Skip to content
Opens in a new window
Listen to this chapter • 9:42

[1] ಯೆಹೋವನು ಸೀನಾಯಿಬೆಟ್ಟದಲ್ಲಿ ಮೋಶೆಗೆ ಹೇಳಿದ್ದೇನೆಂದರೆ,

[2] “ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸು, ‘ನಾನು ನಿಮಗೆ ಕೊಡುವ ದೇಶಕ್ಕೆ ನೀವು ಬಂದಾಗ ಆ ದೇಶವೂ ಯೆಹೋವನ ಗೌರವಾರ್ಥವಾಗಿ ಸಬ್ಬತ್ ಕಾಲವನ್ನು ಆಚರಿಸಬೇಕು.

[3] ಆರು ವರ್ಷಗಳು ನೀವು ಹೊಲದಲ್ಲಿ ಬೀಜವನ್ನು ಬಿತ್ತಬಹುದು, ದ್ರಾಕ್ಷಿ ತೋಟದ ಕೆಲಸವನ್ನು ನಡೆಸಬಹುದು ಮತ್ತು ಹೊಲತೋಟಗಳ ಬೆಳೆಗಳನ್ನು ಸಂಗ್ರಹಿಸಬಹುದು.

[4] ಆದರೆ ಏಳನೆಯ ವರ್ಷ ಯಾವ ವ್ಯವಸಾಯ ಮಾಡಬಾರದ ವಿಶ್ರಾಂತಿ ಕಾಲವಾಗಿಯೂ ಮತ್ತು ಯೆಹೋವನಿಗೆ ಆಚರಿಸಬೇಕಾದ ಸಬ್ಬತ್ ಕಾಲವಾಗಿಯೂ ಇರಬೇಕು. ಹೊಲದಲ್ಲಿ ಬೀಜವನ್ನು ಬಿತ್ತಬಾರದು, ದ್ರಾಕ್ಷಿತೋಟದ ಕೆಲಸವನ್ನು ಮಾಡಬಾರದು.

[5] ಹೊಲದಲ್ಲಿ ತಾನಾಗಿ ಬೆಳೆದ ಪೈರನ್ನು ನೀವು ಕೂಡಿಸಿಟ್ಟುಕೊಳ್ಳಬಾರದು, ನೀವು ನೋಡಿಕೊಳ್ಳದೆ ಬಿಟ್ಟ ದ್ರಾಕ್ಷಾಲತೆಗಳಲ್ಲಿ ಬಂದ ಹಣ್ಣನ್ನು ಸಂಗ್ರಹಿಸಬಾರದು. ಆ ವರ್ಷವೆಲ್ಲಾ ಭೂಮಿಗೆ ಸಂಪೂರ್ಣವಾಗಿ ವಿಶ್ರಾಂತಿಯಿರಬೇಕು.

[6] ಆದರೆ ಅಂತಹ ಸಬ್ಬತ್ ಸಂವತ್ಸರದಲ್ಲಿ ತಾನಾಗಿ ಭೂಮಿಯಲ್ಲಿ ಹುಟ್ಟಿದ್ದು ನಿಮಗೂ, ನಿಮ್ಮ ದಾಸದಾಸಿಯರಿಗೂ, ಕೂಲಿಯವರಿಗೂ,

[7] ನಿಮ್ಮ ಬಳಿಯಲ್ಲಿ ವಾಸವಾಗಿರುವವರಿಗೂ, ನಿಮ್ಮ ಪಶುಗಳಿಗೂ ಮತ್ತು ದೇಶದಲ್ಲಿರುವ ಕಾಡುಮೃಗಗಳಿಗೂ ಆಹಾರವಾಗಬಹುದು.

[8] “‘ಅದಲ್ಲದೆ ಏಳು ವರ್ಷಕ್ಕೊಂದರಂತೆ ಏಳು ಸಬ್ಬತ್ ವರ್ಷಗಳನ್ನು ಲೆಕ್ಕಿಸಬೇಕು. ಆ ಏಳು ಸಬ್ಬತ್ ಸಂವತ್ಸರಗಳ ಕಾಲವು ಅಂದರೆ ನಲ್ವತ್ತೊಂಭತ್ತು ವರ್ಷಗಳು ಕಳೆಯಬೇಕು.

