[1] ಯೆಹೋವನು ಮೋಶೆ ಆರೋನರ ಸಂಗಡ ಮಾತನಾಡಿ ಆಜ್ಞಾಪಿಸಿದ್ದೇನೆಂದರೆ,
[2] “ನೀವು ಇಸ್ರಾಯೇಲರಿಗೆ ಹೀಗೆ ಹೇಳಬೇಕು, ‘ಭೂಮಿಯ ಮೇಲಿರುವ ಪ್ರಾಣಿಗಳಲ್ಲಿ ಇವುಗಳ ಮಾಂಸವನ್ನು ನೀವು ತಿನ್ನಬಹುದು,
[3] ಅವು ಯಾವುವೆಂದರೆ ಯಾವ ಪ್ರಾಣಿಯ ಕಾಲ್ಗೊರಸು ಸೀಳಿದೆಯೋ ಅದು ಮೆಲುಕುಹಾಕುವಂಥದಾದರೆ ಅದರ ಮಾಂಸವನ್ನು ತಿನ್ನಬಹುದು.
[4] ಆದರೆ ಯಾವ ಪ್ರಾಣಿಯು ಮೆಲಕು ಹಾಕಿದರೂ ಗೊರಸು ಸೀಳಲಿರುವುದಿಲ್ಲವೋ ಮತ್ತು ಯಾವ ಪ್ರಾಣಿಯು ಗೊರಸು ಸೀಳಿದರೂ ಮೆಲಕು ಹಾಕುವುದಿಲ್ಲವೋ ಅವುಗಳ ಮಾಂಸವನ್ನು ನೀವು ತಿನ್ನಬಾರದು. ಉದಾಹರಣೆಗೆ, ಒಂಟೆಯು ಮೆಲಕುಹಾಕುವಂಥದು ಸರಿ; ಆದರೂ ಅದಕ್ಕೆ ಸೀಳುಗೊರಸು ಇಲ್ಲವಾದುದರಿಂದ ನೀವು ಅದರ ಮಾಂಸವನ್ನು ಅಶುದ್ಧವೆಂದೆಣಿಸಬೇಕು.
[5] ಬೆಟ್ಟದ ಮೊಲವೂ ಮೆಲಕುಹಾಕುವಂಥದು; ಆದರೂ ಸೀಳುಗೊರಸು ಇಲ್ಲವಾದುದರಿಂದ ಅದು ನಿಮಗೆ ಅಶುದ್ಧ.
[6] ಮೊಲವೂ ಮೆಲಕುಹಾಕುವಂಥದು; ಆದರೂ ಸೀಳುಗೊರಸು ಇಲ್ಲವಾದ ಕಾರಣ ಅದೂ ನಿಮಗೆ ಅಶುದ್ಧ.
[7] ಹಂದಿಯ ಗೊರಸು ಸೀಳಿದೆ; ಆದರೂ ಅದು ಮೆಲಕು ಹಾಕುವುದಿಲ್ಲವಾದುದರಿಂದ ಅದು ನಿಮಗೆ ಅಶುದ್ಧ.
[8] ಇವುಗಳ ಮಾಂಸವನ್ನು ನೀವು ತಿನ್ನಬಾರದು; ಇವುಗಳ ಹೆಣವನ್ನು ಮುಟ್ಟಬಾರದು; ಇವುಗಳನ್ನು ಅಶುದ್ಧವೆಂದೆಣಿಸಬೇಕು.
[9] “‘ಜಲಜಂತುಗಳಲ್ಲಿ ನೀವು ತಿನ್ನಬಹುದಾದವುಗಳು ಯಾವುವೆಂದರೆ ಸಮುದ್ರದಲ್ಲಿಯಾಗಲಿ, ನದಿಯಲ್ಲಿಯಾಗಲಿ, ಬೇರೆ ಜಲಾಶಯದಲ್ಲಿಯಾಗಲಿ ಯಾವ ಜಾತಿಯ ಪ್ರಾಣಿಗೆ ರೆಕ್ಕೆ ಇದ್ದು ಮೈಯೆಲ್ಲಾ ಪರೆಪರೆಯಾಗಿರುವುದೋ ಅದರ ಮಾಂಸವನ್ನು ತಿನ್ನಬಹುದು.
