ ಯಜ್ಞಕ್ಕಾಗಿ ಪೂರ್ಣಾಂಗವಾದ ಹೋರಿಕರುವನ್ನು ಮತ್ತು ಸರ್ವಾಂಗಹೋಮಕ್ಕಾಗಿ ಪೂರ್ಣಾಂಗವಾದ ಟಗರನ್ನು ನಿನಗೋಸ್ಕರ ತೆಗೆದುಕೊಂಡು ಯೆಹೋವನ ಸನ್ನಿಧಿಯಲ್ಲಿ ಸಮರ್ಪಿಸಬೇಕು.

[3] ನೀನು ಇಸ್ರಾಯೇಲರ ಸಂಗಡ ಮಾತನಾಡಿ ಅವರಿಗೆ, ‘ಈ ಹೊತ್ತು ಯೆಹೋವನು ಪ್ರತ್ಯಕ್ಷನಾಗುತ್ತಾನೆ, ಆದುದರಿಂದ ನೀವು ಆತನ ಸನ್ನಿಧಿಯಲ್ಲಿ ದೋಷಪರಿಹಾರಕ್ಕಾಗಿ ಸಮರ್ಪಿಸಲು ಒಂದು ಹೋತವನ್ನು, ಸರ್ವಾಂಗಹೋಮಕ್ಕಾಗಿ ಒಂದು ವರ್ಷದ ಪೂರ್ಣಾಂಗವಾದ ಕರುವನ್ನು,

[4] ಕುರಿಯನ್ನು ಸಮಾಧಾನಯಜ್ಞಕ್ಕಾಗಿ ಒಂದು ಹೋರಿಯನ್ನು, ಟಗರನ್ನು ಧಾನ್ಯನೈವೇದ್ಯಕ್ಕಾಗಿ ಎಣ್ಣೆಮಿಶ್ರವಾದ ಪದಾರ್ಥವನ್ನು ತೆಗೆದುಕೊಂಡು ಯೆಹೋವನ ಮುಂದೆ ಬರಬೇಕೆಂದು ಆಜ್ಞಾಪಿಸು’” ಅಂದನು.

[5] ಮೋಶೆ ಆಜ್ಞಾಪಿಸಿದ ಮೇರೆಗೆ ಅವರು ಅವುಗಳನ್ನೆಲ್ಲಾ ದೇವದರ್ಶನ ಗುಡಾರದ ಹತ್ತಿರಕ್ಕೆ ತಂದರು. ಸರ್ವಸಮೂಹದವರೆಲ್ಲರೂ ಹತ್ತಿರಕ್ಕೆ ಬಂದು ಯೆಹೋವನ ಸನ್ನಿಧಿಯಲ್ಲಿ ನಿಂತರು.

[6] ಆಗ ಮೋಶೆ ಅವರಿಗೆ, “ನೀವು ಏನು ಮಾಡಬೇಕೆಂದು ಯೆಹೋವನು ಆಜ್ಞಾಪಿಸಿದ್ದು ಇದೇ; ಅದರಂತೆ ನಡೆದರೆ ಯೆಹೋವನ ಮಹಿಮೆ ನಿಮಗೆ ಪ್ರತ್ಯಕ್ಷವಾಗುವುದು” ಎಂದು ಹೇಳಿದನು.

[7] ಆಗ ಮೋಶೆ ಆರೋನನಿಗೆ, “ಯಜ್ಞವೇದಿಯ ಹತ್ತಿರಕ್ಕೆ ಬಂದು ನೀನು ಮಾಡಬೇಕಾದ ದೋಷಪರಿಹಾರಕ ಯಜ್ಞವನ್ನು, ಸರ್ವಾಂಗಹೋಮವನ್ನು ಸಮರ್ಪಿಸಿ ನಿನಗೋಸ್ಕರವೂ ಮತ್ತು ನಿನ್ನ ಜನರಿಗೋಸ್ಕರವೂ ದೋಷವನ್ನು ಪರಿಹರಿಸು; ಜನರು ತಂದದ್ದನ್ನು ಸಮರ್ಪಿಸಿ ಯೆಹೋವನ ಆಜ್ಞೆಯಂತೆ ಅವರಿಗಾಗಿ ದೋಷಪರಿಹಾರವನ್ನು ಮಾಡು” ಎಂದು ಹೇಳಿದನು.