[9] ಆಮೇಲೆ ಏಳನೆಯ ತಿಂಗಳಿನ ಹತ್ತನೆಯ ದಿನದಲ್ಲಿ ನಿಮ್ಮ ದೇಶದಲ್ಲೆಲ್ಲಾ ಗಟ್ಟಿಯಾಗಿ ಕೊಂಬನ್ನು ಊದಿಸಬೇಕು. ಸಕಲ ದೋಷಪರಿಹಾರಕವಾದ ಆ ದಿನದಲ್ಲೇ ನಿಮ್ಮ ದೇಶದಲ್ಲೆಲ್ಲಾ ಆ ಕೊಂಬನ್ನು ಊದಿಸಬೇಕು.

[10] ನೀವು ಐವತ್ತನೆಯ ವರ್ಷವನ್ನು ದೇವರಿಗೆ ಮೀಸಲಾದ ವರ್ಷವೆಂದು ಭಾವಿಸಿ, ಅದರಲ್ಲಿ ದೇಶದ ನಿವಾಸಿಗಳೆಲ್ಲರಿಗೂ ಬಿಡುಗಡೆಯಾಯಿತು ಎಂಬುದಾಗಿ ಸಾರಬೇಕು. ಅದು ಜೂಬಿಲಿ ಸಂವತ್ಸರವಾದುದರಿಂದ ನೀವೆಲ್ಲರು ನಿಮ್ಮ ನಿಮ್ಮ ಸ್ವಂತ ಭೂಮಿಗಳಿಗೂ ಮತ್ತು ಸ್ವಜನರ ಬಳಿಗೂ ಹೋಗಿ ಇರಬಹುದು.

[11] ಆ ಐವತ್ತನೆಯ ವರ್ಷದಲ್ಲಿ ಅಂದರೆ ಜೂಬಿಲಿ ಸಂವತ್ಸರದಲ್ಲಿ ನೀವು ಬೀಜವನ್ನು ಬಿತ್ತಬಾರದು, ತಾನಾಗಿ ಬೆಳೆದ ಪೈರನ್ನು ಕೂಡಿಸಿಟ್ಟುಕೊಳ್ಳಬಾರದು; ನೀವು ನೋಡಿಕೊಳ್ಳದೆ ಬಿಟ್ಟ ದ್ರಾಕ್ಷಾಲತೆಗಳಲ್ಲಿ ಬೆಳದ ಹಣ್ಣನ್ನು ಸಂಗ್ರಹಿಸಬಾರದು.

[12] ಅದು ಜೂಬಿಲಿ ವರ್ಷವಾದುದರಿಂದ ನೀವು ಅದನ್ನು ಮೀಸಲಾದದ್ದೆಂದು ಭಾವಿಸಬೇಕು. ಹೊಲದಲ್ಲಿ ತಾನಾಗಿ ಬೆಳೆದದ್ದನ್ನು ಊಟಮಾಡಬೇಕು.

[13] “‘ಜೂಬಿಲಿ ವರ್ಷದಲ್ಲಿ ನಿಮ್ಮ ನಿಮ್ಮ ಸ್ವಂತ ಭೂಮಿಗಳು ತಿರುಗಿ ನಿಮ್ಮ ವಶಕ್ಕೆ ಬರುವವು.

[14] ನೀವು ಸ್ಥಿರಸೊತ್ತನ್ನು ಸ್ವದೇಶದವರೊಡನೆ ಕ್ರಯ ಮತ್ತು ವಿಕ್ರಯ ಮಾಡುವಾಗ ಇದರ ವಿಷಯದಲ್ಲಿ ಅನ್ಯಾಯಮಾಡಬಾರದು.

[15] ಹಿಂದಿನ ಜೂಬಿಲಿ ಸಂವತ್ಸರದಿಂದ ಎಷ್ಟು ವರ್ಷವಾಯಿತೆಂದು ಲೆಕ್ಕಿಸಿ, ಸ್ವದೇಶದವನಿಂದ ಕ್ರಯಕ್ಕೆ ತೆಗೆದುಕೊಳ್ಳಬೇಕು; ಅದರಂತೆ ಮಾರುವವನು ಎಷ್ಟು ವರ್ಷಗಳ ಬೆಳೆಯಾಯಿತೆಂದು ಲೆಕ್ಕಿಸಿ ಕ್ರಯಕ್ಕೆ ಕೊಡಬೇಕು.