[10] ಆದರೆ ಸಮುದ್ರದಲ್ಲಿದ್ದರೂ ಅಥವಾ ನದಿಯಲ್ಲಿದ್ದರೂ ಜಲಚರಗಳಾದ ಸಕಲವಿಧವಾದ ಜೀವಜಂತುಗಳಲ್ಲಿ ಯಾವ ಜಾತಿಗೆ ರೆಕ್ಕೆಯೂ ಮತ್ತು ಪರೆಪರೆಯಾದ ಮೈಯೂ ಇರುವುದಿಲ್ಲವೋ ಅದು ನಿಮಗೆ ನಿಷಿದ್ಧವಾದದ್ದು.
[11] ಅಂತಹವು ಸಂಪೂರ್ಣವಾಗಿ ನಿಷಿದ್ಧವಾಗಿರುವುದರಿಂದ ಅವುಗಳ ಮಾಂಸವನ್ನು ನೀವು ತಿನ್ನಬಾರದು; ಅವುಗಳ ಹೆಣಗಳು ನಿಮಗೆ ಅಸಹ್ಯವಾಗಿರಬೇಕು.
[12] ಜಲಜಂತುಗಳಲ್ಲಿ ಯಾವುದಕ್ಕೆ ರೆಕ್ಕೆಗಳೂ, ಪರೆಪರೆಯಾದ ಮೈ ಇಲ್ಲವೋ ಅವು ನಿಮಗೆ ಅಸಹ್ಯವಾಗಿರಬೇಕು.
[13] “‘ನಿಮಗೆ ನಿಷಿದ್ಧವಾದ ಮತ್ತು ಅಸಹ್ಯವಾದ ಪಕ್ಷಿಗಳು ಯಾವುವೆಂದರೆ ಗರುಡ, ಬೆಟ್ಟದ ಹದ್ದು,
[14] ಕ್ರೌಂಚ, ಹದ್ದು,
[15] ಸಕಲವಿಧವಾದ ಗಿಡುಗ,
[16] ಸಕಲವಿಧವಾದ ಕಾಗೆ, ಉಷ್ಟ್ರಪಕ್ಷಿ, ಉಲೂಕ, ಕಡಲಹಕ್ಕಿ, ಸಕಲವಿಧವಾದ ಡೇಗೆ,
[17] ಗೂಬೆ, ಹೆಗ್ಗೂಬೆ, ನೀರುಕಾಗೆ,
[18] ಬಿಳಿಗೂಬೆ, ಕರೇಟು, ಕಣಜ ಗೂಬೆ, ರಣಹದ್ದು, ಕಡಲ ಡೇಗೆ,
[19] ಕೊಕ್ಕರೆ, ಸಕಲವಿಧವಾದ ಬಕ, ಹೆಡೆಹಕ್ಕಿ, ಕಣ್ಣಕಪಡಿ. ಇವುಗಳ ಮಾಂಸವನ್ನು ತಿನ್ನಬಾರದು.
[20] “‘ರೆಕ್ಕೆಯುಳ್ಳವುಗಳಾಗಿ ಕಾಲುಗಳಿಂದ ಹರಿದಾಡುವ ಕ್ರಿಮಿಕೀಟಗಳೆಲ್ಲವೂ ನಿಮಗೆ ನಿಷಿದ್ಧವಾಗಿರಬೇಕು.
[21] ಆದರೆ ಕಾಲುಳ್ಳ ಯಾವ ಕ್ರಿಮಿಕೀಟಗಳಿಗೆ ನೆಲದ ಮೇಲೆ ಹಾರುವುದಕ್ಕೋಸ್ಕರ ಮುದುರಿಕೊಂಡಿರುವ ತೊಡೆಗಳು ಇರುತ್ತವೆಯೋ ಅವುಗಳನ್ನು ನೀವು ತಿನ್ನಬಹುದು.