[8] ಆರೋನನು ಯಜ್ಞವೇದಿಯ ಹತ್ತಿರಕ್ಕೆ ಹೋಗಿ ತನಗೋಸ್ಕರ ದೋಷಪರಿಹಾರಕ ಯಜ್ಞದ ಹೋರಿಯನ್ನು ವಧಿಸಿದನು.

[9] ಆರೋನನ ಮಕ್ಕಳು ಅದರ ರಕ್ತವನ್ನು ಅವನಿಗೆ ಒಪ್ಪಿಸಿದಾಗ ಅವನು ಅದರಲ್ಲಿ ತನ್ನ ಬೆರಳನ್ನು ಅದ್ದಿ, ಯಜ್ಞವೇದಿಯ ಕೊಂಬುಗಳಿಗೆ ಹಚ್ಚಿ, ಉಳಿದ ರಕ್ತವನ್ನು ಯಜ್ಞವೇದಿಯ ಬುಡದಲ್ಲಿ ಹೊಯ್ದುಬಿಟ್ಟನು.

[10] ಆ ದೋಷಪರಿಹಾರಕ ಯಜ್ಞಪಶುವಿನ ಕೊಬ್ಬನ್ನು, ಮೂತ್ರಪಿಂಡಗಳನ್ನು, ಕಳಿಜದ ಹತ್ತಿರವಿರುವ ಕೊಬ್ಬನ್ನು ಯೆಹೋವನು ಮೋಶೆಯ ಮೂಲಕ ಆಜ್ಞಾಪಿಸಿದಂತೆ ಯಜ್ಞವೇದಿಯ ಮೇಲೆ ಹೋಮಮಾಡಿದನು.

[11] ಅದರ ಮಾಂಸವನ್ನು ಮತ್ತು ಚರ್ಮವನ್ನು ಪಾಳೆಯದ ಹೊರಗೆ ಬೆಂಕಿಯಿಂದ ಸುಡಿಸಿಬಿಟ್ಟನು.

[12] ತರುವಾಯ ಸರ್ವಾಂಗಹೋಮ ಪಶುವನ್ನು ವಧಿಸಿದನು. ಆರೋನನ ಮಕ್ಕಳು ಅದರ ರಕ್ತವನ್ನು ಅವನಿಗೆ ತಂದು ಒಪ್ಪಿಸಿದಾಗ ಅವನು ಅದನ್ನು ಯಜ್ಞವೇದಿಯ ಸುತ್ತಲೂ ಎರಚಿದನು.

[13] ಅವರು ಆ ಪಶುವಿನ ಮಾಂಸಭಾಗಗಳನ್ನು ಮತ್ತು ತಲೆಯನ್ನು ಒಂದೊಂದಾಗಿ ಒಪ್ಪಿಸಿದಾಗ ಅವನು ಅವುಗಳನ್ನು ಯಜ್ಞವೇದಿಯ ಮೇಲೆ ಹೋಮಮಾಡಿದನು.

[14] ಅದರ ಕರುಳುಗಳನ್ನು ಮತ್ತು ಕಾಲುಗಳನ್ನು ತೊಳೆದು ಯಜ್ಞವೇದಿಯಲ್ಲಿ ಸರ್ವಾಂಗಹೋಮದ್ರವ್ಯದ ಮೇಲಿಟ್ಟು ಹೋಮಮಾಡಿದನು.

[15] ತರುವಾಯ ಜನಸಮೂಹವು ಸಮರ್ಪಿಸುವ ಪಶುಗಳನ್ನು ಆರೋನನು ತರಿಸಿ ಅವುಗಳಲ್ಲಿ ದೋಷಪರಿಹಾರಕ ಹೋತವನ್ನು ಮೊದಲನೆಯ ಪಶುವಿನಂತೆ ವಧಿಸಿ ಅವರಿಗೋಸ್ಕರ ದೋಷಪರಿಹಾರಕ್ಕಾಗಿ ಅದನ್ನು ಸಮರ್ಪಿಸಿದನು.

[16] ಸರ್ವಾಂಗಹೋಮ ಪಶುವನ್ನು ಯಥಾವಿಧಿಯಾಗಿ ಸಮರ್ಪಿಸಿದನು.