[16] ಮುಂದಣ ಜೂಬಿಲಿ ಸಂವತ್ಸರದ ತನಕ ಹೆಚ್ಚು ವರ್ಷಗಳಾದರೆ ಭೂಮಿಯ ಕ್ರಯವನ್ನು ಹೆಚ್ಚಿಸಬೇಕು, ಕಡಿಮೆಯಾದರೆ ಕಡಿಮೆ ಮಾಡಬೇಕು; ಏಕೆಂದರೆ ಅವನು ಮಾರುವುದು ಭೂಮಿಯನ್ನಲ್ಲ, ಲೆಕ್ಕದ ಪ್ರಕಾರ ಬೆಳೆಗಳನ್ನೇ ಮಾರುತ್ತಾನಲ್ಲಾ.

[17] ಆದುದರಿಂದ ನೀವು ಒಬ್ಬರಿಗೊಬ್ಬರು ಅನ್ಯಾಯಮಾಡಬಾರದು; ನಿಮ್ಮ ದೇವರಿಗೆ ಭಯಪಡುವವರಾಗಿರಬೇಕು; ನಾನು ನಿಮ್ಮ ದೇವರಾದ ಯೆಹೋವನು.

[18] “‘ನನ್ನ ಆಜ್ಞಾವಿಧಿಗಳನ್ನು ನೀವು ಅನುಸರಿಸಿ ನಡೆಯಬೇಕು. ಆಗ ನೀವು ಆ ದೇಶದಲ್ಲಿ ನಿರ್ಭಯವಾಗಿ ವಾಸವಾಗಿರುವಿರಿ.

[19] ನಿಮ್ಮ ಭೂಮಿಯು ಫಲವತ್ತಾಗುವುದು, ನೀವು ಸಮೃದ್ಧಿಯಾಗಿ ಊಟಮಾಡುವಿರಿ ಮತ್ತು ಆ ದೇಶದಲ್ಲಿ ನೀವು ನಿರ್ಭಯವಾಗಿ ವಾಸಮಾಡುವಿರಿ.

[20] “‘ಏಳನೆಯ ವರ್ಷದಲ್ಲಿ ಬೀಜವನ್ನು ಬಿತ್ತುವುದಕ್ಕಾಗಲಿ, ಬೆಳೆದದ್ದನ್ನು ಕೂಡಿಸಿಟ್ಟುಕೊಳ್ಳುವುದಕ್ಕಾಗಲಿ ಅಪ್ಪಣೆ ಇಲ್ಲವಲ್ಲಾ; ಆ ವರ್ಷದಲ್ಲಿ ಏನು ತಿನ್ನಬೇಕು?’ ಎಂದು ವಿಚಾರಿಸುತ್ತೀರೋ

[21] ಕೇಳಿರಿ, ಆರನೆಯ ವರ್ಷದ ಬೆಳೆ ನನ್ನ ಅನುಗ್ರಹದಿಂದ ಮೂರು ವರ್ಷಗಳ ಬೆಳೆಯಷ್ಟಾಗುವುದು.

[22] ನೀವು ಎಂಟನೆಯ ವರ್ಷದಲ್ಲಿ ಬೀಜವನ್ನು ಬಿತ್ತಿ, ಅದರ ಬೆಳೆ ದೊರೆಯುವ ತನಕ ಅಂದರೆ ಒಂಭತ್ತನೆಯ ವರ್ಷದ ವರೆಗೆ ಹಿಂದಿನ ವರ್ಷಗಳಲ್ಲಿ ನೀವು ಸಂಗ್ರಹಿಸಿದ ಬೆಳೆಯಿಂದಲೇ ಜೀವನಮಾಡುವಿರಿ.

[23] “‘ಭೂಮಿಯನ್ನು ಶಾಶ್ವತವಾಗಿ ಮಾರಬಾರದು. ಏಕೆಂದರೆ ಆ ಭೂಮಿ ನನ್ನದು; ನೀವಾದರೋ ಪರದೇಶದವರು ಹಾಗೂ ಪ್ರವಾಸಿಗಳಾಗಿ ನನ್ನ ಆಶ್ರಯದಲ್ಲಿ ಇಳಿದುಕೊಂಡವರು.