[22] ಸಕಲವಿಧವಾದ ಮಿಡತೆಗಳನ್ನು, ಬೋಳುಮಿಡತೆಗಳನ್ನು, ಜಿಟ್ಟಿಮಿಡತೆಗಳನ್ನು ಮತ್ತು ಸಣ್ಣಮಿಡತೆ ಇವುಗಳನ್ನೆಲ್ಲಾ ತಿನ್ನಬಹುದು.
[23] ರೆಕ್ಕೆಯುಳ್ಳವುಗಳಾಗಿ ಕಾಲುಗಳಿಂದ ಹರಿದಾಡುವ ಸಕಲವಿಧವಾದ ಕ್ರಿಮಿಕೀಟಗಳು ನಿಮಗೆ ನಿಷಿದ್ಧವಾಗಿವೆ.
[24] “‘ಅದಲ್ಲದೆ ಮುಂದೆ ಹೇಳಿರುವ ಪ್ರಾಣಿಗಳಿಂದ ನಿಮಗೆ ಅಪವಿತ್ರತೆ ಉಂಟಾಗುತ್ತದೆ. ಅವುಗಳ ಹೆಣ ಯಾವನಿಗೆ ಸೋಂಕುವುದೋ ಅವನು ಆ ದಿನದ ಸಾಯಂಕಾಲದ ವರೆಗೂ ಅಶುದ್ಧನಾಗಿರುವನು.
[25] ಅವುಗಳ ಹೆಣವನ್ನು ಎತ್ತಿದವನು ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು ಮತ್ತು ಸಾಯಂಕಾಲದವರೆಗೂ ಅಶುದ್ಧನಾಗಿರುವನು.
[26] ಅವು ಯಾವುವೆಂದರೆ, ಯಾವ ಪಶುವಿನ ಗೊರಸು ಸ್ವಲ್ಪ ಸೀಳಿದ್ದರೂ ಇಗ್ಗೊರಸಾಗಿಲ್ಲವೋ ಮತ್ತು ಮೆಲಕುಹಾಕುವುದಿಲ್ಲವೋ ಅದು ನಿಮಗೆ ಅಶುದ್ಧ. ಯಾರನ್ನು ಅವು ಸೋಂಕುವವೋ ಅವನು ಅಶುದ್ಧನಾಗುವನು.
[27] ಚತುಷ್ಪಾದ ಪ್ರಾಣಿಗಳಲ್ಲಿ ಅಂಗಾಲುಗಳಿಂದ ನಡೆಯುವ ಎಲ್ಲವುಗಳು ನಿಮಗೆ ಅಶುದ್ಧವಾಗಿರುವವು; ಅವುಗಳ ಹೆಣವನ್ನು ಯಾರು ಮುಟ್ಟುವರೋ ಅವರು ಆ ದಿನದ ಸಾಯಂಕಾಲದ ವರೆಗೂ ಅಶುದ್ಧರಾಗಿರುವರು.
[28] ಅವುಗಳ ಹೆಣವನ್ನು ಎತ್ತಿದವನು ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು ಮತ್ತು ಆ ಸಾಯಂಕಾಲದ ವರೆಗೂ ಅಶುದ್ಧನಾಗಿರುವನು. ಅವು ನಿಮಗೆ ಅಶುದ್ಧ.
[29] “‘ನೆಲದ ಮೇಲೆ ಸಂಚರಿಸುವ ಸಣ್ಣ ಜಂತುಗಳಲ್ಲಿ ನಿಮಗೆ ಅಶುದ್ಧವಾದವುಗಳು ಯಾವುವೆಂದರೆ ಮುಂಗುಸಿ, ಇಲಿ, ಸಕಲವಿಧವಾದ ಉಡ,
[30] ಹಾವರಾಣಿ, ಊಸುರುವಳ್ಳಿ, ಹಲ್ಲಿ, ಬಸವನಹುಳ, ಚಿಟ್ಟಿಲಿ ಇವೇ.
[31] ನೆಲದ ಮೇಲೆ ಸಂಚರಿಸುವ ಈ ಅಶುದ್ಧವಾದ ಸಣ್ಣ ಜಂತುಗಳ ಹೆಣವನ್ನು ಮುಟ್ಟುವವನು ಆ ಸಾಯಂಕಾಲದ ವರೆಗೂ ಅಶುದ್ಧನಾಗಿರುವನು.