[17] ಅವರು ತಂದ ಧಾನ್ಯನೈವೇದ್ಯ ದ್ರವ್ಯಗಳಲ್ಲಿ ಒಂದು ಹಿಡಿಯನ್ನು ತೆಗೆದುಕೊಂಡು, ಹೊತ್ತಾರೆಯ ಸರ್ವಾಂಗಹೋಮದ ಸಂಗಡ ಅದನ್ನು ಯಜ್ಞವೇದಿಯ ಮೇಲೆ ಹೋಮಮಾಡಿದನು.

[18] ಬಳಿಕ ಜನರಿಗೋಸ್ಕರ ಸಮಾಧಾನಯಜ್ಞಕ್ಕಾಗಿ ನೇಮಕವಾದ ಹೋರಿಯನ್ನು ಮತ್ತು ಟಗರನ್ನು ವಧಿಸಿದನು. ಆರೋನನ ಮಕ್ಕಳು ಅವುಗಳ ರಕ್ತವನ್ನು ಒಪ್ಪಿಸಲಾಗಿ ಅವನು ಅದನ್ನು ಯಜ್ಞವೇದಿಯ ಸುತ್ತಲೂ ಎರಚಿದನು.

[19] ಅವರು ಹೋರಿಯ ಕೊಬ್ಬನ್ನು, ಟಗರಿನ ಬಾಲದ ಕೊಬ್ಬನ್ನು, ಅಂಗಾಂಶದ ಕೊಬ್ಬನ್ನು, ಮೂತ್ರಪಿಂಡಗಳನ್ನು, ಕಳಿಜದ ಹತ್ತಿರವಿರುವ ಕೊಬ್ಬನ್ನು,

[20] ಎದೆಯ ಭಾಗಗಳ ಮೇಲೆ ಇಟ್ಟು ಒಪ್ಪಿಸಲಾಗಿ ಅವನು ಆ ಕೊಬ್ಬನ್ನು ಯಜ್ಞವೇದಿಯ ಮೇಲೆ ಹೋಮಮಾಡಿದನು.

[21] ಮೋಶೆಯು ಆಜ್ಞಾಪಿಸಿದಂತೆ ಆರೋನನು ಅವುಗಳ ಎದೆಯ ಭಾಗಗಳನ್ನು ಮತ್ತು ಬಲತೊಡೆಯನ್ನು ನೈವೇದ್ಯವಾಗಿ ಯೆಹೋವನ ಸನ್ನಿಧಿಯಲ್ಲಿ ನಿವಾಳಿಸಿದನು.

[22] ಆರೋನನು ಆ ದೋಷಪರಿಹಾರಕ ಯಜ್ಞವನ್ನು, ಸರ್ವಾಂಗಹೋಮವನ್ನು ಮತ್ತು ಸಮಾಧಾನಯಜ್ಞಗಳನ್ನು ಸಮರ್ಪಿಸಿದ ನಂತರ ತನ್ನ ಕೈಗಳನ್ನು ಜನರ ಕಡೆಗೆ ಎತ್ತಿ ಅವರನ್ನು ಆಶೀರ್ವದಿಸಿ ಇಳಿದು ಬಂದನು.

[23] ತರುವಾಯ ಮೋಶೆ ಮತ್ತು ಆರೋನನು ದೇವದರ್ಶನದ ಗುಡಾರದೊಳಗೆ ಹೋದರು. ಅವರು ಅಲ್ಲಿಂದ ಹೊರಗೆ ಬಂದಾಗ ಜನರನ್ನು ಆಶೀರ್ವದಿಸಿದರು. ಆಗ ಯೆಹೋವನ ಮಹಿಮೆಯು ಜನರೆಲ್ಲರಿಗೆ ಪ್ರತ್ಯಕ್ಷವಾಯಿತು.

[24] ಯೆಹೋವನ ಸನ್ನಿಧಿಯಿಂದ ಬೆಂಕಿಯು ಹೊರಟು ಯಜ್ಞವೇದಿಯ ಮೇಲಿದ್ದ ಸರ್ವಾಂಗಹೋಮದ್ರವ್ಯವನ್ನು ಮತ್ತು ಕೊಬ್ಬನ್ನು ದಹಿಸಿಬಿಟ್ಟಿತು. ಜನರೆಲ್ಲರೂ ಅದನ್ನು ಕಂಡು ಉತ್ಸಾಹದಿಂದ ಆರ್ಭಟಿಸಿ, ಅಡ್ಡಬಿದ್ದು ನಮಸ್ಕರಿಸಿದರು.

ಯಾಜಕಕಾಂಡ — Chapters