[24] ನಿಮ್ಮಲ್ಲಿ ಮತ್ತೊಬ್ಬನ ಸ್ವತ್ತಿನ ಭೂಮಿ ನಿಮ್ಮ ವಶಕ್ಕೆ ಬಂದರೆ ಅದನ್ನು ಈಡುಕೊಟ್ಟು ಬಿಡಿಸಿಕೊಳ್ಳುವ ಅಧಿಕಾರವು ಕೊಟ್ಟವನಿಗೆ ಇರಬೇಕು.

[25] “‘ನಿಮ್ಮ ಸಹೋದರರಲ್ಲಿ ಒಬ್ಬನು ಬಡವನಾಗಿ ತನ್ನ ಭೂಮಿಯನ್ನು ಏನಾದರೂ ಮಾರಿಕೊಂಡರೆ ಅವನ ಸಮೀಪವಾದ ಬಂಧುವು ಅದನ್ನು ಬಿಡಿಸಿಕೊಳ್ಳಬೇಕು.

[26] ಬಿಡಿಸುವ ಬಂಧುವು ಇಲ್ಲದೆಹೋದ ಪಕ್ಷಕ್ಕೆ ಮಾರಿದವನೇ ಸ್ಥಿತಿವಂತನಾಗಿ ಅದನ್ನು ಬಿಡಿಸಿಕೊಳ್ಳುವಷ್ಟು ಹಣವನ್ನು ಸಂಪಾದಿಸಿದರೆ,

[27] ಆ ಭೂಮಿಯನ್ನು ಮಾರಿದಂದಿನಿಂದ ಕಳೆದ ವರ್ಷಗಳನ್ನು ಬಿಟ್ಟು ಉಳಿದ ಕ್ರಯವನ್ನು ಕೊಟ್ಟು ತನ್ನ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಹುದು.

[28] ಅವನು ಆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾರದೆ ಹೋದರೆ ಅದು ಜೂಬಿಲಿ ಸಂವತ್ಸರದ ತನಕ ಕೊಂಡುಕೊಂಡವನ ವಶದಲ್ಲೇ ಇರಬೇಕು. ಜೂಬಿಲಿ ವರ್ಷದಲ್ಲಿ ಅದು ಬಿಡುಗಡೆಯಾಗುವುದು; ಆಗ ಆ ಭೂಮಿ ಪುನಃ ಮಾರಿದವನ ವಶಕ್ಕೆ ಬರುವುದು.

[29] “‘ಯಾವನಾದರೂ ಪೌಳಿ ಗೋಡೆಯುಳ್ಳ ಪಟ್ಟಣದಲ್ಲಿರುವ ಮನೆಯನ್ನು ಮಾರಿದರೆ ಅದನ್ನು ಮಾರಿದ ದಿನ ಮೊದಲುಗೊಂಡು ಒಂದು ವರ್ಷ ಪೂರ್ತಿಯಾಗುವುದರೊಳಗೆ ಈಡುಕೊಟ್ಟು ಬಿಡಿಸಬಹುದು; ಪೂರಾ ಒಂದು ವರ್ಷದ ತನಕ ಅದನ್ನು ಬಿಡಿಸುವ ಅಧಿಕಾರವು ಅವನಿಗಿರುವುದು.

[30] ಪೌಳಿಗೋಡೆಯುಳ್ಳ ಪಟ್ಟಣದಲ್ಲಿರುವ ಆ ಮನೆ ಒಂದು ವರ್ಷದೊಳಗಾಗಿ ಬಿಡಿಸಿಕೊಳ್ಳಲು ಸಾಧ್ಯವಾಗದೆ ಹೋದರೆ, ಅದು ಜೂಬಿಲಿ ಸಂವತ್ಸರದಲ್ಲಿ ಬಿಡುಗಡೆಯಾಗಿ ಮಾರಿದವನಿಗೆ ಮತ್ತು ಅವನ ಸಂತತಿಯವರಿಗೂ ಶಾಶ್ವತವಾಗಿ ನಿಲ್ಲುವುದು.

[31] ಪೌಳಿಗೋಡೆಯಿಲ್ಲದ ಊರುಗಳಲ್ಲಿರುವ ಮನೆಗಳು ಬಯಲಿನ ಹೊಲಗಳಂತೆ ಎಣಿಸಲ್ಪಡಬೇಕು; ಅವುಗಳನ್ನು ಬಿಡಿಸುವ ಅಧಿಕಾರವಿದ್ದು, ಜೂಬಿಲಿ ಸಂವತ್ಸರದಲ್ಲಿ ಅವು ಬಿಡುಗಡೆಯಾಗುವವು.