[32] ಇವುಗಳ ಹೆಣವು ಯಾವ ವಸ್ತುವಿನ ಮೇಲೆ ಬೀಳುವುದೋ ಆ ವಸ್ತುವು ಅಶುದ್ಧವಾಗಿರುವುದು. ಅದು ಮರದ ವಸ್ತುವಾಗಲಿ ಬಟ್ಟೆಯಾಗಲಿ, ಚರ್ಮವಾಗಲಿ ಅಥವಾ ಗೋಣಿಯಾಗಲಿ ಅದು ಎಂಥದಾದರೂ, ಯಾವ ಕೆಲಸಕ್ಕೆ ಉಪಯೋಗವಾಗಿದ್ದರೂ ಅದನ್ನು ನೀರಿನಲ್ಲಿ ನೆನಸಬೇಕು; ಅದು ಆ ಸಾಯಂಕಾಲದ ವರೆಗೂ ಅಶುದ್ಧವಾಗಿರುವುದು; ತರುವಾಯ ಶುದ್ಧಿಯಾಗುವುದು.
[33] ಆ ಜಂತುಗಳ ಹೆಣ ಮಣ್ಣಿನ ಪಾತ್ರೆಯಲ್ಲಿ ಬಿದ್ದರೆ ಆ ಪಾತ್ರೆಯಲ್ಲಿರುವುದೆಲ್ಲಾ ಅಶುದ್ಧವಾಗಿರುವುದು ಮತ್ತು ಆ ಪಾತ್ರೆಯನ್ನು ನೀವು ಒಡೆದುಬಿಡಬೇಕು.
[34] ಅದರಲ್ಲಿರುವ ತಿನ್ನತಕ್ಕ ಪದಾರ್ಥವೆಲ್ಲಾ ನೀರಿನಿಂದ ನೆನದರೆ ಅಶುದ್ಧವಾಗುವುದು. ಪಾನ ದ್ರವ್ಯವು ಆ ಪಾತ್ರೆಯಲ್ಲಿದ್ದರೆ ಅದೂ ಅಶುದ್ಧವಾಗುವುದು.
[35] ಆ ಜಂತುಗಳ ಹೆಣ ಯಾವ ಸಾಮಾನಿನ ಮೇಲೆ ಬಿದ್ದರೂ ಆ ಸಾಮಾನು ಅಶುದ್ಧವಾಗುವುದು. ಒಲೆಗಳಲ್ಲಿ ಅದು ಒಂಟಿ ಒಲೆಯಾಗಿದ್ದರೂ ಅಥವಾ ಜೋಡಿ ಒಲೆಯಾಗಿದ್ದರೂ ಅದು ಅಶುದ್ಧವಾದುದರಿಂದ ಅದನ್ನು ಒಡೆದುಬಿಡಬೇಕು; ಅದು ಅಶುದ್ಧವೇ.
[36] ಒರತೆ ಮೊದಲಾದ ಜಲಾಶಯಗಳನ್ನು ಮಾತ್ರ ನೀವು ಶುದ್ಧವೆಂದೆಣಿಸಬೇಕು. ಆದರೆ ಇವುಗಳೊಳಗಿಂದ ಆ ಹೆಣವನ್ನು ಎತ್ತಿದವನು ಅಶುದ್ಧನಾಗುವನು.
[37] ಬಿತ್ತಬೇಕಾದ ಬೀಜದ ಮೇಲೆ ಈ ಜಂತುಗಳ ಹೆಣ ಬಿದ್ದರೆ ಆ ಬೀಜವು ಅಶುದ್ಧವಾಗುವುದಿಲ್ಲ.
[38] ನೀರು ಹಾಕಿ ನೆನಸಿದ ಬೀಜದ ಮೇಲೆ ಆ ಹೆಣ ಬಿದ್ದರೆ ಅದು ನಿಮಗೆ ಅಶುದ್ಧ.
