Skip to content
Opens in a new window
Listen to this chapter • 3:18

[1] “‘ಯಾವನಾದರೂ ಯೆಹೋವನಿಗೆ ಧಾನ್ಯನೈವೇದ್ಯವನ್ನು ಮಾಡಬೇಕೆಂದಿದ್ದರೆ ಅದು ಗೋದಿಹಿಟ್ಟಿನದಾಗಿರಬೇಕು. ಅವನು ಅದರ ಮೇಲೆ ಎಣ್ಣೆಯನ್ನು ಹೊಯ್ದು ಅದರ ಮೇಲೆ ಧೂಪವನ್ನು ಇಡಬೇಕು.

[2] ಅದನ್ನು ಆರೋನನ ವಂಶದವರಾದ ಯಾಜಕರ ಬಳಿಗೆ ತರಬೇಕು. ಯಾಜಕನು ದೇವರಿಗೆ ನೈವೇದ್ಯವಾದದ್ದನ್ನು ಯೆಹೋವನ ಒಳ್ಳೆಯತನವನ್ನು ಸೂಚಿಸುವುದಕ್ಕಾಗಿ ಆ ಎಣ್ಣೆ ಬೆರೆಸಿದ ಹಿಟ್ಟಿನಲ್ಲಿ ಒಂದು ಹಿಡಿಯನ್ನು ಮತ್ತು ಧೂಪವೆಲ್ಲವನ್ನು ತೆಗೆದುಕೊಂಡು ಯಜ್ಞವೇದಿಯ ಮೇಲೆ ಹೋಮಮಾಡಬೇಕು. ಅದು ಅಗ್ನಿಯ ಮೂಲಕ ಯೆಹೋವನಿಗೆ ಪರಿಮಳವನ್ನು ಉಂಟುಮಾಡುವುದು.

[3] ಆ ನೈವೇದ್ಯದಲ್ಲಿ ಉಳಿದದ್ದು ಆರೋನನಿಗೂ ಮತ್ತು ಅವನ ವಂಶದವರಿಗೂ ಆಗಬೇಕು; ಅದು ಯೆಹೋವನಿಗೆ ಅರ್ಪಿತವಾದ ಹೋಮಶೇಷಗಳಲ್ಲಿ ಅತಿಪರಿಶುದ್ಧವಾಗಿದೆ.

[4] “‘ನೀವು ಒಲೆಯಲ್ಲಿ ಅಡಿಗೆಮಾಡಿದ್ದನ್ನು ನೈವೇದ್ಯವಾಗಿ ಸಮರ್ಪಿಸಬೇಕಾದರೆ, ಅದು ಎಣ್ಣೆ ಬೆರೆಸಿದ ಹುಳಿಯಿಲ್ಲದ ಗೋದಿಹಿಟ್ಟಿನ ಹೋಳಿಗೆಗಳು ಅಥವಾ ಎಣ್ಣೆ ಹಾಕಿದ ಹುಳಿಯಿಲ್ಲದ ಕಡುಬುಗಳು ಆಗಿರಬೇಕು.

[5] ನೀವು ಅರ್ಪಿಸುವ ಧಾನ್ಯ ನೈವೇದ್ಯವು ಕಬ್ಬಿಣದ ಹಂಚಿನ ಮೇಲೆ ಸುಟ್ಟದ್ದಾದರೆ ಅದು ಎಣ್ಣೆ ಬೆರಸಿದ ಹುಳಿಯಿಲ್ಲದ ಗೋದಿಹಿಟ್ಟಿನದಾಗಿರಬೇಕು.

[6] ನೀವು ಅದನ್ನು ಚೂರುಚೂರಾಗಿ ಮುರಿದು, ಅದರ ಮೇಲೆ ಎಣ್ಣೆ ಹೊಯ್ಯಬೇಕು. ಇದು ಧಾನ್ಯನೈವೇದ್ಯವಾಗಿದೆ.

[7] ನೀವು ಅರ್ಪಿಸುವ ಧಾನ್ಯ ನೈವೇದ್ಯ ಬಾಂಡ್ಲಿಯಲ್ಲಿ ಪಕ್ವಮಾಡಿದ್ದಾದರೆ ಅದು ಎಣ್ಣೆ ಹೊಯ್ದ ಗೋದಿಹಿಟ್ಟಿನದಾಗಿರಬೇಕು.

[8] ನೀವು ಈ ಪದಾರ್ಥಗಳಿಂದ ಮಾಡಿದ ನೈವೇದ್ಯವನ್ನು ಯೆಹೋವನಿಗೆ ಸಮರ್ಪಿಸುವಾಗ ಅದನ್ನು ಯಾಜಕನಿಗೆ ಒಪ್ಪಿಸಬೇಕು; ಅವನೇ ಅದನ್ನು ಯಜ್ಞವೇದಿಯ ಬಳಿಗೆ ತರಬೇಕು.