[32] ಆದರೆ ಲೇವಿಯರ ಸ್ವತ್ತಾಗಿರುವ ಪಟ್ಟಣಗಳಲ್ಲಿನ ಮನೆಗಳು ಮಾರಲ್ಪಟ್ಟರೆ ಅವುಗಳನ್ನು ಬಿಡಿಸುವ ಅಧಿಕಾರವು ಲೇವಿಯರಿಗೆ ಯಾವಾಗಲೂ ಇರುವುದು.

[33] ಲೇವಿಯರೊಳಗೆ ಯಾರೂ ಅದನ್ನು ಬಿಡಿಸದೆಹೋದರೆ, ಲೇವಿಯರ ಸ್ವಂತವಾಗಿರುವ ಅಂತಹ ಪಟ್ಟಣಗಳಲ್ಲಿ ಮಾರಲ್ಪಟ್ಟ ಮನೆ ಜೂಬಿಲಿ ಸಂವತ್ಸರದಲ್ಲಿ ಬಿಡುಗಡೆಯಾಗುವುದು. ಲೇವಿಯರ ಪಟ್ಟಣಗಳಲ್ಲಿನ ಮನೆಗಳು ಇಸ್ರಾಯೇಲರ ಮಧ್ಯದಲ್ಲಿರುವ ಅವರ ಸ್ವಾಸ್ತ್ಯವಷ್ಡೆ.

[34] ಅವರು ತಮ್ಮ ಪಟ್ಟಣಗಳಿಗೆ ಸೇರಿರುವ ಹುಲ್ಲುಗಾವಲನ್ನು ಮಾರಲೇಬಾರದು. ಅವು ಅವರಿಗೆ ಶಾಶ್ವತವಾದ ಸ್ವತ್ತು.

[35] “‘ನಿಮ್ಮಲ್ಲಿ ಒಬ್ಬ ಸಹೋದರನು ಬಡತನದಿಂದ ಗತಿಹೀನನಾದರೆ, ಅವನು ಬದುಕಿಕೊಳ್ಳುವಂತೆ ನೀವು ಅವನನ್ನು ನಿಮ್ಮ ನಡುವೆ ಇಳಿದುಕೊಂಡ ವಿದೇಶೀಯನೆಂದು ಅಥವಾ ಪ್ರವಾಸಿಯೆಂದು ಭಾವಿಸಿ ಸಹಾಯಮಾಡಬೇಕು.

[36] ನೀವು ಅವನಿಂದ ಬಡ್ಡಿಯನ್ನಾಗಲಿ ಅಥವಾ ಲಾಭವನ್ನಾಗಲಿ ತೆಗೆದುಕೊಳ್ಳಬಾರದು; ಅವನು ನಿಮ್ಮ ಬಳಿಯಲ್ಲಿ ಬದುಕುವಂತೆ ನೀವು ದೇವರಲ್ಲಿ ಭಯಭಕ್ತಿಯುಳ್ಳವರಾಗಿ ನಡೆದುಕೊಳ್ಳಬೇಕು.

[37] ನೀವು ಅವನಿಗೆ ಹಣವನ್ನು ಸಾಲವಾಗಿ ಕೊಟ್ಟರೆ ಬಡ್ಡಿಯನ್ನು ಕೇಳಬಾರದು, ದವಸಕೊಟ್ಟರೆ ಲಾಭವನ್ನು ಕೇಳಬಾರದು.

[38] ನಾನು ನಿಮ್ಮ ದೇವರಾದ ಯೆಹೋವನು; ನಿಮಗೆ ದೇವರಾಗುವುದಕ್ಕೂ ಮತ್ತು ನಿಮಗೆ ಕಾನಾನ್ ದೇಶವನ್ನು ಕೊಡುವುದಕ್ಕೂ ನಿಮ್ಮನ್ನು ಐಗುಪ್ತ ದೇಶದೊಳಗಿಂದ ಬರಮಾಡಿದವನು ನಾನೇ.

[39] “‘ನಿಮ್ಮಲ್ಲಿ ಒಬ್ಬ ಸಹೋದರನು ಬಡವನಾಗಿ ತನ್ನನ್ನೇ ಮಾರಿಕೊಂಡರೆ ಅವನನ್ನು ಗುಲಾಮನಂತೆ ಕೆಲಸ ಮಾಡಿಸಿಕೊಳ್ಳಬಾರದು.