[39] “‘ಆಹಾರಕ್ಕೆ ಯೋಗ್ಯವಾಗಿರುವ ಪಶುವು ಸತ್ತರೆ ಅದರ ಹೆಣವನ್ನು ಮುಟ್ಟಿದವನು ಆ ದಿನದ ಸಾಯಂಕಾಲದ ವರೆಗೂ ಅಶುದ್ಧನಾಗಿರುವನು.
[40] ಆ ಹೆಣದಲ್ಲಿ ಸ್ವಲ್ಪವಾಗಿ ತಿಂದರೂ ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು. ಅವನು ಆ ದಿನದ ಸಾಯಂಕಾಲದ ವರೆಗೂ ಅಶುದ್ಧನಾಗಿರುವನು. ಆ ಹೆಣವನ್ನು ಹೊತ್ತವನೂ ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು; ಅವನು ಆ ಸಾಯಂಕಾಲದ ವರೆಗೂ ಅಶುದ್ಧನಾಗಿರುವನು.
[41] “‘ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳೆಲ್ಲಾ ಅಸಹ್ಯವಾಗಿವೆ; ಅವುಗಳ ಮಾಂಸವನ್ನು ತಿನ್ನಬಾರದು.
[42] ಹೊಟ್ಟೆಯಿಂದ ಹರಿದು ಹೋಗುವುದನ್ನು, ಕಾಲಿನಿಂದ ಹರಿದಾಡುವಂಥದನ್ನು, ಬಹಳ ಕಾಲುಳ್ಳದ್ದನ್ನು ಅಂತೂ ನೆಲದ ಮೇಲೆ ಹರಿದಾಡುವ ಯಾವ ಸಣ್ಣ ಜೀವಿಯನ್ನು ನೀವು ತಿನ್ನಬಾರದು; ಅವು ಅಸಹ್ಯವಾಗಿವೆ.
[43] ನೀವು ಅಂತಹ ಯಾವ ಸಣ್ಣ ಜೀವಿಯನ್ನು ತಿಂದು ನಿಮ್ಮನ್ನು ನೀವೇ ಹೇಸಿಗೆಮಾಡಿಕೊಂಡು ಅಶುದ್ಧರಾಗಬಾರದು.
[44] ಏಕೆಂದರೆ ನಾನು ನಿಮ್ಮ ದೇವರಾದ ಯೆಹೋವನು; ನೀವು ದೇವಜನರಿಗೆ ತಕ್ಕಂತೆ ಇರಬೇಕು. ನಾನು ಪರಿಶುದ್ಧನಾಗಿರುವುದರಿಂದ ನೀವೂ ಪರಿಶುದ್ಧರಾಗಿರಬೇಕು. ನೆಲದ ಮೇಲೆ ಹರಿದಾಡುವ ಯಾವ ಜಂತುವಿನಿಂದಾದರೂ ನೀವು ನಿಮ್ಮನ್ನು ಅಶುದ್ಧಮಾಡಿಕೊಳ್ಳಬಾರದು.
[45] ನಿಮ್ಮ ದೇವರಾಗಿರುವುದಕ್ಕೆ ನಿಮ್ಮನ್ನು ಐಗುಪ್ತ ದೇಶದೊಳಗಿಂದ ಬರಮಾಡಿದ ಯೆಹೋವನು ನಾನೇ; ನಾನು ಪರಿಶುದ್ಧನಾಗಿರುವುದರಿಂದ ನೀವೂ ಪರಿಶುದ್ಧರಾಗಿರಬೇಕು.
[46] “‘ಇದೇ ಪಶು, ಪಕ್ಷಿ, ಜಲಚರ ಮತ್ತು ಕ್ರಿಮಿಕೀಟಗಳ ವಿಷಯವಾದ ನಿಯಮ.
[47] ಇದರಿಂದ ಶುದ್ಧ ಹಾಗು ಅಶುದ್ಧಗಳನ್ನು, ತಿನ್ನಬಹುದಾದ ಜೀವಿಗಳು ಮತ್ತು ತಿನ್ನಬಾರದಾದ ಜೀವಿಗಳ ಕುರಿತು ವಿವೇಚಿಸುವುದಕ್ಕೆ ನಿಮ್ಮಿಂದಾಗುವುದು.’”