[9] ಯಾಜಕನು ನೈವೇದ್ಯವನ್ನು ಯೆಹೋವನ ಒಳ್ಳೆಯತನವನ್ನು ಸೂಚಿಸುವುದಕ್ಕಾಗಿ ಅದರಲ್ಲಿ ಸ್ವಲ್ಪಭಾಗವನ್ನು ತೆಗೆದುಕೊಂಡು ಯಜ್ಞವೇದಿಯ ಮೇಲೆ ಹೋಮಮಾಡಬೇಕು. ಅದು ಅಗ್ನಿಯ ಮೂಲಕ ಯೆಹೋವನಿಗೆ ಪರಿಮಳವನ್ನು ಉಂಟುಮಾಡುವುದು.

[10] ಧಾನ್ಯ ನೈವೇದ್ಯದಲ್ಲಿ ಉಳಿದದ್ದು ಆರೋನನಿಗೂ ಮತ್ತು ಅವನ ವಂಶದವರಿಗೂ ಕೊಡಬೇಕು; ಅದು ಯೆಹೋವನಿಗೆ ಅರ್ಪಿತವಾದ ಹೋಮಶೇಷವಾದ್ದರಿಂದ ಅತಿಪರಿಶುದ್ಧವಾಗಿದೆ.

[11] “‘ನೀವು ಯೆಹೋವನಿಗೆ ಧಾನ್ಯ ನೈವೇದ್ಯವಾಗಿ ಸಮರ್ಪಿಸುವ ಯಾವ ಪದಾರ್ಥವನ್ನು ಹುಳಿಹಿಟ್ಟಿನಿಂದ ಮಾಡಬಾರದು. ಯಾವ ಹುಳಿಪದಾರ್ಥವನ್ನಾಗಲಿ ಅಥವಾ ಜೇನುತುಪ್ಪವನ್ನಾಗಲಿ ಯೆಹೋವನಿಗೆ ಹೋಮಮಾಡಬಾರದು.

[12] ಅವುಗಳನ್ನು ಪ್ರಥಮಫಲವಾಗಿ ಯೆಹೋವನಿಗೆ ಸಮರ್ಪಿಸಬಹುದೇ ಹೊರತು ಯಜ್ಞವೇದಿಯ ಮೇಲೆ ಪರಿಮಳವನ್ನು ಉಂಟುಮಾಡುವುದಕ್ಕಾಗಿ ಅವುಗಳನ್ನು ಹೋಮಮಾಡಬಾರದು.

[13] ಎಲ್ಲಾ ನೈವೇದ್ಯ ಪದಾರ್ಥಗಳಿಗೂ ಉಪ್ಪುಹಾಕಿ ಸಮರ್ಪಿಸಬೇಕು. ಉಪ್ಪು ಯೆಹೋವನ ಸಂಗಡ ನಿಮಗಿರುವ ಒಡಂಬಡಿಕೆಯನ್ನು ಸೂಚಿಸುವುದರಿಂದ ಅದು ಯಾವ ನೈವೇದ್ಯ ಪದಾರ್ಥವಾದರೂ ಉಪ್ಪಿಲ್ಲದೆ ಇರಬಾರದು. ನೀವು ಅರ್ಪಿಸುವ ಎಲ್ಲಾ ಪದಾರ್ಥಗಳಲ್ಲಿಯೂ ಉಪ್ಪನ್ನು ಸೇರಿಸಲೇಬೇಕು.

[14] “‘ನೀವು ಯೆಹೋವನಿಗೆ ಧಾನ್ಯ ನೈವೇದ್ಯದ ಪ್ರಥಮಫಲವನ್ನು ಸಮರ್ಪಣೆ ಮಾಡಬೇಕಾದರೆ ಗೋದಿಯ ತಾಜವಾದ ಹಸೀ ತೆನೆಗಳನ್ನು ಬೆಂಕಿಯಲ್ಲಿ ಸುಟ್ಟು, ಉಮ್ಮಿಗೆಯನ್ನು ಸಮರ್ಪಿಸಬೇಕು.

[15] ಅದು ಧಾನ್ಯನೈವೇದ್ಯ ವಸ್ತುವಾದ್ದರಿಂದ ನೀವು ಅದರ ಮೇಲೆ ಎಣ್ಣೆ ಹೊಯ್ದು ಧೂಪವಿಡಬೇಕು.

[16] ಯಾಜಕನು ನೈವೇದ್ಯವನ್ನು ಯೆಹೋವನ ಒಳ್ಳೆಯತನವನ್ನು ಸೂಚಿಸುವುದಕ್ಕಾಗಿ ಆ ಉಮ್ಮಿಗೆಯಲ್ಲಿಯೂ ಮತ್ತು ಎಣ್ಣೆಯಲ್ಲಿಯೂ ಸ್ವಲ್ಪಭಾಗವನ್ನು ತೆಗೆದುಕೊಂಡು ಧೂಪವೆಲ್ಲವನ್ನು ಅದಕ್ಕೆ ಸೇರಿಸಿ ಅಗ್ನಿಯ ಮೂಲಕ ಯೆಹೋವನಿಗೆ ಹೋಮಮಾಡಬೇಕು.

ಯಾಜಕಕಾಂಡ — Chapters