[40] ಅವನು ಕೂಲಿಯವನಂತೆಯೂ ಇಲ್ಲವೇ ಪ್ರವಾಸಿಯಂತೆಯೂ ನಿಮ್ಮ ಬಳಿಯಲ್ಲಿದ್ದು, ಜೂಬಿಲಿ ಸಂವತ್ಸರದ ತನಕ ನಿಮ್ಮ ಸೇವೆಯನ್ನು ಮಾಡಲಿ.

[41] ಆಗ ಅವನನ್ನೂ ಮತ್ತು ಅವನ ಮಕ್ಕಳನ್ನೂ ಬಿಟ್ಟುಬಿಡಬೇಕು; ಅವನು ಸ್ವಜನರ ಬಳಿಗೂ ಪಿತ್ರಾರ್ಜಿತ ಸ್ವತ್ತಿಗೂ ಹೋಗಬಹುದು.

[42] ಅವರು ನನಗೆ ಗುಲಾಮರಾಗಿದ್ದಾರೆ; ನಾನು ಅವರನ್ನು ಐಗುಪ್ತದೇಶದೊಳಗಿಂದ ಬರಮಾಡಿದೆನು; ದಾಸರನ್ನು ಮಾರುವಂತೆ ಅವರನ್ನು ಮಾರಬಾರದು.

[43] ಅವರಿಂದ ಕಠಿಣವಾಗಿ ಸೇವೆಮಾಡಿಸಿಕೊಳ್ಳಬಾರದು; ನಿಮ್ಮ ದೇವರಿಗೆ ಭಯಪಡಬೇಕು.

[44] ನಿಮಗೆ ದಾಸದಾಸಿಯರು ಬೇಕಾಗಿದ್ದರೆ ಸುತ್ತಲಿರುವ ಅನ್ಯರನ್ನು ಕ್ರಯಕ್ಕೆ ತೆಗೆದುಕೊಳ್ಳಬಹುದು.

[45] ನಿಮ್ಮ ನಡುವೆ ಇರುವ ವಿದೇಶಿಯರನ್ನೂ ಮತ್ತು ನಿಮ್ಮ ದೇಶದಲ್ಲಿ ಅವರಿಂದ ಹುಟ್ಟಿದವರನ್ನೂ ಕ್ರಯಕ್ಕೆ ತೆಗೆದುಕೊಳ್ಳಬಹುದು; ಅಂಥವರು ನಿಮಗೆ ಸೊತ್ತಾಗಬಹುದು.

[46] ನೀವು ಅಂಥವರನ್ನು ಸ್ವಾಧೀನಪಡಿಸಿಕೊಂಡು ನಿಮ್ಮ ತರುವಾಯ ನಿಮ್ಮ ಸಂತತಿಯವರಿಗೆ ಸ್ವತ್ತಾಗಿ ಕೊಟ್ಟು ಬಿಡಬಹುದು. ಅವರನ್ನು ಶಾಶ್ವತ ದಾಸರನ್ನಾಗಿ ಮಾಡಿಕೊಳ್ಳಬಹುದು. ಇಸ್ರಾಯೇಲರಾದ ನೀವಾದರೋ ಎಲ್ಲರೂ ಸಹೋದರರಾಗಿರುವುದರಿಂದ ಒಬ್ಬರಿಂದ ಒಬ್ಬರು ಕಠಿಣವಾಗಿ ಸೇವೆಮಾಡಿಸಿಕೊಳ್ಳಬಾರದು.

[47] “‘ನಿಮ್ಮ ಸಹೋದರರಲ್ಲಿ ಒಬ್ಬನು ಬಡವನಾಗಿದ್ದು ನಿಮ್ಮ ನಡುವೆ ಮನೆಮಾಡಿಕೊಂಡ ಧನವಂತನಾದ ಅನ್ಯದೇಶದವನಿಗಾಗಲಿ ಅಥವಾ ಅವನಿಗೆ ಸೇರಿದವನಿಗಾಗಲಿ ತನ್ನನ್ನು ಮಾರಿಕೊಂಡಿದ್ದರೂ ಅವನಿಗೆ ಬಿಡುಗಡೆಯಾಗಬಹುದು.

[48] ಅವನ ಬಂಧುಗಳಲ್ಲಿ ಯಾರಾದರೂ ಈಡುಕೊಟ್ಟು ಅವನನ್ನು ಬಿಡಿಸಬಹುದು.

[49] ಅವನ ದೊಡ್ಡಪ್ಪ, ಚಿಕ್ಕಪ್ಪಂದಿರಾಗಲಿ, ಇವರ ಮಕ್ಕಳಾಗಲಿ ಅಥವಾ ಸಮೀಪಬಂಧುಗಳಲ್ಲಿ ಯಾರೇ ಆಗಲಿ ಈಡುಕೊಟ್ಟು ಅವನನ್ನು ಬಿಡಿಸಬಹುದು. ಬೇಕಾದಷ್ಟು ಹಣವು ದೊರೆತರೆ ತನ್ನನ್ನು ತಾನೇ ಬಿಡಿಸಿಕೊಳ್ಳಬಹುದು.

[50] ಅವನು ತನ್ನನ್ನು ಮಾರಿಕೊಂಡ ವರ್ಷ ಮೊದಲುಗೊಂಡು ಮುಂದಣ ಜೂಬಿಲಿ ಸಂವತ್ಸರದ ತನಕ ದಣಿಯ ಸಂಗಡ ವರ್ಷಗಳ ಲೆಕ್ಕವನ್ನು ಮಾಡಿ ಆ ಲೆಕ್ಕದ ಮೇರೆಗೆ ಬಿಡುಗಡೆಯ ಕ್ರಯವನ್ನು ಕೊಡಬೇಕು. ಕೂಲಿಯವನ ವಿಷಯದಲ್ಲಿ ಲೆಕ್ಕ ಮಾಡುವಂತೆ ಅವನ ವಿಷಯದಲ್ಲಿಯೂ ಲೆಕ್ಕ ಮಾಡಬೇಕು.

[51] ಜೂಬಿಲಿ ಸಂವತ್ಸರವು ಬರುವುದಕ್ಕೆ ಇನ್ನು ಅನೇಕ ವರ್ಷಗಳಿದ್ದರೆ ಅವುಗಳ ಪ್ರಕಾರವೇ ತನ್ನ ಬಿಡುಗಡೆಯ ಕ್ರಯವನ್ನೂ ಕೊಡಬೇಕು.

[52] ಕೆಲವು ವರ್ಷಗಳು ಮಾತ್ರ ಉಳಿದರೆ ಸ್ವಲ್ಪಭಾಗವನ್ನೂ ದಣಿಗೆ ಕೊಟ್ಟು ತನ್ನನ್ನು ಬಿಡಿಸಿಕೊಳ್ಳಬೇಕು.

[53] ಅವನು ವರ್ಷವರ್ಷಕ್ಕೆ ಗೊತ್ತುಮಾಡಿಕೊಂಡ ಕೂಲಿಯವನಂತೆಯೇ ದಣಿಯ ಬಳಿಯಲ್ಲಿರಬೇಕು. ಆ ದಣಿ ಅವನಿಂದ ಕಠಿಣವಾಗಿ ಸೇವೆಮಾಡಿಸಿಕೊಳ್ಳುವುದನ್ನು ನೀವು ನೋಡಿ ಸುಮ್ಮನೆ ಇರಬಾರದು.

[54] ಮೇಲೆ ಹೇಳಿದ ರೀತಿಯಲ್ಲಿ ಅವನು ಬಿಡಿಸಿಕೊಳ್ಳದೆ ಹೋದರೆ ಜೂಬಿಲಿ ಸಂವತ್ಸರದಲ್ಲಿ ಅವನೂ ಮತ್ತು ಅವನ ಮಕ್ಕಳೂ ಬಿಡುಗಡೆಯಾಗಬೇಕು.

[55] ಏಕೆಂದರೆ ಇಸ್ರಾಯೇಲರು ನನ್ನ ದಾಸರೇ; ನಾನು ಅವರನ್ನು ಐಗುಪ್ತದೇಶದೊಳಗಿಂದ ಬರಮಾಡಿದೆನಲ್ಲವೇ. ನಾನು ನಿಮ್ಮ ದೇವರಾದ ಯೆಹೋವನು’” ಎಂದು ಹೇಳಿದನು.

ಯಾಜಕಕಾಂಡ — Chapters